ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮತೋಲನದ ಕಂಪನಿ ಮಾಲೀಕರಾಗಿದ್ದ ಅರಿಷಿಣಗೋಡಿ

Last Updated 3 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಕಿರಾಣಿ ಅಂಗಡಿ ನಡೆಸುವಾಗ ತೂಕ ಹಾಗೂ ಮಾಪನ ಇಲಾಖೆಯವರು ಲಂಚ ಕೇಳಿದರೆಂಬ ಕಾರಣಕ್ಕೆ ‘ಲಂಚ ಸಾಮ್ರಾಜ್ಯ’ ನಾಟಕ, ಆಡಿಸಿ ನಂತರ ನಾಟಕ ಕಂಪನಿಯನ್ನು ಶುರು ಮಾಡಿದವರು ಬಿ.ಆರ್‌.ಅರಿಷಿಣಗೋಡಿ.

ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದಲ್ಲಿ ಜನಿಸಿದ್ದ ಅವರು, ಸಂಬಂಧಿಕರಿದ್ದ ಕಾರಣಕ್ಕೆ ಕಮತಗಿಗೆ ಬಂದರು. ಅವರು ಇಂಟರ್‌ ಮಿಡಿಯೇಟ್‌ ಓದಿದ ನಂತರ ಹೊಟ್ಟೆಪಾಡಿಗಾಗಿ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಆದರೆ, ಅಂಗಡಿಯ ಪರವಾನಗಿಗೆ ಸಂಬಂಧಿಸಿ ಅಧಿಕಾರಿಗಳು ಲಂಚ ಕೇಳಿದರೆಂಬ ಕಾರಣಕ್ಕೆ ನಾಟಕ ಬರೆದು, ಆಡಿಸಿ ಸೈ ಅನ್ನಿಸಿಕೊಂಡರು. ನಂತರ 1961ರಲ್ಲಿ ಕಮತಗಿಯ ‘ಹೊಳೆ ಹುಚ್ಚೇಶ್ವರ ನಾಟ್ಯ ಸಂಘ’ ಆರಂಭಿಸಿ ‘ಲಂಚ ಸಾಮ್ರಾಜ್ಯ’ ನಾಟಕ ಆಡಿದರು. ಅಲ್ಲಿಂದ ಅವರು ಕಿರಾಣಿ ಅಂಗಡಿ ಕೈಬಿಟ್ಟು ಸಂಪೂರ್ಣವಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡರು.

ಆಮೇಲೆ ‘ಬಸ್‌ ಕಂಡಕ್ಟರ್‌’ ನಾಟಕ ರಚಿಸಿ, ನಿರ್ದೇಶಿಸಿ ಯಶಸ್ವಿಯಾದರು. ಈ ನಾಟಕದಲ್ಲಿ ಚಲನಚಿತ್ರ ನಟಿ, ರಂಗಕಲಾವಿದೆ ಉಮಾಶ್ರೀ ಖಾನಾವಳಿ ಚೆನ್ನಿ ಪಾತ್ರವನ್ನು ನಿರ್ವಹಿಸಲು ಆರಂಭಿಸಿದ ಮೇಲೆ ಭರ್ಜರಿ ಕಲೆಕ್ಷನ್‌ ಆಯಿತು. ಈ ಪಾತ್ರದ ಹೆಸರನ್ನೇ ಅಂದರೆ ಖಾನಾವಳಿ ಚೆನ್ನಿ ಎಂಬ ಹೆಸರಿನಿಂದಲೇ ಅರಿಷಿಣಗೋಡಿ ಸೇರಿದಂತೆ ಅನೇಕ ಕಂಪನಿಗಳು ಆಡಿದವು. ಹಾಗೆ ಆಡಿದಾಗೆಲ್ಲ ಉಮಾಶ್ರೀ ಅವರೇ ಬಣ್ಣ ಹಚ್ಚುತ್ತಿದ್ದರು. ಇದು ಕಂಪನಿ ನಷ್ಟ ಅನುಭವಿಸುವಾಗ ಇಲ್ಲವೆ ಕಂಪನಿ ಕ್ಯಾಂಪ್ ಬಂದ್‌ ಮಾಡುವಾಗ ಆಡುತ್ತಿದ್ದರು; ಈ ನಾಟಕ ಖಂಡಿತ ಕಲೆಕ್ಷನ್‌ ತಂದುಕೊಡುತ್ತದೆ ಎಂಬ ಕಾರಣಕ್ಕೆ. ಉಮಾಶ್ರೀ ಅವರಲ್ಲದೆ ಧೀರೇಂದ್ರಗೋಪಾಲ್ ಮೊದಲಾದವರನ್ನು ಆಹ್ವಾನಿಸಿ ನಾಟಕ ಆಡಿಸುತ್ತಿದ್ದರು.

ಇನ್ನು ‘ಬಸ್‌ ಕಂಡಕ್ಟರ್‌’ ನಾಟಕದಲ್ಲಿ ಕಂಡಕ್ಟರ್‌ ರಾಜು ಪಾತ್ರ ನಿರ್ವಹಿಸುತ್ತಿದ್ದ ಬಾಬಣ್ಣ ಕಲ್ಮನಿ, ‘ಸೌಮ್ಯ ಸ್ವಭಾವದ ವ್ಯಕ್ತಿ ಅರಿಷಿಣಗೋಡಿ. ಅವರ ಹಾಗೆ ಕಲಾವಿದರ ಪಗಾರವನ್ನು ಸರಿಯಾಗಿ ಕೊಟ್ಟವರು ಬಹುಶಃ ಯಾರೂ ಇಲ್ಲವೇನೋ ಅನ್ನಿಸುತ್ತಿದೆ. ಕಲಾವಿದರ ಪಗಾರ ನಿಲ್ಲಿಸಬಾರದೆಂಬ ಕಾಳಜಿ ಅವರದಾಗಿತ್ತು. ಮದ್ಯ ಸೇವಿಸುವವರನ್ನು ತಮ್ಮ ಕಂಪನಿಗೆ ಸೇರಿಸುತ್ತಿರಲಿಲ್ಲ’ ಎಂದು ಸ್ಮರಿಸುತ್ತಾರೆ.

‘ಸಮತೋಲನದ ನಾಟಕ ಕಂಪನಿ ಮಾಲೀಕ ಅವರು. ವ್ಯವಹಾರ ಹಾಗೂ ಕಲೆಯನ್ನು ಸರಿಯಾಗಿ ತೂಗಿಸಿಕೊಂಡು ಹೋದರು’ ಎಂದು ನೆನಪಿಸಿಕೊಳ್ಳುತ್ತಾರೆ ರಂಗಕರ್ಮಿ ರಾಮಕೃಷ್ಣ ಮರಾಠೆ.

ಒಂದಿದ್ದ ನಾಟಕ ಕಂಪನಿಯನ್ನು ನಾಲ್ಕು ಕಂಪನಿಗಳನ್ನಾಗಿ ಮಾಡಿದ ಅರಿಷಿಣಗೋಡಿಯವರು ಸಂಗೀತ ಸಂಯೋಜಕರಾಗಿ, ನಿರ್ದೇಶಕರಾಗಿ, ನಟರಾಗಿ ನಿರಂತರವಾಗಿ 42 ವರ್ಷಗಳವರೆಗೆ ನಡೆಸಿಕೊಂಡು ಬಂದರು. 14 ವರ್ಷಗಳವರೆಗೆ ಅವರ ಕಂಪನಿಯಲ್ಲಿ ಕಲಾವಿದರಾಗಿದ್ದ ಅಣ್ಣಪ್ಪ ಕಟಗೇರಿ ಅವರು, ‘ಅವರು ನನಗೆ ಚಿಕ್ಕಪ್ಪ. ಅವರು ಮಾಲೀಕರಷ್ಟೇ ಆಗಿದ್ದಿಲ್ಲ. ಆಲ್‌ರೌಂಡರ್‌ ಆಗಿದ್ದರು. ಕಂಪನಿಯಲ್ಲಿ ಯಾವುದೇ ಕಲಾವಿದರು ಬಿಟ್ಟು ಹೋದರೂ ಗಾಬರಿಯಾಗುತ್ತಿರಲಿಲ್ಲ. ಬಿಟ್ಟು ಹೋದ ಕಲಾವಿದರ ಪಾತ್ರವನ್ನು ಅವರು ಮಾಡುತ್ತಿದ್ದರು. ಸಹೃದಯ ಮಾಲೀಕರೂ ಇರುವುದು ಅಪರೂಪ. ತಿಂಗಳಿಗೊಮ್ಮೆ ಇದ್ದ ಕಲಾವಿದರ ಪಗಾರವನ್ನು ವಾರಕ್ಕೊಮ್ಮೆ ಮಾಡಿದವರು ಅವರು. ಕಲಾವಿದರಿಗೆ ಬಹಳ ಮರ್ಯಾದೆ ಕೊಡುತ್ತಿದ್ದರು. ಆದರೆ ಚಟಗಳಿರುವ ಕಲಾವಿದರನ್ನು ಕಂಡರೆ ಎಷ್ಟೇ ಬಾಕಿಯಿದ್ದರೂ ತಕ್ಷಣ ಚುಕ್ತಾ ಮಾಡಿ ಕಳಿಸಿಬಿಡುತ್ತಿದ್ದರು. ಸಿಟ್ಟು, ಗರ್ವ ಇರಲಿಲ್ಲ’ ಎಂದು ಅವರ ವ್ಯಕ್ತಿತ್ವವನ್ನು ಹಿಡಿದಿಡುತ್ತಾರೆ.

ಅವರ ಇನ್ನೊಂದು ಯಶಸ್ವೀ ನಾಟಕ ‘ಗರೀಬಿ ಹಟಾವೊ’. ನಂತರ ‘ಸೈನಿಕನ ಸಹೋದರಿ’, ‘ಕಣ್ಣಿದ್ದು ಕುರುಡ’, ‘ಇಲ್ಲಿಗೆ ಬಂತೋ ಸಂಗಯ್ಯ’, ‘ನಕಲಿ ಸಂಪನ್ನರು’, ‘ಆಸ್ತಿಪಾಲು’, ‘ಅನುರಾಧಾ’... ಹೀಗೆ 15 ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದರು. ತಮ್ಮ ನಾಟಕಗಳೊಂದಿಗೆ ಇತರರ ನಾಟಕಕಾರರ ನಾಟಕಗಳನ್ನೂ ಆಡುತ್ತಿದ್ದರು. ಇಂಥ ಅರಿಷಿಣಗೋಡಿ ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾಗಿದ್ದರು. ದೀರ್ಘಕಾಲದ ಅನಾರೋಗ್ಯದಿಂದ ಅವರು ಅಕ್ಟೋಬರ್‌ 31ರಂದು ಕಮತಗಿಯಲ್ಲಿ ನಿಧನರಾದಾಗ 85 ವರ್ಷ ವಯಸ್ಸು. ಈ ಮೂಲಕ ಉತ್ತರ ಕರ್ನಾಟಕವು ಪ್ರಮುಖ ಕಂಪನಿಯ ಮಾಲೀಕರನ್ನು ಕಳೆದುಕೊಂಡಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT