ಮಂತ್ರಿಯ ಆಯ್ಕೆ

7

ಮಂತ್ರಿಯ ಆಯ್ಕೆ

Published:
Updated:
Deccan Herald

ಒಂ ದಾನೊಂದು ಕಾಲದಲ್ಲಿ ಸೋಮನಾಥಪುರ ಎಂಬ ರಾಜ್ಯದಲ್ಲಿ ಸೋಮೇಂದ್ರ ಎಂಬ ರಾಜನಿದ್ದ. ಅವನು ನ್ಯಾಯ, ನೀತಿ, ಧರ್ಮ ಮಾರ್ಗದಲ್ಲಿ ಬಹಳ ನಿಷ್ಠೆಯಿಂದ ರಾಜ್ಯವನ್ನಾಳುತ್ತಿದ್ದ. ಇದ್ದಕ್ಕಿದಂತೆ ಅವನ ಮಂತ್ರಿ ಅನಾರೋಗ್ಯದಿಂದ ಸಾವಿಗೀಡಾದ. ಆಗ ರಾಜ ತುರ್ತಾಗಿ ಹೊರರಾಜ್ಯದಲ್ಲಿ ತನಗೆ ಪರಿಚಯವಿದ್ದ ಯೋಗ್ಯ ವ್ಯಕ್ತಿಯೊಬ್ಬನನ್ನು ಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಂಡ.

ಮಂತ್ರಿ ಸ್ಥಾನಕ್ಕಾಗಿ ಬಕಪಕ್ಷಿಗಳಂತೆ ಕಾದು ಕುಳಿತಿದ್ದ ಅರಮನೆಯ ಇತರ ಅಧಿಕಾರಿಗಳಿಗೆ, ಪಂಡಿತರಿಗೆ, ವಿದ್ವಾಂಸರಿಗೆ ಇದರಿಂದ ಅಸಮಾಧಾನವಾಯಿತು. ಮಂತ್ರಿಯಂತಹ ಗೌರವ ಹುದ್ದೆಯನ್ನು ತಮಗೆ ನೀಡದೆ ಅಪಮಾನ ಮಾಡಲಾಗಿದೆಯೆಂದು ಕೋಪಗೊಂಡರು. ಇದನ್ನು ರಾಜ ಸೋಮೇಂದ್ರನಲ್ಲಿ ಪ್ರಶ್ನಿಸಿಯೇಬಿಟ್ಟರು. ‘ಪ್ರಭುಗಳೇ, ನಮ್ಮಲ್ಲಿಯೇ ಒಬ್ಬರಿಗಿಂತ ಒಬ್ಬರು ಬುದ್ಧಿವಂತರು ಇರಬೇಕಾದರೆ ಯಾರೋ ಹೊರಗಿನ ವ್ಯಕ್ತಿಯನ್ನು ಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಂಡು ನೀವು ನಮಗೆ ಅವಮಾನ ಮಾಡಿರುವಿರಿ. ಇದು ಸರಿಯೇ?’’ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.

 ಆಗ ರಾಜ ಸೋಮೇಂದ್ರ, ‘ನಾನು ಯಾರಿಗೂ ಅಪಮಾನ ಮಾಡಿಲ್ಲ. ನನ್ನ ರಾಜ್ಯಕ್ಕೆ ಅರ್ಹ ಮಂತ್ರಿಯನ್ನು ಆಯ್ಕೆ ಮಾಡಿಕೊಂಡಿದ್ದೇನಷ್ಟೆ. ಇದನ್ನು ನಿಮಗೆ ಮಾಡಿದ ಅಪಮಾನವೆಂದು ನೀವೇಕೆ ಭಾವಿಸಬೇಕು? ನಿಮ್ಮೆಲ್ಲರ ಬುದ್ಧಿವಂತಿಕೆಯನ್ನು ನಾನು ಬಲ್ಲೆ. ಈಗಲೂ ನಿಮಗೆ ನಾನೊಂದು ಪರೀಕ್ಷೆಯನ್ನು ಒಡ್ಡುತ್ತೇನೆ. ಇದರಲ್ಲಿ ನಿಮ್ಮಲ್ಲಿ ಯಾರೇ ಗೆದ್ದರೂ ಅವರನ್ನು ನನ್ನ ಮಂತ್ರಿಯನ್ನಾಗಿ ಮಾಡಿಕೊಳ್ಳುತ್ತೇನೆ. ಈಗ ನಾನು ನೇಮಿಸಿಕೊಂಡಿರುವ ಮಂತ್ರಿಯನ್ನು ತಕ್ಷಣವೇ ವಜಾಗೊಳಿಸುತ್ತೇನೆ...’ ಎಂದು ರಾಜ ಸೋಮೇಂದ್ರ ಎಲ್ಲರ ಮುಖಗಳನ್ನೂ ದಿಟ್ಟಿಸಿದಾಗ ಹಾಗೆಯೇ ಆಗಲೆಂಬಂತೆ ಎಲ್ಲರೂ ಗಂಭೀರವಾಗಿ ರಾಜ ಸೋಮೇಂದ್ರ ಒಡ್ಡುವ ಪರೀಕ್ಷೆಗೆ ಸಿದ್ಧರಾದರು. ಅವನು ಒಂದು ಕಥೆಯನ್ನು ಹೇಳಿದ. 

 ‘ನಾಲ್ವರು ವ್ಯಾಪಾರಿ ಗೆಳೆಯರು ಸೇರಿಕೊಂಡು ದಿನಸಿ ವ್ಯಾಪಾರ ಆರಂಭಿಸಿದರು. ದಿನಸಿ ತುಂಬಿದ ಉಗ್ರಾಣದಲ್ಲಿ ಇಲಿಗಳನ್ನು ನಿಯಂತ್ರಿಸಲು ದೊಡ್ಡ ಬೆಕ್ಕೊಂದನ್ನು ಕೊಂಡು ತಂದರು. ನಾಲ್ವರೂ ಸಮನಾಗಿ ಆ ಬೆಕ್ಕನ್ನು ನೋಡಿಕೊಳ್ಳಬೇಕೆಂಬ ಷರತ್ತಿನೊಡನೆ ನಾಲ್ವರೂ ಒಂದೊಂದು ಕಾಲುಗಳ ರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಂಡರು. ಒಂದು ದಿನ ಬೆಕ್ಕಿನ ಒಂದು ಕಾಲು ಮುರಿಯಿತು. ಆ ಕಾಲಿನ ಜವಾಬ್ದಾರಿಯನ್ನು ಹೊಂದಿದ್ದವನು ಅದಕ್ಕೆ ಔಷಧಿ ಹಚ್ಚಿ ಬಟ್ಟೆ ಕಟ್ಟಿದ. ಒಂದೆರಡು ದಿನ ಕಳೆಯಿತು. ಒಮ್ಮೆ ಬೆಕ್ಕು ಇಲಿಯೊಂದನ್ನು ಅಟ್ಟಿಸಿಕೊಂಡು ಹೋಗುವಾಗ ಉಗ್ರಾಣದಲ್ಲಿ ಉರಿಯುತ್ತಿದ್ದ ದೀಪವನ್ನು ಉರುಳಿಸಿತು. ಬೆಕ್ಕಿನ ಕಾಲಿಗೆ ಕಟ್ಟಿದ್ದ ಬಟ್ಟೆಗೆ ದೀಪದ ಬೆಂಕಿ ತಗುಲಿತು. ಅದು ಧಗಧಗನೆ ಉರಿಯತೊಡಗಿತು. ಗಾಬರಿಯಿಂದ ಬೆಕ್ಕು ಉಗ್ರಾಣದೊಳಗೆಲ್ಲಾ ಓಡಾಡಿತು. ಇಡೀ ಉಗ್ರಾಣ ಬೆಂಕಿಗೆ ಆಹುತಿಯಾಯಿತು.

 ...ಆಗ ಬೆಕ್ಕಿನ ಮುರಿದ ಕಾಲಿನ ಜವಾಬ್ದಾರಿ ಹೊತ್ತಿದ್ದವನಿಗೆ ಉಳಿದ ಮೂವರೂ ಗೆಳೆಯರು ನಿನ್ನ ಕುಂಟು ಕಾಲಿನಿಂದಾಗಿ ಅದಕ್ಕೆ ಕಟ್ಟಿದ್ದ ಬಟ್ಟೆ ಹೊತ್ತಿಕೊಂಡು ಬೆಕ್ಕು ಉಗ್ರಾಣದಲ್ಲೆಲ್ಲಾ ಓಡಾಡಿದ್ದರಿಂದ ಇಷ್ಟೆಲ್ಲ ಅನಾಹುತವಾಗಿದೆ. ಆದ್ದರಿಂದ ಈ ಎಲ್ಲಾ ನಷ್ಟವನ್ನು ಆ ಕುಂಟು ಕಾಲಿನ ಯಜಮಾನನಾದ ನೀನು ಕಟ್ಟಿಕೊಡಬೇಕೆಂದು ಅವನನ್ನು ದಬಾಯಿಸಿದರು. ಆದರೆ ಅವನು ತನ್ನದೇನೂ ತಪ್ಪಿಲ್ಲ. ಹಾಗಾಗಿ ತಾನು ನಷ್ಟ ಕಟ್ಟಿಕೊಡುವುದಿಲ್ಲವೆಂದ. ನಾಲ್ವರೂ ವ್ಯಾಪಾರಿ ಗೆಳೆಯರು ಆ ರಾಜ್ಯದ ರಾಜನಿಗೆ ದೂರು ಕೊಟ್ಟರು. ಆಗ ರಾಜ ದೂರನ್ನು ಪರಿಶೀಲಿಸಿ ತೀರ್ಪು ನೀಡಲು ತನ್ನ ಚಾಣಾಕ್ಷ ಮಂತ್ರಿಗೆ ಹೇಳಿದ.’

ಇಷ್ಟು ಕಥೆಯನ್ನು ಹೇಳಿದ ರಾಜ. ‘ಈಗ ನೀವುಗಳೇ ಆ ಚಾಣಾಕ್ಷ ಮಂತ್ರಿಗಳೆಂದು ತಿಳಿದು ತೀರ್ಪು ನೀಡಿರಿ. ಸೂಕ್ತ ತೀರ್ಪು ಕೊಟ್ಟವರನ್ನು ತಕ್ಷಣವೇ ನನ್ನ ಮಂತ್ರಿಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ತೀರ್ಪಿನ ಫಲಿತಾಂಶಕ್ಕಾಗಿ ಕಾದ.

 ‘ಬೆಕ್ಕಿನ ಮುರಿದ ಕಾಲಿಗೆ ಬಟ್ಟೆ ಕಟ್ಟಿದ್ದರಿಂದಲೇ ಅದು ಹೊತ್ತಿ ಉರಿದು ಉಗ್ರಾಣ ಸುಟ್ಟು ಧಾನ್ಯದ ದಾಸ್ತಾನು ನಾಶವಾಗಿದೆ. ಹಾಗಾಗಿ ಆ ಕಾಲಿನ ಜವಾಬ್ದಾರಿ ಹೊತ್ತಿದ್ದವನೇ ಉಳಿದ ಮೂವರಿಗೆ ನಷ್ಟ ತುಂಬಿಕೊಡಬೇಕು’’ ಎಂಬ ತೀರ್ಪನ್ನೇ ಎಲ್ಲರೂ ಕೊಟ್ಟರು. ಆದರೆ ವಿವೇಕಿಯಾದ ರಾಜ ಸೋಮೇಂದ್ರ ಇದನ್ನು ಒಪ್ಪಲಿಲ್ಲ. ಕೂಡಲೇ ತಾನು ಈಗಾಗಲೇ ಮಂತ್ರಿಯಾಗಿ ನೇಮಿಸಿಕೊಂಡು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ತನ್ನ ಮಂತ್ರಿಯತ್ತ ದೃಷ್ಟಿಸಿ ‘ನೀವೇನು ತೀರ್ಪು ನೀಡುವಿರಿ?’ ಎಂದು ಕೇಳಿದ. ಪ್ರಭುಗಳ ಅಪ್ಪಣೆಗಾಗಿಯೇ ಕಾದಿದ್ದ ಅವನು ಹೇಳಿದ-

 ‘ಬೆಕ್ಕಿನ ಮುರಿದ ಕಾಲಿಗೆ ಕಟ್ಟಿದ ಬಟ್ಟೆಯಿಂದಾಗಿ ಉಗ್ರಾಣಕ್ಕೆ ಬೆಂಕಿ ಬಿದ್ದದ್ದೇನೋ ಸತ್ಯ. ಆದರೆ ನಿಜವಾಗಿ ಆ ಕುಂಟು ಕಾಲಿಗೆ ಅತ್ತಿತ್ತ ಓಡಾಡಲು ಸಾಧ್ಯವೇ ಇರಲಿಲ್ಲ. ಅದನ್ನು ಉಗ್ರಾಣದೊಳಗೆಲ್ಲಾ ಕರೆದೊಯ್ದದ್ದು ಉಳಿದ ಮೂರು ಕಾಲುಗಳು. ಅವುಗಳು ಓಡಾಡಿದ್ದರಿಂದಲೇ ಎಲ್ಲೆಡೆ ಬೆಂಕಿ ಹರಡಿ ಈ ದುರಂತ ಸಂಭವಿಸಿದ್ದು. ಆದ್ದರಿಂದ ಈ ಮೂರು ಕಾಲುಗಳ ಜವಾಬ್ದಾರಿ ಹೊತ್ತಿದ್ದ ಮೂವರು ವ್ಯಾಪಾರಿಗಳೂ ಕುಂಟು ಕಾಲಿನ ಜವಾಬ್ದಾರಿ ಹೊಂದಿದ್ದವನ ನಷ್ಟವನ್ನು ಕಟ್ಟಿಕೊಡಬೇಕು’ ಎಂದ. ರಾಜ ಸೋಮೇಂದ್ರನ ಆಯ್ಕೆಯ ಮಂತ್ರಿಯ ಬುದ್ಧಿವಂತಿಕೆಗೆ ಎಲ್ಲರೂ ತಲೆದೂಗಿ ಒಮ್ಮೆಗೇ ಜೈಕಾರ ಹಾಕಿದರು. 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !