ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಂಧ ಮರದ ವ್ಯಾಪಾರಿ

Last Updated 12 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬಹಳ ವರ್ಷಗಳ ಹಿಂದೆ ರಾಜನೊಬ್ಬ ತನ್ನ ಮಂತ್ರಿಯ ಜೊತೆ ವೇಷ ಮರೆಸಿಕೊಂಡು ರಾಜಧಾನಿಯನ್ನು ಸುತ್ತುತ್ತಿರಲು, ಅಲ್ಲೊಬ್ಬ ವ್ಯಕ್ತಿಯು ರಸ್ತೆ ಬದಿಯಲ್ಲಿ ಗಾಢವಾಗಿ ಏನನ್ನೋ ಯೋಚಿಸುತ್ತಾ ಕುಳಿತ್ತಿದ್ದ. ಅದನ್ನು ಕಂಡ ರಾಜನು ತನ್ನ ಮಂತ್ರಿಯ ಬಳಿ, ‘ಇವನು ಯಾರಿರಬಹುದು? ನನಗೇಕೊ ಇವನನ್ನು ನೋಡಿದರೆ ದುಷ್ಕರ್ಮಿಯೆಂದು ಅನ್ನಿಸುತ್ತಿದೆ. ಇವನ ಬಗ್ಗೆ ವಿಷಯ ಸಂಗ್ರಹಿಸಿ. ಅವನು ದುಷ್ಟ ಎಂದು ಕಂಡುಬಂದರೆ ಅವನಿಗೆ ಸರಿಯಾದ ಶಿಕ್ಷೆ ನೀಡಬೇಕು’ ಎಂದು ಆದೇಶಿಸಿದ.

ರಾಜನ ಮಾತುಗಳನ್ನು ಕೇಳಿ ಮಂತ್ರಿಯು ಸ್ವಲ್ಪ ಹೊತ್ತು ಯೋಚಿಸಿದ. ನಂತರ, ‘ಮಹಾರಾಜ, ನನಗೆ ಸ್ವಲ್ಪ ಕಾಲಾವಕಾಶ ಕೊಡಿ. ಅವನು ಯಾರೆಂಬುದನ್ನು ಪತ್ತೆ ಹಚ್ಚುತ್ತೇನೆ’ ಎಂದನು.

ಮಂತ್ರಿಯು ತನ್ನ ಗೂಢಚರರ ಸಹಾಯದಿಂದ ಆ ವ್ಯಕ್ತಿ ಯಾರೆಂಬುದನ್ನು ಪತ್ತೆ ಮಾಡಿದ. ಅವನು ಶ್ರಿಗಂಧ ಮರದ ವ್ಯಾಪಾರಿಯಾಗಿದ್ದ. ಮಂತ್ರಿಯು ರಾಜನ ಬಳಿಗೆ ಬಂದು, ‘ಮಹಾರಾಜ, ನಮ್ಮ ಅರಮನೆಗೆ ಶ್ರಿಗಂಧದ ಮರದಿಂದ ಮಾಡಿದ ಕೆಲವು ಪೀಠೋಪಕರಣಗಳು ಮತ್ತು ಶ್ರಿಗಂಧ ಮರದಿಂದ ತಯಾರಿಸಿದ ರಥದ ಅವಶ್ಯಕತೆ ಇದೆ. ಅವುಗಳನ್ನು ಮಾಡಿಸಲು ತಾವು ಅಪ್ಪಣೆ ನೀಡಬೇಕಾಗಿ ವಿನಂತಿ’ ಎಂದು ಗೌರವದಿಂದ ಕೇಳಿಕೊಂಡ.

ಅದಕ್ಕೆ ರಾಜನು, ‘ಧಾರಾಳವಾಗಿ ಮಾಡಿಸು. ನೀನು ಮಾಡಿಸುವುದೆಲ್ಲಾ ಒಳ್ಳೆಯದಕ್ಕಾಗಿ ಎಂಬ ನಂಬಿಕೆ ನನಗಿದೆ’ ಎಂದನು. ಮಂತ್ರಿಯ ಸಲಹೆಯಂತೆ ಶ್ರೀಗಂಧದಿಂದ ತಯಾರಿಸಿದ ಪೀಠೋಪಕರಣಗಳನ್ನು ಅರಮನೆಗಾಗಿಯೂ ಒಂದು ಸುಂದರವಾದ ರಥವನ್ನು ದೇವಸ್ಥಾನಕ್ಕಾಗಿಯೂ ಮಾಡಿಸಲಾಯಿತು.

ಪೀಠೋಪಕರಣಗಳನ್ನು ಮತ್ತು ರಥವನ್ನು ನೋಡಿ ರಾಜನಿಗೆ ತುಂಬಾ ಸಂತೋಷವಾಯಿತು. ಪೀಠೋಪಕರಣಗಳಿಗಾಗಿ ಸುಂದರವಾಗಿ ಮರಗೆಲಸವನ್ನು ಮಾಡಲಾಗಿತ್ತು. ರಥಕ್ಕೆ ಮಾಡಿದ್ದ ಮರಕೆತ್ತನೆಯ ಕೆಲಸ ಕೂಡ ಅದ್ಭುತವಾಗಿತ್ತು. ಅದು ನೋಡುಗರ ಮನಗೆದ್ದಿತ್ತು. ಇದಾಗಿ ಕೆಲವು ಕಾಲ ಸಂದಿತು. ನಂತರ ಒಂದು ದಿನ ರಾಜನು, ತನ್ನ ಮಂತ್ರಿಯೊಂದಿಗೆ ವೇಷ ಮರೆಸಿಕೊಂಡು ರಾಜಧಾನಿಯನ್ನು ಸುತ್ತಲು ಪುನಃ ಹೊರಟನು.

ಹಾಗೆ ಸುತ್ತಾಟಕ್ಕೆ ಹೋದಾಗ ರಾಜನಿಗೆ ಮತ್ತೆ ಅದೇ ವ್ಯಕ್ತಿ ಕಾಣಿಸಿದ. ರಾಜನು ಮಂತ್ರಿಯ ಬಳಿಯಲ್ಲಿ, ‘ಅಲ್ಲಿ ನೋಡು, ಹಿಂದೆ ಕಂಡಿದ್ದ ವ್ಯಕ್ತಿ ಇಂದು ಸಹ ಅಲ್ಲೇ ಇದ್ದಾನೆ. ಆದರೆ, ಈ ದಿನ ಅವನ ಬಗ್ಗೆ ನನ್ನಲ್ಲಿ ಕೆಟ್ಟ ಭಾವನೆ ಮೂಡುತ್ತಿಲ್ಲ’ ಎಂದನು. ಆಗ ಮಂತ್ರಿಯು ‘ಮಹಾರಾಜ, ನೀವು ಹೇಳುತ್ತಿರುವುದು ನಿಜ. ಇಂದು ಅವನ ಮುಖದಲ್ಲಿ ಕಾಣಿಸುತ್ತಿರುವ ಭಾವನೆ ಬೇರೆ ರೀತಿಯಲ್ಲಿದೆ’ ಎಂದನು.

ರಾಜನು, ‘ಮಂತ್ರಿ, ನನಗೆ ಆಶ್ಚರ್ಯವಾಗುತ್ತಿದೆ. ಆ ದಿನ ನಾನು ಇವನನ್ನು ಶಿಕ್ಷಿಸಬೇಕು ಅಂದುಕೊಂಡಿದ್ದೆ. ಆದರೆ ಇಂದು ಅವನು ನನಗೆ ಏಕೋ ನಿರಪರಾಧಿಯಂತೆ ಕಾಣುತ್ತಿದ್ದಾನೆ. ಇದಕ್ಕೆ ಕಾರಣ ಏನಿರಬಹುದು’ ಎಂದು ಪ್ರಶ್ನಿಸಿದ.

ಆಗ ಮಂತ್ರಿಯು ರಾಜನ ಬಳಿ, ‘ಪ್ರಭೂ, ಅರಮನೆಗೆ ತೆರಳಿದ ನಂತರ ಎಲ್ಲಾ ವಿಷಯ ತಿಳಿಸುತ್ತೇನೆ’ ಎಂದು ಹೇಳಿದ. ಅರಮನೆಗೆ ಬಂದ ನಂತರ ಮಂತ್ರಿಯು, ‘ಮಹಾರಾಜ, ಅವನೊಬ್ಬ ಶ್ರಿಗಂಧದ ಮರದ ವ್ಯಾಪಾರಿ. ಅಂದು ಅವನ ವ್ಯಾಪಾರ ಬಹಳ ಕಳೆಗುಂದಿತ್ತು. ಆದ್ದರಿಂದ ಅಂದು ಅವನು ಚಿಂತೆ ಮಾಡುತ್ತ ಕುಳಿತ್ತಿದ್ದ. ತನ್ನಲ್ಲಿ ಯಾರೂ ಶ್ರೀಗಂಧದ ಮರವನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಕೊರಗು ಅವನಲ್ಲಿತ್ತು. ರಾಜ ಏನಾದರೂ ಮರಣ ಹೊಂದಿದರೆ ನನ್ನಿಂದ ಶ್ರೀಗಂಧದ ಮರವನ್ನು ಅವರ ಪರಿಚಾರಕರು ಖರೀದಿ ಮಾಡಬಹುದು. ಅದನ್ನು ರಾಜನ ಮೃತದೇಹ ಸುಡಲು ಬಳಸಿಕೊಳ್ಳಬಹುದು ಎಂದು ಅವನು ತನ್ನ ಮನಸ್ಸಿನಲ್ಲಿ ನಿಮ್ಮ ಸಾವನ್ನು ಬಯಸುತ್ತಿದ್ದ. ಅವನ ಕೆಟ್ಟ ಭಾವನೆ ನಿಮ್ಮ ಮನಸ್ಸಿನ ಮೇಲೂ ಪರಿಣಾಮ ಬೀರಿತು. ಹೀಗಾಗಿ ಸ್ವಾಭಾವಿಕವಾಗಿಯೇ ನಿಮಗೆ ಅವನ ಬಗ್ಗೆ ದ್ವೇಷ ಉಂಟಾಯಿತು’ ಎಂದನು.

‘ಆದರೆ, ಈಗ ಏಕೆ ಅವನಲ್ಲಿ ಭಾವನೆಗಳು ಬದಲಾಗಿ ನನ್ನ ಬಗ್ಗೆ ದ್ವೇಷವಿಲ್ಲವಾಗಿದೆ’ ಎಂದು ರಾಜ ಮಂತ್ರಿಯಲ್ಲಿ ಪ್ರಶ್ನಿಸಿದ. ಅದಕ್ಕೆ ಮಂತ್ರಿಯು, ‘ಈಗ ನಾವು ಅವನ ಶ್ರೀಗಂಧದ ಮರಗಳನ್ನು ಪೀಠೋಪಕರಣಗಳಿಗೆ ಮತ್ತು ದೇವಸ್ಥಾನಕ್ಕೆ ರಥವನ್ನು ಮಾಡಿಸಲು ಅವನಿಂದ ಖರೀದಿಸಿದ್ದೇವೆ. ಒಳ್ಳೆಯ ಉದ್ದೇಶಕ್ಕಾಗಿ ಅವನಿಂದ ವಸ್ತುಗಳನ್ನು ತೆಗೆದುಕೊಂಡ ಕಾರಣ ಅವನ ವ್ಯಾಪಾರ ಉತ್ತಮ ಮಟ್ಟ ತಲುಪಿದೆ. ಅದರ ಪರಿಣಾಮವಾಗಿ ಅವನ ನಡವಳಿಕೆಯಲ್ಲಿ ಬದಲಾವಣೆ ಕಾಣುವಂತಾಗಿದೆ’ ಎಂದನು.

‘ಸರಿ, ಅದರಿಂದಾಗಿ ಅವನ ಬಗ್ಗೆ ನನ್ನಲ್ಲಿ ಕೂಡ ಒಳ್ಳೆಯ ಭಾವ ಮೂಡಲು ಕಾರಣ ಏನು’ ಎಂದು ಪ್ರಶ್ನಿಸಿದ ರಾಜ. ‘ಈಗ ಅವನು ದಿನವೂ ನಿಮ್ಮನ್ನು ವಂದಿಸುತ್ತಾ, ನೀವು ಇನ್ನೂ ಬಹುಕಾಲ ಬದುಕಿರುವಂತೆ ಆಗಲಿ ಎಂದು ಆಶಿಸುತ್ತಿದ್ದಾನೆ. ಅದರಿಂದಾಗಿ ನಿಮಗೂ ಅವನ ಬಗ್ಗೆ ದ್ವೇಷ ಭಾವನೆ ದೂರವಾಗಿದೆ’ ಎಂದನು ಮಂತ್ರಿ. ಆಗ ರಾಜನು ಮಂತ್ರಿಯಲ್ಲಿ ‘ಹಾಗಾದರೆ, ಯಾರಾದರೂ ನಮಗೆ ಕೇಡನ್ನು ಬಯಸುತ್ತಿದ್ದರೆ, ನಮಗೆ ಗೊತ್ತಿಲ್ಲದ ರೀತಿಯಲ್ಲಿ ಅವರ ಬಗ್ಗೆ ಕೆಟ್ಟ ಭಾವನೆ ನಮ್ಮಲ್ಲಿಯೂ ಉಂಟಾಗುತ್ತದೆ ಎಂಬುದೇ ನಿನ್ನ ಮಾತಿನ ಅರ್ಥ’ ಎಂದು ಕೇಳಿದ.

ಮಂತ್ರಿಯು, ‘ಹೌದು ಮಹಾಸ್ವಾಮಿ. ಅಷ್ಟೇ ಅಲ್ಲ, ನಾವು ಇತರರಿಗೆ ಶುಭವನ್ನು ಕೋರುತ್ತಿದ್ದರೆ ಅವರು ಸಹ ನಮ್ಮ ಒಳಿತನ್ನೇ ಬಯಸುತ್ತಾರೆ. ಈ ರೀತಿಯಲ್ಲೂ ನಮ್ಮ ಮನಸ್ಸು ಕೆಲಸ ಮಾಡುತ್ತದೆ’ ಎಂದನು. ರಾಜನಿಗೆ ಮಂತ್ರಿಯ ಮಾತಿನ ಒಳ ಅರ್ಥ ತಿಳಿಯಿತು. ತನ್ನ ರಾಜ್ಯದ ಪ್ರಜೆಗಳ ಕಷ್ಟ–ಸುಖಗಳನ್ನು ಕೇಳುತ್ತಾ ಆ ಕಷ್ಟಗಳಿಗೆ ಪರಿಹಾರ ಹುಡುಕುತ್ತಾ ಅವರ ಕಷ್ಟಗಳನ್ನು ದೂರ ಮಾಡಲು ಹೆಚ್ಚೆಚ್ಚು ನೆರವಾದನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT