ಆಂಜನೇಯನಿದ್ದರೆ ಅಂಜಿಕೆ ಇರದು

7
hanumant jayanti

ಆಂಜನೇಯನಿದ್ದರೆ ಅಂಜಿಕೆ ಇರದು

Published:
Updated:
Deccan Herald

ಹನುಮಂತನ ಗುಡಿಯಿಲ್ಲದ ಊರನ್ನು ನಮ್ಮ ದೇಶದಲ್ಲಿ ಕಾಣುವುದು ಕಷ್ಟ. ಊರಿನಲ್ಲಿ ಹನುಮಂತನಿದ್ದರೆ ನಾವು ಹೆದರಬೇಕಿಲ್ಲ; ಅವನು ನಮ್ಮನ್ನು ಕಾಪಾಡುತ್ತಾನೆ – ಎನ್ನುವುದು ನಮ್ಮ ಜನರ ಬಲವಾದ ನಂಬಿಕೆ. ‘ಹನುಮನಿಲ್ಲದ ಹಳ್ಳಿಯೇ? ಗಣಪನಿಲ್ಲದ ಗ್ರಾಮವೇ?’ ಎಂಬ ಮಾತು ಪ್ರಚಲಿತದಲ್ಲಿದೆ.

ಹನುಮಂತನಿಗೆ ಹಲವು ಹೆಸರುಗಳು: ಮಾರುತಿ, ಆಂಜನೇಯ, ಪ್ರಾಣದೇವರು, ಮಹಾವೀರ, ರಾಮದೂತ, ಅಂಜನಾಸುತ, ವಾಯುಪುತ್ರ – ಹೀಗೆ. ಅವನ ಬಗ್ಗೆ ನಮಗೆ ತಿಳಿದುಬರುವುದು ವಾಲ್ಮೀಕಿಮಹರ್ಷಿಯ ರಾಮಾಯಣದಲ್ಲಿ. ಮಹಾಭಾರತದಲ್ಲೂ ಅವನ ಬಗ್ಗೆ ವಿವರಗಳಿವೆ. ಏಳು ಮಂದಿ ಚಿರಂಜೀವಿಗಳಲ್ಲಿ ಒಬ್ಬ ಎಂಬ ಎಣಿಕೆಯೂ ಇದೆ.

ಆಂಜನೇಯನು ಅಂಜನಾದೇವಿ ಮತ್ತು ವಾನರಶ್ರೇಷ್ಠ ಕೇಸರಿ ಇವರ ಪುತ್ರ; ವಾಯುದೇವನ ಅನುಗ್ರಹದಿಂದ ಹುಟ್ಟಿದವನು. ಹುಟ್ಟಿನಿಂದಲೇ ಅಪ್ರತಿಮ ಶಕ್ತಿವಂತ; ಹುಟ್ಟುತ್ತಿದ್ದ ಹಾಗೆಯೇ ಸೂರ್ಯನನ್ನು ನೋಡಿದ; ಹಣ್ಣೆಂದು ಭ್ರಮಿಸಿ ಅವನನ್ನು ಹಿಡಿಯುವುದಕ್ಕೆಂದು ಆಕಾಶಕ್ಕೆ ಹಾರಿದ. ಅವನ ಶಕ್ತಿಗೆ ಹೆದರಿದ ಇಂದ್ರನು ಅವನನ್ನು ನಿಗ್ರಹಿಸಬೇಕೆಂದು ವಜ್ರಾಯುಧವನ್ನು ಪ್ರಯೋಗಿಸಿದ. ಹನುಮಂತ ಮೂರ್ಛೆಹೋದ. ಅವನ ಕೆನ್ನೆಯು ವಜ್ರಾಯುಧದ ಹೊಡೆತದಿಂದ ಊದಿಕೊಂಡಿತು; ಅವನು ‘ಹನೂಮಂತ’ ಎನಿಸಿಕೊಂಡ.

ಮಗನ ಮೇಲೆ ನಡೆದ ಹಲ್ಲೆಯಿಂದ ವಾಯುವಿಗೆ ಕೋಪ ಬಂದಿತು. ಅವನು ಚಲನೆಯನ್ನು ನಿಲ್ಲಿಸಿದ. ಲೋಕವೇ ಸ್ತಬ್ಧವಾಯಿತು. ಚರಾಚರ ಪ್ರಾಣಿಗಳು ವಾಯುವಿಲ್ಲದೆ ಜೀವವನ್ನು ಕಳೆದುಕೊಳ್ಳುವಂತಾಯಿತು. ಆಗ ಬ್ರಹ್ಮನು ವಾಯುವನ್ನು ಸಮಾಧಾನಪಡಿಸಿದ. ದೇವಾನುದೇವತೆಗಳು ಆಂಜನೇಯನಿಗೆ ವರವನ್ನು ನೀಡಿದರು. ಅಂದಿನಿಂದ ಅವನು ಮಹಾವೀರನಾದ; ಬಲವೂ ಬುದ್ಧಿಯೂ ಅವನ ಸ್ವತ್ತುಗಳಾದವು.

ರಾಮಾಯಣದಲ್ಲಿ ಹನುಮಂತ ನೆಲೆನಿಂತ ತಾಣವೇ ಕಿಷ್ಕಿಂಧೆ. ಇದು ನಮ್ಮ ಕನ್ನಡನಾಡಿನ ಹಂಪೆಯ ಪ್ರದೇಶ ಎನ್ನುವುದು ಹಲವರು ವಿದ್ವಾಂಸರ ಅಭಿಪ್ರಾಯ. ಹೀಗಾಗಿ ಕರ್ನಾಟಕಕ್ಕೂ ಹನುಮಂತನಿಗೂ ವಿಶೇಷ ಬಾಂಧವ್ಯವೆನ್ನಿ.

ಕೈಕೇಯಿಯ ಇಚ್ಛೆಯಂತೆ ಶ್ರೀರಾಮನು ಸೀತೆ ಮತ್ತು ಲಕ್ಷ್ಮಣರ ಜೊತೆಗೂಡಿ ವನವಾಸದಲ್ಲಿದ್ದಾನೆ. ರಾವಣನಿಂದ ಸೀತೆಯ ಅಪಹರಣವಾಗಿದೆ. ಸೀತೆಯನ್ನು ಹುಡುಕುತ್ತ ಕಾಡುಮೇಡುಗಳಲ್ಲಿ ಸಂಚರಿಸುತ್ತಿದ್ದಾರೆ ರಾಮ–ಲಕ್ಷ್ಮಣರು. ಆಗ ಜೊತೆಯಾದವನೇ ಹನುಮಂತ. ಶ್ರೀರಾಮ ಮತ್ತು ಹನುಮಂತ – ಇವರ ಸಮಾಗಮವನ್ನು ವಾಲ್ಮೀಕಿಮಹರ್ಷಿ ತುಂಬ ಮನೋಜ್ಞವಾಗಿ ಚಿತ್ರಿಸಿದ್ದಾನೆ. ರಾಮಾಯಣದ ಮಹಾಪುರುಷರಲ್ಲಿ ಹನುಮಂತ ಕೂಡ ಒಬ್ಬ. ರಾಮನ ಪರಮಭಕ್ತ, ಆಪ್ತಬಂಟ. ರಾಮನು ಬದುಕಿದ್ದಾನೆಂದು ಸೀತೆಗೂ, ಸೀತೆಯು ಜೀವಂತ ಇರುವಳೆಂದು ರಾಮನಿಗೂ ಸಂದೇಶವನ್ನು ಮುಟ್ಟಿಸಿ, ಆ ಮೂಲಕ ಇಬ್ಬರಲ್ಲೂ ಪ್ರಾಣಸಂಚಾರವನ್ನು ಉಂಟುಮಾಡಿದ. ಲಕ್ಷ್ಮಣನು ಯುದ್ಧದಲ್ಲಿ ಪ್ರಾಣಾಪಾಯದಲ್ಲಿದ್ದಾಗ ಸಂಜೀವಿನಿಯನ್ನು ತಂದು ಅವನನ್ನು ಕಾಪಾಡಿದವನು ಕೂಡ ಹನುಮಂತನೇ.

ನಮ್ಮಲ್ಲಿ ಭಕ್ತಿಮಾರ್ಗಕ್ಕೆ ತುಂಬ ಮನ್ನಣೆಯಿದೆ. ಒಂಬತ್ತು ರೀತಿಯಲ್ಲಿ ಭಕ್ತಿಯ ವಿಧಾನಗಳನ್ನು ಹೇಳಲಾಗಿದೆ. ಅದರಲ್ಲಿಯ ದಾಸ್ಯಭಕ್ತಿಗೆ ಹನುಮಂತ ಶ್ರೇಷ್ಠ ಉದಾಹರಣೆ.

**

ರಾಮನ ಜೀವನದಲ್ಲಿ ಹನುಮಂತನ ಪಾತ್ರ ತುಂಬ ವಿಶೇಷವಾದುದು. ಹೀಗಾಗಿಯೇ ಪರಂಪರೆ ಅವನನ್ನು ಹೀಗೆ ಸ್ತುತಿಸಿದೆ:

ಯತ್ರ ಯತ್ರ ರಘುನಾಥಕೀರ್ತನಂ
ತತ್ರ ತತ್ರ ಕೃತಮಸ್ತಕಾಂಜಲಿಮ್ |
ಬಾಷ್ಪವಾರಿ ಪರಿಪೂರ್ಣ ಲೋಚನಂ
ಮಾರುತಿಂ ನಮತ ರಾಕ್ಷಸಾಂತಕಮ್ ।।

ಎಲ್ಲೆಲ್ಲಿ ರಾಮನ ಕೀರ್ತನೆ ನಡೆಯುತ್ತಿರುವುದೋ ಅಲ್ಲೆಲ್ಲ ಹನುಮಂತನು ಕೈಮುಗಿದು ನಿಂತಿರುತ್ತಾನೆ – ಎನ್ನುವುದು ಇದರ ಭಾವ. ಹನುಮಂತನಿರದ ರಾಮನ ಆಲಯವನ್ನು ಕಾಣಲು ಸಾಧ್ಯವೇ ಇಲ್ಲವಷ್ಟೆ. 

ನಮ್ಮಲ್ಲಿ ಭಕ್ತಿಮಾರ್ಗಕ್ಕೆ ತುಂಬ ಮನ್ನಣೆಯಿದೆ. ಒಂಬತ್ತು ರೀತಿಯಲ್ಲಿ ಭಕ್ತಿಯ ವಿಧಾನಗಳನ್ನು ಹೇಳಲಾಗಿದೆ. ಅದರಲ್ಲಿಯ ದಾಸ್ಯಭಕ್ತಿಗೆ ಹನುಮಂತ ಶ್ರೇಷ್ಠ ಉದಾಹರಣೆ. ರಾಮನ ಕೀರ್ತಿಯನ್ನು ಸೃಷ್ಟಿ ಇರುವ ತನಕವೂ ಹರಡುವ ತವಕದಿಂದ ಬ್ರಹ್ಮಚಾರಿಯಾಗಿಯೇ ಉಳಿದವನು ಅವನು.

ಹನುಮಂತ ಸೀತೆಗೆ ಧೈರ್ಯ ತುಂಬಿದವನು; ರಾಮನಿಗೇ ನೆರವಾದವನು; ರಾಕ್ಷಸರನ್ನು ಸಂಹರಿಸಿದವನು. ಹೀಗಾಗಿ ಅವನು ನಮ್ಮೆಲ್ಲರ ಭಯವನ್ನು ಹೋಗಲಾಡಿಸುವ, ನಮ್ಮನ್ನು ಕಾಪಾಡುವ ದೈವ ಎಂಬ ಶ್ರದ್ಧೆ ಆಸ್ತಿಕರದ್ದು. ಕೆಟ್ಟ ಕನಸುಗಳಿಂದ ಪಾರಾಗಲು, ಕೆಲಸದಲ್ಲಿ ಯಶಸ್ಸನ್ನು ಸಂಪಾದಿಸಲು, ಆರೋಗ್ಯವನ್ನು ಕಾಪಾಡಿಕೊಳ್ಳಲು, ಮಾತಿನ ಶಕ್ತಿಯನ್ನು ಹೊಂದಲು, ರಾಮಭಕ್ತಿಯ ಫಲವನ್ನು ಸಂಪಾದಿಸಲು ಹನುಮಂತನನ್ನು ಆರಾಧಿಸುವ ರೂಢಿಯುಂಟು. 

ಹನುಮಂತನನ್ನು ಆರಾಧಿಸುವ ವಿಶೇಷ ದಿನವೇ ‘ಹುನುಮಂತಜಯಂತಿ’. ದೇಶದ ಉದ್ದಗಲಕ್ಕೂ ಈ ಪರ್ವವನ್ನು ಆಚರಿಸುತ್ತಾರೆ. ಮೂರು ಸಂಪ್ರದಾಯಗಳಲ್ಲಿ ಜಯಂತಿಯನ್ನು ಆಚರಿಸುವ ಪದ್ಧತಿಯುಂಟು. ಅವುಗಳಲ್ಲಿ ಒಂದು ಮಾರ್ಗಶಿರ ಶುಕ್ಲ ಚತುರ್ದಶಿ; ದಕ್ಷಿಣ ಭಾರತದಲ್ಲಿ ಇದೇ ಪದ್ಧತಿ ಹೆಚ್ಚು ರೂಢಿಯಲ್ಲಿರುವುದು. ಅಂದು ಹನುಮಂತನ ಆಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ರಾಮನ ಪೂಜೆಯೂ ವಿಶೇಷವಾಗಿ ನಡೆಯುತ್ತದೆ. ರಾಮಾಯಣದಲ್ಲಿ ಹನುಮಂತನ ಶಕ್ತಿ–ಸಾಮರ್ಥ್ಯಗಳ ಬಗ್ಗೆ ಸುಂದರವಾಗಿ ಮೂಡಿಬಂದಿರುವುದು ಸುಂದರಕಾಂಡದಲ್ಲಿಯೇ. ಹೀಗಾಗಿ ಅಂದು ಸುಂದರಕಾಂಡದ ಪಾರಾಯಣವನ್ನೂ ಮಾಡಲಾಗುತ್ತದೆ. ದೇವಾಲಯಗಳಲ್ಲಿ ಪಾನಕ, ಕೋಸಂಬರಿ, ಮಜ್ಜಿಗೆಗಳ ವಿತರಣೆಯೂ ನಡೆಯುತ್ತದೆ. ದಾಸರು, ಕವಿಗಳು ಹನುಮಂತನ ಬಗ್ಗೆ ಸಾವಿರಾರು ಕೃತಿಗಳನ್ನು ರಚಿಸಿದ್ದಾರೆ. ಅವುಗಳ ಗಾಯನ–ಭಜನೆಗಳೂ ನಡೆಯುತ್ತವೆ.

ಬರಹ ಇಷ್ಟವಾಯಿತೆ?

 • 41

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !