ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರ್ಕಲಸಿನ ಮರ

Last Updated 9 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಈ ಮನ್ಸ ಇಂಥ ನಮಕ್‍ಹರಾಮ್ ಕೆಲ್ಸ ಮಾಡೋದಾ,’ಅಂತ ಬುಡೇನ್‍ಸಾಬ್ರು ಹಲಸಿನ ಮರದ ಬುಡವನ್ನು ನೋಡುತ್ತಲೇ ಹಾವು ತುಳಿದವರಂತೆ ಹೌಹಾರಿದಾಗ ಬಳ್ಯಳ್ಳಿಯಲ್ಲಿ ಅದೇತಾನೇ ಬೆಳಕರಿಯುತ್ತಿತ್ತು. ಕೂಗಳತೆಯಲ್ಲಿದ್ದ ಕುರಿಗೂಡಿನಿಂದ ಕುರಿಗಳ ಮತ್ತು ಮರಿಗಳ ಸದ್ದು ಹಕ್ಕಿಗಳ ಕೂಗಿನೊಂದಿಗೆ ಹೊಲಮಾಳವನ್ನು ತುಂಬಿಕೊಳ್ಳುತ್ತಿತ್ತು.

ಕೆಲಸದವರೊಂದಿಗೆ ಟ್ರ್ಯಾಕ್ಟರೊಳಗೆ ಕೂತಿದ್ದ ಬುಡೇನ್‍ಸಾಬ್ರ ಮಗ ನೂರುಲ್ಲಾನಿಗೆ ಅಪ್ಪನ ಮಾತುಗಳು ಅಸ್ಪಷ್ಟವಾಗಿ ಕೇಳಿಸಿ ಏನು ಅಂತ ಕೇಳುವಷ್ಟರಲ್ಲಿ ಬುಡೇನ್‍ಸಾಬ್ರು ಸೀದಾ ಟ್ರ್ಯಾಕ್ಟರ್ ಹತ್ತಿರಕ್ಕೆ ಬಂದವರೇ `ತಿರುಗ್ಸು ಗಾಡೀನಾ,’ಅಂದರು. ಅಪ್ಪನ ಮುಖದಲ್ಲಾಡುತ್ತಿದ್ದ ದಿಗಿಲಿಗೆ ಹಿಂಜರಿದ ನೂರುಲ್ಲಾ ಕೈ ಸನ್ನೆಯಲ್ಲೇ ಎಲ್ಲಿಗೆ ಅಂದ. `ಹೇ ಸುವ್ವರ್ ಇನ್ನೆಲ್ಲಿಗೆ ಆ ಧರ್ಮಪ್ಪನ ಮನೇತಾಕೆ,’ ಬುಡೇನ್‍ಸಾಬ್ರು ರೇಗಿದರು. ನೂರುಲ್ಲಾ ಮುಖ ಊದಿಸಿಕೊಂಡು ಟ್ರ್ಯಾಕ್ಟರ್ ತಿರುಗಿಸಿದ. ಇದೊಂದನ್ನೂ ಕಿವಿಗಾಕಿಕೊಳ್ಳದ ಚಳಿಗೆ ಸುಂಡ್ರಿಸಿಕೊಂಡು ಕೂತಿದ್ದ ಸಿದ್ಧ,ಭೈರ,ಹೊಟ್ಗಪ್ಪ ಬೀಡಿಯ ಹೊಗೆಯಲ್ಲಿ ಸುರುಳಿ ಸುತ್ತುತ್ತಿದ್ದರು.

ಬುಡೇನ್‍ಸಾಬ್ರು ಧರ್ಮಪ್ಪನ ಮನೆಯ ಅಂಗಳಕ್ಕೆ ಕಾಲಿಟ್ಟಾಗ ಧರ್ಮಪ್ಪ ಕೊಟ್ಟಿಗೆಯಿಂದ ಎಮ್ಮೆಯನ್ನು ಆಚೆ ಕಟ್ಟುತ್ತಿದ್ದ. ಬುಡೇನ್ಸಾಬ್ರನ್ನು ಕಾಣುತ್ತಲೇ,`ಇದೇನ್ ಸಾಹೇಬ್ರೆ ಹೊತ್ತು ಹುಟ್ಟಾಕೆ ಮುಂಚೇನೇ ಬಂದುಬಿಟ್ಟಿದೀರಾ,’ಅಂದ. `ಅದಿರ್ಲಿ ಧರ್ಮಪ್ಪ,ಇಂಥ ಧೋಕಾ ಕೆಲ್ಸ ಮಾಡ್ಬೇಕೂಂತ ಎಷ್ಟು ದಿನದಿಂದ ಕಾಯ್ತಿದ್ದೆ,ನೀನು ಕೇಳಿದಷ್ಟೇ ರೊಕ್ಕ ಮಡಗಿದೀನೀ,ಅಂತದ್ರಾಗೂ... ಅರೆ ಅಲ್ಲಾ,’ ಅಂದವರೆ ತಲೆಯ ಮೇಲೆ ಕೈಹೊತ್ತು ಜಗಲಿಯಲ್ಲಿ ಕೂತರು. ಇದರಿಂದ ಕಕ್ಕಾಬಿಕ್ಕಿಯಾದ ಧರ್ಮಪ್ಪ,’ಯಾಕ್ರೀ ಸಾಹೇಬ್ರೇ ಏನೇನೋ ಮಾತಾಡ್ತಿದೀರಾ,ಅಂಥ ಮಾಡಬಾರದ ಕೆಲ್ಸ ಏನ್ಮಾಡಿದೀನಿ’,ಅಂದ. `ಆ ಮಾತೆಲ್ಲಾ ಯಾಕೀಗ ಧರ್ಮಪ್ಪ ನನ್ನ ದುಡ್ಡು ನಂಗೆ ಕೊಟ್ಟುಬಿಡು. ನಿನ್ನ ಮರಾನಾ ನೀನು ಇಟ್ಕೋ,’ಕಡ್ಡಿಮುರಿದಂತೆ ಅಂದರು ಬುಡೇನ್‍ಸಾಬ್ರು.. ಅಷ್ಟು ಹೇಳುವಷ್ಟರಲ್ಲಿ ಬುಡೇನ್‍ಸಾಬ್ರ ಕಣ್ಣುಗಳು ತುಂಬಿಕೊಳ್ಳತೊಡಗಿದ್ದವು. ಧರ್ಮಪ್ಪ ಧರ್ಮಸಂಕಟಕ್ಕೊಳಗಾದ.

ಮುರ್ಕಲಸಿನ ಮರವನ್ನು ಬುಡೇನ್‍ಸಾಬ್ರಿಗೆ ಮಾರಿದ ದಿನ ಧರ್ಮಪ್ಪನಿಗೂ ಅವನ ಅಪ್ಪ ಬಾಳಪ್ಪನಿಗೂ ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದ್ದವು. `ಮಕ್ಳು ಮರಿ ಇರೋ ಮನೆ ಅಂಥಾದ್ರಾಗೆ ಇದ್ ಒಂದು ಹಲಸಿನ ಮರಾನೂ ಬಡ್ದು ಬಾಯಿಗಾಕ್ಕೋ ಬೇಕು ಅಂತಿದೀಯ. ಅಲ್ಲಾ ಆ ಮರ ನಿಂಗೇನಾರ ಬಗ್ಲು ಮುಳ್ಳಾಗೈತ,ಅದನ್ನ ಮಾರ್ಕಂಡು ಯಾಚ್ಕಾ ಹಾಕೋ ಅಂಥಾದ್ದು ಏನು ಬಂದೈತೆ,ಇದ್ರೆ ಇರ್ತೈತೆ ಬಿಡು,’ಅಂದಿದ್ದ ಬಾಳಪ್ಪ.

`ಈಗದುನ್ನ ಕಟ್ಕೆಂಡು ಏನ್ಮಾಡ್ತೀಯಾ ಅಂತೀನಿ. ಹೊಲುದ್ ಮಧ್ಯದಾಗೆ ಒಳ್ಳೆ ಭೂತಪ್ಪನಂಗೆ ಕೂತೈತೆ,ಅದ್ರ ಅಡೀಲಿ ಏನೂ ಬೆಳ್ಯಕಾಗಲ್ಲ,ಮಟ್ಟಾಕಾಗಲ್ಲ,ಅಂತದ್ರಾಗೆ ನಿಂದೊಳ್ಳೆ ರ್ವಾತೆ,’ಅಪ್ಪನ ಮಾತಿಗೆ ಸಿಡುಕಿದ್ದ ಧರ್ಮಪ್ಪ. ಅದನ್ನು ಮಾರಿ ಅಲ್ಲೊಂದು ಬೋರ್ವೆಲ್ ಕೊರೆಸಿ ಗದ್ದೆ ಮಾಡುವುದು,ಅಡಕೆ ಸಸಿಗಳನ್ನು ಕಟ್ಟುವುದು ಧರ್ಮಪ್ಪನ ಬಲುದಿನದ ಇರಾದೆಯಾಗಿತ್ತು. ಮಗನ ಮಾತಿಗೆ,`ಕಾಲ ಕೆಟ್ಟು ಕಾಗೆ ರಾಗಿ ತಿಂದಂಗಾತು,’ಬಾಳಪ್ಪ ಗೊಣಗಿಕೊಂಡಿದ್ದ. `ಯಾವ ಕಾಲ್ದಾಗೆ ಇದೀಯಪ್ಪ ನೀನು ಇನ್ನೂ,’ ಧರ್ಮಪ್ಪ ದಬಾಯಿಸಿದ್ದ. ಮತ್ತೆ ಮಗನಿಗೆ ಬಾಯಿಕೊಡದಾಗಿದ್ದ ಬಾಳಪ್ಪ. ಆದರೂ ಮರ ಕಡಿಯಲು ಬಂದಾಗ ಅಪ್ಪ ತಗಾದೆ ತೆಗೆಯಬಹುದೆಂಬ ಆತಂಕಕ್ಕೊಳಗಾಗಿದ್ದ ಧರ್ಮಪ್ಪ. ಆದರೆ ಹಿಂದಿನ ದಿನ ಸಂಜೆ ಬಾಳಪ್ಪ ತರಾತುರಿಯಲ್ಲಿ ಇದ್ದಕ್ಕಿದ್ದಂತೆ ಮಗಳ ಮನೆಗೆ ಹೋಗಿದ್ದರಿಂದ ನಿರಾಳವಾಗಿದ್ದ.

ಮುರ್ಕಲಸಿನ ಮರವನ್ನು ಯಾರು ನೆಟ್ಟಿದ್ದು ಅಂತ ಬಾಳಪ್ಪನಿಗಿರಲಿ ಅವನ ತಾತ ಕೆಂಪ್ನಿಂಗಜ್ಜನಿಗೂ ನೆನಪಿರಲಿಲ್ಲ. ಅದಿನ್ನೂ ಪ್ರಾಯದ ಗಿಡವಾಗಿದ್ದಾಗಲೇ ಅದರ ಒಂದು ಕೊಂಬೆ ಅರ್ಧಕ್ಕೇ ಮುರಿದುಹೋಗಿದ್ದ ಕಾರಣಕ್ಕೆ ಅದು ಎಲ್ಲರಿಗೂ ಮುರ್ಕಲಸಿನ ಮರವಾಗಿತ್ತು. ಎರಡೆಕರೆ ಹೊಲದ ನಡುವೆ ಅರ್ಧ ಎಕರೆಯಲ್ಲಿ ಹರವಿಕೊಂಡಿದ್ದ ಅದು ಹಣ್ಣಿನ ಕಾಲದಲ್ಲಿ ಬುಡದಿಂದ ತುದಿಯವರೆಗೂ ಗೆಲ್ಲು ಗೆಲ್ಲುಗಳಲ್ಲೂ ಕಾಯಿಡಿಯುತ್ತಿತ್ತು. ಅದರ ಚಂದ್ರತೊಳೆಯ ರುಚಿ ಊರಿನ ಯಾವ ಮರಕ್ಕೂ ಇರಲಿಲ್ಲ. ಹಣ್ಣಿನ ಕಾಲದಲ್ಲಿ ತಮ್ಮದೇ ಮರಗಳಿದ್ದರೂ ಕೆಲವರು ಈ ಮರದ ಹಣ್ಣಿಗೆ ದುಂಬಾಲು ಬೀಳುತ್ತಿದ್ದರು. ಕೆಲವರು ಇದರ ಬೀಜಗಳನ್ನು ಸಸಿ ಮಾಡಿ ಬೆಳಸಿ ನೆಟ್ಟಿದ್ದರು. ಆದರೂ ಅದರ ರುಚಿ ಬಂದಿರಲಿಲ್ಲ. ಅದಕ್ಕೆ ನೆಲಗಟ್ಟು ಕಾರಣ ಅಂತ ಮಾತಾಡಿಕೊಳ್ಳುತ್ತಿದ್ದರು.

ಇಂಥ ಅಪರೂಪದ ಮರವನ್ನು ಮಾರಲು ತುದಿಗಾಲಲ್ಲಿದ್ದ ಮಗನನ್ನು ಬಾಳಪ್ಪ ಸುಮಾರು ಸಲ ತಡೆದಿದ್ದ. ಈ ಸಲ ಮಗನ ಮಾತಿನ ವರಸೆಯಿಂದ ಮರವನ್ನು ಉಳಿಸಿಕೊಳ್ಳುವುದು ಕಷ್ಟ ಎಂಬುದರ ಅರಿವಾಗಿ ಸಂಕಟವಾಗತೊಡಗಿತ್ತು. ಹೊಲದ ಕಡೆ ಹೋದಾಗಲೆಲ್ಲಾ ಚಿಕ್ಕಂದಿನಿಂದ ಹಿಡಿದು ಇತ್ತೀಚಿನವರೆಗೂ ಹೊಲಮಾಳದಲ್ಲಿದ್ದ ಹಲಸು,ಮಾವು, ಬೆಲವತ್ತ,ಬೇವು,ಹೊಂಗೆ ಮುಂತಾದ ಮರಗಳು ಕಣ್ಮುಂದೆ ಬರತೊಡಗಿದ್ದವು. ಈ ಹಾಳಾದ ಬೊರ್ವೆಲ್ಲುಗಳು ಯಾಕಾದರೂ ಬಂದವೋ ಶಿವನೇ ಅಂತ ಮರುಗತೊಡಗಿದ್ದ. ಹೊಲಮಾಳಗಳೆಲ್ಲಾ ಗದ್ದೆ ಬಯಲುಗಳಾಗಿದ್ದು, ಸಾಲದ್ದಕ್ಕೆ ಅಲ್ಲೊಂದು ಇಲ್ಲೊಂದು ಇದ್ದ ಮರಗಳನ್ನು ನುಂಗಿಕೊಕೊಳ್ಳುವಂಥ ಇಟ್ಟಿಗೆ ಫ್ಯಾಕ್ಟರಿಗಳು ಶುರುವಾಗಿದ್ದು,ಬಾಳಪ್ಪನಿಗೆ ಕೇಡುಗಾಲದ ಸೂಚನೆಯಂತೆ ಕಾಣತೊಡಗಿತ್ತು.

ಸತೊಂಭತ್ತು ಕಾಲವೂ ಹಸಿರ ತೇರಿನಂತಿರುತ್ತಿದ್ದ,ಸದಾ ಹಕ್ಕಿಗಳ ಕಲರವದ ಗೂಡಾಗಿದ್ದ ಮುರ್ಕಲಸಿನ ಮರಕ್ಕೆ ದುಡ್ಡಿನಾಸೆ ಬಾಳಪ್ಪನನ್ನೂ ಬಗ್ಗಿಸಿಕೊಳ್ಳಲು ನೋಡಿದ್ದರು. ಬಾಳಪ್ಪ ಬಗ್ಗಿರಲಿಲ್ಲ. ಹೆಂಡತಿ ಬೀರವ್ವ ತೀರಿಕೊಂಡ ಮೇಲೆ ಯಜಮಾನಿಕೆಯನ್ನು ಮಗನಿಗೆ ವಹಿಸಿದ್ದ. ಅಪ್ಪನಿಗೆ ಗೊತ್ತಾದರೆ ತಕರಾರು ತೆಗೆಯುವುದು ಗೊತ್ತಿದ್ದರಿಂದ ಈ ಸಾರ್ತಿ ಗುಟ್ಟಾಗಿ ಬುಡೇನ್‍ಸಾಬ್ರಿಗೆ ಮಾರಿಬಿಟ್ಟಿದ್ದ. ಆದರದು ಅವತ್ತೇ ಬಾಳಪ್ಪನ ಕಿವಿಗೆ ಬಿದ್ದಿತ್ತು. ನಾಳೇಯೇ ಅದರ ಕಠಾವಿಗೆ ಬರುತ್ತಾರೆ ಅನ್ನುವುದು ಗೊತ್ತಾದಕೂಡಲೇ ಬಾಳಪ್ಪ ತಳಮಳಗೊಂಡಿದ್ದ.

ಯಾವಾಗ ಬುಡೇನ್‍ಸಾಬ್ರು,`ನಂಗಂತೂ ಮರ ಬೇಡ್ವೇ ಬೇಡ,’ಅಂತ ಹಠಕ್ಕಿಳಿದರೋ,`ಅಂಥಾದ್ದು ಅದೇನು ಐಬಿದೆ ಮರದಲ್ಲಿ ತೊರ್ಸಿ,’ಅಂತ ಧರ್ಮಪ್ಪನೂ ಜಿದ್ದಿಗೆ ಬಿದ್ದ. ಇಬ್ಬರೂ ಹೊಲದತ್ತ ಹೊರಟರು. ಹಲಸಿನ ಮರದ ಹತ್ತಿರ ಕಾಗೆಗಳು,ನಾಯಿಗಳು ಕಿತ್ತಾಡಿಕೊಳ್ಳುತ್ತಿದ್ದುದು ದೂರದಿಂದಲೇ ಕಾಣುತ್ತಿತ್ತು. ಅದನ್ನು ಕಾಣುತ್ತಲೇ ಧರ್ಮಪ್ಪ ದೊಡ್ಡೆಜ್ಜೆಯಲ್ಲಿ ಮರದತ್ತ ಧಾವಿಸಿದ. ಬುಡೇನ್‍ಸಾಬ್ರು ದೂರದಲ್ಲೇ ನಿಂತರು.

ಅವನು ಹತ್ತಿರವಾಗುತ್ತಲೇ ಕಾಗೆಗಳು ಹಾರಿದವು. ನಾಯಿಗಳು ಕೊಂಚ ದೂರ ಓಡಿ ಮತ್ತೆ ಜಗಳಕ್ಕೆ ಬಿದ್ದವು. ಮರದ ತುಂಬಾ ಜೋಲುತ್ತಿದ್ದ ಹಲಸಿನ ಮುಸುಕುಗಳ ಮೇಲೆ ಅಲ್ಲಲ್ಲಿ ಬೆಳಗಿನ ಬಿಸಿಲು ಬಿದ್ದಿತ್ತು. ಹತ್ತಿರ ಹೋದ ಧರ್ಮಪ್ಪನೂ ದಂಗಾದ. ಮರದ ಬುಡದಲ್ಲಿ ಅಸ್ಪಷ್ಟ ಮುಖದ ದೇವರ ವಿಗ್ರಹವೊಂದನ್ನು ನೆಡಲಾಗಿತ್ತು. ಅದಕ್ಕೆ ಹರಿಷಿಣ ಕುಂಕುಮಗಳನ್ನು ಮೆತ್ತಿ,ಹಲವು ಬಗೆಯ ಹೂಗಳಿಂದ ಪೂಜಿಸಲಾಗಿತ್ತು. ಬುಡಕ್ಕೆ ಅಲ್ಲಲ್ಲಿ ಪಂಚಲೋಹದ ಮಳೆಗಳನ್ನೊಡೆದು ಸುತ್ತಲೂ ಬಣ್ಣದ ದಾರಗಳನ್ನು ಕಟ್ಟಲಾಗಿತ್ತು. ದೊಡ್ಡದೊಂದು ಅಗ್ರದೆಲೆಯಲ್ಲಿ ಎಡೆ ಇಡಲಾಗಿತ್ತು. ಅದಕ್ಕೆ ಗೊದ್ದ,ಇರುವೆಗಳು ಮುಗಿಬಿದ್ದಿದ್ದವು. ನಿನ್ನೆ ಸಂಜೆಯ ಅಪ್ಪನ ತರಾತುರಿಯ ಹಿಂದಿನ ಮರ್ಮದ ಅರಿವಾಗುತ್ತಲೇ ಧರ್ಮಪ್ಪ ಬಿಳುಚಿಕೊಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT