ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಆಮೆ

Last Updated 27 ಜೂನ್ 2020, 19:30 IST
ಅಕ್ಷರ ಗಾತ್ರ

ಹೊತ್ತು ಇಳಿಯುತ್ತಾ ಬರುತ್ತಿತ್ತು. ಸಂಜೆ ಸೂರ್ಯನ ತೇಲುಗಣ್ಣು ಅಳಿವೆ ಬಾಗಿಲ ನೀರಿಗೆ ಒಂದಿಷ್ಟು ಅಮಲಿನ ಕೆಂಪನ್ನು ಬೆರೆಸುವುದರಲ್ಲಿತ್ತು. ಅಳಿವೆಗಿಂತ ಚೂರು ಈಚೆ ನದಿಯ ಪಾತ್ರದ ಮಧ್ಯದಲ್ಲಿದ್ದ ಆ ಕಲ್ಲುಬಂಡೆಗಳ ನಡುವೆ ನೀರಿನಲ್ಲಿ ಪೂರ್ತಿ ಶರೀರವನ್ನು ಹುದುಗಿಸಿ ಕುಳಿತಿದ್ದ ಅಪ್ಪುವಿನ ತಲೆ ಆಗಾಗ ಮೇಲೇಳುತ್ತಾ, ಕೆಳಗಿಳಿಯುತ್ತಾ ಬಂಡೆಗಳ ಸುತ್ತ ನೀರಿನ ವರ್ತುಲಗಳನ್ನು ಮೂಡಿಸುತ್ತಿತ್ತು. ಅವನ ಭಯಭೀತ ನೋಟ ಒಮ್ಮೆ ಹೊಸ ಸೇತುವೆಯ ಮೇಲೂ,ಅನಂತರ ಅಲ್ಲೇ ನದಿಯ ಪಕ್ಕದ ಮೈದಾನದಲ್ಲಿದ್ದ ಟೆಂಟುಗಳತ್ತಲೂ, ಮತ್ತೊಮ್ಮೆ ಮೈದಾನದಿಂದ ಇಳಿದು ನದಿಗೆ ಸೇರುವ ಕಾಲುದಾರಿಯತ್ತಲೂ ಗೊತ್ತುಗುರಿಯಿಲ್ಲದೆ ಅಲೆಯುತ್ತಲೇ ಇತ್ತು. ಹೊಸ ಸೇತುವೆಯ ಮೇಲೆ ನಿರಂತರವಾಗಿ ಬೆಳಗ್ಗಿನಿಂದ ದುಡಿಯುತ್ತಿದ್ದ ಕೆಲಸಗಾರರು ಹೈರಾಣಾಗಿ ಇದೀಗ ಬೈರಾಸು ಕೊಡವುವುದರಲ್ಲಿದ್ದರು. ಟೆಂಟುಗಳ ಹತ್ತಿರ ಈಗಾಗಲೇ ಹುಡುಗರ ಕಲರವ ಶುರುವಾಗಿತ್ತು. ಹತ್ತಿರ, ಹತ್ತಿರವಾಗಿ ಮಣ್ಣಿನಲ್ಲಿ ಮೊಳೆತ ನಾಯಿಕೊಡೆಗಳ ಹಾಗೆ 10,12 ಟೆಂಟುಗಳು! ಹೊಸ ಸೇತುವೆಯ ಕೆಲಸ ಆರಂಭವಾಗುವ ಹೊತ್ತಿಗೆ ಎಲ್ಲೋ ದೂರದ ಆಂಧ್ರದಿಂದ ವಲಸೆ ಬಂದ ಕುಟುಂಬಗಳು ಅಲ್ಲೇ ಮೈದಾನದ ಬದಿಯಲ್ಲಿ ಬಿಡಾರ ಹೂಡಿದ್ದವು. ಹಿರಿಯರು ಸೇತುವೆ ಕೆಲಸಕ್ಕೆ ಹೊರಡುವುದೇ ತಡ!.ಟೆಂಟಿನಲ್ಲಿ ಉಳಿದ ಪೋಲಿಹೈಕಳು ಪೇಟೆಯ ದಾರಿ ಹಿಡಿಯುತ್ತಿದ್ದವು. ಅಲ್ಲಿ ಅವರಿವರನ್ನು ಕಾಡಿ, ಬೇಡಿ ಊರಿಡೀ ಸುತ್ತಿ ಸಾಧ್ಯವಾದರೆ ಬೀದಿಬದಿ ಅಂಗಡಿಗಳಿಂದ ಸಣ್ಣ,ಪುಟ್ಟ ಸಾಮಾನುಗಳನ್ನೂ ಎಗರಿಸಿ “ಆ ಸೇತುವೆ ಕೆಲಸ ಒಮ್ಮೆ ಮುಗಿದರೆ ಸಾಕಪ್ಪ! ಈ ಪೋಲಿಗಳ ತಂಟೆಯಿಂದ ಪಾರಾದೇವು” ಎಂಬಿತ್ಯಾದಿ ಒಂದಿಷ್ಟು ಶಾಪವಚನಗಳನ್ನೂ ಹೊತ್ತುಕೊಂಡು ಸಂಜೆ ಹೊತ್ತಿಗೆ ಟೆಂಟಿಗೆ ವಾಪಸಾಗುತ್ತಿದ್ದರು. ಬಂದ ಕೂಡಲೇ ಕೆಲವರು ಹೊಳೆಯ ನೀರಿಗೆ ಬಿದ್ದರೆ, ಒಂದಿಬ್ಬರು ಗಾಳಕ್ಕೆ ಎರೆಹುಳಗಳನ್ನು ಸಿಕ್ಕಿಸಿ ಮೀನನ್ನೋ, ಆಮೆಯನ್ನೋ ಹಿಡಿಯುವ ಯತ್ನಕ್ಕೆ ಮುಂದಾಗುತ್ತಿದ್ದರು. ಹಿಡಿದ ಮೇಲೆ ಅದನ್ನು ಬೆಂಕಿಯಲ್ಲಿ ಹಾಕಿ ಸುಡುವ, ಬೇಯಿಸುವ, ಹಂಚುವ ಗೌಜು ಗದ್ದಲ!...ರಂಪಾಟ, ಬೊಬ್ಬಾಟ....ಜೊತೆಗೆ ಬೆಳಗ್ಗಿನಿಂದ ಬಸವಳಿದು ಆಗಷ್ಟೇ ಹಿಂದಿರುಗಿದ ತಾಯಂದಿರ ಕಿರುಚಾಟ... ತಂದೆಯಂದಿರ ಗುದ್ದಾಟ. ಒಟ್ಟಾರೆ ಹಗಲಿಡೀ ನಿಶ್ಯಬ್ಧವಾಗಿರುವ ಆ ಮೈದಾನ ಸಂಜೆಯಾದರೆ ಸಾಕು ಒಂದು ಸಂತೆಯ ಪ್ರತೀತಿಯನ್ನು ಹುಟ್ಟಿಸುತ್ತಿತ್ತು.

ನದಿಯಪಾತ್ರದ ಮಧ್ಯೆ ಇದ್ದ ಆ ದೊಡ್ಡ ಕಲ್ಲುಬಂಡೆಗಳ ಸಮೂಹ ಸುಮಾರು ದೂರದವರೆಗೆ ಹಬ್ಬಿ ಮಧ್ಯದಲ್ಲಿ ಆಳವಾದ ಗುಂಡಿಯನ್ನೂ ಹೊಂದಿದ್ದು ಆಮೆಗುಂಡಿ ಎಂದೇ ಹೆಸರಾಗಿತ್ತು. ಮಳೆಗಾಲದಲ್ಲಿ ನೀರಿನ ಮೇಲೆ ಒಂದಿಷ್ಟು ತಲೆ ಮಾತ್ರ ಮೇಲೆತ್ತಿ ನಾಚುತ್ತಾ ನೋಡುತ್ತಿದ್ದ ಬಂಡೆಗಳ ಸಮೂಹ ನೀರು ಇಳಿಯುವುದೇ ತಡ ಬಟಾಬೆತ್ತಲಾಗಿ ನದಿಯ ಮಧ್ಯೆ ಉದ್ದಾನುದ್ದಕ್ಕೆ ಕೋಟೆಯಂತೆ ನಿಂತು ನೋಡುಗರಿಗೆ ಅಚ್ಚರಿ ಹುಟ್ಟಿಸುತ್ತಿದ್ದವು. ಆಮೆಗುಂಡಿಯಲ್ಲಂತೂ ಹೆಸರಿಗೆ ತಕ್ಕಂತೆ ಎಂತಹ ಕಡು ಬೇಸಿಗೆಯಲ್ಲೂ ನೀರು ಆರದೆ ಆಮೆ ಮುಳುಗುವಷ್ಟು ನೀರು ಇದ್ದೇ ಇರುತ್ತಿತ್ತು. ಜತೆಗೆ ಒಂದಷ್ಟು ಆಮೆಗಳೂ! ಮಿಜಾರಿನ ಯಾರೂ ಕೂಡ ಆಮೆಗಳನ್ನು ತಿನ್ನುತ್ತಿರಲಿಲ್ಲವಾಗಿ ಆ ಹೊಂಡದಲ್ಲಿ ಆಮೆಗಳು ಇಲ್ಲಿಯವರೆಗೆ ನಿರ್ಭಯವಾಗಿ ಬೀಡು ಬಿಟ್ಟಿದ್ದವು. ಒಮ್ಮೊಮ್ಮೆ ಅಳಿವೆ ಬಾಗಿಲಿಂದ ದೊಡ್ಡ ಚಿಪ್ಪಿನ ಕಡಲಾಮೆಗಳೂ ಆ ಹೊಂಡಕ್ಕೆಬಂದು ಸೇರುತ್ತಿದ್ದವು.

ಮೈದಾನದ ಟೆಂಟುಗಳತ್ತಲೇ ದೃಷ್ಟಿ ಚೆಲ್ಲಿದ್ದ ಅಪ್ಪುವಿನ ಕಿರುಬೆರಳನ್ನು ಏನೋ ಕಚ್ಚಿದಂತಾಯಿತು. ಗಾಬರಿಯಾದವನು ಕೈ ಕೊಡವಿದರೆ ಪುಟ್ಟದೊಂದು ಆಮೆ ನೀರಲ್ಲಿ ಹೊಟ್ಟೆ ಮೇಲಾಗಿ ಬಿತ್ತು. ಇವ ಕುತೂಹಲದಿಂದ ಮೆಲ್ಲನೆ ಅದರ ಹೊಟ್ಟೆ ಮುಟ್ಟಿ ನೋಡಿದ. ಬೆನ್ನ ಮೇಲಿನ ಚಿಪ್ಪಿಗಿಂತ ಹೊಟ್ಟೆಯ ಮೇಲಿನ ಕವಚ ಒಂದಿಷ್ಟು ನಯವಾಗಿ, ಮಿದುವಾಗಿ ಕಂಡಿತು. ಇವ ಮುಟ್ಟಿದ್ದೇ ತಡ! ಆ ಆಮೆ ಕೈ, ಕಾಲುಗಳನ್ನು ಒಳಗೆಳೆದುಕೊಂಡು “ಬುಳಕ್ಕ್” ಎಂದು ನೀರಿನಲ್ಲಿ ಮುಳುಗಿತು. ಅಪ್ಪುವಿಗೆ ಮೊನ್ನೆಯ ಸಂಜೆ ನೆನಪಿಗೆ ಬಂದಿತು. ಪಕ್ಕದ ಮನೆ ಇಂದು ಅಕ್ಕನೊಂದಿಗೆ ರೇಶನ್ ಅಂಗಡಿಗೆ ಹೋದವ ಮರಳಿ ಬರುವಾಗ ಕತ್ತಲಾಗಿತ್ತು. ಮೈದಾನದ ಕಾಲುದಾರಿಯ ಬದಿಯಲ್ಲಿ ಆ ಪೋಲಿ ಹುಡುಗರು ಬೆಂಕಿ ಹಾಕಿ ಏನನ್ನೋ ಸುಡುತ್ತಿದ್ದರು. ಅಸಹ್ಯ ವಾಸನೆಯಲ್ಲೂ ಅದೇನೆಂದು ನೋಡುವ ಕುತೂಹಲದಿಂದ ಇಂದು ಅಕ್ಕನ ಕೈ ಬಿಡಿಸಿ ಮುಂದೆ ನಡೆದವನೆದುರೇ ಬೆಂಕಿಯ ಕೆಂಡಗಳ ಮಧ್ಯದಿಂದ ಒಂದು ಆಮೆಯನ್ನು ಕೋಲಿನಲ್ಲಿ ಎತ್ತಿ ಹಾಕಿದ್ದ ಒಬ್ಬ ಪೋಲಿ. ಇನ್ನೊಬ್ಬಾತ ದೊಡ್ಡದೊಂದು ಕಲ್ಲನ್ನೆತ್ತಿ ಅದರ ಚಿಪ್ಪನ್ನು ಒಡೆಯಲು ಯತ್ನಿಸುತ್ತಿದ್ದಂತೆ ಬೆಂಕಿಯ ಸುತ್ತ ಕುಕ್ಕರುಗಾಲಲ್ಲಿ ಕುಳಿತ ಇನ್ನೂ 3, 4 ಮಂದಿ “ಬೇಗ, ಬೇಗ”ಎಂದು ಅವರದ್ದೇ ವಿಚಿತ್ರ ಭಾಷೆಯಲ್ಲಿ ಅವನನ್ನು ಹುರಿದುಂಬಿಸುವುದರಲ್ಲಿದ್ದರು. ಅರೆಬರೆ ಚಿಪ್ಪು ಒಡೆದ ಅದರ ಬಾಲದ ಭಾಗಕ್ಕೆ ಇನ್ನೊಂದು ಚೂಪುಗೋಲನ್ನು ಚುಚ್ಚಿ ಎತ್ತಿ ಹಿಡಿದ ಗುಂಪಿನ ನೇತಾರ ಇವನನ್ನು ಕಂಡವನೇ “ಬೇಕೇನೋ”ಎಂಬಂತೆ ಕೋಲನ್ನು ಇವನತ್ತ ಚಾಚಿದ್ದ. ಅಪ್ಪುವಿಗೆ ನಿಗಿನಿಗಿಗುಟ್ಟುತ್ತಿದ್ದ ಬೆಂಕಿಯ ಕೆಂಬೆಳಕಲ್ಲಿ ಅಮಾನುಷವಾಗಿ ಹೊಳೆಯುತ್ತಿದ್ದ ಆ ಮುಖಗಳಲ್ಲಿದ್ದ ಕ್ರೌರ್ಯ ಮತ್ತು ಕೋಲಿನಲ್ಲಿ ಅರೆಬರೆ ಚಿಪ್ಪು ಒಡೆದಿದ್ದ ಆಮೆಯಿಂದ ಒಸರುತ್ತಿದ್ದ ದ್ರವ ಎರಡೂ ಸೇರಿ ಭಯ ಮತ್ತು ಹೇಸಿಗೆಯನ್ನು ಒಂದೇಟಿಗೆ ಉಕ್ಕಿಸಿ ಇನ್ನೇನು ಚಡ್ಡಿಯಲ್ಲಿ ಒಂದೋ, ಎರಡೋ ಆದೀತು ಎಂಬ ಗಾಬರಿಯಲ್ಲೇ “ಇಂದು ಅಕ್ಕಾ” ಎಂದು ತಿರುಗಿ ಓಡಿದ್ದ. ಇವನ ಬೆನ್ನ ಹಿಂದೆ ಆ ಪೋಲಿ ಹುಡುಗರ ಅರ್ಥವಾಗದ ಬೊಬ್ಬೆ ಮತ್ತು ಆಮೆಯ ವಾಸನೆ ತುಂಬಾ ದೂರದವರೆಗೂ ಹಿಂಬಾಲಿಸಿ ಬಂದಿದ್ದವು. ರಾತ್ರಿ ಊಟಕ್ಕೆ ಅಮ್ಮಮ್ಮ ಬಡಿಸಿದ ಚಿಕ್ಕನ್ ತುಂಡು ಕೂಡಾ ವಾಕರಿಕೆ ಹುಟ್ಟಿಸಿತ್ತು.

ಮುಸ್ಸಂಜೆಯಿಂದಲೇ ಅಮ್ಮನ ಸೆರಗು ಹಿಡಿದು ಕುಳಿತವ ರಾತ್ರಿ ನಿದ್ದೆಯಲ್ಲೂ ಕನಸು ಕಂಡು ಬಡಬಡಿಸುತ್ತಿದ್ದ. ತಟ್ಟಿ ಎಬ್ಬಿಸಿದ್ದ ಅಮ್ಮಮ್ಮ ನೀರು ಕುಡಿಸಿದ್ದವರು, ವಿಪರೀತ ನಡುಗುತ್ತಿದ್ದವನನ್ನು ತಬ್ಬಿ ತಲೆ ನೇವರಿಸುತ್ತಿದ್ದ ಅಮ್ಮನಲ್ಲಿ “ಯಾಕೋ ಈ ಸಲ ಹುಡುಗ ತುಂಬಾ ಮಂಕಾಗಿದ್ದಾನೆ ಮೋಳು. ಆ ಹಿಂದಿನ ಪೋಕರಿತನ, ಚುರುಕು ಏನೂ ಇಲ್ಲ. ದೃಷ್ಟಿಗಿಷ್ಟಿ ಬಿದ್ದಿದೆಯೋ, ಏನೋ? ಯಾವುದಕ್ಕೂ ಊರಿಗೆ ಹೋಗುವ ಮೊದಲು ಒಮ್ಮೆ ಅಪ್ಪು ಮಾರಾರಲ್ಲಿಂದ ನೂಲು ಮಂತ್ರಿಸಿ ತರಬಹುದಿತ್ತು.” ಎಂದಿದ್ದರು. ಅಮ್ಮ ಮಾತನಾಡಿರಲಿಲ್ಲ. ತನ್ನ ತಲೆ ನೇವರಿಸುತ್ತಿದ್ದ ಆ ಕೈಯ್ಯನ್ನು ಇನ್ನಷ್ಟು ಬಿಗಿಯಾಗಿ ಹಿಡಿದು ಕಣ್ಮುಚ್ಚಲು ಯತ್ನಿಸಿದ್ದ ಅಪ್ಪು.
ಸೇತುವೆಯ ಮೇಲಿನಿಂದ ಕೆಲಸಗಾರರು ಅರ್ಥವಾಗದ ಯಾವುದೋ ಭಾಷೆಯಲ್ಲಿ ಗುಜುಗುಟ್ಟುತ್ತಾ ಮೈದಾನಕ್ಕೆ ಇಳಿಯುತ್ತಿದ್ದರು. ಪೋಲಿ ಹುಡುಗರಲ್ಲಿ ಕೆಲವರು ಈಗಾಗಲೇ ನೀರಿಗಿಳಿದಿದ್ದರು. ಬಂಡೆಗಳ ಸಂದಿಯಲ್ಲಿ ಮುದುರಿ ಕುಳಿತಿದ್ದ ಅಪ್ಪುವಿನ ಮೈಯಿಂದ ಆ ನೀರಿನಲ್ಲೂ ಬೆವರಿಳಿಯುತ್ತಿತ್ತು. ಏಪ್ರಿಲ್ ತಿಂಗಳ ನಡುಹಗಲಿನ ಬಿರು ಬಿಸಿಲನ್ನು ಒಂದಿಷ್ಟೂ ಬಿಡದೆ ನುಂಗಿದ ಬಂಡೆಗಳು ಇದೀಗಸುಸ್ತಾಗಿ ಬಿಸಿಯುಸಿರಿಡುತ್ತಿದ್ದವು. ‘ಈಗ ಗಂಟೆ ಎಷ್ಟಾಗಿರಬಹುದು? 7.20ಕ್ಕೆ ಬರುವ ಮಲಬಾರಿನಲ್ಲಿ ಉಪ್ಪಳದಿಂದ ಟ್ರೈನ್ ಹತ್ತುವುದೆಂದು ರಾಜು ಮಾಮ ಬೆಳಿಗ್ಗೆ ಇಂದು ಅಕ್ಕನಲ್ಲಿ ಹೇಳುವುದು ಕೇಳಿತ್ತು. ಮೊದಲೇ ಟಿಕೆಟ್ ಬುಕ್ ಮಾಡಿದ್ರಿಂದ ಆರಾಮ ಮಲಗಿ ಹೋಗಬಹುದಂತೆ. ಬೆಳಿಗ್ಗೆ, ಬೆಳಿಗ್ಗೆ ನಾಲ್ಕೂ ಮೂವತ್ತಕ್ಕೆ ಕೋಟಯಂ ತಲುಪುತ್ತದೆಯಂತೆ. ಅಲ್ಲಿಂದ ಚಂಘನಾಶ್ಯೇರಿಗೆ ಒಂದೇ ಗಂಟೆಯ ದಾರಿ. ಅಲ್ಲಿಗೆ ಕುಟ್ಟಮಾವ ಕಾರು ತರುತ್ತಾರಂತೆ. ಕುಟ್ಟಮಾವನ ನೆನಪು ಬಂದ ಕೂಡಲೇ ಅಪ್ಪುವಿಗೆ ಆ ಸೆಕೆಯಲ್ಲೂ ಒಂತರಾ ಚಳಿ ಹೊಟ್ಟೆಗೆ ಅಡರಿದಂತಾಯಿತು.

ತಲೆ ಮತ್ತುಮುಖಗಳೆರಡೂ ಕ್ಲೀನ್ ಶೇವ್ ಆಗಿದ್ದು ಭರ್ಜರಿ ಮೈಕಟ್ಟನ್ನು ಹೊಂದಿ ಸದಾ ಬಾಯಲ್ಲಿ ಸಿಗರೇಟ್ ಇಟ್ಟು ಮೂಗಲ್ಲಿ ಹೊಗೆ ಬಿಡುತ್ತಿದ್ದ ಕುಟ್ಟಮಾವನನ್ನು ಅಪ್ಪು ಮೊದಲ ಬಾರಿ ನೋಡಿದ್ದು ಅಪ್ಪನ ಉತ್ತರಕ್ರಿಯೆಯ ಹಿಂದಿನ ದಿನದಂದು. ಶುದ್ದದ ತಯಾರಿಯಲ್ಲಿದ್ದ ಎಲ್ಲರೂ ಅಂಗಳದ ಮೆಟ್ಟಲೇರುತ್ತಿದ್ದ ವ್ಯಕ್ತಿಯನ್ನು ನೋಡಿ ಒಂದು ಗಳಿಗೆ ನಿಶ್ಯಬ್ದರಾಗಿದ್ದರು. ‘ಕುಟ್ಟಮಾವ’, ‘ಕುಟ್ಟಮಾವ’ ಪಿಸುಗುಡುವಿಕೆ ಪಡಸಾಲೆಯಿಂದ ನಡುಕೋಣೆಗೆ ಹರಿದಾಗ ಅಪ್ಪಮ್ಮ ಧಾವಿಸಿ ಹೊರಬಂದಿದ್ದರು.

“ಕುಟ್ಟಾ...ಕುಟ್ಟಾ...ನೀನೇನೋ? ಆದರೂ ನನ್ನ ಮಗು ಮಾಡಿದ ತಪ್ಪನ್ನು ಕ್ಷಮಿಸಲು ಇಷ್ಟು ದಿನ ಬೇಕಾಯ್ತೇನೋ?...ಅದೂ ಅವನ ಉಸಿರು ನಿಲ್ಲಬೇಕಾಯ್ತೇನೋ?..ಅಯ್ಯೋ ಕುಟ್ಟ ..ನನ್ನ ಗತಿ ನೋಡೋ ...ನಾನು ತಬ್ಬಲಿ ಆಗಿಬಿಟ್ಟೆನೋ ಕುಟ್ಟ ..” ಹೊಸ್ತಿಲಲ್ಲಿ ಕುಸಿದು ಬಿಕ್ಕಳಿಸಿದ ಅಪ್ಪಮ್ಮನನ್ನು ಮೆಟ್ಟಿಲಲ್ಲಿ ಕುಳಿತ ಕುಟ್ಟಮಾವ ತಬ್ಬಿ ಹಿಡಿದಿದ್ದರು. “ಅಳಬೇಡ, ಅಳಬೇಡ ಅಕ್ಕ.. ನೋಡು ನಾನು ಬಂದಿದ್ದೇನೆ...ಬಂದಿದ್ದೇನೆ ಅಂದೆನಲ್ಲ..ಇನ್ನು ಅಳಬೇಡ.” ಪಡಸಾಲೆಯ ಕೋಣೆಯಲ್ಲಿ ಉರಿಯುತ್ತಿದ್ದ ಕಾಲುದೀಪದೆದುರು ಸೂತಕದ ಚಾಪೆಯಲ್ಲಿ ಕುಳಿತಿದ್ದ ಅಮ್ಮನೆದೆಗೆ ಒರಗಿದ್ದ ಅಪ್ಪು ಅಲ್ಲಿಂದಲೇ ದಿಟ್ಟಿಸಿದ್ದ. ಅಪ್ಪಮ್ಮನನ್ನು ಸಂತೈಸುತ್ತಿದ್ದ ಕುಟ್ಟಮಾವ ಅದರೆಡೆಯಲ್ಲೂ ಕೋಣೆಯತ್ತ ನೋಟ ಬೀರಿ ಮುಗುಳ್ನಕ್ಕಿದ್ದರು. ಪೊದೆಹುಬ್ಬಿನ ಕೆಳಗೆ ಮಿಂಚಿದ ದೊಡ್ಡದಾದ ಹಸಿರು ಕಣ್ಣುಗಳು ಯಾವುದೋ ಅದೃಶ್ಯ ಶರವನ್ನು ತನ್ನತ್ತ ತೂರಿದಂತೆ ಭಾಸವಾಗಿ ನಡುಗಿದ್ದ ಅಪ್ಪು. ಮುಂದೆ ಐದೇ ನಿಮಿಷದಲ್ಲಿ ಇಡೀ ತರವಾಡಿನ ಚುಕ್ಕಾಣಿ ಕುಟ್ಟಮಾವನ ಕೈಸೇರಿತ್ತು. ಮುರಳಿಯ ಉತ್ತರಕ್ರಿಯೆ ಯಾವುದೇ ಲೋಪವಿಲ್ಲದಂತೆ ಅಚ್ಚುಕಟ್ಟಾಗಿ ನೆರವೇರಿತ್ತು.

ಉತ್ತರಕ್ರಿಯೆಯ ರಾತ್ರಿ ಅಮ್ಮನ ಮಂಚದ ಕೆಳಗೆ ಮಲಗಿದ್ದ ವಿಲಾಸಿನಿ ಚೇಚಿ ಅಮ್ಮನಲ್ಲಿ ಕುಟ್ಟಮಾವನ ಪ್ರವರ ಬಿಚ್ಚಿಟ್ಟಿದ್ದರು.‘ಈ ಕುಟ್ಟಮಾವ ಅಪ್ಪುವಿನ ಅಪ್ಪಮ್ಮನ ಖಾಸಾ ತಮ್ಮನಂತೆ. ಅಪ್ಪಮ್ಮನ ಗಂಡ ಅರ್ಥಾತ್ ಅಪ್ಪುವಿನ ಅಪ್ಪಪ್ಪ ಅಪ್ಪುವಿನ ತಂದೆ ಮುರಳಿ ಚಿಕ್ಕದಿರುವಾಗಲೇ ತೀರಿ ಹೋಗಿದ್ದರಂತೆ. ಮಿಲಿಟರಿಯಲ್ಲಿದ್ದ ಕುಟ್ಟಮಾವ ಭಾವ ತೀರಿಹೋದಾಗ ಊರಿಗೆ ಮರಳಿದವರು ಪುನಃ ಮರಳಿ ಹೋಗದೆ ಮಿಲಿಟರಿಯಿಂದ ನಿವೃತ್ತಿ ಪಡೆದು ಊರಲ್ಲೇ ಉಳಿದರಂತೆ. ಮಿಲಿಟರಿಯಲ್ಲಿರುವಾಗಲೇ ಯಾವುದೋ ಉತ್ತರದ ಹುಡುಗಿಯನ್ನು ಪ್ರೀತಿಸಿದ್ದವರು ಅವಳು ಬೇರೊಬ್ಬನೊಂದಿಗೆ ಮದುವೆಯಾಗಿ ಹೋದ ಬೇಸರದಲ್ಲಿ ಆ ಮೇಲೆ ಮದುವೆಯ ಸುದ್ದಿಗೇ ಹೋಗಲಿಲ್ಲವಂತೆ. ಕುಟ್ಟಮಾವ ಮಿಲಿಟರಿಯಿಂದ ಬಂದು ಇಲ್ಲಿ ನಿಂತ ನಂತರ ಇದೇ ವಿಲಾಸಿನಿ ಚೇಚಿಯ ದೊಡ್ಡ ತಂಗಿಯನ್ನು ಅವರಿಗೆ ಮದುವೆ ಮಾಡಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರಂತೆ ಅಪ್ಪಮ್ಮ. ಆದರೆ ಯಾವುದಕ್ಕೂ ಬಗ್ಗದ ಕುಟ್ಟಮಾವ ತರವಾಡನ್ನು ಮತ್ತು ಮುರಳಿಯನ್ನು ಬೆಳೆಸುವುದರಲ್ಲೇ ಬದುಕನ್ನು ಮುಡಿಪಾಗಿಟ್ಟರಂತೆ. ಅವರು ತರವಾಡಲ್ಲಿದ್ದ ನಾಲ್ಕೈದು ವರ್ಷಗಳಲ್ಲಿ ಈ ನೆಲ್ಲಿಕ್ಕಾಡು ತರವಾಡು ಒಳ್ಳೆಯ ಅಭಿವೃದ್ಧಿಯನ್ನು ಕಂಡಿತಂತೆ. ಮುರಳಿಯನ್ನು ಕೂಡ ಅಷ್ಟೇ ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಬೆಳೆಸಿದರಂತೆ. ಎಲ್ಲಿ ಹೋಗುವುದಿದ್ದರೂ, ಬರುವುದಿದ್ದರೂ ಜೊತೆಯಲ್ಲೇ! ಬೆಳಿಗ್ಗೆ ಏಳುವುದು, ವ್ಯಾಯಾಮ, ಸ್ನಾನ ಎಲ್ಲದಕ್ಕೂ ಕುಟ್ಟಮಾವನ ಜೊತೆಯೇ. ಕುಟ್ಟಮಾವನ ಮಿಲಿಟರಿ ಶಿಕ್ಷಣದಿಂದ ಹುಡುಗ ತುಂಬಾ ಗಂಭೀರವಾಗಿ ಬೆಳೆದನಂತೆ. ಮುರಳಿ ಹತ್ತನೆಯ ಕ್ಲಾಸು ಪರೀಕ್ಷೆ ಬರೆಯುವ ಸಮಯದಲ್ಲಿ ಕುಟ್ಟಮಾವ ರಾತ್ರಿಯಿಡೀ ನಿದ್ದೆಗೆಟ್ಟು ಅವನ ಜೊತೆಯೇ ಕುಳಿತಿದ್ದರಂತೆ. ಏನಾಯ್ತೋ ಏನೋ? ಪರೀಕ್ಷೆ ಕಳೆದಂದೇ ರಾತ್ರಿ ಮುರಳಿಗೆ ಏನೋ ತಲೆ ಕೆಟ್ಟಂತಾಗಿ ಕುಟ್ಟಮಾವನ ಕಿಬ್ಬೊಟ್ಟೆಗೆ ಮೊಣಕಾಲೆತ್ತಿ ಒದ್ದುಬಿಟ್ಟನಂತೆ. ಇಡೀ ದಿನ ಪರೀಕ್ಷೆಗೆ ಓದಿ, ಓದಿ ಪಿತ್ತ ಕೆರಳಿರಬೇಕು ಹುಡುಗನಿಗೆ. ಇಲ್ಲದಿದ್ದರೆ ಮುರಳಿಯಂತಹ ಹುಡುಗ ಒದೆಯುವುದೆಂದರೆ?... ಅದೂ ಅಪ್ಪನಿಗಿಂತ ಹೆಚ್ಚಾಗಿ ಸಾಕಿದ ಕುಟ್ಟಮಾವನಿಗೆ? ... ಕುಟ್ಟಮಾವ ನಾಲ್ಕೈದು ದಿನ ಮಲಗಿದಲ್ಲೇ!...ಕೋಟಕ್ಕಲ್ಲಿನ ವೈದ್ಯರು ಬಂದು ಲೇಪ, ಕಷಾಯ, ಉಯಿಚ್ಚಿಲ್ ಎಲ್ಲಾ ಆದ ನಂತರ ಎದ್ದು ಕುಳಿತುಕೊಳ್ಳಲಿಕ್ಕಾಯಿತಂತೆ. ಆರನೆಯ ದಿನ ಪೇಟೆಯಿಂದ ಕಾರು ತರಿಸಿದ ಕುಟ್ಟಮಾವ ಬ್ಯಾಗು ಹಾಕಿ ಹೋದರಂತೆ. ತಮ್ಮ ಹೋಗುವುದನ್ನು ನೋಡಿ ಅಪ್ಪಮ್ಮ ತುಂಬಾ ಅತ್ತರಂತೆ... ಹೋಗಬೇಡವೆಂದು ದಮ್ಮಯ್ಯ ಹಾಕಿದರಂತೆ. ಮುರಳಿಯಲ್ಲಿ ತಪ್ಪಾಯ್ತೆಂದು ಮಾವನ ಕಾಲು ಹಿಡಿಯಲು ಹೇಳಿದರೆ, ಅವನು ಕೋಣೆಯ ಬಾಗಿಲೇ ತೆರೆಯಲಿಲ್ಲವಂತೆ...ಹಾಗೆ ಹೋದ ಕುಟ್ಟಮಾವ ತಿರುಗಿ ಬರಲು ಇಷ್ಟು ವರ್ಷ ಬೇಕಾಯಿತು. ಎಲ್ಲಾ ವಿಧಿ. ಅಲ್ಲದಿದ್ದರೆ ಈ ಮುರಳಿಗೇನು ಸಾಯುವ ವಯಸ್ಸೇ? ಕಲ್ಲುಗುಂಡಿನ ಹಾಗಿದ್ದ ಹುಡುಗ ....ಅದೂ ಈ 37ನೆಯ ವಯಸ್ಸಿಗೇ ಹಾರ್ಟ್ ಅಟ್ಟಾಕ್ ಅಂದರೆ?..’ ವಿಲಾಸಿನಿ ಚೇಚಿ ನಿಟ್ಟುಸಿರಿಟ್ಟರೆ, ಅಮ್ಮ ಸಣ್ಣದಾಗಿ ಬಿಕ್ಕಳಿಸಿದ್ದರು.

ಮಲಗಿದಲ್ಲಿಂದ ಎದ್ದ ವಿಲಾಸಿನಿ ಚೇಚಿ ಮಂಚದ ಬದಿಯಲ್ಲಿ ಕುಳಿತು ಅಮ್ಮನ ತಲೆ ನೇವರಿಸಿದ್ದರು. “ಪಡೆದುಕೊಂಡು ಬಂದದ್ದೇ ಅಷ್ಟು ತಂಗಿ....ಅಳಬೇಡ...ಮುರಳಿಯ ಅಪ್ಪನ ತರವಾಡಿನಲ್ಲಿ ಯಾವುದೇ ಗಂಡು ಸಂತಾನಕ್ಕೂ ಜಾಸ್ತಿ ಆಯುಸ್ಸಿಲ್ಲ. ಮುರಳಿಯ ಅಪ್ಪನೂ, ಚಿಕ್ಕಪ್ಪನೂ....ಎಲ್ಲಾ ಚಿಕ್ಕ ವಯಸ್ಸಿನಲ್ಲೇ ಹೋದವರು....ಏನೋ ದೇವರು ನಿನ್ನ ಮಡಿಲಲ್ಲಿ ಒಂದು ಗಂಡುಮಗು ಹಾಕಿದ್ದಾನೆ. ಬರುವ ಉತ್ಸವಕ್ಕೆ ಆಟ್ಟುಕ್ಕಾಲ್ ಅಮ್ಮನಿಗೆ ಪೊಂಗಾಲ ಹಾಕುತ್ತೇನೆಂದು ಬೇಡಿಕೋ.. ಆ ಮಗುವಿಗಾದರೂ ಆಯಸ್ಸು ಹಾಕಿ ಕೊಡಲಿ.” ಅಮ್ಮನ ಬಿಕ್ಕಳಿಕೆ ಅಳುವಾಗಿ ಮಾರ್ಪಟ್ಟಿತ್ತು. “ಅಯ್ಯೋ ಶಿವನೇ ...ನಾನು ನಿನ್ನನ್ನು ನೋಯಿಸಿದೆನೇ ತಂಗಿ?...ಅಳಬೇಡವೇ..ಇನ್ನು ಹೇಗೂ ಕುಟ್ಟಮಾವ ಬಂದಿದ್ದಾರೆ...ಮೂಪ್ಪರಿಗೆ ಈಗಲೂ ಒಳ್ಳೆಯ ಆರೋಗ್ಯ ಇದೆ. 58 ಕಳೀತು ಅಂತ ಯಾರೂ ಹೇಳಲಿಕ್ಕಿಲ್ಲ. ಮಿಲ್ಲು, ತೋಟ, ತರವಾಡು ಎಲ್ಲಾ ಅವರೇ ನೋಡಿಯಾರು. ಜೊತೆಗೆ ಅಪ್ಪುವನ್ನು ಕೂಡ ಒಂದು ನೇರ್ಪದ ದಾರಿಗೆ ತಂದಾರು. ನೀನು ಸಮಾಧಾನ ಮಾಡು. ಎಲ್ಲಾ ಸರಿಯಾದೀತು.” ಅಮ್ಮ ಪಕ್ಕಕ್ಕೆ ಹೊರಳಿ ತಿರುಗುತ್ತಿದ್ದ ಫ್ಯಾನನ್ನೇ ನೋಡುತ್ತಾ ಮಲಗಿದ್ದ ಅಪ್ಪುವನ್ನು ಬಿಗಿಯಾಗಿ ತಬ್ಬಿದ್ದರು. ವಿಲಾಸಿನಿ ಚೇಚಿ ಸ್ವಲ್ಪ ಹೊತ್ತು ಮೌನವಾಗಿ ಅಮ್ಮನ ಭುಜ ನೇವರಿಸುತ್ತಿದ್ದವರು ಆಮೇಲೆ ಎದ್ದು ದೀಪ ಆರಿಸಿ ಮಲಗಿದ್ದರು.

ಮಾರನೇ ದಿನ ಕುಟ್ಟಮಾವ ಕಾಫಿ ಕುಡಿಯಲು ಅಡಿಗೆ ಕೋಣೆಗೆ ಬರುವಾಗ ಅಪ್ಪಮ್ಮನ ಮಡಿಲಲ್ಲಿ ಕುಳಿತು ದೋಸೆ ತಿನ್ನುತ್ತಿದ್ದ ಅಪ್ಪು. ವಿಲಾಸಿನಿ ಚೇಚಿ ದೋಸೆ ಸುಡುತ್ತಿದ್ದರು. ಮಾವ ಇವನನ್ನು ನೋಡಿ ನಕ್ಕಿದ್ದರು. “ನಿನ್ನ ಹೆಸರು ಅಪ್ಪು ಅಲ್ವೇನೋ” “ಹುಂ... ಕರೆಯುವುದು ಅಪ್ಪು...ಶಾಲೆಯಲ್ಲಿ ಅನೂಪ್” ಅಪ್ಪಮ್ಮ ಇವನ ಪರವಾಗಿ ಉತ್ತರಿಸಿದ್ದರು. “ಹೌದೇನೋ? ಶಾಲೆಗೆ ಹೋಗುತ್ತೀಯಾ?..ಎಷ್ಟನೆ ಕ್ಲಾಸು ಈಗ?” ಅಪ್ಪು ಅಪ್ಪಮ್ಮನ ಮಡಿಲಲ್ಲಿ ಇನ್ನಷ್ಟು ಸುರುಟಿದ್ದ. “ಹೇಳೋ ಒಂದನೇ ಕ್ಲಾಸು ಅಂತಾ ...” ಅಪ್ಪಮ್ಮ ಒತ್ತಾಯಿಸಿದರೂ ಅಪ್ಪುವಿಗೆ ಮಾತೇ ಬರಲಿಲ್ಲ. “ಮುರಳಿ ಸಣ್ಣದಿರುವಾಗ ಹೀಗೇ ಇದ್ದ. ಅಲ್ವಾ ಅಕ್ಕ?” ಕುಟ್ಟಮಾವನ ಹಸಿರು ಕಂಗಳಲ್ಲಿ ನೆನಪು ನೆರಳಾಡಿತು. “ಹುಂ” ಅಪ್ಪಮ್ಮನ ನಿಟ್ಟುಸಿರು ಅಪ್ಪುವಿನ ಹಣೆಯ ಮೇಲೆ ಬಿಸಿಯಾಯಿತು. ಚಾ ಕುಡಿದು ಮುಗಿಸಿದ ಕುಟ್ಟಮಾವ ಅಪ್ಪಮ್ಮನಲ್ಲಿ “ಅಕ್ಕ.. ನಾನು ಮಿಲ್ಲಿನತ್ರ ಹೋಗಿ ಬರುತ್ತೇನೆ. ಆ ಮ್ಯಾನೇಜರಿಗೆ ಹೇಳಿದ್ದೇನೆ. ಕಾರಿನ ಕೀ ಕೊಡು. ಹಾಗೆ ಇವನನ್ನೂ ರೆಡಿ ಮಾಡಿಸಲು ಇವನಮ್ಮನಲ್ಲಿ ಹೇಳು. ಶಾಲೆಗೆ ಬಿಟ್ಟು ಬರುತ್ತೇನೆ. ತುಂಬಾ ದಿನ ಆಗಿರಬೇಕಲ್ಲ ರಜೆ ಮಾಡಿ” ಅಪ್ಪುವಿಗೆ ಒಂಥರಾ ಅಳುಕು, ಅಂಜಿಕೆ ಕಾಡಿದರೂ ಅಪ್ಪಮ್ಮ ಒತ್ತಾಯದಿಂದ ಅವನನ್ನು ಹೊರಡಿಸಿ ಕಾರಲ್ಲಿ ಕುಳ್ಳಿರಿಸಿಕೊಂಡಿದ್ದರು. ಕುಟ್ಟಮಾವ ಇವನತ್ತ ಬಾಗಿ ಕಾರಿನ ಬಾಗಿಲು ಹಾಕುವಾಗ ಸಿಗರೇಟಿನ ವಾಸನೆಯೊಂದಿಗೆ ಇನ್ನೇನೋ ಪರಿಮಳ ಮೂಗಿಗೆ ಅಡರಿತು. ಮೈಸೂರ್ ಸ್ಯಾಂಡಲ್ ಸೋಪು ಹಾಕಿ ಸ್ನಾನ ಮಾಡುತ್ತಿದ್ದ ಅಪ್ಪನ ಮೈ ವಾಸನೆ ನೆನಪಾಯಿತು ಅಪ್ಪುವಿಗೆ. ಆದರೂ ಸಿಗರೇಟಿನ ವಾಸನೆ ಕೂಡ ಒಂಥರಾ ಒಳ್ಳೇದಿದೆ ಅನ್ನಿಸದಿರಲಿಲ್ಲ. ದಾರಿಯುದ್ದಕ್ಕೂ ಕುಟ್ಟಮಾವ ಶಾಲೆಯ ಬಗೆಗೆ, ಗೆಳೆಯರ ಬಗೆಗೆ ಕೇಳುತ್ತಲೇ ಇದ್ದರು. ಮೊದಮೊದಲು ನಾಚಿದರೂ ಶಾಲೆ ತಲುಪುವಷ್ಟು ಹೊತ್ತಿಗೆ ಅವರು ಕೇಳಿದ್ದಕ್ಕೆ ಉತ್ತರ ಕೊಡುವಷ್ಟು ಸಂಕೋಚ ಬಿಟ್ಟಿತ್ತು. ಶಾಲೆಯ ಗೇಟಿನ ಬಳಿ ಕಾರು ನಿಲ್ಲಿಸಿದವರು ಇವನ ಕೆನ್ನೆ ತಟ್ಟಿ “ಬೀ ಯೇ ಗುಡ್ ಬಾಯ್ .. ಸಂಜೆ ಕರೆದುಕೊಂಡು ಹೋಗಲು ಬರುತ್ತೇನೆ.” ಎಂದು ಕಾರು ತಿರುಗಿಸಿ ಟಾಟಾ ಮಾಡಿದಾಗ ಇವನರಿವಿಲ್ಲದೆ ಇವನ ಕೈಯ್ಯೂ ಮೇಲೆದ್ದಿತ್ತು.

ಸಂಜೆ ಶಾಲೆ ಬಿಡಲು ಇನ್ನೂ ಹೊತ್ತಿರುವಾಗಲೇ ಶಾಲೆಗೆ ಬಂದ ಕುಟ್ಟಮಾವ ಹೆಡ್ ಮಿಸ್ತ್ರೆಸ್ಸ್ ಅಲ್ಲಿ ಮಾತನಾಡಿ ನೇರ ಇವನ ತರಗತಿಗೆ ಬಂದಿದ್ದರು. ಜಿ.ಕೆ ಪಾಠ ಮಾಡುತ್ತಿದ್ದ ಮೇರಿ ಸಿಸ್ಟರಲ್ಲಿ “ಹೇಗಿದ್ದಾನೆ ನಮ್ಮ ಅನೂಪ್?...ಶಾಲೆಗೆ ಬಂದು ತುಂಬಾ ದಿನ ಆಯ್ತಲ್ವಾ?.. ಪರೀಕ್ಷೆಗೆ ಇನ್ನು ಹತ್ತಿಪ್ಪತ್ತೇ ದಿನ ಬಾಕಿ ಅಲ್ವಾ?... ಟ್ಯೂಶನ್ ಏನಾದರೂ ಬೇಕಾದೀತಾ?” ಉದ್ದಾನುದ್ದಕ್ಕೆ ಮಾತನಾಡುತ್ತಾ ಹೋದ ಕುಟ್ಟಮಾವನ ಹಸಿರುಕಂಗಳನ್ನು ನೋಡಿ ಸಿಸ್ಟರು ಗಲಿಬಿಲಿಗೊಂಡಿದ್ದರು. “ಓ..ಅನೂಪ್?..ಅವನಿಗೆ ತೊಂದರೆ ಇಲ್ಲ ..ಅವನು ಕ್ಲಾಸಿಗೆ ಫಸ್ಟ್...ಮತ್ತೆ ನೀವು...?” ಅವರ ಮಾತಿಗೆ ಕುಟ್ಟಮಾವನ ಹಸಿರುಕಂಗಳು ಇನ್ನಷ್ಟು ಮಿಂಚಿದ್ದವು. “ಒಹ್..ಅಯಾಂ ಸೋರಿ .. ನಾನು ಶ್ರೀಕುಟ್ಟನ್ ...ಅನೂಪ್ ತಂದೆಯ ಸೋದರಮಾವ. ಮಿಲಿಟ್ರಿ ರಿಟರ್ನಡ್. ಇದೀಗ ತಾನೇ ಕಣ್ಣೂರಿನ ಜುವಯ್ನಲ್ ಹೋಂ ಸುಪರಿಂಟೆನ್ಡೆಂಟ್ ಆಗಿ ರಿಟಾಯರಡ್ ಆಗಿದ್ದೇನೆ...ಮತ್ತೆ ಸಿಸ್ಟರ್ ನಿಮಗೆ ಅಭ್ಯಂತರವಿಲ್ಲದಿದ್ದರೆ ಅನೂಪನನ್ನು ನಾನು ಕರೆದೊಯ್ಯಬಹುದೇ” “ಒಹ್..ವಯ್ನಾಟ್ ?..ಶ್ಯೂರ್‌... ಮಿಸ್ಟರ್‌ ಶ್ರೀಕುಟ್ಟನ್.” ಮೇರಿ ಸಿಸ್ಟರ್ ಡೆಸ್ಕಿನಿಂದ ಬ್ಯಾಗ್ ಮೇಲೆತ್ತಿ ಪುಸ್ತಕಗಳನ್ನು ಜೋಡಿಸಿ ಕೊಟ್ಟಿದ್ದರು.

ಶಾಲೆಯ ಗೇಟಿನಿಂದ ಹೊರಬಂದ ಕಾರು ನೇರವಾಗಿ ನಿಂತದ್ದು ಕೊಚ್ಚಿನ್ಸ್ ಬೇಕರಿಯ ಮುಂದೆ. ದೊಡ್ಡ ಗಾಜಿನ ಲೋಟದ ತುಂಬ ತುಂಬಿದ್ದ ಐಸ್ಕ್ರೀಮನ್ನು ಕಷ್ಟಪಟ್ಟು ಮುಗಿಸಿದವನ ಕಣ್ಣು ಕುಟ್ಟಮಾವ ಬಿಲ್ ಕೊಡುವಾಗ ಬಿಲ್ ಕೌಂಟರಿನ ಬದಿಯಲ್ಲಿ ಜೋಡಿಸಿಟ್ಟಿದ್ದ ತರಹಾವರಿ ಚಾಕ್ಲೆಟ್ ಬಾರ್‌ಗಳ ಮೇಲೆಯೇ ಇತ್ತು. ಇವನ ಕಣ್ಣೋಟ ಗಮನಿಸಿದ ಕುಟ್ಟಮಾವ “ಬೇಕೇನೋ?” ಎಂದು ಕೇಳಿದಾಗ ಅಪ್ಪನ ನೆನಪಾಗಿ ಬೇಡವೆಂದಿದ್ದ ಅಪ್ಪು. ಮುರಳಿ ಮಗನನ್ನು ಎಷ್ಟೇ ಕೊಂಡಾಟ ಮಾಡುತ್ತಿದ್ದರೂ ಚಾಕಲೇಟ್ ಕೊಡಿಸಿದ ನೆನಪಿಲ್ಲ ಅಪ್ಪುವಿಗೆ. ತಾನು ಕೊಡಿಸುವುದಿರಲಿ, ಇತರರು ಕೊಡುವುದನ್ನೂ ಇಷ್ಟಪಡುತ್ತಿರಲಿಲ್ಲ ಮುರಳಿ. ಹಿಂದಿನ ಬಾರಿ ರಾಜುಮಾಮ ಊರಿಂದ ಬರುವಾಗ ದೊಡ್ಡದೊಂದು ಡೈರಿ ಮಿಲ್ಕ್ ಬಾರ್ ತಂದಿದ್ದ. ಅಪ್ಪು ಇನ್ನೇನು, ಅದರ ರ‍್ಯಾಪರ್‌ ಬಿಚ್ಚಿ ಒಂದು ಚೂರು ಕಚ್ಚಬೇಕೆನ್ನುವಷ್ಟರಲ್ಲಿ ಎಲ್ಲಿದ್ದನೋ, ಏನೋ ಮುರಳಿ ಬಂದವನೇ ಇವನ ಕೈಯಿಂದ ಅದನ್ನು ಕಿತ್ತು ಎಸೆದಿದ್ದ. ಅಪ್ಪುವಿಗೆ ಕಣ್ಣಲ್ಲಿ ನೀರು ಬಂದರೆ, ರಾಜು ಮಾಮನ ಮುಖ ಸಪ್ಪೆಯಾಗಿತ್ತು. ಚಾ ತಂದ ಅಪ್ಪಮ್ಮ ಮಾಮನನ್ನು ಸಮಾಧಾನ ಪಡಿಸಿದ್ದರು. “ನೀ ಏನೂ ತಿಳಿದುಕೊಳ್ಳಬೇಡ ರಾಜು. ನಿನ್ನ ಭಾವ ಚಿಕ್ಕದಿನಲ್ಲಿ ಸಿಕ್ಕಾಪಟ್ಟೆ ಚಾಕ್ಲೆಟ್‌ ತಿನ್ನುತ್ತಿದ್ದ.... ಚಾಕ್ಲೆಟ್ ತಿಂದು ಒಮ್ಮೆ ಹೊಟ್ಟೆನೋವು ಬಂತು ನೋಡು...ಆಮೇಲೆ ಅವನೂ ಚಾಕ್ಲೆಟ್‌ ತಿನ್ದಿರಲಿಕ್ಕಿಲ್ಲ. ಬೇರೆ ಮಕ್ಕಳು ತಿನ್ನುವುದೂ ಇಷ್ಟ ಇಲ್ಲ...” “ಆದರೂ....ನಾನು ಮಗುವಿಗೆ ಆಶೆಯಿಂದ ತಂದದ್ದು..” ರಾಜು ಮಾಮ ಮುಂದೆ ಮಾತನಾಡಿರಲಿಲ್ಲ. ಆಮೇಲೆ ಮಿಜಾರಿಗೆ ಹೋದಾಗ ಮಾಮ ಆಗಾಗ ಚಾಕ್ಲೆಟ್ ತೆಗೆದುಕೊಡುತ್ತಿದ್ದರೂ, “ಅಪ್ಪು.. ಅಪ್ಪನಲ್ಲಿ ಹೇಳ್ಬೇಡ ..ಆಯ್ತೇನೋ?..” ಎನ್ನಲು ಮರೆಯುತ್ತಿರಲಿಲ್ಲ. “ತಗೊಳ್ಳೋ” ಕುಟ್ಟಮಾವನ ದನಿಗೆ ಅಪ್ಪು ತಲೆಯೆತ್ತಿ ನೋಡಿದರೆ ಮಾವನ ಕೈಯ್ಯಲ್ಲಿ ಒಂದಲ್ಲ, ನಾಲ್ಕು ಡೈರಿ ಮಿಲ್ಕ್ ಬಾರ್! ಒಂದಿಷ್ಟು ಸಂಕೋಚದಿಂದ ಕೈ ನೀಡಿದವನ ಕಣ್ಣಲ್ಲಿ ಅಪನಂಬಿಕೆಯಿತ್ತಾದರೂ ತುಟಿಯಲ್ಲಿ ನಸುನಗು ತೇಲಿತ್ತು.

ಮಾರನೇ ದಿನ ಹೇಳುವ ಮೊದಲೇ ಬ್ಯಾಗು ಹೆಗಲಿಗೇರಿಸಿ ರೆಡಿಯಾಗಿದ್ದ ಅಪ್ಪುವನ್ನು ನೋಡಿ ಅಪ್ಪಮ್ಮ ನಿಟ್ಟುಸಿರಿಟ್ಟಿದ್ದರು. “ಒಂದೇ ದಿನದಲ್ಲಿ ಹೊಂದಿಕೊಂಡ ಮಗು.. ಪಾಪ ಎರಡು ವಾರದಿಂದ ಮಂಕಾಗಿದ್ದ” ಶಾಲೆ ಮುಟ್ಟುವಷ್ಟರಲ್ಲಿ ‘ಒನ್ಸ್ ಅಪೋನ್ ಎ ಟೈಮ್ ‘ ಪದ್ಯವನ್ನು ರಾಗದಲ್ಲಿ ಹಾಡಿತೋರಿಸಿದವನ ಕೆನ್ನೆ ತಟ್ಟಿ “ಭೇಷ್” ಎಂದಿದ್ದರು ಮಾವ. ಸಂಜೆ ಡೈರಿ ಮಿಲ್ಕ್ ಕೊಡಿಸುವಾಗ “ನಿನ್ನ ಹಾಡಿಗೆ ಇನಾಮು ಕಣೋ” ಎಂದು ನಕ್ಕಿದ್ದರು. ಕಾಫಿ ಕುಡಿದಾದ ಮೇಲೆ ಕುಟ್ಟಮಾವ “ಅಕ್ಕಾ ನಾನು ಒಮ್ಮೆ ಕೆರೆ ಕಡೆಗೆ ಹೋಗಿ ಬರುತ್ತೇನೆ ...ಎಷ್ಟು ದಿನಗಳಾದವು ಈಜು ಹೊಡೆಯದೆ?...” ಎಂದವರು ಅಪ್ಪುವಿನತ್ತ ತಿರುಗಿ “ಬರುತ್ತೀಯೇನೋ” ಕೇಳಿದ್ದರು. ಮಂಜಾಡಿ ಕೆರೆಗೆ ಇವರ ಮನೆಯಿಂದ ಒಂದೇ ಫರ್ಲಾಂಗ್ ದೂರ. ಅಲ್ಲಿಂದ ಚೂರು ಮುಂದೆ ಮಂಜಾಡಿ ಕಾವು ದೇವಸ್ಥಾನ. ದೇವಸ್ಥಾನದ ಎದುರು ಇನ್ನೊಂದು ಪುಟ್ಟ ಕೊಳ ಇತ್ತು. ಅದು ದೇವಸ್ಥಾನದ ಉಪಯೋಗಕ್ಕೆ ಮಾತ್ರ. ಹೊರಗಿನವರು ಅದನ್ನು ಉಪಯೋಗಿಸುವಂತಿಲ್ಲ. ಮಂಜಾಡಿ ಕೆರೆ ಸರಿಸುಮಾರು ಒಂದೆಕರೆಯಷ್ಟು ವಿಸ್ತಾರವಾಗಿದ್ದು ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರತ್ಯೇಕ ಸ್ನಾನದ ಕಡವುಗಳಿದ್ದವು. ಪಶ್ಚಿಮದ ಕಡೆಯ ಕಡವಿನಲ್ಲಿ ಬೆಳಿಗ್ಗೆ, ಸಂಜೆ ಊರಿನ ಹೆಣ್ಮಕ್ಕಳು ಬಟ್ಟೆ ಒಗೆಯಲು, ಸ್ನಾನಕ್ಕೆ ಬರುತ್ತಿದ್ದರೆ, ಸಂಜೆ ಹೊತ್ತಲ್ಲಿ ಪೂರ್ವದ ಕಡವು ಊರಿನ ಯುವಕರಿಂದ ತುಂಬಿ ಗಿಜಿಗುಡುತ್ತಿತ್ತು. ಕೆರೆಯ ಮಧ್ಯ ಭಾಗದಲ್ಲಿ ಸುಮಾರು ಆರಾಳಿನಷ್ಟು ಆಳವಿದೆಯೆಂದು ಹಿರಿಯರು ಹೇಳುತ್ತಿದ್ದರಿಂದ ಯಾರು ಕೂಡ ಕೆರೆಯ ಮಧ್ಯದಲ್ಲಿ ಈಜುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ಅಮ್ಮನೊಂದಿಗೆ ಮಂಜಾಡಿ ಕಾವಿಗೆ ಹೋಗುವಾಗೆಲ್ಲಾ ಕೆರೆಯಲ್ಲಿ ಅರಳಿದ ದೊಡ್ಡ, ದೊಡ್ಡ ತಾವರೆಗಳು ಅಪ್ಪುವನ್ನು ಕೈ ಬೀಸಿ ಕರೆಯುತ್ತಿದ್ದವು. ಆದರೆ ಒಂದೇ ಒಂದು ಬಾರಿ ಕೂಡ ಆ ಕೆರೆ ನೀರಿಗೆ ಕಾಲು ಸೋಕಿಸಿದ ನೆನಪಿಲ್ಲ ಅಪ್ಪುವಿಗೆ. ಮಿಜಾರಿಗೆ ಬಂದಾಗ ರಾಜುಮಾಮನೊಂದಿಗೆ ಮೀನು ಹಿಡಿಯಲು ಅಳಿವೆ ಬಾಗಿಲು, ಆಮೆಗುಂಡಿ ಎಲ್ಲಾ ಕಡೆ ಸುತ್ತಾಡುತ್ತಿದ್ದವ ಮಾಮನೊಂದಿಗೆ ಸೇರಿ ಒಂದಿಷ್ಟು ಈಜು ಹೊಡೆಯಲೂ ಕಲಿತಿದ್ದ. ಸಂಜೆ ಹೊತ್ತಿನಲ್ಲಿ ರಾಜುಮಾಮನೊಂದಿಗೆ ಮಿಜಾರು ಹೊಳೆಯಲ್ಲಿ ಸ್ನಾನ ಮಾಡುವಾಗೆಲ್ಲಾ ‘ಆ ನಸು ಬಿಸಿನೀರು ಕೊಡುವ ಕುಶಿ ಮಂಜಾಡಿ ಕೆರೆ ನೀರಲ್ಲೂ ಸಿಕ್ಕೀತೇ?’ ಅಂತ ಒಮ್ಮೊಮ್ಮೆ ಅನ್ನಿಸಿದರೂ, ಮಂಜಾಡಿ ಕೆರೆ ಪಕ್ಕಕ್ಕೂ ಹೋಗದ ಅಪ್ಪನಲ್ಲಿ ಕೆರೆ ಬಳಿ ಹೋಗಲೇ’ ಎಂದು ಕೇಳುವ ಧೈರ್ಯವಾಗುತ್ತಿರಲಿಲ್ಲ ಅವನಿಗೆ. ಬಹುಷಃ ಅಪ್ಪನಿಗೆ ಈಜಲು ಗೊತ್ತಿರಲಿಕ್ಕಿಲ್ಲ. ಆದುದರಿಂದ ಕೆರೆ ಎಂದರೆ ಭಯ ಎಂದುಕೊಂಡಿದ್ದವ ಹಿಂದಿನ ಬಾರಿ ಮಿಜಾರಿಗೆ ಹೋಗಿ ಬಂದ ಮೇಲೆ ಅಪ್ಪಮ್ಮನಲ್ಲಿ ಆ ಬಗ್ಗೆ ಕೇಳಿದ್ದ. ಅಪ್ಪಮ್ಮ ನಕ್ಕಿದ್ದರು. “ಯಾರಿಗೆ ಭಯ?.. ನಿನ್ನಪ್ಪನಿಗೇನೋ?..ಅವ ಮೀನಿಗೆ ಈಜು ಕಲಿಸಿಯಾನು...ಈಜಿನಲ್ಲಿ ಕುಟ್ಟನನ್ನೇ ಮೀರಿಸಿದವ ನಿನ್ನಪ್ಪ.” “ಮತ್ತೆ ಅಪ್ಪ ಯಾಕೆ ಈಗ ಈಜ್ತಿಲ್ಲ?” “ಗೊತ್ತಿಲ್ಲವೋ....ಹತ್ತನೇ ಕ್ಲಾಸು ಪರೀಕ್ಷೆ ಕಳೆದದ್ದೇ ಕಳೆದದ್ದು ...ಹೇಗಿದ್ದ ಹುಡುಗ ಹೇಗಾಗಿಬಿಟ್ಟ” ಅಪ್ಪಮ್ಮ ನಿಟ್ಟುಸಿರಿಟ್ಟಿದ್ದರು.

ಕುಟ್ಟಮಾವನೊಂದಿಗೆ ಸೋಪು, ಎಣ್ಣೆ, ಬೈರಾಸು ತೆಗೆದುಕೊಂಡು ಕಡವಿನ ಬಳಿ ಬಂದಾಗ ಸಂಜೆಯಾಗಿತ್ತು. ಐದಾರು ಯುವಕರು ಕೆರೆಯಲ್ಲಿ ಈಜು ಹೊಡೆಯುತ್ತಿದ್ದರೆ, ಒಂದಿಬ್ಬರು ಪ್ರಾಯದವರು ಕಡವಿನ ಮೆಟ್ಟಲಲ್ಲಿ ಕುಳಿತು ಮೈ ತಿಕ್ಕುತ್ತಿದ್ದರು. ಇವನ ಅಂಗಿ ಬಿಚ್ಚಿದ ಕುಟ್ಟಮಾವ ಮೈಗೆಲ್ಲ ಎಣ್ಣೆ ಹಚ್ಚಿದ್ದರು. ಇವ ಕಚಗುಳಿಯಿಂದ ಒದ್ದಾಡಿದರೆ, “ಸರಿಯಾಗಿ ನಿಂತ್ಕೊಳ್ಳೋ..ಈ ಪ್ರಾಯದಲ್ಲಿ ಸರಿಯಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿದ್ರೇನೇ ದೊಡ್ದಾದ್ ಮೇಲೆ ಮಸಲ್ಸ್ ಬರುವುದು. ಗೊತ್ತಾ ನಿಂಗೆ?” ಅಪ್ಪು ಮಾತನಾಡದೆ ಕುಟ್ಟಮಾವನ ಕಬ್ಬಿಣದ ತುಂಡುಗಳಂತಿದ್ದ ಮಸಲ್ಸನ್ನು ದಿಟ್ಟಿಸಿದ್ದ. “ಈಜು ಬರುತ್ತೇನೋ?” ಕುಟ್ಟಮಾವನ ಮಾತಿಗೆ “ಸ್ವಲ್ಪ” ಎಂದವನ ಸ್ವರದಲ್ಲಿ ಅಳುಕಿತ್ತು. “ಅಪ್ಪ ಕಲಿಸಿದ್ದೇನೋ” “ಇಲ್ಲ... ರಾಜುಮಾಮನ್ ಜೊತೆ ಮಿಜಾರಲ್ಲಿ ಕಲ್ತದ್ದು” “ಸರಿ..ಹಾಗಿದ್ರೆ ಒಂದುಕೈ ನೋಡೋಣಂತೆ.” ಮೊದಲ ಬಾರಿ ಮಂಜಾಡಿ ಕೆರೆ ನೀರಿಗೆ ಇಳಿದವನಿಗೆ ಒಂಥರಾ ಎದೆನಡುಕ. ಅರ್ಥ ಮಾಡಿಕೊಂಡವರಂತೆ ಕುಟ್ಟಮಾವ ನೀರಿನಲ್ಲಿ ಅವರ ಕೈಗಳನ್ನು ಚಾಚಿ ಅದರ ಮೇಲೆ ಮಲಗಿಸಿ ಕೈಕಾಲು ಬಡಿಯಲು ಹೇಳಿದ್ದರು. ಎರಡು ಸಲ ಬಡಿವಾಗಲೇ ಹೆದರಿಕೆ ದೂರಾದವ ಕಡವಿನ ಬದಿಯಲ್ಲೇ ಈಜುವ ಯತ್ನ ಮಾಡಿದ್ದ. ಇವನನ್ನು ತಿಕ್ಕಿ ಸ್ನಾನ ಮಾಡಿಸಿ ಮೆಟ್ಟಲಲ್ಲಿ ಕುಳ್ಳಿರಿಸಿದ ಕುಟ್ಟಮಾವ ನಾಲ್ಕುಸುತ್ತು ಈಜು ಹೊಡೆದಿದ್ದರು. ಮುಂದಿನ ದಿನಗಳಲ್ಲಿ ಸಂಜೆ ಹೊತ್ತು ಕೆರೆಕಡೆ ಸವಾರಿ ದಿನನಿತ್ಯದ ಪರಿಪಾಟವಾಯಿತು. ಕುಟ್ಟಮಾವ ಮತ್ತು ಇವನ ದೋಸ್ತಿ ನೋಡಿದ ವಿಲಾಸಿನಿ ಚೇಚಿ “ಅಲ್ಲವೋ ಅಪ್ಪು...ನೀನು ಈ ಬಾರಿ ರಜೆಗೆ ಕುಟ್ಟಮಾವನನ್ನು ಬಿಟ್ಟು ಮಿಜಾರಿಗೂ ಹೊಗೊಲ್ವೇನೋ?” ಅಂತ ಕೇಳಿಯೂ ಬಿಟ್ಟಿದ್ದರು. ಎಲ್ಲಾ ಸಲವೂ ವಿಷು ಕಳೆದ ಕೂಡಲೇ ರಾಜುಮಾಮ ಬಂದು ಮಿಜಾರಿಗೆ ಕರೆದುಕೊಂಡು ಹೋಗುವುದು ವಾಡಿಕೆ. ಬೆಳಿಗ್ಗೆ ನಾಲ್ಕಕ್ಕೆ ಮನೆ ಬಿಟ್ಟರೆ 5.20 ಕ್ಕೆ ಕೊಟ್ಟಾಯಂನಿಂದ ಟ್ರೈನು. ರೈಲ್ವೆ ಸ್ಟೇಷನ್ಗೆ ಅಪ್ಪ ಕಾರಲ್ಲಿ ಬಿಡುತ್ತಿದ್ದರು. ಸಂಜೆ 6.20ಕ್ಕೆ ಉಪ್ಪಳ ತಲುಪಿದರೆ ಅಲ್ಲಿಂದ ಬಸ್ಸಲ್ಲಿ ಮಿಜಾರಿಗೆ. ಇಡೀ ದಿನ ಟ್ರೈನಲ್ಲಿ ಕೂತುಕೊಳ್ಳುವುದು ಬೇಜಾರು ಹುಟ್ಟಿಸುತ್ತಿದ್ದರೂ ಮಿಜಾರು ಮುಟ್ಟಿದ ಮೇಲೆ ರಾಜುಮಾಮ ಕೊಡಿಸುತ್ತಿದ್ದ ಚಾಕ್ಲೆಟ್, ಮಿಜಾರು ಹೊಳೆ, ನೆರೆಮನೆ ಇಂದು ಅಕ್ಕನೊಂದಿಗೆ ಪೇಟೆ ಸವಾರಿ, ಅಜ್ಜ, ಅಜ್ಜಿಯರ ಕೊಂಗಾಟ ನೆನೆಸಿ ರಜೆ ಶುರುವಾಗುವ ಮೊದಲೇ “ಯಾವಾಗ ಮಿಜಾರಿಗೆ ಹೋಗುವುದು?” ಎಂದು ಆಗಾಗ ಅಮ್ಮನಲ್ಲಿ ಕಿರಿಕಿರಿ ಮಾಡಿ ಬೈಗುಳ ತಿನ್ನುತ್ತಿದ್ದ ಅಪ್ಪು. ಬಾಯಲ್ಲಿ ಅಪ್ಪುವನ್ನು ಬೈದರೂ ಅಪ್ಪುವಿನ ಅಮ್ಮನಿಗೂ ಮಿಜಾರಿಗೆಹೋಗುವುದು ಖುಷಿಯೇ!.. ವರ್ಷದಲ್ಲಿ ಎರಡು ಬಾರಿ ಒಮ್ಮೆ ಓಣಂ ರಜೆಯಲ್ಲಿ, ಇನ್ನೊಮ್ಮೆ ದೊಡ್ಡ ರಜೆಯಲ್ಲಿ. ಮಿಜಾರು ಶಾಲೆಯಲ್ಲಿ ಮಾಸ್ತರಾಗಿದ್ದ ರಾಜುಮಾಮ ಬಂದು ಕರೆದುಕೊಂಡು ಹೋಗುತ್ತಿದ್ದ. ಮಿಜಾರಿನ ಅಜ್ಜಿ ಹೇಳುವ ಹಾಗೆ “ಮಿಜಾರಿನಿಂದ ಅಷ್ಟು ದೂರದ ಚಂಘನಾಶ್ಯೇರಿಗೆ ಹೋಗಲಿಕ್ಕಿದ್ದೀತು ಅಂತ ಯಾರಾದರೂ ಎಣಿಸಿದ್ದರಾ?” ಹಾಗೆ ನೋಡಿದರೆ ಆ ಕತೆ ಅಜ್ಜಿ ಅಪ್ಪುವಿಗೂ ಹೇಳಿದ್ದಾರೆ. ಅಪ್ಪುವಿನ ಅಮ್ಮನಿಗೆ ಜಾತಕದಲ್ಲಿ ಕುಜದೋಷ ಇತ್ತಂತೆ. 27 ವರ್ಷ ದಾಟಿದರೂ ನೆಂಟಸ್ತಿಕೆ ಕೂಡಿರಲಿಲ್ಲವಂತೆ. ಆಗ ರಾಜುಮಾಮನ ಶಾಲೆಯಲ್ಲಿ ಇದ್ದ ಉಣ್ಣಿತ್ತಾನ್ ಮಾಸ್ಟರು ‘ಮಲಯಾಳ ಮನೋರಮಾ’ ಅಂತ ಒಂದು ಪೇಪರಿಗೆ ‘ಹುಡುಗ ಬೇಕು’ ಅಂತ ಹಾಕಿದ್ರಂತೆ. ಒಂದೇ ವಾರದಲ್ಲಿ ಮುರಳಿಯ ಜಾತಕ ಬಂದಿತಂತೆ. ಅವನಿಗೂ ಕುಜದೋಷ. ಮೇಳಾಮೇಳಿ ನೋಡಿದ ಕೃಷ್ಣ ಅಡಿಗರು “ಭಲೇ ಭೇಷ್” ಅಂದರಂತೆ. ಆದರೂ ಅಜ್ಜಿಗೆ ಸಮಾಧಾನ ಇರಲಿಲ್ಲವಂತೆ. ‘ಇರುವುದು ಒಂದು ಹುಡುಗಿ... ಅಷ್ಟು ದೂರ ಕೊಡುವುದು... ಅದೂ ತೆಂಕ್ಲಾಯಿಗೆ..’ ಉಣ್ಣಿತ್ತಾನ್ ಮಾಸ್ಟರು ಸಮಾಧಾನ ಮಾಡಿದರಂತೆ “ಯಾವುದಕ್ಕೂ ಹುಡುಗ ಬಂದು ಹುಡುಗಿಯನ್ನು ನೋಡಲಿ.” ಹುಡುಗ ಬಂದೂ ಆಯಿತು... ಹುಡುಗಿಯನ್ನು ಪಾಸು ಮಾಡಿಯೂ ಆಯಿತು... ಹುಡುಗನ ಗುಣ, ನಡತೆ ಎಲ್ಲರಿಗೆ ಒಪ್ಪಿಗೆಯೂ ಆಯಿತು. ಮುಂದಿನ ವಾರದಲ್ಲಿ ಚಂಘನಾಶ್ಯೇರಿಗೆ ಹುಡುಗನ ಮನೆ ನೋಡಲು ಹೋದವರು ಆ ಮನೆ, ತೋಟ, ಮಿಲ್ಲು, ಹುಡುಗನ ತಾಯಿ ಎಲ್ಲಾ ನೋಡಿ ಕುಶಿಯಾಗಿ ಮಾತು ಕೊಟ್ಟೇ ಬಂದರಂತೆ. ಹಾಗೆ ದೂರದ ಮಿಜಾರಿನ ಹುಡುಗಿ ಚಂಘನಾಶ್ಯೇರಿ ನೆಲ್ಲಿಕ್ಕಾಡು ತರವಾಡಿನ ಸೊಸೆಯಾಗಿದ್ದಳು.

“ಡೋಯ್” ಬಂಡೆಗಳ ಆಚೆಯಿಂದ ಜೋರು ಬೊಬ್ಬೆ ಕೇಳಿತು. ಯಾವುದೋ ಆಮೆಯೋ, ಮೀನೋ ಗಾಳಕ್ಕೆ ಕಚ್ಚಿರಬೇಕು. ಅಪ್ಪು ಇನ್ನಷ್ಟು ಈ ಬದಿಗೆ ಬಂಡೆಯ ಇರುಕಿನತ್ತ ಸರಿದ. ನೀರು ಒಂಚೂರು ಕಪ್ಪಿನ ಬಣ್ಣಕ್ಕೆ ತಿರುಗಿತ್ತು. ‘ಈಗ ಗಂಟೆ ಎಷ್ಟಾಗಿರಬಹುದು?...ಅಮ್ಮ, ರಾಜುಮಾಮ ತನ್ನನ್ನು ಹುಡುಕಲು ತೊಡಗಿರಬಹುದಾ?.. ತಾನು ಹೊಳೆಯತ್ತ ಬಂದದ್ದನ್ನು ಇಂದು ಅಕ್ಕ ನೋಡಿರಬಹುದಾ?...ಅಥವಾ...ಬೇರೆ ಯಾರಾದರೂ...? ಈಗ ಹುಡುಕಿಕೊಂಡು ಇಲ್ಲಿಗೆ ಬಂದಾರಾ?...ಅಥವಾ ಆ ಪೋಲಿಹುಡುಗರು ಈ ಬದಿಗೆ ಬಂದು ತನ್ನನ್ನು ಕಂಡರೆ?...ಮಧೂರು ಗಣಪತಿ ದೇವರೇ...ಆಟ್ಟುಕ್ಕಾಲ್ ಭಗವತೀ...ಸ್ವಾಮಿ ಕೊರಗಜ್ಜಾ...ಕಾಪಾಡು...’ ಅಪ್ಪುವಿಗೆ ಅಳು ಉಕ್ಕಿ ಬಂತು...ಅದರೊಂದಿಗೆ ಬೆನ್ನುಮೂಳೆಯ ಕೆಳಗಿನಿಂದ ನೋವು ಮತ್ತು ನೆನಪುಗಳೂ ಒತ್ತರಿಸಿ ಬಂದವು.

ಮಾರ್ಚ್ ತಿಂಗಳು ಕೊನೆಯಾಗಿತ್ತು. ಕುಟ್ಟಮಾವ ಊರಿಗೆ ಬಂದು ತಿಂಗಳಾಗುತ್ತಾ ಬರುತ್ತಿತ್ತು... ಪರೀಕ್ಷೆ ಹತ್ತಿರಾಗಿತ್ತು. ಆ ದಿನ ರಾತ್ರಿ ಊಟ ಮಾಡಿ ಮಲಗಲು ಹೊರಟವನನ್ನು ಕುಟ್ಟಮಾವ ಕರೆದಿದ್ದರು. “ಪರೀಕ್ಷೆ ಶುರು ಆಯ್ತಲ್ವಾ? ...ಸ್ವಲ್ಪ ಇಂಗ್ಲಿಷ್ ಹೇಳಿಕೊಡುತ್ತೇನೆ....ನನ್ನ ಕೋಣೆಯಲ್ಲಿ ಮಲಗು ಇವತ್ತು.” ಇವ ಅಮ್ಮನ ಮುಖ ನೋಡಿದಾಗ ಕುಟ್ಟಮಾವನ ಕಣ್ಣು ಅಮ್ಮನತ್ತ ಹೊರಳಿತ್ತು. “ಹೆಣ್ಣೇ..ಅವನು ತುಂಬಾ ದಿನ ಶಾಲೆ ತಪ್ಪಿಸಿದ್ದಲ್ಲವಾ?..ಸ್ವಲ್ಪ ನೋಡಿ ಅಂತ ಕ್ಲಾಸ್‌ ಟೀಚರ್‌ ಹೇಳಿದ್ದಾರೆ..ಇನ್ನು ಸ್ವಲ್ಪ ಸ್ವಲ್ಪ ಮೈ ಬಿಟ್ಟು ಮಲಗಲಿಕ್ಕೆ ಕಲೀಲಿ...ಗಂಡು ಹುಡುಗ ಅಲ್ವಾ ..ಎಷ್ಟು ದಿನ ಅಂತ ಹೊಟ್ಟೆಯೊಳಗಿಟ್ಟುಕೊಳ್ಳುತ್ತಿ?...” ‘ಮೇರಿ ಟೀಚರ್ ಮಾಮನಲ್ಲಿ ಯಾವಾಗ ಹಾಗೆ ಹೇಳಿದ್ದು?’ ಅಪ್ಪು ಆಲೋಚನೆ ಮಾಡ್ತಾ ನಿಂತಿರಬೇಕಾದರೆ ಅಮ್ಮ ಒಳಗಿನಿಂದ ಸ್ಕೂಲ್ ಬ್ಯಾಗ್ ಮತ್ತು ಹೊದಿಕೆ ತಂದು ಪಡಸಾಲೆಯಲ್ಲಿ ಕುಟ್ಟಮಾವ ಮಲಗುವ ಕೋಣೆಯ ಬಾಗಿಲಲ್ಲಿಟ್ಟು ಆಗಿತ್ತು.
ಕುಟ್ಟಮಾವ ಅರ್ಧಗಂಟೆ ಇಂಗ್ಲಿಷ್ ಲೆಸೆನ್ ಹೇಳಿಕೊಟ್ಟಿದ್ದರು. ರೈಮ್ಸ್ ..ಡಿಕ್ಟೇಶನ್ ಎಲ್ಲಾ ಆದಮೇಲೆ ಇವನನ್ನು ಮಲಗಲು ಹೇಳಿದವರು ಸಿಗರೇಟು ಸೇದುತ್ತಾ ಮಿಲ್ಲಿನ ಲೆಕ್ಕ ನೋಡತೊಡಗಿದ್ದರು. ಅಮ್ಮನೊಂದಿಗೆ ಮಲಗಿದರೆ ಕೂಡಲೇ ನಿದ್ದೆ ಮಾಡುತ್ತಿದ್ದ ಅಪ್ಪುವಿಗೆ ಆ ದಿನ ನಿದ್ದೆಯೇ ಬರಲಿಲ್ಲ. ಅತ್ತಿತ್ತ ಹೊರಳಾಡುತ್ತಿದ್ದವನನ್ನು ನೋಡಿ ಮಾವ ನಸುನಕ್ಕಿದ್ದರು.“ಯಾಕೋ...ಅಪ್ಪು ಅಮ್ಮ ಇಲ್ಲದೆ ನಿದ್ದೆ ಬರೋಲ್ವೇನೋ?...” ಎದ್ದು ಕುಳಿತವ “ನಾನು ಅಮ್ಮನ ಕೋಣೆಗೆ ಹೋಗಲೇ ಮಾಮ” ಎಂದರೆ “ಅವರು ಈಗಾಗ್ಲೇ ನಿದ್ದೆ ಮಾಡಿರಬಹುದು. ಇಲ್ಲೇ ಮಲಗು..ಇಕಾ ನಿದ್ದೆ ಬರದಿದ್ರೆ ಬೊಂಬೆಯಾಟ ನೋಡು” ಮಾವ ಮೊಬೈಲ್ ಕೊಟ್ಟವರು ಪುನಃ ಫೈಲ್ಗಳತ್ತ ಹೊರಳಿದ್ದರು. ಅಪ್ಪುವಿಗೆ ಖುಷಿಯೋ ಖುಶಿ! ಅಪ್ಪನ ಮೊಬೈಲ್ ಮುಟ್ಟಿದ ನೆನಪಿಲ್ಲ ಅವನಿಗೆ. ಅಮ್ಮನ ಫೋನು ಮಾತನಾಡಲಿಕ್ಕೆ ಮಾತ್ರ ಇರುವುದು. ಮಿಜಾರಿಗೆ ಹೋದಾಗ ರಾಜುಮಾಮನನ್ನು ಕಾಡಿಬೇಡಿ ಗೇಮ್ಸ್ ಆಡಿದ್ದುಂಟು. ಕುಟ್ಟಮಾವ ತೆರೆದುಕೊಟ್ಟ ಕಾರ್ಟೂನ್ ಬೊಂಬೆಗಳ ಬಣ್ಣದ ಲೋಕದಲ್ಲಿ ಕಳೆದುಹೋದವನನ್ನು ಕುಟ್ಟಮಾವನೇ ಎಚ್ಚರಿಸಿ ಮಲಗಿಸಬೇಕಾಯಿತು. ಮಾರನೇ ದಿನ ಊಟದ ಬಳಿಕ ಯಾರೂ ಹೇಳದೆ ಅಪ್ಪುವೇ ಬ್ಯಾಗನೆತ್ತಿ ಕುಟ್ಟಮಾವನ ಕೋಣೆಯತ್ತ ನಡೆದಾಗ ಅಮ್ಮನ ಮುಖ ಸಪ್ಪೆಯಾಗಿತ್ತು. “ಇರಲಿ ಹೆಣ್ಣೇ ..ಮಗು ಸ್ವಲ್ಪ ಕಲಿಯಲಿ....ನಿನ್ನೊಂದಿಗೆ ವಿಲಾಸಿನಿ ಇರ್ತಾಳಲ್ಲಾ?” ಅಪ್ಪಮ್ಮ ಸಮಾಧಾನಪಡಿಸಿದ್ದರು.

ಆ ದಿನ ಜಿ.ಕೆ. ಕೇಳಿದ ಪ್ರಶ್ನೆಗಳಿಗೆಲ್ಲಾ ಅಪ್ಪು ಪಟಪಟನೆ ಉತ್ತರಿಸಿದಾಗ ಮಾವನಿಗೆ ಖುಷಿಯಾಗಿ “ಗುಡ್, ಗುಡ್” ಎಂದಿದ್ದರು. ಕಲಿತಾದ ಮೇಲೆ “ನೀನಿನ್ನು ಮಲಗು” ಎಂದವರು, ಅವನು ಮೀನಾಮೇಷ ಎಣಿಸುತ್ತಿದ್ದನ್ನು ನೋಡಿ “ಮೊಬೈಲು ಬೇಕೇನೋ?..” ಎಂದು ನಕ್ಕಿದ್ದರು. ಸಂಕೋಚದಿಂದ ತಲೆಯಾಡಿಸಿದವನ ತುಟಿಗಳಲ್ಲೂ ಕಳ್ಳ ನಗು ತೇಲಿತ್ತು. ಮಾವ ಮೊಬೈಲಲ್ಲಿ ಬೊಂಬೆಯಾಟ ಇಟ್ಟುಕೊಟ್ಟಿದ್ದರು. ಇಂದು ಬೇರೆ ಬೊಂಬೆಗಳು. ಮಾವ ಫೈಲ್ಗಳಲ್ಲಿ ಮಗ್ನರಾದರೆ ಅಪ್ಪು ಬೊಂಬೆಯಾಟದಲ್ಲಿ ಮುಳುಗಿದ. ಸ್ವಲ್ಪ ಹೊತ್ತು ಕಳೆದಿತ್ತು. ‘ಅಯ್ಯೋ..ಇದೇನಿದು?..ಗೊಂಬೆಯಾಟ ಬದಲಾದದ್ದು ಹೇಗೆ?..ತಾನೇನಾದರೂ ಬೇರೆ ಬಟನ್ ಒತ್ತಿದೆನಾ ಹೇಗೆ?..” ಅಪ್ಪು ಆಲೋಚನೆ ಮಾಡುತ್ತಿದ್ದಂತೆ ಮೊಬೈಲ್ ಸ್ಕ್ರೀನಿನೊಳಗಡೆ ನಗ್ನ ದೇಹಗಳ ಆಟವು ನಡೆಯತೊಡಗಿತ್ತು. ‘ಅದೇನು?’ ಅಂತ ಅರ್ಥವಾಗಲಿಲ್ಲ ಅಪ್ಪುವಿಗೆ. ಒಂಥರಾ ನಾಚಿಕೆಯಾಯಿತು. ‘ಮಾವ ನೋಡುತ್ತಿದ್ದಾರಾ?...’ ಮಾವನತ್ತ ನೋಡಿದರೆ ಅವರು ಪೂರ್ತಿಯಾಗಿ ಫೈಲಲ್ಲಿ ಮುಳುಗಿಬಿಟ್ಟಿದ್ದಾರೆ. ಕಳ್ಳ ಕುತೂಹಲದಿಂದ ಒಂದೆರಡು ನಿಮಿಷ ನೋಡಿದವನಿಗೆ ಯಾಕೋ ಗಾಬರಿಯಾಗಿತ್ತು. “ ಮಾವ...ಮಾವ” ಮಾವನನ್ನು ಕರೆದವನು ಒಂದಿಷ್ಟು ಅಂಜಿಕೆಯಿಂದಲೇ ಮೊಬೈಲ್ ಅವರ ಕೈಗಿತ್ತಿದ್ದ.“ಏ..ಇದೇನಾಯ್ತೋ?...ನೀನು ಯಾವ ಬಟನ್ ಒತ್ತಿದೆ?..” ಮಾವನ ಹಸಿರುಕಂಗಳಲ್ಲಿ ಮೂಡಿದ ಭಾವವೇನೆಂದು ಅಪ್ಪುವಿಗೆ ಅರಿವಾಗಲಿಲ್ಲ. ಅವನಿಗೆ ಗಾಬರಿ, ಲಜ್ಜೆ, ಸಂಕೋಚ, ಭಯ ಎಲ್ಲಾ ಒಟ್ಟಿಗೆ ಆವರಿಸಿತ್ತು. “ಇಲ್ಲ ನಾನು ಒತ್ತಲಿಲ್ಲ” “ಪರವಾಗಿಲ್ಲವೋ..ನಿನಗೆ ತಿಳಿಯದೆ ಅಲ್ವೇ ಹೋಗ್ಲಿಬಿಡು” ಮಾವ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿದ್ದರು. ಮಲಗಿದರೂ ಅಪ್ಪುವಿಗೆ ನಿದ್ದೆಯೇ ಬರಲಿಲ್ಲ. ಏನೋ ತಪ್ಪಿತಸ್ಥ ಭಾವ!...ಮುಚ್ಚಿದ ಕಣ್ಣೊಳಗೆ ಅವೇ ನಗ್ನ ದೇಹಗಳು. ಬೆಳಿಗ್ಗೆ ಅಮ್ಮ ಸ್ನಾನ ಮಾಡಿಸುವಾಗ ಅಮ್ಮನಲ್ಲಿ ಅದನ್ನು ಹೇಳಬೇಕೆಂದು ಕೊಂಡವನು ಅಮ್ಮ ‘ಕುಟ್ಟಮಾವನ ಮೊಬೈಲನ್ನು ಯಾಕೆ ಹಾಳುಮಾಡಿದೆ ‘ಎಂದು ಬೈದರೆ, ಎಂದು ಅನ್ನಿಸಿ ಬಾಯಿ ಮುಚ್ಚಿದ್ದ. ಕಾರಿನಲ್ಲಿ ಕುಟ್ಟಮಾವನ ಮುಖ ನೋಡಲು ಇವನಿಗೆ ಸಂಕೋಚವಾಗಿತ್ತಾದರೂ ಮಾವ ಎಂದಿನಂತೆ ಇದ್ದದ್ದನ್ನು ನೋಡಿ ಒಂಚೂರು ನಿರುಮ್ಮಳವಾಗಿದ್ದ. ಆ ದಿನ ಪರೀಕ್ಷೆ ಬರೆಯುವಾಗಲೂ ಮನಸ್ಸು ಎಲ್ಲೆಲ್ಲೋ ಹಾರಾಡುತ್ತಿತ್ತು.

ಅಂದು ರಾತ್ರಿ ಕುಟ್ಟಮಾವ ಹಿಂದಿ ಹೇಳಿಕೊಟ್ಟವರು ಮಲಗಲಿಕ್ಕೆ ಹೊರಟಾಗ ಕೇಳದೆ ಮೊಬೈಲ್ ಆನ್ ಮಾಡಿಕೊಟ್ಟಿದ್ದರು. ಸಂಕೋಚದಿಂದಲೇ ಕೈಗೆತ್ತಿಕೊಂಡಿದ್ದ. ಬೊಂಬೆಯಾಟ ಆರಂಭವಾಗಿತ್ತು. ...ಸ್ವಲ್ಪ ಹೊತ್ತಿನಲ್ಲೇ ಆಟ ಬದಲಾಗಿತ್ತು. ಇವ ಕಳ್ಳ ಕುತೂಹಲದಿಂದ ಅದನ್ನೇ ನೋಡುತ್ತಿದ್ದಾಗ “ಬೊಂಬೆಯಾಟ ಚೆನ್ನಾಗಿದ್ಯೇನೋ?” ಹತ್ತಿರದಿಂದ ಮಾವನ ದನಿ. ‘ಇವರು ಯಾವಾಗ ಹಾಸಿಗೆಗೆ ಬಂದರು?’ ಅಪ್ಪು ಗಾಬರಿಯಿಂದ ಫೋನು ಕೆಳಹಾಕಿದ್ದ. “ಪರವಾಗಿಲ್ಲವೋ...ನೋಡು ಏನೂ ಆಗುವುದಿಲ್ಲ... ಎಲ್ಲಾ ಮಕ್ಕಳೂ ನೋಡ್ತಾರೆ” ಕುಟ್ಟಮಾವ ಒಂದು ಕೈಯ್ಯಲ್ಲಿ ಫೋನು ಹಿಡಿದವರು ಇನ್ನೊಂದು ಕೈಯ್ಯಿಂದ ಅಪ್ಪುವನ್ನು ಬಳಸಿದ್ದರು. ಅಪ್ಪು ಮಾವನ ಮುಖವನ್ನೂ, ಮೊಬೈಲ್ ಸ್ಕ್ರೀನನ್ನೂ ಕದ್ದು, ಕದ್ದು ನೋಡುತ್ತಿದ್ದಂತೆ ಮಾವನ ಕೈ ಅವನ ತೊಡೆಯ ನಡುವೆ ಹರಿದಾಡಿತ್ತು. ಕಚಗುಳಿಯಾಗಿ ಕೊಸರಾಡಿದವನನ್ನು ಬಿಗಿಯಾಗಿ ಅಪ್ಪಿ ಮುದ್ದಿಟ್ಟ ಮಾವನ ಮುಖ ಅವನ ಶರೀರದೆಲ್ಲೆಡೆ ಹರಿದಾಡಿದಾಗ ಏನಾಗುತ್ತಿದೆಯೆಂದು ತಿಳಿದಿರಲಿಲ್ಲ ಅಪ್ಪುವಿಗೆ. ಅವರ ಕೈಗಳು ತನ್ನ ಬಟ್ಟೆ ಬಿಚ್ಚುವಾಗ ಗಾಬರಿಯಾದವ ಭಯದಿಂದ “ಮಾವ..ಮಾವ” ಎಂದರೆ “ಬೀ ಯೇ ಗುಡ್ ಬಾಯ್ ಅಪ್ಪು...ಹೆದರ ಬೇಡವೋ..ನಿನಗೊಂದು ಮ್ಯಾಜಿಕ್ ತೋರಿಸ್ತೇನೆ ಈಗ” ಕೊಸರಾಡಿದವನನ್ನು ಬೆನ್ನು ಮೇಲಾಗಿಸಿ ಮಲಗಿಸಿದ ಮಾವ ಹಿಂದಿನಿಂದ ಇವನನ್ನು ತಬ್ಬಿಕೊಂಡಿದ್ದರು. “ಕೊಸರಾಡ ಬೇಡವೋ...ಯಾಕೆ ಹೆದರುತ್ತೀ ..ನಾನಲ್ಲವೋ?...ನಿಂಗೆ ನಾಳೆ 10 ಡೈರಿ ಮಿಲ್ಕು...ಆ ಮೇಲೆ ಬರ್ತಡೆಗೆ ಹೊಸಾ ಫೋನು” ‘ಅಯ್ಯೋ ಅಮ್ಮಾ ..ಇದೇನಿದು ತನ್ನ ಹಿಂದಿನಿಂದ ಪೈಪಿನಂತೆ ಒಳ ನುಗ್ಗುತ್ತಿರುವುದು?.’ “ಅಮ್ಮಾ” ಚೀರಿದವನ ಬಾಯನ್ನು ಒತ್ತಿಹಿಡಿದ ಮಾವ ಏದುಸಿರು ಬಿಡುತ್ತಿದ್ದರು. “ಬೊಬ್ಬೆ ಹಾಕಬೇಡವೋ.. ಹುಡುಗಾ...ಅಯ್...ನೀನಿಷ್ಟೊಂದು ಪುಕ್ಕಲನೇನೋ?...ಇರೋ..”ನಿಮಿಷವೊಂದರ ಭಯಾನಕವಾದ ನೋವಿನ ಕೊನೆಯಲ್ಲಿ ಅಪ್ಪು ಬಿಕ್ಕಿ, ಬಿಕ್ಕಿ ಅತ್ತಿದ್ದ. “ನಾನು ಅಮ್ಮನತ್ರ ಹೋಗಬೇಕು” “ಈಗ ಆಗುವುದಿಲ್ಲ” ಕುಟ್ಟಮಾವನ ಹಸಿರು ಕಣ್ಣುಗಳು ಕೆಂಪಗಾಗಿದ್ದುವು. ಎದ್ದವರು ಕಿಟಕಿ ಬಳಿ ನಡೆದು ಸಿಗರೇಟು ಹೊತ್ತಿಸಿದಾಗಲೂ ಇವನು ‘ಕುಸುಕುಸು’ ಅಳುತ್ತಾ ಇದ್ದ. ಸಿಗರೇಟಿನ ಹೊಗೆ ಕೊಣೆಯಿಡೀ ತುಂಬಿ ವಾಂತಿ ಬೇರೆ ಬಂದಂತಾಗುತ್ತಿತ್ತು. ಸ್ವಲ್ಪ ಹೊತ್ತಿನಲ್ಲಿ ಎದ್ದು ಬಂದ ಮಾವ ಹಾಸಿಗೆಯೇರಿದಾಗ ಅಪ್ಪು ಭಯದಿಂದ ಗೋಡೆಯತ್ತ ಹೊರಳಿದ್ದ. “ಏಯ್...ಹೆದರಬೇಡವೋ...ನಾನೇನೂ ಮಾಡಲ್ಲ ...ಮಲಕ್ಕೋ...ಮಲಕ್ಕೋ..” ಅಂದವರು ಇವನಿಗೆ ಹೊದಿಸಿ ಮೈ, ಕೈ ನೇವರಿಸಿದ್ದರು. ಅಪ್ಪುವಿಗೆ ಮತ್ತಷ್ಟು ಭಯವಾಗಿ “ಅಮ್ಮ, ಅಮ್ಮ” ಎಂದು ತೊದಲಿದ್ದ. “ಅರೆ... ನೀನಿಷ್ಟೊಂದು ಹೆಣ್ಣಿಗ ಅಂತ ಗೊತ್ತಿರಲಿಲ್ಲ ಕಣೋ ...ಕಣ್ಣೂರಿನಲ್ಲಿ ಜುವೈನಲ್ ಹೋಂ ಹುಡುಗರು ನನ್ನ ಕೋಣೆಯಲ್ಲಿ ಮಲಗ್ಲಿಕ್ಕೆ ಸ್ಪರ್ಧೆಗೆ ಬೀಳ್ತಿದ್ರು...ನೀನು ಗಂಡ್ಸಲ್ಲವೇನೋ?..ಆಮೇಲೆ...ನಿನಗೆ ಇನ್ನೊಂದು ವಿಷಯ ಗೊತ್ತಾ?...ನಿನ್ನ ಅಪ್ಪ ಮುರಳಿ ಜೊತೆ ಕೂಡ ನಾನು ಇದೇ ಆಟ ಆಡ್ತಿದ್ದೆ.” ಅಪ್ಪುವಿಗೆ ಅಪ್ಪನ ನೆನಪಾಗಿ ಇನ್ನಷ್ಟು ಜೋರಾಗಿ ಅಳುಬಂತು. ತೋಳನ್ನು ನೇವರಿಸುತ್ತಿದ್ದ ಕುಟ್ಟಮಾವನ ಬೆರಳುಗಳು ಬಿಗಿಯಾದವು. “ಏಯ್.. ಅಳಬೇಡ ಅಂದೆನಲ್ಲಾ .. ಆ ಮೇಲೆ ಈ ವಿಷ್ಯ ಯಾರಲ್ಲಾದರೂ ಹೇಳ್ದೆ ಅಂತಿಟ್ಕೋ ..ನಿನ್ನನ್ನು ಏನೂ ಮಾಡಲ್ಲ... ನಿನ್ನ ಅಮ್ಮನ್ನ ಅರ್ಧರಾತ್ರಿ ಹೊತ್ಕೊಂಡೋಗಿ ಮಂಜಾಡಿಕೆರೆಯಲ್ಲಿ ಕಲ್ಲು ಕಟ್ಟಿ ಮುಳುಗಿಸಿಯೇನು .. ಗೊತ್ತಾಯ್ತಾ?” ಅಪ್ಪುವಿನ ಅಳು ಗಂಟಲಲ್ಲೇ ಹೂತು ಹೋಗಿತ್ತು. “ದೇವರೇ...ದೇವರೇ ಆಟ್ಟುಕ್ಕಾಲಮ್ಮ...ಗಣಪತಿ ದೇವರೇ ...” ಭಯದಿಂದ ನಡುಗುತ್ತಾ ಇದ್ದವನಿಗೆ ಯಾವಾಗ ನಿದ್ದೆ ಬಂದಿತೆಂದು ಅರಿವಾಗಿರಲಿಲ್ಲ. ಬೆಳಿಗ್ಗೆ ಎಚ್ಚರಾಗುವಾಗ ತುಂಬಾ ಹೊತ್ತಾಗಿತ್ತು. ಅಪ್ಪಮ್ಮ ಬಾಗಿಲು ತಟ್ಟುತ್ತಿದ್ದರು.“ಏನೋ ಕುಟ್ಟ ಈ ದಿನ ಇಷ್ಟೊಂದು ನಿದ್ದೆ?” ಅಪ್ಪು ಕಣ್ಬಿಡುವಾಗ ಕುಟ್ಟಮಾವ ಬಾಗಿಲು ತೆರೆಯುತ್ತಿದ್ದರು.“ಅದೂ ಅಕ್ಕ ನಿನ್ನೆ ಸ್ವಲ್ಪ ಹೊತ್ತು ಜಾಸ್ತಿ ಕೂತೆವು....ಕಲೀಲಿಕ್ಕೆ ತುಂಬಾ ಇತ್ತು ಹುಡುಗನಿಗೆ....ಅಲ್ವೇನೋ ಅಪ್ಪು?..ನಿನ್ನೆ ಕಲಿತದ್ದೆಲ್ಲಾ ನೆನಪಿದೆ ತಾನೇ?..” ಹಸಿರು ಕಂಗಳು ಪಳಕ್ಕನೆ ಚಿಮ್ಮಿದಾಗ ಅಪ್ಪುವಿಗೆ ಹಿಂದಣ ರಾತ್ರಿಯ ಭಯಾನಕವಾದ ನೋವು ಮರುಕಳಿಸಿದಂತಾಗಿತ್ತು.. ಅಪ್ಪಮ್ಮ “ವಿಲಾಸಿನಿ...ತಿಂಡಿ ರೆಡಿ ಮಾಡು” ಎನ್ನುತ್ತಾ ಒಳಹೊಕ್ಕಾಗ ಮಂಚದಿಂದ ಇಳಿಯುತ್ತಿದ್ದವನತ್ತ ಬಂದಿದ್ದರು ಕುಟ್ಟಮಾವ. “ನೆನಪಿದೆ ಅಲ್ವೇನೋ ?...ಮಂಜಾಡಿಕೆರೆ..” ಅಪ್ಪು ಮಾತನಾಡದೆ ತಲೆ ಕೆಳಹಾಕಿ ಹೊರಬಂದವನು ನೇರ ಬಾತ್ರೂಮಿಗೆ ನಡೆದಿದ್ದ. ಬೆನ್ನುಮೂಳೆಯ ಕೆಳಗೆ ವಿಪರೀತ ನೋಯುತ್ತಿತ್ತು. ಕಕ್ಕಸ್ಸಿನಲ್ಲಿ ಕುಳಿತುಕೊಳ್ಳಲೂ ಆಗಲಿಲ್ಲ. ತುಂಬಾ ಹೊತ್ತು ಕುಳಿತಾಗ ಇನ್ನಷ್ಟು ನೋವಾಗಿ ಕಣ್ಣಲ್ಲಿ ನೀರು ಬಂದಿತ್ತು. ಅಷ್ಟು ಹೊತ್ತಿಗೆ “ಅಪ್ಪೂ” ಅಂತ ಅಮ್ಮನ ದನಿ ಕೇಳಿಸಿತು. ಬಾಗಿಲು ಓರೆ ಮಾಡಿದರೆ ಕೈಯ್ಯಲ್ಲಿ ಎಣ್ಣೆ ಮತ್ತು ಬೈರಾಸಿನೊಂದಿಗೆ ಅಮ್ಮ!...ಅಪ್ಪುವಿಗೆ ಅಮ್ಮನ ಮುಖ ನೋಡಿದರೆ ಎಲ್ಲಿ ಅಳು ಜಾಸ್ತಿಯಾದೀತೋ?...ಅಂತ ಭಯವಾಗಿತ್ತು. ಸರಕ್ಕನೆ ಅಮ್ಮನ ಕೈಯ್ಯಿಂದ ಬೈರಾಸನ್ನು ಕಿತ್ತು ಕೊಂಡವನು ಬಾಗಿಲು ಹಾಕಿದ್ದ. “ಏ..ಸ್ನಾನ ಮಾಡಿಸಬೇಡವೇನೋ?..ಬಾಗಿಲು ತೆರೆಯೋ ಅಪ್ಪು” ಅಮ್ಮ ಬಾಗಿಲು ತಟ್ಟುತ್ತಿದ್ದಂತೆ “ಹುಡುಗಿ ಅವನು ಸ್ನಾನ ಮಾಡಲಿ ...ಅಷ್ಟೆಲ್ಲ ದೊಡ್ದದಾಗಿದ್ದಾನೆ ಈಗ ...ಗಂಡು ಹುಡುಗ.. ನಾಳೆ ತರವಾಡನ್ನು ಮುನ್ನಡೆಸಬೇಕಾದವನು.. ಸ್ವಲ್ಪ ಸಾಮರ್ಥಿಕೆ ಬೆಳೀಲಿ.. ತುಂಬಾ ಕೊಂಡಾಟ ಮಾಡಿ ಹೆಣ್ಣಪ್ಪಿ ಮಾಡಬೇಡಿ.” ಕುಟ್ಟಮಾವನ ದಪ್ಪದನಿ ಬಾತ್ರೂಮಿನ ಬಾಗಿಲನ್ನೂ ಕೊರೆದು ಒಳನುಗ್ಗಿತ್ತು. ರಪರಪ ಚೊಂಬಿನಿಂದ ನೀರು ಎತ್ತಿ ಹಾಕಿದವನ ತಲೆ ಮತ್ತು ಕಣ್ಣುಗಳೆರಡರಿಂದಲೂ ನೀರು ಒಂದೇ ಸಮನೆ ಹರಿದಿತ್ತು. ಚಾ ಕುಡಿಯುವಾಗಲೂ ಮೌನವಾಗಿದ್ದವನನ್ನು ನೋಡಿ ಅಮ್ಮನ ಮುಖ ಮ್ಲಾನವಾಗಿತ್ತು.“ತುಂಬಾ ಹೊತ್ತು ನಿದ್ದೆ ಕೆಟ್ಟೆಯೇನೋ ಅಪ್ಪು?...ಕಣ್ಣೆಲ್ಲಾ ಕೆಂಪಾಗಿದೆ.” ಬಟ್ಟಲಲ್ಲೇ ನೋಟ ನೆಟ್ಟವನ ಹಣೆಯ ಮೇಲೆ ಅಮ್ಮನ ಮೃದು ಬೆರಳುಗಳು ನಿಟ್ಟುಸಿರಿಟ್ಟಿದ್ದವು. “ಆಯ್ತಲ್ಲ...ಇನ್ನು ನಾಳೆ ದಿನ ಒಂದು ಪರೀಕ್ಷೆ ಕಳೆದರೆ ಸಾಕು...ಆ ಮೇಲೆ ಎರಡು ತಿಂಗಳು ಪುಸ್ತಕಾನೇ ಮುಟ್ಬೇಕಾಗಿಲ್ಲ ಅಲ್ಲವೇನೋ ಅಪ್ಪು?...” ಅಪ್ಪಮ್ಮ ಹೇಳುತ್ತಿದ್ದಂತೆ ಕುಟ್ಟಮಾವ ಅಡುಗೆ ಕೋಣೆಗೆ ಬಂದಿದ್ದರು.“ಅಕ್ಕಾ ನಾಡಿದ್ದಿನದ್ದು ಹೇಳುವುದು ಸಾಧಾರಣ ಮುಗಿದಿದೆ. ಯಾರಾದರೂ ಬಿಟ್ಟು ಹೋಗಿದ್ದಾರಂತ ಒಮ್ಮೆ ನೋಡಿಬಿಡು...ಅಡುಗೆಯವರು ನಾಳೆ ಸಂಜೆ ಬಂದಾರು....ಶಾಮಿಯಾನ ಅಡುಗೆ ಮಾಡುವಲ್ಲಿ ಮಾತ್ರ ಸಾಕಲ್ಲ. ಮಳೆ ಬರಲಿಕ್ಕಿಲ್ಲಾಂತ ಕಾಣ್ತದೆ.” ಆದಿತ್ಯವಾರ ಅಪ್ಪನ 41ನೆಯ ದಿನಕರ್ಮ ಎಂಬುದು ಅಪ್ಪುವಿಗೆ ಆಗ ನೆನಪಾಗಿತ್ತು. ಮಾವ ಚಾ ಕುಡಿದವರು ನೇರ ಹೋಗಿ ಕಾರಲ್ಲಿ ಕುಳಿತು ಹಾರ್ನ್ ಬಾರಿಸಿದ್ದರು. ಹೋಗುವಾಗ ಕಾರಲ್ಲಿ ತೋಟದ ಕೆಲಸದ ಶಂಕ್ರಣ್ಣ ಕೂಡ ಇದ್ದುದರಿಂದ ಶಾಲೆ ಮುಟ್ಟುವವರೆಗೆ ಹೆಚ್ಚಿನ ಮಾತಿರಲಿಲ್ಲ. ಪರೀಕ್ಷೆಯಲ್ಲಿ ಎಲ್ಲಾ ಉತ್ತರಗಳೂ ಗೊತ್ತಿದ್ದರೂ ಅರ್ಧಕ್ಕರ್ಧ ಬರೆಯಲೇ ಆಗಿರಲಿಲ್ಲ. ಸಂಜೆ ಬರುವಾಗ ಕಾರು ಕೊಚ್ಚಿನ್ಸ್ ಬೇಕರಿಯ ಮುಂದೆ ನಿಂತಾಗ ಅಪ್ಪು ಕಾರಿನಿಂದ ಇಳಿದಿರಲಿಲ್ಲ. ಕುಟ್ಟಮಾವ ಡೈರಿ ಮಿಲ್ಕಿನ ದೊಡ್ಡದೊಂದು ಬಾಕ್ಸನ್ನೆ ತಂದು ಕಾರಲ್ಲಿಟ್ಟಿದ್ದರು. ಕಾರಿಳಿಯುವಾಗ “ತೆಕ್ಕೊಳ್ಳೋ” ಅಂತ ಇವನತ್ತ ಚಾಚಿದರೆ ಎತ್ತಲೋ ನೋಡಿದವನು “ನನಗೆ ಬೇಡ” ಅಂದಿದ್ದ. “ತೆಗಿ ಅಂದ್ರೆ ...ನಿನ್ನೆ ಹೇಳಿದ್ದು ನೆನಪಿದೆ ಅಲ್ವಾ?..ನಿಂಗೆ ಅಮ್ಮನೂ ಬೇಡ ಅಂತಿದ್ಯಾ” ಭಯಪಟ್ಟವನು ಅಳುಕಿನಿಂದಲೇ ಬಾಕ್ಸ್ ಕೈಗೆತ್ತಿಕೊಂಡು ಒಳ ನಡೆದು ಸೀದಾ ಮಂಚದ ಮೇಲುರುಳಿದಾಗ ಅಮ್ಮ ಹಿಂದೆಯೇ ಬಂದಿದ್ದರು.

“ಯಾಕೋ ಅಪ್ಪು ...ಪರೀಕ್ಷೆ ಕಷ್ಟ ಇತ್ತೇನೋ?” ಮೃದು ಬೆರಳುಗಳು ಹಣೆಯ ಮೇಲಾಡಿದಾಗ ಇನ್ನಷ್ಟು ಬಿಗಿಯಾಗಿ ಕಣ್ಮುಚ್ಚಿದ್ದ ಅಪ್ಪು. “ಏಳೋ ಅಪ್ಪು ತಿಂಡಿ ಬೇಡ್ವೇನೋ” ಅಮ್ಮನ ಒತ್ತಾಯ ಮುಂದುವರೆದಂತೆ ಅಪ್ಪಮ್ಮನೂ ಕೋಣೆಗೆ ಬಂದಾಗಿತ್ತು. “ಏನಾಯ್ತು ಮಗುವಿಗೆ?...ಜ್ವರ ಬರ್ತಿದ್ಯಾ?..?” ಈಗ ಅಪ್ಪು ಕಣ್ಬಿಡಲೇ ಬೇಕಾಯ್ತು. “ನಂಗೆ ಹೊಟ್ಟೆ ನೋವಾಗ್ತಿದೆ .ತಿಂಡಿ ಬೇಡ” ಅಮ್ಮನ ಕಣ್ಣು ಚಾಕ್ಲೆಟ್ ಬಾಕ್ಸ್ ಕಡೆ ಹರಿದಿತ್ತು. “ಇಷ್ಟೊಂದು ಚಾಕ್ಲೆಟ್ ತಿಂದರೆ ಹೊಟ್ಟೆ ನೋವಾಗದೇ ಇರ್ತದಾ?.. ಕುಟ್ಟಮಾಮನಲ್ಲಿ ಹೇಳ್ಬೇಕು ಅತ್ತೆ ಚಾಕ್ಲೆಟ್ ಸ್ವಲ್ಪ ಕಡಿಮೆ ಮಾಡ್ಲಿಕ್ಕೆ” “ಇರ್ಲಿ ಬಿಡು ಅವನಿಗೆ ಮೊದ್ಲಿಂದಾನು ಮಕ್ಳು ಅಂದ್ರೆ ಜೀವ!....ಏನಾದ್ರೂ ಹೇಳಿದ್ರೆ ಬೇಸರ ಮಾಡಿಯಾನು. ನೀನು ಅವನಿಗೆ ಸ್ವಲ್ಪ ತಣ್ಣನೆಯ ಹಾಲು ಕೊಡು. ಗ್ಯಾಸ್ ಹತ್ತಿರಬೇಕು. ಹಾಲು ಕುಡಿದು ಚೂರು ಮಲಗಿದ್ರೆ ಸರಿಯಾದೀತು” ಅಪ್ಪಮ್ಮ ಹೊರ ನಡೆದಿದ್ದರು. ಹಾಲು ಕುಡಿದು ಮಲಗಿದವನಿಗೆ ಹೇಗೆ ನಿದ್ದೆ ಬಂತೆಂದೇ ಅರಿವಾಗಿರಲಿಲ್ಲ. ತುಂಬಾ ಹೊತ್ತಿನ ನಂತರ ಹಣೆಯ ಮೇಲೆ ಬೆಚ್ಚನೆಯ ಬೆರಳುಗಳ ಸ್ಪರ್ಶಕ್ಕೆ ಬೆಚ್ಚಿ ಕಣ್ಬಿಟ್ಟರೆ ಮಂಚದ ಬದಿಯಲ್ಲಿ ರಾಜುಮಾಮ! “ಹೋಯ್..ಎಚ್ಚರಾಯ್ತ ರಾಯರಿಗೆ. ನಾಳೆ ಪರೀಕ್ಷೆ ಇಲ್ವನಾ?” ಇವ ತಲೆ ಮೇಲೆತ್ತಿದವನು ರಾಜು ಮಾಮನ ತೊಡೆಯ ಮೇಲೆ ತಲೆಯಿಟ್ಟು ಪುನಃ ಕಣ್ಮುಚ್ಚಿದ್ದ. “ಹೂಂ ಸಾಕು, ಸಾಕು.. ಏಳು ದೀಪ ಇಡುವ ಹೊತ್ತಾಯ್ತು...ಹೊಟ್ಟೆನೋವು ಹೋಯ್ತಲ್ಲ ಈಗ” ಒಳ ಬಂದ ಅಮ್ಮ ಕೈಯ್ಯಲ್ಲಿದ್ದ ಬೈರಾಸನ್ನು ರಾಜುಮಾಮನ ಹೆಗಲ ಮೇಲೆ ಹಾಕಿದ್ದರು. ‘ಕುಸುಕುಸು’ ಹೊರಳಾಡಿದವನನ್ನು ಕೂಸುಮರಿ ಮಾಡಿ ರಾಜುಮಾಮ ಎತ್ತಿ ಕೊಂಡು ಹೊರಬಂದಾಗ ಕೆರೆಯಿಂದ ಹಿಂದಿರುಗಿದ ಕುಟ್ಟಮಾವ ಚಾವಡಿಯಲ್ಲಿ ಎದುರಾಗಿದ್ದರು. “ಒಯ್ ಮಿಸ್ಟರ್ ರಾಜು...ಯಾವಾಗ ಬಂದ್ರಿ?..ಫೋನ್ ಮಾಡಿದ್ರೆ ಸ್ಟೇಷನಿಗೆ ಕಾರು ತರ್ತಿದ್ದೆನಲ್ಲ” “ಒಹ್.. ಅದು ಸರ್ .. ಹೇಗೂ ಕ್ಲಾಸು ಇಲ್ಲ, ಇವತ್ತೇ ಬಂದ್ರೆ ನಾಡಿದ್ದಿಗೆ ಏನಾದ್ರೂ ಸಹಾಯ ಆದೀತೇನೋ ಅಂತ ಬೆಳಗ್ಗಿನ ಲೋಕಲ್ಲಿಗೆ ಹೊರಟೆ” ರಾಜುಮಾಮ ಸಂಕೋಚದಿಂದ ಬೆನ್ನ ಮೇಲಿದ್ದ ಅಪ್ಪುವನ್ನು ಚಾವಡಿಯ ತಿಟ್ಟೆಗೆ ಇಳಿಸಿದ್ದರು. ಮಾಮ ಬಂದ ನಂತರ ಇಡೀ ಹೊತ್ತು ಮಾಮನ ಬೆನ್ನ ಹಿಂದೇ ನಡೆದವ ಊಟ ಮುಗಿಸಿ ಲೆಕ್ಕದ ಪುಸ್ತಕ ಹಿಡಿದು ರಾಜುಮಾಮನ ತೊಡೆಯೇರಿದಾಗ ಕುಟ್ಟಮಾವನ ಕಣ್ಣುಗಳು ಕಿರಿದಾಗಿದ್ದವು. “ಎಷ್ಟಂದ್ರೂ ಮಾಷ್ಟ್ರು ಮಾಷ್ಟ್ರೆ ನೋಡಿ ನಿಮ್ಮನ್ನು ನೋಡಿದ ಮೇಲೆ ನನ್ನ ಪಾಠ ಬೋರಾಯ್ತು ಅಪ್ಪುವಿಗೆ” “ಹೌದೇನೋ ಅಪ್ಪು?.. ಇವತ್ತು ಕುಟ್ಟಮಾವ ಹೇಳಿಕೊಡುವುದು ಬೇಡ್ವೇನೋ?” ಅಪ್ಪಮ್ಮನ ಮಾತು ಕಿವಿಗೆ ಬೀಳದಂತೆ ಅಪ್ಪು ಜಾಮಿಟ್ರಿ ಬಾಕ್ಸಲ್ಲಿ ರಬ್ಬರ್ ಹುಡುಕುವ ಗಡಿಬಿಡಿಯಲ್ಲಿದ್ದ. ರಾತ್ರಿ ರಾಜುಮಾಮನಲ್ಲಿ ಲೆಕ್ಕ ಹೇಳಿಸಿಕೊಂಡು ಅವನ ಜೊತೆಯೇ ಮಲಗಿ ನಿದ್ದೆ ಮಾಡಿದವ ಬೆಳಿಗ್ಗೆ ಶಾಲೆಗೇ ಹೊರಟಾಗಲೂ ರಾಜುಮಾಮ ಜೊತೆಗೆ ಬರಬೇಕೆಂದು ಹಠ ಮಾಡಿದಾಗ ಅಮ್ಮನಿಗೆ ಸಿಟ್ಟು ಏರಿತ್ತು. “ಯಾಕೋ ಬರ್ತಾ, ಬರ್ತಾ ಹುಡುಗನದ್ದು ಅತಿಯಾಗ್ತಿದೆ. ಅವನಿಗಿನ್ನೂ ಸ್ನಾನ ಕೂಡ ಆಗಿಲ್ಲ. ಅವನ್ಯಾಕೆ ಈಗ ಶಾಲೆಗೆ?” ರಚ್ಚೆ ಹಿಡಿದವನನ್ನು ನೋಡಿ ಕುಟ್ಟಮಾವನ ಕಣ್ಣುಗಳು ಮೃದುವಾಗಿದ್ದುವು. “ಯಾಕೆ ಹುಡುಗಿ ಮಗುವನ್ನು ಗದರುತ್ತೀ?..ಮಿ.ರಾಜು ನಿಮಗೇನೂ ತೊಂದರೆ ಇಲ್ಲವಾದರೆ ಬರಬಹುದಲ್ಲ ಒಂದು ಗಳಿಗೆ?..ಇವನನ್ನು ಶಾಲೆಗೆ ಬಿಟ್ಟು ಜಸ್ಟ್ ಒಂದು ಮಿಲ್ಲಿನತ್ರ ಹೋಗಿ ಬರುವುದು ಅಷ್ಟೇ.” ರಾಜು ಮಾಮ ಲುಂಗಿ ಬಿಚ್ಚಿ ಪ್ಯಾಂಟು ಏರಿಸಿದ್ದರು. ಕಾರಿನಲ್ಲಿ ಹೋಗುವಾಗ ರಾಜುಮಾಮನ ಮಡಿಲಲ್ಲಿ ಕುಳಿತ ಅಪ್ಪುವಿನ ತಲೆಯಲ್ಲಿ ಕುಟ್ಟಮಾವನ ಬೆರಳುಗಳು ಮೃದುವಾಗಿ ಸರಿದಾಡಿದ್ದವು. “ನೋಡಿ ಮಿ.ರಾಜು. ನಾವು ದೊಡ್ಡವರು ನಮ್ಮ ಭಾವನೆಗಳನ್ನು ನಿಯಂತ್ರಿಸಲೋ ಅಥವಾ ಹೊರಹಾಕಲೋ ಕಲಿತಿರುತ್ತೇವೆ. ಆದ್ರೆ ಮಕ್ಳು ಹಾಗಲ್ಲ ನೋಡಿ .ಅವರ ದುಃಖ, ಅಥವಾ ನೋವನ್ನು ಅವರು ವ್ಯಕ್ತಪಡಿಸೋದು ಹಟದ ಮೂಲಕಾನೇ. 10, 15 ವರ್ಷ ಜುವೈನಲ್ ಹೋಮ್ನಲ್ಲಿದ್ದೆ ನೋಡಿ. ಅದ್ರಲ್ಲೂ ಅಪ್ಪುವಿನ ಈ ಏಜ್ನಲ್ಲಿ ಅವನಿಗೆ ಉಂಟಾಗಿರೋ ನಷ್ಟ .. ನಿಮಗೆ ಹೇಳಬೇಕಾಗಿಲ್ಲ ಅಲ್ವೇ. ನೀವೂ ಈ ಪ್ರಾಯದ ಮಕ್ಳನ್ನು ಕಲಿಸೋರು” ಅಪ್ಪು ಮಾಮನ ಮಡಿಲಲ್ಲಿ ಇನ್ನಷ್ಟು ಮುದುಡಿದ್ದ. “ಆಮೇಲೆ...ಈಗ ಆ ಬಗ್ಗೆ ಮಾತಾಡ್ಬೋದಾಂತ ಗೊತ್ತಿಲ್ಲ. ಅದರೂ...ನಿಮ್ಮ ಅಕ್ಕನ ಬಗೆಗೆ ಏನಾದರೂ ಯೋಚನೆ ಮಾಡಿದ್ದೀರಾ?.. ಕುಟ್ಟಮಾವನ ಪ್ರಶ್ನೆಗೆ ರಾಜು ಮಾಮನ ಹುಬ್ಬು ಮೇಲೇರಿತ್ತು. “ಅಂದ್ರೆ” “ಅದೇ ನಿಮಗೂ ಗೊತ್ತು. ಇನ್ನೂ ಚಿಕ್ಕ ಪ್ರಾಯ. ಸಾಧ್ಯ ಆದ್ರೆ ಮುಂದಿನ ಜೀವನದ ಬಗೆಗೆ ಈಗಲೇ ಯೋಚಿಸೋದು ಒಳ್ಳೇದಲ್ವೆ.” ಕುಟ್ಟಮಾವ ಗಂಟಲು ಕ್ಯಾಕರಿಸಿದ್ದರು. “ನಿಮ್ಮ ಊರಲ್ಲಿ ಯಾರಾದರೂ ಯೋಗ್ಯ ವ್ಯಕ್ತಿ ಸಿಕ್ಕಿದರೆ ಹಾಗೆ ಅಥವಾ ಮ್ಯಾಟ್ರಿಮೋನಿಯಲ್ ಮುಖಾಂತರ ಆದ್ರೆ ಹಾಗೆ. ಈಗಲೇ ಅಲ್ಲ ಒಂದಾರು ತಿಂಗಳು ಕಳೆದಾದರೂ ಆಲೋಚನೆ ಮಾಡುವುದು ಒಳ್ಳೆಯದಲ್ವೆ?. ಅದಕ್ಕೆ ಬೇಕಾದಂತಹ ಎಲ್ಲ ಅರ್ಥಿಕ ಸಹಾಯಾನೂ ನಾವೇ ಮಾಡ್ತೀವಿ. ನಮ್ಮ ಮುರಳಿಯ ಹೆಂಡತಿ ನಮಗೆ ಭಾರ ಆಗ್ತಾಳೆ ಅಂತಲ್ಲ....ಅದರೂ ಇನ್ನೂ ಚಿಕ್ಕ ವಯಸ್ಸು. ಕಳೆದುದಕ್ಕಿಂತ ಹೆಚ್ಚಿನ ದಿನಗಳು ಇನ್ನು ಮುಂದಿವೆ” “ಅದರೂ ಎರಡನೇ ಸಂಬಂಧ ಅಷ್ಟು ಸುಲಭಕ್ಕೆ ಸಿಕ್ಕೀತಾ ಸರ್?” ರಾಜು ಮಾಮನ ಸ್ವರದಲ್ಲಿ ಹಿಂಜರಿಕೆ ಸ್ಪಷ್ಟವಾಗಿತ್ತು. “ಪ್ರಯತ್ನಿಸಿದರೆ ಯಾವುದೂ ಅಸಾಧ್ಯವಲ್ಲ ಮಿ. ರಾಜು.. ನಾನೂ ನನ್ನ ಪರಿಚಿತ ವಲಯದಲ್ಲಿ ಹೇಳಿಟ್ಟಿರ್ತೀನಿ. ನೀವೂ ಪ್ರಯತ್ನಿಸಿ.. ಆಮೇಲೆ ಅಪ್ಪುವಿನ ವಿಷಯದಲ್ಲಿ ನೀವೇನೂ ಚಿಂತೆ ಮಾಡ್ಬೇಕಾದ ಅಗತ್ಯ ಇಲ್ಲ. ನಮ್ಮ ನೆಲ್ಲಿಕ್ಕಾಡು ತರವಾಡಿಗೆ ಅವನೊಬ್ನೇ ಹಕ್ಕುದಾರ. ಜೊತೆಗೆ ನಾನೂ ಒಂದಿಷ್ಟು ಮಾಡಿಟ್ಟಿದ್ದೇನೆ. ನನಗಾದರೂ ಬೇರೆ ಯಾರಿದ್ದಾರೆ. ನಾಳೆ ಅದೂ ಅವನಿಗೆ ತಾನೇ?” ಕುಟ್ಟಮಾವನ ಬೆರಳುಗಳು ಮತ್ತೊಮ್ಮೆ ತಲೆಯ ಮೇಲೆ ಹರಿದಾಡಿದಾಗ ಅಪ್ಪುವಿನ ಬೆರಳುಗಳು ರಾಜುಮಾಮನ ತೋಳ್ಗಳನ್ನು ಬಿಗಿ ಹಿಡಿದಿದ್ದವು.

ಸಂಜೆ ತಿರುಗಿ ಬರುವಾಗ ಕಾರಲ್ಲಿ ರಾಜುಮಾಮನನ್ನು ನಿರೀಕ್ಷಿಸಿದವನಿಗೆ ನಿರಾಶೆ ಕಾದಿತ್ತು. “ಯಾಕೋ ನಿನ್ನ ಮಾಮ ಬರಲಿಲ್ಲಾಂತ ಬೇಸರಾನಾ?” ಕುಟ್ಟಮಾವನ ಹಸಿರು ಕಣ್ಣುಗಳು ಸೊಟ್ಟಗೆ ನಕ್ಕಿದ್ದವು. ಇವ ಮಾತಾಡಿರಲಿಲ್ಲ. ಕಾರು ನಿಲ್ಲಿಸಿದ ಕುಟ್ಟಮಾವನ ಬೆರಳುಗಳು ಇವನ ಹೆಗಲ ಮೇಲಾಡಿದ್ದವು. ಭಯದಿಂದ ಸೀಟಿನ ಮೂಲೆಗೆ ಸುರುಟಿದವನನ್ನು ನೋಡಿ ಮಾಮನ ಕಣ್ಣುಗಳು ಇನ್ನಷ್ಟು ಹಸಿರಾಗಿದ್ದವು. ‘ಹೇಳಿದ್ದು ನೆನಪಿದೆ ಅಲ್ವೇನೋ?..ಇನ್ನು ರಜೆಗೆ ಊರಿಗೆ ಹೋದಾಗ ನಿನ್ನ ಮಾಮನಲ್ಲಿ ಬಾಯಿ ಬಿಟ್ರೆ?...ಹೇಳ್ತೀಯೇನೋ?..” ಅಪ್ಪು ತಲೆ ಮೇಲೆತ್ತಿರಲಿಲ್ಲ. “ಆ ಮೇಲೆ ನೀನು ನನ್ನ ಮೊಬೈಲಲ್ಲಿ ಬೇಡದ್ದು ನೋಡಿದ್ದು ನಿನ್ನ ಮಾಮನಲ್ಲಿ ಹೇಳಲೇನೋ” “ಬೇಡ” ಅಪ್ಪುವಿನ ಸ್ವರ ಅವನರಿವಿಲ್ಲದೆ ಹೊರಬಿದ್ದಿತ್ತು. “ಸರಿ. ಆದ್ರೆ ನೀನು ಏನಾದ್ರೂ ಬಾಲ ಬಿಚ್ಚಿದಿಯೋ?.. ನಿನ್ನ ಮಾಮನಲ್ಲಿ ಹೇಳುವುದೇ ... ಆಮೇಲೆ ಮಂಜಾಡಿಕೆರೆ... ನೆನಪಿದೆ ಅಲ್ವೇನೋ?” ಅಪ್ಪುವಿಗೆ ಚಡ್ಡಿಯಲ್ಲಿ ಮೂತ್ರ ಬಂದಂತಾಗಿತ್ತು.

ಮನೆ ತಲುಪುವಾಗ ಅಂಗಳದಲ್ಲಿದ್ದ ಶಾಮಿಯಾನ ಹಾಕುವವರ ಜೊತೆ ಒಂದಿಬ್ಬರು ನೆಂಟರಿಷ್ಟರು ಕೂಡ ಅಪ್ಪುವಿನ ಮುಖ ನೋಡಿ ಅನುಕಂಪದ ನಗು ನಕ್ಕಿದ್ದರು. ಬಟ್ಟೆ ಬಿಚ್ಚುವಾಗ ಅಪ್ಪುವಿನ ಚಡ್ಡಿ ನೋಡಿ ಅಮ್ಮ ಮುಖಸಿಂಡರಿಸಿದರೆ, ಇವ ಸೀದಾ ರಾಜುಮಾಮನನ್ನು ಹುಡುಕಿ ಅಂಗಳಕ್ಕೆ ಓಡಿದ್ದ. ಎರಡು ದಿನ ಹೇಗೆ ಕಳೆದಿತ್ತೆಂದು ತಿಳಿದಿರಲಿಲ್ಲ. ಮುರಳಿಯ 41ನೆಯ ದಿನ ಕರ್ಮ ಕಳೆದ ಮಾರನೇ ದಿನವೇ ಊರಿಗೆ ಹೊರಟವರನ್ನು ಕಾರಲ್ಲಿ ಸ್ಟೇಷನಿಗೆ ಬಿಡಲು ಬಂದ ಕುಟ್ಟಮಾವ ರಾಜುಮಾಮನ ಕೈ ಕುಲುಕುವಾಗ ಮತ್ತೊಮ್ಮೆ ನೆನಪಿಸಲು ಮರೆಯಲಿಲ್ಲ. “ನೋಡಿ ಮಿ. ರಾಜು. ಸಾಧ್ಯ ಆದರೆ ಏಪ್ರಿಲ್ 20ರ ಮೊದಲೇ ಬಂದುಬಿಡಿ. ರಾಯಲ್ ಸ್ಕೂಲಲ್ಲಿ ಸೀಟು ಅದೂ 2ನೆಯ ಕ್ಲಾಸಿಗೆ ಅಂದ್ರೆ ಅಷ್ಟು ಸುಲಭ ಅಲ್ಲ. ಮಾನೇಜರ್ ನನ್ನ ಗೆಳೆಯ ಆಗಿದ್ರೂ ಅವರ ಸ್ಕೂಲ್ ಸ್ಟ್ಯಾಂಡರ್ಡಿಗೆ ನಮ್ಮ ಹುಡುಗ ಸೂಟ್ ಆಗ್ತಾನಾ ಅಂತ ಒಂದೆರಡು ಟೆಸ್ಟ್ ಮಾಡಿಸಿಯಾರು. ಅದಕ್ಕೆ ಪ್ರಿಪೇರ್ ಆಗಲಿಕ್ಕೆ ಸ್ವಲ್ಪ ದಿನ ಬೇಕಲ್ಲ?” “ಶ್ಯೂರ್ ಸರ್ ..ಖಂಡಿತ” ಅಪ್ಪುವಿನ ಕಣ್ಣುಗಳು ಕುಲುಕುವ ಬೆರಳುಗಳತ್ತಲೇ ನೆಟ್ಟಿದ್ದುವು.

ಮಿಜಾರಿನಲ್ಲಿ ಹೊಳೆ, ಕಾಡು, ಇಂದು ಅಕ್ಕನ ಜೊತೆಗಿನ ಸುತ್ತಾಟದ ಜೊತೆಗೆ ಅಮ್ಮನನ್ನು ನೋಡಲು ಬರುವ ನೆಂಟರಿಷ್ಟರ ಮಧ್ಯೆ ದಿನಗಳು ವೇಗವಾಗಿ ಸರಿದು ಹೋಗಿದ್ದವು. ನಿನ್ನೆ ಇಂದು ಅಕ್ಕನೊಂದಿಗೆ ಮೂಲೆಮನೆ ಗಿರಿಜಜ್ಜಿಯನ್ನು ನೋಡಲು ಅಮ್ಮಹೋದ ಹೊತ್ತಿನಲ್ಲಿ ಅಂಗಳದಲ್ಲಿ ಹಲಸಿನ ಸೊಳೆ ಬಿಡಿಸುತ್ತಿದ್ದ ಮಾಮ, ಅಜ್ಜ, ಅಜ್ಜಿಯರೊಂದಿಗೆ ಅಪ್ಪುವೂ ಕೈಗೆ ಮೇಣ ಮೆತ್ತಿಕೊಂಡಿದ್ದ. “ಹುಡುಗಿ ಬಂದು 18 ದಿನ ಆಯ್ತು ಅಂದ್ರೆ ನಂಬೋಕೆ ಆಗ್ತಿಲ್ಲ... ನಾಳೆನೇ ಹೋಗ್ಬೇಕೇನೋ ರಾಜು?..ಶಾಲೆ ಶುರು ಆಗ್ಲಿಕ್ಕೆ ಇನ್ನೂ ಬೇಕಷ್ಟು ದಿನ ಇದೆ” ಅಜ್ಜಿ ಮಾತು ಆರಂಭಿಸಿದ್ದರು. “ಹೋಗದೆ ಮತ್ತೆ? ರಾಯಲ್ ಸ್ಕೂಲ್ ಅಂದ್ರೆ ಕೋಟಯಂ ಜಿಲ್ಲೆಗೇ ನಂಬರ್ ಒನ್.. ಅಲ್ಲಿ ಎಲ್.ಕೆ.ಜಿಗೆ ಸೀಟು ಬೇಕಿದ್ರೂ 2 ವರ್ಷ ಹಿಂದೇನೆ ಬುಕ್ ಮಾಡ್ಬೇಕು. ಮಧ್ಯದಲ್ಲಿ ಮಕ್ಕಳನ್ನು ತೆಕ್ಕೊಳ್ಳುವುದೇ ಇಲ್ಲ ಅಲ್ಲಿ...ಏನೋ ಕುಟ್ಟಮಾವನ ಪ್ರೆಂಡ್ ಇದ್ದದ್ದಕ್ಕೆ ಅಪ್ಪೂಗೆ ಸೀಟು ಸಿಗ್ತಾ ಇದೆ...ಅವರು ಹೇಳಿದ ದಿನ ನಾವು ಹೋಗದೆ ನಾಳೆ ಏನಾದ್ರೂ ಸೀಟಿಗೆ ತೊಂದರೆ ಆದ್ರೆ?” “ಅಲ್ಲವೋ ಈ ಕುಟ್ಟಮಾವ ಜನ ಹೇಗೆ? ನಂಬಬಹುದೋ?” ಅಜ್ಜನ ಪ್ರಶ್ನೆಗೆ ಅಪ್ಪುವಿನ ಕಿವಿ ನಿಮಿರಿತ್ತು. “ಜನ ಹೇಗೆ ಅಂದರೆ ...ಈ ಪ್ರಾಯದಲ್ಲೂ ಒಳ್ಳೆಯ ಗಟ್ಟಿಮುಟ್ಟಾಗಿದ್ದಾರೆ... ಬೇಕಷ್ಟು ದುಡ್ಡು ಮಾಡಿದ್ದಾರೆ. ಸುಮಾರು ಪೆನ್ಶನ್ನೂ ಬರುತ್ತೆ. ಅಪ್ಪು ಅಂದ್ರೆ ಜೀವ ಬಿಡ್ತಾರೆ. ಅದ್ರಲ್ಲೂ ಸತ್ಯ ಹೇಳ್ಬೇಕು ಅಂದ್ರೆ ಅಕ್ಕ ಮತ್ತು ಅಪ್ಪು ಭವಿಷ್ಯದಲ್ಲಿ ಅವರು ನಮ್ಗಿಂತ ಹೆಚ್ಚೇ ಕಾಳಜಿ ತೆಕ್ಕೊಂಡಿದ್ದಾರೆ. ಇಲ್ಲದಿದ್ದರೆ ಅಕ್ಕನಿಗೆ ಇನ್ನೊಂದು ಮದುವೆ ಮಾಡಿಸಲು ಬೇರೆ ಯಾರಾದ್ರೂ ಹೇಳಿಯಾರಾ?..ಅದಕ್ಕೆ ಆಗುವ ಖರ್ಚೂ ಅವರೇ ನೋಡ್ತಾರಂತೆ. ಒಳ್ಳೆ ಕಡೆಯೇ ನೋಡಿ ಅಂದಿದ್ದಾರೆ.” “ಹೌದೇನೋ...ಅದರೂ ಮೊದಲ ಸಲಾನೆ ಅಷ್ಟು ಕಷ್ಟ ಆಯ್ತು. ಈಗ ಎರಡನೇದಕ್ಕೆ ಸುಲಭ ಏನೋ?..”ಅಜ್ಜ ಮಡಚಿದ ಕಾಲನ್ನು ನೀಡಿದ್ದರು. “ಪ್ರಯತ್ನ ಮಾಡುವ ಅಪ್ಪಾ. ಉಣ್ಣಿತ್ತಾನ್ ಮಾಷ್ಟ್ರಲ್ಲೂ ಹೇಳ್ತೇನೆ” ಕೈಗೆ ಮೆತ್ತಿದ್ದ ಮೇಣವನ್ನು ಪಕ್ಕದಲ್ಲಿದ್ದ ಹಲಸಿನ ತುಂಡಿಗೆ ಒರಸಿದ ಅಪ್ಪು ಅಜ್ಜಿ ಕರೆಯುವುದನ್ನೂ ಲೆಕ್ಕಿಸದೆ ಇಂದು ಅಕ್ಕನ ಮನೆಗೆ ಓಡಿದ್ದ. ಅಲ್ಲೇ ಅಂಗಳದಲ್ಲಿ ನಿಂತು ಇಂದುಅಕ್ಕನ ಅಮ್ಮನೊಂದಿಗೆ ಮಾತಾಡುತ್ತಿದ್ದ ಅಮ್ಮ ಇವನನ್ನು ಕಂಡು “ಯಾಕೋ ಅಪ್ಪು ಕೈಗೆ ಎಣ್ಣೆ ಹಚ್ಚಿಲ್ಲಾ? ಇಡೀ ಮೇಣ ನೋಡು” ಅನ್ನುತ್ತಿದ್ದಂತೆ ಅದೇ ಕೈಯ್ಯಿಂದ ಅಮ್ಮನನ್ನು ಬಿಗಿಯಾಗಿ ತಬ್ಬಿದ್ದ. “ಅಮ್ಮ ನೀನು ನನ್ನ ಬಿಟ್ಟು ಹೋಗ್ತೀಯೇನೆ?” ಇವನ ಅಳುದನಿಗೆ ಅಮ್ಮ ಮ್ಲಾನವಾಗಿ ನಕ್ಕಿದ್ದಳು. “ಒಳ್ಳೇ ಕತೆ! ನಿನ್ನನ್ನು ಬಿಟ್ಟು ಹೋದರೆ ನಿನ್ನ ಅಪ್ಪಮ್ಮ ಮತ್ತು ಕುಟ್ಟಮಾವ ನನ್ನನ್ನು ಮೆಟ್ಟಿಲು ಹತ್ಲಿಕ್ಕೆ ಬಿಟ್ಟಾರೇನೋ?. ಅಷ್ಟಕ್ಕೂ ಊರಿಗೆ ಹೋಗೋದು ನಾಳೆ ಅಲ್ವೇ?” “ಹಾಗಲ್ವೆ..ರಾಜುಮಾಮ..”ಅಪ್ಪು ಮುಂದುವರೆಸುತ್ತಿದ್ದಂತೆ “ಕತ್ಲಾಯ್ತು ಇಂದು. ಇನ್ನು ಈ ಮೇಣ ತೊಳೀಬೇಕಾದ್ರೆ ಒಂದು ಗಂಟೆ ಬೇಕು...ನಾಳೆ ಬಾ ಮನೆಗೆ” ಅಮ್ಮ ಅಂಗಳ ದಾಟಿಯಾಗಿತ್ತು.

ರಾತ್ರಿ ಊಟದ ನಂತರ ಅಜ್ಜ, ಅಜ್ಜಿ, ಅಮ್ಮ ಎಲ್ಲರೂ ಅಡಿಗೆಮನೆಯಲ್ಲಿ ಹಲಸಿನ ಚಿಪ್ಸ್ ಕರಿಯುತ್ತಿರುವಾಗ ಅಂಗಳದಲ್ಲಿ ಈಸಿ ಚೇರಿನಲ್ಲಿ ರಾಜುಮಾಮನ ಮಡಿಲಲ್ಲಿ ಕುಳಿತಿದ್ದ ಅಪ್ಪು ಏನನ್ನೋ ನೆನಪಿಸಿ ಕೊಂಡಿದ್ದಂತೆ ಕೇಳಿದ್ದ. “ಮಾಮ ನಿನ್ನ ಶಾಲೆಯಲ್ಲಿ ಎರಡನೇ ಕ್ಲಾಸು ಇದೆಯಾ?” “ಯಾಕೋ ಅಪ್ಪು? ನನ್ನ ಶಾಲೆಯಲ್ಲಿ ಐದನೇ ಕ್ಲಾಸ್ಸು ತನಕ ಇದೆ” “ಹಾಗಾದ್ರೆ ನನ್ನನ್ನು ಅಲ್ಲಿಗೆ ಸೇರಿಸ್ಲಿಕ್ಕೆ ಆಗುವುದಿಲ್ಲವಾ?..” ರಾಜುಮಾಮ ಬೆನ್ನು ನೇರ್ಪ ಮಾಡಿ ನಕ್ಕಿದ್ದರು. “ನಮ್ಮದು ಕನ್ನಡ ಶಾಲೆ ಅಲ್ವೇನೋ ಅಪ್ಪು?.. ಮೊದ್ಲೇ ಶಾಲೆಯಲ್ಲಿ ಮಕ್ಳಿಲ್ಲಾಂತ ಕನ್ನಡ ಶಾಲೆಗಳನ್ನು ಮುಚ್ಚೋಕೆ ನೋಡ್ತಿದ್ದಾರೆ. ಅದ್ರಲ್ಲೂ ನಮ್ಮದು ಏಯ್ಡೆಡ್ಸ್ಕೂಲ್. ಯಾವಾಗ ಏನು ಕತೇನೋ?..ದೇವರಿಗೇ ಗೊತ್ತು...ನಾನಂತೂ ಎಲ್ಲಿಯಾದರೂ ಶಾಲೆ ಮುಚ್ಚಿದರೆ ನಿನ್ನ ನೆಲ್ಲಿಕ್ಕಾಡಿನ ಮಿಲ್ಲಿನಲ್ಲಿ ಒಂದು ವಾಚ್ಮನ್ ಕೆಲಸ ಕೊಡಿಸು ಅಂತ ನಿನ್ನಲ್ಲಿ ಕೇಳ್ಬೇಕು ಅಂತಿದ್ದೆ...” “ನಾನು ನೆಲ್ಲಿಕ್ಕಾಡಿಗೆ ಹೋಗುವುದಿಲ್ಲ ಮಾಮ. ಹೆದರಿಕೆ ಆಗ್ತದೆ ನಂಗೆ ...ನಂಗೆ ಇಲ್ಲಿಯೇ ಬೇರೆ ಶಾಲೆಗೆ ಸೇರಿಸು.” ಅಪ್ಪುವಿನ ಅಳುದನಿಗೆ ಮಾಮನ ಮುಖ ಗಂಭೀರವಾಯ್ತು. “ಯಾಕೋ ಬಂಗಾರಿ?...ಹೊಸಾ ಸ್ಕೂಲಿಗೆ ಹೋಗಲಿಕ್ಕೆ ಹೆದರಿಕೆ ಏನೋ?..ಹೆದರ ಬೇಡವೋ ತುಂಬಾ ಒಳ್ಳೇ ಸ್ಕೂಲ್ ಅದು. ಒಳ್ಳೇ ಫ್ರೆಂಡ್ಸೂ ಸಿಕ್ಕಾರು ನಿಂಗೆ. ಹಾಗೇನಾದ್ರೂ ಯಾರಾದ್ರು ತೊಂದರೆ ಕೊಟ್ರೆ ನಿನ್ನ ಕುಟ್ಟಮಾವನಲ್ಲಿ ಹೇಳಿದ್ರೆ ಆಯ್ತಪ್ಪ .. ಮಿಲಿಟ್ರಿ ಗನ್ ತೊಗೊಂಡು ಟಿಶುಂ. ಟಿಶುಂ ಮಾಡಿಯಾರು” ಅಪ್ಪು ರಾಜುಮಾಮನ ಮಡಿಲಿನಿಂದ ಸರ್ರನೆ ಎದ್ದವ “ನೀನು ಕೆಟ್ಟೋನು ಇಷ್ಟ ಇಲ್ಲ ನಂಗೆ” ಅಂದು ಸೀದಾ ಹೋಗಿ ಅಜ್ಜನ ಕೋಣೆಯಲ್ಲಿ ಕವುಚಿ ಮಲಗಿದ್ದ.

ಬೆಳಿಗ್ಗೆ ಗಂಟೆ ಒಂಭತ್ತಾದರೂ ಇನ್ನೂ ಹಾಸಿಗೆಯಲ್ಲೇ ಹೊರಳಾಡುತ್ತಿದ್ದವನ್ನು ಎಬ್ಬಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಳು ಅಮ್ಮ. ಕೊನೆಗೆ ಇನ್ನೇನು ಅಮ್ಮನ ಕೈಯ್ಯಿಂದ ಬೆನ್ನಿಗೆ ಬೀಳುತ್ತೆ ಅಂತಾದಾಗ ರಾಜುಮಾಮನೆ ಮಧ್ಯಪ್ರವೇಶ ಮಾಡಿದ್ದ. ಎತ್ತಿಕೊಂಡು ಬಾವಿಕಟ್ಟೆಯ ಬಳಿ ತಂದು ಮುಖ ತೊಳಿಸಿದವನು ಹಾಗೆಯೇ ಎತ್ತಿಕೊಂಡು ಅಡಿಗೆ ಮನೆಗೆ ತಂದರೆ “ನಂಗೆ ತಿಂಡಿ ಬೇಡ” ಅಪ್ಪುವಿನ ರಾಗ ಮತ್ತೆ ಶುರು ಆಗಿತ್ತು. ಅಮ್ಮನಿಗೆ ಮತ್ತೆ ಕೋಪ ಬಂದರೆ, ರಾಜುಮಾಮ ಒಂದು ಕೈಯ್ಯಲ್ಲಿ ಇವನನ್ನು ಎತ್ತಿಕೊಂಡು, ಇನ್ನೊಂದು ಕೈಯ್ಯಲ್ಲಿ ತಿಂಡಿ ತಟ್ಟೆಯನ್ನೂ ಹಿಡಿದು ನೇರ ಚಾವಡಿಗೆ ಬಂದಿದ್ದರು. ಅಲ್ಲಿ ಇವನನ್ನು ನೂರೆಂಟು ಪೂಸಿ ಮಾಡಿದ ಮಾಮ ತಿಂಡಿ ತಿಂದರೆ ಹೊಳೆಗೆ ಕರೆದುಕೊಂಡು ಹೋಗುತ್ತೇನೆಂದು ಹೇಳಿದ ಮೇಲೆ ಒಂದು ದೋಸೆ ಹೊಟ್ಟೆಗೆ ಇಳಿದಿತ್ತು.

ಹೊಳೆ ಬದಿಗೆ ಬಂದಾಗ ಮಾಮನ ಗುರ್ತದ ಅದ್ಲಿಚ್ಚ ಗಾಳ ಹಾಕುತ್ತಾ ಕೂತಿದ್ದವರು ಇವರನ್ನು ನೋಡಿ ನಕ್ಕಿದ್ದರು. “ಕೋಟಯಮ್ಮಿನ ಧನಿ ಯಾವಾಗ ಊರಿಗೆ ಹೋಗುವುದು?..” ಇವತ್ತು...ಮೀನು ಏನಾದ್ರೂ ಉಂಟಾ ಅದ್ಲಿಚ್ಚ?” ರಾಜುಮಾಮನ ಪ್ರಶ್ನೆಗೆ ಅದ್ಲಿಚ್ಚ ಮುಖ ಸಿಂಡರಿಸಿದ್ದರು. “ಈ ಮಾರಿಗಳ ದೆಸೆಯಿಂದ ಮೀನೂ ಮೊದಲಿನಹಾಗೆ ಸಿಗ್ತಾ ಇಲ್ಲ ಮಾರಾಯ. ಒಂದು ನಾಲಕ್ಕು ಚೆರು ಉಂಟು. ಒಂದು 10 ನಿಮಿಷ ನೋಡುವಾ ..ಇಲ್ಲದಿದ್ದರೆ ಅಲ್ಲೇ ಮೇಲೆ ಆಮೆ ಗುಂಡಿಯ ಹತ್ರ ಕಿಟ್ಟು ಕೂತಿದ್ದ. ಅವನತ್ರ ಎನಾದರೂ ಸಿಕ್ಕೀತು. “ಅಪ್ಪು ನೀರಿನಲ್ಲಿ ಕಾಲಾಡಿಸುತ್ತಿದ್ದವನು ದೂರದಲ್ಲಿ ಕಾಣುತ್ತಿದ್ದ ಅಮೆಗುಂಡಿಯ ಕಲ್ಲುಬಂಡೆಗಳತ್ತ ನೋಡಿದ್ದ. ಅರ್ಧಗಂಟೆ ಹೊಳೆಬದಿಯಲ್ಲಿ ಅದ್ಲಿಚ್ಚ ಮೀನು ಹಿಡಿಯುವುದನ್ನು ನೋಡಿದ ಮಾವ ಮತ್ತು ಅಳಿಯ ಸಿಕ್ಕಿದ ಹತ್ತು ಚೆರುಗಳೊಂದಿಗೆ ಮನೆ ತಲುಪಿದ್ದರು.. ಊಟದ ನಂತರ ಎಲ್ಲರೂ ಮಧ್ಯಾಹ್ನದ ಕಿರು ನಿದ್ರೆಗೆ ಜಾರಿದ ಮೇಲೆ ಅಪ್ಪು ಮೆಲ್ಲನೆ ಎದ್ದು ನಡುಕೋಣೆಗೆ ಬಂದಿದ್ದ. ಊಟದ ಮೇಜಿನ ಮೇಲೆ ಉಪ್ಪಿನಕಾಯಿ, ಹಪ್ಪಳ ಚಿಪ್ಸು. ಎಲ್ಲಾ ಪ್ಯಾಕ್ ಆಗಿ ಕೂತಿದ್ದವು. ಸಪ್ಪಳ ಆಗದಂತೆ ಮೆಲ್ಲ ಬಾಗಿಲು ತೆರೆದು ಹೊರಬಂದವ ಚಾವಡಿಯ ಗಡಿಯಾರ ನೋಡಿದಾಗ ಗಂಟೆ ಮೂರೂ ಮುಕ್ಕಾಲು. ಅಂಗಳದಲ್ಲಿ ಬಿಸಿಲು ಹಳದಿ ಬಣ್ಣದಲ್ಲಿ ಹೊಳೆಯುತ್ತಿತ್ತು. ಅಲ್ಲೇ ಆರಿಸಲು ಹಾಕಿದ್ದ ಅಂಗಿಯನ್ನು ಕೈಗೆತ್ತಿಕೊಂಡವ ಸದ್ದು ಮಾಡದೆ ಗೇಟು ತೆರೆದು ಹೊಳೆಯತ್ತ ಹೋಗುವ ಕಾಲ್ದಾರಿಗೆ ಇಳಿದಿದ್ದ. ಯಾರ ಕಣ್ಣಿಗೂ ಬೀಳದೆ ಹೊಳೆ ತಲುಪಿದವನು ನೀರಲ್ಲೇ ನಡೆಯುತ್ತಾ ಆಮೆಗುಂಡಿ ತಲುಪಲು 20 ನಿಮಿಷವೇ ಹಿಡಿದಿತ್ತು. ಬಂಡೆಯ ಆಚೆಬಾಗದಿಂದ ಬಳಸಿ ಈಜಿದವನು ಅಮೆಗುಂಡಿಯ ಮಧ್ಯಭಾಗದಲ್ಲಿ ಬಂಡೆಯ ಕೊರಕಲಿನ ಆಯಕಟ್ಟಿನ ಜಾಗವನ್ನು ಆರಿಸಿ ಅಡಗಿ ಕುಳಿತು ಇದೀಗ ಎರಡು ಗಂಟೆಗಳಾದರೂ ಆಗಿರಬೇಕು. ಕೈಕಾಲುಗಳೆಲ್ಲಾ ಜೋಮು ಹಿಡಿಯುವುದರ ಜೊತೆಗೆ ಬೆನ್ನುನೋವೂ ಶುರುವಾಗಿತ್ತು.
“ಡೋಯ್” ಇದೀಗ ಸದ್ದು ತಲೆಯ ಮೇಲಿಂದಲೇ ಕೇಳಿಸಿದಂತಾಗಿ ಬೆಚ್ಚಿ ಬಿದ್ದ ಅಪ್ಪು. ಒಂದಲ್ಲ ಹಲವಾರು ಸದ್ದುಗಳು. ‘ಅಯ್ಯೋ... ಬಂದರು.... ಬಂದೇಬಿಟ್ಟರು.... ತನ್ನನ್ನು ಕಂಡರೇ .... ಇನ್ನೆಲ್ಲಿ ಅಡಗುವುದು?... ಗಣಪತಿ ದೇವರೇ ...’ ಅಪ್ಪು ಸರಕ್ಕನೆ ತಲೆ ಕೆಳಗೆಳೆದುಕೊಂಡು ಗುಂಡಿಯ ನೀರಲ್ಲಿ ಮುಳುಗಿದ.. ಅರೆ! ಇದೇನಾಶ್ಚರ್ಯ?... ಅಪ್ಪುವಿನ ತಲೆ, ಕೈ, ಕಾಲುಗಳೆಲ್ಲಾ ದೊಡ್ಡದೊಂದು ಚಿಪ್ಪಿನ ಒಳಗೆ ಹೋಗಿವೆ. ‘ಇದೇನಿದು ನಾನು ಆಮೆಯಾಗಿದ್ದೇನೆಯೇ?’ ಅಪ್ಪು ಆಶ್ಚರ್ಯ ಪಡುತ್ತಿದ್ದಂತೆ ಗಾಳದ ತುದಿಯಲ್ಲಿ ದೊಡ್ದದೊಂದು ಕ್ಯಾಡ್ಬರಿ ಚಾಕ್ಲೆಟ್‌ನ ತುಂಡು ಅವನ ಬಾಯಿಯ ಬಳಿಗೆ ಬಂತು. ಮತ್ತು ಅವನು ಆಯಾಚಿತವಾಗಿ ಅದನ್ನು ಗಾಳದ ಸಮೇತ ನುಂಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT