ಶುಕ್ರವಾರ, ಸೆಪ್ಟೆಂಬರ್ 24, 2021
21 °C

3 ಗಪದ್ಯಗಳು

ಗಿರಿಧರ್‌ ಖಾಸನೀಸ್‌ Updated:

ಅಕ್ಷರ ಗಾತ್ರ : | |

Prajavani

ಗೋಧೂಳಿ

ನಿಶ್ಶಬ್ದವಾಗಿ ಕತ್ತಲೆ ಕೋಣೆ ಬಿಟ್ಟು ಮಸುಕಾದ ಮಂಜಿನಲ್ಲಿ ಒಬ್ಬರ ಹಿಂದೆ ಒಬ್ಬರು ಮೆಟ್ಟಿಲಿಳಿದು ತಿರುಗುವ ಭೂಮಿಯ ತುತ್ತತುದಿ ನಿಲ್ದಾಣ ತಲುಪಿದಾಗ ಗೋಧೂಳಿ ಸಮಯ.

ಮಂಗನ ಬಾಲದ ಕೊನೆ ಕೂದಲೆಳೆಯಂಥ ಮೆತ್ತನೆ ಮಣ್ಣಲ್ಲಿ ಮೈಚಾಚಿ ಮೇಲೆ ನೋಡಿದರೆ ಬಾನು ತಿಳಿಗೆಂಪು. ಮೋಡದ ಹಿಂದೆ ಬೆಳ್ಳಿ ಚಂದಿರ, ಹಕ್ಕಿಗಳಂತೆ ಹಾರಾಡುವ ತಾರೆಗಳ ಕಲರವ. ಕಣ್ಮುಚ್ಚಿದರೆ ಇಬ್ಬನಿಯ ತಂಪು ಕಾಡುಮಲ್ಲಿಗೆ ಕಂಪು.

ರಾತ್ರಿ ಎರಡಾಯಿತು

ಪರದೆ ಸರಿದಾಗ ಮತ್ತದೇ ಆಟ – ಏಳುವುದು ಬೀಳುವುದು ಹಾರುವುದು ಹತ್ತಿಳಿಯುವುದು, ಅಂತ್ಯಕ್ಕೆ ಕಾಯುತ್ತ ಕೂಡುವುದು.

ಗೋಡೋ ಬರಲಿಲ್ಲ. ಸರಯೂ ಸೇರಿದರೂ ರಾಮನ ಸಂಕಟಕ್ಕೆ ಕೊನೆಯಿಲ್ಲ. ಯಾರಿಗೆ ಬೇಕಿತ್ತು ಈ ರಾಮಾಯಣ ಎಂದು ಕೊರಗಿದ ವಾಲ್ಮೀಕಿಗೆ ತಲೆನೋವು ತಪ್ಪಲಿಲ್ಲ. ಯುದ್ಧ ಮುಗಿಯುವ ಸೂಚನೆ ಇಲ್ಲ. ಬಿರುಗಾಳಿಯಂತೆ ಗಿರಗಿರ ಸುತ್ತಿದರೂ ಪಾತಕಿಯ ಮುಖವಾಡ ಮಗುಚಿ ಬೀಳಲೇ ಇಲ್ಲ.

 ರಾತ್ರಿ ಎರಡಾಯಿತು. ಬರಡಾದ ಕಥೆಗೆ ನಾಂದಿ ಹಾಡುವರೆಂದು? ನೀನಾದರೂ ಬಲಕ್ಕೆ ತಿರುಗಿ ಎರಡು ಘಳಿಗೆ ಮಲಗು, ಮಗು. ಕನಸು ಬಿದ್ದರೆ ಬೆಚ್ಚಬೇಡ. ಹಾಗಂತ ಕನಸು
ಕಾಣುವುದ ಬಿಡಬೇಡ.

ಫ್ರಾಯ್ಡನ ಮನೆ

ದಯವಿಟ್ಟು ಒಳಗೆ ಬನ್ನಿ, ಆಸೀನರಾಗಿ. ಸುಕ್ಕಾದ ಪರದೆ, ಸೀಳುಬಿಟ್ಟ ಕನ್ನಡಿ, ಹರಿದ ಬೆದರುಗೊಂಬೆಗಳ ಸಾಲುಗಳನ್ನು ನೋಡಿ ಹೆದರಬೇಡಿ, ನನ್ನ ಮನೆ ಇರುವುದೇ ಹೀಗೆ. ಕ್ಷುದ್ರರು ಇಲ್ಲಿ ಬಂದು ಕರುಬಿದ್ದಾರೆ. ಸಂತರು ಬೆತ್ತಲಾಗಿ ನರ್ತಿಸಿದ್ದಾರೆ. ದೇವದೂತರು ದಲ್ಲಾಳಿಗಳಂತೆ ವರ್ತಿಸಿದ್ದಾರೆ. ಆದರೆ ನೀವು ಹೆದರಬೇಕಿಲ್ಲ.

ಸಾವಕಾಶವಾಗಿ ನಿಮ್ಮ ಕನಸುಗಳ ಬಿಚ್ಚಿಡಿ. ಬಚ್ಚಿಟ್ಟ ಪಾಪ, ಮುಚ್ಚಿಟ್ಟ ಅಪರಾಧ, ಅರ್ಥಹೀನ ತಂತ್ರ, ಕುತಂತ್ರ, ಆತಂಕಗಳನ್ನು ನಿರ್ಭೀತರಾಗಿ ಹರಡಿ. ಹಾಗೆ ನೋಡಿದರೆ, ನಿಮ್ಮ ಮತ್ತು ನನ್ನ ಕಥೆ ಒಂದೇಯ. ಈ ಪಾಪದ ಕೋಣೆಯಲ್ಲಿ ಸಂಧಿಸಲು ಬಂದಿವೆ ಅಷ್ಟೇ. ವಿಧಿಯ ಬರಹವೆನ್ನಿ, ಅದೃಷ್ಟವೆನ್ನಿ, ಅನಿರೀಕ್ಷಿತ ಅವಕಾಶವೆನ್ನಿ. ಮುಂದೊಂದು ದಿನ ನಾವಿಬ್ಬರು ಇಲ್ಲಿ, ಈ ಕತ್ತಲೆ ಕೋಣೆಯಲ್ಲಿ ಭೇಟಿಯಾದ ನೆನಪು ಹೊರನಾಡ ಹಸಿರು ದಿಬ್ಬಣದಡಿ ಮತ್ತೊಬ್ಬನಾರೋ ಕಂಡ ಕನಸು ಆಗಬಹುದಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.