ಶನಿವಾರ, ಸೆಪ್ಟೆಂಬರ್ 18, 2021
22 °C

ಕಥೆ: ನೀರ್ಗಲ್ಲು

ಕನಕರಾಜ್ ಬಾಲಸುಬ್ರಮಣ್ಯಂ Updated:

ಅಕ್ಷರ ಗಾತ್ರ : | |

Prajavani

ಇಸ್ತಾಂಬುಲ್‍ನ ವಿಮಾನ ನಿಲ್ದಾಣದಲ್ಲಿ ಇಮ್ಮಿಗ್ರೇಷನ್ ಮುಗಿಸಿ ಬೆಂಗಳೂರಿಗೆ ಹೋಗಲಿರುವ ವಿಮಾನಕ್ಕಾಗಿ ಕಾಯುತ್ತಾ ಡಿ-ಎರಡನೇ ಗೇಟ್‍ನಲ್ಲೇ ಕೂತಿರುವಾಗಲೇ ಸಬಾ ಮಜೀದ್ ಆಕೆಯನ್ನು ನೋಡಿದ್ದು. ಆಕೆ ಖಂಡಿತ ಭಾರತೀಯಳೇ ಎಂದುಕೊಂಡು ಸುತ್ತಲೂ ನೋಡಿದಳು. ಅಲ್ಲಿದ್ದವರಲ್ಲಿ ನಾಲ್ಕಾರು ಮಂದಿ ಮಾತ್ರ ಭಾರತೀಯರಂತೆ ಕಂಡರು. ಅಲ್ಲಿದ್ದ ಹೆಣ್ಣುಗಳಲ್ಲಿ ಅವಳೊಬ್ಬಳೆ ಭಾರತೀಯಳಂತೆ ಕಾಣುತ್ತಿದ್ದುದು! ಚಣ ಆಕೆಯನ್ನೇ ನೋಡಿದಳು. ಮನಸ್ಸು ಹಾಯೆನಿಸಿತು. ಅವಳೊಂದಿಗೆ ಮಾತನಾಡುವ ಬಗೆ ಎಂತು ಎಂದು ಯೋಚಿಸುತ್ತಾ ಅತ್ತ ನೋಡಿದಳು ಸಬಾ. ಆಕೆ ಮೊಬೈಲ್‍ನೊಳಗೆ ಮುಳುಗಿ ಹೋಗಿದ್ದಳು.

 ಹದಿನೈದು ದಿನಗಳ ಸೆಮಿಸ್ಟರ್ ಬ್ರೇಕ್‍ನ ರಜೆಯಲ್ಲಿ ಇಸ್ತಾಂಬುಲ್‍ನಲ್ಲಿರೊ ಅಕ್ಕನ ಮನೆಗೆ ಬಂದಿದ್ದ ಸಬಾ ಮಜೀದ್ ಬೆಂಗಳೂರಿನ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ ಇರಾನ್ ದೇಶದ ತರುಣಿ. ತನ್ನ ತಂದೆಯ ಒಪ್ಪಿಸಿ ಪದವಿ ಓದಲು ಇಂಡಿಯಾಕ್ಕೆ ಬರುವುದರೊಳಗೆ ಅವಳು ತನ್ನ ನಲವತ್ತೈದು ಕೆ.ಜಿ ತೂಕದ ದೇಹವನ್ನು ಮೂವತ್ತಕ್ಕೆ ಇಳಿಸಿಕೊಂಡು ಒಂದು ಮೇಣದ ಗೊಂಬೆಯಂತಾಗಿದ್ದಳು. ವಿಜ್ಞಾನದಲ್ಲಿ ಪದವಿ ಪಡೆದು ವಾಪಸ್ ಟೆಹ್ರಾನ್‍ಗೆ ಹೋದಾಗ ಟ್ಯಾಕ್ಸಿ ಡ್ರೈವರ್ ಆಗಿದ್ದ ಅವಳ ತಂದೆ ಮಜೀದ್ ಸಂಬಂಧಿಕರ ವಿರೋಧಗಳನ್ನು ಲೆಕ್ಕಿಸದೆ ಸ್ನಾತಕೋತ್ತರ ಪದವಿ ಮುಗಿಸಿಕೊಂಡು ಬರಲು ವಾಪಸ್ ಭಾರತಕ್ಕೆ ಕಳುಹಿಸಿದ್ದ. ಇಂಗ್ಲಿಷ್‍ನಲ್ಲೇ ಉನ್ನತ ವ್ಯಾಸಂಗ ನಡೆಸಬೇಕೆಂದು ತಾಕೀತು ಮಾಡಿದ್ದ. ಇಂಗ್ಲಿಷ್ ಓದಿದರೆ ಇರಾನ್‍ನ ಶಾಲಾ ಕಾಲೇಜುಗಳಲ್ಲಿ ಕೆಲಸ ಬೇಗನೇ ಸಿಗುತ್ತದೆ ಮತ್ತು ಹೆಣ್ಣುಗಳಿಗೆ ಶಾಲಾ ನೌಕರಿಯೇ ಸೂಕ್ತವಾದುದು ಎನ್ನುವುದು ಆತನ ಅಚಲ ನಂಬಿಕೆ. ಇರಾನಿಯರು ಭಾರತಕ್ಕೆ ಹೋಗುವುದೇ ಮೆಡಿಕಲ್ ಓದಲು ಮತ್ತದಕ್ಕೆ ಅಲ್ಲಿ ಖರ್ಚು ಕಡಿಮೆ ಎಂದು ಸಬಾ ಎಷ್ಟು ಬಿಡಿಸಿ ಹೇಳಿದರೂ ಆತ ಒಪ್ಪಲು ತಯಾರಿರಲಿಲ್ಲ. ಇಂಗ್ಲಿಷ್‍ನಲ್ಲಿ ಉನ್ನತ ವ್ಯಾಸಂಗ ಮಾಡುವುದಾದರೆ ಹೋಗುವಂತೆಯೂ ಇಲ್ಲದಿದ್ದರೆ ಬೇಡ ಎಂದು ಕರಾರುವಕ್ಕಾಗಿ ತಿಳಿಸಿ ಎದ್ದು ಹೋಗಿದ್ದ. ವಿಧಿಯಿಲ್ಲದೆ ಸ್ನಾತಕೋತ್ತರ ಪದವಿ ಓದಲು ಸಬಾ ಬೆಂಗಳೂರಿಗೆ ಬಂದಿದ್ದಳು. ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಅವಳು ಹದಿನೈದು ದಿನಗಳ ರಜೆಗೆ ತನ್ನ ನಾಡಿಗೆ ಹೋಗದೆ ಅವಳ ಸೋದರಿ ವಾಸವಿರುವ ಟರ್ಕಿಯ ಇಸ್ತಾಂಬುಲ್‍ಗೆ ಹೋಗಿದ್ದಳು. ಅವಳ ಜೀವನದ ಮಹಾ-ಕನಸೊಂದನ್ನು ನನಸು ಮಾಡಿಕೊಳ್ಳುವ ಹಾದಿಯನ್ನು ಹಸನು ಮಾಡಿಕೊಳ್ಳಲೇ ಈ ಪಯಣವ ಕೈಗೊಂಡಿದ್ದಳು. ಎಂ.ಎ ಇನ್ ಇಂಗ್ಲಿಷ್ ಮುಗಿಸಿದ್ದೇ ತನ್ನ ಮನೆಯವರಿಗೆ ತಿಳಿಸದೆ ಭಾರತದಿಂದ ನೇರವಾಗಿ ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ಹಾರಿ ಬಿಡಬೇಕೆಂಬುದೇ ಅವಳ ಆ ಮಹಾ-ಕನಸು.

ಆ ಕನಸು ಸಾಕಾರಗೊಳ್ಳುವ ಗಳಿಗೆ ಬಹು ಸನಿಹದಲ್ಲಿದೆ ಎಂಬ ಖುಷಿಯಲ್ಲಿ ಮನಸ್ಸನ್ನು ಉಯ್ಯಾಲೆಯಾಗಿಸಿ ಟರ್ಕಿಯ ಇಸ್ತಾಂಬುಲ್ ನಗರವನ್ನು ತೇಲುತ್ತಾ ಕ್ರಮಿಸಿ ವಿಮಾನ ನಿಲ್ದಾಣ ತಲುಪಿದ್ದಳು. ಬೋರ್ಡಿಂಗ್ ಪಾಸ್ ಪಡೆದು ಇಮ್ಮಿಗ್ರೇಷನ್ ಮುಗಿಸಿ ಬೆಂಗಳೂರಿನ ವಿಮಾನಕ್ಕಾಗಿ ಡಿ-ಎರಡನೇ ಗೇಟ್‍ನಲ್ಲಿ ಕಾಯುತ್ತಾ ಕೂತಿರುವಾಗಲೇ ಸಬಾ ಆ ಹೆಣ್ಣನ್ನು ನೋಡಿದ್ದು. ಅಲ್ಲಿದ್ದವರಲ್ಲಿ ಆಕೆ ಮಾತ್ರ ಭಾರತೀಯಳಂತೆ ಕಾಣಿಸುತ್ತಿದ್ದಳು. ಆಕೆಯನ್ನು ನೋಡಿ ಸಬಾ ಖುಷಿಗೊಂಡಿದ್ದಳು. ಆಕೆಯ ಮಾತನಾಡಿಸುವ ಉಮೇದಿನಲ್ಲಿ ಕುಣಿದಾಡಿದ್ದಳು. 

“ಬೆಹನೊ... ಆಪ್ ಬೆಂಗಳೂರ್ ಜಾಥಾಹೇ..?” ತನಗೆ ತಿಳಿದಿರುವ ಹಿಂದಿಯಲ್ಲಿ ಮಾತನಾಡಿ ಆಕೆಯನ್ನು ನೋಡಿ ಮುಗುಳ್ನಕ್ಕಳು. ಆಕೆ ವಿಚಲಿತಗೊಂಡು “ಇಕ್ಸ್‌ಕ್ಯೂಸ್ಮಿ, ಐ ಡೋಂಟ್ ಗೆಟ್ ಯೂ” ಎಂದಳು. ಬಹುಶಃ ಹಿಂದಿ ಗೊತ್ತಿಲ್ಲದ ದಕ್ಷಿಣ ಭಾರತೀಯಳಿರಬೇಕೆಂದು ಇಂಗ್ಲಿಷ್‍ನಲ್ಲಿ ಆಕೆಯನ್ನು ತಲುಪಲು ಯತ್ನಿಸಿದಳು ಸಬಾ.

ಆಕೆ ನಕ್ಕು ತಾನು ಭಾರತೀಯಳಲ್ಲ, ಮೆಕ್ಸಿಕನ್ ಎಂದು ಹೇಳಿದಾಗ ಸಬಾ ಅಚ್ಚರಿಗೊಂಡು “ನೀವು ನೋಡಲು ಥೇಟ್ ಭಾರತೀಯರಂತೇ ಕಾಣುತ್ತೀರಿ...” ಎಂದು ನಗುತ್ತಾ ಆಕೆಯೊಂದಿಗೆ ಮಾತನಾಡಲು ಶುರು ಮಾಡಿದಳು. ತನ್ನೊಂದಿಗೆ ಬೆರೆಯಲು ಈ ಮೆಕ್ಸಿಕನ್ ಹುಡುಗಿ ಹಿಂದೇಟು ಹಾಕುತ್ತಿದ್ದಾಳೆ ಎಂದೆನಿಸಿತು. ತನ್ನ ಪ್ರಶ್ನೆಗಳಿಗೆ “ಹೌದು” ಅಥವಾ “ಇಲ್ಲ” ಎನ್ನುವ ಉತ್ತರಗಳನ್ನು ದಾಟಿ ಆಕೆ ತುಟಿ ಬಿಚ್ಚದಿರುವುದ ಕಂಡು ಇವಳಿಗೆ ನಗು ಬಂತು. ತಾನೂ ಹೀಗೇ ಅಲ್ಲವೇ... ಭಾರತಕ್ಕೆ ಹೋದ ಹೊಸತರಲ್ಲಿ... ಅನ್ಯರೊಂದಿಗೆ ಮಾತನಾಡಲೇ ಹೆದರುತ್ತಿದ್ದೆ. ಯಾರೊಂದಿಗೂ ಸುಲಭವಾಗಿ ಬೆರೆಯಬಾರದು ಎಂದು ತನ್ನವರು ತನಗೆ ಉಪದೇಶ ನೀಡಿದ್ದರು. ಹಾಗಾಗಿ ಸದಾ ಭಯದಲ್ಲೇ ನರಳುತ್ತಿದ್ದೆ. ಹೊಸದಾಗಿ ಒಂದು ದೇಶಕ್ಕೆ ಬರುವವರಲ್ಲಿ ಇದು ಸಾಮಾನ್ಯ ಎಂದುಕೊಂಡು ಆಕೆಯ ಮುಗುಮ್ಮಾದ ಉತ್ತರಗಳಿಗೆ ಬೇಸರ ಮಾಡಿಕೊಳ್ಳದೆ ಆಕೆಯನ್ನು ಮಾತನಾಡಿಸುತ್ತಲೇ ಇದ್ದಳು.

ಆಕೆಯ ಹೆಸರು ಮರಿಯ ರೋಸಾ ಎಲೆನಾ, ಒಬ್ಬ ನ್ಯೂಟ್ರಿಷಿಯನಿಸ್ಟ್ ಎಂತಲೂ ಭಾರತದ ಆಹಾರ ಪದ್ದತಿಯ ಬಗ್ಗೆ ಬೆಂಗಳೂರಿನಲ್ಲಿ ಒಂದು ಕಿರು ಅವಧಿಯ ಕೋರ್ಸ್ ಮಾಡಲು ಹೋಗುತ್ತಿರುವುದಾಗಿಯೂ ಸಬಾಳಿಗೆ ಗೊತ್ತಾಯಿತು. ಇದರಾಚೆಗೆ ಆಕೆ ಏನೊಂದೂ ಹೇಳಲಿಲ್ಲ. ಸಬಾ ಕೇಳಿದ ಮೆಕ್ಸಿಕೊ ಬಗೆಗಿನ ಕುತೂಹಲವನ್ನು ಹಾಗೇ ತೇಲಿಸಿ ಮೊಬೈಲ್‍ನೊಳಕ್ಕೆ ಜಿಗಿದು ಬಿಡುತ್ತಿದ್ದಳು. ಸಬಾಳಿಗೆ ಮೆಕ್ಸಿಕನ್‍ಳ ಅನಾಸಕ್ತಿಯ ಉತ್ತರಗಳನ್ನು ಕಂಡು ಕೊನೆಗೂ ಕೋಪ ಉಕ್ಕಿ ವಿಮಾನದೊಳಕ್ಕೆ ಹೋಗುವಾಗ ಅವಳನ್ನು ತಿರುಗಿಯೂ ನೋಡದೆ ತನ್ನ ಸೀಟ್‍ಗೆ ಹೋಗಿ ಆಸೀನಳಾದಳು.

ಈ ಮಧ್ಯೆ ವಿಮಾನ ಹತ್ತುವ ಮುಂಚೆ ಆಕೆ ಮೆಕ್ಸಿಕನ್ ಎಂದು ಗೊತ್ತಾದುದೇ ತನ್ನ ಸಹಪಾಠಿಯೂ ಯುವ ಬರಹಗಾರನೂ ಆದ ರಾಜ್ ಹೇಳುತ್ತಿದ್ದ ಲ್ಯಾಟಿನ್ ಅಮೆರಿಕನ್ ಬರಹಗಾರರ ಹೆಸರುಗಳನ್ನು ಹೆಕ್ಕಿ ಅವಳತ್ತ ಎಸೆದಿದ್ದಳು ಸಬಾ: “ಗೊತ್ತಾ ನಿಮಗೆ? ಮಾರ್ಕೆಸ್, ಬೋರ್ಹೆಸ್, ಕೋರ್ತಜóರ್...?” ಈ ಹೆಸರುಗಳ ಮೂಲಕ ಮರಿಯಾಳನ್ನು ಆಶ್ಚರ್ಯದ ಕಡಲಿಗೆ ಎತ್ತಿ ಬಿಸಾಕಿದ್ದಳು. ಪಾಪ, ಮರಿಯಾ! ಮಾರ್ಕೆಸ್‍ನ ಹೊರತೂ ಆ ಯಾವ ಹೆಸರುಗಳೂ ಆಕೆಗೆ ಗೊತ್ತಿರಲಿಲ್ಲ. ಸಬಾಳನ್ನ ನೋಡಿ “ಪರವಾಗಿಲ್ವೆ, ನನಗಿಂತ ನಿಮಗೇ ಲ್ಯಾಟಿನೊ ಸಾಹಿತ್ಯ ಚೆನ್ನಾಗಿ ತಿಳಿದಂತಿದೆ...” ಎನ್ನುತ್ತಾ ಕಿರು ನಗೆ ಬೀರಿದ್ದಳು. ಸಬಾಳ ಮನಸನ್ನು ಆ ನಗು ಚಣ ಕುಲುಕಿತ್ತು; ಅವಳೆದೆಯೊಳಗಿಳಿದಿತ್ತು.

ಮೋಡಗಳ ಸೀಳಿ ವಿಮಾನ ಭಾರತದ ಕಡೆ ನುಗ್ಗುತ್ತಿರುವಾಗ ಸಬಾ ಸುಖಾ ಸುಮ್ಮನೆ ಪುಲಕಗೊಳ್ಳುತ್ತಿದ್ದಳು. ಇನ್ನು ಕೆಲವೇ ತಿಂಗಳುಗಳಲ್ಲಿ ಅಮೆರಿಕಕ್ಕೆ ಹಾರಲಿದ್ದೇನೆ... ನ್ಯೂಯಾರ್ಕ್‍ಗೆ ಹೋಗಿ ಆ ಸ್ಟಾಚ್ಯೂ ಆಫ್ ಲಿಬರ್ಟಿಯ ಪಾದಕ್ಕೆ ಮುತ್ತಿಡಬೇಕು... 

ಈ ಅಮೆರಿಕದ ಕನಸು ಅವಳಿಗೇನು ಮುಂಚಿನಿಂದಲೂ ಇರಲಿಲ್ಲ. ಆ ಆಸೆ ಕುಡಿ ಹೊಡೆದಿದ್ದೇ ಅವಳು ಭಾರತಕ್ಕೆ ಬಂದ ಮೇಲೇಯೇ! ಭಾರತಕ್ಕೆ ಮೊದಲ ಬಾರಿಗೆ ಬಂದಾಗ ಅವಳು ಗಲಿಬಿಲಿಗೊಂಡಿದ್ದಳು. ಆರಂಭದ ದಿನಗಳ ಒತ್ತಡ, ಮನೆಯ ನೆನಪು, ಹವಾಮಾನ ಎಲ್ಲವೂ ಮೆಲ್ಲಗೆ ಕರಗ ತೊಡಗಿ ವಿಜ್ಞಾನ ಪದವಿ ಮುಗಿಸಿದ್ದಳು. ಆಗೆಲ್ಲ ಅವಳಿಗೆ ವಾಪಸ್ ಇರಾನ್‍ಗೆ ಹೋದರೆ ಸಾಕಿತ್ತು. ಆದರೆ ಸ್ನಾತಕೋತ್ತರ ಪದವಿಗೆ ಬಂದಾಗಲೇ ಅಮೆರಿಕ ಕನಸು ಅವಳನ್ನು ತಬ್ಬಿಕೊಂಡಿದ್ದು. ಅಮೆರಿಕ ಎನ್ನುವುದು ಸ್ವಚ್ಛಂದ ಮತ್ತು ಸ್ವತಂತ್ರ ಬದುಕಿನ ತವರು, ಅಲ್ಲೇ ತನ್ನ ವ್ಯಕ್ತಿತ್ವ ಸುಂದರವಾಗಿ ಅರಳಲು ಸಾಧ್ಯ ಎಂದು ಭಾವಿಸಿದ್ದಳು.

ಈ ಸ್ವತಂತ್ರದ ಕನಸು ಸಬಾಳಲ್ಲಿ ಮೊಳಕೆ ಹೊಡೆಯಲು ಕಾರಣನಾದವನು ಅವಳ ಸೀನಿಯರ್ ಮುಸಾಫಿರ್. ಅವನೂ ಇವಳಂತೆಯೇ ಶಿಕ್ಷಣಕ್ಕಾಗಿ ಇರಾನ್‍ನಿಂದ ಬೆಂಗಳೂರಿಗೆ ಬಂದವನು. ಅಮೆರಿಕ ವೀಸಾ ವಿಷಯವನ್ನು ಅವನು ಹೇಳಿದಾಗ ಸಬಾ ಜೋರಾಗಿ ನಕ್ಕಿದ್ದಳು. ಅಮೆರಿಕ ವೀಸಾಕ್ಕೆ ಇರಾನಿಗರು ಅರ್ಜಿ ಸಲ್ಲಿಸಲೇ ಅವಕಾಶಗಳಿಲ್ಲದಿರುವಾಗ ಅಲ್ಲಿಗೆ ಹೋಗಿ ನೆಲೆ ನಿಲ್ಲುವುದು ಭ್ರಮೆ ಎಂದು ಛೇಡಿಸಿದ್ದಳು. ಅಮೆರಿಕಕ್ಕೆ ಹೋಗುವ ಸಾಧ್ಯತೆಗಳನ್ನು ಮುಸಾಫಿರ್ ಬಿಡಿಸಿ ತೋರಿಸಿದಾಗ ದಿಗ್ಭ್ರಮೆಗೊಂಡು ನಿಂತಿದ್ದಳು. ಇದು ಸಾಧ್ಯವೇ? ಎಂದು ಅಚ್ಚರಿಗೊಂಡಷ್ಟೇ ಭಯಭೀತಗೊಂಡಿದ್ದಳು ಕೂಡ. 

ಮುಸಾಫಿರ್ ಆರಿಸಿಕೊಂಡಿರುವ ಕಾನೂನು ಬಾಹಿರ ಹಾದಿಯನ್ನು ನೆನೆದು ಭಯಗೊಂಡು ನಿಂತಿದ್ದವಳು ಅಚ್ಚರಿಗೊಂಡು ಕುಣಿದಿದ್ದು ಮುಸಾಫಿರ್ ಚೆನ್ನೈಗೆ ಹೋಗಿ ಅಮೆರಿಕ ವೀಸಾವನ್ನು ಪಡೆದು ಬಂದಾಗ! ನಂತರವೇ ಅವಳು ತನಗೂ ಅಮೆರಿಕ ವೀಸಾ ಕೊಡಿಸುವಂತೆ ಮುಸಾಫಿರ್‌ನ ಹಿಂದೆ ದುಂಬಾಲು ಬಿದ್ದದ್ದು. ಗಂಗಾನಗರ್‌ನ ಒಬ್ಬ ಬ್ರೋಕರ್ ಬಳಿ ಅವಳನ್ನು ಕರೆದುಕೊಂಡು ಹೋಗಿದ್ದ ಮುಸಾಫಿರ್ ಈ ಅಕ್ರಮ ವ್ಯವಹಾರದ ಮೂಲೆಮುಡುಕುಗಳನ್ನು ವಿವರಿಸಿದ್ದ. ವಿಚಲಿತಳಾಗದೆ ಸಬಾ ಎಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡಿದ್ದಳು. ಇಲ್ಲಿಂದಲೇ ಅಮೆರಿಕ ಕನಸು ಅವಳೊಳಗೆ ಅಧಿಕೃತವಾಗಿ ಬೇರುಬಿಟ್ಟಿದ್ದು.

ಮೊದಲಿಗೆ ಭಾರತದ ವಿಳಾಸಕ್ಕಾಗಿ ರೇಷನ್ ಕಾರ್ಡ್ ಮಾಡಿಸಬೇಕು, ನಂತರ ಆಧಾರ್ ಕಾರ್ಡ್, ಆಮೇಲೆ ಬ್ಯಾಂಕ್ ಅಕೌಂಟ್ ಇವೆಲ್ಲ ಮುಗಿದ ಮೇಲೆ ಭಾರತದ ಪಾಸ್‍ಪೋರ್ಟ್. ಅದು ಸಿಕ್ಕ ಎರಡು ತಿಂಗಳಿಗೆ ಭಾರತದ ಪ್ರಜೆಯಾಗಿ ಅಮೆರಿಕ ವೀಸಾಕ್ಕೆ ಅರ್ಜಿ ಸಲ್ಲಿಸುವುದು. ಇಲ್ಲೇ ಸಬಾ ಚೂರು ಭಯ ಪಟ್ಟಿದ್ದು. ಅಕ್ರಮವಾಗಿ ಭಾರತದ ಪ್ರಜೆಯಾಗುವುದು ಬಹುದೊಡ್ಡ ಸಮಸ್ಯೆಯನ್ನು ಹುಟ್ಟು ಹಾಕಬಹುದೇನೊ ಎನ್ನುವ ಆತಂಕ ಅವಳಲ್ಲಿತ್ತು. ಸಿಕ್ಕಿ ಹಾಕಿಕೊಂಡರೆ ಭಾರತದ ಕಾನೂನಿನಡಿಯಲ್ಲಿ ಕಠಿಣ ಜೈಲು ಶಿಕ್ಷೆಯಾಗಬಹುದು ಎಂದು ಅಂಜಿದಳು. ಆದರೆ ಮುಸಾಫಿರ್ ತನ್ನ ಉದಾಹರಣೆ ತೋರಿಸಿ ಅಮೆರಿಕಕ್ಕೆ ಹೋಗಲಷ್ಟೆ ತಾವು ಈ ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದೇ ಹೊರತು ಭಾರತದಲ್ಲೇ ನೆಲೆ ನಿಲ್ಲಲಲ್ಲ ಎಂದು ಅವಳನ್ನು ಸಮಾಧಾನಿಸಿದ್ದ. ಮುಸಾಫಿರ್‌ನ ಮಾತುಗಳ ಕೇಳುತ್ತಾ ಅವನನ್ನೇ ನೋಡುತ್ತಿದ್ದ ಆಕೆಯನ್ನು ಬೆಚ್ಚಿ ಬೀಳುವಂತೆ ಬ್ರೋಕರ್ ಸ್ವಾಗತಿಸುತ್ತಿದ್ದ. 

ಕೋಟಿಗಟ್ಟಲೆ ಜನಸಂಖ್ಯೆ ಇರುವ ಈ ದೇಶದಲ್ಲಿ ಯಾರು ಯಾವ ದೇಶದವರು ಎಂಬುದನ್ನು ಪತ್ತೆ ಹಚ್ಚುವುದು ಕಷ್ಟ ಎಂತಲೂ ಇರಾನಿಯನ್ನರು ನೋಡಲು ಉತ್ತರ ಭಾರತೀಯರಂತೆ ಕಾಣುವುದರಿಂದ ಭಾರತೀಯ ಪಾಸ್‍ಪೋರ್ಟ್ ಪಡೆಯುವುದು ಸುಲಭ ಎಂದೂ ಅವಳಿಗೆ ಆ ಬ್ರೋಕರ್ ವಿವರಿಸುತ್ತಿದ್ದ. ಭಾರತೀಯರಿಗೆ ಸುಲಭವಾಗಿ ಅಮೆರಿಕ ವೀಸಾ ಸಿಗುತ್ತದೆ ಎಂದು ಆಕೆಯನ್ನು ಕೆರಳಿಸಿದ್ದ. ಕಾನೂನಿಗೆ ವಿರುದ್ಧವಾದ ಈ ಅಪಾಯಕಾರೀ ಹಾದಿಗೆ ಖರ್ಚಾಗುವುದು ಇಂಡಿಯನ್ ದುಡ್ಡಲ್ಲಿ ಐದು ಲಕ್ಷ ರುಪಾಯಿಗಳು. ಆ ಮೊತ್ತವನ್ನು ಮೂರು ಹಂತವಾಗಿ ಕೊಡಬೇಕು, ಮೊದಲಿಗೆ ಅಡ್ವಾನ್ಸ್ ಆಗಿ ಒಂದು ಲಕ್ಷ, ಎಲ್ಲಾ ದಾಖಲೆಗಳನ್ನು ಹೊಂದಿಸಿ ಪೊಲೀಸ್ ವೆರಿಫಿಕೇಷನ್ ಮುಗಿಸಿ ಪಾಸ್‍ಪೋರ್ಟ್ ಕೈಗೆ ಸಿಕ್ಕಾಗ ಎರಡು ಲಕ್ಷ ಮತ್ತು ಕೊನೆಯದಾಗಿ ಅಮೆರಿಕನ್ ವೀಸಾಕ್ಕೆ ಅರ್ಜಿ ಸಲ್ಲಿಸಿ ಸಂದರ್ಶನದ ದಿನಾಂಕ ಖಚಿತವಾದುದೇ ಉಳಿದ ದುಡ್ಡು. ಅಮೆರಿಕದ ಕನ್ಸುಲೇಟ್ ಒಳಗಿನ ವ್ಯವಹಾರಕ್ಕೂ ತನಗೂ ಸಂಬಂಧವಿಲ್ಲವೆಂದು, ತನ್ನ ಕೆಲಸ ಭಾರತೀಯ ಪಾಸ್‍ಪೋರ್ಟ್ ಕೊಡಿಸುವುದಷ್ಟೆ ಎನ್ನುವುದನ್ನು ಆ ಬ್ರೋಕರ್ ಇವಳಿಗೆ ಸ್ಪಷ್ಟವಾಗಿ ತಿಳಿಸಿ ಮುಂಗಡ ಹಣ ಪಡೆದು ಹೋಗಿದ್ದ. ಇವುಗಳೊಂದಿಗೆ ಆತ ಇನ್ನೊಂದು ವಿಷಯವನ್ನು ಇವಳಿಗೆ ಹೇಳಿದ್ದ: ಪೊಲೀಸರು ಮತ್ತು ಸರ್ಕಾರಿ ಕಛೇರಿಗಳಲ್ಲಿ ಅನುಮಾನ ಬರದಿರಲು ಬೇಗನೇ ಹಿಂದಿ ಕಲಿಯುವಂತೆ ಅವಳಿಗೆ ತಾಕೀತು ಮಾಡಿದ್ದ. ಆತನ ಮಾತಿನಂತೆಯೇ ಹಿಂದಿ ಕಲಿಯುತ್ತಿದ್ದ ಸಬಾ ಮಜೀದ್ ತನ್ನ ಪಾಸ್‍ಪೋರ್ಟ್ ಕದನದ ಮೂರನೇ ಹಂತಕ್ಕಾಗಿ ದುಡ್ಡು ಹೊಂದಿಸಲೇ ಟರ್ಕಿಯಲ್ಲಿರುವ ತನ್ನ ಸೋದರಿಯನ್ನು ಹುಡುಕಿಕೊಂಡು ಬಂದಿದ್ದು. ಕಾಡಿ ಬೇಡಿ ಆಕೆಯನ್ನು ಒಪ್ಪಿಸಿ ಎಂಭತ್ತು ಸಾವಿರ ಪಡೆದು, ಅಮೆರಿಕಕ್ಕೆ ಹೋದ ಎರಡು ತಿಂಗಳಿಗೆ ಹಣ ಕಳುಹಿಸುವ ಮಾತು ಕೊಟ್ಟು ಆಕೆಯಿಂದ ಹಣ ಪಡೆದು ಅದನ್ನು ತನ್ನ ಭಾರತದ ವಿಳಾಸಕ್ಕೆ ವೆಸ್ಟರ್ನ್ ಯೂನಿಯನ್‍ನಲ್ಲಿ ಕಳುಹಿಸಿ ವಾಪಸ್ ಬೆಂಗಳೂರಿಗೆ ಹೊರಟಿದ್ದಳು ಸಬಾ.

ವಿಮಾನ ಬೆಂಗಳೂರಿನ ಮಣ್ಣನ್ನು ಸ್ಪರ್ಶಿಸಿದ್ದೇ ಅವಳ ಮನಸ್ಸು ಕುಣಿದಾಡಿತು. ಸರಸರನೆ ಇಳಿದು  ಬೇಗ ಇಮ್ಮಿಗ್ರೇಷನ್ ಮುಗಿಸಿ ಹೊರ ಹೋಗಲು ಓಡಿದಳು. ಸಿಗಲಿರುವ ಇಂಡಿಯನ್ ಪಾಸ್‍ಪೋರ್ಟ್‍ನ್ನು ಕನಸುತ್ತಾ ಸಬಾ ಮಜೀದ್ ಸರತಿಯಲ್ಲಿ ನಿಂತಿರುವಾಗಲೇ ಆ ಮೆಕ್ಸಿಕನ್ ಹುಡುಗಿಯನ್ನು ಮತ್ತೆ ನೋಡಿದ್ದು. ತನ್ನ ಮುಗುಳ್ನಗೆಗೆ ಪ್ರತಿಯಾಗಿ ಆಕೆ ಕೊಟ್ಟ ಮುಗುಳ್ನಗೆಯೊಳಗೆ ಏನೋ ಅಡಗಿ ಕೂತಂತಿತ್ತು. ತನ್ನ ನಗುವಿನಿಂದಲೂ ತಪ್ಪಿಸಿಕೊಂಡು ಓಡುವ ಉಮೇದು ಅದರೊಳಗಿದ್ದಂತೆ ತೋಚಿ ಅವಳತ್ತ ನೋಡದೆ ಸಬಾ ಮತ್ತೆಲ್ಲೊ ತಿರುಗಿದಳು. ಆದರೂ ಅವಳ ಮಾದಕ ನಗುವಿಗಾಗಿ ಮತ್ತೆ ನೋಡುವಂತೆ ಸಬಾಳನ್ನು ಕಿಬ್ಬೊಟ್ಟೆ ಕೆಣಕುತ್ತಿತ್ತು.

ಕಂದು ಬಣ್ಣದ ಮೈಮಾಟ, ಮೊಗ್ಗು ಅರಳುವ ಕಿರುನಗೆ, ಕಣ್ಸೆಳೆವ ಅವಳ ತುಂಬು ಎದೆ ಮತ್ತು ಆಕರ್ಷಕ ಹಿಂಭಾಗ... ಛೀ... ನಾಚಿಕೆ ಆಗಲ್ವೇನೆ ನಿನಗೆ, ಸಬಾ... ನೀನೊಬ್ಬಳು ಪಾಪಿ, ಷೈತಾನ್ ...!

ಇಮ್ಮಿಗ್ರೇಷನ್ ಅಧಿಕಾರಿಗಳು ಮರಿಯಾಳನ್ನು ಏನೋ ಪ್ರಶ್ನಿಸುತ್ತಿದ್ದುದು ಇವಳ ಕಣ್ಣಿಗೆ ಬಿತ್ತು. ಆಕೆ ಕಾಗದ ಪತ್ರಗಳನ್ನು ತೆಗೆಯಲು ಗಲಿಬಿಲಿಗೊಂಡು ತಡವರಿಸುತ್ತಿದ್ದುದನ್ನು ಸಬಾ ಗಮನಿಸಿದಳು. ಆಕೆಯ ಸಹಾಯಕ್ಕೆ ಹೋಗಲೇ? ಅಧಿಕಾರಿಗಳ ಬಳಿ ಹಿಂದಿಯಲ್ಲಿ ಮಾತನಾಡಿ ಆಕೆಯನ್ನು ತೊಂದರೆಗಳಿಂದ ಪಾರು ಮಾಡಲೇ!? ಬೇಡ ಆಕೆಗೆ ತನ್ನ ಜೊತೆ ಸ್ನೇಹ ಬೆಳೆಸುವುದು ಇಷ್ಟವಿಲ್ಲ ಅನ್ನಿಸುತ್ತದೆ... ಅದಕ್ಕಿಂತ ಮುಖ್ಯವಾಗಿ ಆಕೆಯ ಹಿನ್ನೆಲೆ ಏನೊ ಯಾರಿಗೆ ಗೊತ್ತು!? ಅಕಸ್ಮಾತ್ ಅವಳ ಬಳಿ ಡ್ರಗ್ಸ್‌ಗಿಗ್ಸ್ ಇದ್ದರೆ...? ಆಕೆಗೆ ಸಹಾಯ ಮಾಡಲು ಹೋಗಿ ತನ್ನ ಅಮೆರಿಕ ಕನಸು ಕಮರಿ ಹೋಗುವುದು ಮಾತ್ರವಲ್ಲದೆ ಕಾನೂನು ಬಾಹಿರವಾದ ದಾಖಲೆಗಳನ್ನು ಸೃಷ್ಟಿಸಿದ್ದಕ್ಕಾಗಿ ಭಾರತದ ಜೈಲು ಸೇರಬೇಕಾದೀತು...

ಅವಳತ್ತ ನೋಡದೆ ಇಮ್ಮಿಗ್ರೇಷನ್ ದಾಟಿ ನೇರವಾಗಿ ಕಸ್ಟಮ್ಸ್ ತಪಾಸಣೆಯನ್ನೂ ಮುಗಿಸಿ ನಿಟ್ಟುಸಿರಿಟ್ಟು ಹೊರ ಬರುತ್ತಿರುವಾಗ ಮರಿಯಾಳ ಆ ಕಿರುನಗೆ ಸಬಾಳನ್ನು ಕಟ್ಟಿ ಹಾಕಿ ಕದಲದೆ ಅಲ್ಲೇ ನಿಲ್ಲಿಸಿತು. ಅವಳಿಗಾಗಿ ಕಾಯುತ್ತಾ ನಿಂತಳು. ಮೊದಲನೆಯ ಬಾರಿಗೆ ವಿದೇಶವೊಂದಕ್ಕೆ ಬರುವ ಹುಡುಗಿಯರಲ್ಲಿ ಈ ಆತಂಕ, ಭಯ, ಹಿಂಜರಿಕೆ ಎಲ್ಲವೂ ಸಾಮಾನ್ಯವೇ! ಹೇಳಿ ಬಿಡಲೇ, ಅವಳಿಗೆ...? ತಾನೂ ನಿನ್ನಂತೆ ಒಬ್ಬ ವಿದೇಶಿಯವಳೆಂದು!?

ತಮ್ಮ ಜೊತೆ ವಿಮಾನದಲ್ಲಿ ಬಂದವರೆಲ್ಲ ಹೊರಗೆ ಹೋಗುತ್ತಿರುವುದ ನೋಡಿದಳು ಸಬಾ... ಮರಿಯಾ ಬರುತ್ತಲೇ ಇಲ್ಲ. ಸುಮಾರು ಒಂದು ಗಂಟೆಯ ನಂತರ ಆ ಮೆಕ್ಸಿಕನ್ ಬೆಡಗಿ ಮರಿಯಾ ರೋಸಾ ತನ್ನ ಲಗೇಜನ್ನು ತಳ್ಳಿಕೊಂಡು ಭಾರ ಹೆಜ್ಜೆಗಳ ಊರುತ್ತಾ ಬಂದಳು. ಸುಸ್ತಾದಂತೆ ಕಾಣುತ್ತಿದ್ದಳು. ಉಲ್ಲಾಸಿತಳಾದ ಸಬಾ ಅವಳತ್ತ ಕೈ ಚಾಚಿ “ನೈಸ್ ಟು ಮೀಟ್ ಯೂ” ಎಂದಳು. ಆಕೆಯೂ ಪ್ರತಿಯಾಗಿ “ಮೀ ಟೂ” ಅಂದರೂ ಆಕೆಯ ಕಂಗಳಲ್ಲಿ, ಧ್ವನಿಯಲ್ಲಿ ಈ ಮುಂಚೆ ಇದ್ದ ಅದೇ ಅನಾಸಕ್ತಿ ಕಾಣಿಸಿತು.

ಆದರೂ ಸಬಾ ಅವಳನ್ನು ಬಿಡುವಂತಿಲ್ಲ. ಆಕೆಯ ಮೈಯನ್ನು ಅಕಸ್ಮಾತ್ ಆಗಿ ಸೋಕಿದಂತೆ ನಟಿಸಿ “ಕ್ಷಮಿಸಿ” ಎನ್ನುತ್ತಾ ಆಕೆಯ ಜೊತೆ ಹೆಜ್ಜೆಯಿಟ್ಟಳು. ಇವಳಿಂದ ತಪ್ಪಿಸಿಕೊಳ್ಳಲೊ ಎಂಬಂತೆ ಮರಿಯಾ ಚೂರು ಲಗುಬಗೆಯಿಂದ ನಡೆಯುವಂತೆ ತೋರಿತು. ಸಬಾ ಮತ್ತೆ ಆಕೆಯನ್ನು ಕೆಣಕುವಂತೆ “ನಿಮ್ಮನ್ನು ರಿಸೀವ್ ಮಾಡಲು ಯಾರಾದರೂ ಬಂದಿದ್ದಾರಾ?” ಕೇಳಿದಳು. ಆಕೆ “ಯೆಸ್” ಎಂದಾಗ ಅವಳ ಆ ಧ್ವನಿಯಲ್ಲಿ ಇಂಡಿಯಾದ ಮೆಣಸಿನಕಾಯಿಯ ಘಾಟು ಬಡಿದಂತಾಯ್ತು. ಅದನ್ನೂ ನುಂಗಿಕೊಂಡು ಸಬಾ “ಬೆಂಗಳೂರಲ್ಲಿ ಯಾವ ಏರಿಯಾಕ್ಕೆ ಹೋಗಬೇಕು, ನೀವು?” ಕೇಳಿದಳು. ಮರಿಯಾ ತಟ್ಟನೆ ನಿಂತಳು.

ಬಹುಶಃ ಬೈಯ್ಯುವಳೇನೊ ಎಂದು ಹೆದರಿ ಇಲ್ಲಿಂದ ತಕ್ಷಣ ಹಾರಿಬಿಡಬೇಕು ಎಂದುಕೊಂಡು ಸಬಾ ಮುಂದೆ ತಿರುಗಿದಾಗ ಮರಿಯಾ ಇವಳ ಬೆನ್ನನ್ನು ನೋಡಿ “ಮೆಕ್ಸಿಕನ್ ಆಗಿ ಹುಟ್ಟಿದ್ದು ನನ್ನ ತಪ್ಪೇ!?” ಎಂದಳು. ವಿಚಲಿತಗೊಂಡು ಸಬಾ ಹಿಂದೆ ತಿರುಗಿದಳು.

“ಈ ಜಗತ್ತಿನ ಬಹುತೇಖ ರಾಷ್ಟ್ರಗಳು ಅಮೆರಿಕದ ಚೇಲಾಗಳು... ಇಲ್ಲಿಯ ಇಮ್ಮಿಗ್ರೇಷನ್‍ನಲ್ಲೂ ನನಗೆ ಎಷ್ಟು ಹಿಂಸೆ ನೀಡಿದರು ಗೊತ್ತಾ!?” ಎಂದಳು ಮರಿಯಾ.

ತಮ್ಮ ಇರಾನಿಯನ್ನರ ಹಾಗೆ ಮೆಕ್ಸಿಕನ್ನರೂ ಹೋದ ಕಡೆಯೆಲ್ಲ ತೀವ್ರ ತಪಾಸಣೆಗೆ ಒಳಪಡುತ್ತಾರೆ ಎನ್ನುವುದು ಸಬಾಳಿಗೆ ಗೊತ್ತಾಗಿದ್ದೇ ಈಗಲೇ. ಆಕೆಯ ನೋಡಿ “ಮಿಸ್ ಮರಿಯಾ, ನಿಮಗೆ ಎಷ್ಟೋ ದೇಶಗಳನ್ನು ನೋಡುವ ಅವಕಾಶಗಳಾದರೂ ಇವೆ. ನಮಗೆ ವೀಸಾ ಕೊಡುವುದೇ ಈ ಜಗತ್ತಲ್ಲಿ ಹತ್ತಾರು ದೇಶಗಳು ಮಾತ್ರ...” ಎನ್ನುತ್ತಾ ತನ್ನ ನಿಜ ಬಣ್ಣದ ಚಿತ್ರ ಬಿಡಿಸಿದ ಸಬಾ ಮರಿಯಾಳ ನೋಡುತ್ತಾ ದುಂಬಿಯಾಗುತ್ತಿದ್ದಳು. 

ವಿದೇಶಗಳಿಂದ ಬರುವವರನ್ನು ಸ್ವೀಕರಿಸಲು ನಿಂತಿದ್ದವರತ್ತ ನೋಡುತ್ತಾ ಬಿರ್ರನೆ ಹೊರ ಬಂದು ವಿಮಾನ ನಿಲ್ದಾಣದ ಹೊರ ಆವರಣದ ಒಂದು ಮೂಲೆಗೆ ಹೋಗಿ ನಿಂತ ಮರಿಯಾ ತನ್ನ ಪ್ಯಾಂಟ್ ಜೇಬಿನಿಂದ ಸಿಗರೇಟ್ ಪ್ಯಾಕ್ ತೆಗೆಯುತ್ತಾ ಸಬಾಳ ನೋಡಿ “ಧಮ್ ಬೇಕಾ?” ಎನ್ನುವಂತೆ ಸಂಜ್ಞೆ ಮಾಡಿದಳು. ಬೇಡ ಎನ್ನುತ್ತಾ ಸಬಾ ಆಕೆ ಸಿಗರೇಟ್ ಸೇದುವ ಸೊಬಗನ್ನು ನೋಡ ತೊಡಗಿದಳು.

ಮರಿಯಾ ಆಗಸವ ನೋಡುತ್ತಾ ಏನನ್ನೊ ಯೋಚಿಸುತ್ತಿರುವಂತೆ ಕಾಣುತ್ತಿದೆ. ಇವಳೂ ಅತ್ತ ನೋಡಿದಳು. ಚದುರಿದ ಬಿಳಿ ಮೋಡಗಳು ಚಲಿಸುತ್ತಾ ಎಲ್ಲೊ ಕೆಲವು ಪರಸ್ಪರ ಢಿಕ್ಕಿ ಹೊಡೆದು ಮೆಲ್ಲಗೆ ತಿಳಿ ಕಪ್ಪು ಬಣ್ಣಕ್ಕೆ ತಿರುಗುತ್ತಿದ್ದವು. ಬಹುಶಃ ಮಳೆಗಾಲ ಆರಂಭವಾಗುತ್ತಿದೆಯೇನೊ ಎಂದುಕೊಂಡಳು ಸಬಾ. ಆಗ ಅವಳ ಮನಸ್ಸಿನೊಳಗೆ ಒಂದು ಪ್ರವಾಹ ಉಕ್ಕಿ ಬಂದಿತು. ಈ ಮೆಕ್ಸಿಕನ್‍ಳ ಮೂಲಕ ಅಮೆರಿಕದ ಬಗ್ಗೆ ತಿಳಿದು ಕೊಂಡರೆ ಹೇಗೆ? ಸಾವಿರಾರು ಮೆಕ್ಸಿಕನ್ನರು ದಿನಂಪ್ರತಿ ಅಮೆರಿಕದೊಳಕ್ಕೆ ನುಸುಳಿ ಕಳ್ಳತನದಲ್ಲಿ ಬದುಕುತ್ತಾರಂತೆ. ಅಮೆರಿಕದೊಳಗೆ ಪ್ರವಾಸೀ ವೀಸಾದಡಿ ಹೋಗಿ ಅಲ್ಲೇ ಖಾಯಂ ಆಗಿ ಉಳಿದುಬಿಡುವುದು ಹೇಗೆ ಎನ್ನುವುದನ್ನು ಇವಳ ಮೂಲಕ ಅರಿಯಬಹುದೇನೊ...   

ಒಂದು ದೀರ್ಘ ನಿಟ್ಟುಸಿರಿನೊಂದಿಗೆ ಸಿಗರೇಟ್ ತುಂಡನ್ನು ಕೆಳಗೆ ಹಾಕಿ, ಅದನ್ನು ಎಡಗಾಲಲ್ಲಿ ತುಳಿದ ಮರಿಯಾ ಸಬಾಳನ್ನು ನೋಡಿ “ಕಮ್...” ಎಂದಳು. ಇಬ್ಬರು ಮತ್ತೆ “ಆಗಮನ”ದ ಗೇಟಿಗೆ ಹೋಗಿ ಬರಮಾಡಿಕೊಳ್ಳಲು ನಿಂತಿದ್ದವರನ್ನು ನೋಡುತ್ತಾ ಸಾಗಿದರು. ಅಲ್ಲಿದ್ದ ಬಹುತೇಖರಲ್ಲಿ ಮಧ್ಯಮ ವಯಸ್ಸಿಗರೂ ಯುವಕರೂ ಇದ್ದರು. ಅವರುಗಳನ್ನು ಸೂಕ್ಷ್ಮವಾಗಿ ನೋಡುತ್ತಾ ನಿಟ್ಟುಸಿರಿಟ್ಟು ಸಾಗಿದ ಮೆಕ್ಸಿಕನ್ ದೇಶದ ಮರಿಯಾ “ನನ್ನನ್ನು ಕರೆದುಕೊಂಡು ಹೋಗಲು ಯಾರೂ ಬಂದಿಲ್ಲವಲ್ಲ, ಏನು ಮಾಡುವುದು?!” ಎನ್ನುತ್ತಾ ಸಬಾಳನ್ನೇ ನೋಡಿದಳು.

ತಕ್ಷಣ ಏನು ಹೇಳುವುದೆಂದು ತೋಚದೆ ಸಬಾ ಚಣ ಮೌನವಾಗಿ ನಿಂತಳು. “ ಒಂದು ದಿನದ ಮಟ್ಟಿಗೆ ನಿಮ್ಮ ರೂಮಲ್ಲಿ ಉಳಿಯಬಹುದೇ?” ಮರಿಯಾ ಸಬಾಳ ತೋಳನ್ನು ಮುಟ್ಟಿ ಕೇಳಿದಳು. ಈ ಪ್ರಶ್ನೆ ಕಿವಿಗೆ ಬಡಿದದ್ದೇ ತಡ “ಬೈ ಆಲ್ ಮೀನ್ಸ್” ಎಂದಳು ಸಬಾ, ಹಾರುವ ಹಕ್ಕಿಯಾಗಿ.

ಸಬಾಳಿಗೆ ಮತ್ತೆ ಮರಿಯಾಳ ಮೇಲೆ ಯಾಕೋ ಅನುಮಾನ ಹುಟ್ಟಿಕೊಂಡಿತು. ಮೆಕ್ಸಿಕನ್ ಎನ್ನುವುದೇನೊ ಖರೆ ಆದರೆ ಇವಳು ನಿಜಕ್ಕೂ ನ್ಯೂಟ್ರಿಶಿಯನಿಸ್ಟಾ? ಎಣ್ಣೆಯಲ್ಲಿ ಕರಿದ ಈ ಕೋಳಿಯನ್ನು ಗಬಗಬನೆ ತಿನ್ನುವುದ ನೋಡಿದರೆ ಇವಳ ಬಗ್ಗೆ ಯಾಕೋ ಅನುಮಾನ ಎಂದುಕೊಂಡು ತನ್ನ ರೂಮ್‍ಮೇಟ್‍ಗೆ ಮೊಬೈಲ್‍ನಲ್ಲಿ ಸಂದೇಶವನ್ನು ಟೈಪ್ ಮಾಡುತ್ತಾ ಸ್ವಿಗ್ಗಿಯಲ್ಲಿ ತರಿಸಿಕೊಂಡಿದ್ದ ಫ್ರೈಡ್ ಚಿಕನ್‍ನನ್ನು ತಿನ್ನುತ್ತಿದ್ದಳು ಸಬಾ. 

ಊಟ ಮುಗಿಸಿ ಮರಿಯಾ ಕಪಾಟಿನ ಬಳಿ ನಿಂತು ಪುಸ್ತಕಗಳನ್ನು ನೋಡುತ್ತಿದ್ದಳು.

“ಇಷ್ಟೂ ಪುಸ್ತಕಗಳನ್ನು ಓದಿದಿರಾ ನೀವು?!”

“ಕೆಲವನ್ನು ಓದಿದ್ದೇನೆ, ಅಷ್ಟೆ... ಇನ್ಮುಂದೆಯೇ ಉಳಿದವುಗಳ ಓದಬೇಕು”

“ಓಲ್ಡ್ ಮೇನ್ ಅಂಡ್ ಸೀ? ಏನ್ ಇದು?” ಮರಿಯಾಳ ಈ ಪ್ರಶ್ನೆಯಲ್ಲಿ ಅರ್ಥವಾಗದ ಭಾವವೊಂದು ಅವಳ ಕಣ್ಣುಗಳೊಳಗಿಂದ ಇಣುಕಿ ತಟಕ್ಕನೆ ಒಳ ಹೋದಂತೆ ಸಬಾಳಿಗೆ ತೋಚಿತು. ಕೈ ತೊಳೆಯಲು ಹೋಗುತ್ತಾ ಹೇಳಿದಳು:

“ಅದೊಂದು ಕಾದಂಬರಿ. ನಮಗದು ಪಠ್ಯ. ಹೆಮಿಂಗ್ವೆ ಎನ್ನುವ ಅಮೆರಿಕದ ಬರಹಗಾರ ಬರೆದದ್ದು. ಅದ್ಭುತವಾದ ಕಾದಂಬರಿ. ಹೆಮಿಂಗ್ವೇಯೇ ಒಂದು ಅದ್ಭುತ ಗೊತ್ತಾ!? ಬಹಳ ಇಂಟೆರಿಸ್ಟಿಂಗ್ ಫೆಲೊ. ಬೇಟೆ, ಯುದ್ಧ, ಸಮುದ್ರ, ಮೀನು ಅಂತ ಅವನ ಸಾಹಸಗಳು ಒಂದಾ ಎರಡಾ!? ಒಂದ್ ವಿಷಯ ನಿಮಗೆ ಗೊತ್ತಾ? ಅವನಿಗೂ ನಿಮ್ಮ ದಕ್ಷಿಣ ಅಮೆರಿಕಕ್ಕೂ ಒಂದು ಬಗೆಯ ನಂಟಿದೆ...”

ಮೆಕ್ಸಿಕನ್ ಬೆಡಗಿ ಮರಿಯಾ ತುಟಿಯರಳಿಸಿ ನಕ್ಕಳು. ಆ ನಗು ಸಬಾಳನ್ನು ಆಳ ಕಡಲಿಗೆ ತಳ್ಳಿತು. ಇದುವರೆವಿಗೂ ಕಾಣದಿದ್ದ ಭಾರೀ ಮೀನುಗಳು ಆಕಾಶಕ್ಕೂ ಕಡಲ ಆಳಕ್ಕೂ ಅವಳನ್ನು ಎತ್ತೆತ್ತಿ ಬಿಸಾಕುತ್ತಿದ್ದವು.

ಕಾಲ ತೆವಳುತ್ತಾ ಕರಗಿ ಹೋಗುತ್ತಿದ್ದಾಗ ಯಾರೋ ಬಾಗಿಲು ಬಡಿಯುವ ಸದ್ದು. ಮರಿಯಾ ತಟ್ಟನೆ ಎದ್ದು ಗೊರಕೆ ಹೊಡೆಯುತ್ತಿರುವ ಸಬಾಳನ್ನು ಎಬ್ಬಿಸಿದಳು. ಕೂದಲನ್ನು ಸಿಂಬೆ ಸುತ್ತಿಕೊಳ್ಳುತ್ತಾ ತನ್ನ ಗೆಳತಿಯೇ ಬಂದಿರಬೇಕು ಎನ್ನುತ್ತಾ ಚಿಲಕ ತೆಗೆದಳು.

ದಿಗಿಲ್ಗೊಂಡು ನಿಂತಳು ಸಬಾ. ಹೊರಗೆ ಒಬ್ಬ ಆಜಾನುಬಾಹು ಬಿಳೀ ಬಣ್ಣದ ವಯಸ್ಸಾದ ವ್ಯಕ್ತಿ ನಿಂತಿದ್ದ. ಆತನನ್ನು ಸೂಕ್ಷ್ಮವಾಗಿ ಗಮನಿಸಿದಳು. ಇಡೀ ಮೈಯೊಳಗೆ ವಿದ್ಯುತ್ ಹರಿದಂತೆ ರೋಮಾಂಚನಗೊಂಡು “ವಾಹ್, ವಾಟ್ಟಾ ಪ್ಲೆಸೆಂಟ್ ಸರ್‍ಪ್ರೈಸ್... ಪ್ಲೀಸ್ ಕಮ್ ಇನ್ ಹೆಮಿಂಗ್ವೆ... ನಿಮ್ಮ ಬಗ್ಗೆ ಸ್ವಲ್ಪ ಹೊತ್ತಿನ್ ಮುಂಚೆ ಮಾತಾಡ್ತಿದ್ವಿ... ಬನ್ನಿ...” ಎಂದಳು.

ಆ ವ್ಯಕ್ತಿ ಏನನ್ನೊ ಹುಡುಕುವಂತಿತ್ತು. ಮರಿಯಾಳನ್ನು ನೋಡಿದ್ದೇ ಅಲ್ಲೇ ನಿಂತು “ಅಲ್ ಡೊರೆಡೊ?” ಅವಳನ್ನು ಕೇಳಿದ.

ಮರಿಯಾ ಆತಂಕಗೊಂಡು ನಿಂತಿದ್ದು ಸಬಾಳಿಗೆ ಕಾಣಿಸಿತು. ಆತನ ಬಳಿ ಓಡುತ್ತಾ “ಆಕೆ ಹೆದರುವ ಸ್ವಭಾವದವಳು, ಹೆಮಿಂಗ್ವೆ... ಬನ್ನಿ ಕೂರಿ, ನಾ ಅವಳತ್ರ ಮಾತಾಡ್ತೇನೆ” ಎಂದಳು.

ಆತ ಕುರ್ಚಿಯಲ್ಲಿ ಕೂತು ಮರಿಯಾಳನ್ನು ಮತ್ತೆ ನೋಡಿ “ಸಿಲ್ವರ್ ಕ್ಯಾಟ್?” ಎಂದ. ಮರಿಯಾ ಭಯದಿಂದ ವಸ್ತುಶಃ ನಡುಗುವುದ ಕಂಡು ಸಬಾ ಆತನ ಗಮನವನ್ನು ತನ್ನತ್ತ ಸೆಳೆದು “ಹೆಮಿಂಗ್ವೆ... ಅಲ್ ಡೊರೆಡೊ ಎಂದರೇನೆಂಬುದು ನನಗೆ ಗೊತ್ತು. ಆದರೀ ಬೆಳ್ಳಿಯ ಬೆಕ್ಕು ಎಂದರೇನು? ಅಲ್ ಡುರೆಡೊದಲ್ಲಿ ಬೆಳ್ಳಿಯೂ ಸಿಗುತ್ತಾ? ಅದೊಂದು ಬಂಗಾರಗಳಿಂದ ತುಂಬಿ ತುಳುಕುವ ಅಮೆರಿಕ ಮೂಲವಾಸಿಗಳ ಮಾಯಾ ನಗರಿ ಎಂದು ಓದಿದ್ದೇನೆ. ಅದನ್ನು ಹುಡುಕಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಅದನ್ನೇ ಪತ್ತೆ ಹಚ್ಚಲು ಹೊರಟಿದ್ದೀರಾ? ಹುಲಿ ಸಿಂಹಗಳ ಬೇಟೆಗಳನ್ನು ನಿಲ್ಲಿಸಿಬಿಟ್ಟೀರಾ ಹೇಗೆ?” ಎಂದು ನಗುತ್ತಾ ಮರಿಯಾಳ ಬಳಿ ಹೋಗಿ ಮೆಲ್ಲಗಿನ ದನಿಯಲ್ಲಿ “ಅಲ್ ಡೊರೆಡೊದ ರಹಸ್ಯ ನಿನಗೆ ಗೊತ್ತಾ ಮರಿಯಾ?! ಗೊತ್ತಿದ್ದರೆ ಹೇಳಿಬಿಡು... ಇವನು ಅಸಾಧ್ಯ ಮುದುಕ... ಇವನ ಬಗ್ಗೆ ನಿನಗೆ ಗೊತ್ತಿಲ್ಲ... ನೋಡು ಅವನ ಸೊಂಟದಲ್ಲಿ ಬಂದೂಕನ್ನಿಟ್ಟುಕೊಂಡಿದ್ದಾನೆ” ಎನ್ನುತ್ತಾ ಆ ವ್ಯಕ್ತಿಯ ನೋಡಿ ದೇಸಾವರಿ ನಗೆ ನಕ್ಕಳು.

ಆತ ಎದ್ದು ನಿಂತು ಮರಿಯಾಳನ್ನು ನೋಡಿ “ಲೆಟ್ಸ್ ಗೋ...” ಎಂದ. ತಟಕ್ಕನೆ ಅವನ ಕಾಲಿಗೆ ಎರಗಿದ ಸಬಾ “ನನ್ನನ್ನೂ ಕರೆದುಕೊಂಡು ಹೋಗಿ ಹೆಮಿಂಗ್ವೆ... ನಿಮ್ಮ ಹುಡುಕಾಟಕ್ಕೆ ನಾನೂ ಸಹಾಯ ಮಾಡುತ್ತೇನೆ, ಪ್ಲೀಸ್...” ಮಾತನ್ನು ಜೋಡಿಸುತ್ತಾ ಆತನ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಳು. 

ಸಬಾಳನ್ನು ಜಾಡಿಸಿ ಹೊಡೆದ ಆತ ಮರಿಯಾಳ ಕೈಗಳ ಹಿಡಿದು ಎಳೆಯುತ್ತಾ “ಯು ಬ್ಲಡಿ ಗ್ರೆಂಜೊ... ಕಮ್ ವಿತ್ ಮಿ” ಎಂದ. ಮರಿಯಾ ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ವ್ಯರ್ಥ ಪ್ರಯತ್ನ ನಡೆಸುತ್ತಿದ್ದಳು. ಅಂಗಾತ ಬಿದ್ದಿದ್ದ ಸಬಾ ಮೆಲ್ಲಗೆ ಎದ್ದು ಆತನನ್ನು ನೋಡಿದಳು. ಬಲಗೈ ಊರಿ ಏಳುತ್ತಾ “ಕೈ ತೆಗೆಯೊ... ತೆಗೆಯೋ... ನೀನು ದೊಡ್ಡ ಬರಹಗಾರ ಆಗಿರಬಹುದು, ಹಾಗಂತ ಇಷ್ಟವಿಲ್ಲದ ಹೆಣ್ಣೊಬ್ಬಳನ್ನು ಬಲವಂತವಾಗಿ ಎಳೆದುಕೊಂಡು ಹೋಗಲು ನಾ ಬಿಡುವುದಿಲ್ಲ. ಬಹುಶಃ ಹೀಗೇ ನೀನು ನಾಲ್ಕು ಹೆಣ್ಣುಗಳನ್ನು ಮದುವೆಯಾಗಿದ್ದೇನೊ ಅಲ್ವಾ...!?” ಎನ್ನುತ್ತಾ ತನ್ನ ಬಲವನ್ನೆಲ್ಲ ಉಪಯೋಗಿಸಿ ದಿಢೀರನೆ ಆ ವ್ಯಕ್ತಿಯನ್ನು ಕೆಳಗೆ ತಳ್ಳಿದಳು. ಆತ ದೊಪ್ಪೆಂದು ಬಿದ್ದದ್ದೇ ಮರಿಯಾ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಆತನ ತಲೆಗೆ ಬಾರಿಸಿದಳು.

ಅಲ್ಲಿ ಬೀದಿ ದೀಪಗಳು ಮಂದವಾಗಿ ಉರಿಯುತ್ತಾ ವ್ಯಾಪಿಸಿದ್ದ ಕತ್ತಲನ್ನು ಹೆದರಿಸಲು ಪ್ರಯತ್ನಿಸಿ ಸೋಲುತ್ತಿದ್ದವು. ಜಯನಗರದ ಆರನೇ ಬ್ಲಾಕ್‍ನ ಒಂಭತ್ತನೇ ಬೀದಿ ಈ ಎರಡು ವಿದೇಶಿ ಹುಡುಗಿಯರ ಪಾದಗಳ ಬಿಸಿಯನ್ನು ಚೂರು ತಣಿಸಿತು.

ಮೊಣಕಾಲುಗಳ ಮೇಲೆ ಕೈಗಳ ಊರಿ ನಿಂತ ಸಬಾ ಏದುಸಿರನ್ನು ತಹಬದಿಗೆ ತಂದುಕೊಳ್ಳುತ್ತಾ “ಓಲ್ಡ್ ಮ್ಯಾನ್ ಅಂಡ್ ದಿ ನೈಟ್ – ಎನ್ನೊ ಹೊಸ ಕಾದಂಬರಿ ಬರೆಯಲಿ ಹಾಳ್ ಮುದುಕ” ಎಂದಳು.

ತುಟಿಯರಳಿಸಿದಳು ಮೆಕ್ಸಿಕೊ ದೇಶದ ಮರಿಯಾ ರೋಸಾ ಎಲೆನಾ. ಇಡೀ ದಕ್ಷಿಣ ಅಮೆರಿಕದ ನೋವು ನಲಿವುಗಳು ಆ ನಗುವಿನಲ್ಲಿ ಕಾಣಿಸುತ್ತಿವೆಯೇನೊ ಎಂದುಕೊಂಡಳು ಸಬಾ. ತನ್ನಂತೆ ಇವಳೂ ಒಂಟಿಯಾಗೇ ಇರಬೇಕು... ಮನಕ್ಕೆ ಕಾರಂಜಿ ಸ್ಪರ್ಶ ನೀಡುವ ವ್ಯಕ್ತಿಗಾಗಿ ಇವಳೂ ಕಾಯುತ್ತಿದ್ದಳೇನೊ ಅನ್ನಿಸಿತು. ಅವಳನ್ನೇ ನೋಡಿದಳು.

“ಏನು?” ಎನ್ನುವಂತೆ ನಗುತ್ತಾ ಹುಬ್ಬ ಕುಣಿಸಿದಳು ಮರಿಯಾ. ವಾಹ್!

ಇದೊಂದು ಸ್ವರ್ಗೀಯ ನಗು! ಆದರೆ ಅದರೊಳಗೆ ನೋವಿನ ಝರಿಗಳೂ ಧುಮುಕುತ್ತಿರುವಂತಿದೆ. ಸಬಾ ಅವಳನ್ನೇ ನೋಡುತ್ತಿರುವಾಗ ತಂಗಾಳಿಯೊಂದು ಅವರಿಬ್ಬರನ್ನು ಸೋಂಕಿಸಿ ಮುಂದೆ ಹೋಗುತ್ತಿತ್ತು.

ಮೆಲ್ಲಗೆ ಸಾಗುತ್ತಿದ್ದ ಆ ಗಾಳಿಯೊಳಗೆ ಮಳೆ ಹನಿಗಳು ಚೆದುರುತ್ತಾ ಬೀಳುತ್ತಿದ್ದವು. ಹಾಗೆ ಚೆದುರಿದ ಹನಿಗಳಲ್ಲಿ ಒಂದೆರೆಡು ಇವರಿಬ್ಬರ ಮುಖಗಳಲ್ಲಿ ನೆಲೆ ನಿಂತವು.

ತಲೆ ಎತ್ತಿ ಆಕಾಶವ ನೋಡುತ್ತಾ “ಮಳೆ ಎಷ್ಟು ಸುಂದರ ಅಲ್ವಾ, ಮರಿಯಾ?” ಜ್ವಲಿಸಿದಳು ಸಬಾ ಮಜೀದ್. ವ್ಯಾಪಿಸಿದ್ದ ಆಕಾಶದ ಕತ್ತಲನ್ನು ಮರಿಯಾಳೂ ನೋಡುತ್ತಿದ್ದಳು.

“ಹೀಗೇ ಇಲ್ಲೇ ನಾನು ಸತ್ತು ಹೋಗುತ್ತೇನೆ...”

“... ಡೆತ್ ಇನ್ ದಿ ಮಿಡ್ ನೈಟ್ ಎನ್ನುವ ಕಾದಂಬರಿಯೊಂದನ್ನು ಬರೆದು ನಾನೂ ಸತ್ತು ಹೋಗುತ್ತೇನೆ ............”

 ಜೋರಾದ ಮಳೆಯ ಹನಿಗಳು ಈಗ ಅವರಿಬ್ಬರ ಎದೆಗಳೊಳಗೆ ಬೀಳುತ್ತಿದ್ದವು.

ಹೆಮಿಂಗ್ವೆ ಕಣ್ಣುಗಳ ತೆರೆದ. ಮರಿಯಾ ಮತ್ತು ಸಬಾ ಅವನ ತಲೆಯೊಳಗೆ ಕೆನೆಯುತ್ತಿದ್ದರು.     

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.