ಭಾನುವಾರ, ಮೇ 16, 2021
25 °C

ಕಥೆ: ಪಿಕ್ಚರ್ ಅಭೀ ಬಾಕೀ ಹೈ

ಎಸ್.ಗಂಗಾಧರಯ್ಯ Updated:

ಅಕ್ಷರ ಗಾತ್ರ : | |

Prajavani

ಕಾವು ಕೂತ ಕೋಳಿಯಂಗೆ ಅಲ್ಲೊಂದು ಇಲ್ಲೊಂದು ತೆಳ್ಳಗೆ ಬಳ್ಳಗೆ ತೋಟ ತುಡಿಕೆಗಳಲ್ಲಿ ಕಾಣುವ ಮನೆಗಳು ದೇವಸ್ಥಾನದ ಪಾಸಲೆಯಲ್ಲಿ ಅಂತೆಯೇ ಇದ್ದೊಂದು ರಸ್ತೆಯ ಆಜುಬಾಜಿನಲ್ಲಿ ಕೂರಗೆ ಕೂತಿರುವ ಒಂದಷ್ಟು ಮನೆಗಳು ಎಲ್ಲಾ ಕೂಡಿದರೂ ಐವತ್ತನ್ನು ದಾಟದ ಎತ್ತಿಂದ ನೋಡಿದರೂ ಊರಿನ ರೂಹುಗಳಿಲ್ಲದ ಆ ಊರಿನಲ್ಲಿ ಅವತ್ತು ಬೆಳ್ಳಂಬೆಳಗ್ಗೆ ಜಗಳದ ಸದ್ದೊಂದು ಎದ್ದು ಬೆಳಗಿನ ಮೌನದ ಕುತ್ತಿಗೆಯನ್ನು ಹಿಸುಕುತ್ತಿತ್ತು. ಕಣಗಾಲ ಮುಗಿದು ಬಿಡು ಬೀಸಾಗಿದ್ದವರ ಚಳಿಯ ಹೊಡೆತಕ್ಕೆ ಆಗಷ್ಟೇ ಎದ್ದು ದನಕರುಗಳನ್ನು ಕೊಟ್ಟಿಗೆಯಿಂದ ಆಚೆ ಕಟ್ಟುತ್ತಿದ್ದವರ ಎದ್ದು ತೋಟಕ್ಕೆ ಹೋಗಿ ಬಿದ್ದ ಕಾಯಿಗಳನ್ನು ಆರಿಸಿಕೊಂಡು ಅಡ್ಡಾಡುತ್ತಿದ್ದವರ ಅಂತೆಯೇ ಎಚ್ಚರವಾಗಿದ್ದರೂ ಇನ್ನೂ ಏಳದೆ ಹಂಗೇ ಕೊಸರಾಡುತ್ತಿದ್ದವರ ಕಿವಿಗದು ಬೀಳುತ್ತಲೇ ಅವರೊಳಗೆ ಕೆಲ ಮಂದಿ ಒಮ್ಮೆಗೇ ಚಿಮ್ಮಿದವರಂತೆ ಆ ಸದ್ದಿನ ದಾರಿ ಹಿಡುಕಂಡು ಅದರ ಕಾರಸ್ಥಾನವನ್ನು ತಲುಪುವ ಹೊತ್ತಿಗಾಗಲೇ ಕಲ್ಲೇದೇವ್ರು ಅಲ್ಲಿ  ಹಾಜರಾಗಿ,`ನೀವಿಂಗೇ ಬಡ್ದಾಡ್ಕಂಡು ಕಡ್ದಾಡ್ಕಂಡು ಮಣ್ ಮಸಿ ಆಗೋಗ್ಬೇಕು ಅಂದ್ಕಂಡಿದೀರೇನು? ನಿಮ್ಗೆ ಹೇಳೋರು ಕೇಳೋರು ಯಾರೂ ಇಲ್ವ?’ಅನ್ನುತ್ತಾ ಕೈಯ್ಯಲ್ಲಿ ದೊಣ್ಣೆಯೊಂದನ್ನು ಹಿಡುಕಂಡು ಬುಳುಗುಟ್ಟನತ್ತ ನುಗ್ಗುತ್ತಿದ್ದ ಗುದ್ಲಪ್ಪನ ರಟ್ಟೆಯಿಡಿದು ನಿಲಾಕುತ್ತಿದ್ದರು. `ಬಿಡ್ರಿ ಅವುನ್ನ ನಾನೇನ್ ಕೈಗೆ ಬಳೆ ತೊಟ್ಕಂಡುಲ್ಲ, ಅದೇನ್ ಮಾಡ್ತಾನೆ ನಾನೂ ನೋಡೇ ಬಿಡ್ತೀನಿ,’ ಒಂದೆರಡು ಮಾರು ದೂರದಲ್ಲಿ ಕೊನಕತ್ತಿ ಕುಡ್ಲೊಂದನ್ನು ಹಿಡಿದು ನಿಂತಿದ್ದ ಬುಳುಗುಟ್ಟ ಎಗರಾಡುತ್ತಿದ್ದ. `ನೀವೇ ನೋಡ್ರಿ ಅವುನ್ ಪೊಗುರ್ನ? ಹೋಗ್ಲಿ ಅತ್ಲಾಗಿ ಅಂತ ನಾನೂ ಇಷ್ಟ್ ದಿನ ತಡ್ಕಂಡು ಸುಮ್ಕಿದ್ರೆ ಹೆಂಗೆ ಬೇಕೋ ಹಂಗೇ ಆಡಾಕೆ ನಿಂತವ್ನೆ ಮುಂದಕ್ಕೆ ತೋರುಸ್ತೀನಿ ನಾನೇನು ಅಂತಾವ, ಅಲಾಲ್‍ಟೋಪಿ ನನ್ಮಗುನ್ಗೆ’ ಅನ್ನುತ್ತಿದ್ದ ಗುದ್ಲಪ್ಪ ಕಲ್ಲೇದೇವ್ರು ಹಿಡಿದಿದ್ದ ರಟ್ಟೆಯನ್ನು ಬಿಡಿಸಿಕೊಳ್ಳಲು ಕೊಸರಾಡುತ್ತಿದ್ದ. `ಅಂಗಂತ ಬಂದು ನೋಡು ಹತ್ರುಕೆ, ನಾನೇನ್ ಕಡ್ಲೆ ಕಾಯಿ ತಿಂತಾ ಕೂತುಲ್ಲ,’ ಬುಳುಗುಟ್ಟ ಕೈಯ್ಯಲ್ಲಿದ್ದ ಕೊನಕತ್ತಿ ಕುಡ್ಲನ್ನು ಜಳಪಿಸುತ್ತಿದ್ದ. `ಹೇಯ್ ಮುಚ್ಚೋ ಬಾಯಿ ಎಂಥ ಮಾತೂಂತ ಆಡ್ತೀಯ?’ಅಂತ ಬುಳುಗುಟ್ಟನನ್ನು ಗದರಿಸಿಕೊಂಡ ಕಲ್ಲೇದೇವ್ರು ಇಬ್ಬರ ಕೈಗಳಲ್ಲಿದ್ದ ಹತಾರಗಳನ್ನು ಕಿತ್ತುಕೊಂಡು ಅಲ್ಲಿ ನೆರೆದಿದ್ದವನೊಬ್ಬನಿಗೆ ಅವುಗಳನ್ನು ಕೊಟ್ಟು,`ಇವಗುಳ್ನ ಇಲ್ಲಿಂದ ತಗಂಡು ಹೋಗು,’ಅಂತ ಅಂದು,`ಒಂತಾಯಿ ಹೊಟ್ಟೇಲಿ ಹುಟ್ಟಿದ್ ಮಕ್ಳು ಅನ್ನೋ ಪರಿಜ್ಞಾನ್ವೂ ಇಲ್ದೆ ಹಿಂಗಾಡಿದ್ರೆ ಹೆಂಗೆ? ಅಣ್ಣನಾಗಿ ನೀನಾದ್ರೂ ವಸಿ ಸಮಾಧಾನ್ದಲಿ ಇರ್ಬಾರ್ದ?’ ಅಂತ ಗುದ್ಲಪ್ಪನಿಗೆ ದೂಷಣೆಯ ದನಿಯಲ್ಲಿ ಕೇಳುತ್ತಿದ್ದರು. `ನಾನು ಊರಲ್ಲಿ ಇಲ್ಲ ಅಂತಾವ ದಬಾದುಬೀಲಿ ಈ ಗ್ರಾಸ್ಥ ಮಾಡಿರೋ ಮನೆಯಾಳ್ ಕೆಲ್ಸಾನಾ ನೋಡುದ್ರೆ ಎಂಥವ್ರಿಗೂ ರಕ್ತ ಕುದ್ಯುತ್ತೆ,’ ಅಂದ ಗುದ್ಲಪ್ಪ ಬುಳುಗುಟ್ಟನನ್ನೇ ದುರುಗುಟ್ಟಿಕೊಂಡು ನೋಡುತ್ತಾ. `ಮನೆ ಹಾಳ ನೀನು ನಾನಲ್ಲ.’ ಬಳುಗುಟ್ಟನೂ ಬುಸುಗುಟ್ಟಿದ. ಕಲ್ಲೇದೇವ್ರು ಮಂಡಿಗೆ ತೊಡರಿಕೊಂಡಿದ್ದ ತಮ್ಮ ಕಚ್ಚೆ ಪಂಚೆಯನ್ನು ಕೊಂಚ ಮೇಲೆ ಸರಿಸಿಕೊಂಡು ಅದರ ಒಂದು ಎಳೆಯನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ, `ತಿರ್ಗಾ ತಗುದ್ರಲ್ಲ ವರ್ಸೇನಾ, ಅದೇನ್ ಆಗ್ಬಾರುದ್ದು ಆಗೋಗಿದೆ ಅಂತೀನಿ?’ಸಮಾಧಾನದ ದನಿಯಲ್ಲಿ ಕೇಳಿದರು. ಗುದ್ಲಪ್ಪ ಹಿಂಗಿಂಗೆ ಈ ಥರಕ್ಕೆ ಆಯ್ತು ಅಂತ ನಡೆದುದ್ದನ್ನೆಲ್ಲಾ ಕಲ್ಲೇದೇವ್ರಿಗೆ ಹೇಳುವ ನೆಪದಲ್ಲಿ ಅಲ್ಲಿ ನೆರೆದಿದ್ದ ಸಕಲರಿಗೂ ತನ್ನ ಮಾತುಗಳನ್ನು ಒಪ್ಪಿಸಿದ. ಅವುಗಳನ್ನೆಲ್ಲಾ ಕೇಳಿಸಿಕೊಂಡ ಬುಳುಗುಟ್ಟ ಒಂದೇ ಪಟ ದನಿಯೇರಿಸಿ, `ಇದುನ್ನೆಲ್ಲಾ ಹುಟ್ಟಿಸ್ಕಂಡು ಹೇಳ್ತಾವ್ನೆ ಬೇಕಾರೆ ನೀವೇ ಬಂದು ನೋಡಿ,’ಅಂದ.

ಆನಾಡಿ ತರಾತುರೀಲಿ ಅತ್ತ ಧಾವಿಸಿದ್ದವರಿಗೆ ಅಲ್ಲಿನ ರಂಗಸ್ಥಳ ತಾವಂದುಕೊಂಡಷ್ಟು ರಂಗೇರದೇ ಹೋಗಿದ್ದರಿಂದ ತುಂಬಾನೇ ನಿರಾಸೆಗೊಂಡು, `ಅಯ್ಯೋ ಹಾವೂ ಸಾಯಲ್ಲ,ಕೋಲೂ ಮುರ್ಯಲ್ಲ,’ ಅಂಥ ಗೊಣಗಿಕೊಂಡು ಒಂದಷ್ಟು ಜನ ಅಲ್ಲಿಂದ ಕಾಲ್ಕಿತ್ತರು. ಉಳಿದವರು ಕಲ್ಲೇದೇವ್ರೊಂದಿಗೆ ಅವರಿಬ್ಬರ ಜಗಳಕ್ಕೆ ಕಾರಣವಾಗಿದ್ದ ತಾವಿನತ್ತ ಕಾಲಾಕಿದರು. ಆ ತಾವಿನಲ್ಲಿ ಕೆಲ ತಿಂಗಳ ಹಿಂದೆ ಎರಡಾಳು ಎತ್ತರಕ್ಕೆ ಕಳ್ಳಿ ಬೇಲಿ ಮತ್ತಿತರ ಗಿಡಗಂಟೆಗಳು ಬೆಳೆದು ನಿಂತಿದ್ದನ್ನು ಖುದ್ದು ಕಲ್ಲೇದೇವ್ರೇ ನೋಡಿದ್ದರು. ಸಧ್ಯ ಅದರ ಒಂದಷ್ಟು ಭಾಗದ ಬೇಲಿ ಹಾಗೂ ಅಲ್ಲಿ ಬೆಳೆದಿದ್ದ ಒಂದಷ್ಟು ಗಿಡಗಂಟೆಗಳನ್ನು ಕಿತ್ತು ಅಚ್ಚುಕಟ್ಟು ಮಾಡಲಾಗಿತ್ತು. ಹಾಗೆ ಅಚ್ಚುಕಟ್ಟಾದ ಜಾಗದಲ್ಲಿ ಅದೊಂದು ನಿರ್ಧಿಷ್ಟ ಜಾಗಕ್ಕೆ ಹೋಗಿ ನಿಂತುಕೊಂಡ ಗುದ್ಲಪ್ಪ, `ಇಗಾ ನೋಡಿ ಇಲ್ಲಿ ಬಾಂದ್ಗಲ್ಲು ಇತ್ತು, ಭಾಗ ಮಾಡ್ಕಂಡಾಗ ಇತ್ಲಾಗೆ ನಂದು ಅತ್ಲಾಗೆ ಅವುನ್ದು ಅಂತ ಪಂಚಾಯ್ತಿಯವ್ರು ತೀರ್ಮಾನ ಮಾಡಿ ನೆಡ್ಸಿದ್ದು, ಆ ಕಲ್ಲೇ ಮಂಗ ಮಾಯ ಆಗೈತೆ!  ಈಗ ನೋಡಿದ್ರೆ ಈ ದೊಡ್ಮನ್ಸ ನನ್ ಜಾಗಾನೂ ಒತ್ಲುಸ್ಕಂಡು ಅಚ್ಕಟ್ ಮಾಡ್ಕಂಡು ಕೂತವ್ನೆ. ಇದುನ್ನ ಕೇಳ್ದೆಯಾ ಅಂಗೆ ಇರಾಕಾದಾತಾ ನೀವೇ ಹೇಳಿ?’ಅಂದ ಕಲ್ಲೇದೇವ್ರತ್ತ ಮುಖ ಮಾಡಿ. ಆ ಜಾಗದಲ್ಲಿ ಪಾಯ ತೆಗೆಯಲಾಗಿತ್ತು. ಆ ಪಾಯದ ಒಂದು ಭಾಗವನ್ನು ಅರೆಬರೆ ಮುಚ್ಚಲಾಗಿತ್ತು. ಆ ಪಾಯದ ಸಲುವಾಗಿ ಹೇರಿದ್ದ ಒಂದಷ್ಟು ಕಾಡು ಕಲ್ಲುಗಳು ಅಷ್ಟಾರಕ್ಕೂ ಇಟ್ಟಾಡಿದ್ದವು. ವಾರಾಸಿಗೆ ನಾಟಿ ಮರಳಿನ ರಾಶಿ ಬಿದ್ದಿತ್ತು. ಅಣ್ಣನ ಮಾತುಗಳನ್ನೆಲ್ಲಾ ಕೇಳಿಸಕೊಂಡ ಬುಳುಗುಟ್ಟ ಬರಬನೆ ಎದುರಿಗಿದ್ದ ಕಳ್ಳಿ ಬೇಲಿಯ ಪಕ್ಕಕ್ಕೆ ಹೋಗಿ ನಿಂತು, `ಅದ್ಕೇನು ಕಾಲು ಬಂದಿದಾವ ಒಡೋಗಕೆ? ಇಗಾ ಇಲ್ಲೇ ಐತೆ ನೋಡಿ ಬಾಂದ್ಗಲ್ಲು,’ಅಂತ ಬೇಲಿಯೊಳಕ್ಕೆ ಕೈಮಾಡಿ ತೋರಿಸಿದ. ಇದು ಗುದ್ಲಪ್ಪನ ಪಿತ್ಥವನ್ನು ನೆತ್ತಿಗೇರಿಸಿತು. ಗುದ್ಲಪ್ಪನೂ ಆ ತಾವಿಗೋಗಿ ನಿಂತು, `ಬಾಂಚೋದ್ ಯಾರತ್ರ ಆಡ್ತಿದೀಯಾ ಈ ತಳ್ ತಳ್ಕಿನ್ ಆಟಾವ? ಇಲ್ಲಿದ್ದ ಅದುನ್ನ ಕಿತ್ತು ಅಲ್ಲಿ ನೆಟ್ಬುಟ್ಟು ಈಗ ನಸ್ಗುನ್ನಿ ಅವ್ತಾರ ತೋರುಸ್ತುದೀಯೇನೋ ಮನೆಯಾಳ? ನೀವೇ ಬೇಕಾರೆ ಬಂದು ನೋಡ್ರಿ ಇದು ನಿನ್ನೇನೋ ಮೊನ್ನೇನೋ ನೆಟ್ಟಿರೋ ಕಲ್ಲು, ಸಾಲುದ್ಕೆ ಮಣ್ಣು ಇನ್ನೂ ಕೂತೇ ಇಲ್ಲ, ಹಂಗೇ ಹಸ್ ಹಸ್ಯಾಗೇ ಐತೆ,’ ಅಂತ ಅಂದ ಕಲ್ಲೇದೇವ್ರತ್ತ ನೋಡುತ್ತಾ. ಎಲ್ಲದನ್ನೂ ಸಾವಧಾನದಿಂದ ನಿರುಕಿಸಿಕೊಳ್ಳುತ್ತಾ ನಿಂತಿದ್ದ ಕಲ್ಲೇದೇವ್ರು ಅವರಿಬ್ಬರು ನಿಂತಿದ್ದತ್ತ ನಡೆದು ಅವರಿಬ್ಬರೂ ತೋರಿಸುತ್ತಿದ್ದ ಬೇಲಿಯೊಳಗಿದ್ದ ಬಾಂದ್ಗಲ್ಲಿನ ಸಲುವಾಗಿ ಅಲ್ಲಿ ಬೆಳೆದಿದ್ದ ಕಳ್ಳಿಯನ್ನೂ ಗಿಡಗಂಟೆಗಳನ್ನು ವಾರೆ ಮಾಡಿ ನೋಡತೊಡಗಿದರು. ಆಗ ಬಳುಗುಟ್ಟ, `ಯಾರಿಗ್ ತೋರ್ಸೀರೂ ಆಟೇಯಾ, ಯಾರ್ಬಂದ್ ನೋಡಿದ್ರೂ ಬೆಳ್ ಮಡ್ಚಂಗುಲ್ಲ, ನಾನೂ ಅಪ್ಗೆ ಹುಟ್ದೋನೆಯಾ,’ ಮೆಲ್ಲಗೆ ಗೊಣಗಿಕೊಂಡ. `ಅಪ್ಗೆ ಹುಟ್ದೋರು ಯಾರೂ ಇಂಥ ಮನ್ಮುರ್ಕ ಕೆಲ್ಸ ಮಾಡಲ್ಲ,’ ಬುಳುಗುಟ್ಟನ ಮಾತುಗಳನ್ನು ಕೇಳಿಸಿಕೊಂಡ ಗುದ್ಲಪ್ಪ ಎಲ್ಲರಿಗೂ ಕೇಳುವಂತೆ ಅಂದ. ಇದರಿಂದ ರಾಂಗಾಗಿ, `ಮನ್ಮುರ್ಕ ಯಾರೂಂತವ ಊರ್ಗೇ ಗೊತೈತೆ ತಗಾ,’ ಅಂದ ಬುಳುಗುಟ್ಟನೂ ದನಿಯೇರಿಸಿ. ಈ ಮಾತುಗಳಿಂದ ಕೆರಳಿ ಕೆಂಡವಾದ ಗುದ್ಲಪ್ಪ, `ಅಯ್ಯೋ ತಳ್ತಳ್ಕಿನ್ ತಾಳಿ ನನ್ಮಗ್ನೇ ಮಾಡಾದೆಲ್ಲಾ ಮಾಡ್ಬುಟ್ಟು ಈಗ ಸಾಬಸ್ತನಂಗೆ ನಸ್ಗುನ್ನಿ ಆಟ ಆಡ್ತಿದೀಯಾ?’ ಅನ್ನುತ್ತಾ ಕೈಗೆ ಸಿಕ್ಕ ಮಣ್ಣಿನ ಹೆಂಟೆಯೊಂದನ್ನು ಎತ್ತಿಕೊಂಡು ಒಮ್ಮೆಗೇ ಬುಳುಗುಟ್ಟನತ್ತ ಪಣ್ಣನೆ ನೆಗೆದ. ಅದನ್ನು ಕಾಣುತ್ತಲೇ ಬುಳುಗುಟ್ಟ ಠಕಾರ್ ಅಂತ ಹಿಂದೆ ಸರಿದು, `ಅದುನ್ನ ಆಡ್ತಾ ಇರಾನು ನೀನು ನಾನಲ್ಲ, ಭಾಗ ಆಗ್ಬೇಕಾರೆ ಅಪ್ಪುನ್ನ ಒಳಿಕಾಕ್ಕೆಂಡು ಇಕ್ಕಿದೀಯಲ್ಲ ನಂಗೆ ಮೂರ್ ನಾಮಾವಾ,’ಅಂದ ಮತ್ತೂ ಏರಿದ ದನಿಯಲ್ಲಿ. ಅಲ್ಲಿ ನೆರೆದಿದ್ದ ಹಾಗೂ ಸರೀಕರೆದುರು ಬುಳುಗುಟ್ಟಹಂಗನ್ನುತ್ತಲೇ ಗುದ್ಲಪ್ಪನಿಗೆ ಅವಮಾನವಾದಂತಾಗಿ ಮತ್ತೊಮ್ಮೆ ಬುಳುಗುಟ್ಟನತ್ತ ನುಗ್ಗಿದ. ಆ ಚಣ ಕಲ್ಲೇದೇವ್ರು ಮಧ್ಯೆ ನುಗ್ಗಿ ಗುದ್ಲಪ್ಪನನ್ನು ತಡೆದು, `ನೋಡ್ರಪ್ಪ ನಾನು ನಿಮ್ ಅಪ್ನೂ ಅಣ್ಣ ತಮ್ಗುಳು ಇದಂಗೆ ಇದ್ವಿ ಅನ್ನೋ ಒಂದೇ ಕಾರ್ಣುಕ್ಕೆ ಹೇಳ್ತೀನಿ, ಹಿಸ್ಸೆ ಮಾಡ್ಬೇಕಾರೆ ನಾನೂ ಇದ್ದೆ, ಆದ್ರೆ ಬಾಂದ್ಗಲ್ನ ಎಲ್ಗೆ ನೆಡ್ಸಿದ್ವಿ ಅಂತ ನಂಗೂ ಮರ್ತು ಹೋಗೈತೆ, ಆಟುಕ್ಕೂ ಇದೇನ್ ನೆನ್ನೆ ಮೊನ್ನೇದಾ? ಏನಿಲ್ಲಾಂದ್ರೂ ಹದಿನೈದು ವರ್ಸುದ್ ಮ್ಯಾಲಾಗೈತೆ. ಈಗ ನೋಡುದ್ರೆ ಅಲ್ಲಿತ್ತು ಇಲ್ಲಿತ್ತು ಅಂತ ಇಬ್ರೂ ಒಂದೊಂದ್ ಕಡೆ ತೋರುಸ್ತಾ ಇದೀರಾ! ಸತ್ಯ ಏನೂ ಅಂತ ನಿಮ್ಮಿಬ್ರಿಗೇ ಗೊತ್ತು,ಇಬ್ರೂ ವಸಿ ಅನ್ಸರುಸ್ಕಂಡು ನೇರೂಪ್ ಮಾಡ್ಕಳಿ,’ಅಂದರು. `ಅದು ಆಗುದ್ ಮಾತು ಬಿಡ್ರಿ,ಇವತ್ತ ಇಲ್ಲಿ ಹಿಂಗ್ ಮಾಡವ್ನೆ ನಾಳಿಕೆ ಇನ್ನೊಂದು ತಾವ್ಲೂ ಹಿಂಗೇ ಮಾಡ್ತಾನೆ,’ಗುದ್ಲಪ್ಪ ಕಡ್ಡಿ ಮುರಿದಂತೆ ಅಂದ.

ಹಿಂಗೇ ಮತ್ತೊಂದಷ್ಟೊತ್ತು ಮತ್ತಷ್ಟು ತಲಾತಟ್ಟಿಗೆ ಮಾತುಕತೆಗಳಾದವು. ಕಲ್ಲೇದೇವ್ರು ಇಬ್ಬರಿಗೂ ಹೇಳೋದನ್ನೆಲ್ಲಾ ಹೇಳಿ ನೋಡಿದ್ರು. ಇಬ್ಬರೂ ಜಿದ್ದಿಗೆ ಬಿದ್ದದ್ದರಿಂದ ಅವರಿಗೆ ಇದು ತಮ್ಮಿಂದ ಆಖೈರು ಮಾಡಲಾಗದ ಸಂಗತಿ ಅನ್ನೋದು ಮನದಟ್ಟಾಗಿ, `ಹಿಂಗೇ ಕಿತ್ತಾಡ್ಕಂಡು ಕೂತ್ಕಂಡ್ರೆ ಏಸ್ ದಿಸಾದ್ರೂ ಇದು ಬಗೆ ಹರಿವಲ್ದು, ಒಂದ್ ಕೆಲ್ಸಾ ಮಾಡಿ, ಮೊದ್ಲು ಪೋಡು ಮಾಡ್ಸಿ. ಅಮಕವಾ ಸರ್ವೆಗೆ ಹಾಕ್ಕಳ್ರಿ, ಅವ್ರೇ ಬಂದು ಜಾಗ ತೋರುಸ್ತಾರೆ,ಆಗ ನಿಮ್ ನಿಮ್ ಹದ್ಬಸ್ತು ಎಲ್ಲಿ ಅಂತ ಗೊತ್ತಾಗುತ್ತೆ, ಅಮೇಲಿನ್ನೇನು ಸುಪರ್ದಿಗೆ ತಗಂಡ್ರಾತು,ಯಾರ ಮುನಾಸಾಬೂ ಇರಲ್ಲ,’ಅಂದು ಅವರಿಬ್ಬರನ್ನೂ ಅಲ್ಲಿಂದ ಕಳಿಸಿ ತಾವೂ ಮನೆಯತ್ತ ಹೊರಟರು. ಆ ಹೊತ್ತಾಗಲೇ ಎರಡಾಳುದ್ದಕ್ಕೆ ಬಂದಿತ್ತು. ಕಲ್ಲೇದೇವ್ರ ಮಾತಿನಂತೆ ಅಣ್ಣ ತಮ್ಮಂದಿರಿಬ್ಬರೂ ಅವತ್ತೇ ಹದ್ದುಬಸ್ತಿಗೆ ಅರ್ಜಿ ಕೊಟ್ಟು ಬಂದರು.

ಚಿತ್ತಯ್ಯ ಹಾಗೂ ಸಣ್ರಾಮಕ್ಕರಿಗೆ ಹುಟ್ಟಿದ್ದ ನಾಕು ಮಕ್ಕಳಲ್ಲಿ ಎರಡು ಮಕ್ಕಳು ಒಂದಷ್ಟು ದಿನ ಸಾಕಿಸಿಕೊಂಡು ತೀರಿಕೊಂಡಿದ್ದವು. ಉಳಿದಿದ್ದ ಇಬ್ಬರಲ್ಲಿ ಗುದ್ಲಪ್ಪ ಅಣ್ಣ. ಬುಳುಗುಟ್ಟ ತಮ್ಮ.  ಕಿರಿಯ ಮಗನಿಗೆ ಅಪ್ಪ ಅಮ್ಮ ಇಟ್ಟಿದ್ದ ಹೆಸರು ಶಾಂತ್ವೀರಸ್ವಾಮಿ. ಆದರೆ ಆ ಊರಲ್ಲಿ ಆ ಹೆಸರೇ ಮರೆತೋಗುವಷ್ಟು ಅವನಿಗಿಟ್ಟಿದ್ದ ಅಡ್ಡ ಹೆಸರೇ ಹೆಚ್ಚು ಪ್ರಚಲಿತದಲ್ಲಿತ್ತು. ನಿಂತ ಕಡೆ ನಿಲ್ಲದೆ ಕೂತ ಕಡೆ ಕೂರದೆ ಒಂದು ನಿಮಿಷವೂ ಸುಮ್ಮನಿರದೆ ವಟವಟ ಅನ್ನುತ್ತಿದ್ದ ಕಾರಣಕ್ಕೋ ಇಲ್ಲಾ ಚಿಕ್ಕವನಿದ್ದಾಗ ಒಂಚೂರು ಏನಾರಾ ಆತು ಅಂದ್ರೆ ಯಾರಾರಾ ಏನಾದ್ರೂ ಅಂದ್ರು ಅನ್ನುತ್ತಿದ್ದಂಗೆ ಬಳಬಳನೆ ಕಣ್ಣಿರು ಸುರಿಸುತ್ತಾ ಯಪ್ಪೆ ಆಟ ಹಾಕುತ್ತಿದ್ದ ಕಾರಣಕ್ಕೋ ಅಂತೂ ಅವನ ವಾರಿಗೆಯವರ ಬಾಯಲ್ಲಿ ಅವನು ಬುಳುಗುಟ್ಟನಾಗಿದ್ದ. ಓನಂ ಪ್ರಥಮದಲ್ಲಿ ಯಾರಾದರೂ ಬುಳುಗುಟ್ಟ ಅಂತ ಕರೆದರೆ ಶಾಂತ್ವೀರ ರೇಗಾಡುತ್ತಿದ್ದ. ಕ್ರಮೇಣ ಎಲ್ಲರೂ ಹಂಗೇ ಕರೆಯುತ್ತಿದ್ದುದರಿಂದ ಅವನೂ ಅದಕ್ಕೆ ಹೊಂದಿಕೊಂಡಿದ್ದ.

ಹಿರಿಯ ಮಗ ಗುದ್ಲಪ್ಪ ಚೆನ್ನಾಗಿ ಓದುತ್ತಿದ್ದರೂ ವ್ಯವಸಾಯದ ಕೆಲಸವನ್ನು ಒಬ್ಬನೇ ನಿಭಾಯಿಸೋಕಾಗಲ್ಲ ಅನ್ನೋ ಕಾರಣಕ್ಕೆ ಅವನ ಓದು ಬಿಡಿಸಿ ಮನೆ ಕಡೆ ಹಾಕಿಕೊಂಡಿದ್ದ ಚಿತ್ತಯ್ಯ. ಹಂಗಾಗಿ ಗುದ್ಲಪ್ಪನ ಓದು ಹತ್ತನೇ ಕ್ಲಾಸಿಗೇ ಕಲಾಸಾಗಿ ಹೋಗಿತ್ತು. ಅಣ್ಣನಿಗಾದಂತೆ ತಮ್ಮನಿಗೂ ಆಗಬಾರದು ಅನ್ನುವ ಕಾರಣಕ್ಕೆ ಬುಳುಗುಟ್ಟನನ್ನು ಡಿಗ್ರಿಯವರೆಗೂ ಕಳಿಸಿದ್ದ. ಅವನು ಓದುವವರೆಗೂ ಓದಿಸುವ ಆಸೆಯಿತ್ತು ಚಿತ್ತಯ್ಯನಿಗೆ. ಆದರೆ ಡಿಗ್ರಿಯನ್ನೇ ದಮ್ ಕಟ್ಟಿ ಪಾಸು ಮಾಡಿಕೊಂಡಿದ್ದ ಬುಳುಗುಟ್ಟ ಕತ್ತುಹಿಡಿದು ನೂಕಿದರೂ ಮುಂದಕ್ಕೆ ಹೋಗಲೊಪ್ಪದೆ ತಪ್ಪಿಸಿಕೊಂಡಿದ್ದ. ‘ವೈನಾಗಿ ಓದ್ಕಂಡುದ್ ಮಗಾನಾ ಬ್ಯಾಸಾಯ್ಕೆ ಹಾಕ್ಕಂಡು ಅನ್ಯಾಯ ಮಾಡ್ಬುಟ್ಟೆ,’ ಅಂತ ಚಿತ್ತಯ್ಯ ಆಗಾಗ ಬೇಸರಪಟ್ಟುಕೊಳ್ಳುತ್ತಿದ್ದ. ಆದರೆ ಪಾಲಿನ ವಿಚಾರ ಬಂದಾಗ ಮಾತ್ರ ಹೆಚ್ಚು ಕಮ್ಮಿ ಮಾಡದೇ ಇಬ್ಬರಿಗೂ ಸಮನಾಗಿ ಹಂಚಿದ್ದ ಚಿತ್ತಯ್ಯ. ಆದರೂ ಯಾಕೋ ಏನೋ ಈ ಬಗ್ಗೆ ಬುಳುಗುಟ್ಟನಿಗೆ ಸಣ್ಣ ಅಸಮಾಧಾನವೊಂದು ಇದ್ದೇ ಇತ್ತು. ಆ ಕಾರಣಕ್ಕಾಗಿ ಅಣ್ಣ ತಮ್ಮಂದಿರ ನಡುವೆ ಆಗಾಗ ಸಲವಾಲದ್ದಕ್ಕೆಲ್ಲಾ ಜಗಳ ನಡೆಯುತ್ತಿತ್ತು. 

ಸಧ್ಯದ ಅವರಿಬ್ಬರ ಜಟಾಪಟಿಗೆ ಹಾಳೂರಿನಲ್ಲಿದ್ದ ತುಂಬಾ ವರ್ಷ ಕೈಸಾರಿ ಬಿಟ್ಟಿದ್ದ ಸೈಟಿನ ಜಾಗ ಕಾರಣವಾಗಿತ್ತು. ಒಂದು ಕಾಲದಲ್ಲಿ ಅಂದರೆ ಚಿತ್ತಯ್ಯನ ತಾತ ಮುತ್ತಾತಂದಿರೂ ತುಂಬಾ ಹಿಂದೆ ಅನ್ನುತ್ತಿದ್ದ ಕಾಲದಲ್ಲಿ ಅಲ್ಲೊಂದು ಊರಿತ್ತು. ಒಮ್ಮೆ ಇದ್ದಕ್ಕಿದ್ದಂತೆ ಊರಂಥ ಊರಿಗೆಲ್ಲಾ ಪ್ಲೇಗು ಮಾರಿ ವಕ್ಕರಿಸಿಕೊಂಡು ಅದರಿಂದ ಅಳಿದುಳಿದವರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಊರಿಗೆ ಊರನ್ನೇ ಖಾಲಿ ಮಾಡಿ ತಮಗೆ ತೋಚಿದ ಜಾಗಗಳಲ್ಲಿ ನೆಲೆ ನಿಂತಿದ್ದರು. ಆವಾಗಿಂದಲೂ ಆ ಊರು ಊರೆನ್ನುವ ಗುಣ ಕಳಕಂಡು ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಬೆಳಕಂಡಿತ್ತು. ಇಂಥ ಊರಿಂದ ಒಂದೆರಡು ಫರ್ಲಾಂಗು ದೂರದಲ್ಲಿ ಹಾಳೂರಿತ್ತು. ಅದರ ಕುರುಹಾಗಿ ಮುರುಕು ಗೋಡೆಗಳು ಒಂಟಿ ಕಂಬಗಳು ಕರವುಗಲ್ಲು ಮುಂತಾದ ಅಳಿದುಳಿದ ಅವಶೇಷಗಳು ಅಲ್ಲಿ ಮಾಮೇರಿ ಬೆಳಕಂಡಿದ್ದ ಗಿಡಗಂಟೆಗಳ ನಡುವಿಂದ ಇಣುಕಾಕುತ್ತಿದ್ದವು. ಇಂಥ ಹಾಳೂರನ್ನು ಇನ್ಮುಂದೆ ಹಾಳೂರು ಅಂತ ಕರೆಯಲಾಗದಂಥ ಸಂಗತಿಯೊಂದು ಕೆಲವು ವರ್ಷಗಳ ಹಿಂದೆ ನಡೆದಿತ್ತು. ಅದೆಂದರೆ ಅಲ್ಲಿ ಇತರೆ ಅವಶೇಷಗಳ ನಡುವೆ ದೇವಸ್ಥಾನವೊಂದರ ಕುರುಹಿತ್ತು. ಅದರ ಗೋಡೆಗಳೇಲ್ಲಾ ಬಿದ್ದೋಗಿದ್ದರೂ ಅದಕ್ಕೆ ನಿಲ್ಲಿಸಿದ್ದ ಕಲ್ಲಿನ ಕಂಬಗಳು ಅಲ್ಲೊಂದು ಇಲ್ಲೊಂದು ಹಂಗೇ ನಿಂತಿದ್ದವು. ಅದರ ಗರ್ಭಗುಡಿ ಅಂಥ ಕರೆಯಬಹುದಾದ ಜಾಗದಲ್ಲಿ ಯಾವುದೇ ವಿಗ್ರಹವಿರದೆ ಮಂಡಿಯೆತ್ತರದ ಒಲೆಯೊಂದಿತ್ತು. ಹಂಗಾಗಿ ಆ ಒಲೆಯೇ ದೇವರಾಗಿ ಅದನ್ನು ಒಲೆಯಮ್ಮನ ಗುಡಿ ಅಂತಲೇ ಕರೆಯಲಾಗುತ್ತಿತ್ತು. ಅದನ್ನ ನೋಡಬೇಕೆಂದರೆ ಅಲ್ಲಿ ಬೆಳಕಂಡಿದ್ದ ಗಿಡಗೆಂಟೆಗಳನ್ನೆಲ್ಲಾ ಅರುಗು ಮಾಡಿಕೊಂಡು ಹೋಗಬೇಕಾಗಿತ್ತು. ಹಂಗಾಗಿ ಊರಿನ ಯಾರೂ ಅಷ್ಟಾಗಿ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹಿಂಗಿರುವಾಗ ಅದೊಂದು ಒಂದಿನ ಒಂದಷ್ಟು ಮಂದಿ ತಾವು ಒಲೆಯಮ್ಮನ ಒಕ್ಕಲು ಅಂತ ಬಂದಿದ್ದರು. ಹಂಗೆ ಬಂದಿದ್ದ ಅವರು ದಿನೊಪ್ಪತ್ತು ಅನ್ನೋದರೊಳಗೆ ಆ ಗುಡಿಯನ್ನು ಮತ್ತೆ ಜೀರ್ಣೋದ್ಧಾರ ಮಾಡಿಸಿದ್ದರು. ಸಾಲದ್ದಕ್ಕೆ ಊರಿನಲ್ಲಿ ತಮ್ಮ ಪೈಕಿಯ ಮನೆಯೊಂದಕ್ಕೆ ಒಲೆಯಮ್ಮನ ಪೂಜೆಯ ಜವಾಬ್ದಾರಿಯನ್ನು ಹೊರಿಸಿ ಅದಕ್ಕಾಗಿ ಆ ಮನೆಯವರಿಗೆ ತಿಂಗಳಿಗಿಷ್ಟು ಕಾಸು ಅಂತ ಗೊತ್ತು ಮಾಡಿದ್ದರು. ಆವಾಗಿನಿಂದ ಅದೆಷ್ಟೋ ವರ್ಷಗಳು ನಿಂತೋಗಿದ್ದ ಒಲೆಯಮ್ಮನಿಗೆ ದಿನವೂ ಪೂಜೆ ನಡೆಯತೊಡಗಿತ್ತು. ಅಂತೆಯೇ ಊರಿನ ಉಳಿದೆರಡು ಗುಡಿಗಳಂತೆ ಡಿಕಾವಾಗಿ ಕಾಣತೊಡಗಿತ್ತು. ಈ ನೆಪದಲ್ಲಿ ಗುಡಿಯ ಸುತ್ತಮುತ್ತಲಿನ ಒಂದಷ್ಟು ಜಾಗ ಅಚ್ಚುಕಟ್ಟಾಗಿತ್ತು. ಆ ಅಚ್ಚುಕಟ್ಟಾದ ಜಾಗದಲ್ಲಿ ಗುಡಿಯ ಸುತ್ತಲೂ ಕಣಗಿಲು,ಧೂಪ ಕಣಗಿಲು,ಬಸವನ ಪಾದ,ನಂದ ಬಟ್ಟಲು ಮುಂತಾದ ಹೂವಿನ ಗಿಡಗಳನ್ನೂ ಬಿಲ್ವಪತ್ರೆ,ಅರಳಿ,ಬೇವು ಮುಂತಾದ ಗಿಡಗಳನ್ನೂ ನೆಡಲಾಗಿತ್ತು. ಅವುಗಳಿಗೆ ಅಂಲೇ ಭಕ್ತರು ಬೋರ್ವೆಲ್ಲೊಂದನ್ನೂ ತೆಗೆಸಿದ್ದರು. ಪೂಜಾರಿಕೆ ವಹಿಸಿಕೊಂಡಿದ್ದವರು ಅವುಗಳನ್ನು ಚೆನ್ನಾಗಿ ನಿಗಾ ಮಾಡಿದ್ದರಿಂದ ಅವುಗಳೆಲ್ಲಾ ಲಕಲಕಿಸುತ್ತಿದ್ದವು. ಬೆಳಗಾಗೆದ್ದು ಪತ್ರೆಗೆಂದೇ ಊರಿನ ಕೆಲವರು ಅತ್ತ ಹೋಗುತ್ತಿದ್ದರು. ಹಂಗಾಗಿ ಆ ಗುಡಿಗೂ ಒಂದು ಕಳೆ ಬಂದಿತ್ತು. ಅಂತೆಯೇ ಅದು ಹಾಳೂರಿನ ನಿರ್ಜೀವಕ್ಕೂ ರವಷ್ಟು ಜೀವ ತುಂಬಿತ್ತು. ಇದನ್ನು ಕಂಡು, `ನೋಡು ಏಸು ದಿಸ ಆದ್ರೇನು ದೇವ್ರು ದೇವ್ರೆಯಾ, ನಾವು ಮರುತ್ರೂ ಅವು ಮರ್ಯಲ್ಲ, ಹಗ್ಲೂ ರಾತ್ರಿ ಹಾಕ್ಕೆಂಡು ಬಾರ್ಸವ್ಳೆ ಅಂತ ಕಾಣುತ್ತೆ ಒಲ್ಯಮ್ಮ,ಅದ್ಕೆಯಾ ಹುಡಿಕ್ಕೆಂಡು ಬಂದವ್ರೆ,’ ಅಂತ ಊರಿನ ಕೆಲ ಮಂದಿಯನ್ನು ಸೋಜಿಗಕ್ಕೂ ಒಳಗಾಗುವಂತೆ ಮಾಡಿತ್ತು. ಜೊತೆಗೆ ಊರವರು ದೇವರುಗಳ ಮೇಲೆ ಆಣೆ ಪ್ರಮಾಣ ಮಾಡುವಾಗ ಇತರೆ ದೇವರುಗಳಂತೆ ಒಲೆಯಮ್ಮನ ಮೇಲೆಯೂ ಆಣೆ ಪ್ರಮಾಣ ಮಾಡತೊಡಗಿದ್ದರು.

ಗುದ್ಲಪ್ಪನ ಅಪ್ಪ ಚಿತ್ತಯ್ಯ ಅವನ ಅಪ್ಪ ಬಡುಗ್ಲಪ್ಪನಿಗೆ ಒಬ್ಬನೇ ಮಗ. ಹಂಗಾಗಿ ಬಡುಗ್ಲಪ್ಪನಿಗೆ ಆಸ್ತಿಯನ್ನು ಭಾಗ ಮಾಡಿಕೊಡುವ ಅಗತ್ಯ ಬಂದಿರಲಿಲ್ಲ. ಆದರೆ ಚಿತ್ತಯ್ಯನಿಗೆ ಇಬ್ಬರು ಮಕ್ಕಳಿದ್ದುದರಿಂದಲೂ ಮುಂದೊಂದು ದಿನ ಅಣ್ಣ ತಮ್ಮಂದಿರಲ್ಲಿ ಇದೇ ಹಾಳೂರ ಸೈಟು ಜಗಳ ತಂದಿಕ್ಕಿದರೂ ಇಕ್ಕಬಹುದು ಅಂತ ಮುಂಗಂಡಿದ್ದ ಚಿತ್ತಯ್ಯ ತಾನು ಸಾಯೋಕೆ ಎರಡು ವರ್ಷ ಇದೆ ಅನ್ನುವಾಗ ಎಲ್ಲಾ ಜಮೀನನ್ನು ಹಂಚಿದಂತೆ ಹಾಳೂರ ಮನೆಯ ಜಾಗವನ್ನೂ ಹಂಚಿ ಬಾಂದ್ಗಲ್ಲನ್ನು ನೆಡಿಸಿದ್ದ. ಅದರ ಹಿಂದೆಯೇ ಪಂಚಾಯ್ತಿ ಪಾರಿಖತ್ತನ್ನೂ ಮಾಡಿಸಿದ್ದ. ಆದರೆ ಆ ಪಾರಿಖತ್ತನ್ನು ರಿಜಿಸ್ಟರ್ ಮಾಡಿಸಿಕೊಂಡು ಅವರವರ ಹೆಸರುಗಳಿಗೆ ಖಾತೆಗಳನ್ನು ಮಾಡಿಸಿಕೊಳ್ಳುವ ಗೋಜಿಗೆ ಮಕ್ಕಳಿಬ್ಬರೂ ಹೋಗಿರಲಿಲ್ಲ. ಹಂಗಾಗಿ ಅವರ ಪಾಲು ಬರೀ ಪಂಚಾಯ್ತಿ ಪಾರಿಖತ್ತಿನಲ್ಲೇ ನಿಂತಿತ್ತು. ಆದರೂ ಅವರುಗಳು ತಂತಮ್ಮ ಪಾಲಿಗೆ ಬಂದಿದ್ದ ಆಸ್ತಿಯನ್ನು ತಾಮೇಲು ಅನ್ನುವಂತೆ ಆಬದ್ದು ಮಾಡುತ್ತಿದ್ದರು. ಅಂತೆಯೇ ಮೊದಮೊದಲು ಆಟೋ ಈಟೋ ಬೇಕೋ ಬೇಡವೋ ಅನ್ನುವಂತಿದ್ದ ಅವರುಗಳ ಸಂಬಂಧ ಬರಬರುತ್ತಾ ಹೊಟ್ಟೆ ಕಿಚ್ಚಿಗೆ ತಿರುಗಿ ಅದು ಆಗಾಗಾ ಸಣ್ಣ ಪುಟ್ಟ ಜಗಳಗಳಿಗೆ ಕಾರಣವಾಗಿ ಇಬ್ಬರ ನಡುವಿನ ಮಾತು ಕತೆಗಳಿಗೂ ಕುತ್ತು ಬಂದು ವರ್ಷಗಳೇ ಕಳೆದೋಗಿದ್ದವು. ಹಿಂಗಿರುವಾಗ ಇಬ್ಬರೂ ಒಗ್ಗೂಡಿ ಪಾರಿಖತ್ತನ್ನು ರಿಜಿಸ್ಟರ್ ಮಾಡಿಸಿ ಖಾತೆ ವಗೈರೆ ಮಾಡಿಸಿಕೊಳ್ಳುವುದು ದೂರದ ಮಾತೇ ಆಗಿತ್ತು.

ಇಬ್ಬರ ಭಾಗಕ್ಕೂ ಬಂದಿದ್ದ ಆ ಸೈಟು ಒಲೆಯಮ್ಮನ ಗುಡಿಯ ಎದುರಿಗೇ ಇತ್ತು. ಹಂಗಾಗಿ ಯಾವಾಗ ಒಲೆಯಮ್ಮನಿಗೆ ಪೂಜೆ ಪುನಸ್ಕಾರ ಅಂತ ಶುರುವಾದವೋ ವರ್ಷಕ್ಕೊಮ್ಮೆಯೋ ಇಲ್ಲಾ ಹಬ್ಬ ಹರಿದಿನಗಳಲ್ಲೋ ದೂರದ ಊರುಗಳಿಂದ ಒಕ್ಕಲು ಅಂತ ಮಂದಿ ಬರತೊಡಗಿದರೋ ಆಗ ಅದುವರೆವಿಗೂ ಅದರ ಪಾಡಿಗದನ್ನು ಬಿಟ್ಟಿದ್ದ ಆ ಸೈಟಿನ ಜಾಗಕ್ಕೆ ಸಣ್ಣದೊಂದು ಕಿಮ್ಮತ್ತು ಬಂದಂಗಾಗಿತ್ತು. ಜೊತೆಗೆ ಯಾವಾಗ ಬೋರ್ವೆಲ್‍ಗಳು ಬಂದು ಹೊಲಮಾಳಗಳೆಲ್ಲಾ ನೀರಾವರಿ ತಾಣಗಳಾದವೋ ಸೈಟಿಗೆ ಹೊಂದಿಕೊಂಡಂತೇ ಇದ್ದ ಅವರಿಬ್ಬರ ಹೊಲಗಳೂ ತೋಟಗಳಾಗಿದ್ದವು. ತೋಟದಲ್ಲಿ ಚೆನ್ನಾಗಿ ಕಾಯಿ ಬೀಳತೊಡಗಿದರೆ ಮುಂದೊಂದು ದಿನ ಆ ಜಾಗದಲ್ಲಿ ಪುಟ್ಟದೊಂದು ಮನೆಯನ್ನೋ ಇಲ್ಲಾ ಕಾಯಿ ಗೋಡೌನನ್ನೋ ಕಟ್ಟುವ ಅಂದಾಜು ಇಬ್ಬರೊಳಗೂ ಸಣ್ಣಗೆ ಮೊಳಕೆಯೊಡೆದಿತ್ತು. ಆ ಕಾರಣಕ್ಕೇ ಇತ್ತೀಚೆಗೆ ಆ ಬಾಂದ್ಗಲ್ಲು ಅವರಿಬ್ಬರ ಕೈ ಚಳಕಕ್ಕೆ ಒಳಗಾಗತೊಡಗಿತ್ತು. ಕದ್ದೂ ಮುಚ್ಚಿ ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಆಗಾಗ ಬೇಲಿಯೊಳಗೇ ತಾವು ಬದಲಿಸುತ್ತಿತ್ತು.

ಹಿಂಗಿರುವಾಗ ಗುದ್ಲಪ್ಪನಿಗೆ ದಿಢೀರನೆ ನಾಕೈದು ತಿಂಗಳು ಊರು ಬಿಡಬೇಕಾದ ಸಂಗತಿ ಒದಗಿ ಬಂದಿತ್ತು. ಅದು ಬುಳುಗುಟ್ಟನಿಗೆ ತಕ್ಕ ಸಮಯದಂತೆ ಕಂಡಿತ್ತು. ಹೆಂಗೂ ಅಣ್ಣ ಬರಲು ಇನ್ನೆಷ್ಟು ದಿನ ಆಗುತ್ತೋ ಅಷ್ಟು ದಿನಗಳೊಳಗೆ ಅಣ್ಣನ ಜಾಗವನ್ನು ಒತ್ಲಿಸಿಕೊಂಡು ಅಲ್ಲೊಂದು ತೆಂಗಿನ ಕಾಯಿ ತುಂಬಲು ಗೋಡೌನ್ ಕಟ್ಟುವ ಯೇಜೀಪು ಹಾಕಿಕೊಂಡಿದ್ದ ಬುಳುಗುಟ್ಟ. ಆದರೆ ಅದು ಶುರುವಾದ ಕೆಲ ದಿನದಲ್ಲೇ ಅಣ್ಣ ಗುದ್ಲಪ್ಪನ ರಂಗ ಪ್ರವೇಶದಿಂದಾಗಿ ಅವನು ಅಂದುಕೊಂಡಿದ್ದಕ್ಕೆ ಅರ್ಧದಲ್ಲೇ ಕಲ್ಲು ಬಿದ್ದಿತ್ತು. ಜೊತೆಗದು ಗುದ್ಲಪ್ಪನನ್ನು ರೊಚ್ಚಿಗೇಳುವಂತೆ ಮಾಡಿ ಸಧ್ಯದ ರಂಪಾಟಕ್ಕೆ ಕಾರಣವಾಗಿತ್ತು.

ಹಂಗೆ ನೋಡಿದರೆ ಗುದ್ಲಪ್ಪ ತನ್ನ ಜೀವಮಾನದಲ್ಲಿ ಏಕಾಏಕಿ ತಿಂಗಳುಗಳುಗಟ್ಟಲೇ ಊರು ಬಿಟ್ಟಿದ್ದ ಆಸಾಮಿಯೇ ಅಲ್ಲ. ಅಬ್ಬಬ್ಬಾ ಅಂದರೆ ಎರಡು ಅಥವಾ ಮೂರು ದಿನ. ಹತ್ತಿರದ ಊರುಗಳಾದರೆ ಎಷ್ಟೊತ್ತಾದರೂ ತಿರುಗಿ ಮನೆಗೆ ಬಂದುಬಿಡುತ್ತಿದ್ದ. ಆದರೀ ಸಾರ್ತಿ ಅವನ ನಡಾವಳಿಕೆಗೆ ವ್ಯತಿರಿಕ್ತವಾಗಿ ನಾಕೈದು ತಿಂಗಳು ಊರು ಬಿಡಬೇಕಾಗಿ ಬಂದಿತ್ತು. ಗುದ್ಲಪ್ಪ ಮತ್ತವನ ಹೆಂಡತಿ ವಿರೂಪಾಕ್ಷಮ್ಮ ತಮಗಿದ್ದ ಒಂದೇ ಒಂದು ಕುಡಿಯನ್ನು ಪಕ್ಕದೂರಿನ ಹಳೆಯ ಸಂಬಂಧಕ್ಕೆ ಲಗ್ನ ಮಾಡಿಕೊಟ್ಟಿದ್ದರೂ ಅಳಿಯ ಯಾವುದೋ ಕೆಲಸದಲ್ಲಿದ್ದುದ್ದರಿಂದ ಅವರು ಪಟ್ಟಣದಲ್ಲಿ ನೆಲೆಸಿದ್ದರು. ಅವತ್ತೊಂದು ದಿನ ಮಗಳು ತನ್ನ ಕೂಸಿನ ಹುಟ್ಟಿದ ಹಬ್ಬಕ್ಕೆ ಬರುವಂತೆ ಜುಲುಮೆ ಮಾಡಿದ್ದರಿಂದ ಗಂಡಹೆಂಡಿರು ಕೂಡಿ ಅಲ್ಲಿಗೆ ಹೋಗಿದ್ದರು. ಹೋದ ಒಂದೆರಡು ದಿನಕ್ಕೆಲ್ಲಾ ಗ್ರಾಚಾರ ಎಂಬಂತೆ ಇದ್ದಕ್ಕಿದ್ದಂತೆ ಕೊರೋನಾ ಲಾಕ್‍ಡೌನ್ ವಕ್ಕರಿಸಿಕೊಂಡು ಬಿಟ್ಟಿತ್ತು. ಅದು ಗುದ್ಲಪ್ಪ ಮತ್ತವನ ಹೆಂಡತಿಯನ್ನು ಮಗಳ ಮನೆಯಲ್ಲೇ ಕಟ್ಟಾಕಿತ್ತು.

ಹಂಗೆ ಹೋಗುವಾಗ ಹೆಂಗಾದರೂ ಆಗಲಿ ಅಂದುಕೊಂಡಷ್ಟು ಬೇಗ ಬರೋಕಾಗುತ್ತೋ ಇಲ್ವೋ ಅನ್ನುವ ಕಾರಣಕ್ಕೆ ಗುದ್ಲಪ್ಪ ತನ್ನ ಪರಮಾಪ್ತ ಹೊಟ್ಟೀರನಿಗೆ, `ಒಂದ್ ನಾಕೈದ್ ದಿನ ಬಂದ್ಬುಡ್ತೀವಿ, ನಾವಿಲ್ಲ ಅಂತ ಗೊತ್ತಾದ್ರೆ ಸಿಕ್‍ಸಿಕ್ದವ್ರೆಲ್ಲಾ ಗಲ್ತಿ ಮಾಡ್ಬುಡ್ತಾರೆ,’ಅಂತ ಹೇಳಿ ತನ್ನ ಮನೆ ಹಾಗೂ ಜಮೀನಿನ ಜವಾಬ್ದಾರಿಯನ್ನು ವಹಿಸಿ ಹೋಗಿದ್ದ. ಆದರೆ ತಿಂಗಳುಗಟ್ಟಲೆ ಊರ ಮುಖ ನೋಡಲಾಗವುದಿಲ್ಲ ಅಂತ ಗೊತ್ತಾಗುತ್ತಲೇ ಗುದ್ಲಪ್ಪ ದಿನವೂ ಹೊಟ್ಟೀರನಿಗೆ ಫೋನ್ ಮಾಡಿ ಲಗುಬಿಗು ವಿಚಾರಿಸಿಕೊಳ್ಳುತ್ತಿದ್ದ. ಹೊಟ್ಟೀರನೂ ಅಷ್ಟೇ ಮುತುವರ್ಜಿಯಿಂದ ಗುದ್ಲಪ್ಪನ ತೋಟ ತುಡಿಕೆಗಳ ಮೇಲೆ ನಿಗಾ ಇಟ್ಟಿದ್ದ. ಹಿಂಗಿರುವಾಗ ಒಂದು ದಿನ ಹೊಟ್ಟೀರ, `ಬುಳುಗುಟ್ಟ ಹಾಳೂರ್ತವ ಯಾಕೋ ಬೇಲಿ ಸವ್ರಿ ಅಚ್ಕಟ್ ಮಾಡಿ ಅಲ್ಲಿ ಪಾಯ ತೆಗಿತಿದಾನೆ,’ಅನ್ನುವ ಸುದ್ದಿ ಮುಟ್ಟಿಸಿದ್ದ. `ಪಾಗ್ಡ ನನ್ಮಗ ಏನಾರಾ ನನ್ ಜಮೀನಿನ್ ಕಡೀಕೆ ಒತ್ಲುಸ್ಕಂಬುಟ್ಟುದ್ರೆ,’ ಅಂತ ಆ ಚಣದಿಂದ ಗುದ್ಲಪ್ಪ ಆತಂಕಕ್ಕೊಳಗಾಗಿದ್ದ. ಹಂಗಾಗಿ, `ಹೆಂಗಾರಾ ಆಗ್ಲಿ ಒಂದ್ ದಪಾವಾ ಅಕಡಿಕೆ ಹೋಗಿ ಬೇಲಿಯೊಳ್ಗೆ ಇರೋ ಬಾಂದ್ಗಲ್ನ ನೋಡ್ಕಂಡ್ ಬಾ,ಏನಾರಾ ಒತ್ಲುಸ್ಕಂಡುದ್ರೆ ಗೊತ್ತಾಗುತ್ತೆ,’ಅಂತ ಹೊಟ್ಟೀರನಿಗೆ ಹೇಳಿದ್ದ. ಅದರಂತೆ ಅತ್ತ ಹೋಗಿದ್ದ ಹೊಟ್ಟೀರನಿಗೆ ಅಲ್ಲಿ ಯಾವ ಬಾಂದ್ಗಲ್ಲೂ ಕಂಡಿರಲಿಲ್ಲ. ಅದನ್ನೇ ಗುದ್ಲಪ್ಪನಿಗೆ ಹೇಳಿದ್ದ. `ಎಲಾ ಅಡ್ಡ ಕಸುಬಿ ಕಡ್ಗೂ ನಿನ್ ವರ್ಸೇನಾ ತೋರ್ಸೇ ಬುಟ್ಯಲ್ಲ,’ಅಂತ ಕುದ್ದು ಹೋಗಿದ್ದ ಗುದ್ಲಪ್ಪ. ಹಂಗೆಯೇ ಕೊರಾನಾಕ್ಕೆ ಇನ್ನಿಲ್ಲದ ಶಾಪ ಹಾಕುತ್ತಾ ಊರಿಗೆ ಹೊರಡಲು ತುದಿಗಾಲಲ್ಲಿ ನಿಂತಿದ್ದ. ಯಾವಾಗ ಲಾಕ್‍ಡೌನ್ ಒಂಚೂರು ಸಡಿಲಗೊಂಡು ಜನರಿಗೆ ತಿರುಗಾಡಲು ಅವಕಾಶ ಸಿಕ್ಕಿತೋ ಆಗ ಒಂದು ಚಣವೂ ತಡ ಮಾಡದೆ ಅಳಿಯನ ಕಾರಿನಲ್ಲಿ ಊರಿಗೆ ಬಿಡಿಸಿಕೊಂಡಿದ್ದ. ಅಣ್ಣ ಬಂದ ವಿಷಯ ತಿಳಿಯುತ್ತಲೇ ಕೆಲಸ ಕೆಡ್ತು ಅಂದುಕೊಂಡ ಬುಳುಗುಟ್ಟ ರಾತ್ರೋ ರಾತ್ರಿ ಹೋಗಿ ಕಿತ್ತಾಕಿದ್ದ ಬಾಂದ್ಗಲ್ಲನ್ನು ಮತ್ತೆ ತಾನು ಒತ್ಲಿಸಿಕೊಂಡಿದ್ದ ಜಾಗವನ್ನು ಬಿಟ್ಟು ಹಂಗೇ ಗುದ್ಲಪ್ಪನ ಭಾಗದಲ್ಲಿದ್ದ ಗಿಡಗಂಟೆಗಳೊಳಕ್ಕೆ ನೆಟ್ಟು ಬಂದಿದ್ದ.

ಗುದ್ಲಪ್ಪ ಮತ್ತವನ ಹೆಂಡತಿ ವಿರೂಪಾಕ್ಷಮ್ಮ ಊರಿಗೆ ಬಂದಾಗ ಆಗಲೇ ರಾತ್ರಿ ಊಟದ ಹೊತ್ತಾಗಿತ್ತು. ಆ ಚಣದಲ್ಲೇ ಗುದ್ಲಪ್ಪನಿಗೆ ಅತ್ತ ಹೋಗುವ ಮನಸ್ಸಾಗಿತ್ತು. ಆದರೆ, `ಈಟೊತ್ನಾಗೆ ಅಲ್ಗೆ ಹೋದ್ರೆ ಯಾರ್ರಾ ಏನಂತಾರೆ? ಬೆಳಿಗ್ಗೆ ಹೋಗಿ ನೋಡಿದ್ರಾತು ತಗಾ,ಆಗಿರಾದು ಈಗ ವಾಪಸ್ ಬಂದ್ಬುಡುತ್ತಾ?’ಅಂತ ವಿರೂಪಾಕ್ಷಮ್ಮ ಗಂಡನನ್ನು ತಡಾಕಿದ್ದಳು. ಆದರೂ ಗುದ್ಲಪ್ಪ ಇರುಳಿಡೀ ತಳಮಳಿಸಿದ್ದ. ನಿದ್ದೆ ಅನ್ನೋದು ಆಗಾಗ ಬಂದೋಗುವ ನೆಂಟನಂತೆ ಮುಖ ತೋರಿಸಿ ಹೋಗುತ್ತಿತ್ತು. ಹಂಗಾಗಿ ಇನ್ನೂ ಅಚ್ಚಾಗಾಗುತ್ತಿದೆ ಅನ್ನುವಾಗಲೇ ಸೀದಾ ಆ ಹಾಳೂರಿನ ಜಾಗಕ್ಕೆ ನಡೆದು ಅಲ್ಲಿ ನಡೆದದ್ದನ್ನು ನೋಡಿ ಹೌಹಾರಿ ಬುಳುಗುಟ್ಟ ತೆಗೆದಿದ್ದ ಪಾಯವನ್ನೆಲ್ಲಾ ಮುಚ್ಚತೊಡಗಿದ್ದ. ಹಿಂಗಾಗುತ್ತೆ ಅಂತ ಅಂದಾಜಿಸಿದ್ದ ಬುಳುಗುಟ್ಟನೂ ಎಂದಿಗಿಂತ ಬೇಗ ಎದ್ದವನೇ ಅತ್ತ ಹೋಗಿದ್ದ. ಅವನಂದುಕೊಂಡಂತೇ ಆಗಿತ್ತು. ಆಗ ಹತ್ತಿಕೊಂಡಿದ್ದ ಜಗಳ ಊರೂರಿಗೇ ಕೇಳಿಸುವಂತೆ ಬೊಬ್ಬಿರಿದಿತ್ತು. ಅದು ಆಗಷ್ಟೇ ಎದ್ದು ತೋಟದತ್ತ ಹೋಗಿದ್ದ ಕಲ್ಲೇದೇವ್ರ ಕಿವಿಗೂ ಬಿದ್ದು ಒಂದೆರಡು ಜಿಡ್ಡಿ ಕಾಯಿಯೊಂದಿಗೆ ಅವರನ್ನತ್ತ ದಯಮಾಡುವಂತೆ ಮಾಡಿತ್ತು. ಊರಿನ ಹಿರೀಕ ಕಲ್ಲೇದೇವ್ರು ಹಾಗೂ ಗುದ್ಲಪ್ಪನ ಅಪ್ಪ ಚಿತ್ತಯ್ಯ ಇಬ್ಬರೂ ವಾರಿಗೆಯವರು. ಚಿಕ್ಕಂದಿನಿಂದ ಒಟ್ಟಿಗೇ ಕೂಡಾಡಿ ಬೆಳೆದವರು. ಆ ಸಲಿಗೆಯಿಂದಲೇ ಕಲ್ಲೇದೇವ್ರು ಗುದ್ಲಪ್ಪ ಹಾಗೂ ಬುಳುಗುಟ್ಟನಿಗೆ ಬುದ್ಧಿವಾದ ಹೇಳಲು ನೋಡಿದ್ದರು. ಆ ಕಾರಣಕ್ಕೇ ಅವರಿಬ್ಬರೂ ಕಲ್ಲೇದೇವ್ರ ಮಾತನ್ನು ಕಿತ್ತಾಕಲಾಗದೆ ತೆಪ್ಪಗಾಗಿದ್ದರು.

ಗುದ್ಲಪ್ಪ ಹಾಗೂ ಬುಳುಗುಟ್ಟ ಹದ್ದುಬಸ್ತಿಗೆ ಅರ್ಜಿ ಕೊಟ್ಟು ಬಂದು ಕೆಲವು ದಿನಗಳಷ್ಟೇ ಕಳೆದಿದ್ದವು. ಅದೊಂದು ದಿನ ಬೆಳಬೆಳಗ್ಗೇನೇ ಸರ್ವೇಯರ್ ಚಿಕ್ರಾಮಯ್ಯ ತನ್ನಿಬ್ಬರು ಸಹಾಯಕರೊಂದಿಗೆ ಹಾಜರಾಗಿಬಿಟ್ಟ. ಆ ಸುದ್ದಿ ತಿಳಿಯುತ್ತಲೇ ಮೊದಲಿಗೆ ಕಲ್ಲೇದೇವ್ರು ಹಾಗೂ ನೋಟೀಸ್ ಕೊಟ್ಟದ್ದರಿಂದ ಚಕ್ಬಂಧಿಯ ವಾರಸುದಾರರೂ ಬಂದು ಕೂಡಿಕೊಂಡರು. ಚಿಕ್ರಾಮಯ್ಯ ತನ್ನ ಕೈಯ್ಯಲ್ಲಿದ್ದ ನಕ್ಷೆಯನ್ನು ನೋಡುತ್ತಾ ಅತ್ತಿಂದಿತ್ತ ಇತ್ತಿಂದತ್ತ ಅವರು ತೋರಿಸಿದ್ದ ಜಾಗದಲ್ಲಷ್ಟೇ ಅಲ್ಲದೇ ಸುತ್ತಲೂ ಓಡಾಡತೊಡಗಿದ. ಆಟೊತ್ತಿಗಾಗಲೇ ಯಾವುದ್ಯಾವುದೋ ಕೆಲಸಕ್ಕೆ ಹೋಗುತ್ತಿದ್ದವರು ಅಲ್ಲೊಬ್ಬರು ಇಲ್ಲೊಬ್ಬರು ಅಂತ ಒಂದಷ್ಟು ಜನ ಕೂಡಿಕೊಂಡು ಚಿಕ್ರಾಮಯ್ಯ ಮತ್ತವನ ಸಂಗಡಿಗರು ನಡೆದತ್ತ ನಡೆಯುತ್ತಾ ನಿಂತತ್ತ ನಿಲ್ಲುತ್ತಾ ಕುತೂಹಲವನ್ನೇ ಉಸಿರಾಡುತ್ತಿದ್ದರು. ಆ ಒಂದಷ್ಟು ಜನರೊಳಗೆ ಬಸ್ಲಿಂಗಪ್ಪನ ಮಗ ಶಿವನಂಜ ತನ್ನಿಬ್ಬರು ಅಡಾವುಡಿ ಗೆಳೆಯರೊಂದಿಗೆ ಕಾಣಿಸಿಕೊಂಡದ್ದು ಅಣ್ಣತಮ್ಮಂದಿರನ್ನು ಇರುಸು ಮುರುಸಿಗೆ ತಳ್ಳಿತ್ತು. ಶಿವನಂಜ ಬಳುಗುಟ್ಟನ ಸಹಪಾಠಿಯಾಗಿದ್ದ. ಬುಳುಗುಟ್ಟ ಡಿಗ್ರಿಗೇ ಬಿಟ್ಟರೂ ಅವನು ಮುಂದಕ್ಕೆ ಒಂದೆರಡು ವರ್ಷ ಓದಿ ಮನೆ ಕಡೆ ಚೆನ್ನಾಗಿದ್ದುದ್ದರಿಂದ ಹಳ್ಳಿಗೆ ಹಿಂದಿರುಗಿ ವ್ಯವಸಾಯ ಮಾಡುತ್ತಾ ಒಮ್ಮೆ ಗ್ರಾಮ ಪಂಚಾಯ್ತಿ ಸದಸ್ಯನೂ ಆಗಿದ್ದ. ಮತ್ತೆ ಗೆಲ್ಲಲಾಗದಿದ್ದರೂ ಊರಿನಲ್ಲಿ ತನ್ನದೇ ಒಂದು ಪಟಾಲಂ ಕಟ್ಟಿಕೊಂಡು ಪುಡಿ ರಾಜಕಾರಣ ಮಾಡುತ್ತಿದ್ದ. ಶಿವನಂಜ ಬುಳುಗುಟ್ಟ ಹಾಗೂ ಗುದ್ಲಪ್ಪನ ತೋಟಗಳು ಕೂಡು ತೋಟಗಳಾಗಿದ್ದು ಬೇಲಿ ಹಾಕಿಕೊಳ್ಳುವ ವಿಚಾರಕ್ಕೆ ಒಮ್ಮೆ ಅವನೊಂದಿಗೆ ಗುದ್ಲಪ್ಪ ಮತ್ತವನ ತಮ್ಮನಿಗೆ ಜೋರು ಗಲಾಟೆಯಾಗಿ ಅದು ಪೊಲೀಸ್ ಸ್ಟೇಷನ್ ಕೋರ್ಟು ಮೆಟ್ಟಿಲು ಹತ್ತಿತ್ತು. ಆಗ ಗುದ್ಲಪ್ಪ ಹಾಗೂ ಬುಳುಗುಟ್ಟ ಒಬ್ಬರಿಗೊಬ್ಬರು ಚೆನ್ನಾಗಿದ್ದರು. ಕಡೆಗೆ ಅಲ್ಲೂ ಹಿಂಗೆ ಹದ್ದುಬಸ್ತು ಮಾಡಿಸಿಕೊಂಡ ನಂತರವೇ ಜಗಳ ತಹಬದಿಗೆ ಬಂದಿತ್ತು. ಆದರೆ ಅವತ್ತಿನಿಂದ ಅವರಿಬ್ಬರೂ ಶಿವನಂಜನನ್ನು ದೂರವಿಟ್ಟಿದ್ದರು. ಶಿವನಂಜನೂ, `ಮಾತಾಡುಸ್ದುದ್ರೆ ಅಷ್ಟೇ ನೀವ್ಯಾವ ಗೊಂಜಾಯ,’ಅನ್ನುವಂತಿದ್ದ. ಅಂಥ ಶಿವನಂಜ ಅವತ್ತು ಇದ್ದಕ್ಕಿದ್ದಂತೆ ಅಲ್ಲಿ ಪ್ರತ್ಯಕ್ಷವಾಗಿದ್ದು ಇಬ್ಬರನ್ನೂ ಒಂಥರಾ ಆತಂಕದಲ್ಲಿಟ್ಟಿತ್ತು. ಆ ಕಾರಣಕ್ಕೇ, `ಆಡಿಕೊಳ್ಳೋರ್ ಮಂದೆ ಎಡವಿ ಬೀಳಂಗೆ ಮಾಡ್ಬುಟ್ಟ ಅಡ್ಕಸುಬಿ,’ಗುದ್ಲಪ್ಪ ಒಳಗೊಳಗೇ ಬುಳುಗುಟ್ಟನನ್ನು ಉಗಿದು ಉಪ್ಪಾಕಿಕೊಂಡು, `ಇವ್ನು ಯಾಕ್ಬಂದವ್ನೋ ಕಾಣ್ಲುಲ್ಲ ಈ ಇಸ್ಪಾತ್ಕ,’ಅಂತ ಶಿವನಂಜನ ಕಡೆಗೂ ನೋಡಿ ಮುಖ ಕಿವುಚಿಕೊಂಡಿದ್ದ. ಅದು ಶಿವನಂಜನ ಅರಿವಿಗೆ ಬಂದರೂ ತೋರಿಸಿಕೊಳ್ಳದೆ ಚಿಕ್ರಾಮಯ್ಯನ ಹಿಂದಿಂದೇ ಅಡ್ಡಾಡುತ್ತಿದ್ದ.

ಚಿಕ್ರಾಮಯ್ಯ ಮತ್ಮತ್ತೆ ನಡೆದೇ ನಡೆದ. ಎತ್ತ ಹೋದರೂ ಎಷ್ಟು ನೋಡಿದರೂ ಆ ಸರ್ವೇ ನಂಬರಿನಲ್ಲಿ ಹದ್ದುಬಸ್ತಿಗೆ ಹಾಕಿಕೊಂಡಿದ್ದ ಆ ಜಾಗ ಸಿಗದೇ ಹೋಗಿ, `ಇವ್ರು ಹೇಳ್ತಿರೋ ಜಾಗ್ದಲಿ ಇವರ ಸೈಟು ಇರ್ಲಿ ಈ ಜಾಗ ಯಾರೊಬ್ರಿಗೂ ಆದಂಗೇ ಕಾಣ್ತಿಲ್ಲ,ಇವ್ರುನ್ನ ನೋಡಿದ್ರೆ ಇಲ್ಲಿ ಹಳೆ ಮನೆ ಇತ್ತು ಅಂತ ಹೇಳ್ತಾವ್ರೆ,’ಅಂದ ಚಿಕ್ರಾಮಯ್ಯ ತನ್ನ ಹಿಂದಿಂದೇ ಓಡಾಡುತ್ತಿದ್ದ ಗುಂಪಿನತ್ತ ತಿರುಗಿ. ಅದನ್ನು ಕೇಳುತ್ತಲೇ ಕಲ್ಲೇದೇವ್ರು ಅಚ್ಚರಿಗೊಂಡು, `ಅದೆಂಗಾದತು? ನಂಗೂ ಗೊತ್ತು ಇದು ಅವುರ್ದೇ ಜಾಗ ಅಂತಾವಾ?’ ಅಂತ ಚಿಕ್ರಾಮಯ್ಯನಿಗೆ ಮಾತಾಕಿದರು. ಆಗ ಚಿಕ್ರಾಮಯ್ಯ, `ಇಲ್ನೋಡಿ ಅವ್ರು ಹೇಳ್ತಿರೋ ಯಾವ ಚಕ್ಬಂಧಿಯೂ ತಾಳೆಯಾಗ್ತಿಲ್ಲ, ಇಲ್ಲಿ ಯಾವ ಖಾಸಗೀ ಸ್ವತ್ತುಗಳೂ ಈ ನಕ್ಷೇಲಿ ನಮೂದಾಗಿಲ್ಲ. ಈ ಇಡೀ ಸರ್ವೇನಂಬರ್ ಎದೂರ್ಗೆ ಆ ಗುಡಿ ಕಾಣುಸ್ತಾ ಐತಲ್ಲಾ ಅದುನ್ನೂ ಸೇರಿಸ್ಕಂಡು ಕರಾಬು ಅಂತ ತೋರುಸ್ತಾ ಐತೆ, ಎಂದೋ ಯಾವತ್ತಿನ ಕಾಲದಲ್ಲೋ ಇದು ಹಳ್ಳ ಆಗಿತ್ತು ಅಂತ ಅನಿಸುತ್ತೆ, ಸಾಲದ್ದಕ್ಕೆ ಯಾವ ಕಾಲ್ದಗಾದ್ರೂ ಆಗ್ಲಿ ಈ ಜಾಗ ಗ್ರಾಮ ಠಾಣಕ್ಕೆ ಸೇರಿದ್ದು ಅಂತ ನಮೂದಾಗಿದ್ರೆ ಈಗ್ಲೂ ಹಂಗೇ ತೋರ್ಸದು,’ ಅನ್ನುತ್ತಾ ಚಿಕ್ರಾಮಯ್ಯ ಕಲ್ಲೇದೇವ್ರಿಗೆ ತನ್ನ ಕೈಯ್ಯಲ್ಲಿದ್ದ ನಕ್ಷೆಯನ್ನು ಅವರ ಕಣ್ಣಿನ ಹತ್ತಿರಕ್ಕಿಡಿದ. ಕಲ್ಲೇದೇವ್ರು ತನ್ನ ಮಾರಿಗೇ ಬಟ್ಟೆಯ ಬನಿಯನ್ನಿನೊಳಗಿಂದ ಕನ್ನಡಕವನ್ನು ತೆಗೆದು ಕಣ್ಣಿಗೇರಿಸಿಕೊಂಡು ನಕ್ಷೆಯನ್ನು ನೋಡೇ ನೋಡಿದರು. ಅದು ಅವರಿಗೆ ಬರೀ ಗೆರೆಗಳ ಆಟದಂತೆ ಕಂಡಿತೇ ಹೊರತು ಸುತರಾಂ ಮತ್ತೇನೂ ತಲೆಗತ್ತಲಿಲ್ಲ. ಹಂಗಾಗಿ ಕಲ್ಲೇದೇವ್ರು, `ವಸಿ ಸರ್ಯಾಗಿ ನೋಡಿ,ಇಲ್ಲಿ ತುಂಬಾ ಹಿಂದೆ ಹಳೆ ಊರಿತ್ತು. ಪ್ಲೇಗು ಬಂದಾಗ ಇದನ್ನ ಹಾಳು ಬಿಟ್ಟು ಬ್ಯಾರೆ ಕಡೆ ಹೋಗಿದ್ರು, ಆವಾಗ ಇಲ್ಲಿ ಇವ್ರ ಪೂರ್ವಿಕ್ರುದೂ ಒಂದು ಮನೆ ಇತ್ತು. ಆವಾಗಿಂದ್ಲೂ ಇದು ಅವ್ರ ಕುಟುಂಬದ ಸುಬರ್ದಲ್ಲೇ ಐತೆ,ಅಲ್ದೆಯಾ ಪಾರೀಕತ್ನಲ್ಲೂ ಸೇರೈತೆ ಬೇಕಾರೆ ತರ್ಸಿ ಒಂದ್ ಪಟಾವಾ ಅದುನ್ನೂ ನೋಡ್ಬುಡಿ,’ಅಂದರು ಅವರ ಹತ್ತಿರವೇ ನಿಂತಿದ್ದ ಗುದ್ಲಪ್ಪ ಹಾಗೂ ಬುಳುಗುಟ್ಟನತ್ತ ತಿರುಗಿ. ಕಲ್ಲೇದೇವ್ರ ಮಾತಿಗೆ ಅವರಿಬ್ಬರೂ ಹೌದೆನ್ನುವಂತೆ ತಲೆಯಾಡಿಸಿದರು. ಚಿಕ್ರಾಮಯ್ಯನಿಗೆ ತಾನು ಹೇಳುತ್ತಿರುವುದು ಅವರಿಗೆ ಅರ್ಥ ಆಗುತ್ತಿಲ್ಲ ಅಂಬೋದು ಮನವರಿಕೆಯಾಗಿ,`ಇದು ಪಾರಿಖತ್ನಲ್ಲಿ ಐತೆ, ಹಿಂದಿನಿಂದ್ಲೂ ಅನುಭವಿಸ್ಕಂಡು ಬಂದವ್ರೆ ಅನ್ನೋ ಕಾರಣಕ್ಕೆ ಈ ಜಾಗ ಅವುರ್ದಾಗಲ್ಲ ಯಜಮಾನ್ರೆ,ಸಾಲದ್ದಕ್ಕೆ ಸರ್ಕಾರ ಇದನ್ನ ಸಧ್ಯದ ಸ್ಥಿತೀಲಿ ಯಾವ ಕಾರಣಕ್ಕೂ ಯಾರ್ಗೂ ಪರಭಾರೆ ಮಾಡಾಕೂ ಬರಲ್ಲ. ಅಂಥದ್ರಾಗೆ...’ ಅಂತ ಬೇಸರದಿಂದ ನುಡಿದ.

ಕಲ್ಲೇದೇವ್ರಿಗೆ ಪಿಚ್ಚೆನಿಸತೊಡಗಿತು. ಆ ಮಾತುಗಳು ಅಲ್ಲಿ ನೆರೆದಿದ್ದವರೊಳಗೆ ಗುಜು ಗುಜು ಪಿಸ ಪಿಸ ಮಾತುಗಳನ್ನು ಹುಟ್ಟಾಕಿದವು. ಆದರೂ ಕಲ್ಲೇದೇವ್ರು ಸರ್ವೇಯರ್ ಚಿಕ್ರಾಮಯ್ಯನನ್ನು ಒತ್ತಟ್ಟಿಗೆ ಕರೆದು, `ಅಲ್ಲಾ ಹಿಂಗೇಳ್ತೀನಿ ಅಂತ ಬ್ಯಾಸ್ರ ಮಾಡ್ಕಾ ಬ್ಯಾಡಿ,ಇನ್ನೊಂದ್ ದಪಾವಾ ಸರ್ಯಾಗಿ ನೋಡಿ,ಬೇಕಾದ್ರೆ ಏನಾರಾ...’ಅಂತ ರಾಗ ಎಳೆದರು. `ಇಲ್ಲಿ ಬೇಸ್ರ ಮಾಡ್ಕಣಾ ಅಂತಾದು ಏನಿದೆ ಹೇಳಿ ಯಜಮಾನ್ರೆ? ನೀವೇನಾರಾ ಕೊಡ್ತೀರಾ ಅಂತ ಇಲ್ದುದ್ದ ತೋರ್ಸಾಕಾಗುತ್ತಾ? ಒಂದು ದಪ ಅಲ್ಲ ನೂರು ದಪಾ ನೋಡಿದ್ರು ಅಷ್ಟೇಯಾ,ಇಲ್ದುದ್ದು ಬಾ ಅಂದ್ರೆ ಎಲ್ಲಿಂದ ಬರುತ್ತೆ ಹೇಳ್ರಿ?’ಅಂತ ಚಿಕ್ರಾಮಯ್ಯ ಕೊಂಚ ಸಮಾಧಾನದಿಂದ. `ಅಂಗಾರೆ ಅಷ್ಟೇಯಾ ಅಂತೀರಾ,’ಅಂತ ಕಲ್ಲೇದೇವ್ರು ನಿಟ್ಟುಸಿರುಬಿಟ್ಟರು. ಅವರ ಸ್ಥಿತಿಯನ್ನು ಕಂಡು ಕೊಂಚ ಮರುಗಿದವನಾದ ಚಿಕ್ರಾಮಯ್ಯ, ಬೇಲಿಯಾಚೆಗಿದ್ದ ಗುದ್ಲಪ್ಪ ಹಾಗೂ ಬುಳುಗುಟ್ಟನ ತೋಟವನ್ನು ತೋರಿಸುತ್ತಾ, `ಇನ್ನೊಂದ್ ಮಾತು ಹೇಳ್ತೀನಿ, ಇದಿಷ್ಟೇ ಅಲ್ಲ ಅಲ್ಲಿ ಆ ಬೇಲಿಯಾಚ್ಗೆ ತೋಟ ಮಾಡ್ಕಂಡಿದಾರಲ್ಲ ಯಾರೋ ಪುಣ್ಯಾತುಮ್ರು, ಅದ್ರಾಗೂ ಅರ್ಧುಕ್ಕರ್ಧ ಒತ್ತುವರಿ ಐತೆ,ಅದೂ ಈ ಕರಾಬಿರೋ ಸರ್ವೆ ನಂಬರ್ಗೆ ಸೇರುತ್ತೆ, ಯಾರಾರಾ ಹಿಂಗೆ ತಕ್ರಾರು ಹಾಕಿದ್ರೂ ಅಂದ್ರೆ ಅದ್ಕೂ ಪಂಗ್ನಾಮ ಬೀಳೋದು ಗ್ಯಾರಂಟಿ’ಅಂದ. ಅದನ್ನು ಕೇಳಿಸಿಕೊಳ್ಳುತ್ತಲೇ ಶಿವನಂಜ ತನ್ನ ಗೆಣೆಕಾರರನ್ನು ಉದ್ಧೇಶಿಸಿದಂತೆ ಆದರೆ ಎಲ್ಲರಿಗೂ ಕೇಳುವಂತೆ, `ಓಹೋ, ಪಿಕ್ಚರ್ ಅಭೀ ಬಾಕೀ ಹೈ’ಅಂತ ಅಂದ ಮಾತುಗಳು ಚಿಕ್ರಾಮಯ್ಯನಾದಿಯಾಗಿ ಅಲ್ಲಿದ್ದವರೆಲ್ಲರ ಕಿವಿಗಳಲ್ಲಿ ಒಮ್ಮೆಗೇ ತಟಗುಟ್ಟಿದವು. ಕಲ್ಲೇದೇವ್ರಿಗೆ ಶಿವನಂಜನ ಮಾತುಗಳು ಅರ್ಥವಾಗದೆ ಸುತ್ತಲೂ ಮಿಕಿಮಿಕಿ ಕಣ್ಣಾಡಿಸಿದರು. ಚಿಕ್ರಾಮಯ್ಯ ತಪ್ಪು ಮಾಡಿದವನಂತೆ ಚಕ್ಕನೆ ಹಿಂದಿರುಗಿ ಶಿವನಂಜನತ್ತ ನೋಡಿದ. ಆಗವನ ಮುಖದಲ್ಲಾಡುತ್ತಿದ್ದ ಕುಹಕ ನಗೆಯೊಳಗಿನ ಮರ್ಮಕ್ಕೆ ಹಂಗೇ ಅವಾಕ್ಕಾದ. ಆಗ ಆ ಚಣದಾಗೆ ಗುಂಪಿಗೆ ಬೆನ್ನು ಮಾಡಿ ನಿಂತಿದ್ದ ನಿಂತಲ್ಲೇ ಕುಸಿಯುತ್ತಿರುವಂಥಾ ಅನುಭವಕ್ಕೊಳಗಾಗಿದ್ದ ಗುದ್ಲಪ್ಪ ಹಾಗೂ ಅವನ ತಮ್ಮನ ಮಂಕು ಬಡಿದಿದ್ದ ಮಾರೆಗಳಲ್ಲಿ ಪಿಗ್ಗಿ ಬಿದ್ದ ಭಾವವೊಂದು ಭದ್ರವಾಗಿದ್ದದ್ದನ್ನು ಯಾರೂ ಊಹಿಸಬಹುದಿತ್ತು.

*

ಕೆಲವು ಪದಗಳ ಅರ್ಥ: ಬಾಂದ್ಗ- ಬಾಂದುಕಲ್ಲು, ಗಡಿ ಕಲ್ಲು, ಗಲ್ತಿ-ಕಳೆದು ಹೋದದ್ದು, ಪೋಡು-ಪಾಲು, ವಿಭಾಗ, ಕರಾಬು-ಸಾಗುವಳಿಗೆ ಯೋಗ್ಯವಲ್ಲದ್ದು, ಚಕ್ಬಂಧಿ-ಹೊಲ, ಮನೆ ಮುಂತಾದ ಕ್ಷೇತ್ರಗಳ ಸೀಮಾ ವಿವರ, ಸುಪರ್ದು-ಅಧೀನ, ವಶ, ಪಾರಿಖತ್ತು-ಪಾಲು ಪಟ್ಟಿ, ಪಂಚಾಯ್ತಿಯವರು ಮಾಡುವ ಪಾಲು ಅಥವಾ ಹಿಸ್ಸೆ ಪತ್ರ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.