ಬುಧವಾರ, ಆಗಸ್ಟ್ 4, 2021
20 °C

ಕಥೆ | ಚಾಮುಂಡಿ ಎಕ್ಸ್‌ಪ್ರೆಸ್‌

ಅದೀಬ್‌ ಅಖ್ತರ್‌ Updated:

ಅಕ್ಷರ ಗಾತ್ರ : | |

Prajavani

ನಾನು ಚಾಮುಂಡಿ ಎಕ್ಸ್‌ಪ್ರೆಸ್‌ನ ಬೋಗಿ ಸಂಖ್ಯೆ ಹತ್ತು. ನಿತ್ಯ ಮೈಸೂರಿಂದ ಮುಂಜಾನೆ 6.45ಕ್ಕೆ ಸಾಮಾನ್ಯವಾಗಿ
ಒಂದನೆ ಪ್ಲಾಟ್ ಫಾರ್ಮ್‌ನಿಂದ ಬೆಂಗಳೂರಿಗೆ ಹೊರಡುತ್ತೇನೆ. ನನ್ನ ಹೊಟ್ಟೆಯ ತುಂಬ ತುಂಬಿಕೊಂಡಿರುವ ಜನರ ಕುರಿತೇ ನಾನು ಸದಾ ಯೋಚಿಸುತ್ತೇನೆ. ನಿತ್ಯ ನನ್ನ ಜೊತೆಗೆ ಪಯಣಿಸುವ ಒಂದಿಷ್ಟು ಮಂದಿಯ ಕಥೆಗಳು ನನ್ನ ಗಮನಕ್ಕೆ ಬಂದಿವೆ. ಅದ್ಯಾಕೋ ಗೊತ್ತಿಲ್ಲ, ಈ ಜನ ಪ್ರತಿದಿನವೂ ನನ್ನ ಜೊತೆಗೇ ಪಯಣಿಸುತ್ತಾರೆ. ಅವರು ಎಂದೂ ಬೇರೆ ಬೋಗಿಯನ್ನು ಹತ್ತುವುದಿಲ್ಲ. ನನ್ನ ಮಡಿಲಲ್ಲಿ ಪ್ರಯಾಣಿಸಿದರೆ ಮಾತ್ರ ಅವರಿಗೆ ನೆಮ್ಮದಿ. ಅವರನ್ನು ಒಂದು ದಿನ ಕಾಣದಿದ್ದರೆ ನನಗೂ ಒಂದು ರೀತಿಯ ತಳಮಳ. ಒಂದು ವಿಶೇಷವೆಂದರೆ ನನ್ನ ಮಡಿಲಲ್ಲಿ ಪ್ರಯಾಣಿಸುವವರು ಯಾರೂ ಗುಂಪುಗೂಡಿ ಜೋರಾಗಿ ಹರಟೆ ಹೊಡೆಯುವುದಿಲ್ಲ. ಎಲ್ಲರೂ ಅವರವರ ಚಿಂತೆಯಲ್ಲಿ ಮುಳುಗಿರುತ್ತಾರೆ. ಮಾತಾಡಿದರೂ ಪಿಸುಮಾತಿನಲ್ಲಿ. ಜೋರಾಗಿ ಹರಟೆ ಹೊಡೆಯುವವರು ಬೇರೆ ಬೋಗಿಗಳಲ್ಲಿ ಹತ್ತುತ್ತಾರೆ.

ಇಂದು ಸೋಮವಾರ ಜನಸಂದಣಿ ಜಾಸ್ತಿ. ಅಲ್ಲಿ ನೋಡಿ ಆ ಬಾಗಿಲಲ್ಲಿ ನಿಂತಿದ್ದಾರಲ್ಲ– ಯುವಕ ಮತ್ತು ಯುವತಿ. ಇಂದು ಸ್ವಲ್ಪ 
ಲೇಟಾಗಿ ಬಂದಿದ್ದಾರೆ, ಅದಕ್ಕೇ ಅವರಿಗೆ ಆಸನ ಸಿಕ್ಕಿಲ್ಲ, ಆರೇಳು ತಿಂಗಳಿಂದ ಅವರು ನನ್ನ ಮಡಿಲಲ್ಲೇ ಪ್ರಯಾಣಿಸುತ್ತಿದ್ದಾರೆ. ಅವರಿಬ್ಬರ ಮಧ್ಯೆ ತುಂಬ ಪ್ರೀತಿಯಿದೆ, ಸಂತೋಷ. ಆದರೆ ಅವರ ಪ್ರೀತಿ ಎಷ್ಡು ದಿನ ಹೀಗೆಯೇ ಇರುತ್ತದೆಂದು ನಾನಂತೂ
ಖಂಡಿತವಾಗಿ ಹೇಳುವುದಿಲ್ಲ. ಈಗಿನ ಪ್ರೀತಿ ಮತ್ತು ಹೂವುಗಳ ನಡುವೆ ಯಾವ ವ್ಯತ್ಯಾಸವೂ ನನಗೆ ಕಾಣಿಸುತ್ತಿಲ್ಲ. ಮೊಬೈಲ್‌, ಇಂಟರ್‌ನೆಟ್‌ಗಳ ಮೂಲಕ ಬೆಳಿಗ್ಗೆ ಹುಟ್ಟುವ ಪ್ರೀತಿ ಸಂಜೆಯ ಹೊತ್ತಿಗೆ ಮಾಗಿ ಹೋಗುತ್ತೆ.

ಬೇಕಿದ್ದರೆ ಆ ಮೂಲೆಯ ಆಸನದಲ್ಲಿ ಕೂತಿರುವ ಯುವಕನನ್ನೇ ನೋಡಿ. ಅವನು ತುಂಬ ನಿರಾಸೆಗೆ ಒಳಗಾಗಿದ್ದಾನೆ. ಮೊನ್ನೆ ಮೊನ್ನೆಯವರೆಗೆ ಅವನಿಗೂ ಒಬ್ಬಳು ಗೆಳತಿ ಇದ್ದಳು. ಇಬ್ಬರೂ ಒಟ್ಟಿಗೇ ಇಲ್ಲೇ ಕುಳಿತಿರುತ್ತಿದ್ದರು. ಆದರೆ ಅವಳೀಗ ಬೇರೆ ಬೋಗಿಯಲ್ಲಿ ಬೇರೆ ಯುವಕನೊಂದಿಗೆ ಪ್ರಯಾಣಿಸುತ್ತಾಳೆ. ಏನು ನಡೆಯಿತೋ ನನಗೆ ಗೊತ್ತಾಗಲಿಲ್ಲ. ಹಳೆಯ ಪ್ರೇಮಿ ಎದುರಾದರೂ ಅಪರಿಚಿತಳಂತೆ ಮುಂದೆ ನಡೆದು ಹೊರಟು ಹೋಗುತ್ತಾಳೆ. ಅವಳು ಹೊಸ ಗೆಳೆಯನೊಂದಿಗೆ ಸಂತೋಷವಾಗಿದ್ದಾಳೆ. ಪಾಪ ಇವನು ಮಂಕಾಗಿ ಹೋಗಿದ್ದಾನೆ. ಯಾರೊಂದಿಗೂ ಬೆರೆಯುತ್ತಿಲ್ಲ. ಆದರೆ ಇವನ ಬಗ್ಗೆ ನನಗೆ ಒಂದು ಖುಷಿ ಇದೆ. ಚಲಿಸುವ ರೈಲಿಂದ ಜಿಗಿಯುವ ಆಲೋಚನೆಯನ್ನು ಇವನು ಯಾವತ್ತೂ ಮಾಡಿಲ್ಲ. ಒಬ್ಬನೇ ಕುಳಿತಿರುತ್ತಾನೆ. ಇದೂ ಒಂದು ರೀತಿಯಲ್ಲಿ ಖುಷಿಯೇ. ಇವೆಲ್ಲ ಸ್ವಲ್ಪ ದಿನ ಅನ್ಸುತ್ತೆ, ಮತ್ತೊಬ್ಬಳು ಹುಡುಗಿ ಸಿಗಬಹುದು.

ಅಲ್ಲಿ ನೋಡಿ, ಆ ಆಸನದಲ್ಲಿ ಕುಳಿತಿರುವ ವಯಸ್ಸು ಐವತ್ತೈದರ ಆಸುಪಾಸಿನಲ್ಲಿರುವ ವ್ಯಕ್ತಿ ಸರಕಾರಿ ನೌಕರ. ಸಂಬಳಕ್ಕಿಂತ ಹೊರಗಿನ ಆಮದನಿ ಜಾಸ್ತಿ. ಮೂವರು ಗಂಡು ಮಕ್ಕಳು. ಎಲ್ಲರಿಗೂ ಮದುವೆ ಮಾಡಿದ್ದಾನೆ. ಅವರೂ ಒಂದಲ್ಲ ಒಂದು ಕೆಲಸದಲ್ಲಿದ್ದಾರೆ . ಆದರೆ ಇವನಿಗೆ ಇನ್ನೂ ಹೆಚ್ಚು ಆಸ್ತಿ ಮಾಡುವಾಸೆ. ಫೋನ್‌ನಲ್ಲಿ ಅವನ ಮಾತುಕತೆಯೆಲ್ಲ ಆ ವಿಷಯದ ಬಗ್ಗೆಯೇ. ಫೋರ್ಟಿ, ಸಿಕ್ಸ್‌ಟೀ ಸಾಲಲ್ಲ ಎಂದು ಸದಾ ಗೊಣಗುತ್ತಿರುತ್ತಾನೆ. ಇಂದು ಅವನು ಬೆಳಿಗ್ಗೆ ಆರಕ್ಕೆ ಮನೆ ಬಿಡುವ ಹೊತ್ತಿಗೆ, ಅವನ ಇಡೀ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ಗಾಡಿ ಮಾಡಿಕೊಂಡು ಯಾವುದೋ ದೇವರ ದರ್ಶನಕ್ಕೆ ಹೊರಟ ಹೋಗಿದ್ದಾರೆ.

ಅಲ್ಲಿ ನೋಡಿ ಬೋಗಿ ಮಧ್ಯದಲ್ಲಿ ನಿಂತಿರುವ ಯುವಕರಲ್ಲಿ ನಾಲ್ಕಾರು ಮಂದಿ ಮೊಬೈಲ್‌ನಲ್ಲಿ ಆಟವಾಡುತ್ತಿದ್ದಾರೆ. ಅವರ ಆಟವನ್ನು ಹತ್ತಾರು ಮಂದಿ ಅವರ ಸುತ್ತ ನಿಂತು ನೋಡುತ್ತಿದ್ದಾರೆ. ಹಿಂದೆಲ್ಲ ಸೀಟ್ ಸಿಗದಿದ್ದರೆ ಟೆನ್ಶನ್‌ ಮಾಡಿಕೊಳ್ಳುತ್ತಿದ್ದರು. ಆದರೆ ಮೊಬೈಲ್ ಬಂದ ಬಳಿಕ ಅವರಿಗೆ ನಿಂತು ಪ್ರಯಾಣಿಸುವುದರಲ್ಲಿ ಯಾವುದೇ ಕೊರತೆ ಕಾಣುವುದಿಲ್ಲ.

ರಾಮನಗರ ಬರುತ್ತಿದ್ದಂತೆಯೇ ಯಾವಾಗಲೂ ಹಣ ಮಾಡುವ ಆಲೋಚನೆಯ ವ್ಯಕ್ತಿಯ ಮೊಬೈಲ್ ರಿಂಗಾಯಿತು , ಅವನು ಹಲೋ ಎಂದ. ಅದು ಅವನ ಮಗನ ಮೊಬೈಲ್ ನಂಬರ್ ಆಗಿತ್ತು, ಆದರೆ ಮೊಬೈಲ್‌ನಿಂದ ಬೇರೆ ಯಾರೋ ಮಾತನಾಡಿ, ‘ಈ ಮೊಬೈಲ್ ನವರು ನಿಮಗೆ ಏನಾಗ ಬೇಕು’ ಎಂದು ಕೇಳಿದರು.

“ನನ್ನ ಮಗ’’

“ನೀವು ಎಲ್ಲಿದ್ದರೂ ಕೂಡಲೇ ಬನ್ನಿ, ಮೈಸೂರಿಂದ ನಂಜನಗೂಡಿಗೆ ಹೋಗುವ ರಸ್ತೆಯಲ್ಲಿ ನಿಮ್ಮ ಕುಟುಂಬ ಇದ್ದ ವಾಹನ ಅಪಘಾತಕ್ಕೆ ಒಳಗಾಗಿದೆ. ಸ್ವಲ್ಪ ಸೀರಿಯಸ್‌ ಇದೆ, ಆದರೆ ಹೆದರುವಂಥದ್ದು ಏನೂ ಇಲ್ಲ.. ನೀವು ಬೇಗ ಬನ್ನಿ..’’

ಈ ಕರೆಯನ್ನು ಕೇಳಿದ ಕೂಡಲೆ ಅವನು ಬೆವತುಹೋದ. ಏರು ರಕ್ತದೊತ್ತಡ ಇರುವುದರಿಂದ, ರಾಮನಗರದ ನಿಲ್ದಾಣದಲ್ಲಿ ತುಂಬ ಪ್ರಯಾಸ ಪಟ್ಟು ಇಳಿದ. ಬೋಗಿಯಿಂದಿಳಿದು ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುತ್ತಿದ್ದಂತೆಯೇ ಕುಸಿದು ಬಿದ್ದ, ಅಲ್ಲಿದ್ದವರು ಅವನ ಕಿಸೆಯಿಂದ ಮೊಬೈಲ್ ತೆಗೆದು ಅವನ ಕುಟುಂಬದವರನ್ನು ಸಂಪರ್ಕಿಸಲು ತೊಡಗಿದರು. 

ರೈಲು ಯಾರನ್ನೂ ಕಾಯುವುದಿಲ್ಲ. ಯಾರಾದರೂ ಅವರು ಇಳಿಯಬೇಕಾದ ನಿಲ್ದಾಣಕ್ಕಿಂತ ಮುಂಚಿನ ನಿಲ್ದಾಣದಲ್ಲಿ ಇಳಿದರೂ ಅವರ ಬಗ್ಗೆ ತಲೆ ಕೆಡಿಸಕೊಳ್ಳುವುದಿಲ್ಲ. ಆದರೆ ಅದ್ಯಾಕೋ ಗೊತ್ತಿಲ್ಲ, ಈ ಘಟನೆ ಸ್ವಲ್ಪ ನನ್ನ ತಲೆ ತಿನ್ನತೊಡಗಿತು. ಅಲ್ಲಿ ಅಪಘಾತದ ಸ್ಥಳದಲ್ಲಿ ಅವನ ಮಗನ ಕಿಸೆಯಿಂದ ಫೋನ್‌ ತೆಗೆದು ಅದ್ಯಾರೋ ಫೋನ್‌ ಮಾಡಿ ವಿಷಯ ತಿಳಿಸಿದರು. ಇಲ್ಲಿ ಅದೇ ರೀತಿ ಇವನ ಕಿಸೆಯಿಂದ ಫೋನ್‌ ತೆಗೆದು ಇನ್ಯಾರೋ ಮನೆಯವರಿಗೆ ವಿಷಯ ತಿಳಿಸಲು ಯತ್ನಿಸುತ್ತಿದ್ದಾರೆ. ಅಪಘಾತ ಆದವರಲ್ಲಿ ಇವರ ಫೋನ್‌ ತೆಗೆಯಲು ಯಾರಾದರೂ ಉಳಿದಿದ್ದಾರಲ್ಲ... ಅಲ್ಲ, ಕೆಟ್ಟದು ಬಯಸಬಾರದು. ಉಳಿದಿದ್ದರೂ ಅವರೆಲ್ಲ ಗಾಯಗೊಂಡು ಆಸ್ಪತ್ರೆ ಸೇರಿದ್ದರೆ ಇವನನ್ನು ಅಲ್ಲಿಗೆ ತಲುಪಿಸುವವರು ಯಾರು? ಅಥವಾ ಇವನನ್ನೂ ಇಲ್ಲಿ ಆಸ್ಪತ್ರೆಗೆ ಸೇರಿಸಬೇಕಾಗಿ ಬಂದಿದೆಯೋ...

ನೋಡಿ ಇವರೇ, ನನ್ನ ಬಳಿ ಇನ್ನೂ ಅನೇಕರ ಕಥೆಗಳಿವೆ. ನೋಡು ನೋಡುತ್ತಿದ್ದಂತೆಯೇ ಬಿಡದಿ ಸಹ ಬಂದು ಬಿಟ್ಟಿದೆ. ಬೆಂಗಳೂರು ತಲುಪಲು ಇನ್ನು ಸ್ವಲ್ಪವೇ ಸಮಯ ಉಳಿದಿದೆ. ಹೇಳುವ ಕಥೆಗಳು ತುಂಬಾ ಇವೆ. ಪ್ರತಿದಿನವೂ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುವ ಮಹಿಳೆಯರ, ಆಸ್ಪತ್ರೆಗೆ ಹೋಗುವ ರೋಗಿಗಳ ,ಕೋರ್ಟ್ ಅಲೆಯುವ ಮಂದಿಯ ಎಲ್ಲ ಕಥೆಗಳನ್ನು ಹೇಳಲು ಸಾಧ್ಯವಿಲ್ಲ. ಇನ್ನೇನು ಕೆಂಗೇರಿ ಬಂದು ಬಿಟ್ಟರೆ ನಿಮಗೆ ಕಥೆಗಳನ್ನು ಕೇಳುವ ಆಸಕ್ತಿಯೂ ಇರುವುದಿಲ್ಲ. ಬೆಂಗಳೂರಲ್ಲಿ ಇಳಿದು ಟ್ರಾಫಿಕ್ಕಿನಲ್ಲಿ ಗುರಿ ಸೇರುವ ಧಾವಂತ ನಿಮ್ಮದಾಗುತ್ತದೆ.

ಮುಖ್ಯವಾದದ್ದು ಅಂತ ನನಗೆ ಅನ್ನಿಸಿದ ಕಥೆಯೊಂದು ಹೇಳಿಬಿಡುತ್ತೇನೆ. ಆ ಮೂಲೆಯಲ್ಲಿ ಕೂತಿರುವ ಅಂದಾಜು 60 ವಯಸ್ಸಿನ ಮಹಿಳೆ ಯಾರೆಂದುಕೊಂಡಿದ್ದೀರಿ?  ಆಕೆ ಒಂದಾನೊಂದು ಕಾಲದ ತುಂಬ ಬೇಡಿಕೆಯ ನಟಿ. ಈಗ ಆಕೆಯನ್ನು ಗುರುತಿಸುವ ಜನರಿಲ್ಲ. ಈಗಿನ ಹುಡುಗರು ಆ ಕಾಲದ ಸಿನಿಮಾ ನೋಡಿರಲಿಕ್ಕೂ ಇಲ್ಲ. ಇನ್ನು ಈಕೆಯಷ್ಟೇ ವಯಸ್ಸಾದವರಿಗೆ ಆ ಕಾಲದಲ್ಲಿ ಸಿನಿಮಾ ನೋಡಿದ್ದರೂ ಈಗ ಆ ಆಕರ್ಷಣೆ ಎಲ್ಲ ಇಳಿದುಹೋಗಿ ಅವರದ್ದೇ ಇಳಿವಯಸ್ಸಿನ ತಾಪತ್ರಯಗಳು ನೂರೆಂಟು ಇರುತ್ತವೆ ಬಿಡಿ. ಗಂಡ ಬಿಟ್ಟು ಅನೇಕ ವರ್ಷಗಳಾಗಿವೆ. ಮಕ್ಕಳಿಲ್ಲ. ಯಾರಾದರೂ ತನ್ನನ್ನು ಗುರುತು ಹಿಡಿದ ಮಾತಾಡಿಸಬಹುದೇ ಎನ್ನುವ ಆಸೆಯಿಂದ ಆಕೆ ಎಲ್ಲರ ಮುಖವನ್ನೂ ನೋಡುತ್ತಿದ್ದಾಳೆ. 

ಆ ಅಸೆಯಿಂದಲೇ ಅವಳು ಬೇಸರವಾದಾಗಲೆಲ್ಲ ಬೆಂಗಳೂರಿಗೆ ರೈಲು ಹತ್ತಿ ಬರುತ್ತಾಳೆ. ಸ್ವಲ್ಪ ಸಮಯ ರೈಲು ನಿಲ್ದಾಣದಲ್ಲಿ ಕಳೆದು, ಅಡ್ಡಾಡಿ ಒಂದು ಟೀ ಕುಡಿದು ಹಿಂತಿರುಗಿ ಮೈಸೂರು ರೈಲು ಹತ್ತಿ ವಾಪಸಾಗುತ್ತಾಳೆ. 

ರೈಲು ಕೆಂಗೇರಿಯಲ್ಲಿ ನಿಂತ ಕೂಡಲೇ ಆ ಹಿರಿಯ ನಟಿ ಕಿಟಕಿಯಿಂದ ಹೊರಗೆ ಕಣ್ಣಾಡಿಸಿ ಕುತೂಹಲದಿಂದ  ಗಮನಿಸತೊಡಗಿದಳು. ಈ ಸ್ವಲ್ಪ ಹೊತ್ತು ಮುಂಚೆ ಅಲ್ಲಿ ಯಾವುದೋ ಸಿನಿಮಾ ಶೂಟಿಂಗ್ ನಡೆದಿತ್ತೆಂದು ಕಾಣುತ್ತದೆ. ಯೂನಿಟ್ ಹುಡುಗರು ತಮ್ಮ ಸರಕನ್ನು ಹೊರ ನಿಂತಿರುವ ವಾಹನಗಳಿಗೆ ಸಾಗುತ್ತಿದ್ದರು. ಹಿಂದೊಮ್ಮೆ ಇದೇ ಕೆಂಗೇರಿಯ ರೈಲ್ವೆ ನಿಲ್ದಾಣದಲ್ಲಿ ಅವಳ ಸಿನಿಮಾವೊಂದರ ಶೂಟಿಂಗ್ ನಡೆದಾಗ ಎಷ್ಡೊಂದು ಜನ ಸೇರಿಕೊಂಡಿದ್ದರೆಂದರೆ ಪೊಲೀಸರು ಲಾಠಿ ಚಾರ್ಜ್‌ ಮಾಡಬೇಕಾಗಿ ಬಂದಿತ್ತು. ಆಕೆ ಬೆಂಗಳೂರಿಗೆ ಹೋಗುವ ಯೋಚನೆಯನ್ನು ಬದಲಿಸಿ, ಕೆಂಗೇರಿಯ ರೈಲ್ವೆ ನಿಲ್ದಾಣದಲ್ಲಿಯೇ ಕೆಳಗಿಳಿದಳು. ಪ್ಲಾಟ್‌ಫಾರಂನಲ್ಲಿ ಶೂಟಿಂಗ್‌ ನೋಡಲು ಸೇರಿದ್ದ ಜನರು ಇನ್ನೂ ಕರಗಿರಲಿಲ್ಲ. ಆಕೆ ನಿಧಾನಕ್ಕೆ ನಡೆಯುತ್ತಾ ಎಲ್ಲರ ಮುಖಗಳನ್ನು ನೋಡತೊಡಗಿದಳು. ಸಿನಿಮಾ ಶೂಟಿಂಗ್‌ ನೋಡಲು ಕುತೂಹಲದಿಂದ ಸೇರಿದ್ದಾರೆಂದರೆ ಇವರು ಹಳೆಯ ಸಿನಿಮಾಗಳನ್ನೂ ನೋಡಿದವರೇ. ಇವರಲ್ಲಿ ಯಾರಾದರೂ ತನ್ನ ಪರಿಚಯ ಹಿಡಿಯಬಹುದೇ ಎಂಬ ಆಸೆ!

ನಾನಂತೂ ಒಬ್ಬ ವೀಕ್ಷಕ ಅಷ್ಟೇ. ಇವರೆಲ್ಲರ ಕಥೆಯ ಬೆನ್ನು ಹಿಡಿದು ಹೋಗಲು ಸಾಧ್ಯವಿಲ್ಲ. ಸಮಯಕ್ಕೆ ಸರಿಯಾಗಿ ಗುರಿ ಮುಟ್ಟಬೇಕಲ್ಲ. ಬೆಂಗಳೂರಿನತ್ತ ಹೊರಟೆ. ಆದರೆ ನನ್ನ ಮನಸ್ಸು ಇನ್ನೂ ಕೆಂಗೇರಿಯಲ್ಲೇ ಇತ್ತು. ಯಾರಾದರೂ ಆ ಚಿತ್ರನಟಿಯನ್ನು ಗುರುತು ಹಿಡಿದು ಮಾತನಾಡಿಸಬೇಕಿತ್ತು. ಎಷ್ಟೊಂದು ಜನರ ಮನಸ್ಸಿನಲ್ಲಿ ಆಕೆ ಒಂದು ಕಾಲದಲ್ಲಿ ಎಷ್ಟೊಂದು ಕನಸುಗಳನ್ನು ಅರಳಿಸಿದ್ದಾಳಲ್ಲ...! ಅದಕ್ಕಾದರೂ ಯಾರಾದರೂ ಗುರುತು ಹಿಡಿದು ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿದರೆ ಆಕೆಯ ಈ ಪಯಣಕ್ಕೂ ಒಂದು ಅರ್ಥ ಸಿಕ್ಕೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು