ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಂಬನೆ | ನಮ್ಮದೇ ವೈರಸ್‌ಗಳಿರುವಾಗ...

Last Updated 6 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಚೀನಾದಲ್ಲಿ ಏನೆಲ್ಲ ಉತ್ಪಾದನೆಯಾದರೂ ಅವೆಲ್ಲವೂ ವಿವಿಧ ದೇಶಗಳಿಗೆ ಮುಟ್ಟುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದ್ದರಿಂದಲೇ ಚೀನಾದ ಕೋವಿಡ್-19 ವೈರಸ್ ಬಗ್ಗೆ ಪ್ರಪಂಚದ ಎಲ್ಲ ದೇಶಗಳಿಗೂ ಆತಂಕ. ಇದೊಂದು ವಿಚಿತ್ರ ವೈರಸ್. ಆರಂಭದಲ್ಲಿ ಅದನ್ನು ಕೊರೊನಾ ಎಂದು ಕರೆಯತೊಡಗಿದರು. ಅದನ್ನು ಏನೂಂತ ಕರೆಯಬೇಕೆಂಬ ಗೊಂದಲ ಇನ್ನೂ ಮುಂದುವರಿದಿದೆಯಂತೆ.

ಕೊರೊನಾದ ‘ಸೃಷ್ಟಿ’ ಸ್ಥಳ ಯಾವುದಾಗಿರಬಹುದು ಎಂದು ಎಲ್ಲರೂ ತಡಕಾಡುತ್ತಿದ್ದಾಗ ಸಿಕ್ಕಿದ್ದು, ಸಕಲ ಮಾಂಸಗಳನ್ನೂ ಮಾರುವ ಒಂದು ಮಾರ್ಕೆಟ್ ಅಷ್ಟೇ. ಎಷ್ಟೆಂದರೂ ಚೀನಾದ ಮಾರ್ಕೆಟ್ ಅಲ್ಲವೇ? ಯಾವ ಪ್ರಾಣಿ, ಪಕ್ಷಿ, ಹುಳ, ಹಾವಿನಿಂದಾಗಿ ಈ ವೈರಸ್ ಹಬ್ಬಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಜನರ ಕುತೂಹಲ ತಣ್ಣಗಾಗಿಸಲು, ಕೊರೊನಾ ಬಿಯರ್ ಇದಕ್ಕೆ ಕಾರಣೀಭೂತ ಎಂಬ ವದಂತಿ ಹಬ್ಬಿಸಲಾಯಿತು. ಇದರಿಂದಾಗಿ, ಈ ವೈರಸ್‌ನಿಂದ ಮೊದಲು ಏಟು ತಿಂದ ಕಂಪನಿ- ಮೆಕ್ಸಿಕೊದ ಕೊರೊನಾ ಬಿಯರ್ ಕಂಪನಿಯೇ ಇರಬೇಕು! ಇದ್ದಕ್ಕಿದ್ದ ಹಾಗೆ ಕೊರೊನಾ ವೈರಸ್‌ನ ಹೆಸರು ಕೋವಿಡ್-19 ವೈರಸ್ ಎಂದು ಬದಲಾಗಲು ಈ ಬಿಯರ್ ಕಂಪನಿ ಕಾರಣವೆಂದು ಅನೇಕರು ಭಾವಿಸಿದ್ದಾರೆ.

ಈಗ ವಿಷಯ ಏನಪ್ಪಾ ಅಂದರೆ, ಕೋವಿಡ್- 19 ವೈರಸ್ ಬಗ್ಗೆ ನಮಗೆ ಇಷ್ಟೊಂದು ಭಯ ಯಾಕೆ? ಅದೊಂದು ಮಾರಣಾಂತಿಕ ವೈರಸ್ ಎಂದೇ? ಸಂಶಯವಿಲ್ಲ ಬಿಡಿ. ಆದರೆ ಒಂದು ವಿಚಾರ ನೆನಪಿಟ್ಟುಕೊಳ್ಳಿ. ಕೋವಿಡ್- 19ಕ್ಕಿಂತ ಹೆಚ್ಚು ಅಪಾಯಕಾರಿ ‘ವೈರಸ್’ಗಳು ನಮ್ಮನ್ನು ದಿನನಿತ್ಯ ಕಾಡುತ್ತಿರುತ್ತವೆ. ನಾವು ‘ಬರ್ತೀನಿ’ ಎಂದು ಹೇಳಿ ಮನೆ ಬಿಟ್ಟರೂ ಮರಳಿ ಹೋಗುತ್ತೇವೆ ಎಂಬ ಯಾವ ಗ್ಯಾರಂಟಿಯೂ ಇಲ್ಲ. ವಾಹನ ಸವಾರರನ್ನು ಅಪಘಾತದ ಭೀತಿ ಕಾಡಿದರೆ, ದಾರಿಹೋಕರಿಗೆ ಎಷ್ಟು ಹೊತ್ತಿಗೆ ವಾಹನಗಳು ತಮ್ಮ ಮೇಲೆ ಎರಗುತ್ತವೋ ಎಂಬ ಭಯ. ಕೆಲವೊಮ್ಮೆ ಸ್ವತಃ ಯಮರಾಯನೇ ಬಸ್ ಚಾಲಕನ ಅವತಾರದಲ್ಲಿ ಭೂಮಿಗಿಳಿದಿರುತ್ತಾನೆ. ಆಗ ಅದು ಸಾಮೂಹಿಕ ಸಾವು ಆಗಿರುತ್ತದೆ. ಈ ಭೂಮಿಯ ರಗಳೆಯೇ ಬೇಡ ಎಂದು ವಿಮಾನ ಪ್ರಯಾಣ ಮಾಡ ಹೊರಟರೂ ಸಾವಿನ ಭಯ ತಪ್ಪಿದ್ದಲ್ಲ.

ಯಮರಾಯನ ಮತ್ತೊಂದು ನಿಲ್ದಾಣ ಆಸ್ಪತ್ರೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಅನಾರೋಗ್ಯ ಕಂಡುಬಂದರೆ, ರೋಗಕ್ಕಿಂತ ಹೆಚ್ಚು ಆಸ್ಪತ್ರೆಯನ್ನು ನೆನೆದುಕೊಂಡು ಭೀತಿಗೊಳಗಾಗುತ್ತಾರೆ! ಬಿಲ್‌ನ ವಿಚಾರ ಇದ್ದೇ ಇದೆ ಬಿಡಿ. ಆದರೆ ಬಾಣಗಳು ನಮ್ಮ ದೇಹದ ಯಾವ ಅಂಗಗಳಿಗೆ ಬಂದು ಬೀಳುತ್ತವೆ ಎಂದು ಹೇಳುವುದು ಕಷ್ಟ. ಎಡ ಕಾಲಿಗೆ ತೊಂದರೆಯಿದ್ದರೆ ಚೆನ್ನಾಗಿರುವ ಬಲ ಕಾಲನ್ನು ರಿಪೇರಿ ಮಾಡಬಹುದು. ಕಣ್ಣು ಆಪರೇಷನ್ ಮಾಡುವುದಕ್ಕೆ ಹೋಗಿ ಜೀವನಪರ್ಯಂತ ಕತ್ತಲೆಯ ಬದುಕು ಸಾಗಿಸಬೇಕಾಗಬಹುದು. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ‘ವೈದ್ಯರ ನಿರ್ಲಕ್ಷ್ಯ’ ಅನ್ನುತ್ತಾರೆ. ಆಕ್ಸಿಜನ್ ಕೊರತೆ ಮತ್ತಿತರ ಸೌಲಭ್ಯಗಳಿಲ್ಲದ ಸರ್ಕಾರಿ ಆಸ್ಪತ್ರೆಗಳಲ್ಲಂತೂ ಅಪಾಯ ಕಟ್ಟಿಟ್ಟ ಬುತ್ತಿ.

ಹಾಗೇ ಸರ್ಕಾರಿ ಕಚೇರಿಗಳ ಮೆಟ್ಟಿಲೇರಿ ನೋಡಿ. ಅಬ್ಬಾ! ಎಂಥೆಂಥ ವೈರಸ್‌ಗಳು ನಮ್ಮ ಜೀವ ಹಿಂಡಿ ಹಿಪ್ಪೆ ಮಾಡುವುದಕ್ಕೆ ಕಾಯುತ್ತಿರುತ್ತವೆ. ಇಲ್ಲಿ ನಾವು ದೈಹಿಕವಾಗಿ ಸಾಯುವುದಿಲ್ಲ. ಆದರೆ ಭ್ರಷ್ಟ ಅಧಿಕಾರಿಗಳು ನಮ್ಮ ರಕ್ತ ಹೀರುವುದರಿಂದ ಸೋತು ಸುಣ್ಣ ಆಗುತ್ತೇವೆ.

ನಿಮ್ಮ ಬ್ಯಾಂಕಿನಿಂದ ಇದ್ದಕ್ಕಿದ್ದಂತೆ ಹಣ ಲೂಟಿಯಾಗಿ ಬಿಡುವುದು ಈಚೆಗಿನ ಕೆಟ್ಟ ಬೆಳವಣಿಗೆಗಳಲ್ಲಿ ಒಂದು! ನೀವು ಕಷ್ಟಪಟ್ಟು ಸಂಪಾದಿಸಿದ ದುಡ್ಡು ಎಟಿಎಂನಿಂದಲೋ ಆನ್‌ಲೈನ್‌ನಿಂದಲೋ ಅಥವಾ ಫೇಸ್‌ಬುಕ್ ಗೆಳೆಯ ಗೆಳತಿಯರಿಂದಲೋ ವಂಚನೆಗೊಳಪಡುವುದಾದರೆ, ಅದೇನು ಕಡಿಮೆ ಅಪಾಯಕಾರಿ ವೈರಸ್ ಅಂದುಕೊಂಡಿರಾ? ಬ್ಯಾಂಕ್‌ನಲ್ಲಿರುವ ನಮ್ಮ ಹಣ ಯಾವ ಗಳಿಗೆಯಲ್ಲಿ ಮಂಗಮಾಯ ಆಗಿಬಿಡುತ್ತದೋ ಎಂಬ ಆತಂಕದಲ್ಲೇ ದಿನ ದೂಡುವ ಕಾಲವಿದು.

ಅತ್ಯಾಚಾರಿಗಳು, ಕೊಲೆಗಡುಕರು ಮತ್ತು ಉಗ್ರರು ರೋಗಗ್ರಸ್ತ ಸಮಾಜದ ಬಹುಮುಖ್ಯ ವೈರಸ್‌ಗಳಲ್ಲವೇ! ಹೆಣ್ಣುಮಕ್ಕಳಿಗೆ ಯಾವಾಗ ರಾಕ್ಷಸರು ತಮ್ಮ ಮೇಲೆ ಆಕ್ರಮಣ ಮಾಡುತ್ತಾರೋ ಎಂಬ ಜೀವಭಯ. ಮೂರು ತಲೆಮಾರಿಗೆ ಬೇಕಾಗುವಷ್ಟು ಆಸ್ತಿ ಪಾಸ್ತಿ ಮಾಡಿಟ್ಟ ಕುಬೇರನಿಗೆ ಯಾವತ್ತೂ ಮಚ್ಚು, ಗುಂಡಿನ ದಾಳಿಯದ್ದೇ ಚಿಂತೆ. ರಾಜಕಾರಣಿಗಳಿಗೆ ಅಷ್ಟೊಂದು ಭದ್ರತೆ ಒದಗಿಸುವುದು ಮತ್ಯಾಕೆ ಅಂದುಕೊಂಡಿರಿ?

ಈಗ ಸರ್ವೇ ಸಾಮಾನ್ಯವಾಗಿರುವ ವಿಪರೀತ ಮದ್ಯಪಾನ ಮತ್ತು ಡ್ರಗ್ಸ್ ಚಟ ಮನುಷ್ಯನಿಗಂಟಿರುವ ವೈರಸ್ ಅಲ್ಲ ಎಂದು ಯಾರಿಗಾದರೂ ಹೇಳುವ ಧೈರ್ಯವಿದೆಯಾ? ನಿಧಾನಗತಿಯಲ್ಲಿ ಖುಷಿಖುಷಿಯಾಗಿ ಸಾಯಿಸುವ ವೈರಸ್ ಇದ್ದರೆ ಇದೊಂದೇ!

ಹೊಸ ವರ್ಷದ ಮಹಾ ದುರಂತವೆಂದೇ ಭಾವಿಸಿರುವ ಕೋವಿಡ್- 19ಕ್ಕಿಂತಲೂ ಶರವೇಗದ ಮಾರಣಾಂತಿಕ ವೈರಸ್ ನಮ್ಮ ದೇಶದಲ್ಲೇ ಪತ್ತೆಯಾಗಿರುವುದು ಈಗಾಗಲೇ ನಮ್ಮೆಲ್ಲರ ಗಮನಕ್ಕೆ ಬಂದಿದೆ. ‘ಫಿನಿಷ್- 2020’ ಎಂಬ ಹೆಸರಿನ ಈ ವೈರಸ್, ಕೆಲವು ರಾಜಕಾರಣಿಗಳ ಪ್ರಚೋದನಾತ್ಮಕ ನಾಲಗೆಯಿಂದ ಹರಡುತ್ತಿರುವುದಾಗಿ ತಿಳಿದು ಬಂದಿದೆ. ನೂರಕ್ಕೆ ನೂರರಷ್ಟು ‘ಮೇಡ್ ಇನ್ ಇಂಡಿಯಾ’!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT