ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕೋಡಿಗಾಮಾ | ಕೊರೊನಾ ಸೋಂಕು

Last Updated 16 ಮೇ 2020, 19:30 IST
ಅಕ್ಷರ ಗಾತ್ರ

ಆಪರೇಶನ್ ಥಿಯೇಟರ್‌ಗಳಲ್ಲಿ ವೈದ್ಯರು, ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳಷ್ಟೇ ಧರಿಸುತ್ತಿದ್ದ ಮಾಸ್ಕ್ ಈಗ ಕೊರೊನಾ ದೆಸೆಯಿಂದ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿದೆ. ಮಾಸ್ಕ್ ಇಲ್ಲದೆ ಜೀವನವೇ ಇಲ್ಲ ಎನ್ನುವ ಸ್ಥಿತಿಗೆ ತಲುಪಿ ನಿಂತಿದ್ದೇವೆ. ಕೊರೊನಾದಿಂದ ಕಾಪಾಡಿಕೊಳ್ಳಲು ಮಾಸ್ಕ್ ಧರಿಸಲೇಬೇಕು ಎನ್ನುವುದೇನೋ ನಿಜ. ಆದರೆ ಪ್ಯಾಂಟು, ಶರ್ಟು, ಬ್ಲೌಸ್, ವ್ಯಾನಿಟಿ ಬ್ಯಾಗ್, ಚಪ್ಪಲಿಗೆ ಮ್ಯಾಚ್ ಆಗುವಂತಹ ಮಾಸ್ಕ್‌ಗಳನ್ನು ಎಲ್ಲಿ ಹುಡುಕುವುದು?

ಜನ, ಅದರಲ್ಲೂ ರಾಜಕಾರಣಿಗಳು ತಮ್ಮ ಐಡೆಂಟಿಟಿಗಾಗಿ ಒದ್ದಾಡುತ್ತಿದ್ದರು. ತಮ್ಮ ವದನಾರವಿಂದವನ್ನು ಪೇಪರ್, ಟಿವಿ ಚಾನಲ್‍ಗಳಲ್ಲಿ ಕಾಣುವಂತೆ ಮಾಡಿಕೊಳ್ಳಲು ಇಲ್ಲದ ಸರ್ಕಸ್ ಮಾಡುತ್ತಿದ್ದರು. ಈಗ ಕೋಟಿ ಕೊಟ್ಟರೂ ಮಾಸ್ಕ್ ಎಂಬ ಅರೆಬರೆ ಲಂಗೋಟಿ ಹಾಕಿದ ಅರ್ಧ ಮುಖವೇ ಪ್ರದರ್ಶನಗೊಳ್ಳುವುದು.

ರಸ್ತೆಯಲ್ಲಿ ಹೋಗುವಾಗ ಎದುರಿಗೆ ಸಿಕ್ಕವ, ನೋಡಿ ನಕ್ಕನಾ, ಮೂತಿ ತಿರುಗಿಸಿ ಮೂದಲಿಸಿದನಾ ಎನ್ನುವುದೂ ಗೊತ್ತಾಗದ ಸ್ಥಿತಿ, ಆದರೆ ಏನೇ ಸಿಟ್ಟು ಬಂದರೂ, ಅಸಹ್ಯವಾದರೂ ಉಗಿಯುವಂತಿಲ್ಲ. ಅದು ಆಕಾಶಕ್ಕೆ ಉಗುಳಿದರೆ ವಾಪಸ್ ಬರುವಂತೆ ನಮ್ಮ ಮಾಸ್ಕ್ ಒಳಗೇ ನಮ್ಮ ಮೀಸೆಗೇ ಅಂಟಿಕೂರುತ್ತದೆ. ಬೇಕಾದರೆ ಅವನನ್ನು ಮೆಲ್ಲಗೆ ಬೈದುಕೊಳ್ಳಬಹುದಷ್ಟೇ.

ಇನ್ನು ಮುಖಕ್ಕೆ ಮಾಸ್ಕ್ ಮೆತ್ತಿಕೊಂಡಿರುವುದರಿಂದ ನಮ್ಮ ಮೂಗಿಗೂ ಅಂತಹ ವಿಶೇಷ ಕೆಲಸಗಳೇನೂ ಇಲ್ಲ. ಅದು ಸಲೀಸಾಗಿ ವಾಸನೆ ಕುಡಿಯುವಂತಿಲ್ಲ. ನಮ್ಮ ನೆಗಡಿಯನ್ನು ನಾವೇ ಒಳಗೆಳೆದು ಸ್ಟಾಕ್ ಮಾಡಿಕೊಳ್ಳಬೇಕು. ನಮ್ಮ ಕಫ, ಗುಟ್ಕಾವನ್ನು ನಾವೇ ನುಂಗಬೇಕು. ಮೂಗಿನೊಳಗೆ ಮಾಸ್ಕ್ ವಾಸನೆ, ನಮ್ಮದೇ ಬೆವರು, ಎಂಜಲ ವಾಸನೆ ತುಂಬಿ ತುಳುಕುವುದರಿಂದ ಯಾವುದೇ ಸುವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಮೂಗು ಕಳೆದುಕೊಳ್ಳುತ್ತಾ ಬಂದಿದೆ. ಎಷ್ಟೇ ಆಶ್ಚರ್ಯದ ಘಟನೆಯಾದರೂ ಮೂಗಿನ ಮೇಲೆ ಥಟ್ಟನೆ ಬೆರಳಿಟ್ಟುಕೊಳ್ಳುವಂತಿಲ್ಲ. ವೈರಸ್ ನೇರ ಮೂಗೊಳಗೇ ತೂರಿಬಿಟ್ಟೀತೆಂಬ ಭೀತಿ.ಮೀಸೆ ಬಿಟ್ಟರೆಷ್ಟು, ಬೋಳಿಸಿದರೆಷ್ಟು, ಯಾರೂ ನೋಡುವವರಿಲ್ಲ.

ಹೆಣ್ಣುಮಕ್ಕಳ ಬಾಯಿಗೆ ಹೀಗೆ ಮಾಸ್ಕ್ ಸಿಗಿಸಿರುವುದಂತೂ ಅವರಿಗೆ ನುಂಗಲಾದ ತುತ್ತಾಗಿದೆ. ಲಿಪ್‍ಸ್ಟಿಕ್ ಮೆತ್ತಿಕೊಳ್ಳಲಾಗದೆ ಅವೆಲ್ಲಾ ಫ್ರಿಜ್‍ನಲ್ಲೇ ಒಣಗುತ್ತಿವೆ. ಮೊದಲೇ ಮಧು ತುಂಬಿದ ಅದರಗಳಿಗೆ ಇನ್ನೊಂದೆರಡು ಕೋಟು ಲಿಪ್‍ಜೆಲ್ ಬಳಿದು ಒಂದು ತುಟಿಯಂಚಿನ ನಗು ಬಿಸಾಕಿದ್ದರೆ ಎದುರಿಗಿದ್ದ ಗಂಡುಗಳು ಕೊರೊನಾ ಬಂದಂತೆ ಹಾಗೇ ಧರೆಗುರುಳುತ್ತಿದ್ದರು.ಬರಿ ಕೈ ತೊಳೆದಲ್ಲ, ಸ್ಯಾನಿಟೈಸರ್ ಹಾಕಿ ಕೈ ತೊಳೆದು ಮುಟ್ಟಬೇಕು ಎನ್ನುವಂತಿದ್ದ ಹುಡುಗೀರೂ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳುವಂತಾಗಿ ಮೊದಲೇ ನಿಗೂಢವಾಗಿದ್ದ ಹೆಣ್ಣು ಮತ್ತೂ ನಿಗೂಢವಾಗಿ ಹೋಗಿದ್ದಾಳೆ.ತೊಂಡೆಹಣ್ಣಿನ ತುಟಿ, ಸಂಪಿಗೆ ಮೂಗು, ನೀಳ ನಾಸಿಕ ಎಂಬ ಕವಿಪುಂಜಗಳೆಲ್ಲಾ ಅರ್ಥ ಕಳೆದುಕೊಂಡಿವೆ.

ಮಾಸ್ಕೋತ್ತರ ಯುಗದಲ್ಲಿ ಕುಡುಕರ ಕಷ್ಟಗಳೂ ನೂರಾರು. ನಾಳೆ ಬೆಳಿಗ್ಗೆ 9 ಗಂಟೆಗೆ ಎಣ್ಣೆ ಕೊಡ್ತೀವಿ ಅಂತ ಸರ್ಕಾರ ಹೇಳಿದ್ದೇ ಹೇಳಿದ್ದು ಕುಡುಕರೆಲ್ಲಾ ಬೆಳಿಗ್ಗೆ 5 ಗಂಟೆಯಿಂದನೇ ಎಣ್ಣೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತ್ಕೊಂಡ್ರು. ಅಂಗಡಿಗಳಿಗೆ ಪೂಜೆ ಮಾಡಿದ್ದೇನು, ಈಡುಗಾಯಿ ಒಡ್ದದ್ದೇನು? ಉರುಳು ಸೇವೆ (ಕುಡಿಯೋಕೆ ಮುಂಚೆಯೇ) ನಡೆಸಿದ್ದೇನು? ಅಬ್ಬಬ್ಬಾ! ಅದೇನ್ ಭಕ್ತಿ, ಶ್ರದ್ಧೆ ಅಂತ ಮಾಸ್ಕ್ ಸಂದೀಲೇ ಮೂಗಿನ ಮೇಲೆ ಬೆರಳಿಟ್ಕೊಳೋ ಹಾಗಿತ್ತು. ನೀವು ನಂಬ್ತೀರೋ ಇಲ್ವೋ, ಚಿಕ್ಕಂದಿನಲ್ಲಿ ಅಣ್ಣಾವ್ರ ಪಿಕ್ಚರ್‍ಗೆ ಈ ತರ ಜನ ಥಿಯೇಟರ್ ಮುಂದೆ ಸಾಲುಗಟ್ಟಿ ನಿಂತಿದ್ದು ಬಿಟ್ರೆ ಮತ್ತೆ ಈಗ್ಲೇ ಈ ತರ ಹನುಮಂತನ ಬಾಲದ ಕ್ಯೂ ನೋಡಿದ್ದು!

ಬೆಳಿಗ್ಗೆ ಎದ್ದು ಎಣ್ಣೆ ತರೋಕೆ ಹೋಗೋದೂ ಒಂದು ಸಂಕಟ, ಮುಜಗರದ ಸಂಗತಿ. ಸ್ವಲ್ಪ ಸಮಾಧಾನದ ಸಂಗತಿ ಅಂದ್ರೆ ಮಾಸ್ಕ್ ಅಂತ ಒಂದಿದೆ ಅನ್ನೋದು. ಕೆಲವು ದೊಡ್ ಮನುಷ್ಯರು ಬಾಯಿ ಮೂಗಿಗೆ ಕಟ್ಕೊಳೋ ಮಾಸ್ಕನ್ನ ಇಡಿ ಮುಖಕ್ಕೇ ಎಳ್ಕೊಂಡ್ ತಮ್ಮ ಐಡಿಂಟಿಟಿ ಸಿಗದ ಹಾಗೆ ಎಣ್ಣೆ ಅಂಗಡಿ ಮುಂದೆ ನಿಂತಿದ್ದನ್ನ ನಾನೇ ಕಣ್ಣಾರೆ ನೋಡ್ದೆ. ಕೆಲವರಂತೂ ಇಡೀ ಟವಲನ್ನೇ ಮುಖಕ್ಕೆ ಸುತ್ಕೊಂಡು ನಿಂತಿದ್ರು.

ಒಬ್ರು ಯಜಮಾನ್ರು ಕ್ಯೂನಲ್ಲಿ ನಿಂತ್ಕೊಂಡೇ ಹಿಂದೆ ಮಾಸ್ಕ್ ಹಾಕ್ಕೊಂಡು ನಿಂತಿದ್ದ ಒಬ್ಬನ್ನ ದಿಟ್ಟಿಸಿ ನೋಡಿದಾರೆ. ಅವನು ಇದನ್ನು ಗಮನಿಸಿ ಇನ್ನೇನ್ ಕ್ಯೂನಿಂದ ಎಸ್ಕೇಪ್ ಆಗ್ಬೇಕು ಅನ್ನುವಷ್ಟರಲ್ಲಿ ಯಜಮಾನ್ರು ಈಚೆ ಬಂದು ಅವನನ್ ಹಿಡ್ಕೊಂಡಿದಾರೆ: ‘ಲೇಯ್, ನನ್ನೇ ಏಮಾರುಸ್ತೀಯಾ? ಮಗನೇ, ನೀನು ಬೈಕ್‍ಗೆ ಪೆಟ್ರೋಲ್ ಹಾಕಿಸ್ಕೊಂಡ್ ಬರ್ತೀನಿ ಅಂತ ಹೋದೋನ್ ಅಲ್ವಾ?’ ಅದಕ್ಕವನಂದ: ‘ನನ್ನೇನ್ ಕೇಳ್ತೀಯಪ್ಪ, ನೋಟ್ಸ್ ಇಸ್ಕೊಂಡ್ ಬರ್ತೀನಿ ಅಂತ ಹೋದ್ ನಿನ್ ಮಗಳೂ ಅಲ್ಲಿ ನಿಂತಿದಾಳೆ ನೋಡು!’ ಪಾಪ! ಯಜಮಾನ್ರು ಪೂರಾ ಶಾಕ್ ಆಗಿ ಹೋದ್ರು. ‘ಏನ್ರೋ ಇದು, ನಿಮ್ಮಮ್ಮನ್ ಕಣ್ಣಿಗೆ ಚೆನ್ನಾಗೇ ಮಣ್ ಎರಚಿ ಬಂದಿದೀರಲ್ಲೋ?’ ಅಂತ ತರಾಟೆಗೆ ತಗೊಂಡಿದಾರೆ. ಮಗ ‘ನೀನೇನ್ ಕಮ್ಮಿ? ಆಫೀಸ್‌ಗೆ ಹೋಗ್ತೀನಿ ಅಂತ ಹೇಳಿ ಇಲ್ ಕ್ಯೂ ನಿಂತಿದೀಯ?’ ಅಂತ ದಬಾಯ್ಸಿದಾನೆ. ಸರಿ ಮೂರೂಜನ ಕಾಂಪ್ರಮೈಸ್ ಆಗಿ ಮೂರ್ ಎರಡಲ್ ಆರು ಬಾಟ್ಲು ತಗೊಂಡು ಎಲ್ಲಾ ಮುಗುಸ್ಕೊಂಡು ಲೇಟಾಗಿ ಮನೆಗೆ ಹೋದ್ರಂತೆ.

ಈ ಮಾಸ್ಕ್ ಒಂದು ‘ಎರಾ’ ಅಂದರೆ ಕ್ರಿಸ್ತಶಕೆ, ಶಾಲಿವಾಹನ ಶಕೆ ತರ ಮತ್ತೊಂದು ಶಕೆಯನ್ನೇ ಪ್ರಾರಂಭಿಸಬಹುದು. ಮಾಸ್ಕ್ ಹಾಕಲು ಪ್ರಾರಂಭಿಸಿದ ನಂತರ ಹುಟ್ಟಿದ ಮಕ್ಕಳು ಆಫ್ಟರ್ ಮಾಸ್ಕ್ (ಎಂಎಂ) ಎಂದೂ ಮಾಸ್ಕ್ ಹಾಕಲು ಮುಂಚೆ ಹುಟ್ಟಿದ ಮಕ್ಕಳು ಬಿಎಂ (ಬಿಫೋರ್ ಮಾಸ್ಕ್ ) ಅಂತಲೂ ಆಗಬಹುದು. ಮಾಸ್ಕ್ ಶುರುವಾದ ನಂತರ ಹುಟ್ಟಿದ ಮಕ್ಕಳು ‘ಸನ್ಸ್ ಆಫ್ ಮಾಸ್ಕ್’ ಎಂಬ ಅಭಿದಾನಕ್ಕೆ ಪಾತ್ರರಾಗಬಹುದು. ಹೀಗೇ ಮಾಸ್ಕ್ ಕಟ್ಟಿ ಕಟ್ಟಿ ಮುಖದ ಮೇಲೊಂದು ಶಾಶ್ವತ ಮಾಸ್ಕ್ ಕಲೆಯೇ ಉಳಿದುಬಿಡಬಹುದು. ಮಾಸ್ಕ್ ಬಿಚ್ಚಿದ ಕೂಡಲೇ ಮಕ್ಕಳು ಮುಖ ಕಂಡು ರಾಕ್ಷಸರನ್ನು ಕಂಡಂತೆ ಬೆಚ್ಚಿ ಚೀರುವ ಕಾಲವೂ ಬಂದೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT