ಪ್ಯಾಂಫ್ಲೆಟ್!

7
ಕಥೆ

ಪ್ಯಾಂಫ್ಲೆಟ್!

Published:
Updated:

ಅದು ಹೂ ಬಿಡುವ ಕಾಲ. ಕ್ಲಾಸ್‌ರೂಮಿಗೆ ಹೊಂದಿಕೊಂಡಿದ್ದ ಹಾಸ್ಟೆಲ್ ಸುತ್ತಲೂ ನಾನಾ ರೀತಿಯ ಗಿಡಗಳಲ್ಲಿ ಮೈ ತುಂಬ ಹೂವು. ಅದರಲ್ಲೂ ಸ್ವಲ್ಪ ಎತ್ತರಕ್ಕೆ ಬೆಳೆದಿದ್ದ ಗುಲ್ ಮೊಹರ್, ಶಾಲ್ಮಲಿ ಗಿಡಗಳಂತೂ ತಲೆ ತುಂಬ ರಂಗಿನ ಹೂ ಮುಡಿದು, ನಡುವೆ ರಿಬ್ಬನ್ ಕಟ್ಟಿಕೊಂಡ ಹುಂಜದಂತೆ ಭಾಸವಾಗುತಿದ್ದವು. ಅತ್ತ ಹಾದು ಹೋಗುವವರನ್ನು ತಮ್ಮತ್ತ ಆಕರ್ಷಿಸಿ ಹಾಗೇ ನಿಂತು ನೋಡುವಂತೆ ಮಾಡಿವೆ. ಎಂಥವರ ಎದೆಯಲ್ಲೂ ರಂಗೋಲಿ ಬಿಡಿಸುವಂತಿವೆ ಕಾಲ. ನಾಲ್ಕು ಗೋಡೆಯ ನಡುವಣ ಈ ಪೊಯೆಟ್ರಿ ಕ್ಲಾಸಿನಲ್ಲಿ ಪ್ರೊಫೆಸರ್ ನಿರ್ಗುಣಾನಂದರು ಪಾಠ ಮಾಡುತ್ತ ‘ಪೊಯೆಟ್ರಿ ಈಸ್ ಲೈಕ್ ಎ ಫ್ಲವರ್, ದಟ್ ಬ್ಲಸ್ಸಮ್ಸ್ ಇನ್ ದ ಹಾರ್ಟ್ಸ್ ಆಫ್ ಅ ಪೊಯೆಟ್...’ ಅಂತ ಶುರುವಿಟ್ಟಿದ್ದೇ ತಡ, ಅದೇ ಬೋರಿಂಗ್ ಉಪಮೆಗಳಿಂದ ಬೇಸತ್ತ ಅರುಣ್, ಕೊಂಚ ಕಿಟಕಿಯಾಚೆ ಕುಕ್ಕುವ ರಿಬ್ಬನ್‌ಪೇಟೆಯಂಥ ಗಿಡಗಳತ್ತ ಕಣ್ಣು ನೆಟ್ಟ. ತನ್ನ ಕಿವಿಗಳನ್ನು ಆದಷ್ಟು ನಿರ್ಗುಣಾನಂದರ ದನಿಯಿಂದ ಕಾಪಾಡಿಕೊಳ್ಳಲು ತನ್ನ ತೋರು ಬೆರಳುಗಳನ್ನು ಕಿವಿಗೆ ತುರುಕಿಕೊಂಡು ಗದ್ದಕ್ಕೆ ಕೈ ಆನಿಸಿ ಕೂತ. ಹೂ ಸುವಾಸನೆ ಬಿಡುವ ಬೆಳಗಿನ ಆ ಗಳಿಗೆ ನಮ್ಮೊಳಗೆ ಮೂಡಿಸುವ ಉಲ್ಲಾಸಕರ ಅಥವಾ ತಾಜಾತನದಂತೆ, ಒಂದು ಒಳ್ಳೆಯ ಕವಿತೆ ನಮ್ಮೊಳಗೆ ಒಂದು ಭಾವಲೋಕವನ್ನೇ ಸೃಷ್ಟಿಸಿಬಿಡುತ್ತದೆ ಎಂದು ಮುಂದುವರೆಸಿದ್ದ ಲೆಕ್ಚರರ್ ಅಭಿಪ್ರಾಯಕ್ಕೆ ಈತ ಮನಸಿನಲ್ಲಿಯೇ, ಇದ್ರಲ್ಲಿ ಒಂದು ನಿನ್ನ ಭ್ರಮೆ, ಮತ್ತೊಂದು ವಾಸ್ತವ ಅಂದುಕೊಂಡ. ಹೀಗೆ ಅನ್ಯಮನಸ್ಕನಾಗಿ ಕ್ಲಾಸಲ್ಲಿ ಕೂತವನ ತಲೆಯ ಲೈಬ್ರರಿ ತುಂಬಾ ಸಾವಿರ ಪುಟದ ಆಲೋಚನೆ.

ಬೆಳಗಿನ ಕ್ಲಾಸುಗಳಿಗೆ ಸಹಪಾಠಿ ಹುಡುಗಿಯರು ಮುಡಿದು ಬರುತ್ತಿದ್ದ ಮಲ್ಲಿಗೆಯ ಕಂಪು ಇಡೀ ತರಗತಿಯನ್ನು ಆವರಿಸಿ ತನ್ಮಯರನ್ನಾಗಿಸುತ್ತಿದ್ದ ಸಂಗತಿ ಎಲ್ಲರ ಅನುಭವಕ್ಕೆ ಬಂದಿದ್ದರೂ, ಅದನ್ನು ಕವಿತೆಗೆ ಹೋಲಿಸಿ, ವಿವರಿಸಲು ಶುರುವಿಟ್ಟ ಕ್ಷಣ ತನ್ನ ರೂಪಕತೆಯನ್ನು ಕಳೆದುಕೊಳ್ಳುತ್ತದೆ ಎಂಬುದು ಅರುಣನ ನಂಬಿಕೆ. ಮನುಷ್ಯ ಲೋಕದ ಅನುಭವ ಆಯಾ ಕಾಲಮಾನದಲ್ಲಿ ಅವರೇ ಕೊಟ್ಟುಕೊಂಡ ಅರ್ಥಗಳನ್ನಾಧರಿಸಿರುತ್ತದೆ ಎಂಬುದು ಈತನ ವಾದ. ಹೀಗಾಗಿ ಮನುಷ್ಯ, ತನ್ನ ಸುತ್ತಲ ದುರ್ನಾತಕ್ಕೆ ಪ್ರತಿಕ್ರಿಯಿಸುವ ವೇಗಕ್ಕೂ ಮತ್ತು ಸುವಾಸನೆಗೆ ಪ್ರತಿಕ್ರಿಯಿಸುವ ರೀತಿಗೂ ಭಿನ್ನತೆಯಿದೆಯೆಂಬುದು ಅರುಣನ ಹೈಪೊಥಿಸಿಸ್. ಹುಚ್ಚನೆನಿಸುವಷ್ಟು ವಿಚಿತ್ರವಾಗಿ ಕಲ್ಪಿಸಿಕೊಳ್ಳುವ, ಒಮ್ಮೆ ಎ ಗುಡ್ ಡಿಬೇಟರ್, ಇನ್ನೊಮ್ಮೆ ಇವನಿಗೇನು ಮಾತೇ ಬರಲ್ವಾ ಅನ್ನಿಸುವಷ್ಟು ಮೂಕನಾಗಿಬಿಡುತ್ತಿದ್ದ ಅರುಣನದು ಬಸವನ ಹುಳುವಿನ ಸ್ವಭಾವ. ಕಾವ್ಯ, ಪೇಂಟಿಂಗ್, ಮಾಡರ್ನಿಸಂ ಅಂತ ಏನೇನೋ ಮಾತನಾಡಿ ಎದುರಾಳಿಯ ಸೈಕೊ- ಅನಾಲಿಸಿಸ್‌ಗೆ ಇಳಿದುಬಿಡುತ್ತಿದ್ದ. ಒಮ್ಮೊಮ್ಮೆ ಪುಕ್ಕಲನಂತೆ ವರ್ತಿಸುತ್ತಿದ್ದ ಈತನಿಗೆ ಮೂಗಿನ ಮೇಲೆ ತಾತ್ವಿಕ ಸಿಟ್ಟು ಬೇರೆ. ಇವು ಈ ಕ್ಯಾಂಪಸ್‌ನ ಈತನ ಕೊನೆಯ ದಿನಗಳು. ಮತ್ತು ಇವನಿಗಿರುವ ಏಕೈಕ ಗೆಳೆಯ ಚಂದ್ರಕಾಂತ. ಆತನೋ ಒಂದು ವಿದ್ಯಾರ್ಥಿ ಸಂಘಟನೆಯ ಸದಸ್ಯನಲ್ಲದೆ ಈ ಕ್ಯಾಂಪಸ್ಸಿನಲ್ಲಿ ಆ ಸಂಘಟನೆಯ ಘಟಕಕ್ಕೆ ಕಾರ್ಯದರ್ಶಿ ಬೇರೆ. ಅರುಣ್ ಆ ಸಂಘಟನೆಯ ಸದಸ್ಯ. ಸೆಮಿಸ್ಟರ್ ಅಡ್ಮಿಶನ್ ಆಗುವಾಗ ಮತ್ತು ಪರೀಕ್ಷೆ ಸಮಯದಲ್ಲಷ್ಟೇ ಗ್ರಂಥಾಲಯಕ್ಕೆ ಬರುತ್ತಿದ್ದ ಈ ಅರುಣ್- ಚಂದ್ರಕಾಂತರು, ತಾವು ಲೈಬ್ರರಿಯ ಇತಿಹಾಸ ಪುಸ್ತಕಗಳಲ್ಲಿ ಕೈಯಿಟ್ಟ ಪ್ರತೀ ಸಾರಿ ಒಂದು ಕ್ಷಣ ರಕ್ತ ತಾಕಿದಂತಾಗುತ್ತೆ ಅನ್ನೋರು. ಚಂದ್ರಕಾಂತ್ ಅಂತೂ ತಥ್ ಎಂದು ದೂಳಿನ ಸಹವಾಸ, ಅಕಾಡೆಮಿಕ್ ಓದು ತನ್ನ ಜೀವ ಹಿಂಡುತಿದೆ ಅಂದುಕೊಳ್ಳುತ್ತಿದ್ದ. ಹಾಗೆ ನೋಡಿದರೆ ಈತ ತನ್ನ ಹಳ್ಳಿಯನ್ನು ಪ್ರೀತಿಸುವಷ್ಟು ಈ ನಗರಗಳನ್ನು ಇಷ್ಟುಪಡುತ್ತಿರಲಿಲ್ಲ. ಹಳ್ಳಿಯಲ್ಲಿರೊ ವಾರಗೆಯ ದೋಸ್ತ್ರು, ಕಾಡಜ್ಜ ಈತನನ್ನು ಓದಿಕೊಂಡವನೆಂದು ತೋರುವ ಅಕ್ಕರೆ ಅದ್ಯಾವುದೂ ಈ ಸೂಟುಧಾರಿ ಒಣಗತ್ತಿನ ಸ್ಟೂಡೆಂಟ್ಸ್ ಮಸ್ಟ್ ರೆಸ್ಪೆಕ್ಟ್ ಟೀಚರ್ಸ್ ಅನ್ನುವ ಪ್ರೋಫೆಸರ್‌ಗಳಲ್ಲಿ ಎಂದೂ ಕಂಡಿದ್ದಿಲ್ಲ.

ಇಂಥ ಚಂದ್ರಕಾಂತ್, ಬೆಳಗಿನ ಕ್ಲಾಸ್ ತಪ್ಪಿಸಿ, 12 ಗಂಟೆಯವರೆಗೂ ಗಡದ್ದು ನಿದ್ದೆ ಹೊಡೆದು, ಮಧ್ಯಾಹ್ನ ಊಟ ಮಾಡಿ, ಹಾಗೇ ಕ್ಯಾಂಪಸ್ಸಿನ ಬಸ್ ಸ್ಟಾಪಿಗೆ ಬಂದ. ಒಮ್ಮೆ ಅರುಣ್‌ನನ್ನು ಕರೆಯೋದು ಅಂತ ಯೋಚಿಸಿದ. ಆದರೆ ದಾರಿಯುದ್ದ ಕಣ್ಸೆಳೆವ ಹೂ ಎಲೆಗಳ ಚಿತ್ರ ಕಣ್ಣಲ್ಲಿ ಒತ್ತಿಕೊಳ್ಳುತ್ತಾ ನಡೆದಾತನಿಗೆ, ಸ್ವಲ್ಪ ಏಕಾಂತ ಬೇಕೆನಿಸಿ ಒಬ್ಬನೇ ನಡೆದ. ಯಾವ ಕಡೆಗೆ ಹೋಗಬೇಕೆಂದು ನಿರ್ಧರಿಸಿಲ್ಲ. ‘ಕೋಠಿ’ ಎಂದು ಹಣೆಬರಹ ಬರೆದುಕೊಂಡಿದ್ದ ಬಸ್ ಬಂದು ನಿಂತಿತು. ಹತ್ತಿ ಹೊರಟೇಬಿಟ್ಟ. ಹೀಗೆ ಹೊರಟು ಬಿಡುವುದು ವಿಶೇಷವೇನಲ್ಲ ಚಂದ್ರಕಾಂತನಿಗೆ. ತಾನು ಯಾವುದೋ ಕಸಿವಿಸಿ, ವೇದನೆ, ಒಂದಿಷ್ಟು ದುಃಖವನ್ನು ಅನುಭವಿಸುತ್ತಿದ್ದೇನೆ ಅನಿಸಿದಾಗಲೆಲ್ಲ ಹೀಗೆ ನಡೆದುಬಿಡುತ್ತಿದ್ದ. ಜನದಟ್ಟಣೆಯ ಮಾರ್ಕೆಟ್‌ಗೊ, ಬಸ್ ಸ್ಟ್ಯಾಂಡ್‌ಗೊ ಇಲ್ಲ ರೈಲ್ವೆ ಸ್ಟೇಷನ್ನಿಗೊ ಒಟ್ಟಾರೆ ಬಂದುಬಿಡುತ್ತಿದ್ದ. ಸದ್ಯ ನಗರದ ಬ್ಯುಸಿ ಮಾರ್ಕೆಟ್ಟಾದ ಕೋಠಿಯ ರಸ್ತೆ ಬದಿಯಲ್ಲಿ ನಿರುದ್ದೇಶಿಯಾಗಿ ಅಲೆಯುತ್ತಿದ್ದಾನೆ. ಮತ್ತು ತಾನು ಕಾಣುವ ಹೊರ ಜಗತ್ತಿನ ಚಲಿಸುವ ಪ್ರತಿಯೊಂದರ ಚಲನೆಯಲ್ಲಿ ತನ್ನ ಮನಸ್ಥಿತಿಯನ್ನು ಸಮೀಕರಿಸಲೆತ್ನಿಸುತ್ತಿದ್ದಾನೆ. ಹಾಗೆ ವಿಫಲನಾಗಿ ದಾರಿಗುಂಟ ಎದುರಾಗುವ ಭೇಲ್ ಪೂರಿವಾಲಾಗಳನ್ನು, ಪರ್ಸು- ಕೀಚೈನ್ ಮಾರುವ ಹುಡುಗರನ್ನು ಮತ್ತು ಸೋಡಾ ಹೊಡೆಯುವ ಕೈಗಳನ್ನು ಪ್ರಯತ್ನ ಪೂರಕವಾಗಿ ಗಮನಿಸುತ್ತಾನೆ. ರೇಟು ಕೇಳಿ ಹೊರಡುತ್ತಿರುವ ಗಿರಾಕಿಯ ಬೆನ್ನು ಬಿದ್ದಿರುವ ಎಫ್.ಎಮ್. ರೇಡಿಯೊ ಸೆಟ್ ಮಾರುವ ಹುಡುಗ ಅದರ ವ್ಯಾಲೂಮ್ ಹೆಚ್ಚು ಮಾಡಿ ‘ಬಂಗಾರು ಕೋಡಿ ಪೆಟ್ಟ ವಚ್ಚನಂಡಿ, ಏ ಪಾಪ ಏ ಪಾಪ ಏ ಪಾ...ಪ’ ಹಾಡು ಕೇಳಿಸಿ ವ್ಯಾಪಾರ ಮಾಡುವ ಜರೂರಿಯಲ್ಲಿರುವುದನ್ನು ಕಂಡ.

‘ಸಾರ್ ದಸ್ತಿ ತಗಳ್ಳಿ ಸಾರ್...’ ಎಂದು ಕೈ ಚಾಚಿದ ಹುಡುಗನಿಗೆ ಹೇಗೆ ಪ್ರತಿಕ್ರಿಯಿಸುವುದೆಂದು ತಿಳಿಯದೆ ಸುಮ್ಮನೆ ಮುನ್ನಡೆದ. ಈಗ ಸಮಯ ಐದು ಗಂಟೆ. ಕ್ಯಾಂಪಸ್ಸಿಗೆ ಹೊರಡುವ ಬಸ್ಸಿನ ಸರಿಯಾದ ಸಮಯ. ಬಸ್ ಶೆಲ್ಟರ್‌ನ ತುಂಬ ಜನ ಸೇರಿದ್ದಾರೆ. ದುಗುಡದಲ್ಲಿರುವ ನೌಕರಿ ಹೆಣ್ಣು ಮಕ್ಕಳು ಖರೀದಿಸಿದ ತರಕಾರಿಯನ್ನು ಜ್ವಾಪಾನದಿಂದ ಹಿಡಿದು ನಿಂತಿದ್ದಾರೆ. ಎಕ್ಸ್ಟ್ರಾ ಅನ್ನಿಸುವಂತೆ ತುಸು ಹೆಚ್ಚೇ ಅಲಂಕಾರ ಮಾಡಿಕೊಂಡಿದ್ದ ಬೇಕಂತಲೇ ಭುಜದ ರವಿಕೆಯಿಂದ ತೂರಿ ಬರುವಂತೆ ಬ್ರಾ ಬಾರ್‌ ಅನ್ನು ಎದ್ದು ಕಾಣಿಸುವಂತೆ ನಿರ್ಲಕ್ಷಿಸಿರುವ ಸಂಜೆ ದಂಧೆಯವರ ಗುಂಪೊಂದು ಶೆಲ್ಟರಿನ ಮೂಲೆಯಲ್ಲಿ ಸೇರಿದೆ. ಅವರ ಒಣ ದ್ರಾಕ್ಷಿಯಂತಹ ತುಟಿ, ಎದೆ ಅಳತೆಯನ್ನು ಕಣ್ಣಿಂದ ಅಳೆಯುತ್ತಿರುವ ಅದೆಷ್ಟೋ ಕಣ್ಣ ತಕ್ಕಡಿಗಳು ಅಲ್ಲಿ ಸುಳಿದಾಡುತ್ತಿವೆ. ಅವರ ಹೆಗಲಿಗೆ ನೇತಾಡುವ ವ್ಯಾನಿಟಿ ಬ್ಯಾಗ್, ಅದರೊಳಗೆ ಇರಬಹುದಾದ ಅಮೂಲ್ಯ ಅಯುಧಗಳ ಪಕ್ಷಿನೋಟವೊಂದು ಕಣ್ಣ ಮುಂದೆ ಹಾದವರಂತೆ ಕೆಲವರು ಅಲ್ಲಿ ಹರಡಿದ್ದ ಮಲ್ಲಿಗೆಯ ಘಮಕ್ಕೆ ನೋಡುವ ನೋಟದೊಳಗೆ ತಾವಿಲ್ಲದಂತಾದರು. ಒಂದು ಕ್ಷಣ ಅವರ ವೈಯಾರ, ವಗಲುಗಳು ಚಂದ್ರಕಾಂತನಿಗೆ ಸೋಗಲಾಡಿ ಮೇಷ್ಟ್ರುಗಳ ಸ್ವಭಾವ ನೆನಪಿಸಿತು.

ಕೆಲಸ ತಡವಾಗಿ ಬಿಟ್ಟಿದ್ದಕ್ಕೆ ತಮ್ಮೊಳಗೆ ಮೇಸ್ತ್ರಿಯನ್ನು ಬಯ್ದುಕೊಳ್ಳುತ್ತಿರುವ ಗೌಂಡಿ ಕೆಲಸದ ಹೆಂಗಸರು; ಕೆಲ ಹುಡುಗರು ಕೈಯಲ್ಲಿ ಬುತ್ತಿಡಬ್ಬಿ, ಕೆಲವರು ಕೈಯಲ್ಲಿ ಬ್ರೆಡ್ ಪಾಕೆಟ್ ಹಿಡಿದು ಮನೆ ಸೇರುವ ತರಾತುರಿಯಲ್ಲಿದ್ದಾರೆ. ಸಿಮೆಂಟಿನ ಸಂಪರ್ಕದಿಂದಾಗಿ ಅವರ ತಲೆಗೂದಲು ಕೊಂಚ ಹೊಗೆಯ ಬಣ್ಣಕ್ಕೆ ತಿರುಗಿವೆ. ಅವರನ್ನು ನೋಡಿದಾಗ ಈತನಿಗೆ ಈ ದೇಶದಲ್ಲಿ ರೆವಲ್ಯೂಷನ್ ಆಗುತ್ತೆ. ಒಂದಿನ ಕೂಲಿಕಾರರ ರಾಜ್ಯ ಬರುತ್ತೆ. ಆಗ ಎಲ್ಲರೂ ಶ್ರಮ ಪಡ್ತಾರೆ- ಹಂಚಿ ತಿಂತಾರೆ ಎಂದು ಮೇಧಾವಿಯ ದಾಟಿಯಲ್ಲಿ ಹೇಳಿದ್ದ ಪ್ರೊಫೆಸರ್ ಷಣ್ಮುಗಂ ನೆನಪಾದರು. ಬಸ್ ಶೆಲ್ಟರ್ ಪಕ್ಕದ ಕಮಾನಿನಲ್ಲಿ ನಾಯಿ ಬೊಗಳಿದಂತಾಗಿ ಯಾರೊ ಬಾಲ ತುಳಿದಿರಬೇಕೆಂದುಕೊಂಡು ಸುಮ್ಮನಾದ. ಅದು ಹಾಗಾಗಿರಲಿಲ್ಲ. ನೇತಾಡುತ್ತಿದ್ದ ಗೌಂಡಿ ಕೆಲಸದ ಹುಡುಗನ ಕೈಯಲ್ಲಿನ ಬ್ರೆಡ್ ಪೊಟ್ಟಣವನ್ನು ಕಿತ್ತು ಓಡುತ್ತಿದ್ದ ನಾಯಿಯನ್ನು ತಡೆದು ಇತರೆ ನಾಯಿಗಳು ಹಂಚಿಕೊಡಲು ನ್ಯಾಯ ತೆಗೆದಿದ್ದವು.

ಥಟ್ಟನೆ ಇವತ್ತು ಆರ್.ಎಮ್.ಎಸ್ ಬರ‍್ತಾರೆ, ಇವನಿಂಗ್ ಸಿಕ್ಸ್ ಥರ್ಟಿಗೆ ಟೆರೇಸ್ ಮೇಲೆ ಸಿಗೋಣ ಎಂದಿದ್ದ ಷಣ್ಮುಗಂ ರ ಮಾತು ನೆನಪಾಗಿ ಗಿಜಿಗುಡುತ್ತಿದ್ದ ತುಂಬು ಗರ್ಭಿಣಿಯಂತಹ 216 ನಂಬರಿನ ಕ್ಯಾಂಪಸ್ ಬಸ್ ಒಳಗೆ ನುಸುಳಿಕೊಂಡು ಹೋಗಿ ನಿಂತ. ಬಸ್ ಹೊರಟಿತು. ಅತ್ತ ರಸ್ತೆ ಬದಿಯಲ್ಲಿ ನಾಯಿ ಕಿತ್ತಾಡಿದ ಬ್ರೆಡ್ ಪೊಟ್ಟಣದಲ್ಲಿ ಇನ್ನೇನಾದರೂ ಮಿಕ್ಕಿದೆಯೆ ಎಂದು ಕುನ್ನಿಯೊಂದು ಬಾಂಬ್ ನಿಷ್ಕ್ರಿಯ ದಳದಂತೆ ಪರಿಶೀಲಿಸುತ್ತಿದ್ದನ್ನು ಗಮನಿಸಿದ. ತೂರಾಡುತ್ತ ನಡೆದಿದ್ದ ಬಸ್ಸಿನೊಳಗೆ, ಒಬ್ಬರ ಉಸಿರು ಇನ್ನೊಬ್ಬರಿಗೆ ತಾಕಿ, ಸಹಿಸಲಸಾಧ್ಯ ಎಂಬಂತಾಗಿತ್ತು. ಕ್ಯಾಂಪಸ್ಸಿಗೆ ಹೋಗುವ ದಾರಿಯಲ್ಲಿ ದರ್ಗಾ ಸ್ಟಾಪ್‌ನಿಂದ ಕೆಲ ಕುಡುಕರು ಬಸ್ ಹತ್ತಿದ ಪರಿಣಾಮ, ಇಡೀ ಬಸ್ ಪಾನಮತ್ತವಾದಂತೆ ಕಂಡಿತು. ಹೀಗೆ ಸಾಗಿ ಬಂದ ಬಸ್ಸು ಮೇನ್ ಗೇಟ್ ತಲುಪಿ ನಿಂತಿತು. ಅವಸರಿಸಿ ಇಳಿದು ಕ್ಯಾಂಪಸ್ ಕಡೆ ನಡೆದವನನ್ನು ಯಾರೋ ಹಿಂದಿನಿಂದ ಬಂದು ಅನಾಮತ್ತಾಗಿ ಭುಜ, ತಲೆಯ ಮೇಲೆ ಹೊಡೆದಂತಾಗಿ, ತಿರುಗಿ ನೋಡುವಷ್ಟರಲ್ಲಿಯೇ ನಾಲ್ಕು ಜನ ಹಿಡಿದು ಅಲ್ಲಿಯೇ ನಿಂತಿದ್ದ ಜೀಪಿನೊಳಗೆ ಹಾಕಿಕೊಂಡು ಹೋದರು. ಮೇನ್ ಗೇಟ್ ಕಾವಲುಗಾರ ಜೀಪಿನತ್ತ ಓಡಿ ಬರುವಷ್ಟರಲ್ಲಿ, ಜೀಪು ಅಲ್ಲಿಂದ ಬಹುದೂರ ಸಾಗಿತ್ತು.

* * *

ಬೆಳಗಿನ ಕ್ಲಾಸ್ ಕೇಳಿ ಬೋರು ಹೊಡೆದಿದ್ದ ಅರುಣ್, ಮಧ್ಯಾಹ್ನದ ಊಟಕ್ಕೆ ಬಂದು ಸೆಕೆ ತಡೆಯದೆ ಸಂಜೆ ತಡ ಹೊತ್ತಿನವರೆಗೆ ಕಬ್ಬಿಣದ ಮಂಚಕ್ಕೆ ಆಯಸ್ಕಾಂತದ ಹಾಗೆ ಮಲಗಿಬಿಟ್ಟಿದ್ದ. ಸಂಜೆ ಯೋಗ ಕ್ಲಾಸಿಗೆ ಹೋಗುವ ಪಕ್ಕದ ರೂಮಿನ ಹುಡುಗರು ಬಾತ್‌ರೂಮಿನಲ್ಲಿ ಜೋರಾಗಿ ಹಾಡು ಹೇಳುತ್ತಿರುವುದು ಕೇಳಿಸಿಯೂ ಕೇಳಿಸದವನಂತೆ ಒರಗಿ ಅಂಗಾತ ಬಿದ್ದ. ಇನ್ನು ತನ್ನ ಕೋಣೆಯಲ್ಲಿದ್ದ ಮೂವರ ಪೈಕಿ ಲಿಂಗ್ವಿಸ್ಟಿಕ್ಸ್ ಒಬ್ಬ ಅದಾಗಲೇ ಹೊರಗೆ ಬಿದ್ದಿದ್ದ. ಇನ್ನುಳಿದದ್ದು ಥೇಟರ್ ಆರ್ಟ್ಸ್ ನ ಸ್ವಲ್ಪ ವಯಸ್ಸಾದಂತೆ ಕಾಣುತ್ತಿದ್ದ ಜಲ್ಲು ಕುಮಾರ್ ಅಲಿಯಾಸ್ ಚಿರುಜಲ್ಲು. ಹೊರಡುವ ಮುನ್ನ ಅರುಣ್ ಎದ್ದೇಳು, ಟೈಂ ಫೈವ್ ಥರ್ಟಿ. ಲೇಟಾದ್ರೆ ಕಾಫಿ ಸಿಗೊಲ್ಲ ಎನ್ನುತ್ತಾ ಬಾಗಿಲು ಎಳೆದುಕೊಳ್ಳುವಾಗ ಬೈ ಹೇಳಿ ಹೊರಬಿದ್ದ. ಚಂದ್ರಕಾಂತ್ ಕ್ಲಾಸಿಗೂ ಬರಲಿಲ್ಲ, ರೂಮಲ್ಲೂ ಇಲ್ಲ. ಅದೆಲ್ಲಿ ಹಾಳಾಗಿ ಹೋದನೊ ಅಂದುಕೊಳ್ಳುತ್ತ ಎದ್ದು ಮುಖ ತೊಳೆದು ಕಾಫಿ ಕುಡಿಯಲು ಮೆಸ್ ಹಾಲ್‌ನತ್ತ ಹೆಜ್ಜೆ ಹಾಕಿದ. ಈಗ ವಿಂಗ್ ಪೂರಾ ಖಾಲಿ ಖಾಲಿ. ಒಂದು ನಿಶ್ಯಬ್ದ ಹುಡುಕಿ ಹೊರಟವನಿಗೆ ಸಿಕ್ಕ ಏಕಾಂತದಂತಾಯಿತು ಕ್ಷಣ. ಕಾರಿಡಾರ್‌ನಲ್ಲಿ ಹುಡುಗರು ಗುಂಪಾಗಿ ಮಾತನಾಡಿಕೊಳ್ಳುತ್ತಿರುವ ವಿಷಯಗಳೇನಿರಬಹುದೆಂದು ತಿಳಿಯುವ ಇರಾದೆಯಿಲ್ಲದೆ ನೇರ ಟೀ ಕೌಂಟರಿಗೆ ಹೋಗಿ ಕಾಫಿ ಕಪ್ ಹಿಡಿದು ಬಂದು ಹಾಲ್‌ನ ಮೂಲೆ ಟೇಬಲ್‌ವೊಂದರ ಬಳಿ ಹೋಗಿ ಕೂತ. ಚಹಾ ಗುಟುಕರಿಸುತ್ತಲೇ ಎದುರು ಕೂತು ತೆಲುಗಿನಲ್ಲಿ ಮಾತನಾಡುತ್ತಿದ್ದ ಹುಡುಗರ ಸಂಭಾಷಣೆಯತ್ತ ಗಮನ ಹರಿಸಿದ.

‘ನಿಜವಾಗ್ಲೂ, ಬೆಳಿಗ್ಗೆ ನಿಮ್ ವಿಂಗ್‌ಗೆ ಪೊಲೀಸರು ಬಂದಿದ್ದರಾ?’

‘ಹೌದು ಮಾರಾಯ, ನಮ್ಮ ಐಡೆಂಟಿಟಿ ಕಾರ್ಡು ಚೆಕ್ ಮಾಡಿದ್ರು, ಅಲ್ಲದೆ ಸೂಟ್‌ಕೇಸ್, ಬುಕ್ಸ್ ಎಲ್ಲಾ ಚೆಕ್ ಮಾಡಿ ಹೋದ್ರು’

‘ಯಾಕ್ ಬಂದಿದ್ರು ಅಂತ ತಿಳಿತಾ?’

‘ಅದೆ ಕಣೊ, ನಿನ್ನೆ ಯಾರೊ ನಮ್ ಹಾಸ್ಟೆಲ್‌ನಲ್ಲಿ ನಕ್ಸಲೈಟ್ಸ್ ಇದಾರೇಂತ ಇನ್‌ಫರ‍್ಮೇಷನ್ ಕೊಟ್ಟಿದ್ರಂತೆ. ಅದಕ್ಕೆ ಸರ್ಚ್ ಮಾಡಿ ವಿಚಾರಸೋಕೆ ಬಂದಿದ್ದರಂತೆ’

‘ಹೌದ, ಹೋಗ್ಲಿ ಬಿಡು, ನಮಗ್ಯಾಕೆ ತಲೆ ನೋವು. ಲ್ಯಾಬಿಗೆ ಟೈಮ್ ಆಗ್ತಿದೆ ನಾನ್ ಬರ‍್ತೀನಿ. ಬೈ...’ ಎಂದು ಅವರಲ್ಲೊಬ್ಬ ಎದ್ದು ಹೊರಟ. ಇವರ ಮಾತು ಕೇಳಿಸಿಕೊಂಡ ಅರುಣ್, ಟೀ ಕಪ್ ಟೇಬಲ್ಲಿನ ಒಂದು ಬದಿಗೆ ಸರಿಸಿ ಎದ್ದು ಹಾಸ್ಟೆಲ್‌ನ ಹೊರಗೆ ಇದ್ದ ಹಾಸು ಬಂಡೆಯತ್ತ ಹೆಜ್ಜೆ ಹಾಕಿದ. ಏನೇ ಆದರೂ ನಿನ್ನೆ ರಾತ್ರಿ ಬೇಡವೆಂದರೂ ಪ್ರೊಫೆಸರ್ ಷಣ್ಮುಗಂ ಆ ಇಬ್ಬರು ಯುಜಿಗಳನ್ನು ಹಾಸ್ಟೆಲ್‌ಗೆ ಕರೆಯಿಸಿ ಅದೂ ಟೆರೇಸ್ ಮೇಲೆ ಚರ್ಚೆಗೆ ಇಳಿದದ್ದು ಟೆಕ್ನಿಕಲಿ ರಾಂಗ್ ಅಂದುಕೊಳ್ಳುತ್ತಾ ಬಂದು ಬಂಡೆಯ ಮೇಲೆ ಕೂತು ಚಂದ್ರಕಾಂತನ ಬಗ್ಗೆ ಆಲೋಚಿಸತೊಡಗಿದ. ಕಣ್ಣು ಕುಕ್ಕುವಂತಿದ್ದ ಗುಲ್ ಮೊಹರ್, ಅದರ ಪಕಳೆ, ಸಂಪೂರ್ಣ ಕೆಂಪಾದ ಅದರ ಬಣ್ಣ, ಒಳಗೆ ಚುಂಗಿನಂತೆ ಇಳಿಬಿದ್ದ ದಳ ಇದ್ಯಾವುದನ್ನೂ ಆತ ಗಮನಿಸುವ ಸ್ಥಿತಿಯಲ್ಲಿ ಇಲ್ಲ ಈಗ. ಮತ್ತೆ ಷಣ್ಮುಗಂ ಇವತ್ತು ಸಂಜೆ ಸಿಕ್ಸ್ ಥರ್ಟಿಗೆ ಮತ್ಯಾರೊ ಬರ‍್ತಾರೆ ಅಂದಿದ್ದು ನೆನಪಾಗಿ ಸ್ವಲ್ಪ ದಿಗಿಲಾದ. ಹೇಗಾದರೂ ಮಾಡಿ ಅವರನ್ನು ಮತ್ತೆಲ್ಲಾದರೂ ಬೇರೆ ಕಡೆ ಸಿಗುವಂತೆ ಮಾಡಬೇಕೆಂದು ನಿರ್ಧರಿಸಿದ. ಆದರೆ ಈ ಮೆಸೇಜ್ ಕೊಡೋಕೆ ಚಂದ್ರಕಾಂತ್ ಎಲ್ಲಿ? ಛೆ, ಇದೆಲ್ಲ ಇವನಿಗೆ ಯಾಕ್ ಅರ್ಥ ಆಗಲ್ಲ... ಗೊಣಗುಟ್ಟಿದ ಒಳಗೊಳಗೆ.
ನಿನ್ನೆ ರಾತ್ರಿ ಟೆರೇಸಿನ ಮೇಲೆ ನಡೆದ ಸಭೆಯಲ್ಲಿ ಎತ್ತರದ ಆ ನಾಯಕ ‘ನವ ಪ್ರಜಾತಾಂತ್ರಿಕ ಕ್ರಾಂತಿಗೆ ಇದೊಂದೆ ಮಾರ್ಗ’ ಎಂದಿದ್ದು ಮತ್ತೆ ಮತ್ತೆ ಕಿವಿಯೊಳಗೆ ಗುಂಯ್ ಗುಡುತಿದೆ. ಈಗ ಮತ್ತಷ್ಟು ಗೊಂದಲಕ್ಕೀಡಾದ ಅರುಣ್. ಒಂದೆಡೆ ಊಳಿಗಮಾನ್ಯತೆಗೆ ಬದಲಾವಣೆ, ಬಂಡವಾಳಶಾಹಿ ರಕ್ತಕ್ರಾಂತಿ ಎಂದೆಲ್ಲಾ ಹೇಳುತ್ತಿದ್ದ ಅವರು ಎಲ್ಲೊ ಒಂದೆಡೆ ಅಲ್ಟಿಮೇಟ್ ಇದೆಯೆಂದು ಇಡೀ ಬದುಕನ್ನೇ ಸವೆಸುವ ತೀರ್ಮಾನದ ಮಾತು ಕೇಳಿ ಈತನಿಗೆ ಕಳವಳವಾಗಿತ್ತು. ಮತ್ತು ಇದರ ಕುರಿತಾಗಿ ಬಹಳಷ್ಟು ಸಲ ಚಂದ್ರಕಾಂತ್ ಮತ್ತು ಷಣ್ಮುಂಗ ಜೊತೆ ಚರ್ಚಿಸಿದ್ದು ಇದೆ. ಚಂದ್ರಕಾಂತ ಒಪ್ಪಿದರೂ; ಇದನ್ನು ಸಮರ್ಥಿಸಿಕೊಳ್ಳುವ ನಿಲುವು ಅರುಣ್‌ದು ಆಗಿದ್ದಿಲ್ಲ. ಹಾಗಾಗಿ ಕೆಲವೊಮ್ಮೆ ಏಕಮುಖೀಯ ವಾದದಂತೆ ಅನಿಸಿದ್ದು ಇದೆ. ಹೀಗೆ ಕೂತು ಧ್ಯಾನಿಸುತ್ತಿದ್ದವನ ಕಣ್ಣೆದುರು ‘ಏಯ್... ಅರುಣ್, ಹೌ ಆರ್ ಯು?’ ಎಂದು ಸೈಕಲ್ಲಿನ ಬ್ರೇಕ್ ಹಾಕಿ ಈತನೆಡೆಗೆ ಬಂದ ಪ್ರತಾಪ್ ಸೋನವಾನೆ ಬಂಡೆಯ ಒಂದು ಪಕ್ಕಕ್ಕೆ ಪುಸ್ತಕವಿಟ್ಟು ಕೂತ. ‘ಐಯೆಮ್ ಫೈನ್ ಮ್ಯಾನ್, ವಾಟ್ ಅಬೌಟ್ ಯು?’ ಎಂದು ಸಣ್ಣ ದನಿಯಲ್ಲಿ ಕೇಳಿದ್ದನ್ನು ಪ್ರಶ್ನಿಸಿ ಪ್ರತಾಪ ‘ಹುಷಾರ್ ಇಲ್ವಾ ಮೈಯಲ್ಲಿ?’ ಎಂದು ಕೇಳಿದ. ‘ಹಾಗೇನಿಲ್ಲ’ ಎಂದು ಸುಮ್ಮನಾದ ಅರುಣ್. ಮತ್ತೆ ಮಾತು ಇಷ್ಟವಿಲ್ಲವೇನೋ ಎಂಬಂತೆ ಇಬ್ಬರ ನಡುವೆ ಸಂಭಾಷಣೆ ಮುಂದುವರಿಯಿತು.

‘ಸರಿ, ನಿಂಗೊಂದು ವಿಷ್ಯಾ ಗೊತ್ತಾ?’

‘ಏನದು?’

‘ಈಗ ಅರ್ಧ ಗಂಟೆ ಮುಂಚೆ ಮೇನ್ ಗೇಟ್ ಹತ್ರ ಅದ್ಯಾರೊ ನಾಲ್ಕು ಜನ ಬಂದು ಒಬ್ಬ ಹುಡ್ಗನ್ನ ಎತ್ತಿ ಹಾಕಿಕೊಂಡು ಹೋದ್ರಂತೆ, ಗಾರ್ಡ್ ಕೂಗಿಕೊಳ್ಳೋಷ್ಟರಲ್ಲಿ, ಜೀಪು ಅಲ್ಲಿಂದ ಪಾಸ್ ಆಯಿತಂತೆ’ ಅಂದ. ಆದ ದುಗುಡವನ್ನು ಅದುಮಿಟ್ಟುಕೊಂಡು ‘ಯಾರಂತೆ?’ ಎಂದ ಅರುಣ್.
‘ಗೊತ್ತಿಲ್ಲ ಮಗಾ’ ಎಂದು ಪ್ರತಾಪ್, ತನ್ನ ಫೋನ್ ರಿಂಗಾಗುತ್ತಲೇ ಅಲ್ಲಿಂದ ಹೊರಟ. 
ಇದೆಲ್ಲ ಕೇಳಿಸಿಕೊಳ್ಳುತ್ತಿರುವಾಗಲೇ ಅರುಣ್‌ಗೆ, ಚಂದ್ರಕಾಂತ್ ತನ್ನ ಮನೆಯಿಂದ, ಅವನ ತಾಯಿಯಿಂದ ದೂರ ಆದಂತೆ ಭಾಸವಾಗತೊಡಗಿತು. ಮತ್ತೆ ಆಲೋಚನೆಗೆ ಬಿದ್ದ. ಏನು ಮಾಡುವುದು ಅಂತ ಯೋಚಿಸುತ್ತಿರುವಾಗಲೇ ಬೆಳಿಗ್ಗೆಯೆಲ್ಲಾ ಕ್ಲಾಸಲ್ಲೂ ಯಾರೋ ಪಾರ್ಟಿ ಪ್ಯಾಂಫ್ಲೆಟ್ಸ್ ಎಸೆದು ಹೋಗಿರೋ ವಿಷಯ ನೆನಪಾಯಿತು. ದಿಗಿಲುಗೊಂಡವನಂತೆ ಎದ್ದು ರೂಮ್ ಸೇರಿದವನೇ ನಿನ್ನೆ ರಾತ್ರಿ ಕ್ಲಾಸ್‌ರೂಮಿನಲ್ಲಿ ಹಾಕಲು ಹಂಚಿದ್ದ ಕರಪತ್ರಗಳನ್ನು ಮಡಚಿ ತಂದು ತನ್ನ ಹಳೆಯ ದಿಂಬಿನ ಹರಿದ ಸಂದಿಯಲ್ಲಿ ತುರುಕಿ ಮಂಚದಡಿಯ ರಟ್ಟಿನ ಡಬ್ಬಿಯಲ್ಲಿಟ್ಟಿದ್ದನ್ನು ಹುಡುಕಹತ್ತಿದ. ಹುಡುಕಾಡುತ್ತಿರುವ ಡಬ್ಬಿ ಕಾಣದಿರುವುದು ಎದೆಬಡಿತವನ್ನು ಹೆಚ್ಚಿಸಿತು. ನಿನ್ನೆ ಷಣ್ಮುಗಂ ಅವುಗಳನ್ನು ಜುಲುಮೆಯಿಂದ ಕೊಟ್ಟಿದ್ದರು.
ಛೆ! ಇವರ‍್ಯಾಕಾದ್ರೂ ನಮ್ ಜೀವ ತಿಂತಾರೊ ಎಂದು ಬಯ್ದುಕೊಳ್ಳುತ್ತಾ ಎಲ್ಲರ ಮಂಚದಡಿ ಕಣ್ಣಾಯಿಸಿದ. ಡಬ್ಬಿ ಮಾತ್ರ ನಾಪತ್ತೆ. ಬೇಕಿತ್ತಾ ಈ ಹಾಳುಮೂಳು ಎನಿಸಿತು. ಒಂದು ಕ್ಷಣ ಆಲೋಚಿಸುತ್ತಾ ಸುಮ್ಮನೆ ಮಂಚದ ಮೇಲೆ ಕೂತ. ಒಂದು ವೇಳೆ ಆ ಡಬ್ಬಿ ಬೆಳಿಗ್ಗೆ ತಾನು ಎಚ್ಚರವಾಗುವದಕ್ಕಿಂತ ಮುಂಚೆ ಪೋಲಿಸರ ಕೈ ಸೇರಿರಬಹುದೆ? ಇಲ್ಲ ಬೆಳಿಗ್ಗೆ ನಾನು ಕ್ಲಾಸಿಗೆ ಹೋದಾಗ ಪೊಲೀಸರು ಆ ಕರಪತ್ರ ಸಮೇತ ಚಂದ್ರಕಾಂತನನ್ನ ಹಿಡ್ಕೊಂಡು ಹೋದ್ರೆ? ಕ್ಷಣ ಕಣ್ಣು ಕತ್ತಲಾದವು.
ಏನೋ ಹೊಳೆದವನಂತೆ ಎದ್ದು ವಿಂಗ್ ಮೂಲೆಯಲ್ಲಿಟ್ಟ ಡಸ್ಟ್ ಬಿನ್‌ನಲ್ಲಿ ಕಣ್ಣಾಯಿಸಿದ. ಗಂಟಲುವರೆಗೂ ತಿಂದಂತಿದ್ದ ಡಸ್ಟ್ ಬಿನ್‌ನಲ್ಲಿ ತಳಸೇರಿರಬಹುದೇ? ಎಂದು ಕೈ ಹಾಕಿ ತೆಗೆಯಲು ಮುಂದಾದಾಗ ‘ಏನ್ ಉಡಕಾಕತ್ತೀರಿ ಸಾರು’ ಎಂದು  ಕಸ ಗುಡಿಸುವಾಕೆ ಹಿಂದಿನಿಂದ ಬಂದು ಕೇಳಿದಳು. ಹಿಂಗಿಂಗೆ ‘ಒಂದು ರಟ್ಟಿನ ಡಬ್ಬೀಲಿ ಪುಸ್ತಕ ಇಟ್ಟಿದ್ದೆ ಕಾಣಿಸ್ತಿಲ್ಲ. ಬೆಳಿಗ್ಗೆ ತನ್ನ ರೂಮ್ ಕಸ ಗುಡಿಸಿದ್ದು ಯಾರು’ ಎಂದು ಕೇಳಿದ. ‘ಬೆಳಿಗ್ಗೆ ಕಸ ಹೊಡೆದದ್ದು ನಾನಲ್ಲ, ಮಾಳಮ್ಮನೇ ಸಾರು- ಅಗೋ ಅಲ್ಲಿ ಒರಾಗ ಕಸ್ದ ಕುಪ್ಪಿಗೆ ಬೆಂಕಿ ಹಚ್ಚಾಕತ್ತ್ಯಾಳ’ ಎಂದಳಾಕೆ. ನೇರವಾಗಿ ಹೊರ ಬಂದು ಕಸಕಡ್ಡಿ ಒಂದೆಡೆ ಬಳಿಯುತ್ತಿರುವ ಮಾಳಮ್ಮನನ್ನು ವಿಚಾರಿಸಿದ.
‘ಅಲ್ಲಮ್ಮ, ಒಂದು ಹಳೇ ಕಾಗದ ರಟ್ಟಿನ ಡಬ್ಬ್ಯಾಗ ದಿಂಬು ಇತ್ತಲ್ಲ ನೋಡಿದೇನಮ್ಮ?’
‘ಗಾ... ಅದೋ ಆ ಮೂಲ್ಯಾಗ ಹಾಕಿ ಬೆಂಕಿ ಹಾಕೀನ್ ನೋಡ್ರೀ...’ ಎಂದು ಮೂಲೆಯತ್ತ ಕಸ ಪೊರಕೆ ಹಿಡಿದು ತೋರಿಸಿದಳು. ಹಾಸ್ಟೆಲ್ ಹಿಂಬದಿಯ ಮೂಲೆಗೆ ಬಂದು ನಿಂತಾಗ ಸ್ವಲ್ಪ ಗಾಳಿ ಜೋರಾದ ಕಾರಣ ಕಿಡಿ ಹಾರ ತೊಡಗಿದವು. ತನ್ನ ಹಳೇ ಮಾಸಲು ತಲೆದಿಂಬು ಸುಟ್ಟ ಕಮಟು ವಾಸನೆಯಲ್ಲೂ, ಆ ಕರಪತ್ರಗಳ ಬಂಡಲ್ ಸುಟ್ಟ ಸುಳಿವು ಕಾಣಲಿಲ್ಲ. ಏನಾಗಿರಬಹುದು ಆ ಕರಪತ್ರ? ಒಳಗೊಳಗೆ ಏನೋ ತಲ್ಲಣ ಶುರುವಾಯಿತು. ಅದಾಗ ತಾನೆ ಬೀಸಿದ್ದ ಗಾಳಿಗೆ ಗುಲ್ ಮೊಹರ್ ಹೂವು ಉದುರಿ ಕಾರಿಡಾರ್ ಸಂದಿಯನ್ನು ಕೆಂದಾರಿಯನ್ನಾಗಿಸಿದ್ದವು. ಅವುಗಳ ಮೇಲೆ ಹೆಜ್ಜೆಯಿಡುತ್ತ, ಪಕ್ಕದ ಟೆನಿಸ್ ಕೋರ್ಟ್‌ನತ್ತ ನಡೆದು ನ್ಯೂಸ್‌ಪೇಪರ್ ರೀಡಿಂಗ್ ರೂಮಿಗೆ ಬಂದ. ಸಂಜೆಪತ್ರಿಕೆಯೊಂದರ ಮುಖಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ‘ನಕ್ಸಲ್ ನಂಟು; ವಿದ್ಯಾರ್ಥಿ ಬಂಧನ’ ಎಂದು ಬರೆಯಲಾಗಿತ್ತು. ಕೋಣೆ ಹೊಕ್ಕು ಕದವಿಕ್ಕಿಕೊಂಡವನ ಕಣ್ಣುಗಳಲ್ಲಿ ಬೆಂಕಿ ಕಿಡಿ ಹಾರಿದಂತಾಯಿತು. ಬೆಳಗಿನ ಆ ಶಾಲ್ಮಲೀ ಗಿಡ ಬೋಳಾದಂತೆ ಭಾಸವಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !