ಮೊಲ ಮಾಡಿದ ಕಿತಾಪತಿ

ಸೋಮವಾರ, ಮೇ 27, 2019
22 °C

ಮೊಲ ಮಾಡಿದ ಕಿತಾಪತಿ

Published:
Updated:
Prajavani

ಒಂದು ಕಾಡಿನಲ್ಲಿ ಒಂದು ಮೊಲ ವಾಸವಾಗಿತ್ತು. ಅದು ಏನಾದರೂ ಕಿತಾಪತಿ ಮಾಡುತ್ತಲೇ ಇರುತ್ತಿತ್ತು. ಬಹಳ ತುಂಟ ಮೊಲ ಎಂದು ಹೆಸರಾಗಿತ್ತು. ಅದರ ತುಂಟತನದಿಂದ ಒಮ್ಮೊಮ್ಮೆ ಇತರ ಪ್ರಾಣಿಗಳಿಗೆ ತೊಂದರೆ ಕೂಡ ಆಗುತ್ತಿತ್ತು. ಅದಕ್ಕಾಗಿ ಅದರ ಉಸಾಬರಿಯೇ ಬೇಡ ಎಂದು ಹಲವಾರು ಪ್ರಾಣಿಗಳು ಅದರಿಂದ ದೂರ ಉಳಿಯಲು ಪ್ರಯತ್ನ ಮಾಡುತ್ತಿದ್ದವು.

ಮೊಲ ಒಮ್ಮೆ ಹೀಗೆಯೇ ಸುತ್ತಾಡುತ್ತ ಒಂದು ಕೆರೆಯ ಹತ್ತಿರ ಬಂತು. ಕೆರೆಯಲ್ಲಿ ಮೀನುಗಳು ಈಜಾಡುತ್ತಿರುವುದನ್ನು ತದೇಕಚಿತ್ತದಿಂದ ನೋಡಹತ್ತಿತು. ಅವು ಲೀಲಾಜಾಲವಾಗಿ ಈಜುತ್ತಿರುವುದನ್ನು ನೋಡಿ ತಾನು ಸಹ ಅವುಗಳಂತೆಯೇ ಈಜಬೇಕು ಎಂದು ಬಯಸಿತು. ತನ್ನ ಬಯಕೆಯನ್ನು ಅದು ಕೆರೆಯಲ್ಲಿದ್ದ ಮೀನುಗಳಿಗೆ ಹೇಳಿತು. ಮೀನುಗಳು ನಕ್ಕು ಮುಂದೆ ಸಾಗಿದವು. ಮೊಲ ಪದೇ ಪದೇ ವಿನಂತಿ ಮಾಡಿಕೊಂಡರೂ ಮೀನುಗಳು ಅದನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಮೊಲ ನಿರಾಸೆಯಿಂದ ತನ್ನ ಮನೆಯ ದಾರಿ ಹಿಡಿಯಿತು. ಆದರೂ ಅದರ ಮನಸ್ಸಿನಿಂದ ಈಜುವ ಬಯಕೆ ಮಾತ್ರ ದೂರವಾಗಲಿಲ್ಲ.

ಮಾರನೇ ದಿನ ಮತ್ತೆ ಬಂದು ತನಗೆ ಈಜು ಕಲಿಸಬೇಕೆಂದು ಮೀನುಗಳಿಗೆ ಗೋಳು ಹೊಯ್ದುಕೊಳ್ಳಲಾರಂಭಿಸಿತು. ಆಗ ಅವುಗಳಲ್ಲಿ ದೊಡ್ಡ ಮೀನೊಂದು ‘ನಿನಗೆ ಈಜು ಕಲಿಸಲು ಸಾಧ್ಯವಿಲ್ಲ, ಈಜಲು ಮುಖ್ಯವಾಗಿ ಈಜು ರೆಕ್ಕೆಗಳು ಬೇಕಾಗುತ್ತವೆ; ಅದು ನಿನಗಿಲ್ಲ. ಹಾಗಾಗಿ ನೀನು ಈಜು ಕಲಿಯಲು ಸಾಧ್ಯವಿಲ್ಲ’ ಎಂದಿತು. ಅದನ್ನು ಕೇಳಿ ಮೊಲಕ್ಕೆ ತುಂಬಾ ಬೇಸರವಾಯಿತು. ಅದು ‘ನಾನು ಈಜು ರೆಕ್ಕೆಗಳನ್ನು ಅಂಟಿಸಿಕೊಂಡು ಬರುತ್ತೇನೆ, ನೀವೆಲ್ಲ ಸೇರಿ ನನಗೆ ಈಜು ಕಲಿಸಿಕೊಡಿ’ ಎಂದು ಮತ್ತೆ ಗೋಗರೆಯಿತು. ಮೊಲದ ಉಪಟಳ ತಾಳಲಾರದೆ ಮೀನುಗಳು ಅದಕ್ಕೆ ಈಜು ಕಲಿಸಲು ಒಪ್ಪಿಕೊಂಡವು.

ಇದರಿಂದ ಮೊಲಕ್ಕೆ ಬಹಳ ಖುಷಿಯಾಯ್ತು. ಅದು ಪೇಟೆಗೆ ಹೋಗಿ ಫೆವಿಕಾಲ್ ಮತ್ತು ರೆಕ್ಕೆಗೆ ಬೇಕಾದ ವಸ್ತುಗಳನ್ನು ತಂದಿತು. ತನ್ನ ಸ್ನೇಹಿತರ ಸಹಾಯ ಪಡೆದು ತನ್ನ ದೇಹಕ್ಕೆ ಈಜು ರೆಕ್ಕೆಯಂತಹ ಆಕೃತಿಯನ್ನು ಅಂಟಿಸಿಕೊಂಡಿತು. ಕೆರೆಯ ಬಳಿಗೆ ಹೋಗಿ ಮೀನುಗಳಿಗೆ ಇದನ್ನು ತೋರಿಸಿತು. ಈಜಲು ಆತುರ ತೋರಿಸಿತು. ಮೀನುಗಳು ಕೊಟ್ಟ ಮಾತಿನಂತೆ ಅದಕ್ಕೆ ಈಜು ಕಲಿಸಲು ಮುಂದಾದವು. ಮೊದಮೊದಲು ಈಜುವಾಗ ಮೊಲಕ್ಕೆ ಬಹಳ ಖುಷಿಯಾಯಿತು. ಎರಡು ಮೂರು ಸುತ್ತು ಹಾಕಿದ ಮೇಲೆ ನೀರು ತಾಗಿ ರೆಕ್ಕೆಯ ಫೆವಿಕಾಲ್ ಕಿತ್ತುಬಂತು. ರೆಕ್ಕೆ ಕಿತ್ತಮೇಲೆ ಮೊಲದ ಸಮತೋಲನ ತಪ್ಪಿತು. ಅದು ಕೆರೆಯಲ್ಲಿ ಮುಳುಗತೊಡಗಿತು. ಮೀನುಗಳಿಗೆ ಏನು ಮಾಡಲೂ ಸಾಧ್ಯವಾಗಲಿಲ್ಲ. ನೋಡ ನೋಡುತ್ತಿರುವಂತೆಯೇ ಮೊಲ ನೀರಿನಲ್ಲಿ ಮುಳುಗಿ ಸತ್ತುಹೋಯಿತು. ಅದು ತನ್ನ ಕೈಯಾರೆ ತನ್ನ ಪ್ರಾಣ ಕಳೆದುಕೊಂಡಿತು.

ನೀತಿ: ಒಮ್ಮೊಮ್ಮೆ ತುಂಟಾಟಗಳು ನಮ್ಮ ಪ್ರಾಣಕ್ಕೇ ಕುತ್ತು ತರಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !