ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮ್ಯುನಿಟಿ ಕಲೆಕ್ಷನ್‌ ಕಂಪನಿ ಕಟ್ಟಿ...

Last Updated 15 ಜೂನ್ 2019, 19:30 IST
ಅಕ್ಷರ ಗಾತ್ರ

ಹೆಂಡ್ತಿ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಅದು ಆನಂದಭಾಷ್ಪ. ಕಂತೆ ಕಂತೆ ಹಣ ಕಂಡು ಸುರಿದ ಕಣ್ಣೀರು. ‘ಅಯ್ಯಯ್ಯಯ್ಯೋ.. ಏನ್ರೀ ಇದೂ ಇಷ್ಟೊಂದ್‌ ದುಡ್ಡು. ನಂಗೇ ಗೊತ್ತಿಲ್ದಂಗೆ ಎಲ್ಲಿಟ್ಟಿದ್ರೀ...’ ದುಬೈ ಲಾಟರಿ ಹೊಡೆದವರಂತೆ ದುಡ್ಡಿನ ಕಟ್ಟನ್ನು ಕೈಯಲ್ಲಿ ಹಿಡಿದುಕೊಂಡು ಕುಣಿಯುತ್ತಿದ್ದಳು ಮಡದಿ. ಗುಂಡು–ತುಂಡಿನ ಪಾರ್ಟಿಗೆ ಕತ್ತರಿ ಹಾಕಿ, ಡ್ರೆಸ್‌–ಚಾಕೊಲೇಟ್‌ ಕೇಳಿದ ಮಕ್ಕಳನ್ನು ಗದರಿಸಿ ಕೂಡಿಟ್ಟಿದ್ದ ಹಣ ಹೆಂಡತಿ ಕಣ್ಣಿಗೆ ಬಿದ್ದಿತ್ತು. ‘ಇದನ್ನೂ ನೋಡ್‌ ಬಿಟ್ಯಾ ಮಾರಾಯ್ತಿ. ಎರಡು ವರ್ಷ ಕಷ್ಟಪಟ್ಟು, ಎರಡು ಲಕ್ಷ ಜೋಡಿಸಿಟ್ಟಿದ್ದೀನಿ. ಪಕ್ಕದ್ಮನೆ ಮನ್ಸೂರ್‌ಗೆ ಕೊಟ್ರೆ ಆರು ತಿಂಗಳಲ್ಲಿ ನಾಲ್ಕು ಲಕ್ಷ ಕೊಡ್ತಾನಂತೆ’ ಸಮಗ್ರ ಯೋಜನಾ ವರದಿ ಒಪ್ಪಿಸಿದೆ.

‘ಹೌದಾ.. ಈ ಬಿಸಿನೆಸ್‌ನಲ್ಲಿ ಅಷ್ಟೊಂದ್‌ ಲಾಭ ಇದಿಯಾ’ ಕಣ್ಣರಳಿಸಿದಳು ಅರ್ಧಾಂಗಿ. ‘ಹೌದು. ನನ್‌ ಫ್ರೆಂಡ್‌ಗೆ ಮೊನ್ನೆ ಐದಕ್ಕೆ, ಹತ್ತು ಲಕ್ಷ ಬಂತು’ ಎಂತಹ ಒಳ್ಳೆಯ ಉದ್ದೇಶಕ್ಕೆ ನಾನು ಹಣ ಕೂಡಿಟ್ಟಿದ್ದೆ ಎಂಬುದನ್ನು ಸಮರ್ಥಿಸಿಕೊಳ್ಳುವಂತೆ ಹೇಳಿದೆ.

ದುಡ್ಡನ್ನು ಎಣಿಸುತ್ತಿದ್ದವಳು ಏನೋ ಹೊಳೆದಂತೆ ಬಾಯಿ ತೆಗೆದು, ‘ಮನ್ಸೂರ್‌ ಮಾಡೋ ಬಿಸಿನೆಸ್‌ನ ನಾವೇ ಮಾಡಿದ್ರೆ ಹೇಗೆ?’ ಕೇಳಿದಳು ಒಂದೇ ಉಸಿರಿಗೆ. ‘ನಿನಗೇನ್‌ ಹುಚ್ಚಾ.. ಅವೆಲ್ಲ ನನಗಾಗಲ್ಲ’. ‘ಎಂಬಿಎ ಮಾಡಿದ್ದೀನಿ ಅಂತಾ ಕೊಚ್ಕೋತೀರಿ. ಬಿಸಿನೆಸ್‌ ಹೇಗೆ ಮಾಡಬೇಕು ಅನ್ನೋದು ಗೊತ್ತಿಲ್ವ’ ನನ್ನಲ್ಲಿದ್ದ ಬುದ್ಧಿವಂತ ಎಂಬ ಅಹಂ ಅನ್ನು ಬಡಿದೆಬ್ಬಿಸಿದಳು ಪತ್ನಿ.

‘ನಿಮ್ ಕೆಲವು ಫ್ರೆಂಡ್ಸು ದುಡ್ಡು ಅಂದ್ರೆ ಬಾಯಿ ಬಿಡ್ತಾರೆ. ಅವರಿಗೆ ಆಸೆ ಜಾಸ್ತಿ. ಈ ತಿಂಗ್ಳು ಐದು ಸಾವಿರ ಕೊಟ್ರೆ, ಆರು ತಿಂಗಳು ಬಿಟ್ಟು ಹತ್ ಸಾವಿರ ಕೊಡ್ತೀನಿ ಅನ್ನಿ...’ ಐಡಿಯಾಗಳ ಮಳೆಯಾಗತೊಡಗಿತು.

‘ಮೊದಲು ಯಾರಿಗೆ ಅಪ್ರೋಚ್ ಮಾಡಲಿ’. ‘ನೋಡ್ರಿ, ನಮ್‌ ಜಾತಿ, ನಮ್‌ ಧರ್ಮದವರಿಗೆ ನಮ್‌ ಮೇಲೆ ನಂಬಿಕೆ ಜಾಸ್ತಿ. ಅವರಿಂದಲೇ ಸ್ಟಾರ್ಟ್ ಮಾಡೋಣ. ಜಾತಿ–ಧರ್ಮದ ಹೆಸರಲ್ಲಿ ಮಣ್‌ ಕೊಟ್ರೂ ಕಣ್‌ ಮುಚ್ಕೊಂಡ್ ತಿಂದು ಹೋಗ್ತಾರೆ ನಮ್‌ ಜನ’ ಎಂದ ಹೆಂಡ್ತಿ, ನನ್ನ ಕಣ್ಣಿಗೆ ಪಕ್ಕಾ ರಾಜಕಾರಣಿಯಂತೆ ಕಾಣತೊಡಗಿದಳು.

***
‘ಏನೋ ರಮೇಶ.. ಹೇಗಿದಿಯಾ? ಒಂದಿಪ್ಪತ್ತು ಸಾವಿರ ದುಡ್ಡೈತಾ?’ ಗೆಳೆಯನಿಗೆ ಫೋನ್‌ ಮಾಡಿ ಕೇಳ್ದೆ. ‘ನನ್ ಹತ್ರ ಎಲ್ಲಿಂದ ಬರಬೇಕಪ್ಪ.. ಜೂನ್‌ ಬೇರೆ. ಮಕ್ಕಳ ಫೀಸು– ಯೂನಿಫಾರಮ್ಮು, ಬುಕ್ಸು ಅಂತಾ ಎಲ್ಲಾ ಖಾಲಿ’ ಶೋಕಗೀತೆ ಹಾಡತೊಡಗಿದ. ‘ಏನಿಲ್ಲ, ನಂಗೆ ಗೊತ್ತಿರೋ ನಂಬಿಕಸ್ಥರೊಬ್ಬರು ಹೊಸ ಕಂಪನಿ ಶುರು ಮಾಡಿದ್ದಾರೆ. ದೊಡ್ಡ ಇನ್ವೆಸ್ಟ್‌ಮೆಂಟ್‌ ಬೇಕಿದೆ ಅವರಿಗೆ. ನಮ್ಮದೇ ಕಮ್ಯೂನಿಟಿ. ನೀನಿಗ 20 ಸಾವಿರ ರೂಪಾಯಿ ಕೊಟ್ರೆ, ಆರು ತಿಂಗಳು ಬಿಟ್ಟು 40 ಸಾವಿರ ರೂಪಾಯಿ ಕೊಡ್ತಾರೆ. 40 ಕೊಟ್ಟರೆ 80 ಕೊಡ್ತಾರೆ’ ವಿಶ್ವಾಸದ ಧ್ವನಿಯಲ್ಲಿ ಹೇಳಿದೆ.

‘ಹೌದಾ! ನಿಜಾನ?’ ಕ್ಷಣಗಳ ಹಿಂದೆ ಶೋಕಗೀತೆ ಹಾಡುತ್ತಿದ್ದವನು, ಕುತೂಹಲದ ಸಾಗರವನ್ನೇ ತುಂಬಿಕೊಂಡ ಧ್ವನಿಯಲ್ಲಿ ಕೇಳಿದ. ‘ನಾನ್ಯಾಕೆ ಸುಳ್ಳು ಹೇಳಲಪ್ಪ. ನಾನೇ 50 ಸಾವಿರ ರೂಪಾಯಿ ಹಾಕಿದೀನಿ. ನೀನು ಕೊಟ್ಟಿರೋದಕ್ಕೆ ಸಾಕ್ಷಿಯಾಗಿ ಪೇಪರ್‌ ಮೇಲೆ ಸೈನ್‌ ಮಾಡಿಕೊಡ್ತಾರೆ’. ‘ದೊಡ್ಡ ಮಗಳ ಮದುವೆಗೆಂದು ಐವತ್ ಸಾವಿರ ತೆಗೆದಿಟ್ಟಿದೀನಿ. ಅದನ್ನೇ ಕೊಡ್ತೀನಿ. ನಮ್‌ ಧರ್ಮದವರೇ ಅಂತೀಯಾ. ನಿನ್ನ ನಂಬಿಕೆ ಮೇಲೆ ಕೊಡ್ತೀನಿ. ಆಮೇಲೆ ಒಂದ್‌ ಲಕ್ಷ ಕೊಟ್‌ಬಿಡಬೇಕು’ ಆಸೆ ತುಂಬಿದ ಧ್ವನಿಯಲ್ಲಿ ಹೇಳ್ದ ಅಮಾಯಕ ಗೆಳೆಯ.

‘ಅಬ್ಬಾ, ದುಡ್ಡು ಮಾಡೋದು ಎಷ್ಟ್‌ ಸುಲಭ’ ಎಂದುಕೊಳ್ಳುತ್ತಾ, ಐಡ್ಯಾ ಕೊಟ್ಟ ಹೆಂಡ್ತಿಗೆ ಮನದಲ್ಲೇ ಮುತ್ತು ಕೊಟ್ಟೆ.

ನನ್ ಬಿಸಿನೆಸ್‌ ಜೊತೆಗೆ, ಅವಳ ಚೀಟಿ ವ್ಯವಹಾರವೂ ಪ್ರಾರಂಭವಾಯಿತು. ಅವರಿಗೆ ಕೊಟ್ಟಿದ್ದು ಇವರಿಗೆ, ಇವರಿಗೆ ಕೊಟ್ಟಿದ್ದು ಅವರಿಗೆ ಕೊಡುತ್ತಾ.. ಒಂದೊಂದು ವರ್ಷ ಒಂದ್ಹತ್ತು ಜನರಿಗೆ ‘ಕೈ ಕೊಡುತ್ತಾ’ ‘ಬಿಸಿನೆಸ್‌’ ಮುಂದುವರಿಸಿದೆ.

***
‘ರೀ.. ಎಷ್ಟೊತ್‌ ರೆಡಿ ಆಗ್ತೀರಾ.. ಹೊರಗೆ ಬನ್ನಿ, ನಮ್‌ ಏರಿಯಾ ಎಮ್ಮೆಲ್ಲೆ ಬಂದಿದಾರೆ’ ಕೂಗಿದಳು ಪತ್ನಿ. ‘ನಮಸ್ಕಾರ ಸರ್, ಏನಿಷ್ಟು ದೂರ ಬಂದ್ರಿ?’ ಎಮ್ಮೆಲ್ಲೆ ಸಾಹೇಬ್ರಿಗೆ ಕೈ ಮುಗಿಯುತ್ತಾ ಹೊರಬಂದೆ. ‘ನೀವು ನಮ್‌ ಧರ್ಮದ ದೊಡ್ಡ ಮುಖಂಡ್ರು. ನಿಮ್‌ ಕಂಪನಿ ನಡೆಸೋ ಚೀಟ್‌ಫಂಡ್, ಅಲ್ಲಲ್ಲ ಚಿಟ್‌ಫಂಡ್‌ಗಳಿಗೆ ಲಕ್ಷಾಂತರ ಮಂದಿ ಮೆಂಬರ್‌ಗಳಿದ್ದಾರೆ. ನೀವೊಂದು ಫೋನ್‌ ಮಾಡಿದ್ರೆ ಎಲ್ಲರೂ ಬರ್ತಾರೆ. ಮುಂದಿನ ವಾರ ನಡೆಯೋ ನಮ್‌ ಪಕ್ಷದ ಸಮಾವೇಶಕ್ಕೆ ಅವರನ್ನೆಲ್ಲ ಕರೆಸಬೇಕು’ ಕೋರಿದರು ಶಾಸಕರು.

‘ಎಷ್ಟ್‌ ಎತ್ತರಕ್ಕೆ ಹೋಗಿದೆ ನೋಡು ನನ್ ಲೆವೆಲ್ಲು’ ಅನ್ನೋವಂತೆ ಹೆಂಡತಿಯತ್ತ ನೋಡಿದೆ. ಮೆಚ್ಚುಗೆಯ ನಗೆ ಸೂಸಿ ಹುಬ್ಬೇರಿಸಿದಳು. ಎಮ್ಮೆಲ್ಲೆ ಹೋಗ್ತಿದ್ದಂಗೆ ಕೇಳಿದಳು, ‘ಇಷ್ಟ್‌ ಬೇಗ, ಇದೆಲ್ಲ ಹೇಗೆ ಸಾಧ್ಯ ಆಯ್ತು ರೀ..’.

‘ರಾಜಕಾರಣಿಗಳಿಗೆ ವೋಟು ಬೇಕು, ಜನರಿಗೆ ನೋಟು ಬೇಕು, ಮೀಡಿಯಾದವರಿಗೆ ಟಿಆರ್‌ಪಿ ರೇಟು ಬೇಕು. ಅವರ ವೀಕ್‌ನೆಸ್ಸುಗಳನ್ನೇ ಬಂಡವಾಳ ಮಾಡ್ಕೊಂಡು ನಾವ್ ಬೆಳಿಯಬೇಕು’ ಎಂದೆ. ಅರ್ಧಾಂಗಿ ನಕ್ಕಳು.

***
ಅವತ್ತೇನೋ ಎಡಮಗ್ಗಲಿಗೆ ಎದ್ದಿದ್ದೆ ಅನ್ಸುತ್ತೆ. ಟಿವಿ ಹಾಕಿದವನಿಗೆ ಆಘಾತ ಕಾದಿತ್ತು. 13 ವರ್ಷಗಳಿಂದ ದುಡ್ಡು ಕಟ್ಟಿದವರೆಲ್ಲ ಒಮ್ಮೆಗೆ ಹಣ ಬೇಕು ಎಂದು ಕಂಪನಿ ಮುಂದೆ ನಿಂತು ಕೂಗಾಡುತ್ತಿದ್ದರು. ಮಾಡಿದ್ದ ಪ್ರಾರ್ಥನೆ, ಪೂಜೆ–ಪುನಸ್ಕಾರ ಕೈಕೊಟ್ಟಿತ್ತು. ಅಮಾಯಕರ ಹೊಟ್ಟೆ ಮೇಲೆ ಹೊಡೆದು ದುಡ್ಡು ಗಳಿಸಿದ್ದಕ್ಕೋ ಏನೋ, ಗಂಟಲು ಕಟ್ಟತೊಡಗಿತು. ಕೈ–ಕಾಲುಗಳು ಮರಗಟ್ಟಿದವು. ನಾಲಿಗೆ ಬಿದ್ದು ಹೋಯಿತು. ಇದ್ದಕ್ಕಿದ್ದಂತೆ ಜೀವಂತ ಶವದಂತಾದೆ. ಹೆಂಡ್ತಿ ಕಣ್ಣಲ್ಲಿ ನೀರು ಸುರಿಯುತ್ತಿತ್ತು. ಆದರೆ, ಅದು ಆನಂದಭಾಷ್ಪವಾಗಿರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT