ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾ ಹಿರೇಗುತ್ತಿ ಬರೆದ ಕಥೆ: ಅಶ್ವಮೇಧ

Last Updated 27 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಸಾಧಾರಣ ಎತ್ತರದ ಮನುಷ್ಯನೊಬ್ಬನ ಮೊಣಕಾಲಿನವರೆಗೆ ಮಾತ್ರವೇ ನೀರಿದ್ದ ಹಳ್ಳದಲ್ಲಿ ಬೆಳ್ಳಂಬೆಳಗ್ಗೆಯೇ ಶಂಕರನ ಹೆಂಡತಿ ವಸುಧಾ ತನ್ನ ಐದು ವರ್ಷದ ಮಗಳ ಜತೆ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಪೇಟೆಗೆ ಪೇಟೆಯೂ ಅಲ್ಲದ ಹಳ್ಳಿಗೆ ಹಳ್ಳಿಯೂ ಅಲ್ಲದ ಆ ಊರತುಂಬ ಎದ್ದು, ಬಿದ್ದು, ತೆವಳಿ, ಓಡಿ ಅಂತೂ ಇಂತೂ ಮುಕ್ಕಾಲು ಪಾಲು ಮನೆಗಳನ್ನು ತಲುಪುವ ಹೊತ್ತಿಗೆ ಸೂರ್ಯ ಆಗತಾನೇ ಇಬ್ಬನಿಯ ಮುಸುಕು ತೆಗೆದುಹಾಕಿ ಬೆಳ್ಳಗೆ ಹೊಳೆಯಲಾರಂಭಿಸಿದ್ದ. ಅಲ್ಲ, ಅಷ್ಟೇ ಅಷ್ಟು ನೀರಿನಲ್ಲಿ ಯಾರಾದರೂ ಬೇಕೂಂತ ಸಾಯಲು ಸಾಧ್ಯವೇ? ಕೊಲೆಯೋ ಮತ್ತೊಂದೋ ಇರಬೇಕು ಎಂದು ಮಾತಾಡಿಕೊಳ್ಳುತ್ತಿದ್ದವರೆಲ್ಲ ಅದು ಆತ್ಮಹತ್ಯೆಯೇ ಎಂದು ಪೋಸ್ಟ್‌ಮಾರ್ಟಮ್‌ ವರದಿಯೂ ಬಂದಾಗ ದಂಗಾಗಿ ಹೋಗಿದ್ದರು. ಮಗಳನ್ನು ನಿರ್ದಯೆಯಿಂದ ಮುಳುಗಿಸಿ ಕೊಂದು, ಸಣ್ಣ ಮಕ್ಕಳೂ ಮುಳುಗದಷ್ಟು ನೀರಿನಲ್ಲಿ ಮಲಗಿ ಪ್ರಾಣಹೋಗುವ ಸಂಕಟವನ್ನೂ ತಡೆದುಕೊಂಡು ಏಳದೇ ಸತ್ತ ಹೆಣ್ಣಿನ ಭಂಡ ಧೈರ್ಯವನ್ನು ಶಪಿಸುತ್ತ, ಶಂಕರನ ದುರದೃಷ್ಟಕ್ಕೆ ನೋಯುತ್ತ ಜನರು ಒಲ್ಲದ ಮನಸ್ಸಿನಿಂದ ಹೆಣ ನೋಡಿ ಬರುತ್ತಿದ್ದರು.

ದುರದೃಷ್ಟವೆನ್ನುವುದು ಶಂಕರನ ಹೆಗಲೇರಿ ವರ್ಷಗಳೇ ಕಳೆದರೂ ಅದಕ್ಕೆ ಬೇರೆಡೆಗೆ ಹೋಗಬೇಕು ಅನ್ನಿಸುತ್ತಿಲ್ಲವೇನೋ ಎನ್ನುವಷ್ಟರ ಮಟ್ಟಿಗೆ ದುರಂತವೆಂಬುದು ಆತನ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು. ಇತರ ಹೆಂಗಸರೊಂದಿಗೆ ಅಪರೂಪಕ್ಕೆ ಯಕ್ಷಗಾನ ನೋಡಿ ಖುಷಿಯಿಂದ ಚುಮುಚುಮು ನಸುಕಿನಲ್ಲಿ ಕಾಡುಹಾದಿಯಲ್ಲಿ ಬರುತ್ತಿದ್ದ ಅಮ್ಮ ಹಾವು ಕಚ್ಚಿ ಸತ್ತಾಗ ಶಂಕರನಿಗೆ ವಯಸ್ಸು ಹನ್ನೆರಡೂ ದಾಟಿರಲಿಲ್ಲ. ಒಬ್ಬಳು ತಂಗಿ, ಇಬ್ಬರು ತಮ್ಮಂದಿರು. ಇರುವ ಸಣ್ಣ ತೋಟದಲ್ಲಿ ಹೇಗೋ ಬಡಿದಾಡಿ ದುಡಿದು ಒಂದು ಗೋಟಡಿಕೆಯೂ ಕೈತಪ್ಪಿಹೋಗದಂತೆ ಜೋಪಾನ ಮಾಡಿ, ಸೊಪ್ಪು ಸದೆ ಹುಡುಕಿ ತಂದು, ಹಿತ್ತಲಲ್ಲಿ ಒಂದಿಷ್ಟು ತರಕಾರಿ ಬೆಳೆದು, ವಾಟೆಹುಳಿ, ಮುರುಗನ ಹುಳಿ ಸಂಗ್ರಹಿಸಿ ಅಂಗಡಿಗೆ ಕೊಟ್ಟು ನಾಕು ಕಾಸು ಮಾಡಿಕೊಂಡು ಮನೆ ನಿಭಾಯಿಸುತ್ತ, ನಾಲ್ಕು ಮಕ್ಕಳ ಜತೆಗೆ ಜೂಜಾಡುವ ಗಂಡನನ್ನೂ ಸಂಭಾಳಿಸಿಕೊಂಡು ಕುಟುಂಬ ನಡೆಸಿಕೊಂಡು ಹೋಗುತ್ತಿದ್ದ ತಾಯಿ ಅನಿರೀಕ್ಷಿತವಾಗಿ ಸತ್ತ ದಿನದಿಂದಲೂ ಶಂಕರನ ಬದುಕು ಗಾಳಿಗಿಟ್ಟ ದೀಪದ ಕುಡಿಯಂತೆ ಓಲಾಡುತ್ತಲೇ ಇದೆ. ಹೆಂಡತಿ ಇದ್ದಾಗಲೇ ಮಕ್ಕಳ ಕಡೆ ನೋಡದ ತಂದೆ ಅವಳ ಸಾವಿನ ಹದಿನಾಲ್ಕನೇ ದಿನದ ಮಧ್ಯಾಹ್ನ ಊಟ ಮಾಡಿದ ನೆಂಟರು ಬಾಯಿ ತೊಳೆಯುವುದರೊಳಗೆ ಮಾಯವಾಗಿದ್ದ.

ಮಾವ, ಚಿಕ್ಕಮ್ಮ, ದೊಡ್ಡಪ್ಪ ಎಲ್ಲರಿಗೂ ಅವರದ್ದೇ ಆದ ತಾಪತ್ರಯಗಳು. ಮನೆತುಂಬ ಮಕ್ಕಳು. ತಮ್ಮದೇ ರಾಮಾಯಣದ ಮಧ್ಯೆ ತಾಯಿ ಇಲ್ಲದ ಈ ನಾಲ್ಕು ಪಿಳ್ಳೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ಅನುಕೂಲ ಯಾರಿಗೂ ಇರಲಿಲ್ಲ. ಇಟ್ಟುಕೊಳ್ಳುವಾ ಎಂಬ ಮನಸ್ಸು ಇದ್ದರೆ ಆಗುತ್ತಿತ್ತೇನೋ, ಅದೇ ಇಲ್ಲದ ಕಾರಣ ಅನುಕೂಲವಿಲ್ಲವೆಂಬುದು ಒಂದು ಮುಸುಕಾಯಿತು ಅಷ್ಟೇ. ಚಿಕ್ಕಮ್ಮನಿಗೆ ಅಕ್ಕನ ಮಕ್ಕಳನ್ನು ಕೆಲದಿನವಾದರೂ ಕರೆದುಕೊಂಡು ಹೋಗಿ ಎಣ್ಣೆ ನೀರು ಹಾಕಿ ಕಳಿಸಬೇಕೆಂದಿದ್ದರೂ ಅವಳ ಅತ್ತೆ ಈ ಮಕ್ಕಳನ್ನು ಒಂದು ದಿನವೂ ಕರೆಸಲು ಅವಕಾಶ ಕೊಟ್ಟಿರಲಿಲ್ಲ. ಕೆಲದಿನ ಎರಡೂ ಕಡೆಯ ಅಜ್ಜಿಯರು ಬಂದು ಉಳಿದು ಬೇಯಿಸಿ ಹಾಕಿದರು. ಜಮೀನನ್ನು ಗೇಣಿಗೆ ಪಡೆದವ ಒಂದಷ್ಟು ಅಕ್ಕಿ ಮನೆಗೆ ತಂದು ಹಾಕಿ ಹೋಗುತ್ತಿದ್ದ. ಶಂಕರನಿಗೆ ಹದಿನಾಲ್ಕು ತುಂಬುವುದರೊಳಗೆ ಅನ್ನ, ಗಂಜಿ ಮಾಡುವುದು, ಸುಲಭದ ಗೊಜ್ಜು, ಸಾರು ಮಾಡುವುದು ರೂಢಿಯಾಗಿತ್ತು. ತಿಂಗಳುಗಳು ಉರುಳಿದಂತೆ ಅಜ್ಜಿಯರು ಬಂದು ಉಳಿಯುವುದು ಅಪರೂಪವಾಗಿ ತನ್ನ ಕೈ ತನಗೆ ತಲೆದಿಂಬು ಎಂಬಂತೆ ಶಂಕರ ಒಂದೊಂದೇ ಒಂದೊಂದೇ ಜವಾಬ್ದಾರಿ ಹೊತ್ತುಕೊಳ್ಳುತ್ತ ತಂಗಿ ತಮ್ಮಂದಿರನ್ನು ನೋಡಿಕೊಳ್ಳುತ್ತ ಬಂದ. ತಾನು ಹೋಗಲಾಗದಿದ್ದರೂ ಮನೆಯಿಂದ ಮೂರು ಮೈಲಿ ದೂರದ ಶಾಲೆಗೆ ಎಲ್ಲರನ್ನೂ ಕಳಿಸಿದ. ದಿನವೂ ಬೆಳಿಗ್ಗೆದ್ದು ದೊಡ್ಡ ಪಾತ್ರೆಯಲ್ಲಿ ಗಂಜಿ ಮಾಡಿಬಿಟ್ಟರೆ ಅದೇ ತಿಂಡಿ. ದೊಡ್ಡಪ್ಪನ ಮನೆಯಿಂದಲೋ, ಮಾವನ ಮನೆಯಿಂದಲೋ ಬಂದಿರುತ್ತಿದ್ದ ಉಪ್ಪಿನಕಾಯಿ ನೆಂಚಿಕೊಳ್ಳಲು. ಅದೃಷ್ಟವಿದ್ದರೆ ಮೆಂತೆಹಿಟ್ಟು. ನಾಲ್ಕು ತೆಂಗಿನಮರ ಇದ್ದುದರಿಂದ ಇವರಿಗೆ ಸಾಕಾಗುವಷ್ಟು ಕಾಯಿ ಸಿಗುತ್ತಿತ್ತು. ಬಸಲೆಯೋ, ಹರಿವೆಯೋ ಮತ್ಯಾವುದೋ ಸೊಪ್ಪು ಇದ್ದೇ ಇರುತ್ತಿತ್ತು. ಸೊಪ್ಪು ಹೆಚ್ಚಿ, ಒಂದೆರಡು ಜೀರಿಗೆ ಮೆಣಸು ಜಜ್ಜಿ, ಒಂದು ಈರುಳ್ಳಿ ಸಣ್ಣಕೆ ಕತ್ತರಿಸಿ, ಧಾರಾಳವಾಗಿ ಕಾಯಿತುರಿ, ಉಪ್ಪು ತುಸು ನೀರು ಹಾಕಿ ಎಲ್ಲ ಕಲೆಸಿ ಸಣ್ಣಗೆ ಉರಿಯುವ ಒಲೆಯ ಮೇಲಿಟ್ಟರೆ ರುಚಿಯಾದ ಪಲ್ಯ. ಭಾನುವಾರದ ದಿನ ಮಾತ್ರ ಎಲ್ಲ ಮಕ್ಕಳೂ ಸೇರಿ ತಮಗೆ ಬಂದ ಹಾಗೆ ಪುಂಡಿ, ಉಪ್ಪಿಟ್ಟು, ಅವಲಕ್ಕಿಯಂತಹ ಏನಾದರೂ ಸುಲಭದ ತಿಂಡಿ ಮಾಡಿಕೊಳ್ಳುತ್ತಿದ್ದರು. ಹದಿನಾರು ವರ್ಷವಾಗುತ್ತಲೇ ಜಮೀನು ತಾನೇ ಮಾಡಲು ಶುರು ಮಾಡಿದ ಶಂಕರ ತಂಗಿತಮ್ಮಂದಿರನ್ನು ಅಷ್ಟು ಚಿಕ್ಕ ವಯಸ್ಸಿಗೇ ಅಪ್ಪನೂ ಅಮ್ಮನೂ ಆಗಿ ಸಾಕಿದ. ತಂಗಿ ಸರಸ್ವತಿಗೆ ಹದಿನೆಂಟು ವರ್ಷವಾಗುತ್ತಲೇ ಸಾಧಾರಣದೊಂದು ಸಂಬಂಧ ಬಂತೆಂದು ಮದುವೆಯೂ ಆಯಿತು. ಆದರೆ ಮದುವೆಯಾದ ಮೂರನೇ ವರ್ಷಕ್ಕೆ ಅಡಿಕೆ ಗೊನೆ ತೆಗೆಯುವಾಗ ಮರದಿಂದ ಬಿದ್ದ ಅವಳ ಗಂಡ ಸೊಂಟದ ಕೆಳಗೆ ಪೂರ್ತಿ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದ. ಶಂಕರ ಭಾವನನ್ನು ಕರೆದುಕೊಂಡು ಹೋಗದ ಊರಿಲ್ಲ. ಅಂಕೋಲೆಯ ಹತ್ತಿರದ ಬೆಳಂಬಾರದಿಂದ ಹಿಡಿದು ಮಣಿಪಾಲದ ಡಾಕ್ಟರುಗಳವರೆಗೆ ಆಯುರ್ವೇದ, ಹಳ್ಳಿಮದ್ದು, ಅಲೋಪತಿ ಮದ್ದು ಮಾಡಿದ್ದೇ ಮಾಡಿದ್ದು. ತೈಲ ತಿಕ್ಕಿದ್ದೂ ತಿಕ್ಕಿದ್ದು. ಆದರೆ ಶಂಕರನ ನಸೀಬೇ ಖೊಟ್ಟಿ. ಇಪ್ಪತ್ತಕ್ಕೇ ತಂಗಿ ಅರ್ಧ ವಿಧವೆಯಾಗಿ ಬದುಕುವಂತಾಯಿತು. ಮದುವೆಯಾದ ವರ್ಷದೊಳಗೆ ಒಂದು ಗಂಡುಮಗುವಾಗಿದ್ದೇ ಪುಣ್ಯ ಎಂದರು ಎಲ್ಲ.

ಇತ್ತ ಶಂಕರ ಮತ್ತು ತಮ್ಮಂದಿರು ದುಡಿದೇ ದುಡಿದರು. ಮಲೆನಾಡಿನಲ್ಲಿ ಬೆಳೆಯುವುದೇ ಕಷ್ಟವಾದ ಏಲಕ್ಕಿ ಬೆಳೆಯಲೇಬೇಕೆಂದು ಹಠ ತೊಟ್ಟು ಯಶಸ್ವಿಯಾದರು. ಕಾಫಿ, ಅಡಿಕೆ, ಕಾಳುಮೆಣಸು, ಬಾಳೆ, ಎಲೆಬಳ್ಳಿ ಹೀಗೆ ಮಿಶ್ರಬೆಳೆಗಳನ್ನು ನೋಡುಗರ ಕಣ್ತುಂಬುವಂತೆ ಬೆಳೆಸಿದರು. ಕೆಲವೇ ವರ್ಷಗಳ ಹಿಂದೆ ಅಯ್ಯೋ ಪಾಪ ಅನಾಥ ಮಕ್ಕಳು ಎನಿಸಿಕೊಂಡಿದ್ದವರು ಅಬ್ಬ ಎಂದು ಜನರು ಮೂಗಿನ ಮೇಲೆ ಬೆರಳಿಡುವಷ್ಟು ಸಾಧನೆ ಮಾಡಿದರು. ತಮ್ಮ ಜಮೀನಿನ ಅಕ್ಕ ಪಕ್ಕದ ಜಮೀನು ಕೊಂಡರು. ‘ನೀವೂ ಇದ್ದೀರಿ ನೋಡಿ, ನಾವು ಮಾಡಿಹಾಕಿದ್ದು ತಿಂದು ಉರುಳಾಡೋದು ಬಿಟ್ರೆ ಮತ್ತೇನೂ ಬರಲ್ಲ. ಆ ಶಂಕ್ರನ್ನ, ಅವನ ತಮ್ಮಂದಿರನ್ನು ನೋಡಿ ಕಲಿತುಕೊಳ್ರೋ’ ಎಂಬ ಸುಪ್ರಭಾತದ ಮೂಲಕವೇ ಊರಿನ ಜನರು ತಮ್ಮ ಪ್ರಾಯಕ್ಕೆ ಬಂದ ಗಂಡುಮಕ್ಕಳನ್ನು ಸವಿನಿದ್ದೆಯಿಂದ ಎಬ್ಬಿಸುವ ಮಟ್ಟಿಗೆ ಈ ಹುಡುಗರ ಸಾಹಸ ಜನರ ಮನಸ್ಸು ಗೆದ್ದಿತ್ತು. ತಮ್ಮಂದಿರಿಬ್ಬರಿಗೂ ಹೆಣ್ಣು ಹುಡುಕಿ ಮದುವೆ ಮಾಡಿ ಅವರಿಗೆ ಅವರವರ ಪಾಲು ಕೊಟ್ಟು ಬೇರೆ ಬೇರೆ ಕಡೆ ಮನೆ ಮಾಡಿ ಕೂರಿಸಿಯೇ ತಾನೂ ಮದುವೆಯಾಗಲು ಹೊರಟ ಶಂಕರ. ಮುಕ್ಕಾಲು ಪಾಲು ಆಸ್ತಿಯನ್ನು ಧಾರಾಳವಾಗಿ ತಮ್ಮಂದಿರಿಗೆ ಬಿಟ್ಟುಕೊಟ್ಟಿದ್ದ. ಉಳಿದ ಕಾಲು ಭಾಗವೇನೂ ಕಡಿಮೆ ಆಸ್ತಿಯಾಗಿರಲಿಲ್ಲ. ಮದುವೆಯ ವಯಸ್ಸು ಮೀರುತ್ತಿತ್ತು. ಶ್ರೀಮಂತಿಕೆಯಿದ್ದರೂ ಹಿರಿಸೊಸೆಯ ಜವಾಬ್ದಾರಿ ಹೊರುವ ಒಂಟಿಮನೆಗೆ ಅಷ್ಟು ಸುಲಭಕ್ಕೆ ಯಾರೂ ಹೆಣ್ಣು ಕೊಡಲು ಸಿದ್ಧರಿರಲಿಲ್ಲ. ಮೇಲಾಗಿ ಶಂಕರ ಆರನೇ ತರಗತಿಯಿಂದ ಮುಂದೆ ಶಾಲೆಗೆ ಹೋಗಿರಲೇ ಇಲ್ಲ. ಹಾಗಾಗಿ ಕಂಕಣಬಲ ಕೂಡಿಬರುವುದು ತಡವಾಯಿತು. ಘಟ್ಟದ ಮೇಲಿನ ಮೂಲೆಯೊಂದರ ಹಳ್ಳಿಯ ಬಡಕುಟುಂಬವೊಂದರ ನಾಲ್ಕು ಹೆಣ್ಣುಮಕ್ಕಳಲ್ಲಿ ಮೊದಲನೆಯವಳಾದ ವಸುಧಾ ಶಂಕ್ರಪ್ಪನ ಕೈ ಹಿಡಿದದ್ದು ಮನಸ್ಸಿಲ್ಲದ ಮನಸ್ಸಿನಿಂದಲೇ.

ವಸುಧಾ ಬಡತನದಲ್ಲಿ ಬೆಳೆದವಳು. ಆದರೆ ಅವಳ ಆಸೆಗಳಿಗೆ ಬಡತನವೇನೂ ಇರಲಿಲ್ಲ. ತನ್ನ ಪರಿಸ್ಥಿತಿಗೆ ರಾಜಕುಮಾರನೇನೂ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಅವಳಿಗೆ ಈ ಸಂಬಂಧವನ್ನು ಒಪ್ಪಕೊಳ್ಳಲು ಮನಸ್ಸೇ ಇರಲಿಲ್ಲ. ಹಳ್ಳಿಯಲ್ಲೇ ಹುಟ್ಟಿ ಬೆಳೆದ ತಾನು ಹಳ್ಳಿಯಲ್ಲೇ ಬದುಕು ಸವೆಸುವುದು ಅವಳಿಗೆ ಬೇಕಿರಲಿಲ್ಲ. ಹಳ್ಳಿಯ ಶ್ರೀಮಂತಿಕೆಯಿದ್ದರೂ ಪೇಟೆಯ ಬದುಕು ಕೊಡುವ ಸುಖದ ಮುಂದೆ ಅದೇನೂ ಅಲ್ಲ ಎಂಬುದು ಅವಳ ಸಂಶೋಧನೆಯ ಫಲಿತಾಂಶವಾಗಿತ್ತು. ತನ್ನದೇ ಗೆಳತಿಯರು ಸಾಫ್ಟ್‌ವೇರ್‌ ರಂಗದಲ್ಲಿ ಕೆಲಸ ಮಾಡುವವರನ್ನು ಮದುವೆಯಾಗಿ ಅಮೇರಿಕ, ಇಂಗ್ಲೆಂಡ್, ಜರ್ಮನಿಗೆ ಹೋಗಿ ಜುಮ್ಮೆಂದು ಬದುಕುತ್ತಿರುವುದನ್ನು ನೋಡಿದ್ದ ವಸುಧಾಳಿಗೆ ಕಡೇ ಪಕ್ಷ ಬೆಂಗಳೂರು ಪೇಟೆಯ ಹುಡುಗನಾದರೂ ತನಗೆ ಸಿಗಬೇಕು ಅಂದುಕೊಂಡಿದ್ದಳು. ನೋಡಲು ಬಂದ ಹುಡುಗರಿಗೆ ವಸುಧಾ ಇಷ್ಟವಾಗುತ್ತಿದ್ದಳಾದರೂ, ಬಡತನ, ಮದುವೆಯಾದ ಮೇಲೆ ಸುತ್ತಿಕೊಳ್ಳಬಹುದಾದ ಮೂವರು ಪ್ರಾಯದ ಹೆಣ್ಣುಮಕ್ಕಳ ಜವಾಬ್ದಾರಿ ಸಂಬಂಧವನ್ನು ಮುಂದುವರೆಯಲು ಬಿಡುತ್ತಿರಲಿಲ್ಲ. ಅಂತೂ ನೆಲದಲ್ಲಿ ನೆಡಬೇಕಾದ ಗಿಡವನ್ನು ಕುಂಡದಲ್ಲಿ ನೆಟ್ಟ ಹಾಗೆ ಆಗಿತ್ತು ವಸುಧಾಳ ಪರಿಸ್ಥಿತಿ. ಕುಂಡದೊಳಗೆ ಬೇರಿಳಿಸಲು ಮನಸ್ಸಿಲ್ಲ, ಬೇರೂರಲು ನೆಲವೂ ನಸೀಬದಲ್ಲಿಲ್ಲ! ಬದುಕಬೇಕೆಂದರೆ ಗಿಡ ಬೇರೂರಲೇಬೇಕು. ಊರಿನವರ ಲೆಕ್ಕದಲ್ಲಿ ಅವಳ ಮದುವೆಯ ವಯಸ್ಸು ದಾಟಿಹೋಗುತ್ತಿತ್ತು. ಮದುವೆಯೇ ಆಗದೇ ಅಪ್ಪನ ಮನೆಯಲ್ಲೇ ಉಳಿದುಬಿಡುತ್ತೇನೆ ಎಂದು ಗೋಳಾಡಿ ಅತ್ತಿದ್ದರೂ ಅದು ಆಗುಹೋಗುವ ಮಾತು ಅಲ್ಲವಾದುದರಿಂದ ಯಾರೂ ಕ್ಯಾರೇ ಎಂದಿರಲಿಲ್ಲ. ಪಾಲಿಗೆ ಬಂದದ್ದು ಪಂಚಾಮೃತವೆಂದು ವಸುಧಾ ಶಂಕರನ ಕೈಹಿಡಿದಿದ್ದಳು. ಪುಟ್ಟ ಕುಂಡದಲ್ಲಿ ಗಿಡವೇನೋ ಚಿಗುರಿತು. ಆದರೆ ಅದು ಗಿಡ ಮತ್ತು ಕುಂಡ ಎರಡರ ಅವನತಿಯ ಆರಂಭವೂ ಆಗಿತ್ತು.

ದೊಡ್ಡ ಕುಟುಂಬದಲ್ಲಿ ಬೆಳೆದಿದ್ದರೂ ವಸುಧಾಳ ಬುದ್ಧಿ ಸಣ್ಣದಾಗೇ ಇತ್ತು. ಇನ್ನು ಅವಳಿಗೂ ಅವಳ ಹೆಸರಿಗೂ ಯಾವುದೇ ಸಂಬಂಧ ಇರಲಿಲ್ಲ. ತಾಳ್ಮೆ ಎಂಬ ಪದದ ಅರ್ಥವೇ ಅವಳಿಗೆ ಗೊತ್ತಿರಲಿಲ್ಲ. ಪ್ರತಿಯೊಂದು ವಿಷಯದ ಬಗ್ಗೆಯೂ ಹತ್ತು ಸಲ ಪ್ರಶ್ನೆ ಕೇಳುತ್ತಿದ್ದಳು. ಆಡುಮಾತಿನಲ್ಲಿಯೇ ಹೇಳಬೇಕೆಂದರೆ ತಲೆತಿಂದು ಮೆದುಳಿಗೆ ಕೈಹಾಕುತ್ತಿದ್ದಳು! ಹನ್ನೆರಡರ ಪ್ರಾಯದಿಂದಲೇ ಸ್ವತಂತ್ರವಾಗಿ ಬೆಳೆದಿದ್ದ ಶಂಕರ ನಲವತ್ತರ ಅಂಚಿನಲ್ಲಿ ಪ್ರತೀ ಕೆಲಸಕ್ಕೂ ವಸುಧಾಳಿಗೆ ಉತ್ತರದಾಯಿಯಾಗಬೇಕಾಯಿತು. ಮದುವೆಯಾದ ಆರಂಭದಲ್ಲಿ ದೈಹಿಕ ಆಕರ್ಷಣೆಯ ಬಿಸಿಯಲ್ಲಿ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವುದೂ ಒಂದು ರೀತಿಯ ಸುಖ ಕೊಡುತ್ತದೆ. ಉತ್ತರ ಕೊಡುವುದು ಕಿರಿಕಿರಿಯಾಗುವುದಿಲ್ಲ. ಮಲೆನಾಡಿನ ಕಾಡಿನ ನಡುವಿನ ಆ ಹಳ್ಳಿಮನೆಯಲ್ಲಿ ಮೈ ಜುಮುಗುಟ್ಟಿಸುವ ಚಳಿಯಲ್ಲಿ ದೇಹಗಳು ಬೆಚ್ಚಗೆ ಬೆಸೆದುಕೊಂಡಾಗ ವಸುಧಾಳ ಅರ್ಥವಿಲ್ಲದ ಮಾತುಗಳೂ ಹಾಯೆನಿಸಿದ್ದವು ಶಂಕರನಿಗೆ. ಆದರೆ ಸಮಯ ಒಡ್ಡುವ ಸವಾಲುಗಳು ಎಲ್ಲ ಸಂಬಂಧಗಳಿಗೂ ಅನ್ವಯಿಸುತ್ತವೆ. ಬಹುತೇಕ ಪ್ರೇಮವಿಲ್ಲದ ಸಾಂಗತ್ಯಗಳಂತೆ ಶಂಕರ ವಸುಧಾರ ಸಂಬಂಧವೂ ಏಕತಾನತೆಯಿಂದ ನರಳತೊಡಗಿತು. ಚಳಿಗಾಲದಲ್ಲಿ ಹೊದಿಯುವ ಹೊದಿಕೆಯನ್ನು ಬೇಸಿಗೆಯಲ್ಲಿ ಕಿತ್ತೊಗೆಯಬೇಕು ಅನ್ನಿಸುವ ಹಾಗೆ ವಸುಧಾಳ ಪ್ರಶ್ನೆಗಳಿಂದ ಶಂಕರ ತಪ್ಪಿಸಿಕೊಳ್ಳಬಯಸಿದ. ಮುಂಚೆಯೇ ದಿನವಿಡೀ ಕೆಲಸ ಮಾಡುತ್ತಿದ್ದವನು ಈಗ ರಾತ್ರಿಯವರೆಗೂ ತೋಟದಲ್ಲೇ ಉಳಿಯತೊಡಗಿದ. ಮಗಳು ಹುಟ್ಟಿದಾಗ ಅವಳ ಜತೆ ಸಮಯ ಕಳೆಯಲು ಬೇಗಮನೆಗೆ ಬರುತ್ತಿದ್ದನಾದರೂ ಮಗಳ ಆಕರ್ಷಣೆಯನ್ನೂ ಮೀರಿದ ದಿಗಿಲಿನಿಂದ ಮನೆಯಿಂದ ದೂರವೇ ಉಳಿಯತೊಡಗಿದ. ವಸುಧಾಳಿಂದ ಗುಟ್ಟುಗಳಲ್ಲದ ಸಂಗತಿಗಳನ್ನೂ ತಾನು ಕಾಪಾಡಿಕೊಳ್ಳಲು ಕಾರಣ ಏನು ಎಂಬುದು ಶಂಕರನಿಗೆ ಗೊತ್ತೇ ಆಗಲಿಲ್ಲ. ಉದ್ದೇಶಪೂರ್ವಕವಾಗಿ ಅವಳಿಂದ ಏನನ್ನೂ ಮುಚ್ಚಿಡುವ ಪ್ರಯತ್ನ ಮಾಡಿದವನಲ್ಲ ಶಂಕರ. ಅವಳಿಗೆ ಬೇಜಾರಾಗಬಾರದೆಂದೋ, ಜುಜುಬಿ ವಿಷಯವನ್ನೆಲ್ಲ ಏಕೆ ಹೇಳುವುದೆಂದೋ ಹೇಳದೇ ಇದ್ದದ್ದೇ ವಿನಾ ಹೇಳಬಾರದೆಂದಲ್ಲ. ಮದುವೆಯ ಮೊದಲ ದಿನಗಳಲ್ಲಿ ರಸ್ತೆಯ ಯಾವ ಬದಿ ಉಚ್ಚೆಮಾಡಿದ್ದು ಎಂಬ ಕ್ಷುಲ್ಲಕ ಸಂಗತಿಯನ್ನೂ ಹೇಳುತ್ತಿದ್ದ ಗಂಡ ಅಳೆದು ಸುರಿದು ಮಾತಾಡುವ ಮೌನಿಯಾಗಿಬಿಟ್ಟಾಗ, ತನ್ನೆಲ್ಲ ಪ್ರಶ್ನೆಗಳಿಗೂ ಹಾರಿಕೆಯ ಉತ್ತರ ಕೊಡತೊಡಗಿದಾಗ ಯಾವೆಲ್ಲ ಅನುಮಾನ ಶಂಕೆಗಳು ಹುಟ್ಟಬೇಕೋ ಅವೆಲ್ಲವೂ ಹುಟ್ಟಲಾರಂಭಿಸಿದವು ವಸುಧಾಳಲ್ಲಿ. ತನ್ನ ನೆನಪಿನಿಂದಲೇ ಮರೆಯಾದ ಅದೆಷ್ಟೋ ವಿಷಯಗಳು ಒಂದರೊಳಗೊಂದು ಸೇರಿಕೊಂಡು ಯಾವಾಗ್ಯಾವಾಗಲೋ ಪುಟಿದೆದ್ದು ಇಬ್ಬರ ನಡುವೆ ದಾಟಲಾಗದಷ್ಟು ಎತ್ತರದ ಗೋಡೆಯನ್ನು ನಿರ್ಮಿಸಿದ್ದು ಯಾವಾಗ ಎಂಬುದೇ ಶಂಕರನಿಗೆ ಅರ್ಥವಾಗಲಿಲ್ಲ. ಪಾಪ, ತಮ್ಮ ನಡುವೆ ಗೋಡೆ ನಿರ್ಮಾಣವಾಗಿದೆ ಎಂಬುದೇ ವಸುಧಾಳಿಗೆ ಗೊತ್ತಿಲ್ಲ! ತಾನು ಕೇಳಿದ್ದಕ್ಕೆ ಉತ್ತರ ಕೊಡದೇ ಇರುವಂತಹ ಘನಂದಾರಿ ಉದ್ಯೋಗ ಏನು ಇವನದ್ದು ಎಂಬುದು ಅವಳ ಕೋಪಕ್ಕೆ ಕಾರಣ. ಪರಿಸ್ಥಿತಿ ಹೀಗಿದ್ದಾಗ ಎತ್ತು ಏರಿಗೆ ಕೋಣ ನೀರಿಗೆ ಎಳೆದು ಬಂಡಿಯ ಕಥೆ ಆಧ್ವಾನವಾಗುವಂತೆ ಇವರ ಸಂಸಾರದ್ದೂ ಆಯಿತು!

ಆದರೆ ಸಣ್ಣದಾಗಿ ಉರಿಯುತ್ತಿದ್ದ ಅಸಮಾಧಾನ ಸ್ಫೋಟಿಸಲು ನೆಪವಾಗಿದ್ದು ಮಾತ್ರ ಭವಾನಿ. ಆಕೆ ವಸುಧಾಳ ಸೋದರತ್ತೆಯ ಮಗಳು. ಇಬ್ಬರೂ ಒಂದೇ ವಾರಿಗೆಯವರು. ಗಂಡ ಒಬ್ಬ ಮಗನೊಂದಿಗೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದವಳ ಹಣೆಬರಹ ಸೊಟ್ಟದಾಗಿಯೇ ಬರೆಯಲ್ಪಟ್ಟಿತ್ತು. ಯರ‍್ಯಾರೋ ಬರೆವ ಹೆಣ್ಣುಮಕ್ಕಳ ಹಣೆಬರಹ ಸೊಟ್ಟಗಾಗುವುದು ವಿಶೇಷವೇನೂ ಅಲ್ಲ. ಅದು ಕೋಟ್ಯಂತರ ಹೆಣ್ಣುಮಕ್ಕಳ ಪಾಡು. ಆದರೆ ಭವಾನಿಯ ಗಂಡನಿಗೆ ಸಾವು ಬಂದಿದ್ದು ಮಾತ್ರ ಕೋಟಿಯಲ್ಲೊಬ್ಬರಿಗೆ ಬರುವಂತೆ. ಬೇರೆ ಯಾರ ಜತೆಯೋ ಹೋಗುತ್ತಿದ್ದ ಸಾವನ್ನು ಕರೆದು ಕೂರಿಸಿಕೊಂಡು ಸಾಯುವುದು ಎಂದರೆ ಸುಮ್ಮನೆಯೇ ಮತ್ತೆ! ಅದು ಆಗಿದ್ದು ಹೀಗೆ. ಹತ್ತಿರದ ಪೇಟೆಗೆ ಹೋಗಬೇಕೆಂದು ಭವಾನಿಯ ಗಂಡ ಹೊರಟಿದ್ದ. ಆ ಊರಿಗೆ ಇರುವುದೇ ಒಂದು ಬೆಂಕಿಪೊಟ್ಟಣದಂತಹ ಖಾಸಗಿ ಬಸ್ಸು. ಮಧ್ಯಾಹ್ನದ ಹೊತ್ತಿನ ಟ್ರಿಪ್‌ನಲ್ಲಿ ಡ್ರೈವರು, ಕಂಡಕ್ಟರ್ ಇಬ್ಬರನ್ನೂ ಸೇರಿಸಿ ಇರುವುದು ಆರೋ ಏಳೋ ಜನ ಅಷ್ಟೇ. ಗುಂಡಿ ಏರು ತಗ್ಗಿನ ರಸ್ತೆಗೂ ಆ ಲಟಾರಿ ಬಸ್ಸಿಗೂ ಸರಿಯಾಗುತ್ತಿತ್ತು. ಬೆಂಕಿಪೆಟ್ಟಿಗೆಯಲ್ಲಿ ನಾಲ್ಕು ಅಕ್ಕಿಕಾಳು ಹಾಕಿ ಜೋರಾಗಿ ಅಲ್ಲಾಡಿಸಿದರೆ ಹೇಗಾಗುತ್ತೋ ಹಾಗೆ ಆ ಮಧ್ಯಾಹ್ನದ ಖಾಲಿ ಟ್ರಿಪ್‌ನಲ್ಲಿ ಜನ ಅವಸ್ಥೆ ಪಡುತ್ತಿದ್ದರು! ಅದೊಂದು ಮಳೆಗಾಲದ ಮಧ್ಯಾಹ್ನ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ಹೊಳುವಾಗಿತ್ತು. ಮೈಲುತುತ್ತ ತರಲು ಹತ್ತಿರದ ಪೇಟೆಗೆ ಹೊರಟಿದ್ದ ಭವಾನಿಯ ಗಂಡ. ಜನ ಜಾಸ್ತಿ ಇರುವುದಿಲ್ಲವೆಂದು ಮಧ್ಯಾಹ್ನದ ಬಸ್ಸಿಗೇ ಹತ್ತಿದ. ಆದರೆ ಹತ್ತಿರದ ಊರಿನ ದೇವಸ್ಥಾನದಲ್ಲಿ ಪ್ರತೀ ಮಂಗಳವಾರ ಶುಕ್ರವಾರ ನಾಗಪೂಜೆ ಇರುತ್ತಿದ್ದುದರಿಂದ ಆ ದಿನಗಳಲ್ಲಿ ಬಸ್ಸು ರಶ್ಶಾಗುತ್ತಿತ್ತು. ಅವತ್ತು ಬಸ್ಸು ತುಂಬದಿದ್ದರೂ ಮನಸ್ಸಿಗೆ ಬಂದಲ್ಲಿ ಕೂರುವಷ್ಟು ಸೀಟುಗಳು ಖಾಲಿ ಇರಲಿಲ್ಲ. ಭವಾನಿಯ ಗಂಡ ಬಸ್ಸಿನ ನಡುವಿನ ಸೀಟೊಂದರಲ್ಲಿ ಕೂತಿದ್ದ. ಮುಂದಿನ ಸ್ಟಾಪಿನಲ್ಲಿ ದೇವಸ್ಥಾನಕ್ಕೆ ಬಂದ ಮೂರ‍್ನಾಲ್ಕು ಜನ ಹತ್ತಿದರು. ಅವರಿಗೆ ಬಸ್ಸಿನ ಮುಂಭಾಗದಲ್ಲಿ ಸೀಟು ಸಿಕ್ಕಿತು. ಭವಾನಿಯ ಗಂಡನ ಪಕ್ಕ ಕುಳಿತವನೂ ಆಗಷ್ಟೇ ಬಸ್ ಹತ್ತಿದವನೂ ದೋಸ್ತಿಗಳೆಂದು ಕಾಣುತ್ತದೆ. ಜೋರು ಜೋರಾಗಿ ಮಾತಾಡತೊಡಗಿದರು. ಮತ್ತೆ ನಾಲ್ಕು ಸ್ಟಾಪು ಕಳೆದರೂ ಅವರ ಮಾತೇನೂ ನಿಲ್ಲುವ ಹಾಗೆ ಕಾಣಲಿಲ್ಲ. ಅದಕ್ಕೇ ಭವಾನಿಯ ಗಂಡ ಮುಂದೆ ಕೂತು ಮಾತಾಡುತ್ತಿದ್ದ ಆ ವ್ಯಕ್ತಿಗೆ ‘ಹೋಯ್, ನೀವಿಲ್ಲಿ ಬನ್ನಿ, ಆರಾಮಾಗಿ ಮಾತಾಡಿ, ನಾನು ನಿಮ್ಮ ಸೀಟಲ್ಲಿ ಕೂರ‍್ತೀನಿ’ ಎಂದ. ಖುಶಿಯಿಂದ ಬಂದು ಕುಳಿತ ಅವ. ಇವ ಮುಂದೆ ಹೋಗಿ ಕುಳಿತು ಎರಡು ನಿಮಿಷವೂ ಆಗಿರಲಿಲ್ಲ. ರಸ್ತೆ ಬದಿಯಲ್ಲಿ ಶತಮಾನಗಳಿಂದ ಇದ್ದ ದೊಡ್ಡ ಮರವೊಂದು ಕ್ಷಣಾರ್ಧದಲ್ಲಿ ಬಸ್ಸಿನ ಮೇಲುರುಳಿತು. ಬಸ್ಸಿನ ಮುಂಭಾಗ ಜಜ್ಜಿ ಹೋಗಿ ಮೂರು ಮಂದಿ ಕುಳಿತಲ್ಲೇ ಹೆಣವಾಗಿದ್ದರು. ಅವರಲ್ಲಿ ಭವಾನಿಯ ಗಂಡನೂ ಒಬ್ಬನಾಗಿದ್ದ. ಅವನ ಜತೆ ಸೀಟು ಬದಲಾಯಿಸಿಕೊಂಡು ಕುಳಿತ ವ್ಯಕ್ತಿಗೆ ಗಾಯವೇನೂ ಆಗದಿದ್ದರೂ ತನ್ನ ಹೆಸರಿನಲ್ಲಿದ್ದ ಸಾವನ್ನು ಎರಡೇ ನಿಮಿಷದಲ್ಲಿ ಮತ್ತೊಬ್ಬ ತನ್ನ ಹೆಸರಿಗೆ ಬರೆದುಕೊಂಡು ಸತ್ತ ಆಘಾತಕ್ಕೆ ಮೂಕನಂತಾಗಿಬಿಟ್ಟಿದ್ದ.

ಹೋದವನೇನೋ ಹೋದ. ಪಾಪ, ಭವಾನಿಯ ಪರಿಸ್ಥಿತಿ ಯಾರಿಗೂ ಬೇಡದ್ದೇ ಆಯಿತು. ಗಂಡನ ನಾಲ್ಕು ಮಂದಿ ಅಣ್ಣ ತಮ್ಮಂದಿರ ದೊಡ್ಡ ಕುಟುಂಬದಲ್ಲಿ ಅವಳ ಮತ್ತು ಅವಳ ಮಗನ ಊಟ ಬಟ್ಟೆ ಎಲ್ಲ ಹೋಗುತ್ತಿತ್ತಾದವರೂ ಅವಳ ಮನೆಯಲ್ಲೇ ತಾಯಿ ಮಗ ಎರಡನೇ ದರ್ಜೆಯ ಪ್ರಜೆಗಳಂತೆ ಬಾಳಬೇಕಿತ್ತು. ಹಾಗಾಗಿ ತೋಟದ ಹತ್ತಿರವೇ ತಾಯಿ ಮಗ ಒಂದು ಚಿಕ್ಕ ಬಿಡಾರ ಮಾಡಿಕೊಂಡಿದ್ದರು. ಸುಸಜ್ಜಿತ ವ್ಯವಸ್ಥೆ ಇರುವ ಮನೆ ಬಿಟ್ಟು ಬರಲು ಎರಡನೇ ಭಾವನ ಮುಜುಗರ ಹುಟ್ಟಿಸುವ ಚೂಪಾದ ನೋಟವೇ ಕಾರಣ ಎನ್ನುವುದನ್ನು ಭವಾನಿ ಯಾರಿಗೂ ಹೇಳಲಿಲ್ಲ.

ಹೀಗೇ ಒಂದು ದಿನ ವಸುಧಾ ಸಿಕ್ಕು ಎರಡು ದಿನ ತಮ್ಮ ಮನೆಗೆ ಬರುವಂತೆ ಒತ್ತಾಯಿಸಿದ ಕಾರಣಕ್ಕೆ ಭವಾನಿ ಮತ್ತು ಅವಳ ಮಗ ಬಂದು ಉಳಿದಿದ್ದರು. ವಸುಧಾಳಿಗೆ ಜತೆ ಸಿಕ್ಕಿದ್ದರಿಂದ ಶಂಕರನಿಗೆ ಮದುವೆಯ ನಂತರ ಮೊದಲ ಬಾರಿ ಮನೆಯೊಳಗೆ ಕೋರ್ಟ್ ಮಾರ್ಶಲ್ ತಪ್ಪಿತ್ತು. ದಿನವೂ ಹೀಗೆಯೇ ಇದ್ದರೆ ಎಷ್ಟು ಚೆನ್ನ ಅಂದುಕೊಳ್ಳುತ್ತಿದ್ದ! ಅವಳ ಪಾಡಿಗೆ ಅವಳು, ತನ್ನ ಪಾಡಿಗೆ ತಾನು! ಬಂದು ಒಂದು ವಾರವೇ ಆಗಿದ್ದರಿಂದ ಭವಾನಿ ಬೆಳಗಿನ ಬಸ್ಸಿಗೇ ಹೊರಟಳು. ವಸುಧಾ ಬಹಳ ಒತ್ತಾಯಿಸಿದರೂ ಕೇಳಲಿಲ್ಲ. ಶಂಕರ ಸಂಜೆ ಮತ್ತೆ ವಸುಧಾಳ ಬಾಯಿಗೆ ಬೀಳುವ ಪರಿಸ್ಥಿತಿ ನೆನೆಸಿಕೊಂಡು, ತಿಂಡಿ ತಿನ್ನುತ್ತ ‘ಇರಿ ಇನ್ನೊಂದೆರಡು ದಿನ, ನೀವಿದ್ರೆ ವಸುಧಾ ಖುಷಿಯಾಗಿರುತ್ತಾಳೆ’ ಎಂದ. ‘ಇಲ್ಲ ಭಾವ’ ಎಂದಳು ಭವಾನಿ. ‘ಅಯ್ಯೋ ಇರಿ ಇರಿ, ನಾಲ್ಕು ದಿನ ಕಳೆದು ನಾನೇ ಬೈಕಿನಲ್ಲಿ ಬಿಟ್ಟು ಬರ್ತೇನೆ ‘ಎಂದ ಶಂಕರ. ಭಾವನ ಮಾತಿಗೆ ಎದುರಾಡಲಾಗದೇ ‘ಆಯ್ತು ಭಾವ’ ಎಂದು ಉಳಿದಳು ಭವಾನಿ.

ಅಷ್ಟೇ, ಈ ಘಟನೆ ವಸುಧಾಳ ಮನಸ್ಸಿನಲ್ಲಿ ಬೇರೆಯದೇ ಬಣ್ಣ ಪಡೆದುಕೊಳ್ಳಲಾರಂಭಿಸಿತು. ತಾನು ಎಷ್ಟು ಒತ್ತಾಯಿಸಿದರೂ ಉಳಿಯಲು ಒಪ್ಪದ ಭವಾನಿ ಗಂಡನ ಒಂದೇ ಮಾತಿಗೆ ಹೂಗುಟ್ಟಿ ಸುಮ್ಮನಾದಳಲ್ಲ! ಈ ಕಳೆದ ಒಂದು ವಾರದಲ್ಲಿ ಗಂಡನ ಹಸನ್ಮುಖ, ಮೃದು ಮಾತು ಎಲ್ಲವೂ ಅವಳಿಗೆ ಈಗ ಬೇರೆಯದೇ ಅರ್ಥ ಹೊಳೆಯಿಸಲಾರಂಭಿಸಿದವು. ತಡವಾಗಿ ಬರುತ್ತಿದ್ದವ ಬೇಗ ಬರುವುದೇನು, ಭವಾನಿಯ ಮಗ ಮತ್ತು ತನ್ನ ಮಗಳ ಜತೆ ಆಡುವುದೇನು, ಅವರಿಗೆ ತಿಂಡಿ ಗಿಂಡಿ ತರುವುದೇನು, ಭವಾನಿ ಮಾಡಿದ್ದ ಪಲಾವನ್ನು ಹೊಗಳಿದ್ದೇನು, ‘ನೀನು ಅವರೂ ಒಂದೇ ವಯಸ್ಸಿನವರಾ, ಪಾಪ ಅವರ ದುರದೃಷ್ಟ ನೋಡು’ ಎಂದು ಮರುಗಿದ್ದೇನು! ಅರ್ಧ ರಾತ್ರಿಯಲ್ಲಿ ತನ್ನ ಹೊದಿಕೆಯೊಳಗೆ ನುಗ್ಗುತ್ತಿದ್ದವನು ಈ ಒಂದು ವಾರದಲ್ಲಿ ಮೈಮೇಲೆ ಕೈ ಕೂಡ ಹಾಕದೇ ಗೊರಕೆ ಹೊಡೆಯುತ್ತ ತಿರುಗಿ ಮಲಗಿದ್ದೇನು! ರಕ್ತ ಬೀಜಾಸುರನಂತೆ ಒಂದು ಸಂಶಯ ಮತ್ತೊಂದಕ್ಕೆ, ಅದು ಮತ್ತೊಂದಕ್ಕೆ ಜನ್ಮ ಕೊಡುತ್ತ ಹೋದಂತೆ ವಸುಧಾಳ ತಲೆ ಕೆಟ್ಟು ಮೊಸರಾಯಿತು.

ಮಾರನೇ ದಿನವೇ ಶಂಕರ ತೋಟಕ್ಕೆ ಹೋದ ತಕ್ಷಣವೇ ಹೊಸ ಸೀರೆಯುಟ್ಟು ತಯಾರಾಗಿ ನಂಗೂ ಪೇಟೆಗೆ ಹೋಗುವುದಿದೆ ಎಂದು ಹೇಳಿ ಹಾಗೇ ನಿಂಗೆ ಮನೆಗೆ ಬಿಡ್ತೇನೆ ಎಂದು ಭವಾನಿಯನ್ನೂ ಹೊರಡಿಸಿ ತಾಯಿ ಮಗನನ್ನು ಬಿಟ್ಟು ಬಂದವಳು ಗಂಡನ ಹತ್ತಿರ ಮಾತಾಡುವುದನ್ನೇ ನಿಲ್ಲಿಸಿದಳು ವಸುಧಾ. ರೂಮಿನಲ್ಲಿ ಮಲಗದೇ ಮಗಳ ಜತೆ ಪಕ್ಕದ ಕೋಣೆಯಲ್ಲಿ ಮಲಗಲು ಪ್ರಾರಂಭಿಸಿದಳು. ಮೊದಲೇ ತಮ್ಮ ನಡುವೆ ಇದ್ದ ಗೋಡೆಗೆ ಕಬ್ಬಿಣದ ಸರಳುಗಳು ಹೇಗೆ ಬಂದವು ಎಂಬುದು ಶಂಕರನಿಗೆ ಗೊತ್ತೇ ಆಗಲಿಲ್ಲ.

ಜಾತ್ರೆಯಲ್ಲಿ ಅಂಗಡಿ ಹಾಕಿಕೊಂಡಿದ್ದವನಿಗೆ ಹಿಮಪರ್ವತದ ತುದಿಯಲ್ಲಿ ಕುಟೀರ ಹಾಕಿಕೊಟ್ಟಂತಾಗಿತ್ತು ಶಂಕರನ ಪರಿಸ್ಥಿತಿ. ಮೌನಕ್ಕಾಗಿ ತಡಕಾಡುತ್ತಿದ್ದವನಿಗೆ ಎಲ್ಲಿ ನೋಡಿದರಲ್ಲಿ ಮೌನವೇ ಸಂಗಾತಿಯಾಗಿತ್ತು. ಶಂಕರನನ್ನು ಕೂತಲ್ಲಿ ನಿಂತಲ್ಲಿ ನೆನಪುಗಳು ಬೇಟೆಯಾಡತೊಡಗಿದವು. ಬೇತಾಳದಂತೆ ಬೆನ್ನುಬಿಡದ ನೆನಪುಗಳು ಅವುಗಳಿಂದ ತಪ್ಪಿಸಿಕೊಂಡೆ ಎನ್ನುವಷ್ಟರಲ್ಲಿ ಶಬರಿಯಂತೆ ಕಾಯುತ್ತ ಕೂರುವ ನೆನಪುಗಳು. ಆಗೆಲ್ಲ ಅವನಿಗೆ ತನ್ನ ತಂಗಿಯ ಬದುಕು ನೆನಪಾಗುವುದು. ಗಂಡ ಇಂದು ಸರಿಯಾಗುತ್ತಾನೆ, ನಾಳೆ ಸರಿಯಾಗುತ್ತಾನೆ ಎಂದು ಕಾಯುತ್ತ ಅವನ ಸಕಲ ಸೇವೆಯನ್ನೂ ಮಾಡುತ್ತಿರುವ ತಂಗಿಯ ಜೀವನದ ದಿನನಿತ್ಯದ ಬದುಕೇ ಹಳೆಯ ನೆನಪುಗಳಿಗಿಂತ ಯಾತನಾಮಯವಾಗಿರುವಾಗ ಅವಳನ್ನು ನೆನಪುಗಳು ಕಾಡುವುದಿಲ್ಲ ಎಂದು ಒಮ್ಮೊಮ್ಮೆ ಶಂಕರನಿಗೆ ಅಸೂಯೆಯೂ ಆಗುವುದುಂಟು. ಆ ಅಸೂಯೆಯ ಹಿಂದಿನ ಕ್ರೌರ್ಯವನ್ನು ನೆನೆಸಿಕೊಂಡು ಇದು ತಾನೇ ಎಂದು ತನ್ನೊಳಗೆ ತಾನೇ ಅಚ್ಚರಿ ಪಡುವನು. ಆದರೆ ಕೆಲವೊಮ್ಮೆ ಅಪ್ಪ ಅಮ್ಮ ಯಾರೂ ಇಲ್ಲದೇ ತಾವು ಮಕ್ಕಳು ಮಾತ್ರ ಅರೆಬರೆ ಬೇಯಿಸಿಕೊಂಡು ವಟ್ರಾಶಿಯಾಗಿ ತಿಂದು ಈ ಕಾಡ ನಡುವೆ ಕಳೆದ ಸಮಯವೇ ವಾಸಿ ಇವತ್ತಿನ ಕೊನೆಯಿರದ ಸಂಕಟದ ನಡುವೆ ಎನ್ನಿಸುವುದು. ಹಸಿದ ಹುಲಿಯಂತೆ ಎದುರು ನಿಂತ ವರ್ತಮಾನದೆದುರು ಹಳೆಯ ನೆನಪುಗಳು ಪಂಜರದ ಹುಲಿಯಂತೆ ಕರುಣೆಹುಟ್ಟಿಸಿಬಿಡುತ್ತಿದ್ದವು!

ಆದರೆ ಹೆಂಡತಿ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿ ಮನೆಯನ್ನು ಸ್ಮಶಾನವಾಗಿಸಿ ಕಂಡವರೆದುರು ತಾನು ಮತ್ತು ಮಗಳು ತಲೆತಗ್ಗಿಸುವಂತೆ ಮಾಡಿದ್ದಕ್ಕೆ ಪರಿಹಾರ ಏನೆಂದು ವಸುಧಾಳ ಮನೆಯವರನ್ನು ಕರೆದ. ಅಮ್ಮ, ಅಪ್ಪ, ತಂಗಿಯರು ಅವರ ಗಂಡಂದಿರು ಬಂದು ವಸುಧಾಳಿಗೆ ಬುದ್ಧಿ ಹೇಳಿ ಹೋದರು. ತುಟಿಪಿಟಕ್ ಎನ್ನಲಿಲ್ಲ ವಸುಧಾ. ಸ್ವಭಾವತಃ ಶಂಕರ ಮೌನಿ ಮತ್ತು ಒಂಟಿಯೇ ಆಗಿದ್ದರಿಂದ ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಅವನಿಗೇನೂ ಕಷ್ಟವಾಗಲಿಲ್ಲ. ಇದರಿಂದ ನಷ್ಟವಾಗಿದ್ದು ಮಾತ್ರ ವಸುಧಾಳಿಗೆ. ಬದುಕಿನಲ್ಲಿ ತಾನು ಕಂಡ ಒಂದು ಜುಜುಬಿ ಕನಸೂ ನನಸಾಗದ ಬಗ್ಗೆ ಅವಳಿಗೆ ಮೊದಲೇ ಸಂಕಟವಿತ್ತು. ಈಗ ತನ್ನ ದುಸ್ಥಿತಿಗೆ ಶಂಕರ ಎಂಬ ಗಂಡಸೇ ಕಾರಣ ಎಂಬ ಬಲವಾದ ನಂಬಿಕೆಯೂ ಸೇರಿಕೊಂಡು ಅವಳ ಪರಿಸ್ಥಿತಿ ಚಿಂತಾಜನಕವಾಯಿತು. ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುವುದು ಶುರುವಾಯಿತು. ಒಂಟಿಮನೆ ಆದುದರಿಂದ ಅಕ್ಕಪಕ್ಕದಲ್ಲಿ ಮಾತಾಡಿ ಹಗುರವಾಗಲು ಗೆಳತಿಯರೂ ಇರಲಿಲ್ಲ.

ಅಲ್ಲ ತಾನು ಇರುವೆಯಂತೆ, ಜೇನುಹುಳದಂತೆ ಮನೆಗಾಗಿ ಕೆಲಸ ಮಾಡುತ್ತ ಇದ್ದರೂ ಹೀಗೆ ಮಾಡಿದಳಲ್ಲ ಎಂಬುದೊಂದೇ ಚಿಂತೆ ಶಂಕರನಿಗೆ. ಅಷ್ಟೇ ಚಿಂತಿಸಿ ಸುಮ್ಮನಿದ್ದರೆ ಆಗುತ್ತಿತ್ತು. ಆದರೆ ಅವನ ತಲೆಯಲ್ಲಿ ಹೊಸದೊಂದು ಆಲೋಚನೆ ಬರತೊಡಗಿತು. ಅವತ್ತೊಂದು ದಿನ ಮಧ್ಯಾಹ್ನ ಊಟ ಮಾಡಿ ಪೇಟೆಗೆ ಹೊರಟವನು ಮಾಮೂಲಿಯಂತೆ ಬಲಕ್ಕೆ ಹೋಗದೇ ಎಡಕ್ಕೆ ಬೈಕು ತಿರುಗಿಸಿ ನಾಲ್ಕು ಕಿ.ಮೀ. ದೂರದಲ್ಲಿದ್ದ ಭವಾನಿಯ ಬಿಡಾರದೆದುರು ನಿಲ್ಲಿಸಿದ.

ಎಂದಿನಂತೆ ಶಂಕರ ಮನೆಗೆ ಬರಲು ತಡವೇ ಆಯಿತು. ಎಂದಿನಂತೆ ಮಾತಿಲ್ಲದೇ ವಸುಧಾ ಊಟ ಬಡಿಸಿದಳು. ಹೆಸರು ಬೇಳೆ ಪಾಯಸ, ಕಡಲೆಬೇಳೆ ಚಟ್ಟಂಬಡೆ ಮಾಡಿದ್ದಳು. ಮಗಳ ಹತ್ತಿರ ಅಪ್ಪನಿಗೆ ಇನ್ನೊಂಚೂರು ಪಾಯಸ ಹಾಕು ಪುಟ್ಟಿ ಎಂದು ಹಾಕಿಸಿದಳು. ಹಬ್ಬ ಗಿಬ್ಬ ಏನೂ ಇಲ್ಲದೇ ರಾತ್ರಿ ಊಟಕ್ಕೆ ವಿಶೇಷ ಮಾಡಿದ್ದಾಳಲ್ಲ ಎಂದುಕೊಂಡ ಶಂಕರ. ಭವಾನಿಯ ಮನೆಗೆ ಹೋಗಿಬಂದ ಮೇಲೆ ನಿರಾಳನಾಗಿದ್ದ. ಆ ಕಾರಣದಿಂದ ನಾಳೆಯಿಂದ ಎಲ್ಲ ಬದಲಾಗಬಹುದು ಎಂದುಕೊಂಡು ಮಲಗಿದ.

ಮಾರನೇ ದಿನ ಬೆಳಿಗ್ಗೆ ಎದ್ದಾಗ ವಸುಧಾ, ಮಗಳು ಇಬ್ಬರೂ ಕಾಣಲಿಲ್ಲ. ತೋಟಕ್ಕೆ ನಿಂಬೆಹಣ್ಣು ತರಲು ಹೋಗಿರಬಹುದು ಎಂದುಕೊಂಡ. ಮತ್ತರ್ಧ ಗಂಟೆಯಲ್ಲಿ ಬಂದದ್ದು ಎದೆ ಒಡೆವ ಸುದ್ದಿ.

ಹೆಂಡತಿ ಮತ್ತು ಮಗಳ ಶವದೆದುರು ಶುಷ್ಕ ನೋಟ ಬೀರುತ್ತ ಕುಳಿತ ಶಂಕರ. ಅಷ್ಟರಲ್ಲಿ ಬಂದ ಮಹೇಶ ಶಂಕರನ ಕೈ ಹಿಡಿದುಕೊಂಡು ಬದಿಗೆ ಕರೆದುಕೊಂಡು ಹೋಗಿ, ‘ಅಲ್ಲ ಮಾರಾಯ, ನೀನು ಭವಾನಿಯ ಮನೆ ಕಡೆ ಏನಾದರೂ ಹೋಗಿದ್ದು ಕಂಡರೆ ತನಗೆ ಫೋನ್ ಮಾಡೋಕೆ ವಸುಧಾ ಭವಾನಿ ಮನೆ ಹತ್ತಿರದ ಜಯಮ್ಮಂಗೆ ಹೇಳಿಟ್ಟಿದ್ಲಂತೆ, ನಿನ್ನೆ ನೀನು ಅಲ್ಲಿ ಹೋದದ್ದೇ ಈ ಮಳ್ಳು ಜಯಮ್ಮ ವಸುಧಂಗೆ ಫೋನ್ ಮಾಡಿದ್ಲಂತೆ. ಈಗ ಭವಾನಿ ‘ಅಯ್ಯೋ ಶಂಕರಣ್ಣ ತನ್ನ ಹೆಂಡ್ತಿಗೆ ಒಂಚೂರು ಬುದ್ಧಿ ಹೇಳು ಮಾರಾಯತಿ, ಸುಳ್ಳುಸುಳ್ಳೇ ಕಲ್ಪನೆ ಮಾಡಿಕೊಂಡು ಜೀವ ತಿಂತಿದಾಳೆ ಅಂತ ಹೇಳಿದ್ದ, ಇವತ್ತು ತಮ್ಮನೆಗೆ ಕರ್ಕೊಂಡು ಹೋಗ್ತೇನೆ ಅಂತಾನೂ ಹೇಳಿದ್ದ. ಒಂದಿನ ತಡೆದಿದ್ದರೆ ಏನಾಗ್ತಿತ್ತೇ ವಸು’ ಅಂತ ಜಯಮ್ಮನ ಮನೆಗೆ ಬಂದು ಗೋಳಾಡಿದಾಗ ಜಯಮ್ಮ ತಾನು ಫೋನು ಮಾಡಿದ್ದು ಹೇಳಿಬಿಟ್ಟಳಂತೆ, ಅವಳ ಗಂಡ ಅವಳಿಗೆ ಮುಖ ಮುಸುಡಿ ನೋಡದೇ ಹೊಡೆದನಂತೆ..’ ಮಹೇಶ ಹೇಳುತ್ತಲೇ ಇದ್ದ.

ಶಂಕರನಿಗೆ ಏನೂ ಕೇಳುತ್ತಿರಲಿಲ್ಲ. ಅವನಿಗೆ ಏನೂ ಕಾಣುತ್ತಲೂ ಇರಲಿಲ್ಲ. ಅವನೀಗ ಮೂವತ್ತು ವರ್ಷಗಳ ಹಿಂದೆ ಅಮ್ಮನ ಹೆಣದೆದುರು ಕುಳಿತ ಹನ್ನೆರಡರ ಬಾಲಕನಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT