ಸಾಕ್ರೆಟೀಸ್‌ನನ್ನು ನೆನೆದು...

7

ಸಾಕ್ರೆಟೀಸ್‌ನನ್ನು ನೆನೆದು...

Published:
Updated:

ಕ್ರಿಸ್ತಪೂರ್ವ ನಾಲ್ಕು– ನೂರರ ನಡುವೆ ಜೀವಿಸಿದ್ದ ಸಾಕ್ರೆಟೀಸ್ ಜಗತ್ತು ಕಂಡ ಮಹಾನ್ ತತ್ವಜ್ಞಾನಿ. ಪ್ಲೇಟೊ, ಅರಿಸ್ಟಾಟಲ್ ಮೊದಲಾದ ಮೇಧಾವಿಗಳು ಇವನ ಶಿಷ್ಯರಾಗಿದ್ದರು. ಜಗತ್ತಿಗೆ ಮೊತ್ತಮೊದಲ ಪ್ರಜಾಸತ್ತೆಯ ಪರಿಕಲ್ಪನೆಯನ್ನು ಮಂಡಿಸಿದ ಈತ ‘ಪ್ರಶ್ನೆ ಮಾಡುವುದನ್ನು’ ಜನ್ಮಸಿದ್ಧ ಹಕ್ಕು ಎಂದು ಸಮರ್ಥಿಸಿಕೊಂಡವನು. ಅಸತ್ಯವನ್ನು, ಸರ್ವಾಧಿಕಾರವನ್ನು ಓಲೈಸಿ ಬದುಕುವುದಕ್ಕಿಂತ ಸಾಯುವುದು ಶ್ರೇಷ್ಠತಮವೆಂದು ಜಗತ್ತಿಗೆ ತೋರಿಸಿದವನು.

ಪ್ರಜಾಸತ್ತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತಲೇ, ಅದರ ದೌರ್ಬಲ್ಯ ಮತ್ತು ಮಿತಿಯನ್ನು ಗುರುತಿಸಿದ ಸಾಕ್ರೆಟೀಸ್, ಶ್ರೀಮಂತರು, ವ್ಯಾಪಾರಿಗಳು, ಆಡಳಿತಗಾರರು ಒಂದಾದರೆ ಪ್ರಜಾಸತ್ತೆ ನಾಶವಾಗುತ್ತದೆ ಎನ್ನುತ್ತಾನೆ. ಈ ಜನ ಒಂದಾಗಿ ಜನಪ್ರತಿನಿಧಿಗಳನ್ನು ಕೊಂಡುಕೊಂಡಲ್ಲಿ ಸರ್ವಾಧಿಕಾರ ಸ್ಥಾಪನೆಯಾಗುತ್ತದೆ. ಇದು ಗೋಮುಖ ವ್ಯಾಘ್ರತನಕ್ಕೆ ದಾರಿಮಾಡಿಕೊಡುತ್ತದೆ ಎನ್ನುತ್ತಾನೆ. ಸಾಮಾನ್ಯತೆಯ ಉದ್ಧಾರದ ಹೆಸರಿನಲ್ಲಿ ಸಮಾಜದಲ್ಲಿ ವರ್ಗಗಳ ನಡುವೆ ಅಂತರ ಹೆಚ್ಚಿ ಬಡವರ ಸಂಖ್ಯೆ ಅಧಿಕವಾಗುತ್ತದೆ; ನಿಜವಾದ ಜನಪ್ರತಿನಿಧಿಗಳು ಕಾಣದಂತೆ ಮಾಯವಾಗುತ್ತಾರೆ ಎಂದು ಗುರುತಿಸುತ್ತಾನೆ. ಸಾಕ್ರೆಟೀಸನ ಈ ಮಾತುಗಳು ಚರಿತ್ರೆಯುದ್ಧಕ್ಕೂ ಚರ್ಚೆಯಾಗಿವೆ; ಸತ್ಯವಾಗಿ ಪರಿಣಮಿಸಿವೆ.

ಕಳೆದ ಎಪ್ಪತ್ತು ವರ್ಷಗಳಲ್ಲಿ ಭಾರತವು ಈ ಮಾದರಿಯಲ್ಲಿ ಹರಿದು ಬಂದಿದೆ ಎಂಬುದನ್ನು ಗಮನಿಸಬಹುದು. ಸ್ವಾತಂತ್ರ್ಯ ಬಂದ ದಿನಗಳಲ್ಲಿ ವ್ಯಕ್ತಿಯ ಜಾತಿ, ಧನ, ಭಾಷೆ, ಧರ್ಮಗಳನ್ನು ಪರಿಗಣಿಸದೆ, ಅವನ ಚಾರಿತ್ರ್ಯ ಮತ್ತು ಸಾಮಾಜಿಕ ಬದ್ಧತೆಯನ್ನು ಮಾತ್ರ ಗುರುತಿಸಿ ಅವನನ್ನು ತಮ್ಮ ಜನಪ್ರತಿನಿಧಿಯನ್ನಾಗಿ ಆಯ್ಕೆ ಮಾಡಿಕೊಂಡಿರುವ ಸಾವಿರಾರು ಉದಾಹರಣೆಗಳು ದೊರಕುತ್ತವೆ. ಆಗ ಚುನಾವಣೆಯಲ್ಲಿ ಹಣ ಕೆಲಸ ಮಾಡುತ್ತಿರಲಿಲ್ಲ. ಅವನು ಪ್ರತಿನಿಧಿಸುತ್ತಿದ್ದ ಪಕ್ಷ, ಸಿದ್ಧಾಂತ ಮುಖ್ಯವಾಗಿ ಕೆಲಸ ಮಾಡುತ್ತಿದ್ದವು. ಇಲ್ಲದಿದ್ದಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರೀ, ಕೃಪಲಾನಿ, ಅಂಬೇಡ್ಕರ್, ಲೋಹಿಯಾ, ಶಾಂತವೇರಿ ಗೋಪಾಲಗೌಡ ಅಂಥವರು ಚುನಾವಣೆಯಲ್ಲಿ ಆಯ್ಕೆಯಾಗುತ್ತಲೇ ಇರಲಿಲ್ಲ! ಕರ್ನಾಟಕದಲ್ಲಿ ಅರಸು, ಸಿಂಧ್ಯ, ಅಬ್ದುಲ್ ನಜೀರ್‌ಸಾಬ್ (ನೀರ್ ಸಾಬರು)- ನಮ್ಮ ಜನಕ್ಕೆ ಜಾತಿಯೇ ಮುಖ್ಯವಾಗಿದ್ದರೆ ಗೆಲ್ಲಿಸುತ್ತಲೇ ಇರಲಿಲ್ಲ.

ಆದರೆ ನಮ್ಮಲ್ಲಿ ರಾಜಕಾರಣ ಬದಲಾಗಿದೆ; ಜನ ಬದಲಾಗಿದ್ದಾರೆ; ಪಕ್ಷಗಳು ಮೌಲ್ಯ ಕಳೆದುಕೊಂಡು ಬದಲಾಗಿವೆ. ಯಾವ ಪಕ್ಷಕ್ಕೂ ಸಿದ್ಧಾಂತವಿಲ್ಲ! ಅಲ್ಲಿನ ಕಾರ್ಯಕರ್ತರು, ನಾಯಕರು, ಸಿದ್ಧಾಂತ ರಹಿತವಾಗಿ ಕೇವಲ ಗೆಲ್ಲುವುದನ್ನೇ ಗುರಿಯಾಗಿಸಿಕೊಂಡು ಕೊಡು– ಕೊಳ್ಳುವ ಕಾರ್ಯದಲ್ಲಿ ತಾವೂ ಭ್ರಷ್ಟರಾಗಿ ಜನರನ್ನೂ ಭ್ರಷ್ಟರನ್ನಾಗಿಸಿದ್ದಾರೆ. ಇಂದು ಭಾರತದ ರಾಜಕಾರಣ ಕೇವಲ ಕೆಲವು ಮನೆತನಗಳ, ಉದ್ಯಮಿಗಳ ಆಡೊಂಬಲವಾಗಿದೆ. ಹಣವಿದ್ದವನು ಇಂದು ಅಧಿಕಾರ ಹಿಡಿಯುವ ಸ್ಥಿತಿಯಲ್ಲಿದ್ದಾನೆ. ಪ್ರಜಾಪ್ರಭುತ್ವ ಎಚ್ಚರ ತಪ್ಪಿದರೆ ಅದು ಹಿಡಿಯಬಹುದಾದ ಅಪಾಯದ ದಾರಿಯನ್ನು ಕ್ರಿಸ್ತಪೂರ್ವದಲ್ಲೇ ಸಾಕ್ರೆಟೀಸ್ ಗುರುತಿಸಿದ್ದ!

ಮಾನವ ಮನೋಧರ್ಮ ಮತ್ತು ವರ್ತನೆಗಳಿಗೆ ಸಂಬಂಧಿಸಿದ ಹಾಗೆ ಸಾಕ್ರೆಟೀಸ್ ಸಾರ್ವಕಾಲಿಕ ಸತ್ಯವೊಂದನ್ನು ಕ್ರಿಸ್ತಪೂರ್ವದಲ್ಲೇ ಗುರುತಿಸಿ ಈ ರೀತಿ ಉದ್ಘರಿಸುತ್ತಾನೆ: ‘ಈ ಪ್ರಪಂಚದಲ್ಲಿ ಒಳ್ಳೆಯದನ್ನೆಲ್ಲಾ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ’. ಇಡೀ ಮಾನವ ಚರಿತ್ರೆಯ ನೈತಿಕ– ಅನೈತಿಕ ನಡೆಗೆ ಬರೆದ ಭಾಷ್ಯದಂತಿದೆ, ಈ ಮಾತು! ಮನುಷ್ಯ ಸಂಕುಲ ಪ್ರಾರಂಭವಾದಾಗಿನಿಂದ ಅದು ಸ್ವಾರ್ಥ, ಮೋಹ, ಸ್ವಜನಪಕ್ಷಪಾತ, ಅಧಿಕಾರ– ಧನದಾಹ ಮುಂತಾದ ಆಸೆಗಳಿಂದ ತನ್ನದೇ ಸಂಕುಲವನ್ನು ಶೋಷಣೆ ಮಾಡುತ್ತಾ ಬಂದಿದೆ. ಅಷ್ಟೇ ಅಲ್ಲ. ಇತರೆ ಜೀವ ಸಂಕುಲವನ್ನೂ ತನ್ನ ಅಡಿಯಾಳಾಗಿಸಿಕೊಳ್ಳುತ್ತಾ ಇಲ್ಲವೇ ನಾಶ ಮಾಡುತ್ತಾ ಬಂದಿದೆ. ಸರಿದಾರಿಯಿಂದ ದೂರ ಸರಿದು ಅಡ್ಡದಾರಿ ಹಿಡಿದು ಸ್ವಾರ್ಥಪರವೂ ನೀಚಪರವೂ ಆದ ವರ್ತನೆಗಳಿಂದ ಕ್ರೂರವಾಗಿ ನಡೆದುಕೊಂಡಿದೆ.

ಇಂಥ ಅನೈತಿಕ– ನೀಚತಮ ಮಾನವ ನಡೆಯನ್ನು ವಿಚಾರವಂತರು, ಮಾನವತಾ– ಜೀವಪರವಾದಿಗಳು ಪ್ರಾರಂಭದಿಂದಲೂ ಖಂಡಿಸುತ್ತಾ, ‘ತಾವೂ ಬದುಕಿ, ಎಲ್ಲರನ್ನು– ಎಲ್ಲವನ್ನು ಬದುಕಲು ಅನುವು ಮಾಡಿಕೊಟ್ಟು’ ಪ್ರೀತಿ ಮಾರ್ಗದಲ್ಲಿ ನಡೆಯಬೇಕೆಂದು ತಿಳಿವು ಹೇಳುತ್ತಾ ಬಂದಿದ್ದಾರೆ. ಆದರೆ ಜನರು ಮಾತ್ರ ತಮ್ಮ ಪ್ರವೃತ್ತಿಯನ್ನು ಬಿಡುತ್ತಿಲ್ಲ! ಏಕೆ? ಅದೇ ಸ್ವಾರ್ಥಪರ ನಡೆ ನಿರಂತರವಾಗಿ ಹರಿದು ಬರುತ್ತಿದೆ. ಇದನ್ನೇ ಕ್ರಿಸ್ತಪೂರ್ವದಲ್ಲೇ ಸಾಕ್ರೆಟೀಸ್ ‘ಒಳ್ಳೆಯದೆಲ್ಲಾ ಹೇಳಿ ಆಗಿದೆ. ಉಳಿದಿರುವುದು ಆಚರಣೆ ಮಾತ್ರ ಎಂದು ಗುರುತಿಸಿರುವುದು. ಸಾಕ್ರೆಟೀಸನ ಅನಂತರ ಬಂದ ಬುದ್ಧ, ಕ್ರಿಸ್ತ, ಪೈಗಂಬರ್‌, ಬಸವ ಮುಂತಾದವರು ಚರಿತ್ರೆಯುದ್ದಕ್ಕೂ ಜನರಿಗೆ ಬದುಕುವ ಮಾರ್ಗ ಹೇಗಿರಬೇಕೆಂಬ ತಿಳಿವಳಿಕೆಯ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಕುವೆಂಪು ಅಸಮಾನತೆಯ ಕ್ರೌರ್ಯವನ್ನು ‘ಕಲ್ಕಿ’ ಬಂದು ಸರಿಪಡಿಸಬೇಕು ಎಂದು ಆಶಿಸಿದರೆ, ಅಡಿಗರು ಜನರನ್ನುದ್ಧಾರ ಮಾಡಲು ದೇವರು ಅವತಾರಗಳ ಮೇಲೆ ಅವತಾರವೆತ್ತಿದರೂ ದೀನದಲಿತರ ಉದ್ಧಾರವಾಗಿಲ್ಲವೆಂದು ವ್ಯಥೆಪಡುತ್ತಾರೆ. ಬುದ್ಧನ ಮನುಷ್ಯನ ನೋವು ನಿವಾರಣಾ ತತ್ವ, ಕ್ರಿಸ್ತನ ಪ್ರೀತಿ ಮತ್ತು ಕರುಣೆ, ಪೈಗಂಬರನ ಜೀವಪರವಾದ, ಬಸವಣ್ಣನ ಅನಾಚಾರವೇ ನರಕವೆಂಬ ಮಾತು– ಇವೆಲ್ಲವೂ ಉಪದೇಶದ ಮಾತುಗಳಾಗಿವೆಯೇ ಹೊರತು ಮಾನವ ಬದುಕಿನ ಆಚಾರದ ಭಾಗವಾಗದೇ ಇರುವುದು ವಿಷಾದನೀಯ.

ಆದಿಕಾಲದಿಂದಲೂ ‘ಪರಸತಿ– ಪರಧನ’ಗಳ ಬಗ್ಗೆಯೇ ಚಿಂತಿಸುತ್ತಾ, ಆದಷ್ಟು ಅದನ್ನೇ ಲಪಟಾಯಿಸುತ್ತಾ ಬಂದಿರುವ ಮಾನವ ಮನಸ್ಸಿನ ಸಂಕೀರ್ಣತೆಯ ಬಗ್ಗೆ ಬೆರಗುಂಟಾದರೂ– ಅದು ಉಂಟು ಮಾಡಿರುವ ಕ್ರೌರ್ಯವನ್ನು ನೆನೆದರೆ ಮನಸ್ಸು ನೋವಿನಿಂದ ಮುದುಡಿಕೊಳ್ಳುತ್ತದೆ; ನಾಚಿಕೆಯಿಂದ ಚಡಪಡಿಸುತ್ತದೆ.
 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !