ಬುಧವಾರ, ಸೆಪ್ಟೆಂಬರ್ 29, 2021
20 °C

ಬೇಲೂರು ರಘುನಂದನ್ ಅವರ ಕಥೆ: ಸ್ಕೇರಿ ಹೌಸ್

ಬೇಲೂರು ರಘುನಂದನ್ Updated:

ಅಕ್ಷರ ಗಾತ್ರ : | |

Prajavani

ಮಧುರಾ ಮತ್ತು ಮಹೇಶ್ ವಾಸವಿದ್ದ ಐದು ಅಂತಸ್ತಿನ ಬಿಲ್ಡಿಂಗು, ಬೆಂಗಳೂರು ಮಹಾನಗರದ ಹೊರವಲಯದಲ್ಲಿತ್ತು. ಇವರು, ಆ ಬಿಲ್ಡಿಂಗಿನ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದರು. ಮೂರು ಬೆಡ್ ರೂಮಿನ ದೊಡ್ಡ ಮನೆಯದು. ವಿಶಾಲವಾದ ಮಲಗುವ ಕೋಣೆ, ಜೊತೆಗೆ ಅಟ್ಯಾಚ್ ಬಾತ್ ರೂಂ, ಪುಟ್ಟ ದೇವರ ಕೋಣೆ, ಎರಡು ದೊಡ್ಡ ಬಚ್ಚಲುಗಳು, ಅಗಲವಾದ ನಡುಮನೆ, ಸುಸಜ್ಜಿತವಾದ ಅಡುಗೆ ಕೋಣೆ ಆ ಮನೆಯಲ್ಲಿ ಇತ್ತು. ಮಾಸ್ಟರ್ ಬೆಡ್ ರೂಂನಿಂದ ಹೊರಗೆ ನೋಡಲು ಒಂದು ಬಾಲ್ಕನಿಗೆ ಕಬ್ಬಿಣದ ಸರಳುಗಳಿಂದ ಆವರಿಸಿಕೊಂಡು ಭವ್ಯವಾಗಿತ್ತು. ಬಾಲ್ಕನಿಯಲ್ಲಿ ನಿಂತು ಎದುರಿಗೆ ನೋಡಿದರೆ ರಸ್ತೆ, ಬಲಕ್ಕೆ ನೋಡಿದರೆ ಈಜುಕೋಳ ಕಾಣುತ್ತಿತ್ತು. ಭದ್ರತೆಯ ದೃಷ್ಟಿಯಿಂದ ಸೆಕ್ಯೂರಿಟಿ ಮತ್ತು ಸಿ.ಸಿ ಕ್ಯಾಮೆರಾಗಳು ಹಾಗೂ ಅನುಕೂಲದ ದೃಷ್ಟಿಯಿಂದ ಲಿಫ್ಟು, ವಿದ್ಯುಚ್ಛಕ್ತಿ ಸದಾ ಇರುವಂತೆ ಕಾಪಾಡುವ ಜನರೇಟರ್‌ಗಳು, ಬಿಸಿ ನೀರಿಗೆ ಸೋಲಾರು, ಪಾರ್ಕಿಂಗು ಹಾಗೂ ಸಿರಿವಂತಿಕೆಗೆ ಏನೇನು ಅನುಕೂಲಗಳಿರಬೇಕೊ ಅದೆಲ್ಲವೂ ಆ ಬಿಲ್ಡಿಂಗ್‌ನಲ್ಲಿತ್ತು. ಮಧುರಾ ಮತ್ತು ಮಹೇಶ್ ಇಬ್ಬರೂ ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪಾಳಿಗಳಲ್ಲಿ ದುಡಿಯವ ಇಬ್ಬರೂ ಸದಾ ಧಾವಂತ ಮತ್ತು ಒತ್ತಡದ ಬದುಕಿನಲ್ಲಿ ಜೀವನ ನಿರ್ವಹಿಸುತ್ತಿದ್ದರು.

ಮಧುರಾ ಮತ್ತು ಮಹೇಶ್ ದಂಪತಿಗಳಿಗೆ ಮನಸ್ವಿ ಎಂಬ ಐದು ವರ್ಷದ ಮಗನಿದ್ದನು. ಜಗತ್ತನ್ನು ಬೆರಗಿನಿಂದ ನೋಡುವ ಪಿಳಿಪಿಳಿ ಕಣ್ಣು, ಸದಾ ಅಮ್ಮನ ಆಸರೆಯನ್ನೆ ಬಯಸುವ ಹುಡುಗನಿವನು. ಮಗನಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂಬ ಪ್ರೀತಿಯ ಮನಸ್ಸು ತಂದೆ-ತಾಯಿಯರಿಗೂ ಇತ್ತು. ಅಮ್ಮ ಮನೆಯಲ್ಲಿಲ್ಲದಿದ್ದಾಗ ಅಪ್ಪ, ಅಪ್ಪ ಮನೆಯಲ್ಲಿಲ್ಲದಿದ್ದಾಗ ಅಮ್ಮ ಇಬ್ಬರಲ್ಲೊಬ್ಬರು ಮಗನನ್ನು ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದರು. ಮನೆ ತುಂಬಾ ಆಟಿಕೆಗಳು, ಕಾಲಕಳೆಯಲು ವಿಡಿಯೋ ಗೇಮ್‌ಗಳಿದ್ದ ಟ್ಯಾಬು, ರಾಶಿ ರಾಶಿ ಬಣ್ಣದ ಪೆನ್ಸಿಲ್‌ಗಳು, ಹತ್ತಿಪ್ಪತ್ತಾರು ಬಗೆಯ ಸಾಫ್ಟ್ ಟಾಯ್ಸ್‌ಗಳು, ಮಾತನಾಡುವ ಗೊಂಬೆ, ಮೋಟಾರುಗಳಿರುವ ಪುಟ್ಟ ಕಾರು, ಸ್ಕೂಟರುಗಳು ಎಲ್ಲವೂ ಆ ಮನೆಯಲ್ಲಿ ಮನಸ್ವಿಗಾಗಿಯೇ ಇತ್ತು. ಅಲ್ಲದೆ ಬೇಕೆನಿಸಿದಾಗ ತಿನ್ನಲು ಚಾಕ್ಲೆಟು, ಬಿಸ್ಕತ್, ಹಣ್ಣುಹಂಪಲು ಮತ್ತು ಕುರುಕಲು ತಿಂಡಿಗಳು ಯಾವಾಗಲೂ ಮನಸ್ವಿಗೆ ಸಿಗುವಂತೆ ಡೈನಿಂಗ್ ಟೇಬಲ್‌ನ ಮೇಲೆ, ಫ್ರಿಡ್ಜ್ ಒಳಗೆ ಇರುತ್ತಿತ್ತು. ಮನಸ್ವಿಯನ್ನು ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂಬ ಅಭಿಪ್ರಾಯ ಮಧುರಾ ಮತ್ತು ಮಹೇಶ್ ಅವರದಾಗಿತ್ತು. ಮಗನನ್ನು ನೋಡಿಕೊಳ್ಳುವ ವಿಚಾರವಾಗಿ ಅವರಿಬ್ಬರ ನಡುವೆ ಸಾಕಷ್ಟು ಬಾರಿ ಜಗಳವಾಗುತ್ತಿತ್ತು ಮತ್ತು ಇಬ್ಬರೂ ಕೆಲಸ ಬಿಡಲು ಮನಸ್ಸಿಲ್ಲದೆ ಮಗನನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿಲ್ಲ ಎಂಬ ಕೊರಗಿನಲ್ಲೂ ದಿನಗಳನ್ನು ದೂಡುತ್ತಿದ್ದರು.

ಮೊದಮೊದಲು ಮನಸ್ವಿಯನ್ನು ನೋಡಿಕೊಳ್ಳಲು ಕೈತುಂಬಾ ಸಂಬಳ ಕೊಟ್ಟು ಕೆಲಸದ ಹೆಂಗಸನ್ನು ಒಂದೆರಡು ಬಾರಿ ನೇಮಿಸಿದ್ದರು. ಮೊದಲು ಕೆಲಸಕ್ಕೆ ಬಂದವಳು ಸದಾ ಕಾಯಿಲೆಯಿಂದ ನರಳುತ್ತಿದ್ದಳು. ಎರಡನೇ ಬಾರಿ ಕೆಲಸಕ್ಕೆ ಬಂದವಳು ಮನಸ್ವಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕೆಂದು ಮನಸ್ಸಿಗೆ ಬಂದಂತೆ ಹೊಡೆದು ಗದರಿಸುತ್ತಿದ್ದಳು. ಇದರಿಂದ ಮನಸ್ವಿ ಮೂಲೆ ಸೇರಿದ ನಾಯಿ ಮರಿಯಂತೆ ಭಯದಿಂದ ತರತರ ನಡುಗುತ್ತಿದ್ದ ಮನಕಲಕುವ ದೃಶ್ಯವನ್ನು ಗಂಡ ಹೆಂಡತಿಯರಿಬ್ಬರೂ ಆಫೀಸಿನಿಂದಲೇ ತಮ್ಮ ಮೊಬೈಲ್ ಫೋನಿನಲ್ಲಿ ಸಿ.ಸಿ.ಕ್ಯಾಮೆರಾ ಮೂಲಕ ನೋಡುತ್ತಿದ್ದರು. ಸದಾ ಯಾವುದಾದರೊಂದು ಮೀಟಿಂಗ್‌ಗಳಲ್ಲಿ ಇರುತ್ತಿದ್ದ ಇಬ್ಬರೂ ತಕ್ಷಣಕ್ಕೆ ಮನೆಗೆ ಬರಲಾರದೇ ವಿಲವಿಲ ಒದ್ದಾಡುತ್ತಿದ್ದರು. ಒಬ್ಬರಿಗೊಬ್ಬರು ಫೋನ್ ಮಾಡಿಕೊಂಡು ಅರುಚಾಡಿ ಕಿರುಚಾಡಿ ಜಗಳವಾಡಿಕೊಳ್ಳುತ್ತಿದ್ದರು. ಹೀಗೆಲ್ಲಾ ನಡೆದ ದಿನ ಮನೆಗೆ ಕಾರ್ ಡ್ರೈವ್‌ ಮಾಡಿಕೊಂಡು ಬರುವಾಗಲೆಲ್ಲ ಇದಕ್ಕೆಲ್ಲ ದಾರಿ ಹುಡುಕಬೇಕು ಎಂದು ಯೋಚಿಸುತ್ತಾ ಮನೆಗೆ ಬಂದವರೇ ಇಬ್ಬರೂ ಮೌನಕ್ಕೆ ಶರಣಾಗಿಬಿಡುತ್ತಿದ್ದರು. ಕೆಲಸದವಳಿಗೆ ಬೈದು ಕೊಡಬೇಕಾದ ದುಡ್ಡನ್ನು ಕೊಟ್ಟು ಮನೆಗೆ ಕಳಿಸಿ ಮತ್ತೆ ಜಗಳವಾಡಿದ್ದರು. ಜಗಳ ತಣ್ಣಗಾದ ಬಳಿಕ ಮನಸ್ವಿಯನ್ನು ಮಧುರಾ ಅಪ್ಪಿ ಮುದ್ದಾಡಿ ಅವನನ್ನು ಮತ್ತೆ ಆಟಿಕೆಗಳ ಜೊತೆಗೆ ಬಿಟ್ಟು ಅಡುಗೆ ಕೋಣೆಗೆ ಹೋಗುತ್ತಿದ್ದಳು. ಆಟವಾಡಿ ಬೇಸತ್ತು ಮತ್ತೆ ಅಪ್ಪನ ಬಳಿ ಮನಸ್ವಿ ಬಂದರೆ, ಕಾರ್ಟೂನ್ ಚಾನೆಲನ್ನು ಹಾಕಿ ಟಿ.ವಿಯ ಮುಂದೆ ಕೂರಿಸಿಬಿಡುತ್ತಿದ್ದನು. ಮಾತನಾಡುವ ಗೊಂಬೆ, ಕಾರ್ಟೂನ್‌ಗಳ ಸಖ್ಯದಿಂದ ಮನಸ್ವಿಯೂ ಕೂಡ ಕಾರ್ಟೂನ್‌ನ ಭಾಷೆಯನ್ನೇ ಕಲಿತು ಬಿಟ್ಟಿದ್ದನು.

ಗಂಡ ಹೆಂಡಿರ ಜಗಳವೆಲ್ಲ ಮುಗಿದ ಮೇಲೆ ಮೂವರು ಒಟ್ಟಿಗೆ ಕುಳಿತು ಊಟ ಮಾಡಿ ಮಲಗುವ ಮುಂಚೆ ಅಬ್ಬರವಿಲ್ಲದ ಸಂಗೀತ ಕೇಳಿ, ಮನಸ್ವಿಯನ್ನು ಒಂದು ಕೋಣೆಯಲ್ಲಿ ಮಲಗಿಸಿ ಇಬ್ಬರೂ ತಮ್ಮ ಕೋಣೆಗೆ ಮಲಗಲು ಹೋಗುತ್ತಿದ್ದರು. ಎಷ್ಟೋ ಬಾರಿ ಮನಸ್ವಿ ಅಮ್ಮನ ಜೊತೆಯೇ ಮಲಗುತ್ತೇನೆ ಎಂದು ಹಠ ಮಾಡಿದಾಗ ಅಪ್ಪ ಗದರಿ ‘ಒಬ್ಬನೇ ಮಲಗಬೇಕು ಕಂದ’ ಎಂದು ಗಡಸು ಧ್ವನಿಯಲ್ಲಿ ಹೇಳಿಬಿಡುತ್ತಿದ್ದ. ಮರು ಮಾತಾಡದೇ ಮನಸ್ವಿ ಮುದುರಿಕೊಂಡು ಮಲಗುತ್ತಿದ್ದ. ಮಗನನ್ನು ತನ್ನ ಜೊತೆಯೇ ಮಲಗಿಸಿಕೊಳ್ಳಬೇಕೆಂಬ ಹಂಬಲ ಮಧುರಾಳಿಗಿದ್ದರೂ ಅವರು ಬದುಕುತ್ತಿದ್ದ ಜೀವನ ಶೈಲಿ ಅದಕ್ಕೆ ದಾರಿ ಮಾಡಿಕೊಡುತ್ತಿರಲಿಲ್ಲ. ಅನೇಕ ವೇಳೆ ಮಧುರ, ಮಗ ಮಲಗುವ ತನಕ ಪಕ್ಕದಲ್ಲಿ ಮಲಗಿ ಮನಸ್ವಿಯು ತಾಯಿಯ ಕೈಬಿಡದಿದ್ದಾಗ ಮನುಷ್ಯ ಗಾತ್ರದ ಟೆಡ್ಡಿ ಬೇರ್‌ನ ಕೈಯನ್ನು ಅವನ ಕೈಗಿತ್ತು ತಾನು ಮಲಗಲು ಹೋಗುತ್ತಿದ್ದ ಉದಾಹರಣೆಗಳು ಇದ್ದವು. ನಡುರಾತ್ರಿಯಲ್ಲಿ ಮನಸ್ವಿಗೆ ಎಚ್ಚರವಾದರೆ ‘ಜೋರಾಗಿ ಅಳಬಾರದು, ಜೋರಾಗಿ ನಗಬಾರದು’ ಎಂದೆಲ್ಲಾ ಹೇಳಿಕೊಟ್ಟ ಪಾಠಗಳು ಕಣ್ಣ ಮುಂದೆ ಬಂದು ಅಳುವನ್ನು ನುಂಗಿಬಿಡುತ್ತಿದ್ದನು. ಒಮ್ಮೊಮ್ಮೆ ಭಯ ತಡೆಯಲಾಗದಿದ್ದಾಗ ಒಂದು ಗೊಂಬೆಯ ಜೊತೆಗೆ ಮತ್ತೊಂದು ಗೊಂಬೆಯನ್ನು ಮಲಗಿಸಿ ಅಪ್ಪ- ಅಮ್ಮ ಎಂದು ಅವನ್ನು ಸಂಭೋದಿಸಿ, ಅವುಗಳ ಜೊತೆಗೆ ಮಾತನಾಡುತ್ತಾ ತನ್ನ ಭಯ ಆತಂಕಗಳನ್ನು ಅವುಗಳಿಗೆ ಹೇಳುತ್ತಾ ಮಲಗಿಬಿಡುತ್ತಿದ್ದನು. ಹೀಗೆ ಪಕ್ಕದಲ್ಲಿ ಮಲಗಿಸಿಕೊಂಡ ಅಪ್ಪನ ಗೊಂಬೆಯ ಜೊತೆಗೆ ಕೋಪಿಸಿಕೊಳ್ಳುತ್ತಾ, ಅಮ್ಮನ ಗೊಂಬೆಯನ್ನು ಪ್ರೀತಿಸಿ ಮುದ್ದುಮಾಡುತ್ತಾ ರಾತ್ರಿಯನ್ನು ಕಳೆಯುತ್ತಿದ್ದನು. ಎಷ್ಟೋ ರಾತ್ರಿಗಳು ಭಯದಲ್ಲಿ ಹಾಸಿಗೆಯಲ್ಲೇ ಮೂತ್ರ ಮಾಡಿಬಿಡುತ್ತಿದ್ದನು. ಈ ಕಾರಣಕ್ಕಾಗಿ ತಂದೆ ಗದರಿ, ಒಮ್ಮೊಮ್ಮೆ ಪ್ರೀತಿಯಿಂದ ‘ಹಾಸಿಗೆಯಲ್ಲಿ ಮೂತ್ರ ಮಾಡಬಾರದು’ ಎಂದು ಹೇಳುತ್ತಿದ್ದನು.

ಮತ್ತೆ ಬೆಳಗಾದರೆ ಯಥಾಪ್ರಕಾರ ಆಫೀಸಿಗೆ ಹೊರಡುವ ಧಾವಂತ, ಊಟದ ಡಬ್ಬಿ ಕಟ್ಟಿ, ಮನೆಗೆಲಸಗಳ ಭರದಲ್ಲಿ ಮನಸ್ವಿಯನ್ನೇ ತಂದೆ ತಾಯಿ ಮರೆತುಬಿಡುತ್ತಿದ್ದರು. ಕೆಲಸ ಕಡಿಮೆ ಮಾಡಿಕೊಳ್ಳಲು ಡಿಷ್ ವಾಶರ್ ಸೇರಿದಂತೆ ಸಕಲ ಎಲೆಕ್ಟ್ರಿಕಲ್ ಉಪಕರಣಗಳು ಮಧುರಾಳ ಮನೆಯಲ್ಲಿತ್ತು. ಇಷ್ಟಿದ್ದೂ, ಅವರ ಬದುಕಿಗಿದ್ದ ಧಾವಂತದ ವೇಗ ಕಡಿಮೆ ಇರಲಿಲ್ಲ. ಹೀಗೆ ಮಧುರಾ ಮತ್ತು ಮಹೇಶ್‌ರವರ ದಿನಚರಿ ಸಾಗುತ್ತಿತ್ತು. ಭಾನುವಾರ ಮಾತ್ರ ಮಗನ ಹೋಂವರ್ಕ್, ಪ್ರಾಜೆಕ್ಟ್, ಒಂದಿಷ್ಟು ಹೊರಗೆ ಸುತ್ತಾಟ ಇವುಗಳಿಗೆ ಮೀಸಲಿಟ್ಟುಕೊಂಡಿರುತ್ತಿದ್ದರು. ಯಾವುದಾದರೂ ಕೌಟುಂಬಿಕ ಕಾರ್ಯಕ್ರಮಗಳು ಬಂದರೆ ಮೀಸಲಿಟ್ಟುಕೊಂಡ ಭಾನುವಾರದ ಮನರಂಜನೆಗಳೂ ಸಹ ದೂರಾಗಿಬಿಡುತ್ತಿದ್ದವು. ಅಲಂಕರಿಸಿಕೊಂಡು ಹೋಗಿ, ಬೇಕೋ ಬೇಡವೋ ಎಲ್ಲರನ್ನೂ ನಕ್ಕು ಮಾತನಾಡಿಸಿ ಮತ್ತೆ ಮನೆಗೆ ಬಂದು ಅಲಂಕಾರ ಕಳೆವುದರಲ್ಲೇ ದಿನ ಸವೆದು ಹೋಗುತ್ತಿತ್ತು.

ಮಧುರಾ ಮತ್ತು ಮಹೇಶ್‌ರದ್ದು ಪ್ರೇಮ ವಿವಾಹ. ಈ ಕಾರಣಕ್ಕೆ ಮಧುರಾಳ ತವರು ಮನೆಯ ಕಡೆಯಿಂದ ಯಾವುದೇ ಸಹಕಾರ ಅವಳಿಗಿರಲಿಲ್ಲ. ಬಾಲ್ಯದಿಂದಲೂ ಮಗನನ್ನು ಸ್ವತಂತ್ರವಾಗಿ ಬೆಳೆಸಬೇಕೆಂದು ಹೇಳಿಕೊಟ್ಟ ಪಾಠಕ್ಕೆ ಮಹೇಶ್, ತಂದೆ ತಾಯಿಯ ಬಳಿ ಯಾವುದಕ್ಕೂ ಅವಲಂಬಿತವಾಗುತ್ತಿರಲಿಲ್ಲ. ಮನೆಕೆಲಸದವರ ಬಗ್ಗೆ ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದ ಮಧುರ ಮತ್ತು ಮಹೇಶ್ ಅನೇಕ ಒತ್ತಡಗಳ ನಡುವೆಯೂ ದುಡಿಯುತ್ತಿದ್ದರು. ಆ ವರ್ಷ ದೀಪಾವಳಿ ಹಬ್ಬಕ್ಕೆ ಮೂರು ದಿನ ಸತತವಾಗಿ ರಜೆ ಕೊಟ್ಟಿದ್ದರು. ಮನಸ್ವಿಗೆ ಮಾತ್ರ ಶಾಲೆಗೆ ರಜೆ ಇತ್ತು, ಆದರೆ ಮಧುರ ಮಹೇಶ್ ಇಬ್ಬರಿಗೂ ಅವರ ಕಂಪನಿಯಲ್ಲಿ ರಜೆ ಕೊಟ್ಟಿರಲಿಲ್ಲ. ಇಂತಹ ಸಂದರ್ಭದಲ್ಲಿ ಬೇರೆ ದಾರಿ ತೋಚದೆ ಮಗನನ್ನು ಮನೆಯಲ್ಲೇ ಬಿಟ್ಟು ಸಿ.ಸಿ. ಟಿ.ವಿಯ ಕಣ್ಗಾವಲಿನಲ್ಲಿ ಇಟ್ಟು, ಮನೆಗೆ ಬೀಗ ಹಾಕಿಕೊಂಡು ಗಂಡ ಹೆಂಡಿರಿಬ್ಬರೂ ಕೆಲಸಕ್ಕೆ ಹೋಗುತ್ತಿದ್ದರು. ಮಧುರಾ ಆಗಾಗ ಲ್ಯಾಂಡ್ಲೈನ್‌ಗೆ ಕಾಲ್ ಮಾಡಿ ಮಗನಿಗೆ ‘ಊಟ ಮಾಡು, ಹಾಲು ಕುಡಿ, ಆಟವಾಡು, ಟಿವಿ ನೋಡು, ಮಲಗು’ ಎಂದು ಸಂದರ್ಭಾನುಸಾರ ಹೇಳುತ್ತಿದ್ದಳು. ಇದಾವುದೂ ಮನಸ್ವಿಯ ಮನಸ್ಸಿಗೆ ರುಚಿಸುತ್ತಿರಲಿಲ್ಲ. ಅಮ್ಮ ಹೇಳಿದಳು ಎಂಬ ಕಾರಣಕ್ಕಾಗಿ ಒಂದಿಷ್ಟು ಆಟವಾಡಿ, ಬೇಕೋ ಬೇಡವೋ ಅಲ್ಪ ಸಲ್ಪ ತಿಂದು, ನಿದ್ದೆ ಬಾರದಿದ್ದರೂ ಮಲಗಿ ಒದ್ದಾಡಿ, ಸಂಜೆ ಒಂದಿಷ್ಟು ಹಾಲು ಕುಡಿಯುತ್ತಿದ್ದನು.

ಮನಸ್ವಿಗೆ ಅಪ್ಪ-ಅಮ್ಮನ ಬೆಡ್ ರೂಮಿನಲ್ಲಿದ್ದ ಬಾಲ್ಕನಿ ಎಂದರೆ ಎಲ್ಲಿಲ್ಲದ ಪ್ರೀತಿ. ಸದಾ ಗೋಡೆಗಳನ್ನು, ಜೀವವಿಲ್ಲದ ತಣ್ಣಗೆ ಗೊಂಬೆಗಳನ್ನು ನೋಡುತ್ತಿದ ಮನಸ್ವಿಗೆ ಬೀಸುವ ಗಾಳಿ, ಸ್ವಿಮ್ಮಿಂಗ್ ಪೂಲಿನ ನೀರು, ರಸ್ತೆಗಳ ಮೇಲೆ ಓಡಾಡುತ್ತಿರುವ ಜನರು, ಗಾಡಿಗಳು, ನಾಯಿಗಳು, ಆಗೊಮ್ಮೆ ಈಗೊಮ್ಮೆ ಹಾರಾಡುವ ಪಕ್ಷಿಗಳನ್ನು ನೋಡುವುದೆಂದರೆ ಅವನಿಗೆ ಬೆರಗು. ಅಕ್ಕಪಕ್ಕದ ಮನೆಯ ತಂದೆ ತಾಯಿಂದಿರು ತಮ್ಮ ಮಕ್ಕಳಿಗೆ ಸ್ವಿಮ್ಮಿಂಗ್ ಪೂಲಿನಲ್ಲಿ ಆಟವಾಡಿಸುವ ದೃಶ್ಯ, ರಸ್ತೆಯ ಮೇಲೆ ಮುಕ್ತವಾಗಿ ಆಟವಾಡುವ ಅಕ್ಕಪಕ್ಕದ ಮನೆಯ ಮಕ್ಕಳಂತೆಯೇ ತಾನೂ ಆಡ ಬೇಕೆಂಬ ಇಂಗಿತವನ್ನು ಕೇವಲ ತನ್ನ ಪಳಗುಡುವ ಕಣ್ಣುಗಳಲ್ಲಿ ಮಾತ್ರ ಪ್ರಕಟಿಸುತ್ತಿದ್ದನು. ‘ಅಮ್ಮ, ಅಮ್ಮ ಬಾಲ್ಕನಿಯಿಂದ ರಸ್ತೆಗೆ ಒಂದು ಜಾರುಬಂಡೆಯಿದ್ದಿದ್ದರೆ ಎಷ್ಟು ಚಂದ ಅಲ್ವಾ? ಸ್ವಿಮ್ಮಿಂಗ್ ಪೂಲಿನಲ್ಲಿ ಒಂದು ದೊಡ್ಡ ಬೋಟು ಇದ್ದರೆ ನಾನೂ ಆಟವಾಡಬಹುದು. ಅಮ್ಮ ಅಮ್ಮ ಒಂದು ರೋಪ್ ಕಟ್ಟಿ ಜಾರುಬಂಡೆ ಮಾಡಿಕೊಡಮ್ಮ. ಇದೆಲ್ಲಾ ಅಪ್ಪನಿಗೆ ಹೇಳಬೇಡಮ್ಮ ಪ್ಲೀಸ್’ ಎಂದು ತಾನು ಅಮ್ಮನೆಂದೇ ನಂಬಿದ್ದ ಗೊಂಬೆಗೆ ಹೇಳುತ್ತಿದ್ದನು. ಸ್ವಿಮ್ಮಿಂಗ್ ಪೂಲಿನಲ್ಲಿ ಈಜಲು ಕಲಿಸಿ ಎಂದು ಗೋಳಿಡುತ್ತಿದ್ದನು. ಎಷ್ಟೋ ವೇಳೆ ಅಪ್ಪನೆಂಬ ಗೊಂಬೆಯ ಜೊತೆಗೆ ಅವನು ಏನೂ ಹೇಳಿಕೊಳ್ಳಲಾಗದೆ ಹೆದರಿ ಸುಮ್ಮನಾಗುತ್ತಿದ್ದನು. ದೀಪಾವಳಿ ನಿಮಿತ್ತ ಆ ರಸ್ತೆಯಲ್ಲಿನ ಎಲ್ಲಾ ಮನೆಯವರು ತಮ್ಮ ಮಕ್ಕಳೊಂದಿಗೆ ಪಟಾಕಿ ಹೊಡೆಯುತ್ತಿದ್ದರೆ, ಮನಸ್ವಿಯ ಅಂತರಂಗದಲ್ಲಿ ಆಕಾಶಬುಟ್ಟಿ ಹಾರಾಡುತ್ತಿತ್ತು. ದೀಪಾವಳಿ ಮಾತ್ರವಲ್ಲದೆ ಬಹುತೇಕ ಹಬ್ಬಗಳು ಮನಸ್ವಿಯ ಮನೆಯಲ್ಲಿ ಹೀಗೆಯೆ ನಡೆಯುತ್ತಿತ್ತು. ಹಬ್ಬದ ದಿನ ಕೆಲಸ ಮುಗಿಸಿಕೊಂಡು ಬಂದು ನಂತರ ಗಂಡ ಹೆಂಡತಿ ಹಬ್ಬ ಮಾಡಿ ಊಟ ಮಾಡುವ ವೇಳೆಗೆ ಮನಸ್ವಿ ನಿದ್ದೆಗೆ ಜಾರಿರುತ್ತಿದ್ದನು. ಇದೆಲ್ಲದರಿಂದ ಸಂಕಟಗಳಿದ್ದರೂ ಮಧುರಾ ಮತ್ತು ಮಹೇಶ್ ತಾವೇ ಆರಿಸಿಕೊಂಡ ಕಾಲದೊಳಗೆ ಬಂಧಿಯಾಗಿದ್ದರು. ಮನಸ್ವಿಯನ್ನೂ ಕೂಡ ಅದರಲ್ಲಿ ಬಂಧಿಸಿಬಿಟ್ಟಿದ್ದರು.

ಆ ದಿನ ಭಾನುವಾರ ದೀಪಾವಳಿ ಹಬ್ಬ ಮುಗಿದಿತ್ತು. ಮನೆಯಲ್ಲಿ ಹಬ್ಬವನ್ನು ಆಚರಿಸಲು ಆಗಲಿಲ್ಲವೆಂದು ಮಗನೊಂದಿಗೆ ಭಾನುವಾರದ ರಜೆಯಲ್ಲಿ ಇಡೀ ದಿನ ಹೊರಗೆ ಸುತ್ತಾಡಿ ಮಜಾ ಮಾಡಬೇಕೆಂದು ಮಧುರಾ ಮತ್ತು ಮಹೇಶ್ ನಿರ್ಧರಿಸಿದರು. ಮನಸ್ವಿಗೂ ಕೂಡ ತಂದೆ ತಾಯಿಯ ಜೊತೆಗೆ ಹೊರಗಡೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ. ಬೆಳ್ಳಗ್ಗೆ ಯಾವುದಾದರೊಂದು ದೇವಾಲಯಕ್ಕೆ ಭೇಟಿ, ಒಳ್ಳೆಯ ಹೋಟೆಲ್‌ನಲ್ಲಿ ಉಪಹಾರ, ಮಧ್ಯಾಹ್ನದವರೆಗೂ ಯಾವುದಾದರೊಂದು ಪಾರ್ಕ್‌ನಲ್ಲಿ ಮಗನೊಂದಿಗೆ ಆಟವಾಡಿ ಮಧ್ಯಾಹ್ನ ಮಂತ್ರಿ ಮಾಲ್‌ಗೆ ಹೋಗಿ ಊಟಮಾಡಿ, ಶಾಪಿಂಗ್ ಮಾಡಿ, ಸಿನಿಮಾ ನೋಡಿ, ಮನೆಗೆ ಬರುವ ಯೋಚನೆ ಆ ಭಾನುವಾರದ್ದಾಗಿತ್ತು. ಯೋಜನೆಯ ಪ್ರಕಾರ ನಿಗದಿಯಾದ ಕಾರ್ಯಕ್ರಮಗಳೆಲ್ಲವನ್ನೂ ಮುಗಿಸಿಕೊಂಡು ಮಧ್ಯಾನದ ವೇಳೆಗೆ ನಗರದ ಮಧ್ಯಭಾಗದಲ್ಲಿದ್ದ ಪ್ರತಿಷ್ಠಿತ ಮಂತ್ರಿ ಹೈಟೆಕ್ ಮಾಲ್‌ಗೆ ಮೂವರು ಹೋದರು. ತಿನ್ನಲಾಗದಷ್ಟು ಬಡಿಸುವ ಹೋಟೆಲ್‌ನಲ್ಲಿ ತಿಂದು, ಉಳಿದಿದ್ದನ್ನು ತಟ್ಟೆಯಲ್ಲೇ ಬಿಟ್ಟು, ಅವರು ಪೀಕಿದಷ್ಟು ಹಣ ತೆತ್ತು, ನಾಜೂಕ್ಕಾಗಿ ಹೋಟೆಲ್‌ನಿಂದ ಹೊರಬಂದರು. ಒಂದಷ್ಟು ಕಾಲ ವಿಂಡೋ ಶಾಪಿಂಗ್ ಮಾಡಿ, ಮತ್ತೊಂದಷ್ಟು ಕಾಲ ಮಗನನ್ನು ಆಟವಾಡಿಸಿ ಸಮಯ ದೂಡುತ್ತಿದ್ದರು. ಆಟಿಕೆಗಳನ್ನು ಕೊಡಿಸುತ್ತೇನೆಂದರೂ ಬೇಡವೆನ್ನುತ್ತಿದ್ದ ಮನಸ್ವಿಗೆ ಇಡೀ ದಿನ ತಾಯಿ ಜೊತೆಗೆ ಇದ್ದೇನೆ ಎಂಬುದು ಖುಷಿಗೆ ಕಾರಣವಾಗಿತ್ತು. ಸಿನಿಮಾ ಬುಕ್ಕಿಂಗ್‌ಗೆ ಇನ್ನೂ ಮೂರು ಗಂಟೆಗಳ ಕಾಲಾವಾಕಾಶವಿತ್ತು. ಆ ಸಮಯವನನ್ನು ಸರಿದೂಗಿಸಲೆಂದೇ ಮನಸ್ವಿಯನ್ನು ಕರೆದುಕೊಂಡು ಪ್ಲೇಕಾರ್ನರ್‌ಗೆ ಹೋದರು. ಯಾವ ಆಟವನ್ನೂ ಆಡಲು ಬಯಸದ ಮನಸ್ವಿ, ಅಮ್ಮನಿಗೆ ಕತೆಯನ್ನು ಹೇಳಲು ಕೇಳಿದ. ಇದನ್ನು ಕೇಳಿದ ಕೂಡಲೇ ಮೆಲುಧ್ವನಿಯಲ್ಲಿ ‘ಮನೆಗೆ ಹೋದ ಮೇಲೆ ಕಥೆ ಕೇಳುವೆಯಂತೆ, ನಮಗೆ ರಜೆ ಸಿಗುವುದೇ ಕಡಿಮೆ, ಎಷ್ಟು ಬೇಕೋ ಅಷ್ಟು ಆಟವಾಡಿಬಿಡು’ ಎಂದು ಗದರಿದ ಅಪ್ಪ. ಮನಸ್ವಿ ಬೇಕೋ ಬೇಡವೋ ಅಪ್ಪ ಅಮ್ಮ ಆಡಿಸಿದ ಆಟಗಳನ್ನು ಆಡಿದ, ಇಷ್ಟಾಗಿಯೂ ಅವರ ಬಳಿ ಇನ್ನು ಒಂದು ಗಂಟೆ ಸಮಯ ಉಳಿದಿತ್ತು. ಏನು ಮಾಡುವುದು ಎಂದು ತೋಚದೇ ಫುಡ್ ಕೋರ್ಟ್‌ನ ಬಳಿ ಇದ್ದ ಸ್ಕೇರಿ ಹೌಸಿಗೆ ಹೋಗುವುದಾಗಿ ಮಹೇಶ್ ಮತ್ತು ಮಧುರಾ ತೀರ್ಮಾನಿಸಿದರು. ಟಿಕೇಟು ಕೊಂಡು ಆ ಭಯದ ಮನೆಗೆ ಮೂರು ಜನರು ಪ್ರವೇಶಿಸಿದರು.

ಕೃತಕವಾದ ದೆವ್ವ ಭೂತಗಳ ಸದ್ದು, ತಲೆ ಬುರುಡೆ, ಧುತ್ತನೆ ಎದುರುಬರುವ ಭಯಾನಕ ಆಕಾರದ ಗೊಂಬೆಗಳು, ಕತ್ತಲು ಬೆಳಕಿನ ಆಟ, ಕಲ್ಪಿತ ಭಯಾನಕ ಜಗತ್ತನ್ನು ಒಳಗೆ ಸೃಷ್ಟಿಸಿ ಅದರೊಳಗೆ ಬರುವ ಜನರನ್ನು ಭಯಪಡಿಸಿ ಥ್ರಿಲ್ ಉಂಟು ಮಾಡುವುದೇ ಸ್ಕೇರಿ ಹೌಸಿನ ಮುಖ್ಯ ಉದ್ದೇಶವಾಗಿತ್ತು. ಎಂತಹ ಗುಂಡಿಗೆಯುಳ್ಳ ಗಟ್ಟಿಗರೂ ಕೂಡ ಯಾವುದಾದರೊಂದು ಕಡೆ ಭಯ ಬಿದ್ದು, ಬೆಚ್ಚಿಬೀಳುವ ಸಾಧ್ಯತೆ ಆ ಭಯದ ಮನೆಯಲ್ಲಿ ಏರ್ಪಾಟಾಗಿರುತ್ತಿತ್ತು. ಇಂತಹ ಸ್ಕೇರಿ ಹೌಸಿನ ಬಳಿಗೆ ಹೋದ ಮಧುರಾ ಮತ್ತು ಮಹೇಶ್ ಅಕ್ಷರಶಃ ಹೆದರಿ ನಡುಗಿ ಹೋಗಿದ್ದರು. ಆದಷ್ಟು ಬೇಗ ಹೊರಗೆ ಬರಲು ಹಪಹಪಿಸುತ್ತಿದ್ದರು. ಒಮ್ಮೆ ಒಳಗೆ ಹೋದರೆ, ಅಲ್ಲಿ ನಿರ್ಮಿಸಲಾಗಿರುವ ದಾರಿಗಳನ್ನೆಲ್ಲಾ ಹಾದು ಅದರ ಮೂಲಕವೇ ಹೊರಬರುವುದು ಸ್ಕೇರಿ ಹೌಸ್ ಪ್ರವೇಶಿಸಿದವರಿಗೆ ಅನಿವಾರ್ಯವಾಗಿತ್ತು. ಹಾಗೂ ಹೀಗೂ ಉಸಿರು ಗಟ್ಟಿ ಹಿಡಿದುಕೊಂಡು, ಬೇಗ ಬೇಗನೇ ಓಡಿ ಸುಸ್ತಾಗಿ ಸ್ಕೇರಿ ಹೌಸಿನಿಂದ ಮೂವರು ಹೊರಗೆ ಬಂದರು. ಹೊರಬಂದವರೆ, ಮಹೇಶ್ ಮತ್ತು ಮಧುರಾ ದೊಡ್ಡ ನಿಟ್ಟುಸಿರನ್ನು ಬಿಟ್ಟರು. ಬೆವೆತು ಹೋಗಿದ್ದರು, ಕೈ ಕಾಲುಗಳು ಕೊಂಚ ತಣ್ಣಗಾಗಿತ್ತು. ಇದಾವುದಕ್ಕೂ ಪ್ರತಿಕ್ರಯಿಸದ ಮನಸ್ವಿ ತದೇಕಚಿತ್ತದಿಂದ ನೋಡುತ್ತಿದ್ದ. ಸ್ಕೇರಿ ಹೌಸ್ ಕಥಾ ವೃತ್ತಾಂತ ಮುಗಿದ ಕೂಡಲೇ ಅದೇ ಮಾಲ್‌ನಲ್ಲಿದ್ದ ಐಶಾರಾಮಿ ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಬಂದು ಕಾರು ಹತ್ತಿದರು.

ಕಾರಿನಿಂದ ಮನೆಗೆ ಹೋಗುವ ತನಕ ಇಡೀ ದಿನ ಹೇಗಿತ್ತು ಎಂಬುದರ ಬಗ್ಗೆ ಮಧುರ ಮತ್ತು ಮಹೇಶ್ ಮಾತನಾಡಿಕೊಳ್ಳಲು ಆರಂಭಿಸಿದರು. ಒಬ್ಬರಿಗೆ ದೇವಸ್ಥಾನ ಇಷ್ಟವಾದರೆ ಮತ್ತೊಬ್ಬರಿಗೆ ಬೆಳಗಿನ ಉಪಹಾರ ಇಷ್ಟವಾಗಿತ್ತು. ಮನಸ್ವಿಗೆ ಹೊರಗಿನ ಜಗತ್ತು ಇಷ್ಟವಾಗಿತ್ತು. ಬೆಳಗಿನಿಂದ ಸುತ್ತಾಡಿ, ಸಿನಿಮಾ ನೋಡಿ ಕಾರು ಹತ್ತುವ ತನಕ ಒಂದೊಂದು ಘಟನೆಗಳು ಒಬ್ಬೊಬ್ಬರಿಗೆ ಬೇರೆ ಬೇರೆ ಕಾರಣಕ್ಕೆ ಪ್ರಿಯವಾಗಿತ್ತು. ಮನಸ್ವಿ ಮಾತ್ರ ಈ ಚರ್ಚೆಯ ಭಾಗವಾಗಿರಲಿಲ್ಲ. ಮುಂದಿನ ಸೀಟಿನಲ್ಲಿ ಕುಳಿತಿದ್ದ ಅಪ್ಪ ಅಮ್ಮನ ಯಾವ ಮಾತುಗಳನ್ನು ಕೆಳಿಸಿಕೊಳ್ಳದೇ ಕಿಟಕಿಯ ಹೊರಗೆ ಕಾಣುವ ಬಣ್ಣ ಬಣ್ಣದ ಲೈಟುಗಳು, ಬಹುಮಹಡಿ ಕಟ್ಟಡಗಳು, ನುಣುಪಾದ ರಸ್ತೆಗಳು ಮತ್ತು ಓಡಾಡುವ ಜನರನ್ನು ಕುತೂಹಲದಿಂದ ನೋಡುತ್ತಿದ್ದ. ತಂದೆ ತಾಯಿ ಇಬ್ಬರೂ ಮಗನನ್ನು ಮಾತನಾಡಿಸಲು ಪ್ರಯತ್ನಿಸಿದರೂ, ಮನಸ್ವಿ ನಿರ್ಲಿಪ್ತಭಾವದಿಂದ ಇದ್ದ. ಬೆಳಗಿನಿಂದ ಸುತ್ತಾಡಿ ದಣಿವಾಗಿರಬೇಕು ಎಂದು ಸುಮ್ಮನಾಗುತ್ತಿದ್ದರು.

ಮಹೇಶ್ ಬೆಳಗಿನಿಂದ ಹೆಂಡತಿ ಮಕ್ಕಳನ್ನು ಸುತ್ತಾಡಿಸಿದೆ ಎಂಬ ಉಮೇದಿಗೆ ಬಿದ್ದು, ಅದು ಹೀಗಿತ್ತು ಇದು ಹೀಗಿತ್ತು ಎಂದು ಮತ್ತೆ ಮತ್ತೆ ಮಧುರಾ ಮತ್ತು ಮನಸ್ವಿಯೊಂದಿಗೆ ಮಾತಿಗೆ ಇಳಿಯುತ್ತಿದ್ದನು. ಮಹೇಶ್ ಹೀಗೆ ಮಾತನಾಡುತ್ತಾ , ಸ್ಕೇರಿ ಹೌಸಿನ ಬಗ್ಗೆ ಅಭಿಪ್ರಾಯವನ್ನು ಮನಸ್ವಿಯ ಬಳಿ ಕೇಳಿದನು. ಸ್ಕೇರಿ ಹೌಸ್‌ನಲ್ಲಿ ಮಧುರಾ ತನಗಾದ ಭಯ ಆತಂಕಗಳನ್ನು ಪಟ ಪಟ ಹೇಳಿ, ಸ್ಕೇರಿ ಹೌಸನ್ನು ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ ಎಂದು ಗಾಬರಿ ವ್ಯಕ್ತಪಡಿಸಿದಳು. ಅದಕ್ಕೆ ಧ್ವನಿಗೂಡಿಸಿದ ಮಹೇಶ್ ಕೂಡ ಅದೇ ಅನುಭವ ವ್ಯಕ್ತಪಡಿಸಿದನು. ಅಪ್ಪ ಅಮ್ಮ ಇಬ್ಬರು ಮನಸ್ವಿಗೆ ಭಯವಾಗಲಿಲ್ಲವೇ? ಎಂದು ಕೇಳಿದರು. ಅದಕ್ಕೆ ಮನಸ್ವಿ ಇಲ್ಲವೆಂದು ಪ್ರತಿಕ್ರಯಿಸಿದನು. ಇಬ್ಬರಿಗೂ ಅಚ್ಚರಿಯಾಯಿತು ‘ಯಾಕೆ?’ ಎಂದು ಮರುಪ್ರಶ್ನೆ ಹೂಡಿದರು. ಅದಕ್ಕೆ ಮೌನವಾಗಿದ್ದ ಮನಸ್ವಿ ಪ್ರತಿಕ್ರಿಯೆ ನೀಡಲಿಲ್ಲ. ‘ಮಗನಿಗೆ ಭಯವಾಗುವುದಿಲ್ಲ ಅವನು ಮಹಾಧೈರ್ಯವಂತ’ ಎಂದು ಮಹೇಶ್ ತನಗೆ ತಾನೇ ಹೆಮ್ಮೆಪಟ್ಟುಕೊಂಡು ಕಾರು ಚಲಾಯಿಸುತ್ತಿದ್ದ. ಇಷ್ಟಕ್ಕೆ ಸುಮ್ಮನಾಗದ ಮಧುರಾ, ಮನಸ್ವಿಯಲ್ಲಿ ಸ್ಕೇರಿ ಹೌಸಿನಲ್ಲಿದ್ದ ದೆವ್ವ, ಭೂತ, ಬೋನಿನಿಂದ ಹೊರಬಂದ ಹುಲಿ ಸಿಂಹ, ಕಾಲಿಗೆ ಸುತ್ತಿಕೊಳ್ಳುತ್ತಿದ್ದ ದೊಡ್ಡ ಅನಕೊಂಡ ಇದೆಲ್ಲವನ್ನು ನೋಡಿ ‘ಭಯವಾಗಲಿಲ್ಲವೇ ಮಗನೇ?’ ಎಂದು ಪ್ರೀತಿಯಿಂದ ಕೇಳಿದಳು. ಮನಸ್ವಿ ‘ಇಲ್ಲ’ ಎಂದು ಮತ್ತೆ ತಲೆಯಾಡಿಸಿದ. ಚಕಿತಳಾದ ಮಧುರ ‘ಯಾಕೆ ಮಗನೆ? ನಿನಗೆ ಅಲ್ಲಿ ಉಂಟಾದ ಅನುಭವವಾದರು ಏನು? ಅದನ್ನಾದರು ಹೇಳು’ ಎಂದು ಪ್ರೀತಿಯಿಂದ ಮುದ್ದಾಡಿ ಒತ್ತಾಯಿಸಿದಳು.

ತಂದೆ ತಾಯಿಯ ಒತ್ತಾಯಕ್ಕೆ ಪ್ರತಿಕ್ರಯಿಸಿದ ಮನಸ್ವಿ ‘ನನಗೆ ಆ ಸ್ಕೇರಿ ಹೌಸಿಗಿಂತ ನಮ್ಮ ಮನೆಯೇ ದೊಡ್ಡ ಸ್ಕೇರಿ ಹೌಸು. ಸ್ಕೇರಿ ಹೌಸಿನ ದೆವ್ವ ಭೂತಗಳಿಗಿಂತ ದೊಡ್ಡ ದೊಡ್ಡ ಭೂತಗಳನ್ನು ನಾನು ರಾತ್ರಿ ಹೊತ್ತು ನಮ್ಮ ಮನೆಯಲ್ಲೇ ನೋಡಿದ್ದೇನೆ. ಅಲ್ಲಿ ತಿನ್ನಲು ಬಂದ ಸಿಂಹ ನನಗೆ ಮೊದಲೇ ಪರಿಚಯವಾಗಿತ್ತು. ಎಷ್ಟೋ ರಾತ್ರಿಗಳಲ್ಲಿ ಅನಕೊಂಡ ಹಾವಿನ ಜೊತೆಗೆ ಮಲಗಿದ್ದೇನೆ. ಸ್ಕೇರಿ ಹೌಸಿನಲ್ಲಿದ್ದ ಭಯಾನಕ ಶಬ್ದಗಳು ನಮ್ಮ ಮನೆಯಲ್ಲಿ ದಿನವೂ ಕೇಳಿಸುತ್ತದೆ. ಆ ಸ್ಕೇರಿ ಹೌಸಿನಲ್ಲಿ ಭಯ ಜಾಸ್ತಿಯಾದರೆ ಬೇಗ ಬೇಗ ಹೊರಗೆ ಬಂದು ಬಿಡಬಹುದು. ಆದರೆ ನಮ್ಮ ಮನೆಯೆಂಬ ಸ್ಕೇರಿ ಹೌಸ್‌ನಲ್ಲಿ ಭಯವಾದರೂ ಹೊರಗೆ ಬರಲು ಸಾಧ್ಯವೇ ಆಗುವುದಿಲ್ಲ. ಹಾಗಾಗಿ ನನಗೆ ಆ ಸ್ಕೇರಿ ಹೌಸಿನಲ್ಲಿ ಒಂದಿಷ್ಟು ಭಯವಾಗಲಿಲ್ಲಮ್ಮ’ ಎಂದ. ಈ ಮಾತುಗಳನ್ನು ಕೇಳಿದ ಕೂಡಲೇ ಮಹೇಶ್ ಪಾರ್ಕಿಂಗ್ ಲೈಟ್‌ಅನ್ನು ಆನ್ ಮಾಡಿ, ಕಾರನ್ನು ಸೈಡಿಗೆ ಹಾಕಿ ಒಂದು ಕ್ಷಣ ಗರ ಹೊಡೆದವನಂತೆ ಕುಳಿತುಬಿಟ್ಟ. ಮಧುರಾಳ ಮಾತುಗಳೆಲ್ಲವೂ ಕಣ್ಣೀರಾಗಿ ಹರಿಯಲಾರಂಭಿಸಿತು. ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮನಸ್ವಿ ಎಡಕ್ಕೆ ಡೋರ್ ತೆಗೆದು ಪಕ್ಕದಲ್ಲಿದ್ದ ಬೀದಿ ನಾಯಿ ಜೊತೆ ಆಟವಾಡುತ್ತಿದ್ದ. ವಾಸ್ತವಕ್ಕೆ ಬಂದ ಮಧುರಾ ಮತ್ತು ಮಹೇಶ್, ಮನಸ್ವಿ ನಾಯಿಯ ಜೊತೆ ಆಟವಾಡುತ್ತಿದ್ದುದನ್ನು ನೋಡಿದರು. ನಾಯಿ ಮತ್ತು ಮಗನ ನಡುವೆ ಮೂಡಿದ ಪ್ರೇಮ ಮತ್ತು ವಾತ್ಸಲ್ಯವನ್ನು ಬಿಟ್ಟು ಬಿಡದೆ ನೋಡುತ್ತಿದ್ದರು. ತಡರಾತ್ರಿಯಾಗುತಿತ್ತು, ಕಾರು ಹತ್ತಿ ಮೂರು ಜನರೂ ಮನೆಯ ಕಡೆ ಹೊರಟರು. ಮನೆ ಸಮೀಪವಾದಂತೆ, ಮನಸ್ವಿಯ ಮುಖದ ಮೇಲೆ ಭಯ ಮತ್ತು ಆತಂಕದ ಗೆರೆಗಳು ಮೂಡಲು ಶುರುವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.