ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿಯ ನೋಡಿರಣ್ಣಾ...

Last Updated 27 ಅಕ್ಟೋಬರ್ 2019, 10:01 IST
ಅಕ್ಷರ ಗಾತ್ರ

ಇ ತ್ತೀಚೆಗೆ ಸುರಿದ ಮಳೆಗೆ ಊರಿಗೆ ಊರೇ ಕೊಚ್ಚಿ ಹೋತು. ಇನ್ನು ಹಳೆ ಗುಡಿ ಉಳಿದಾತಾ? ಊರ ಹೊರಾಗಿರೋ ಮಾರಮ್ಮ ದುಗ್ಗಮ್ಮರ ಸೊಂಟದೆತ್ತರದ ಗುಡಿಗಳಿಗೇನೂ ಆಗದೆ ಊರೊಳಗೆ ಬೆಚ್ಚಗಿದ್ದು ದೊಡ್ಡ ಜಾತಿಯೋರಿಂದ ಪೂಜೆಗೊಳ್ಳುವ ಲಕ್ಷ್ಮಿನರಸಿಮ್ಮಸ್ವಾಮಿ ಗುಡಿ ಬಿದ್ದೋಗದೆ!

ಊರವರಿಂದ ಅಗದಿ ಪವರ್‌ಫುಲ್ ದೇವರೆಂತಲೇ ಹೆಸರುವಾಸಿಯಾದರೂ ಸಾಮಾನ್ಯರು ಮನೆ ಕಳ್ಕೊಂಡಂಗೆ ಮಳೆಯ ಹೊಡೆತಕ್ಕೆ ತನ್ನ ಗುಡಿ ಕಳ್ಕೊಂಡು ದ್ಯಾವರೆಂಬೋ ದ್ಯಾವರೇ ಬಯಲ್ನಾಗೆ ನಿತ್ಕಂತು.

ಜನವೇನೋ ತಿಂಗಳೊಪ್ಪತ್ತಿನಾಗೆ ಪ್ರೈಮರಿ ಈಸ್ಕೂಲ್ನಾಗೆ ಮಕ್ಕಂಡು, ಕೊಟ್ಟ ಗಂಜಿ ಕುಡ್ಕೊಂಡು ಬಾಳೇವು ಮಾಡ್ತು. ಸರ್ಕಾರದ ಕೃಪೆಯಿಂದಾಗಿ ಬಿದ್ದೋದ ಮನೆಗುಳ್ನೇ ಒಪ್ಪವಾರಣ ಮಾಡ್ಕಂತು. ಆದರೆ ಗುಡಿ ಮಾತ್ರ ಹಾಳು ಸುರಿವಾಗ ಊರಮಂದಿಗೆಲ್ಲಿ ನೆಮ್ಮದಿ. ಮೇಲ್ಜಾತಿ ಮಂದಿ ಹೆಂಗಾರ ಮಾಡಿ ಗುಡಿನಾ ಕಟ್ಟಬೇಕು ಅಂಬೋ ಭಕ್ತಿಲೆ ಕಟ್ಟೆ ಪಂಚಾಯಿತ್ಕೆ ಸೇರಿದರೂವೆ, ಯಾರೂ ನೆಟ್ಟಗೆ ದುಡ್ಡೇ ಬಿಚ್ಚವಲ್ರು. ಮೊದಲಿಗೆ ಯಾರು ಏಟು ಕೊಡಬೇಕು ಅಂಬೋ ಪ್ರಶ್ನೆ ಎದುರಾತು. ಮುಂದೆ ನಿಂತೋನ ಬೋಳಿಸಿಬಿಡ್ತಾರೆ ಅಂಬೋ ಭಯ ಹತ್ಕಂತು. ಈಟು ಕೊಡ್ತೀನಿ ಅಂತ ಮಂದಿ ಮುಂದಾಗಡೆ ಒಸ್ಕೊಂಡು ಕೊಡಕಾಗದಿದ್ರೆ ಪ್ರೆಸ್ಟೀಜ್ ಏನಾಗ್ಬೇಡ ಅಂಬೋ ಹಮ್ಮಿಗಿಂತ ನರಸಿಮ್ಮಸಾಮಿ ಹೊಟ್ಟೆ ಬಗೆದ್ರೆ ಅಂಬೋ ಚಿಂತೀಲಿ ಒಳಗೇ ಇಂಗುತಿಂದ ಮಂಗನಂಗಾತು. ಹೇಳಿಕೇಳಿ ದುಡ್ಡಿರೋ ಮಂದ್ಯಲ್ಲ -ಮಿಡ್ಲಕಾಸ್‍ಗುಳು. ಸರ್ಕಾರದ್ದೂವೆ ಹೆಲ್ಪ್ ಬೇಕು. ಹೆಂಗೂ ಗುಡಿ ಮುಜುರಾಯಿಗೆ ಸೇರೈತೆ. ಅವರೇಟು ಕೊಡ್ತಾರೋ ಕೊಡ್ಲಿ. ಮಿಕ್ಕಿದ್ದು ನಾವು ಹಾಕ್ಕಂಡು ಹೆಂಗಾರ ಗುಡಿ ಎಬ್ಬಿಸೋದು ಅಂಬೋ ತನ್ನ ಫ್ರೆಶ್ ಆಲೋಚ್ನೆನಾ ಪೂಜಾರಿ ಕಿಟ್ಟಪ್ಪ ಎಲ್ಲರ ಮುಂದಿಟ್ಟ. ಅದೇ ಭೇಷ್ ಅನ್ನಿಸಿತು. ಹೆಂಗೂ ಹೊಸ ತಹಶೀಲ್ದಾರ ಬಂದವ್ನೆ. ಹಣೆಗೆ ಕುಂಕುಮ ಗಂಧ ಇಕ್ಕೋಂಡು ಕಾರ‍್ನಾಗೆ ಅಡ್ಡಾಡೋದ್ನ ನೋಡಿದ್ರೆ ದೇವರುದಿಂಡರನ್ನು ನಂಬೋವನಂಗೆ ಕಾಣ್ತದೆ. ಹೋಗಿ ನೋಡುಮಾ ಅನ್ನುತ್ಲು ಹುರುಪು ತುಂಬ್ಕೊಂಡು ಹೋಂಟೇಬಿಟ್ಟರು. ಇವರ ಅರೆಬೆತ್ತಲೆ ಮಯ್ಯಿ ಜುಟ್ಟುಜನಿವಾರ ನೋಡಿಯೂ ಅಂಜದ ಪೀವನ್ನು ಕೈಗೆ ಕಾಸು ಬಿದ್ದಮ್ಯಾಲೇ ಒಳಗೆಬಿಟ್ಟ. ಒಟ್ಟಿಗೆ ನಮಸ್ಕಾರ ಹೊಡೆದರು ಎದುರ್ನಾಗಿರಿಸಿದ್ದ ನೇಮ್ ಪ್ಲೇಟ್ನಾಗೆ ಪಿ.ಬಿ. ರಾಮರಾವ್ ಅನ್ನೋ ಅಕ್ಷರಗಳು ಕಾಣುತ್ಲೆ ಜೀವ ಒಳಗೇ ತಂಪಾತು. ಅದಕ್ಕೆ ಕೊ ಇನ್ ಸೈಡಾಗಿ ಸಾಹೇಬರೂ ಇವರುಗಳನ್ನ ನೋಡಿ ಮುಖದ ತುಂಬಾ ನಗೆ ಪ್ರಸಾದಿಸಿದರು. ಏನಾಗಬೇಕಿತ್ತು ನಾರಾಯಣ ಕೂಡ್ರಿ ಅಂದರೂ ಕೂರದೆ ಭಯಭಕ್ತಿ ತೋರಿದ ಗುಂಪು ಸವಿಸ್ತಾರವಾಗಿ ಬಂದ ಕಾರಣವನ್ನರುಹಿತು. ಸಾವಧಾನವಾಗಿ ಆಲಿಸಿದ ಸಾಹೇಬರು ಪುನಃ ‘ನಾರಾಯಣ ನಾರಾಯಣ’ ಎಂದು ಉದ್ಗರಿಸಿದರು. ಜವಾನನ್ನು ಕರೆದು ಕಾಪಿಗೇನಾರ ಹೇಳ್ತಾರ ಎಂದು ಗುಂಪು ಅತ್ತಿತ್ತ ಕತ್ತು ಹೊರಳಿಸಿತು. ಪೀವನ್ನು ಬರಲಿಲ್ಲ. ಪುನಃ ಸಾಹೇಬರು ‘ನಾರಾಯಣ ನಾರಾಯಣ’ ಎನ್ನಲಾಗಿ ಇದು ಸಾಹೇಬರ ಮ್ಯಾನರಿಸಂ ಇರಬೇಕೆಂದು ಗುಂಪು ನಿಟ್ಟುಸಿರಿಟ್ಟಿತು. ಕೋಣೆ ತುಂಬಾ ಸ್ಮಶಾನಮೌನ. ‘ಆಯಿತು ನಾರಾಯಣ ಮುಜುರಾಯಿಯಿಂದ್ಲೂ ಹಣ ಮಂಜೂರು ಮಾಡಿಸೋಣ ನಾನು ಸ್ವಾಮಿ ಸೇವೆಗೆಂದು ಕೈಲಾದ್ದು ಕೊಡ್ತೇನೆ ಆಗಬಹುದೆ?’ ಮೆಲುದನಿಯಲ್ಲಾಡಿದರು. ಇವರೆಲ್ಲಾ ಹಿಗ್ಗಿ ಹಿರೇಕಾಯಿಯಾಗಿ ಶತಮಾನಂಭವತಿ ಶತಯುಷ್ಯ ಹಾಡಿ ತಾವು ತಂದ ಹೂವು, ಪತ್ರೆ, ತೀರ್ಥ, ಪ್ರಸಾದವನ್ನೆಲ್ಲಾ ಸಾಹೇಬರ ಸೂಟಿನ ಮೇಲೆ ತೂರಿ ಸೂಟನ್ನು ಗಬ್ಬೆಬ್ಬಿಸಿ ನಿರ್ಗಮಿಸಿದರು.

ತಿಂಗಳೊಪ್ಪತ್ತು ಏನೂ ನಡೆಯಲಿಲ್ಲ. ಸರ್ಕಾರಿ ಕಚೇರಿಗಳೇ ಹಿಂಗೆ ಅಂದುಕೊಳ್ಳುವಾಗಲೇ ಪೂಜಾರಿ ಕಿಟ್ಟಪ್ಪನ ಹೆಸರಿಗೆ ಸರ್ಕಾರಿ ಸುತ್ತೋಲೆ ಬಂತು. ಅಂದೇ ಸಾಹೇಬರ ಬುಲಾವು ಬಂತು, ಈಗಲೂ ಅದೇ ಗುಂಪು ಹೋಗಿ ಅಡ್ಡಬಿತ್ತು. ಸಾಹೇಬರು ಕಂಟ್ರಾಕ್ಟರ್, ಅವನ ಖರ್ಚುವೆಚ್ಚ ಇತ್ಯಾದಿ ಬಗ್ಗೆ ಮಾತನಾಡಿದ್ದಲ್ಲದೆ, ಎಲ್ಲಾ ತಾವೇ ಮುತುವರ್ಜಿ ವಹಿಸಿ ಮಾಡಿಕೊಡುವುದಾಗಿ ಅಭಯಹಸ್ತ ತೋರಿ ಖಾಸಗಿಯಾಗಿ ಒಂದು ಲಕ್ಷದ ಚೆಕ್ ಅನ್ನು ನೀಡಿ ಏನೋ ಬಡಭಕ್ತಿ ನಾರಾಯಣ ಎಂದು ಉಸಿರ್ಗರೆದಾಗ ಗುಂಪು ನಿಂತಲ್ಲೇ ಕಥಕ್ಕಳಿಯಾಡಿತು.

ಸಾಹೇಬರೇ ಸ್ವಯಂ ಮುತುವರ್ಜಿವಹಿಸಿದ ಮೇಲೆ ಬ್ರೇಕ್ ಹಾಕೋ ಮಗಧೀರನಾರು? ಎಲ್ಲಾ ಸಾಂಗೋಪಾಂಗವಾಗಿ ನಡೆದು ಬಿದ್ದು ಹೈರಾಣಾಗಿದ್ದ ಗುಡಿ ಏಳಲಾರಂಭಿಸಿತು. ಬಿಡುವಿಲ್ಲದೆ ಕಾಮಗಾರಿ ನಡೆಯಿತು. ಆಗಾಗ ಬಂದು ದೂರದಲ್ಲಿ ನಿಂದು ನೋಡಿ, ನಾರಾಯಣನನ್ನು ಜಪಿಸಿ ಹೋಗುತ್ತಿದ್ದರು, ಸಾಹೇಬ. ಊರಿನ ಜನಕ್ಕೆ ಸಾಹೇಬರ ಸರಳತೆ ದೈವಭಕ್ತಿ ಕಂಡು ಹಿಗ್ಗೋಹಿಗ್ಗು. ಕೆಳಗಳ ಹಟ್ಟಿ ಜನವೂ ತಾವೇನು ಕಮ್ಮಿ ಎಂಬಂತೆ ಕೂಲಿ ಕೇಳದೆ ಕಲ್ಲು, ಇಟ್ಟಿಗೆ, ಸಿಮೆಂಟಿನ ಪುಟ್ಟಿ ಹೊತ್ತು ಭಕ್ತಿ ಮೆರೆಯಿತು. ಗುಡಿಯು ದಿನಕ್ಕೊಂದು ಚೆಂದವಾಗಿ ಸಡಗರಗೊಂಡಿತು. ಕೈಕಾಲು ಮುರ್ಕೊಂಡು ಬಿದ್ದಿದ್ದ ದೇವಾನುದೇವತೆಗಳು ಹೊಸ ನಮೂನಿ ಪ್ಲಾಸ್ಟರಿಂಗ್, ಸುಣ್ಣಬಣ್ಣ ಲೇಪಿಸಿಕೊಂಡು ಸಿಂಗಾರಗೊಂಡು ಎದ್ದು ನಿಂತವು. ಪೌಳಿಯೂ ಸುತ್ತ ಎದ್ದು ನಿಲ್ಲಲಾಗಿ ಬೋ ಅಂದವಾತು. ‘ಇದೇನ್ಲಾ! ನಮ್ಮ ಲಕ್ಷ್ಮಿನರಸಿಮನ ಗುಡಿ?’ ಅಂತ ಮಂದಿ ಬೆಕ್ಕಸ ಬೆರಗಾತು. ಒಂದು ಒಳ್ಳೆ ದಿನ ನೋಡಿ ಗುಡಿನಾಗೆ ದೇವರ‍್ದ ಪ್ರಾಣ ಪ್ರತಿಷ್ಠಾಪನೆ ಮಾಡಿ ನಿತ್ಯಪೂಜೆ ಆರಂಭಿಸೋದೆಯಾ ಅನ್ಕೊಂಡ ಪೂಜಾರಿ ಕಿಟ್ಟಪ್ಪನ ಮಾತಿಗೆ ಉಳಿದವರೂ ತಲೆದೂಗಿದರು. ‘ನಮ್ದು ಆರ್ಡಿನರಿ ಗುಡಿ ಅಲ್ಲ, ದೇವಸ್ಥಾನ’ ಅಂದ ಪೂಜಾರಿ ಮಾತಿಗೆ ಎಲ್ಲರ ಒಪ್ಪಿಗೆ ಶೀಟಿ ಚಪ್ಪಾಳೆಗಳ ಮೂಲಕ ಬಿದ್ದಿತು. ಇಷ್ಟಕ್ಕೆಲ್ಲಾ ಕಾರಣ ನಮ್ಮ ಸಾಹೇಬ್ರು ಅಂತ ಕೆಲವರಂದರೆ, ಪೂಜಾರಿ ಪವರ್‍ಫುಲ್ ಅವ್ನೆ. ಹಿಡ್ದ ಕಾರ್ಯ ಮಾಡ್ದೆ ಬಿಡೋನಲ್ಲ ಅಂಬೋ ತಾರೀಪು ಕೆಲವರದ್ದು. ‘ನಂದೇನೈತೆ ಎಲ್ಲಾ ಅವಂದೆ’ ಅಂದ ಪೂಜಾರಿ, ಸಮಸ್ತ ಭಾರವನ್ನು ಭಗವಂತನ ಮೇಲೆ ಹಾಕಿಬಿಟ್ಟ. ಉದ್ಘಾಟನೆಗೆ ಸಾಹೇಬರನ್ನು ಕರೆಯಲೇಬೇಕೆಂದು ಊರವರಂದಾಗ ಊರಗೌಡ ಕ್ಯಾತೆ ತೆಗೆದ. ‘ಏನ್ ಅವರಪ್ಪನ ಮನೆ ದುಡ್ಡು ಕೊಟ್ಟವನಾ? ನಮ್ಮ ತೆರಿಗೆ ದುಡ್ಡದು ಕಣ್ರಿ’ ಅಂತ ಸಿಡಿಮಿಡಿಕೊಂಡ. ‘ಹಂಗೆ ನೋಡಿದ್ರೆ ಈ ಗುಡಿ ಕಟ್ಟಿದೋನು ನಮ್ಮ ಮುತ್ತಾತ. ಬಿದ್ದೋದ ಗುಡಿ ಕಟ್ಟಿದ ಮಾತ್ರಕ್ಕೇ ಅವನಿಗ್ಯಾಕೆ ಸ್ಕೋಪ್ ಕೊಡ್ತಿರ‍್ರಲೆ- ಗೌಡ ಗದರಿದ. ಇದೀಗ ಪೂಜಾರಿ ಕಿಟ್ಟಪ್ಪ ಗೌಡರ ಕಡೆಗೇ ವಾಲಿದ. ‘ನೀವು ಹೇಳೋದು ದಿಟವೇ ಆದ್ರೂವೆ ಆವಯ್ಯ ಪರ್ಸನಲ್ಲಾಗಿ ಹೆಲ್ಪ್ ಮಾಡವ್ನೆ. ನಮಗೂ ಕರೆಯಲೇಬೇಕೆಂಬ ಉಮೇದಿಲ್ಲ ಮೇಲಾಗಿ ತಹಶೀಲ್ದಾರನ್ನ ಬಿಟ್ಟು ಮಾಡಂಗೂ ಇಲ್ಲವಲ್ಲ..’ ರಾಗ ಎಳೆದ ಪೂಜಾರಿ. ‘ನೋಡು ಪೂಜಾರಪ್ಪ ಅಸಲಿಗೆ ನಮ್ಮ ದೇವರು ಭಾಳ ಅಸವಾಲದ್ದು. ಮಡಿಮೈಲಿಗೆ ಜೋರು. ಆಮ್ಯಾಕೆ ಅಪಚಾರವಾಗಬಾರ್ದಲ್ಲ. ಎಲ್ಲಾನು ಬಾಯಿಬಿಟ್ಟು ಹೇಳೋಕಾಗಲ್ಲ’ ಮೂಗುಮ್ಮಾಗಿ ಕೆಕ್ಕರಿಸಿ ಟವೆಲ್ ಕೊಡವಿ ಗೌಡ ಎದ್ದು ಹೊರಟಾಗ, ಪೂಜಾರಿಗೆ ಝಳ ಬಡ್ದಂಗಾತು. ‘ಹ್ಹಿಹ್ಹಿಹ್ಹಿ ಎಲ್ಲದಕ್ಕೂ ಒಂದು ಪರಿಹಾರವಂತ ಇದ್ದೇ ಅದೆ ಬಿಡಿಸ್ವಾಮಿ’ ಎಂದು ಪೂಜಾರಿ ಜನಿವಾರದಿಂದ ಬೆನ್ನು ತುರಿಸಿಕೊಂಡ. ಎಲ್ಲರೆದುರೂ ಪಂಚಾಂಗ ಶ್ರವಣ ಮಾಡಿ ಒಂದು ಶುಭದಿನ ಗುರುತು ಮಾಡಿದರು. ಸಾಹೇಬರನ್ನು ಕರೆದುಬಂದರು. ಸಾಹೇಬರು ಪತ್ನಿಸಮೇತರಾಗಿ ಬರುವುದಾಗಿ ವಚನ ಕೊಟ್ಟು ಎದುಗುದಿ ಹೆಚ್ಚಿಸಿದರು.

ಹಾದಿಗೆ ಹಂದರ ಹಾಕಿ ಬೀದಿಗೆ ಸೆಳೆವು ಕೊಟ್ಟು ಬಟ್ಟೆ ಕಮಾನು ನಿಲ್ಲಿಸಿ, ಬಾಳೆಕಂದು ಮಾವಿನತೋರಣ ಕಟ್ಟಿ ಇಡೀ ದೇವಾಲಯ ಬೀದಿನಾ ಮದುವಣಗಿತ್ತಿ ಹಂಗೆ ಸಿಂಗಾರ ಮಾಡಿದೋರು ಕೆಳಗಳಹಟ್ಟಿ ಜನ. ಸಾಹೇಬರು ಪತ್ನಿಸಮೇತರಾಗಿ ಕಾರಿನಿಂದ ಭುವಿಗಿಳಿಯುತ್ತಲೇ ಪಡ್ಡೆ ಹುಡುಗರು ಮಾರುದ್ದ ಪಟಾಕಿ ಸಿಡಿಸಿದರು. ನಾದಸ್ವರದವರನ್ನು ಕರೆಸಿದ್ದ ಪೂಜಾರಿ. ಸಾಹೇಬರು ಮಡಿ ಉಟ್ಟು ಅರೆಬೆತ್ತಲಾಗಿ ಶಲ್ಯ ಹೊದ್ದು ಗಂಧಮುದ್ರೆ ಶೋಭಿತರಾಗಿ ಆಗಮಿಸಿದ್ದರು. ಸಾಹೇಬರ ಸತಿಯದ್ದೋ ಚೂಡಿದಾರ. ಗೌಡರೇ ಮುಂದೆ ನಿಂತು ಸಾಹೇಬರನ್ನು ತಾಲ್ಲೂಕು ಮುಖಂಡರನ್ನು ಬರಮಾಡಿಕೊಂಡರು. ಆಳೆತ್ತರದ ನೀಲಾಂಜನದ ಬೆಳಕಲ್ಲಿ ಲಕ್ಷ್ಮಿನರಸಿಮ್ಮ ಹೂಹಾರಗಳ ನಡುವೆ ಮಿನುಗತ್ತಲಿದ್ದ. ಗರ್ಭಗುಡಿಯೊಳಗೆ ಸಾಹೇಬರನ್ನು ಪೂಜಾರಿ ಕರೆದನಾದರೂ, ಅದರ ತುಂಬಾ ಗೌಡನ ಕಡೆಯೋರು, ಬ್ರಾಂಬ್ರು ಪರಿವಾರವೇ ತುಂಬಿಕೊಂಡಿದ್ದು, ಅಡಿಯಿಡಲೂ ಜಾಗ ಕಾಣದಾಗಿ ಸೆಖೆಯಿಂದ ಬೇಸತ್ತಿದ್ದ ಸಾಹೇಬ ಸತಿಸಮೇತರಾಗಿ ನಿಂತಲ್ಲೇ ಕೆನ್ನೆ ಬಡಿದುಕೊಂಡು, ಕಿವಿತುದಿಗಳನ್ನು ಹಿಡಿದು ಉಠ್‍ಬೈಠ್ ಮಾಡಿ ದೀರ್ಘ ದಂಡ ಹಾಕಿಯೇ ಬಿಟ್ಟರು. ಚೂಡಿದಾರದಲ್ಲಡಗಿದ್ದ ದಪ್ಪನೆ ಶರೀರವು ಹೆಚ್ಚು ಶ್ರಮ ಪಡದೇ ನಿಂತಲ್ಲೇ ಕರಜೋಡಿಸಿತು. ಮಹಾಮಂಗಳಾರತಿ ಆಗೋವಾಗ ಗುಡಿಯಲ್ಲಿ ನೇತುಹಾಕಿದ್ದ ಗಂಟೆಗಳೆಲ್ಲವೂ ಬಡಿದಾಡಿ ಗದ್ದಲವೆಬ್ಬಿಸಿದವು. ಯಾರೋ ಧಂಕಟ್ಟಿ ಶಂಖ ಊದಿದರು. ಸಾಹೇಬ ಹೂಹಣ್ಣುಗಳ ಬುಟ್ಟಿ ರವಾನಿಸಿದರು. ದೇವರ ಮುಂದೆ ಕಾಯಿ ಒಡೆದು ಪೂಜೆ ಮಾಡಿ ಹೂಪತ್ರೆ ಪ್ರಸಾದವನ್ನಿಟ್ಟು ಬುಟ್ಟಿ ವಾಪಸ್ ನೀಡಿದ ಪೂಜಾರಿ, ಪಂಚಾಮೃತವನ್ನು ಅವರ ಅಂಗೈಗಳಿಗೆ ಹನಿಕಿಸಿದ. ಸಾಹೇಬರು ಅನನ್ಯ ಭಕ್ತಿಪರವಶರಾಗಿ ತಲೆಗೆಲ್ಲಾ ಸವರಿಕೊಂಡರು. ‘ಯಾಕೆ ಪೂಜಾರಪ್ಪ, ಹೋಮಹವನ ಏನೂ ಇಟ್ಟುಕೊಂಡಿಲ್ವಲ್ಲಾರೀ!?’ ಎಂದು ಅಸಮಾಧಾನ ಚಿತ್ತರಾದರು. ‘ಹ್ಹಿಹ್ಹಿಹ್ಹಿ ಮುಂದಿನ ದಿನಗಳಲ್ಲಿ ಇಟ್ಕೋತೀವಿ ಮಹಾಸ್ವಾಮಿ’ ಅಂದ ಪೂಜಾರಿ, ಕಾಯಿ ಬಾಳೆಹಣ್ಣು ತಂದಿದ್ದ ಇತರೆ ಭಕ್ತಾದಿಗಳತ್ತ ಗಮನಕೊಟ್ಟು ಸಾಹೇಬರನ್ನು ಮರೆತೇ ಬಿಟ್ಟ. ಗೌಡನು ಹೆಚ್ಚೇನು ಹಚ್ಚಿಕೊಳ್ಳಲಿಲ್ಲ. ‘ಅನ್ನಸಂತರ್ಪಣೇನೂ ಇಲ್ಲವೇನ್ರಿ ಗೌಡ್ರೆ?’ ಪುನಃ ಸಾಹೇಬರ ತಹತಹ. ‘ಬೇಕಾರೆ ನಮ್ಮ ಮನೆಗೆ ಬರ‍್ರಿ ಸಾ’ ಅಂತ ಕೊಕ್ಕನೆ ನಕ್ಕುಬಿಟ್ಟ ಗೌಡ. ಸಾಹೇಬರು ಸತಿಸಮೇತ ಕೂತ ಶಾಸ್ತ್ರ ಮಾಡಿದಾಗ ಆವಮ್ಮ ಚಡಪಡಿಸಿ ಬೆವರೊಡೆದರು. ಎಲ್ಲರೂ ಬಿಜಿಯಲ್ಲಿದ್ದ ಕಾರಣ ಸಾಹೇಬರನ್ನು ಯಾರೂ ಬೀಳ್ಕೊಡಲು ಬರಲಿಲ್ಲವಾಗಿ ಸಾಹೇಬರು ಒಂದಳತೆಗೆ ಮಂಕಾದರೂ ತೋರ್ಗೊಡದೆ ‘ಮೀನಾಕ್ಷಿ, ದೇವರಕಾರ್ಯ ಚೆನ್ನಾಗಾಯ್ತು’ ಎಂದು ಕರಿಮೈ ಕಾಣದಂತೆ ಶಲ್ಯ ಹೊದೆಯುತ್ತಾ ಕಾರು ಏರಿದರು.

ದೂರದಲ್ಲಿ ಕೈಕಟ್ಟಿ ನಿಂತಿದ್ದ ಕೆಳಗಳ ಹಟ್ಟಿ ಮಂದಿ, ‘ತಹಶೀಲ್ದಾರ್ ರಾಮರಾಯರಿಗೆ ಜೈ’ ಅಂತ ಜಯಕಾರ ಹಾಕಿ ಖುಷಿ ಪಟ್ಟಿತು. ‘ನಮ್ಮ ಸಾಹೇಬ್ನ ಹೆಂಡ್ರು ಬ್ರಾಂಬ್ರ ಆಯಮ್ಮ ಕಣಾ. ಇಂಟರ್‌ಕ್ಯಾಸ್ಟ್ ಲಗ್ನ’ ಲೊಟ್ಟೆ ಹೊಡೆದನೊಬ್ಬ ಜೀನ್ಸ್. ಸಾಹೇಬರ ಕಾರು ಧೂಳೆಬ್ಬಿಸಿ ಕಣ್ಮರೆಯಾಗುತ್ತಲೇ ಗೌಡ ತಳಮಳಿಸಲಾರಂಭಿಸಿದ. ‘ಪೂಜಾರ‍್ರೆ, ಮೊದ್ಲು ಗುಡಿ ಪೂರಾ ಪುಣ್ಯಾವರ್ಚನೆ ಮಾಡ್ಬೇಕು. ಎಲ್ಲಾ ಶಾಸ್ತ್ರಬದ್ಧವಾಗಿ ಆಗ್ಬೇಕ್ರಿ’ ಒಂದು ತೆರನಾದ ತಾಕೀತು ಗೌಡನ ಬಾಯಿಂದ ಹೊರಬಿತ್ತು.

‘ಅಯ್ಯೋ ನಮ್ಗೂ ಆತನ ವೇಷ, ಭಾಷೆ, ಭೂಷಣ ನೋಡಿ ಪರಪಾಟಾಯ್ತು ಗೌಡ್ರೆ...... ಹಿಂಗಾಗಿ’ ಕಿಟ್ಟಪ್ಪ ಗೊಣಗುತ್ತಾ ‘ಶುದ್ಧಿ ಮಾಡಿದ್ರಾತು ಬಿಡಿ. ಗೋಮೂತ್ರ ತಂದರೇನ್ರೋ?’ ಎಂದು ಬಿಜಿಯಾದ.

ಬ್ರಾಂಬ್ರ ಒಂದು ಗುಂಪು ಕಚ್ಚೆ ಕಟ್ಟಿ, ಸೊಂಟಕ್ಕೆ ವಲ್ಲಿ ಸುತ್ತಿ ನೆರೆದ ಭಕ್ತಾದಿಗಳನ್ನು ಮಕ್ಕಳು ಮುದುಕರು ಮಹಿಳೆಯರೆನ್ನದೆ ಸಮಸ್ತರನ್ನೂ ಬಲವಂತವಾಗಿ ಹೊರಹಾಕಲಾರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT