ಶುಕ್ರವಾರ, ಜೂನ್ 18, 2021
21 °C

ವಿಶ್ವನಾಥ ನೇರಳಕಟ್ಟೆ ಬರೆದ ಕಥೆ: ಅಂತರ್ಗಾಮಿ

ವಿಶ್ವನಾಥ ಎನ್. ನೇರಳಕಟ್ಟೆ Updated:

ಅಕ್ಷರ ಗಾತ್ರ : | |

Prajavani

‘ರೀ, ನಿಮ್ಗೆ ಎಷ್ಟು ಸಲ ಹೇಳ್ಬೇಕ್ರಿ! ನನ್ಗೂ ಒಳ್ಳೆ ವಾಯ್ಸಿಲ್ಲ. ಒಳ್ಳೆ ವಾಯ್ಸಿರೋ ಯಾವ್ ಫ್ರೆಂಡೂ ನನ್ಗಿಲ್ಲ. ಆವಾಗಿಂದಾನೂ ಹೇಳ್ತಾನೇ ಇದ್ದೀನಿ, ಗೊತ್ತಾಗಲ್ವಾ? ಇನ್ನೊಂದ್ಸಲ ಕಾಲ್ ಮಾಡಿದ್ರೆ ಪೊಲೀಸ್‌ ಕಂಪ್ಲೇಂಟ್‌ ಕೊಡ್ಬೇಕಾಗುತ್ತೆ’ ಹೇಳಿದ ಬೆನ್ನಿಗೇ ಫೋನ್ ಕಟ್. ‘ಹಲೋ ಹಲೋ....’ ಮಾತು ಬೆಳೆಸಲೆತ್ನಿಸಿದ ಅನಿಕೇತನ ಮುಖದಲ್ಲಿ ಬೇಸರ ಗಾಢವಾಗಿ ಕಾಣಿಸಿಕೊಂಡಿತು. ಅದೇ ಮನಃಸ್ಥಿತಿಯಲ್ಲಿ ತನ್ನ ‘ಧ್ವನಿಸುಂದರಿ’ಯನ್ನು ನೆನಪಿಸಿಕೊಂಡು ನಾಲ್ಕು ಸಾಲುಗಳನ್ನು ಗೀಚತೊಡಗಿದ.

********

ಅನಿಕೇತ ಬೆಂಗಳೂರಿನ ಮಲ್ಟಿ ನ್ಯಾಷನಲ್ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಉದ್ಯೋಗಿ. ಕಥೆ, ಕವನ ಬರೆಯುವುದು ಹವ್ಯಾಸ. ತಂದೆ, ತಾಯಿಯ ಜೊತೆಗೆ ಬದುಕುತ್ತಿರುವ ಸಂತೃಪ್ತ. 25ರ ಯುವಕನಲ್ಲಿರುವ ಬಣ್ಣಬಣ್ಣದ ಕನಸುಗಳು ಆತನಲ್ಲೂ ಇದ್ದವು. ಗೆಳೆಯರ ಬಳಗದಲ್ಲಿ ತುಂಟ ಎಂದು ಗುರುತಿಸಿಕೊಂಡದ್ದು ಬಿಟ್ಟರೆ ಪ್ರೀತಿ ಗೀತಿ ಎಂದು ತಲೆ ಕೆಡಿಸಿಕೊಂಡವನಲ್ಲವೇ ಅಲ್ಲ. ಆದರೆ ಆರು ತಿಂಗಳುಗಳ ಹಿಂದೆ ನಡೆದ ಘಟನೆ ಪ್ರೀತಿಯ ಗಾಢ ಅನುಭವವೊಂದನ್ನು ಆತನಲ್ಲಿ ಮೂಡಿಸಿತ್ತು.

ಕಂಪನಿಯ ಮುಖ್ಯಸ್ಥರು ದೆಹಲಿಯಲ್ಲಿ ಆಯೋಜಿಸಿದ್ದ ಏಳು ದಿನಗಳ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಪ್ರತಿನಿಧಿಯಾಗಿ ಆಯ್ಕೆಯಾದದ್ದು ಅನಿಕೇತ ಹಾಗೂ ಆತನಿಗಿಂತ ಎರಡು ವರ್ಷ ಮೊದಲು ಕಂಪನಿ ಸೇರಿಕೊಂಡಿದ್ದ ಸುಷ್ಮಾ. ಈತನ ತುಂಟ ಮಾತುಗಳಿಗೆ ಕಿವಿಯಾಗುತ್ತಾ ದೆಹಲಿ ಸೇರುವವರೆಗೂ ನಕ್ಕು ನಕ್ಕು ಸಾಕಾಗಿತ್ತು ಅವಳಿಗೆ. ಇವರಿಬ್ಬರ ಲಾಡ್ಜ್ ಬೇರೆ ಬೇರೆ. ಅನಿಕೇತನ ಲಾಡ್ಜ್‌ನಿಂದ ಸುಷ್ಮಾಳ ಲಾಡ್ಜ್‌ಗೆ 15 ನಿಮಿಷಗಳ ಹಾದಿ.

ಆರನೇ ದಿನದ ಕಾನ್ಫರೆನ್ಸ್ ಮುಗಿಸಿ ರೂಮು ಸೇರಿಕೊಂಡವನು ಮರುದಿನದ ಪೇಪರ್ ಪ್ರೆಸೆಂಟೇಶನ್ ಬಗ್ಗೆ ಮಾತನಾಡಲು ಸುಷ್ಮಾಳಿಗೆ ಫೋನಾಯಿಸಿದ್ದ. ಸುಷ್ಮಾಳ ಪರಿಚಿತ ದನಿಯನ್ನು ನಿರೀಕ್ಷಿಸಿದ್ದವನಿಗೆ ಅಚ್ಚರಿಕಾದಿತ್ತು. ‘ಹಲೋ, ಅವ್ರು ಸ್ನಾನ ಮಾಡ್ತಿದ್ದಾರೆ. ಹತ್ತ್ ನಿಮ್ಷ ಬಿಟ್ಟು ಕಾಲ್ ಮಾಡಿ’ ಮೃದುಮಧುರವಾದ ಧ್ವನಿ. ಅನಿಕೇತನಿಗೆ ಆಕೆ ಹೇಳಿದ ವಿಚಾರ ಅರ್ಥವಾಗಿದ್ದರೂ ಗೊತ್ತೇ ಆಗದವನಂತೆ ‘ಏನು?’ ಎಂದು ಪ್ರಶ್ನೆ ಮಾಡಿದ್ದ, ಅವಳ ಇಂಪಾದ ಧ್ವನಿಯನ್ನು ಮತ್ತೆ ಕೇಳಬೇಕೆಂಬ ಆಸೆಯಲ್ಲಿ. ಮತ್ತೆ ಅದನ್ನೇ ಉಲಿದವಳು ಕಾಲ್ ಕಟ್ ಮಾಡಿದ್ದಳು. ಅನಿಕೇತನ ಹೃದಯದಲ್ಲೇನೋ ರೋಮಾಂಚನ ಶುರುವಾಗಿತ್ತು. ‘ಧ್ವನಿಗೂ ಇಷ್ಟೊಂದು ಶಕ್ತಿಯೇ?’ ತನ್ನನ್ನು ತಾನೇ ಪ್ರಶ್ನಿಸಿಕೊಂಡಿದ್ದ. ಅವಳ ಧ್ವನಿಯ ಗುಂಗಿನಲ್ಲಿಯೇ ಮೈಮರೆತವನು ವಾಸ್ತವಕ್ಕೆ ಬರುವಾಗ 20 ನಿಮಿಷ ಕಳೆದಿತ್ತು. ಸುಷ್ಮಾಳಲ್ಲಿ ಅವಳ ಬಗ್ಗೆ ವಿಚಾರಿಸಬೇಕೆಂದುಕೊಂಡವನು ಮತ್ತೆ ಕಾಲ್ ಮಾಡಿದ. ಪೇಪರ್ ಪ್ರೆಸಂಟೇಶನ್ ಬಗ್ಗೆ ಆತುರಾತುರವಾಗಿ ಮಾತು ಮುಗಿಸಿ ತನ್ನ ಮೂಲ ಉದ್ದೇಶಕ್ಕೆ ಒಕ್ಕಣೆ ಹಾಕಿದ್ದ- ‘ಸುಷ್ಮಾ, ನಿನ್ನ ಜೊತೆಗೆ ಇರುವವಳು ಯಾರು?’

‘ಓ ಅದಾ! ಒಂದು ಹತ್ತು ಜನ ಹುಡುಗೀರು ಇದ್ರು ಕಣೋ. ಎಲ್ರೂ ಕರ್ನಾಟಕದವ್ರೇ. ನಮ್ ಕಂಪನಿ ಬೇರೆ ಬೇರೆ ಬ್ರಾಂಚಿಂದ ಬಂದಿರೋ ರೆಪ್ರೆಸೆಂಟೇಟಿವ್ಸ್. ಇಷ್ಟೊತ್ತು ಇಲ್ಲೇ ಇದ್ರು, ಈಗ ತಾನೇ ಆಚೆ ಹೋಗಿದ್ದಾರೆ. ಯಾಕೋ ಕೇಳ್ದೆ?’

‘ಅಲ್ಲಾ, ಅಗ್ಲೇ ಕಾಲ್ ಮಾಡಿದ್ದೆ. ಯಾರೋ ಕಾಲ್ ಪಿಕ್ ಮಾಡಿ ನೀನು ಸ್ನಾನಕ್ಕೆ ಹೋಗಿದ್ದೀಯ ಅಂದ್ಳು. ಅವ್ಳು ಯಾರು ಅಂತ ತಿಳ್ಕೋಬೇಕಿತ್ತು. ಅದ್ಕೆ...’

 ‘ಏನೋ ಲವ್ವಾ?’ ಸುಷ್ಮಾ ಪ್ರಶ್ನಿಸಿದ ರೀತಿ ಅನಿಕೇತನನ್ನು ಕೋಪಗೊಳಿಸಿತ್ತು. ‘ಲವ್ವಾದರೆ ಇವಳಿಗೇನು! ಅವಳ ಹೆಸರು ಹೇಳುವುದು ಬಿಟ್ಟು ಥತ್...’ ಮನಸ್ಸಿನಲ್ಲೇ ಗೊಣಗಿಕೊಂಡನೇ ಹೊರತು ಹೊರಗೆ ತೋರಿಸಿಕೊಳ್ಳಲಿಲ್ಲ, ಆಮೇಲೆ ಸುಷ್ಮಾ ಅವಳ ಹೆಸರು ಹೇಳದೇ ಹೋದರೆ ಎಂಬ ಭಯದಲ್ಲಿ. ‘ಹಾಗೇನೂ ಇಲ್ಲ. ಸುಮ್ನೆ ಕೇಳ್ದೆ ಅಷ್ಟೆ. ಅವ್ಳು ಯಾರೂ ಅಂತ’ ಹೇಳಿದವನು ಸುಷ್ಮಾಳ ಮಾತಿಗಾಗಿ ಕಾದುಕುಳಿತ.

‘ನೀನು ಕಾಲ್ ಮಾಡ್ದಾಗ ಯಾರು ರಿಸೀವ್ ಮಾಡಿದ್ದು ಅಂತ ನನ್ಗೆ ಗೊತ್ತಿಲ್ಲ. ಆದ್ರೆ ನನ್ ಮೊಬೈಲ್‌ಗೆ ಕಾಲ್ ಬಂದಿದೆ ಅಂತ ಹೇಳಿದ್ದು ರಂಜಿತಾ ಅಂತ’

‘ಅವ್ಳ್ ವಾಯ್ಸ್ ತುಂಬಾ ಸ್ವೀಟಾಗಿದೆ ಅಲ್ವಾ?’ ಅಪರಿಮಿತವಾದ ಆಕಾಂಕ್ಷೆ ಅನಿಕೇತನ ಆ ಪ್ರಶ್ನೆಯಲ್ಲಿತ್ತು.

‘ಇಲ್ಲ ಕಣೋ, ಅಂಥ ಸ್ಪೆಶಲ್ ವಾಯ್ಸೇನೂ ಅಲ್ಲ, ನಾರ್ಮಲಾಗೇ ಇದೆ. ಇಷ್ಟೆಲ್ಲಾ ಯಾಕೋ ಕೇಳ್ತಿದ್ದೀಯಾ?’

ಮತ್ತೆ ಮಾತನಾಡುವ ಉತ್ಸಾಹ ಅನಿಕೇತನಲ್ಲಿ ಉಳಿದಿರಲಿಲ್ಲ. ‘ಯಾಕೂ ಇಲ್ಲ. ಸುಮ್ನೆ ಕೇಳ್ದೆ’ ಎಂದವನು ‘ಗುಡ್‍ನೈಟ್’ ಹೇಳಿ ಕಾಲ್ ಕಟ್ ಮಾಡಿದ್ದ. ಮತ್ತೆ ಮತ್ತೆ ಅವಳ ಧ್ವನಿ ನೆನಪಾಗತೊಡಗಿತ್ತು. ‘ನಾಳೆ ಸುಷ್ಮಾಳ ಜೊತೆಗೆ ಅವಳೂ ಇರುವ ಹಾಗೆ ಮಾಡಪ್ಪ ದೇವರೇ’ ಎಂದು ಕೈ ಮುಗಿದವನು ಅವಳ ನೆನಪಲ್ಲಿಯೇ ಅವನ ಪಾಲಿನ ದೀರ್ಘ ರಾತ್ರಿಯನ್ನು ಕಳೆದ.

ಮರುದಿನ ಸುಷ್ಮಾಳನ್ನು ಕಂಡೊಡನೆಯೇ ಅವಳ ಸುತ್ತಮುತ್ತ ಕಣ್ಣೋಡಿಸಿದ. ಯಾರೂ  ಕಾಣಲೇ ಇಲ್ಲ. ನೇರವಾಗಿ ಕೇಳಿದ- ‘ನಿನ್ನೆ ರಾತ್ರಿ ನಿನ್ ಜೊತೆ ಇದ್ದೋರೆಲ್ಲಾ ಎಲ್ಲೋದ್ರು? ಒಬ್ರೂ ಕಾಣ್ತಾ ಇಲ್ಲ.’

‘ಏನೋ ಹುಡ್ಗೀರ್ ಬಗ್ಗೇನೇ ವಿಚಾರಿಸ್ತಿದ್ದೀಯ ನಿನ್ನೆಯಿಂದ. ನಿನ್ಗ್ ಲವ್ವಾಗಿರೋದು ಪಕ್ಕಾ ಕಣೋ’ ಸುಷ್ಮಾಳ ಮಾತಿಗೆ ಮುಚ್ಚುಮರೆ ಮಾಡಲಾಗಲಿಲ್ಲ ಅನಿಕೇತನಿಗೆ. ಹಿಂದಿನ ರಾತ್ರಿ ಕಾಲ್ ಪಿಕ್ ಮಾಡಿ ಮಾತನಾಡಿದವಳ ಧ್ವನಿ ತನ್ನನ್ನು ಮೋಹಗೊಳಿಸಿದ ಪರಿಯನ್ನು ಬಿಚ್ಚಿಟ್ಟ. ಅವಳನ್ನು ಹೇಗಾದರೂ ಮಾಡಿ ಪರಿಚಯ ಮಾಡಿಸು ಎಂದು ದುಂಬಾಲು ಬಿದ್ದ. ಹುಡುಗಿಯ ಧ್ವನಿಗೆ ಮಾರುಹೋದ ಅನಿಕೇತನ ಸ್ಥಿತಿಯನ್ನು ಕಂಡು ಅಯ್ಯೋ ಎನಿಸಿತು ಅವಳಿಗೆ. ‘ಮಧ್ಯಾಹ್ನ ಊಟದ ವಿರಾಮದಲ್ಲಿ ಅವಳ್ಯಾರೆಂದು ತಿಳಿದು ಹೇಳುತ್ತೇನೆ’ ಎಂದು ಅವಳು ಭರವಸೆಯಿತ್ತಾಗ ಅನಿಕೇತನ ಮನಸ್ಸು ಒಂದಿಷ್ಟು ನಿರಾಳವಾಯಿತು.

ಪ್ರೇಮಿಯ ನೆಪದಲ್ಲಿ ಕಾದುಕುಳಿತ ಅನಿಕೇತನಿಗೆ ಮಧ್ಯಾಹ್ನವೂ ಅವಳ್ಯಾರೆಂದು ಪತ್ತೆಹಚ್ಚಲಾಗಲಿಲ್ಲ. ‘ತಿಳಿದು ಹೇಳುತ್ತೇನೆ’ ಎಂದು ದೊಡ್ಡದಾಗಿ ಮಾತುಕೊಟ್ಟು ಈಗ ಅದ್ಯಾವುದೋ ಬಿಳಿ ಜಿರಳೆಯ ಜೊತೆಗೆ ಕಿಲಕಿಲ ಮಾತಾಡುತ್ತಾ ನಿಂತಿದ್ದಾಳಲ್ಲ! ಎಂದು ಸುಷ್ಮಾಳ ಮೇಲೆ ಕೋಪಿಸಿಕೊಂಡ. ‘ತಾನು ಹೇಳಿದ್ದನ್ನು ಇವಳು ಮರೆತಿದ್ದಾಳೋ ಹೇಗೆ!’ ಎಂದು ಅಂದುಕೊಂಡವನಿಗೆ ಮರುಕ್ಷಣವೇ ‘ತಾನು ಇಷ್ಟಪಟ್ಟವಳು ಈಗ ಸುಷ್ಮಾಳ ಜೊತೆ ಮಾತನಾಡುತ್ತಿರುವವಳೇ ಆಗಿರಬಾರದೇಕೆ’ ಎಂಬ ಯೋಚನೆ ಬಂತು. ಅವರ ಹತ್ತಿರ ಹೋಗಿ ಮಾತುಕತೆಗೆ ಕಿವಿಯಾದ. ‘ಇಲ್ಲ, ಇವಳಲ್ಲ. ಅವಳ ಧ್ವನಿಯ ಮೋಹಕತೆ ಬೇರೆಯೇ’ ಎಂದು ಅಂದುಕೊಂಡವನಿಗೆ ಊಟ ಮಾಡಲೂ ಮನಸ್ಸಾಗಲಿಲ್ಲ. ಸಪ್ಪೆ ಮುಖ ಹೊತ್ತು ಕಾನ್ಫರೆನ್ಸ್ ಹಾಲ್‍ಗೆ ಮರಳಿ ಬಂದು ಕುಳಿತುಕೊಂಡ. ಪಕ್ಕದಲ್ಲಿ ಕುಳಿತು ತಿವಿದು ತಿವಿದು ಮಾತನಾಡುತ್ತಿದ್ದ ಪಂಜಾಬಿ ವ್ಯಕ್ತಿಗೆ ಹೊಡೆಯಬೇಕೆನಿಸುವಷ್ಟು ಸಿಟ್ಟು, ನಿಯಂತ್ರಿಸಿಕೊಂಡ.

‘ಕಂಗ್ರಾಟ್ಸೋ ಅನಿಕೇತ, ಎಲ್ಲಾ ವಿಷ್ಯ ಹೇಳಿದ್ದೀನಿ’ ಸಂಜೆ ಕಾನ್ಪರೆನ್ಸ್ ಮುಗಿಸಿ ಬಳಿಬಂದು ಸುಷ್ಮಾ ಹೀಗಂದಾಗ ಚಿವುಟಿ ನೋಡಿಕೊಳ್ಳುವಷ್ಟು ರೋಮಾಂಚನವಾಯಿತು ಆತನಿಗೆ. ‘ಹಾಗಿದ್ರೆ ಅವ್ಳು ಸಿಕ್ಕ್‌ದ್ಲಾ?’ ಪ್ರಶ್ನಿಸಿದವನ ಮುಖದಲ್ಲಿ ಭೂಮಿ ತುಂಬುವಷ್ಟು ಕುತೂಹಲ, ಸಂತಸ.

‘ಅವ್ಳು ಸಿಕ್ಕಿಲ್ಲ, ಯಾರು ಅಂತಾನೂ ಗೊತ್ತಾಗಿಲ್ಲ. ಆದರೆ ನಿನ್ನೆ ರಾತ್ರಿ ರೂಮಿಗ್ ಬಂದೋಳ್ ಒಬ್ಳು, ಸುಮಾ ಅಂತ, ಅವ್ಳು ಸಿಕ್ಕುದ್ಲು. ಅವ್ಳ್ ನಂಬರ್ ತೆಗೊಂಡಿದ್ದೀನಿ. ನಿನ್ ವಿಷ್ಯಾ ಎಲ್ಲಾ ಹೇಳಿದ್ದೀನಿ. ಆ ಸ್ವೀಟ್ ವಾಯ್ಸ್ ಇರೋ ಹುಡ್ಗಿ ಯಾರು ಅಂತ ಅವ್ಳ್‍ಗೂ ಗೊತ್ತಾಗಿಲ್ಲ. ಗೊತ್ತಾದ್ರೆ ಹೇಳ್ತೀನಿ ಅಂದ್ಳು.’

ಅನಿಕೇತನ ಮುಖದಲ್ಲಿ ಮತ್ತೆ ನಿರಾಸೆ ತುಂಬಿಕೊಂಡಿತು. ‘ಅವಳ ಜೊತೆಗಿದ್ದವಳ ನಂಬರ್ ಸಿಕ್ಕಿದರೇನು, ಬಿಟ್ಟರೇನು?’ ಗೊಣಗಿಕೊಂಡವನು  ಕಾನ್ಫರೆನ್ಸ್ ಹಾಲ್‍ನಿಂದ ಹೊರಬಂದು ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಹುಡುಗಿಯರನ್ನೆಲ್ಲ ಎವೆಯಿಕ್ಕದೆ ನೋಡಿದ. ‘ಮುಖ ನೋಡಿದ ತಕ್ಷಣ ಅವರ ಧ್ವನಿ ಹೇಗಿದೆಯೆಂದು ಗೊತ್ತಾಗುವಂತಿದ್ದರೆ!’ ಯೋಚಿಸುತ್ತಲೇ ಸುಷ್ಮಾಳ ಮಾತಿಗೆ ಅರ್ಧಂಬರ್ಧ ದನಿಗೂಡಿಸುತ್ತಾ ಬಸ್‍ಸ್ಟಾಪಿನಲ್ಲಿ ನಿಂತುಕೊಂಡ.

ಜನರಿಂದ ಗಿಜಿಗುಡುತ್ತಿದ್ದ ಬಸ್ಸೊಂದು ಹೊರಟುನಿಂತಿತ್ತು. ಉದಾಸೀನದ ಮುಖಹೊತ್ತು ನಿಂತಿದ್ದ ಅನಿಕೇತನಿಗೆ ಬಸ್ಸಿನ ಕಿಟಕಿಯಿಂದ ಹೊರಬಂದ ಕೈಯ್ಯೊಂದು ತನ್ನತ್ತಲೇ ಬೀಸಿದಂತೆ ಕಂಡುಬಂತು. ನೋಡಿದ ತಕ್ಷಣ ಹೇಳಬಹುದು, ಹುಡುಗಿಯ ಕೈ. ಮುಖ ಕಾಣಿಸುತ್ತಿಲ್ಲ. ಯಾರತ್ತ ಕೈ ಬೀಸುತ್ತಿದ್ದಾಳೆ. ಸುತ್ತಮುತ್ತ ನೋಡಿದ. ಪ್ರತಿಕ್ರಿಯಿಸುವವರು ಯಾರೂ ಇಲ್ಲ. ಹೌದು! ತನ್ನತ್ತಲೇ ಕೈ ಬೀಸುತ್ತಿದ್ದಾಳೆ.  ಮತ್ತೂ ಸೂಕ್ಷ್ಮವಾಗಿ ನೋಡಿದ. ಕೈಯ್ಯಲ್ಲೊಂದು ಸಣ್ಣ ಕಾಗದ. ಬೆರಳುಗಳ ಸೆರೆಯಿಂದ ಹೊರಬಂದ ಕಾಗದ ಬಸ್ಸು ಹೊರಟಷ್ಟೇ ವೇಗವಾಗಿ ಹಿಮ್ಮುಖವಾಗಿ ಇವನತ್ತ ತೂರಿಬಂತು. ಏನೋ ಆಶಾವಾದ ಅವನೊಳಗೆ. ಉತ್ಸಾಹದಿಂದ ಓಡಿಹೋಗಿ ಆ ಕಾಗದವನ್ನು ಎತ್ತಿಕೊಂಡ. ನೋಡಿದ. ‘94494...’ ಇದ್ದುದು ಇಷ್ಟೇ ಅದರಲ್ಲಿ. ಅವಳೇ ಇವಳು! ಗ್ರಹಿಸಿಕೊಂಡ ಅನಿಕೇತ ಬಸ್ಸಿನ ಹಿಂದೆ ಓಡಿದ. ವೇಗವಾಗಿ ಸಾಗುತ್ತಿದ್ದ ಬಸ್ಸು ಇವನನ್ನು ವಂಚಿಸಿತ್ತು. ಅದರ ವೇಗದ ಎದುರು ಸೋತು ನಿಂತವನ ಕೈಯ್ಯಲ್ಲಿ ಭದ್ರವಾಗಿದ್ದದ್ದು ಅವಳೆಸೆದ ಕಾಗದ! ಕಾಗದವನ್ನು ತನ್ನತ್ತ ಎಸೆದಿದ್ದಾಳೆ ಎಂದಮೇಲೆ ಅವಳಿಗೂ ತನ್ನ ಮೇಲೆ ಪ್ರೀತಿ ಇದೆ ಎಂದಾಯಿತಲ್ಲ. ಕಾಗದವನ್ನು ಮತ್ತೊಮ್ಮೆ ನೋಡಿದ. ‘94494...’ ಪ್ರೇಮದ ಫಾರ್ಮುಲಾದಂತೆ ಕಂಡಿತು ಅವನಿಗೆ. ಉಳಿದರ್ಧವನ್ನು ಬಿಡಿಸಬೇಕಾಗಿದೆ. ಪರಮ ರಹಸ್ಯದ ಪ್ರೇಮಮಂತ್ರವೊಂದನ್ನು ತನ್ನ ಕೈಯ್ಯಲ್ಲಿರಿಸಿ ಅವಳು ಹೊರಟುಹೋಗಿದ್ದಾಳೆ. ಧ್ವನಿಯಿಂದಲೇ ಮನಸ್ಸನ್ನು ಸೂರೆಗೊಂಡ ಅನಾಮಿಕಳಿಗೆ ಅನಿಕೇತ ಇಟ್ಟ ಹೆಸರು- ‘ಧ್ವನಿಸುಂದರಿ’

*********

ಅಂದಿನಿಂದಲೇ ಪ್ರಯತ್ನ ಶುರುವಿಟ್ಟುಕೊಂಡವನು ಈಗ್ಗೆ ಆರು ತಿಂಗಳಿನಿಂದ ಉಳಿದ ಐದು ನಂಬರ್‌ಗಳನ್ನು ತಾನೇ ಅಂದಾಜಿಸಿಕೊಂಡು ಕರೆ ಮಾಡುತ್ತಲೇ ಬಂದಿದ್ದಾನೆ. ಫಲಿತಾಂಶ ಮಾತ್ರ ಶೂನ್ಯ. ಪಡೆದ ಬೈಗುಳದ ಮಾತುಗಳಿಗೆ ಲೆಕ್ಕವಿಲ್ಲ. ಆದರೂ ಆತ ತನ್ನ ಪ್ರಯತ್ನ ಬಿಟ್ಟಿಲ್ಲ. ಒಂದಲ್ಲ ಒಂದು ದಿನ ಅವಳನ್ನು ಪಡೆದೇ ಪಡೆಯುತ್ತೇನೆಂಬ ಆಶಾವಾದ ಅವನಲ್ಲಿದೆ.    

ನಿರಾಸೆ ಕವಿದಿದ್ದ ಈ ಸಮಯದಲ್ಲಿ ಅನಿಕೇತನಿಗೆ ಅಭಿಲಾಷಿಣಿಯ ನೆನಪಾಯಿತು. ಮೂರು ತಿಂಗಳುಗಳ ಹಿಂದೆ ಕಂಪನಿ ಸೇರಿಕೊಂಡ ಹುಡುಗಿ. ಸುಷ್ಮಾ ಹೈದಾರಾಬಾದ್‍ಗೆ ವರ್ಗಾವಣೆಯಾದ ಮೇಲೆ ಅನಿಕೇತನಿಗೆ ಒಂಟಿತನ ಕಾಡಿದಂತಾಗಿತ್ತು. ಪ್ರೇಮದ ಅನುಭವಗಳಿಗೆ ಕಿವಿಯಾಗುವವರು ಯಾರೂ ಇಲ್ಲದಂತಾಗಿತ್ತು. ಮರುಭೂಮಿಯಲ್ಲಿನ ಓಯಸಿಸ್‍ನಂತೆ, ಈ ಸಮಯದಲ್ಲಿ ಆತನಿಗೆ ಜೊತೆಯಾದವಳು ಅಭಿಲಾಷಿಣಿ. ಮಾತನಾಡುವುದರಲ್ಲಿ ಅನಿಕೇತನಿಗೆ ಸ್ಪರ್ಧೆ ಕೊಡಬಲ್ಲಷ್ಟು ವಾಚಾಳಿ. ಅನಿಕೇತನಿಗೆ ಆಕೆಯನ್ನು ಕಂಪನಿಯಲ್ಲಿ ಭೇಟಿಯಾದ ಮೊದಲ ದಿನದ ನೆನಪಾಯಿತು.

‘ಹಲೋ, ಆರ್ ಯೂ ಮಿಸ್ಟರ್ ಅನಿಕೇತ್?’, ಯಾವುದೋ ಕೆಲಸದಲ್ಲಿ ತಲೆಕೆಡಿಸಿಕೊಂಡು ಕುಳಿತಿದ್ದ ಅನಿಕೇತನ ಕಿವಿಗಳು ತಟ್ಟನೆ ಚುರುಕಾಗಿದ್ದವು. ಹೌದು! ಅದೇ ಧ್ವನಿ! ತಾನು ಇಷ್ಟಪಟ್ಟ ಧ್ವನಿ. ಹಾಗಾದರೆ ಇವಳು ತನ್ನ ‘ಧ್ವನಿಸುಂದರಿ’ಯೇ ಇರಬೇಕು. ಮನದ ತುಂಬ ಆಸೆ ಹೊತ್ತು ಎದುರು ನಿಂತಿದ್ದ ಹುಡುಗಿಯಲ್ಲಿ ನಗುನಗುತ್ತಾ ನುಡಿದ- ‘ವಾಟ್? ಪ್ಲೀಸ್ ರಿಪೀಟ್.’ ಸಿಹಿಧ್ವನಿಯನ್ನು ನಿರೀಕ್ಷಿಸಿದವನಿಗೆ ಕೇಳಿಸಿದ್ದು ಕಠೋರವಾದ ಧ್ವನಿ. ಅರೇ! ಮೊದಲು ತಾನು ಕೇಳಿದ ಧ್ವನಿಯ ಹಾಗಿಲ್ಲವಲ್ಲ ಇದು. ಇಲ್ಲ, ತಾನೇ ಭ್ರಮೆಗೆ ಒಳಗಾಗಿರಬೇಕು. ಪ್ರೀತಿಯ ಗುಂಗಿನಲ್ಲಿಯೇ ಇರುವ ತನಗೆ ಇವಳ ಗಡಸು ಧ್ವನಿಯೂ ಮೃದುವಾಗಿಯೇ ಕೇಳಿಸಿದೆ, ಅಷ್ಟೆ. ಆಮೇಲಿನ ಅವಳ ಮಾತುಗಳನ್ನು ಕೇಳಿಸಿಕೊಂಡವನಿಗೆ ಅವಳ ಧ್ವನಿ ಇಷ್ಟವಾಗದಿದ್ದರೂ ಅವಳ ರೂಪ, ಮಾತಿನಲ್ಲಿದ್ದ ಸಭ್ಯತೆ ಇಷ್ಟವಾಗಿತ್ತು. ತನ್ನವಳೂ ಹೀಗೇ ಇರಬಹುದು ಎಂದು ಕಲ್ಪಿಸಿಕೊಂಡವನ ಮನಸ್ಸಿನ ತುಂಬೆಲ್ಲ ಪುಳಕ.

ಇಂಥ ಅಭಿಲಾಷಿಣಿ ತನ್ನದೇ ಊರಿನವಳು ಎಂದು ಅನಿಕೇತನಿಗೆ ಗೊತ್ತಾಗಬೇಕಾದರೆ ಅವಳ ಪರಿಚಯವಾಗಿ ಎರಡು ವಾರ ಕಳೆದಿತ್ತು. ಆಗ ಅನಿಕೇತನಿಗೆ ಎಂಟೋ ಹತ್ತೋ ವರ್ಷ. ಅವರ ಕುಟುಂಬ ಇನ್ನೂ ಬೆಂಗಳೂರಿಗೆ ಬಂದಿರಲಿಲ್ಲ. ರಾಯಚೂರಿನ ಒಂದು ಪುಟ್ಟ ಊರಿನಲ್ಲಿ ನೆಲೆಗೊಂಡಿತ್ತು. ಮಧ್ಯಮವರ್ಗದ ಕುಟುಂಬ. ಇವರ ಮನೆಗೆ ತಾಗಿಕೊಂಡಂತೆ ಇದ್ದ ಕುಟುಂಬವೇ ಅಭಿಲಾಷಿಣಿಯದ್ದು. ಅವರದ್ದೂ ಮಧ್ಯಮವರ್ಗದ ಕುಟುಂಬವೇ. ಎರಡೂ ಕುಟುಂಬಗಳ ಮಧ್ಯೆ ಅವಿನಾಭಾವ ಸಂಬಂಧವಿತ್ತು.

ಚೆನ್ನಾಗಿಯೇ ಸಾಗುತ್ತಿದ್ದ ಸಂಸಾರಕ್ಕೆ ಏನಾಯಿತೋ ಏನೋ, ಅದೊಂದು ರಾತ್ರೆ ಹೆಂಡತಿ, ಮಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಮಾಡಿದ್ದ ಸಾಲವನ್ನೇ ನೆಪವಾಗಿಟ್ಟುಕೊಂಡು ಅವಳ ತಂದೆ ಊರು ಬಿಟ್ಟಿದ್ದರು. ಅದಾದ ಮೇಲೆ ಸಾಲದಾತರು ಅವರ ಮನೆಯನ್ನು ಜಪ್ತಿ ಮಾಡಿದ್ದರು. ದಿಕ್ಕುದೆಸೆ ಕಳೆದುಕೊಂಡ ತಾಯಿ ಮಗಳು ಊರು ಬಿಡುವಂತಾಗಿತ್ತು. ಅನುಕಂಪದಿಂದ ಅನಿಕೇತನ ತಂದೆ ಅವರು ಹೊರಡುವಾಗ ಒಂದಿಷ್ಟು ಹಣವನ್ನು ನೀಡಲು ಮುಂದಾಗಿದ್ದರು. ಮಹಾ ಸ್ವಾಭಿಮಾನಿಯಾದ ಆ ಹೆಣ್ಣುಮಗಳು ಆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿ ಏಳು ವರ್ಷದ ಮಗಳ ಕೈ ಹಿಡಿದುಕೊಂಡು ಹೊರಟೇಬಿಟ್ಟಿದ್ದಳು. ಅಂದು ಕೈಬೀಸುತ್ತಾ ಹೊರಟುಹೋದ ಹುಡುಗಿ ಇಂದು ತನ್ನೆದುರೇ ಕುಳಿತಿದ್ದಾಳೆ. ಅಭಿಲಾಷಿಣಿಯನ್ನೇ ನೋಡುತ್ತಾ ಅಂದುಕೊಂಡ ‘ಎಂತಹ ಗಟ್ಟಿಗಿತ್ತಿ ಇವಳಮ್ಮ!’

***********

ತನ್ನ ‘ಧ್ವನಿ ಚೆಲುವೆ’, ಅಭಿಲಾಷಿಣಿಯ ನೆನಪಲ್ಲೇ ಕಳೆದುಹೋಗಿದ್ದ ಅನಿಕೇತ ಗಡಿಯಾರ ನೋಡಿದ. ಏಳೂವರೆ ಗಂಟೆ. ಆಫೀಸಿಗೆ ಹೊರಡುವ ಸಮಯ ಕಳೆಯಿತು ಎಂದುಕೊಂಡು ಗಡಿಬಿಡಿಯಲ್ಲಿ ಹೊರಟವನ ಮೆದುಳು ಮತ್ತೆ ಕೆಲಸ ಶುರುಮಾಡಿದ್ದು ಟ್ರಾಫಿಕ್ ಸಿಗ್ನಲ್‍ನಲ್ಲಿ ಕಾರು ನಿಂತಾಗಲೇ. ಅಭಿಲಾಷಿಣಿಯೊಂದಿಗೆ ಏನೆಲ್ಲಾ ಮಾತನಾಡಿದ್ದೇನೆ, ತಮಾಷೆ ಮಾಡಿದ್ದೇನೆ. ಆದರೆ ‘ಧ್ವನಿ ಚೆಲುವೆ’ಯ ಬಗ್ಗೆ ಹೇಳಿಯೇ ಇಲ್ಲವಲ್ಲ. ಇವತ್ತು ಮಧ್ಯಾಹ್ನ ಹೇಳಬೇಕು ಎಂದುಕೊಂಡವನು ಉಲ್ಲಾಸದಿಂದ ಎಕ್ಸಿಲೇಟರ್ ತುಳಿದ.

ರಾತ್ರೆ ಎಂಟು ಗಂಟೆಗೆ ಮನೆ ಹೊಕ್ಕ ಅನಿಕೇತನಿಗೆ ತಾಯಿ ಮುದ್ದುಮಾಡಿ ಕೊಟ್ಟ ತಿಂಡಿ ಬೇಡವಾಗಿತ್ತು. ‘ನಿನಗೆ ಅವಳು ಸಿಗುವುದಿಲ್ಲ ಬಿಡೋ’ ಬಿದ್ದುಬಿದ್ದು ನಗುತ್ತಾ ಅಭಿಲಾಷಿಣಿ ಹೇಳಿದ ಮಾತು ಆತನ ತಲೆ ತಿನ್ನತೊಡಗಿತ್ತು. ‘ಧ್ವನಿ ಕೇಳಿ ಲವ್ವಾಯ್ತಂತೆ. ಇದನ್ನೆಲ್ಲ ಲವ್ ಅಂತ ಹೇಳೋದಿಕ್ಕಾಗುತ್ತಾ?’ ಮತ್ತೆ ನಗುತ್ತಾ ಅವಳಾಡಿದ ಮಾತು ಪ್ರೇಮ ಪರೀಕ್ಷೆಯಲ್ಲಿ ತನ್ನೆದುರಿಗಿಟ್ಟ ಪ್ರಶ್ನೆಪತ್ರಿಕೆಯಂತೆ ಅನ್ನಿಸಿ, ಉತ್ತರಿಸಲಾಗದಿರಲಿಲ್ಲ ಅನಿಕೇತನಿಗೆ. ‘ಹಲೋ ಮೇಡಂ, ಹುಡ್ಗಿ ನೋಡೋದಿಕ್ಕೆ ಚೆನ್ನಾಗಿದ್ದಾಳಾ, ಅವ್ಳಪ್ಪ ಎಷ್ಟು ಹಣ ಮಾಡಿಟ್ಟಿದ್ದಾನೆ ಇದೆಲ್ಲಾ ನೋಡ್ಕೊಂಡು ಆಗೋದು ಲವ್ವಲ್ಲ. ಇದ್ಯಾವ್ದೂ ಲೆಕ್ಕಕ್ಕೇ ತೆಗೊಳ್ದೇ ಬರೀ ಅವ್ಳ್ ಧ್ವನಿ ಕೇಳಿ ಇಷ್ಟಪಟ್ಟಿದ್ದೀನಲ್ಲ ನನ್ದೇ ನಿಜ್ವಾದ ಲವ್ವು.’ ಅನಿಕೇತನ ಉತ್ತರದುದ್ದಕ್ಕೂ ಕಣ್ಣೆವೆಯಿಕ್ಕದೆ ಅವನನ್ನೇ ದಿಟ್ಟಿಸುತ್ತಿದ್ದಳು ಅಭಿಲಾಷಿಣಿ. ‘ಹಾಗಿದ್ರೆ ನನ್ ವಾಯ್ಸ್ ಅವ್ಳ್ ವಾಯ್ಸ್ ತರಾನೇ ಇದ್ದಿದ್ರೆ ನನ್ನನ್ನೂ ಲವ್ ಮಾಡ್ತಿದ್ಯಾ?’ ಅವಳ ಪ್ರಶ್ನೆಗೆ ತಕ್ಷಣಕ್ಕೆ ಉತ್ತರಿಸಲಾಗಲಿಲ್ಲ. ಅವಳ ನೋಟವನ್ನು ಎದುರಿಸಲಾರದೆ ಎದ್ದುಬಂದಿದ್ದ.

ಈಗ ಮತ್ತೊಮ್ಮೆ ಅನಿಕೇತ ಅವಳ ಪ್ರಶ್ನೆಯನ್ನು ಮೆಲುಕು ಹಾಕಿದ. ‘ನನ್ನನ್ನೂ ಲವ್ ಮಾಡ್ತಿದ್ಯಾ?’ ಎಂದು ಅವಳು ಕೇಳಿದ್ದು ಯಾಕೆ? ಅವಳಲ್ಲಿ ತನ್ನ ಕುರಿತಾಗಿ ಪ್ರೀತಿ ಇರಬಹುದಾ? ಅದನ್ನೇ ಇನ್‍ಡೈರೆಕ್ಟ್ ಆಗಿ ಹೇಳಿರಬಾರದೇಕೆ? ‘ಅಭಿಲಾಷಿಣಿಯ ವಾಯ್ಸ್ ತನ್ನ ಧ್ವನಿ ಸುಂದರಿಯ ವಾಯ್ಸ್‌ನಂತೆಯೇ ಇದ್ದಿದ್ದರೆ ತಾನು ಅವಳನ್ನು ಲವ್ ಮಾಡುತ್ತಿದ್ದೆನೇ?’ ಅನಿಕೇತ ತನ್ನಲ್ಲಿಯೇ ಪ್ರಶ್ನಿಸಿಕೊಂಡ. ತನ್ನ ಪ್ರಶ್ನೆಗೆ ತಾನೇ ಉತ್ತರ ಕಂಡುಕೊಳ್ಳಬೇಕೆನ್ನುವಷ್ಟರಲ್ಲಿ ಮೊಬೈಲ್ ರಿಂಗಣಿಸಿತು. ಸುಷ್ಮಾಳ ನಂಬರ್.

‘ಏನ್ ಮೇಡಂ. ಹೈದ್ರಾಬಾದ್‍ಗೆ ಹೋದ್ಮೇಲೆ ನನ್ನನ್ನ ಮರ್ತೇಬಿಟ್ಟೋರ್ ಇವತ್ತು ಮತ್ತೆ ಕಾಲ್ ಮಾಡಿದ್ದೀರಾ? ಏನ್ ಸಮಾಚಾರ?’ ಬಹುವಚನದಲ್ಲಿ ಛೇಡಿಸಿದ ಅನಿಕೇತ.

ಅನಿಕೇತನ ತಮಾಷೆಗೆ ಪ್ರತಿಕ್ರಿಯಿಸುವ ಮನಃಸ್ಥಿತಿಯಲ್ಲಿ ಅವಳಿರಲಿಲ್ಲ. ‘ಲೋ, ಅನಿಕೇತ, ಕೆಲ್ಸದ್ ಟೆನ್ಶನ್‍ನಲ್ಲಿದ್ದೀನಿ. ನಾನ್ ಹೇಳೋದನ್ನ ಸರಿಯಾಗ್ ಕೇಳುಸ್ಕೋ. ಮತ್ತೆ ಮತ್ತೆ ಹೇಳೋಷ್ಟು ಟೈಮ್ ನನ್ಗಿಲ್ಲ. ಸುಮಾ ಅಂತ ಹೇಳಿದ್ನಲ್ಲ ಅವತ್ತು, ಅವ್ರು ಕಂಪನೀಲಿ ಒಂದು ಕಾನ್ಫರೆನ್ಸ್ ಇಟ್ಕೊಂಡಿದ್ದಾರಂತೆ ಮುಂದಿನ್ ಫ್ರೈಡೇ. ನಿನ್ ಲವ್ವರ್ರೂ ಬರ್ಬೋದೇನೋ, ರೆಪ್ರೆಸೆಂಟೇಟಿವ್ ಆಗಿ. ನಿಮ್ ಕಂಪನಿಯಿಂದ ನೀನೇ ಹೋಗು. ಅವ್ಳ್ಯಾರು ಅಂತ ತಿಳ್ಕೊಳ್ಳೋದಿಕ್ಕೆ ಒಂದು ಛಾನ್ಸ್ ಸಿಕ್ಕಂಗಾಗುತ್ತೆ ಅಲ್ವಾ’ ಒಂದೇ ಉಸಿರಿಗೆ ಹೇಳಿ ಮುಗಿಸಿ, ಗುಡ್‍ನೈಟ್ ಹೇಳಿ ಫೋನಿಟ್ಟಿದ್ದಳು.

‘ನಾನೆಂತಹ ದಡ್ಡ’ ಎಂದು ಅಂದುಕೊಂಡ ಅನಿಕೇತ. ಕಾನ್ಫರೆನ್ಸ್ ಇರುವ ವಿಷಯ ಅವತ್ತು ಬೆಳಗ್ಗೆಯೇ ಅನಿಕೇತನಿಗೆ ತಿಳಿದಿತ್ತು. ಆದರೆ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಬೇಕು, ತನ್ನ ಧ್ವನಿ ಚೆಲುವೆಯನ್ನು ಭೇಟಿ ಮಾಡಬೇಕು ಎಂಬ ಯೋಚನೆಯೇ ಬಂದಿರಲಿಲ್ಲ. ಕಾನ್ಫರೆನ್ಸ್‌ಗೆ ಹೋಗುವಾಗ ತನ್ನೊಂದಿಗೆ ಅಭಿಲಾಷಿಣಿಯೂ ಇದ್ದರೆ ಒಳ್ಳೆಯದು ಎಂದು ನಿರ್ಧರಿಸಿದ ಆತ ಮರುದಿನವೇ ಬಾಸ್ ಜೊತೆಗೆ ಮಾತನಾಡಬೇಕೆಂದುಕೊಂಡ. ಆ ರಾತ್ರೆ ಆತನ ಕನಸಿನ ತುಂಬೆಲ್ಲಾ ಧ್ವನಿ ಚೆಲುವೆಯ ಕಲ್ಪನಾ ಚಿತ್ತಾರ...

‘ಇಲ್ಲ, ನಾನ್ ತುಮ್ಕೂರಿಗ್ ಬರಕ್ಕಾಗಲ್ಲ. ಈ ಕಾನ್ಫರೆನ್ಸ್ ಇದೆಲ್ಲಾ ನನ್ಗಿಷ್ಟ ಇಲ್ಲ.’ ಅಭಿಲಾಷಿಣಿಯ ಮಾತು ಅನಿಕೇತನನ್ನು ನಿರಾಸೆಗೊಳಿಸಿತ್ತು. ಅಲ್ಲ, ತನ್ನ ಪ್ರೀತಿಗೆ ಹೆಲ್ಪ್ ಮಾಡು ಎಂದಮೇಲೂ ಬರಲು ಒಪ್ಪುತ್ತಿಲ್ಲವಲ್ಲ. ಹೆಣ್ಣುಮಕ್ಕಳ ಬುದ್ಧಿ ಎಲ್ಲಿ ಹೋಗುತ್ತದೆ! ಹೊಟ್ಟೆಕಿಚ್ಚು ಅಷ್ಟೆ ಎಂದು ಅಂದುಕೊಂಡವನಿಗೆ ಮತ್ತೆ ಅವಳೊಂದಿಗೆ ಮಾತು ಬೆಳೆಸಬೇಕೆಂದು ಅನ್ನಿಸಲೇ ಇಲ್ಲ. ಇವಳು ಬರದಿದ್ದರೇನಂತೆ. ನಾನೇ ಹೋಗಿ ಆ ಧ್ವನಿ ಸುಂದರಿಯನ್ನು ಪತ್ತೆಹಚ್ಚುತ್ತೇನೆ. ನಮ್ಮಿಬ್ಬರ ಪ್ರೀತಿ ನೋಡಿ ಇವಳು ಮತ್ತಷ್ಟು ಹೊಟ್ಟೆ ಉರಿದುಕೊಳ್ಳಲಿ ಎಂದುಕೊಂಡವನಿಗೆ ತುಸು ನಿರಾಳತೆ ದೊರೆತಂತಾಯಿತು.

ತುಮಕೂರಿನ ಕಾನ್ಫರೆನ್ಸ್ ಮುಗಿಸಿ ಕಂಪನಿಗೆ ಬಂದವನಿಗೆ ಮೊದಲು ಎದುರಾದದ್ದು ಅಭಿಲಾಷಿಣಿಯೇ. ‘ಸಿಕ್ಕ್‌ದ್ಲಾ ನಿನ್ ಹುಡ್ಗಿ?’ ಅವಳ ಪ್ರಶ್ನೆ ಮೊದಲೇ ಮೂಡ್ ಆಫ್ ಆಗಿದ್ದ ಅನಿಕೇತನನ್ನು ಕೆರಳಿಸಿತು. ಆತ ತುಮಕೂರಿಗೆ ಹೋದದ್ದರಿಂದ ಏನೆಂದರೆ ಏನೂ ಲಾಭವಾಗಿರಲಿಲ್ಲ. ಅದನ್ನೆಲ್ಲಾ ಅಭಿಲಾಷಿಣಿಗೆ ವಿವರಿಸಲು ಆತನಿಗೆ ಇಷ್ಟವಿರಲಿಲ್ಲ. ‘ಸಿಕ್ಕ್‌ದ್ರೇನು, ಬಿಟ್ರೇನು, ನೀನೇನು ನನ್ಜೊತೆ ಬಂದಿರ್ಲಿಲ್ವಲ್ಲ’ ದುರುಗುಟ್ಟುತ್ತಾ ನುಡಿದವನನ್ನು ನೋಡಿ ಆಕೆಗೆ ನಗು ಬಂದಿತ್ತು. ಆಕೆಯ ನಗುವಿನಿಂದ ಮತ್ತಷ್ಟು ಕೋಪಗೊಂಡ ಅನಿಕೇತ ದುರದುರನೆ ನಡೆದುಕೊಂಡು ಹೋಗಿ ತನ್ನ ಛೇಂಬರ್‍ನಲ್ಲಿ ಕುಳಿತ. ‘ಅಬ್ಬ! ಎಂತಹ ಹೊಟ್ಟೆಕಿಚ್ಚಿನವಳು. ನನ್ನ ಮುಖ ನೋಡಿಯೇ ಗೊತ್ತಾಗಿದೆ, ಹೋದ ಕೆಲಸ ಆಗಿಲ್ಲ ಎಂದು. ಆದರೂ ಮತ್ತೆ ಕೇಳಿ ಖುಷಿಪಡುವ ಆಸೆ. ಇವಳು ನನ್ನ ಬಾಲ್ಯದ ಗೆಳತಿ ಅಂತೆ. ಅಲ್ಲ, ನನ್ನ ಪೂರ್ವಜನ್ಮದ ವೈರಿ. ಇನ್ನು ಅವಳೊಂದಿಗೆ ಮಾತನಾಡಿದರೆ ತಾನೆ’ ದೃಢವಾಗಿ ನಿಶ್ಚಯಿಸಿಕೊಂಡವನು ಮಧ್ಯಾಹ್ನ ಊಟದ ವಿರಾಮದಲ್ಲಿ ಮಾತನಾಡುವುದಕ್ಕೆ ಬಂದವಳನ್ನು ಬೇಕೆಂದೇ ತಿರಸ್ಕರಿಸಿದ. ವಾರಗಳು ಉರುಳಿದವು ಎದುರು ಬದುರಾದಾಗ ಅಭಿಲಾಷಿಣಿ ಮುಗುಳ್ನಕ್ಕರೂ ಅನಿಕೇತ ನಗುತ್ತಿರಲಿಲ್ಲ. ‘ಧ್ವನಿಸುಂದರಿ’ ಸಿಗದಿರುವ ನೋವು, ನಿರಾಸೆ ಅನಿಕೇತನನ್ನು ಅವಳಲ್ಲಿ ಮಾತನಾಡದಂತೆ ತಡೆಯುತ್ತಿತ್ತು. ಅವಳಲ್ಲಿ ಮಾತ್ರವಲ್ಲ, ಮನೆಯವರ ಜೊತೆಗೂ ಆತ ಮಾತನಾಡುವುದನ್ನು ಕಡಿಮೆ ಮಾಡಿದ್ದ.

*********

ಮೂರು ತಿಂಗಳು ಕಳೆದಿತ್ತು. ಅಂದು ಛೇಂಬರಿನಲ್ಲಿ ಬಂದು ಕುಳಿತವನ ಹತ್ತಿರ ಬಂದು ನಿಂತವಳು ಅಭಿಲಾಷಿಣಿ. ‘ನಿನ್ ಜೊತೆ ಮಾತ್ನಾಡೋದಕ್ಕಿದೆ’ ಮಾತು ಕೇಳಿದರೂ ಕೇಳಿಸದವನಂತೆ ಕುಳಿತಿದ್ದ ಅನಿಕೇತ. ‘ನನ್ಗೆ ನನ್ ಊರ್ಗೇ ಟ್ರಾನ್ಸ್‌ಫರ್ ಆಗಿದೆ. ನಾಳೆ ಈ ಕಂಪನಿ ಬಿಟ್ ಹೋಗ್ತಾ ಇದ್ದೀನಿ. ನಾಳೆಯಿಂದ ನಾನ್ ನಿನ್ ಜೊತೆ ಇರಲ್ಲ. ನನ್ನಿಂದ ನಿನ್ಗೇನಾದ್ರೂ ಬೇಜಾರಾಗಿದ್ರೆ ಸಾರಿ’ ಹೃದಯ ಚುಚ್ಚಿದಂತಾಯಿತು ಅನಿಕೇತನಿಗೆ. ಮಾತನಾಡಲಾಗದೇ ಇರಲಾಗಲಿಲ್ಲ. ಮಾತು, ತಮಾಷೆ, ತರಲೆ ಎಲ್ಲವೂ ಮತ್ತೆ ಜೀವ ಪಡೆದಿದ್ದವು.

ಸಂಜೆ ನಗುಮುಖ ಹೊತ್ತು ಮನೆಗೆ ಬಂದ ಮಗನನ್ನು ಕಂಡು ಅನಿಕೇತನ ತಾಯಿಗೆ ಸಂತಸ. ರಾತ್ರೆ ಅಭಿಲಾಷಿಣಿಯ ಒಡನಾಟದ ನೆನಪಿನಲ್ಲಿ ಕಳೆದುಹೋಗಿದ್ದವನನ್ನು ಎಚ್ಚರಿಸಿದ್ದು ಸುಷ್ಮಾಳ ಕರೆ. ‘ಹೇ ಅನಿಕೇತ, ನಾಳೆ ರಾತ್ರೆ ಒಳ್ಗೆ ನಿನ್ ಹುಡ್ಗಿ ನಂಬರ್ ಸಿಗೋದು ಕನ್ಫರ್ಮ್. ನಾನು ಕಾಲ್ ಮಾಡ್ದಾಗ ಸುಮಾ ಹೇಳುದ್ಲು. ಅವ್ಳ್ ಫ್ರೆಂಡ್ ಹೇಳಿದ್ದಾಳಂತೆ. ಅವ್ಳ್ ನಂಬರ್ ಸಿಕ್ಕೇ ಸಿಗುತ್ತೆ’ ಖುಶಿಯಿಂದ ಕುಣಿದಾಡಬೇಕೆನಿಸಿತು ಅನಿಕೇತನಿಗೆ.

ಮರುದಿನ ಕಂಪನಿಯ ಕೆಲವರು ಅಭಿಲಾಷಿಣಿಗೆ ಬೀಳ್ಕೊಡುಗೆ ಸಮಾರಂಭವೊಂದನ್ನು ಚಿಕ್ಕದಾಗಿ ಹಮ್ಮಿಕೊಂಡಿದ್ದರು. ಅವಳ ಕುರಿತು ಮಾತನಾಡಬೇಕೆಂದು ಅನಿಕೇತನನ್ನು ಕರೆದಾಗ ಸಹಜವಾಗಿಯೇ ಮಾತನಾಡುವುದಕ್ಕೆ ನಿಂತವನು ಮಾತನಾಡುತ್ತಾ ಆಡುತ್ತಾ ತನಗೇ ಗೊತ್ತಿಲ್ಲದಂತೆ ಭಾವೋದ್ವೇಗಕ್ಕೆ ಒಳಗಾದ. ಮಾತು ಮುಂದುವರಿಸಲು ಸಾಧ್ಯವಾಗದಂತಹ ಭಾವಪರವಶತೆಗೆ ಒಳಗಾದ. ಕಣ್ಣೀರು ಹರಿದದ್ದನ್ನು ಯಾರೂ ಗಮನಿಸದಂತೆ ಮಾತು ಮುಗಿಸಿ ಬಂದು ಕುಳಿತುಕೊಂಡವನ ಹೃದಯದ ತುಂಬೆಲ್ಲಾ ಕೋಲಾಹಲ ಎದ್ದಂತಾಗಿತ್ತು. ಅಭಿಲಾಷಿಣಿ ತನ್ನಿಂದ ದೂರವಾಗುತ್ತಿದ್ದಾಳೆ ಎಂದು ಅನಿಸತೊಡಗಿತು ಆತನಿಗೆ.

‘ನನ್ನನ್ನ ಊರ್ಗೆ ಕಳಿಸ್ಕೊಡೋದಕ್ಕೆ ನೀನ್ ಸಂಜೆ ಬಸ್‍ಸ್ಟಾಪ್‍ಗೆ ಬರ್ಲೇಬೇಕು. ಇದು ನನ್ ರಿಕ್ವೆಸ್ಟ್ ಅಲ್ಲ, ಆರ್ಡರ್’ ಮಧ್ಯಾಹ್ನ ಊಟ ಮಾಡುತ್ತಿರುವಾಗ ನಗು ತುಂಬಿಕೊಂಡು ಅಭಿಲಾಷಿಣಿ ನುಡಿದ ಮಾತು ಕೇಳಿ ‘ಅವಳ ನೋಟವನ್ನು ಅಲ್ಲಿ ಹೇಗೆ ಎದುರಿಸಲಿ?’ ಎಂಬ ಭಯ ಅನಿಕೇತನನ್ನು ಕಾಡಿತು.

ಸಂಜೆ ಅಭಿಲಾಷಿಣಿಯನ್ನು ಬಸ್‍ಸ್ಟಾಪಿಗೆ ಹೋಗಿ ಬೀಳ್ಕೊಟ್ಟು ಬಂದ ಅನಿಕೇತನಿಗೆ ಜಗತ್ತೇ ಖಾಲಿ ಖಾಲಿಯಾದಂತೆ ಅನಿಸಿತು. ಅಭಿಲಾಷಿಣಿ ಬಸ್ಸು ಹತ್ತಿ ಹೊರಟಾಗ ಅವಳು ದೂರಾಗುತ್ತಿರುವುದನ್ನು ಒಪ್ಪಿಕೊಳ್ಳದಂತಾಗಿತ್ತು. ‘ಯಾಕೆ ತನಗೆ ಹೀಗಾಗುತ್ತಿದೆ?’ ಪ್ರಶ್ನಿಸಿಕೊಂಡ ಅನಿಕೇತ.

ಅಷ್ಟರಲ್ಲಿ ಸುಷ್ಮಾಳ ಕರೆ. ಯಾಕೋ ಕರೆಯನ್ನು ಸ್ವೀಕರಿಸುವ ಮನಸ್ಸಾಗಲಿಲ್ಲ ಅನಿಕೇತನಿಗೆ. ಇಷ್ಟೂ ದಿನ ಬಯಸುತ್ತಿದ್ದ ನಂಬರನ್ನು ಪಡೆಯುವ ಉತ್ಸಾಹ ಈಗ ಇಲ್ಲದಂತಾಗಿತ್ತು. ಎರಡನೇ ಬಾರಿ ಮತ್ತೆ ಕರೆ ಬಂದಾಗ ನಿರುತ್ಸಾಹದಿಂದಲೇ ರಿಸೀವ್ ಮಾಡಿ ಅವಳು ಹೇಳಿದ ನಂಬರನ್ನು ಎದುರಿಗಿದ್ದ ಪೇಪರ್‍ವೊಂದರಲ್ಲಿ ಬರೆದುಕೊಂಡ. ಆ ನಂಬರನ್ನು ಡಯಲ್ ಮಾಡಿ ಮೊಬೈಲ್ ಸ್ಕ್ರೀನ್ ನೋಡಿದರೆ ‘ಅಭಿಲಾಷಿಣಿ’ ಎಂಬ ಹೆಸರು ಕಾಣಿಸುತ್ತಿದೆ. ಅಭಿಲಾಷಿಣಿಯದೇ ಗುಂಗಿನಲ್ಲಿ ಅಭಿಲಾಷಿಣಿಗೆ ಡಯಲ್ ಮಾಡಿದ್ದೇನೆಯೇ? ಸುಷ್ಮಾ ಕೊಟ್ಟ ನಂಬರನ್ನು ಮತ್ತೊಮ್ಮೆ ಸರಿಯಾಗಿ ಗಮನಿಸಿ ಮತ್ತೆ ಡಯಲ್ ಮಾಡಿದ. ‘ಅಭಿಲಾಷಿಣಿ’ ಎಂದೇ ಕಾಣಿಸುತ್ತಿದೆ. ಅಂದರೆ ಆ ‘ಧ್ವನಿ ಸುಂದರಿ’ ಅಭಿಲಾಷಿಣಿಯೇ? ಬಸ್ಸಿನಿಂದ ತನ್ನತ್ತ ಕಾಗದ ಬಿಸಾಡಿದ್ದು ಇವಳೇ? ಹಾಗಿದ್ದರೆ ಇಷ್ಟು ದಿನ ತನ್ನ ಪ್ರೀತಿಯನ್ನು ಇವಳು ಮುಚ್ಚಿಟ್ಟದ್ದಾದರೂ ಯಾಕೆ? ಸಂತಸವೂ ಆಯಿತು ಅನಿಕೇತನಿಗೆ. ಗೊಂದಲದಲ್ಲಿದ್ದ ಮನಸ್ಸಿಗೆ ನೆಮ್ಮದಿ ದೊರೆತಂತಾಗಿತ್ತು. ಧ್ವನಿ ಸುಂದರಿ ಮತ್ತು ಅಭಿಲಾಷಿಣಿ ಒಂದೇ ಎಂದಮೇಲೆ ಪ್ರೀತಿಯ ಹಾದಿ ಸುಗಮವಾಯಿತು ಎಂದುಕೊಂಡವನು ಉತ್ಸಾಹದಿಂದ ಕರೆ ಮಾಡಿದ್ದ. ಅವಳು ಹಲೋ ಎನ್ನುವುದಕ್ಕೂ ಮೊದಲೇ ‘ಅಭಿಲಾಷಿಣಿ ನೀನೇ ನನ್ ಧ್ವನಿ ಸುಂದರಿ ಅಂತ ತಿಳೀತು...’ ಎನ್ನುವಷ್ಟರಲ್ಲಿ ಕಾಲ್ ಕಟ್. ಬೆನ್ನಿಗೇ ‘ಆಮೇಲೆ ನಾನೇ ಕಾಲ್ ಮಾಡ್ತೀನಿ’ ಎಂಬ ಆಕೆಯ ಮೆಸೇಜ್. ಕೆಂಡದ ಮೇಲೆ ಕುಳಿತಂತಾಗಿತ್ತು ಅನಿಕೇತನಿಗೆ. ಆದಷ್ಟು ಬೇಗ ವಿಚಾರ ತಿಳಿದುಕೊಳ್ಳಬೇಕೆಂಬ ಕುತೂಹಲ. ಅರ್ಧಗಂಟೆ ಕಳೆದ ಮೇಲೆ ಅವನ ವಾಟ್ಸಾಪ್‍ಗೆ ಅವಳ ಧ್ವನಿ ಸಂದೇಶ ಬಂದಿತ್ತು. ಕೇಳತೊಡಗಿದ-

‘ಹಲೋ ಅನಿಕೇತ, ನಿನ್ ಧ್ವನಿ ಸುಂದರಿ ಯಾರು ಅಂತ ನಿನ್ಗ್ ಗೊತ್ತಾಗಿದೆ ಅಲ್ವಾ? ನಿನ್ನನ್ನ ತುಂಬ ಇಷ್ಟಪಟ್ಟಿದ್ದೆ. ತಪ್ಪು ತಪ್ಪು, ನಿನ್ನಲ್ಲ ಕಣೋ, ನಿನ್ ವ್ಯಕ್ತಿತ್ವಾನ ಇಷ್ಟಪಟ್ಟಿದ್ದೆ. ಮೂರು ವರ್ಷದ್ ಹಿಂದೆ ಪೇಪರಲ್ಲಿ ನೀನ್ ಬರ್ದಿರೋ ಒಂದು ಕಥೆ ಬಂದಿತ್ತು ನೋಡು, ಅದ್ರಲ್ಲಿ ಹೆಣ್‍ಮಕ್ಳ್ ಬಗ್ಗೆ ನಿನ್ಗಿರೋ ಕಾಳ್ಜಿ ಏನು ಅಂತ ನನ್ಗ್ ಗೊತ್ತಾಗಿತ್ತು. ಅದಿಕ್ಕೇ ನೀನ್ ಇಷ್ಟ ಆದೆ. ನಿಜ್ವಾಗ್ಲೂ ನೀನ್ ಅದೇ ಥರ ಇದ್ದೀಯೋ ಇಲ್ವೋ ತಿಳ್ಕೋಬೇಕು ಅನ್ನುಸ್ತು. ನಿನ್ಗ್ ಸರ್‍ಪ್ರೈಸ್ ಕೊಡೋಣ ಅಂತ ನನ್ ಐದ್ ನಂಬರ್ ಮಾತ್ರ ನಿನ್ಗ್ ಸಿಗೋ ಥರ ಮಾಡ್ದೆ. ನಿನ್ ಕಂಪನಿಗೇ ಬಂದೆ. ವಾಯ್ಸ್ ಚೇಂಜ್ ಮಾಡಿ ಮಾತಾಡ್ದೆ. ನಿನ್ ಜೊತೆಗೇ ಇದ್ಕೊಂಡ್ ನಿನ್ ಧ್ವನಿ ಸುಂದರೀನ ನೀನ್ ಎಷ್ಟ್ ಇಷ್ಟಪಡ್ತೀಯ ಅಂತ ಆಬ್ಸರ್ವ್ ಮಾಡ್ತಿದ್ದೆ. ನಿನ್ನ ಸ್ವಲ್ಪ ಆಟ ಆಡ್ಸಿ ಆಮೇಲೆ ಹೇಳೋಣ ಅಂತಿದ್ದೆ.

ನನ್ನಮ್ಮಂಗೆ ಒಂದು ಆಸೆ ಇದೆ, ಸಾಯೋ ಮೊದ್ಲು ನನ್ ಮದ್ವೆ ಆಗ್ಬೇಕು, ಅದೂ ಫಾರಿನಲ್ಲಿರೋ ನನ್ ಮಾವನ್ ಮಗನ್ ಜೊತೆಗೇ.  ಕ್ಯಾನ್ಸರ್ ಇದೆ ನನ್ನಮ್ಮಂಗೆ. ಎರ್ಡೋ ಮೂರೋ ತಿಂಗ್ಳು ಬದ್ಕೋಳ್ ಮುಂದೆ ನನ್ ಪ್ರೀತಿ ವಿಷ್ಯಾನ ನಾನ್ ಹೆಂಗೋ ಹೇಳ್ಲಿ, ನೀನೇ ಹೇಳು? ನೀನ್ ಅರ್ಥಮಾಡ್ಕೋತೀಯ ಅಂದ್ಕೊತೀನಿ. ನಾನು ನಿನ್ ಫ್ರೆಂಡ್ ಆಗಿ ಯಾವತ್ತೂ ಇರ್ತೀನಿ, ಸಂಗಾತಿ ಆಗಿ ಅಲ್ಲ, ಓಕೆನಾ? ನಿನ್ ನಗೂನ ಯಾವತ್ತೂ ಕಳ್ಕೋಬೇಡ...’

ಈಗ ಕೋಣೆಯ ತುಂಬೆಲ್ಲಾ ಅವನ ದುಗುಡ, ಅವಳ ನೆನಪು, ಅವಳ ಧ್ವನಿ ಮತ್ತು ಅವಳ ನೆನಪಿನಲ್ಲಿ ಬರೆದ ನಾಲ್ಕು ಸಾಲುಗಳು ಮಾತ್ರ...]

‘ಕಾದುಕುಳಿತಿದೆ ನಿನ್ನ ಧ್ವನಿಯ ಹನಿಗಾಗಿ

ಕಂಗೆಟ್ಟ ನನ್ನೆದೆಯ ಬರಡು ಭೂಮಿ

ಮೇಲ್ಮೈಯ್ಯ ತೋಯಿಸುವ ಚುಟುಕು ಮಳೆ ನೀನಾಗದಿರು

ಆಗು ಮನದಾಳದ ಅಂತರ್ಗಾಮಿ.......’

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು