ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಬಿ.ಎಲ್.ವೇಣು ಅವರ ಕಥೆ: ಹೀಗೊಂದು ಪ್ರೇಮಾಯಣ..

Last Updated 15 ಅಕ್ಟೋಬರ್ 2022, 23:45 IST
ಅಕ್ಷರ ಗಾತ್ರ

ದಡಬಡಿಸಿ ಓಡುವ ಬಸ್ಸಿನ ಗದ್ದಲವನ್ನೂ ಮೀರಿ ಒಳಗಿರುವವರ ಗದ್ದಲ ಹೆಚ್ಚಿದೆ. ಈಗಿನ ಫೈಬರ್ ಬಸ್ಸುಗಳೇ ಹೀಗೆ. ಎರಡು ವರ್ಷಕ್ಕೆ ಲಡಾಸೆದ್ದು ಹೋಗುವ ಬಗ್ಗೆ, ಹಿಂದಿದ್ದ ಸರ್ಕಾರಿ ಕೆಂಪು ಬಸ್ಸುಗಳ ಗಟ್ಟಿತನದ ಬಗ್ಗೆ ಟೀಕೆಗಳು ನಡೆದಿವೆ. ಗೆಳೆಯ ಮಾರುತಿಯ ಮದುವೆಗಾಗಿ ಆಫೀಸಿನವರೆಲ್ಲಾ ಖಾಸಗಿ ಬಸ್ ಮಾಡಿಕೊಂಡು ಹೊರಟಿದ್ದರು.

ಮಾತುಕತೆ ಗಾನಾಬಜಾನ, ಜೋಕ್ಸ್, ಇಸ್ಪೀಟು, ಡ್ರಿಂಕ್ಸು ಎಲ್ಲಾ ನಮೂನೆ ಎಂಟರ್‌ಟೈನ್‌ಗಳೆಲ್ಲಾ ಬೋರಾದ ಮೇಲೆ ಪ್ರವಾಸ ಪ್ರಯಾಸವಾಗದಂತೆ ಒಬ್ಬರನ್ನೊಬ್ಬರು ಕಿಂಡಲ್ ಮಾಡುತ್ತಾ ರಂಜನೆಗಿಳಿದರು. ಆ ಗುಂಪಿನಲ್ಲಿ ಎಂದಿನಂತೆ ಲೇವಡಿ ಸಿಕ್ಕವನು ಗಿರೀಶ. ಜೊತೆಯಲ್ಲಿ ಗುಮಾಸ್ತೆ ಲಲಿತ, ಟೈಪಿಣಿ ಶಿವಲಿಂಗಮ್ಮ, ಪಂಕಜ, ಜಲಜಾಕ್ಷಿ ಇದ್ದಿದ್ದರಿಂದ ಸಹೋದ್ಯೋಗಿಗಳ ಸ್ಫೂರ್ತಿಗೆ ಅದೆಲ್ಲಿಯ ಕಡಿವಾಣ? ಕಚೇರಿ ಅಧೀಕ್ಷಕರೇನೋ ಇದ್ದರೂ ಆತ ಏಜ್ಡ್ ಪರ್ಸನ್. ಆದರೂ ಯುವಕರಿಗಿಂತ ಹೆಚ್ಚು ಚಾಷ್ಟಿ ಮಾಡುವಂತಹ ಸ್ವಭಾವದವ. ಗಿರೀಶನೆಂದರೆ ಒಂದಳತೆಯಲ್ಲಿ ಎಲ್ಲರಿಗೂ ಇಷ್ಟವೇ. ಕಾರಣ ಟೀಕೆಗಳಿಗೆ ಮುನಿಯದವನು. ಆಫೀಸಿನಲ್ಲಿ ಒಳ್ಳೆಯ ಕೆಲಸಗಾರನೆಂದೆನಿಸಿಕೊಂಡವನು. ಎಂದೂ ಲೇಟಾಗಿ ಬಾರದ, ಫೈಲುಗಳನ್ನು ಪೆಂಡಿಂಗ್ ಇಡದ, ಪದೆ ಪದೆ ರಜೆ ಹೋಗದ ಗಿರೀಶ, ಹಲವರ ದೃಷ್ಟಿಯಲ್ಲಿ ಫೈಲ್‌ವಾರಂ. ಇವನಿಲ್ಲದಿದ್ದರೇನು ಆಫೀಸೇ ನಡೆಯಾಕಿಲ್ಲವರಾ!? ಮೂರು ಹೊತ್ತು ಆಫೀಸಲ್ಲೇ ಬಿದ್ದಿರುತ್ತೆ. ‘ಚಹಾ’ಕ್ಕೆ ಕರೆದರೂ ಬರಂಗಿಲ್ಲ. ಯಾರನ್ನೂ ತಾನಾಗಿಯೇ ಮಾತನಾಡಿಸದ ಮಾತನಾಡಿಸಿದರೂ ಲೆಕ್ಕಾಚಾರ ಹಾಕಿ ಮಾತನಾಡುವ ಒಂಟಿಗೂಬೆ’ ಎಂಬ ಬಿರುದನ್ನೇ ದಯಪಾಲಿಸಿದ್ದಾನೆ ಸೋಂಬೇರಿ ಸುಬ್ರಾಯ.

ಎಂದೂ ಎಣ್ಣೆ ಹೊಡೆಯದ, ಸಿಗರೇಟ್ ಎಳೆಯದ, ಚಿಕನ್ನು, ಮಟ್ಟನ್ನು ಮುಟ್ಟದ, ಗೆಳೆಯರು ಏರ್ಪಡಿಸುವ ಅಂತಹ ಪಾರ್ಟಿಗಳಿಗೆ ಪಾದಾರ್ಪಣೆ ಮಾಡದ ಗಿರೀಶನೆಂದರೆ ತೀರ್ಥಂಕರ ತಿಮ್ಮರಾಜು ಪಾಲಿಗೆ ವೇಸ್ಟ್‌ಬಾಡಿ. ಎಲ್ಲರಂತೆ ಗುತ್ತಿಗೆದಾರರ ಬಳಿ ಪರ್ಸೆಂಟೇಜ್‌ಗೆ ಬಾಯಿಬಿಡದ, ಒಬ್ಬರಿಗೂ ಎಂದೂ ಒಂದು ಕಪ್ ಕಾಫಿ ಕುಡಿಸದ, ಇತರರಿಂದಲೂ ಕುಡಿಯದ ಗಿರೀಶನೆಂದರೆ ವಿಐಪಿ ಎಂಬ ನಿಕ್‌ನೇಮ್ ಬೇರೆ. ವಿಐಪಿ ಅಂತ ಹಿಗ್ಗುವಂತಿಲ್ಲ. ವಿಐಪಿ ಅಂದರೆ ಸಹೋದ್ಯೋಗಿಗಳ ಅರ್ಥದಲ್ಲಿ ‘ವೆರಿ ಇಗ್ನೋರಬಲ್ ಪರ್ಸನ್’ ಅಂತಷ್ಟೆ. ಫಾರ‍್ಟಿಪ್ಲಸ್ ಆಗಿಯೂ ಮದುವೆಯಾಗದ, ಆ ಕುರಿತು ಎಂದೂ ಚಿಂತಿಸಿದ ಎಂತಹ ತ್ರಿಪುರ ಸುಂದರಿಯರನ್ನು ಸಹ ಆಸೆಯಿಂದ ನೋಡದ, ಸೆಕ್ಸ್ ಬಗ್ಗೆ ತುಟಿ ಬಿಚ್ಚದ, ಪೆಂಡಿಂಗ್ ಫೈಲ್ಸ್‌ಗಳ ಬಗ್ಗೆ ಮಾತ್ರ ತುಟಿ ಬಿಚ್ಚುವ, ಅವುಗಳ ವಿಲೇವಾರಿ ಕುರಿತಂತೆ ಮಾತ್ರ ಧ್ಯಾನಿಸುವ ಪೈಲ್ಸ್ ರೋಗಿ. ಸಹೋದ್ಯೋಗಿ ಮಹಿಳೆಯರು ಎಂತಹ ಡ್ರೆಸ್‌ನಲ್ಲಿ ಬಂದರೂ ಕಿರುಗಣ್ಣಲ್ಲೂ ನೋಡದ ಕಾಮೆಂಟ್ ಮಾಡದ ಎಂಎಂವಿ ಅರ್ಥಾತ್ ಮಹಾಮುನಿ ವಿಶ್ವಾಮಿತ್ರ. ಅಂತಹ ಮುನಿಯೂ ಮೇನಕೆಯ ಫಿಸಿಕ್‌ಗೆ ಫಿದಾ ಆದಕಾರಣ, ಇವನಿಗೆ ದುರ್ವಾಸನೆಂದರೇನೇ ಕರೆಕ್ಟ್ ಮ್ಯಾಚ್’ ಆದೀತೆಂಬ ತೀರ್ಮಾನಕ್ಕೆ ಸಹೋದ್ಯೋಗಿಗಳು ಬಂದಾಗಿದೆ. ಮಹಾ ಮಹಾ ಮುನಿಯನ್ನೇ ಕೆಡಿಸಿ ಮೂರಾಬಟ್ಟೆ ಮಾಡಿದವರು ಪ್ರಾಚೀನಯುಗದಲ್ಲೇ ಇರುವಾಗ ಇಂತಹ ಆಧುನಿಕ ಯುಗದಲ್ಲಿ ಇಲ್ಲದಿರಲುಂಟೆ. ಹೆಂಗಾದರೂ ಮಾಡಿ ಇವನಿಗೆ ಕುಡಿತದ ನಶೆ ಹತ್ತಿಸಬೇಕು. ಲಂಚದ ರುಚಿ ತೋರಿಸಬೇಕು. ಹೆಣ್ಣಿನ ಮಜಾ ಅಂಟಿಸಬೇಕು. ನಾನ್‌ವೆಜ್ ಟೇಸ್ಟ್ ಕಲಿಸಬೇಕು. ಅಟ್‌ಲೀಸ್ಟ್ ಸಿಗರೇಟ್ ಗೀಳನ್ನಾದರೂ ಹಿಡಿಸಲಿಕ್ಕೇಬೇಕೆಂದು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದಾಗಿದೆ. ಇನ್ನೊಂದು ಶಾರ್ಪ್ ಆಲೋಚನೆಯೂ ಗೆಳೆಯರ ತಲೆಯಲ್ಲಿ ಗಿರ‍್ಕಿ ಹೊಡೆಯಹತ್ತಿದೆ. ಹೆಂಗೂ ಟೈಪಿಣಿ ಶಿವಲಿಂಗಮ್ಮಂಗೆ ನಲವತ್ತಾದರೂ ಮದುವೆ ಯೋಗ ಕೂಡಿಬಂದಿಲ್ಲ. ಕಪ್ಪಾದರೂ ಕುಳ್ಳಾದ್ರೂ ಅಟ್ರ್ಯಾಕ್ಟಿವ್ ಶೇಪು. ಒಂದಿಷ್ಟು ರಿಸರ್ವ್ ಅನ್ನೋದೇನೂ ಅಪರಾಧವಲ್ಲವಲ್ಲ. ಗಿರೀಶನಿಗೆ ಖಂಡಿತ ಸೂಟ್ ಆಗ್ತಾಳೆ. ಜಾತಿ ಬೇರೆಯಾದರೇನು ಆಕೆಗಂತೂ ಅಭ್ಯಂತರವಿಲ್ಲವೆಂದಾಕೆಯೇ ಆಗೀಗ ಅಲ್ಲಲ್ಲಿ ಹಲವು ಸಲ ಸಾಂದರ್ಭಿಕವಾಗಿ ವ್ಯಕ್ತಪಡಿಸಿರುವುದೂ ಉಂಟು. ಯಾರದರೂ ಓಕೆ, ಎರಡನೇ ಸಂಬಂಧವಾದರೂ ನೋ ಪ್ರಾಬ್ಲಮ್. ಒಟ್ಟಾರೆ ಗಂಡಸದರಾಯಿತೆಂಬಷ್ಟು ರೋಸಿ ಹೋಗಿದ್ದಾಳೆ. ಅವಳನ್ನೇ ಗಿರೀಶನಿಗೇಕೆ ತಗಲ್ಹಾಕಬಾರದೆಂಬ ಮಸಲತ್ತೂ ಸಹೋದ್ಯೋಗಿಗಳ ನಡುವೆ ನಡೆದಿದೆ. ‘ನೋಡು ಗಿರೀಶು, ಒಂಟಿ ಜೀವನ್ದಾಗೆ ಏನು ಸುಖ ಐತಿ? ನಿಮ್ಮದು ಶಿವಲಿಂಗಮ್ಮಂದು ಈಡುಜೋಡು ಪರ್‌ಫೆಕ್ಟ್ ಆಗಿದೆ. ಸುಮ್ನೆ ಆಕೆನಾ ಲಗ್ನ ಆಗಿಬಿಡಿ. ಮುಪ್ಪಿನ ಕಾಲ್ದಾಗೆ ನಿಮ್ಮನ್ನು ನೋಡಿಕೊಳ್ಳೋಕಾರ ಒಬ್ಬರು ಬ್ಯಾಡ್ವಾ?’ ಅಧೀಕ್ಷಕರು ಆಗೀಗ ಕೊರೆದರೂ ಇಂವಾ ಜಪ್ಪಯ್ಯಾ ಅಂದವನಲ್ಲ. ಈ ಕಾರಣವಾಗಿ ಅವನ ಗಂಡಸ್ತನದ ಬಗ್ಗೆಯೇ ದಟ್ಟ ಗುಮಾನಿ. ಟಾಯ್ಲೆಟ್ಗೆ ಹೋದಾಗ ಅಂವಾ ಭದ್ರವಾಗಿ ಬೋಲ್ಟ್ ಹಾಕಿಕೊಳ್ಳೋದು, ತನ್ನ ರೂಮಿನಲ್ಲಿ ಎಂದೂ ಯಾರನ್ನೂ ಸೇರಿಸದೆ ಇರೋದು, ಎಂತಹ ಪರಿಸ್ಥಿತಿಯಲ್ಲೂ ಬೀದಿಬದಿ ನಿಂತು ಪ್ಯಾಂಟಿನ ಜಿಪ್ ಎಳೆದು ಯೂರಿನ್ ಪಾಸ್ ಮಾಡದಿರೋದು ಸಹ ಅವರುಗಳ ಗುಮಾನಿಗೆ ಪುಷ್ಠಿಸಿಕ್ಕಂತಾಗಿದೆ. ಹಲವರು ‘ಚಕ್ಕ’ ಅಂತ ಅಂದರೂ ನಂಬಲಾಗದೆ ಶಿವಲಿಂಗಮ್ಮನ ಪರ ಕಾಯಾ, ವಾಚಾ, ಮನಸಾ ಸಪೋರ್ಟಾಗಿ ನಿಂತು ಲಗ್ನಮಾಡಿಸಿ ಪುಣ್ಯಕಟ್ಟಿಕೊಳ್ಳಲು ಜಿದ್ದಿಗೆ ಬಿದ್ದಿದ್ದಾರೆ.

‘ಏನ್ರಿ ಗಿರೀಶ್, ಗಪ್‌ಕುಂತ್ರಿ? ನಿಮಗಿಂತ ಸಣ್ಣವರೆಲ್ಲಾ ಲಗ್ನ ಆಗ್ಲಿಕತ್ತಾರೆ. ನೀವೇನ್ ಅದರ ಬಗ್ಗೆ ಥಿಂಕ್ ಮಾಡಲ್ಲೇನ್ರಿ?’ ಅಧೀಕ್ಷಕರೇ ತರಾಟೆಗಿಳಿದರು. ಗಿರೀಶನದು ನಿರ್ಲಿಪ್ತ ನಗೆ. ‘ಯರ‍್ನಾರ ಲವ್‌ಗಿವ್‌ ಮಾಡಿ ಡಿಸ್ ಅಪಾಯಿಂಟ್‌ಮೆಂಟ್ ಆಗಿರೇನು?’ ಮೀನಾಕ್ಷಿ ಕೀಟಲೆ. ‘ಅದೆಲ್ಲಾ ಸೀರೆ ಕಂಡ ಕೂಡಲೆ ಜೊಲ್ಲು ಸುರಿಸೋ ಮಂದಿ ಮಾತಾತು ಬಿಡ್ರಿ. ನಮ್ಮ ಗಿರೀಶಗಿಂತ ಸರ್ವಸಂಗ ಪರಿತ್ಯಾಗಿಯುಂಟೆ ಜಗದಲಿ?’ ಇನ್ನೊಬ್ಬನ ಉಡಾಫೆ. ‘ಯಾರಾರ ಮನಸ್ಸಿನಾಗಿದ್ರೆ ಹೇಳ್ ಬಿಡು ತಮಾ. ನಾನೇ ಖುದ್‌ನಿಂತು ಲಗ್ನ ಮಾಡ್ಸಿಯೇ ಬಿಡ್ತೀನಿ, ತಲೆ ಮೇಲೆ ತಲೆ ಬೀಳ್ಳಿ ಇದರವ್ನ’ ಅಧೀಕ್ಷಕರ ಭರವಸೆಯಲ್ಲೂ ಅದೆಂತದೋ ಕುಹುಕದ ಕುಣಿತ. ‘ಸದಾಚಾರದ ಬಗ್ಗೆ ಸದಾ ಹರಿಕಥೆ ಮಾಡೋ ಇಂತಹ ಅರಸಿಕರನ್ನ ಈಗಿನ ಜಮಾನದಲ್ಲಿ ಯಾರ್ ಸಾರ್ ಲವ್ ಮಾಡೋರು?’ ಪಕ್ಕನೆ ನಗುತ್ತಾಳೆ ಪಂಕಜ. ಎಲ್ಲವನ್ನೂ ನಸುನಗುತ್ತಲೇ ಮೌನವಾಗಿ ಸ್ವೀಕರಿಸುವ ಗಿರೀಶ ಮೆಲ್ಲನೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ.

ಛತ್ರದ ಬಳಿ ಬಸ್ ಬಂದು ದೊಡ್ಡುಸಿರು ಬಿಟ್ಟು ನಿಲ್ಲುತ್ತಲೇ ಒಬ್ಬೊಬ್ಬರಾಗಿ ಇಳಿಯುವಾಗ ಮದುವೆ ಗಂಡು ಮಾರುತಿನೇ ನಗುನಗುತ್ತಾ ಬಂದು ಬರಮಾಡಿಕೊಂಡ. ‘ನೆಕ್ಸ್ಟ್‌ ನಮ್ಮ ಗಿರೀಶಂದೇ ಸಾರ್ ಮದುವೆ’ ಎಂದು ಅವನೂ ಅಣಕಮಾಡುತ್ತಾ ತನ್ನ ಕಾಣಿಕೆಯನ್ನು ನೀಡುತ್ತಾ ಬಂದ ಆಫೀಸಿನ ಅತಿಥಿಗಳಿಗೆ ತಂಗಲು ರೂಮಿನ ವ್ಯವಸ್ಥೆ ಮಾಡಿದ. ಮರುದಿನವೇ ಮುಹೂರ್ತ. ಮದುವೆ ಛತ್ರದ ತುಂಬಾ ಜನವೋ ಜನ. ಹೆಣ್ಣು-ಗಂಡುಗಳ ಫ್ಯಾಶನ್ ಮೇಳವೂ ಕಂಡಿತು. ಗಿರೀಶನ ಆಫೀಸಿನ ಪಡ್ಡೆಗಳಿಗೂ, ಬುಡ್ಡಾಗಳ ಕಣ್ಣುಗಳಿಗೆ ‘ಮಂಗಳೂರು ಬ್ಯೂಟಿಸ್’ ಸವಿಯುವ ಸುಯೋಗ. ಒಬ್ಬೊಬ್ಬರೂ ಮುಖಮರ್ಜನಮಾಡಿ ಬಟ್ಟೆ ಬದಲಿಸಿ ಚೆಲ್ಲಾಪಿಲ್ಲಿಯಾದರು. ಗಿರೀಶನೊಬ್ಬನೇ ಅನಾಥನಂತಾದ. ಕಾರಣ ಅವನ ನೀತಿಪಾಠದ ಕೊರೆತದ ಭಯ ಅವನಿಂದ ಎಲ್ಲರನ್ನೂ ದೂರ ಮಾಡಿತ್ತು. ಯಾರಾದರೂ ಜೋರಾಗಿ ನಕ್ಕರೂ, ಗಟ್ಟಿಯಾಗಿ ಮಾತನಾಡಿದರೂ ‘ನ್ಯೂಸೆನ್ಸ್’ ಅನ್ನುವ, ಡ್ರೆಸ್ ಮಾಡಿಕೊಂಡರೆ ‘ಓವರ್ ಆಯ್ತು’ ಎಂದು ಮುಜುಗರ ಪಡುವ ಪ್ರಾಣಿಯನ್ನು ಅವರಾದರೂ ಎನಿತು ಸೈಸಿಯಾರು. ಹೀಗಾಗಿ ಅವನೊಬ್ಬನೇ ನಿಂತಿದ್ದ. ಅವನಿಗೆ ತನ್ನನ್ನು ಯಾರೋ ನೋಡುತ್ತಿದ್ದಾರೆಂಬ ಅನುಮಾನ ಕಾಡಿ ಹಿಡಿಯಷ್ಟಾದ, ನಿಧಾನವಾಗಿ ತಲೆ ಎತ್ತಿ ನೋಡಲೋ ಬೇಡವೋ ಎಂಬಂತೆ ಅತ್ತ ದೃಷ್ಟಿ ಬೀರಿದ. ಆಕೆಯೂ ನೋಡುತ್ತಿರುವುದನ್ನು ಗಮನಿಸಿ ಅಲ್ಲಿಂದ ನಿರ್ಗಮಿಸಲು ಆಲೋಚಿಸುವಾಗಲೇ ಈಕೆಯನ್ನೆಲ್ಲೋ ನೋಡಿದ್ದೇನೆಂಬ ತಹತಹಕ್ಕೀಡಾಗಿ ಪುನಃ ನೋಡಿದ. ಅದೇ ಮಾಸದ ಚೆಲುವು, ನೀಳಕಾಯ, ಅದೇ ಬಟ್ಟಲು ಕಂಗಳು, ಅವಳೆ! ಅವಳೇ ಯಸ್! ರಾಜಲಕ್ಷ್ಮಿ. ತಾನೊಂದು ಕಾಲದಲ್ಲಿ ಪ್ರೀತಿಸುತ್ತಿದ್ದ ರಾಜಿ! ಕನಸೋ ಭ್ರಮೆಯೋ ಎಂದವನು ಮೀಸೆ ಕಿತ್ತುಕೊಳ್ಳುವಾಗಲೇ ಅವಳೇ ನದಿಯಂತೆ ಹರಿದು ಸನಿಹ ಬಂದಳು. ‘ಹೇಗಿದ್ದೀಯೋ ಗಿರಿ?’ ಎಂದು ಹಲ್ಲು ಕಿರಿದಳು. ಗಿರೀಶ ಒಂದು ಕ್ಷಣ ಮಾತೇ ಮರೆತ. ತನ್ನನ್ನು ತಾನೇ ಮರೆತು ಪಿಳಿಪಿಳಿಸಿದ. ‘ಯೋಯ್ ಗಿರಿ’ ಎಂದು ಮೈಮುಟ್ಟಿ ಅಲುಗಾಡಿಸಿದಳವಳು! ಅವರಿಬ್ಬರೂ ಮಾತನ್ನು ಹೀಗೆ ಆರಂಭಿಸುವುದೆಂದು ಎಲ್ಲಿಂದ ಆರಂಭಿಸಬೇಕೆಂದು ತಳಮಳಿಸಿ ತಡಕಾಡಿದರೂ ನಂತರ ತಮ್ಮ ಸುತ್ತ ಜನರಿದ್ದಾರೆ, ಮದುವೆಮನೆ ಎಂಬುದನ್ನೂ ಲೆಕ್ಕಿಸದೆ ನಾನ್‌ಸ್ಟಾಪ್ ಮಳೆಯಂತಾದರು. ಹಳೆಯ ದಿನಗಳ ಅವಲೋಕನಕ್ಕಿಳಿದರು.

***

ರಾಜಿ ಎಸ್.ಎಸ್.ಎಲ್.ಸಿ. ಓದುತ್ತಿದ್ದಳು. ಲೆಕ್ಕದಲ್ಲಿ ಡಲ್ಲು. ಗಿರೀಶ ಡಿಗ್ರಿ ಮುಗಿಸಿದ ನಿರುದ್ಯೋಗಿ. ಮನೆಯಲ್ಲಿ ಮದುವೆಯಾಗದ ಇಬ್ಬರು ಅಕ್ಕಂದಿರು, ಒಬ್ಬಳು ತಂಗಿ ಬೇರೆ. ಅಪ್ಪ ರಿಟೈರ್ಡ್‌ ಟೀಚರ್. ಗಾಳಿಗಿಟ್ಟ ಸೊಡರಿನಂತಹ ಪೆನ್ಷನ್ ಜೀವನ. ಮನೆಗೆ ಅನುಕೂಲವಾಗಲೆಂದು ಗಿರೀಶ ಎಸ್.ಎಸ್.ಎಲ್.ಸಿ. ಓದೋರಿಗೆ ಟ್ಯೂಶನ್ ಮಾಡಿ ನಾಲ್ಕು ಕಾಸು ಸಂಪಾದಿಸುತ್ತಿದ್ದ. ತಂಗಿ ಜಾನಕಿಯ ಕ್ಲಾಸ್‌ಮೇಟ್ ರಾಜಿಯೂ ಟ್ಯೂಶನ್‌ಗೆ ಬರುತ್ತಿದ್ದಳು. ಸುಂದರ ತರುಣ, ಮೃದು ಸ್ವಭಾವಿ ತಮ್ಮದೇ ಜನಾಂಗದ ಸಜ್ಜನ ಮನೆತನವೆಂದೆಲ್ಲಾ ಲೆಕ್ಕ ಹಾಕಿಯೇ ರಾಜಿ ಮುಂದುವರೆದಳು. ಗಿರೀಶ ಒಂದಿಷ್ಟು ಸಿಡುಕ. ಲೆಕ್ಕ ತಪ್ಪಾದಾಗ ತಂಗಿಗೆ ಏಟುಕೊಟ್ಟಂತೆಯೇ ರಾಜಿಗೂ ಏಟು ಬೀಳುತ್ತಿದ್ದವು. ಅವನಿಂದ ಕೆನ್ನೆಗೆ ಏಟು ತಿನ್ನಲೆಂದೇ ಲೆಕ್ಕ ತಪ್ಪಿದ್ದಳು. ಏಟಿನ ಗುಟ್ಟು ದಿನಗಳೆದಂತೆ ಗಿರೀಶನ ಪಂಚೇಂದ್ರಿಯಗಳಿಗೆ ಅರಿವಾಯಿತು. ನೆಕ್ಸ್ಟ್‌ ಕೆನ್ನೆ ಹಿಂಡಿದ. ನಕ್ಕಳು ನೋವಿನಲ್ಲೂ. ತಂಗಿ ಒಳಗೆ ಹೋದಾಗ ಇನ್ನೂ ಏನೇನೋ ಹಿಂಡಿ ಅವಳ ದೇಹಕ್ಕವನು ಪರಿಚಿತನಾದ. ಅದಕ್ಕಿಂತ ಹೆಚ್ಚು ಮುಂದುವರೆಯಲು ರಾಜಿ ರಾಜಿಯಾಗಲಿಲ್ಲ. ಅವಳು ಪಾಸಾದಾಗ ಅವಳಿಗಿಂತ ಇವನೇ ಹೆಚ್ಚು ಖುಷಿಪಟ್ಟ. ನಿಮ್ಮ ಮಗಳಿಗೆ ಪಿ.ಯು.ಗೂ ನಂದೇ ಟ್ಯೂಶನ್ ಎಂದು ಬೀಗಿದ. ಪಿ.ಯು. ಓದುವಾಗಲೇ ರಾಜಿ ಮದುವೆ ಎಂಜಿನಿಯರ್ ಸುಬ್ಬು ಜೊತೆ ಫಿಕ್ಸ್ ಆದಾಗ ದಿಗಿಲುಗೊಂಡದ್ದು ಗಿರೀಶ. ಅವಳು ಟ್ಯೂಶನ್‌ಗೆ ಬರುವುದಿರಲಿ ಕಾಲೇಜಿಗೆ ಹೋಗುವುದನ್ನೇ ಬಿಟ್ಟಿದ್ದಳು. ಕದ್ದುಮುಚ್ಚಿ ಹೇಗಾದರೂ ಅವಳನ್ನು ಭೇಟಿಯಾಗಲು ಶತಪ್ರಯತ್ನ ಮಾಡಿ ಜಯಶಾಲಿಯಾದ.

‘ಇದೇನ್ ರಾಜಿ ಹಿಂಗಾಯ್ತು! ನೀನಾದ್ರೂ ಹೆಂಗೆ ಒಪ್ಕೊಂಡೆ? ಮೋಸ ಅಲ್ವೇನೆ ಇದು’ ಗಳಗಳನೆ ಅತ್ತ. ‘ನಾನ್ ಏನ್ ತಾನೆ ಮಾಡ್ಲಿಕಾಯ್ತದೋ. ಸೆಲೆಕ್ಷನ್ ಮನೆಯವರದ್ದು’ ತಲೆಎತ್ತದೆ ಗೊಣಗಿದಳು ರಾಜಿ. ‘ಹಿರಿಯರು ಯಾವತ್ತೂ ಪ್ರೇಮಿಗಳ ಪಾಲಿಗೆ ವಿಲನ್ ಕಣೆ. ನಡಿಯೇ ಎಲ್ಲಾರ ಓಡಿ ಹೋಗಿ ಹೆಂಗಾರ ಬದುಕೋಣ’ ಕೈ ಹಿಡಿದೆಳೆದಾಡಿದ. ಕೈಕೊಸರಿಕೊಂಡಳು. ‘ಓಡಿ ಎಲ್ಲಿ ಹೋಗೋದು? ಮೂರು ಕಾಸಿನ ದುಡಿಮೆ ಎಂಬುದಿಲ್ಲ ನಿನಗೆ. ಹೆಂಗಾರ ಬದುಕೋದು ಅಂದಷ್ಟು ಸುಲಭವೆ?’ ‘ಬಿಡೆ, ಹೆಂಗೋ ಆದೀತು. ಧೈರ್ಯ ಒಂದಿರ‍್ಬೇಕು’.. ‘ನೋಡಪ್ಪಾ ನಾನಂತೂ ಪ್ರಾಕ್ಟಿಕಲ್ಲಾಗಿ ಯೋಚನೆ ಮಾಡೋಳು. ದುಡುಕು ತರವಲ್ಲ. ನಿನ್ನ ಮನೇಲಿ ಮದುವೆಯಾಗೋರು ಇಬ್ಬರು ಅಕ್ಕಂದಿರು, ತಂಗಿ ಒಬ್ಬಳಿದ್ದಾಳೆ. ಎಲ್ಲರೂ ನಂಬಿರೋದು ನಿನ್ನನ್ನೇ. ಅವರ್ನೆಲ್ಲಾ ಹೆಂಗೋ ಸಾಕ್ತಿ? ಮದುವೆ ಹೆಂಗೆ ಮಾಡಿ ಕೊಡ್ತಿಯಾ?’ ಗಟ್ಟಿಸಿ ಕೇಳಿದಳು. ಉತ್ತರಿಸಲು ತೋಚದೆ ಪಿಳಿಪಿಳಿಸಿದ. ‘ಹೋಗ್ಲಿಬಿಡತ್ತ. ನನ್ನ ಹೆಂಗೆ ಸಾಕ್ತಿ ಹೇಳು?’ ದಿಟ್ಟಿಸಿದಳು. ಕೋಪದಿಂದ ಕೆಂಪಾದ. ‘ಮುಂದಿನ ದಿನಗಳ ಬಗ್ಗೆ ಯೋಚಿಸೋರು ಪ್ರೇಮಿಗಳಲ್ಲ... ಹೇಡಿಗಳು ಕಣೆ. ಬದುಕೋಕೆ ಆಗದಿದ್ದರೆ ಸಾಯೋಣ ಬಿಡೆ’ ಬುಸುಗುಟ್ಟಿದ. ‘ಸ್ಟುಪಿಡ್. ಬದುಕೋಕಿಂತ ಸಾಯೋದೇ ಕಷ್ಟ ಗೊತ್ತಾ ಕಣೋ’ ರಾಜಿ ನಕ್ಕು ಬಿಟ್ಟಳು. ‘ಸಾಯೋರು ಹೇಡಿಗಳು ಕಣೋ’ ಹಂಗಿಸಿದಳು. ‘ಎಂಜಿನಿಯರ್ ಸಿಕ್ಕ ಅಂತ ಮೋಸ ಮಾಡ್ತಿಯೇನೇ ನಂಗೆ? ಹಂಗಾರೆ ನನ್ನ ಜೋಡಿ ನೀನು ಆಡಿದ್ದೆಲ್ಲಾ ನಾಟ್ಕಾನೇನೆ?’ ಸುಟ್ಟು ಬಿಡುವ ಪರಿ ನೋಡಿದ. ‘ಖಂಡಿತ ಪ್ರೇಮವೆ, ಸಾಯೋದು ಓಡಿ ಹೋಗೋದಷ್ಟೆ ಪ್ರೇಮಕ್ಕೆ ಪರಿಹಾರವಲ್ಲ. ಹಿರಿಯರ ಕೂಡೆ ಮಾತಾಡಿ ಒಪ್ಪಿಸೋ ತಾಕತ್ತೂ ಪ್ರೇಮಿಸಿದವನಿಗಿರಬೇಕು ಕಣೋ. ನಿನಗೋ ಜವಾಬ್ದಾರಿಗಳಿವೆ. ನಿಮ್ಮ ಮನೆಯವರಾದರೂ ಒಪ್ಪಿಯಾರೆ? ಮೊದ್ಲು ಅದನ್ನು ಲೆಕ್ಕ ಹಾಕು. ಜೀವನ ಆಲ್‌ಜಿಬ್ರಾ ಅಲ್ಲ’. ‘ನನಗೆ ಲೆಕ್ಕ ಹೇಳಿಕೊಡ್ತಿಯೇನೆ ಸಿಲ್ಲಿಗರ್ಲ್’ ಸಿಟ್ಟಿಗೆದ್ದ. ‘ಇಲ್ಲಪ್ಪಾ. ಮದುವೆ ವಿಷಯದಲ್ಲಿ ನಾನು ಲೆಕ್ಕ ತಪ್ಪೋಳಲ್ಲ ಅಂತಿದೀನಿ’ ಇಬ್ಬರೂ ಜಗಳವಾಡಿದರು. ಬಿಕ್ಕಿಬಿಕ್ಕಿ ಅತ್ತರು. ಮಾತು ಬಿಟ್ಟರು. ಮದುವೆ ಧಾಂಧೂಮ್ ಅಂತ ನಡೆದೇ ಹೋಯಿತು. ಇದೀಗ ರಾಜಿ ಐದಾರು ವರ್ಷದ ತನ್ನ ಮಗಳೊಂದಿಗೆ ಬಂದು ಮದುವೆ ಮನೆಯಲ್ಲಿ ಎದುರಾಗಿದ್ದಾಳೆ.

***

‘ನೀನು ಮೊದಲಿದ್ದಂಗೇ ಇದ್ದಿ ನೋಡು ರಾಜಿ’ ಆಂಟಿಕ್ ಪೀಸ್ ತರಾ. ಯಜಮಾರನ್ನೂ ಈಗ್ಲಾದ್ರೂ ನಂಗೆ ಪರಿಚಯ ಮಾಡಿಸಲ್ಲೇನು?’ ಇವನೇ ಆತುರ ತೋರಿದ. ‘ಸಾರಿ ಕಣೋ ಅವರು ತೀರಿಕೊಂಡು ವರ್ಷವಾಯಿತಪ್ಪಾ’ ದೊಡ್ಡದಾದ ನಿಟ್ಟುಸಿರಿಟ್ಟಳು. ಬಳೆ ಕುಂಕುಮ ತೆಗೆದಿಲ್ಲವಾದ್ದರಿಂದ ಇವನು ತಬ್ಬಿಬ್ಬಾದ. ‘ನೀನಂತೂ ಲಂಗದಾವಣೆ ಹಾಕಿದ್ರೆ ಈಗ್ಲೂ ಹುಡುಗಿನೇ ರಾಜಿ. ಒಂದು ಮಗುವಿನ ತಾಯಿ ಅಂತ ಗೆಸ್ಸೂ ಮಾಡೋಕಾಗಲ್ಲ!’ ಮತ್ತದೇ ಆರಾಧಾನ ನೋಟ ಅವನದು. ‘ನೀನು ಅಷ್ಟೆ. ಹೇರ್‌ಡೈ ಮಾಡ್ಕೊಂಡ್ರೆ ಹುಡಗ್ನೇ ಬಿಡು. ಅದಿರ‍್ಲಿ ನಿನ್ನ ಕಥೆ ಹೇಳು? ಮಕ್ಕಳೆಷ್ಟು? ಏನು ಓತ್ತಿವೆ?’ ಮುಗುಳ್ನಕ್ಕಳು. ‘ಮದುವೆಯಾದ್ರೆ ತಾನೆ ಮಕ್ಕಳು’ ನಿರಾಳ ನಗೆ ನಕ್ಕುಬಿಟ್ಟ ಗಿರೀಶ. ‘ಅಯ್ಯೋ ನಿನ್ನ! ಮದುವೆಯಾಗಲಿಲ್ವೇನೋ?’ ಅವಳ ಸಂತಾಪದ ನೋಟ ಅವನ ಮೈತುಂಬಾ ಹರಿದಿತು. ‘ಇಲ್ಲಮ್ಮ. ನಿನ್ನ ನೆನಪಲ್ಲಿ ಹಂಗೆ ಉಳಿದುಬಿಟ್ಟೆ ಕಣೆ... ಅಗ್ರಿಕಲ್ಚರ್ ಅಫೀಸ್‌ನಲ್ಲಿ ಕ್ಲರ್ಕ್ ಆಗಿದ್ದೀನಿ. ಒಬ್ಬರು ಅಕ್ಕ, ತಂಗಿ ಜಾನ್ಕಿ ಲಗ್ನ ಮಾಡ್ದೆ. ಒಬ್ಬಳು ಹಂಗೇ ಉಳ್ಕೊಂಡ್ಳು ಪಾಪ. ಅಪ್ಪ ಅಮ್ಮ ತೀರ‍್ಕೊಂಡ್ರು. ಅಕ್ಕ ನನ್ನ ಜೊತೆ ಇದಾಳೆ ಅಥವಾ ಅವಳ ಜೊತೆ ನಾನಿದ್ದೀನಿ. ಈಗ ನನಗೇನಂತಹ ಜವಾಬ್ದಾರಿಗಳಿಲ್ಲ ರಾಜಿ’ ಖುಷಿಖುಷಿಯಾಗಿ ಹೇಳಿಕೊಂಡ. ಇಬ್ಬರೂ ಹಿಗ್ಗಿನಿಂದಲೇ ಮದುವೆ ಮನೆಯಲ್ಲಿ ಪಾಲ್ಗೊಂಡು ಸಹೋದ್ಯೋಗಿಗಳ ಕಣ್ಣಲ್ಲಿ ಪ್ರಶ್ನೆ ಮೂಡಿಸಿದರು. ಇವನಂತೂ ಗೆಳೆಯರನ್ನೂ ಮರೆತು ಅವಳ ಹಿಂದೆ ಮುಂದೆ ಸುತ್ತಿದ. ಊಟ ಮುಗಿಸಿ ಹೊರಡುವಾಗ ರಾಜಿಯೇ ಸನಿಹ ಬಂದಳು. ‘ನಿನ್ನ ಹತ್ತಿರ ಇಂಪಾರ್ಟೆಂಟ್ ವಿಷಯ ಒಂದನ್ನು ಡಿಸ್ಕಸ್ ಮಾಡೋದಿದೆ ಕಣೋ. ಅದು ನನ್ನ ಬದುಕಿನ ಭವಿಷ್ಯವನ್ನು ನಿರ್ಧರಿಸುವಂತದ್ದಿದೆ. ನಾಳೆ ಊರಿಗೆ ಹೊರಡುವ ಮುನ್ನ ನನ್ನ ಮನೆಗೆ ಬರ್ದೆ ಹೋದಿಯಾ ಮತ್ತೆ’ ಪದೆ ಪದೆ ಕರೆದಳು. ‘ಓಹ್! ಮುಂದಿನ ಭವಿಷ್ಯದ ಬಗ್ಗೆನಾ... ಖಂಡಿತ ಬರ್ತೇನೆ ನಾನೂ ಮಾತನಾಡೋದಿದೆ, ಇಷ್ಟಗಲ ನಕ್ಕ. ವಿಳಾಸ, ಫೋನ್ ನಂಬರ್ ಕೊಟ್ಟಳು. ಇವನಂತೂ ಒಂಟಿಕಾಲ ಮೇಲೆ ನಿಂತಿದ್ದ. ಅವಳು ಹೋದೊಡನೆ ಗೆಳೆಯರ ಗೇಲಿಗೆ ತುತ್ತಾದ. ‘ಬಿಡ್ರಲೆ. ಆಕೆ ನಮ್ಮೂರಿನ ಹೆಣ್ಣುಮಗಳು. ನನ್ನ ಹತ್ತಿರ ಒನ್ ಸಪಾನೆ ಟೈಮ್ ಲಾಂಗ್ ಲಾಂಗ್ ಎಗೋ… ಟ್ಯೂಶನ್‌ಗೆ ಬರ್ತಿದ್ಳು ಕಣ್ರಯ್ಯ. ಒಂದಿಷ್ಟು ಸೋಷಿಯಲ್ಲು’ ಎಲ್ಲರ ಬಳಿ ಅಲವತ್ತುಕೊಂಡ. ಆದರೆ ಅಧೀಕ್ಷಕ ಶೀನಪ್ಪನವರ ಬಳಿ ರಾತ್ರಿಯೆಲ್ಲಾ ತನ್ನ ಹಳೆಯ ಪ್ರೇಮಕಹಾನಿ ಕುರಿತು ಪಿಸುಗಿದ. ಅವರು ಹಿರಿಯರಾದ್ದರಿಂದ ಕನಿಕರ ತೋರಿದರಲ್ಲದೆ ಹಿಗ್ಗಿದರು. ‘ನೋಡು ತಮಾ. ವಿಧವೆಗೆ ಬಾಳು ಕೊಡೋ ಸ್ವಚ್ಛ ಮನಸ್ಸು ನಿಂಗಿದ್ರೇಳು. ನಾನೆ ಆಯ್ಯಮ್ಮಂತಾವ ಮಾತಾಡ್ತೀನಿ. ಏನಂತಿಯಾ?’ ಶೀನಪ್ಪನವರು ಅವನ ಮೋರೆ ನೋಡಿದಾಗ ಹುಳ್ಳಗೆ ನಕ್ಕ.
ಮರುದಿನ ಮದುವೆ ಮುಗಿದೊಡನೆ ಶೀನಪ್ಪನವರ ಜೊತೆ ಅವಳ ಮನೆಗೆ ಹೋದ. ಉಳಿದವರು ಮಲ್ಪೆ ಬಂದರು ಕಡೆ ಹೋಗಿದ್ದರು. ರಾಜಿ ಸಡಗರದಿಂದಲೇ ಬರಮಾಡಿಕೊಂಡಳು. ಕಾಫಿ ಉಪ್ಪಿಟ್ಟು ಸಮಾರಾಧನೆಯೂ ನಡೆಯಿತು. ‘ಏನೋ ಮಾತನಾಡೋದಿದೆ ಅಂದ್ಯಲ್ಲಪ್ಪಾ ಹೇಳು ಮತ್ತೆ’ ಅವಳೇ ಮಾತಿಗಿಳಿದಳು. ‘ಮೊದ್ಲು ನಿನ್ನ ಭವಿಷ್ಯದ ಬಗೆಗಿನ ಮಾತಾಗ್ಲಿ. ಲೇಡಿಸ್ ಫಸ್ಟ್’ ಅಂದು ಕುಲುಕುಲು ನಕ್ಕ. ನಿರಾಂತಕವಾಗಿ ಲವಲವಿಕೆಯಿಂದಿರುವ ಅವಳು ಗಿರೀಶನ ಮೈನಲ್ಲಿ ಕಿಚ್ಚು ಹೊತ್ತಿಸಿದಳು. ‘ಗಿರಿ, ನನ್ನ ಗಂಡ ತೀರಕೊಂಡ್ಮೇಲೆ ಗಂಡನ ಕಛೇರಿಯಲ್ಲೇ ನನಗೂ ಕೆಲಸ ಸಿಕ್ಕಿದೆ... ಕಾಂಪನ್ಸೇಟರಿ ಗ್ರೌಂಡ್ಸ್ ಮೇಲೆ. ಅಲ್ಲಿನ ಅಧಿಕಾರಿ ತುಂಬಾ ಒಳ್ಳೆಯವರು. ಬೇಜಾನ್ ಆಸ್ತಿ ಇದೆ. ಅವರಿಗೂ ನಿನ್ನಷ್ಟೇ ವಯಸ್ಸಿರಬಹುದು. ಇಬ್ಬರು ಮಕ್ಕಳಿದ್ದಾರೆ...ಮಕ್ಕಳು ಫಾರಿನಲ್ಲಿ ಕೆಲಸದಲ್ಲಿದ್ದಾರೆ. ಅಧಿಕಾರಿ ವಿಡೋಯರ್. ಒಳ್ಳೆಯ ಸೌಂಡ್ ಪಾರ್ಟಿ. ಮೇಲಾಗಿ ಪ್ರಗತಿಪರ ಆಲೋಚನೆ ಉಳ್ಳವರು. ಅವರೂ ಈಗ ಒಂಟಿ. ನನಗೂ ಅಭದ್ರತೆ ಕಾಡುತ್ತಿರುವಾಗಲೇ ಅವರಾಗಿಯೇ ಮದುವೆ ಪ್ರಪೋಸಲ್ ಇಟ್ಟರು. ನಿಂಗೊತ್ತಲ್ಲಪ್ಪ... ನಾನಂತೂ ಯಾವತ್ತೂ ಪ್ರಾಕ್ಟಿಕಲ್ ಆಗಿ ಯೋಚ್ನೆ ಮಾಡೋಳು. ನಾನೆಂದೂ ಲೆಕ್ಕ ತಪ್ಪೋಳಲ್ಲ ಅಂತ ನಿಂಗೊತ್ತಲ್ಲ. ಒಪ್ಕೊಂಡಿದ್ದೀನಿ. ನೆಕ್ಸ್ಟ್‌ ಮಂಥೇ ಕೊಲ್ಲೂರಿನಲ್ಲಿ ಸಿಂಪಲ್ ಆಗಿ ಮ್ಯಾರೇಜ್ ಆಗ್ತಿದ್ದೀವಿ...’ ಅವಳು ಹೇಳುತ್ತಲೇ ಹೋದಳು. ಗಿರೀಶ ಕೂತಲ್ಲೇ ಶಿಲೆಯಾದ. ಅಧೀಕ್ಷಕ ಶೀನಪ್ಪನವರಿಗೆ ಮುಜುಗರವಾಯಿತು. ‘ಸರಿಯಮ್ಮ ಅದಕ್ಕೆ ನಮ್ಮ ಗಿರೀಶ ಏನ್ ಮಾಡ್ಬೇಕು ಅಂತಿ?’ ಅವಳ ಮಾತು ತುಂಡರಿಸಿ ಒರಟಾಗಿಯೇ ಪ್ರಶ್ನಿಸಿದರು ಶೀನಪ್ಪ. ‘ನಮ್ಮ ಮನೆಯವರು ತುಂಬಾನೇ ಆರ್ಥೋಡಾಕ್ಸ್. ನಮ್ಮದೀಗ ಇಂಟರ್‌ಕಾಸ್ಟ್ ಮ್ಯಾರೇಜ್. ಮನೆಯವರಾರೂ ಖಂಡಿತ ಬರೋಲ್ಲ. ಹೆಣ್ಣಿನ ಪರವಾಗಿ ಗಿರಿನಾದ್ರು ಇರ್ಲಿ ಅಂತ ನನ್ನಾಸೆ. ನೀವೂ ಕೂಡ ಬಂದ್ರ ಐ ಆಮ್ ವೆರಿ ಹ್ಯಾಪಿ’ ಅಂದಳು, ಗಿರೀಶನತ್ತ ವಾರೆ ನೋಟ ಬೀರಿ. ಅವನ ಕಣ್ಣಂಚಿನಲ್ಲಿ ತುಂಬಿ ತುಳುಕಾಡುತ್ತಿದ್ದ ಬಿಂದುಗಳನ್ನವಳು ಆನಂದ ಭಾಷ್ಪ ಅಂದುಕೊಂಡಳು. ‘ನಂಗೊತ್ತಪ್ಪ. ಹಾಲಿನಂತಹ ಮನಸ್ಸು ನಿಂದು, ನೀನು ತಪ್ಪು ತಿಳಿಯೋದಿಲ್ಲಂತ್ಲೇ ನಿನ್ನ ಹತ್ತಿರ ಬಾಯಿಬಿಟ್ಟೆ. ತಪ್ಪಿಸದೆ ಬರಬೇಕು ಕಣೋ. ನಿನ್ನ ಆಶೀರ್ವಾದವೂ ಬೇಕು ನಂಗೆ’ ಒಂತರಾ ಒತ್ತಾಯಿಸಿದಳು.

‘ನನಗೆ ನೀನು ಎರಡನೇ ಬಾರಿಯೂ ಅವಕಾಶ ಕೊಡಲಿಲ್ಲವಲ್ಲೆ?’ ಎಂದು ಹೇಳಬೇಕೆಂದುಕೊಂಡ ಅವನ ದನಿ ಈಚೆ ಬರಲಾಗದೆ ಒಳಗೇ ಹೂತು ಹೋಯಿತು. ಕೋಲೆ ಬಸವನಂತೆ ತಲೆಯಾಡಿಸಿದ. ಕಾರೊಂದು ಮನೆಯ ಮುಂದೆ ಬಂದು ನಿಂತ ಶಬ್ದ ಕೇಳಿತು. ‘ಸರ್ ಬಂದ್ರು... ಸರ್ ಬಂದ್ರು...’ ರಾಜಿ ಕುಣಿದಾಡೋದೊಂದು ಬಾಕಿ. ಬಾಗಿಲ ಬಳಿ ಬೂಟ್ ಸದ್ದಿನೊಡನೆ ಒಳ ಬಂದ ಆಗಾಧ ಆಕೃತಿಯ ನೆರಳೊಂದು ಗಿರೀಶನನ್ನಾವರಿಸಿತು.

*******

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT