ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಿ ಮಾರೊ v/s ಝಾಡು ಮಾರೊ

Last Updated 14 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಹೆಂಡ್ತಿ ಮಾಡಿದ್ದ ಬಿಸಿ ಬಿಸಿ ಅವಲಕ್ಕಿ ಚೂಡಾ ತಿಂತಾ ಕುತ್ಕೊಂಡಾಗ ಪ್ರಭ್ಯಾ ವಕ್ಕರಿಸಿದ. ಬಾಗಿಲ್‌ದಾಗ್ ಕಾಲ್‌ ಇಡುತ್ತಿದ್ದಂತೆ ಹಾವು ಕಂಡು ಬೆಚ್ಚಿ ಬಿದ್ದಂತೆ ಹಿಂದೆ ಜಿಗಿದ. ‘ಹಂಗ್ಯಾಕ್‌ ಮಂಗ್ಯಾನ ಥರಾ ಠಣ್ಣನೆ ಹಿಂದ್‌ ಜಿಗಿದಿ’ ಎಂದು ಕಿಚಾಯಿಸಿದೆ.

ಪಡಸಾಲ್ಯಾಗ್‌ ಬಿದ್ದಿದ್ದ ಕಸಬರಿಗಿಯತ್ತ ನೋಡಿ ನನ್ನ ಮಾರಿ ನೋಡ್ದಾ. ‘ನೀ ಕಸಬರಿಗಿ ನೋಡಿ ಅಂಜಿದ್ದು ಯಾಕ್‌ ಅಂತ್‌ ಗೊತ್ತಾತ್‌ ಬಿಡು. ನಿನಗ್‌ ಇಲ್ಯಾರೂ ಪೊರಕೆ ಪೂಜೆ ಮಾಡುದಿಲ್ಲೇಳ್‌. ದಿಲ್ಲಿ ಒಳ್ಗ ಯಾರಿಗೆಲ್ಲ ಮಂಗಳಾರತಿ ಆಗ್ಬೇಕಾಗಿತ್ತೊ ಅದೆಲ್ಲ ಆಗೇದ್‌. ನೀ ಏನ್‌ ಹೆದರ್‌ಬ್ಯಾಡಾ ಬಾರೋ’ ಎಂದು ಹೇಳ್ದೆ. ಆಗ ಸಮಾಧಾನದಿಂದ ಒಳ ಬರುತ್ತಲೇ, ‘ದಿಲ್ಲಿ ಒಳ್ಗ ಕಮಲ, ಹಸ್ತದ ಪಕ್ಷಗಳನ್ನ ಕಸಬರಿಗಿ ಗುಡಿಸಿ ಗುಡ್ಡೆ ಹಾಕಿದ್ದು ನೋಡಿ ನಿದ್ದಿನs ಹಾರಿ ಹೋಗೇದ್‌’ ಎಂದ.

‘ನಿಂದೇನ್‌ ಮಹಾ. ಕಸಬರಿಗಿ ಕಣ್ಣಿಗೆ ಬಿದ್ರ ಚಾಣಕ್ಯ, ಠಾಕೂರ್‌, ಯೋಗಿಯಂತಹ ಮಹಾನ್‌ ನಾಯಕರೂ ಬೆಚ್ಚಿ ಬೀಳಾಕತ್ತಾರಂತ. ಕಾಂಗ್ರೆಸ್‌ಮುಕ್ತ ಭಾರತ್‌ ಮಾಡಾಕ್‌ ಹೊಂಟವ್ರು ಈಗ ಪೊರಕೆಮುಕ್ತ ಭಾರತ್ ಮಾಡ್ತಾರಂತ್‌ ಹೌದೇನ್‌’ ಎಂದು ಕೇಳ್ದೆ.

‘ಪೊರಕೆ ಪುರಾಣ ಸಾಕು’ ಅಂತ ಹೇಳಿದಂವಾ, ನನ್ನ ಕೈಯ್ಯಾಗ್‌ ಅವಲಕ್ಕಿ ಇದ್ದುದನ್ನು ನೋಡುತ್ತಿದ್ದಂತೆ ಹರಳೆಣ್ಣೆ ಕುಡಿದವರ ಥರಾ ಮಾರಿ ಕಿವುಚಿದ. ‘ಹಿಂಗ್ಯಾಕಲೆ, ಮಂತ್ರಿಗಿರಿ ಕೈತಪ್ಪಿದ ಮೂಲ ನಿವಾಸಿಗಳಂಗ್ ಮಾರಿ ಯಾಕ್ ಸಣ್ಣಗಾತು ನಿಂದು’ ಅಂತ ಕೇಳಿದೆ. ‘ನನ್ನ ಹೆಂಡ್ತಿ ಮಾಡಿದ್ದ ಅವಲಕ್ಕಿ ಬ್ಯಾಡಂತ, ನಾಷ್ಟಾ ಮಾಡಾಕಂತ ಬಂದ್ರ ಇಲ್ಲೂ ಅವಲಕ್ಕಿನ ಅದ’ ಅಂತ ಅಲವತ್ತುಕೊಂಡ. ‘ನನ್ನನ್ನೂ ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗ ಅಂತ ತಿಳ್ಕೊಬ್ಯಾಡಪಾ. ಅವಲಕ್ಕಿ ಬಾಂಗ್ಲಾ ದೇಶದವರು ತಿನ್ನೋದು ಅಂತ ಹೇಳಿದ ಮೂರ್ಖನ ಮಾತ್ ಕೇಳಿದ ನಿನ್ನಂತಹ ಶತಮೂರ್ಖರಿಂದನs ದೇಶ ಹಾಳಾಗ್ತಾ ಇರೋದು’ ಎಂದೆ.

‘ಅವಲಕ್ಕಿ ಬ್ಯಾಡಂದ್ರ ಹೂರ್ಣದ ಕಡುಬು ತಿಂತಾರೇನ್ ಕೇಳ್ರಿ’ ಅಂತ ನನ್ನಾಕಿ ಅಡಿಗಿ ಮನ್ಯಾಗ್ನಿಂದ ಆವಾಜ್ ಹಾಕಿ ಕಿಸಕ್ಕನೆ ನಕ್ಕಿದ್ದು ಕೇಳಿಸ್ತು. ಪ್ರಭ್ಯಾ ಇದೇನಿದು ಎನ್ನುವಂತೆ ಮಳ್ಳನಂಗ್ ನನ್ನ ಮಾರಿ ನೋಡ್ದಾ.

‘ಅವ್ಳಿಗೆ ಗೊತ್ತಿರುವಷ್ಟು ರಾಜಕೀಯ ನಿನಗs ಗೊತ್ತಿಲ್ಲಲ್ಲೊ ಮಳ್ಳ. ವಲಸಿಗ ಮಿತ್ರ ಮಂಡಳಿಯವರು ಒಂದೇ ಗಂಟಿನಲ್ಲಿ ಮಂತ್ರಿಯಾಗಿದ್ದು ನೋಡ್ಕೊಂಡು ಭಾಜಪದ ಮೂಲ ನಿವಾಸಿಗಳು ಕಡುಬು ತಿನ್ಕೊತ್ ಇರ್ತಾರೇನ್ ಅಂತ ಕುಮಾರಣ್ಣ ಕೇಳ್ಯಾನ್’ ಎಂದೆ.

‘ಯಾರಾದ್ರು ಏನಾದರೂ ತಿನ್ನಲಿ. ಈ ಅಣ್ಣಂಗ್ ಯಾಕ್ ಹೊಟ್ಟೆಕಿಚ್ಚು. ಅನಾಯಾಸವಾಗಿ ಬಂದಿದ್ದ ಸಿ.ಎಂಗಿರಿಯನ್ನ ಕಳ್ಕೊಳ್ಳಾಕ್ಕ ಕಾರಣನಾದ ಸಿದ್ರಾಮಣ್ಣನ ವಿರುದ್ಧ ಹಲ್ ಮಸೀತಾ ಕುಂತೋರಿಗೆ ರಾಜಾಹುಲಿ ಮತ್ತವರ ಅ(ನ)ರ್ಹ ಪಟಾಲಂನ ಉಸಾಬರಿ ಯಾಕ್ ಬೇಕಪಾ’ ಎಂದ.

‘ಅ(ನ)ರ್ಹರನ್ನು ಕರೆತಂದವರಿಗೇನs ಮಂತ್ರಿಯಾಗೊ ಯೋಗ ಇಲ್ಲೋ ಯೋಗೇಶ್ವರಾ. ಬಳ್ಳಾರಿ ರಿಪಬ್ಲಿಕ್‌ ಸಾಮಂತನ ಡಿಸಿಎಂ ಕನಸs ನುಚ್ಚು ನೂರಾಗೇದ್. ಅಂಥಾದ್ರಾಗ್ ಹಳ್ಳಿ ಹಕ್ಕಿ ಕನಸ್‌, ಕತ್ತಿ ಸಿ.ಎಂ ಕನಸ್ ನನಸ್ ಆಗಾಕ್ ಇನ್ನ ಎಷ್ಟು ದಿನಾ ಬೇಕೊ. ಈ ಸರ್ಕಾರ ಮೂರು ವರ್ಷ ಮುಗಸ್ತದ ಏನೊ’ ಎಂದ ಬ್ಯಾಸರದಿಂದ. ‘ಹಂಗ್ಯಾಕ್ ಅನುಮಾನಪಡ್ತಿ’ ಎಂದೆ.

‘ಅದ್ಕ ಭಾಳ್‌ ಕಾರಣಾ ಅದಾವ್‌ ಬಿಡೊ. ರಾಜಾ ಹುಲಿಗೆ ಮುಂದಿನ ದಿನಗಳು ಎಂಥಾವ್ ಅದಾವೊ ಗೊತ್ತಿಲ್ಲ’ ಎಂದ. ನಾನು ಕೂಡಲೇ ‘ಸಂಪಾಯಿತಲೇ ಪರಾಕ್’ ಎಂದೆ. ಮಿಕಿಮಿಕಿ ಮಾರಿ ನೋಡ್ದಾ. ‘ಮೈಲಾರ
ಲಿಂಗೇಶ್ವರ ಕಾರಣಿಕ ಉಕ್ತಿ ಪ್ರಕಾರ, ರಾಜಾ ಹುಲಿಗೆ ಸದ್ಯಕ್ಕೆ ಯಾವುದೇ ಕಂಟಕ ಇರೋದಿಲ್ಲೇಳ್‌’ ಎಂದೆ. ಸಮಾಧಾನಗೊಂಡ ಪ್ರಭ್ಯಾ, ‘ಎಲ್ಲಿ ಮನ್ಯಾನ ಹುಡುಗ್ರು ಕಾಣಾಕತ್ತಿಲ್ಲಲ್ಲ’ ಅಂತ ಕೇಳ್ತಾ ಮಾತಿಗೆ ಬೇರೆ ತಿರುವು ಕೊಟ್ಟ.

‘ಗೋಲಿ ಗುಂಡು ಆಡಾಕ್ ಹೋಗ್ಯಾರ್’ ಎಂದೆ. ‘ಎಲ್ಲಿ ಶಾಹೀನ್ ಬಾಗ್‌ದಾಗೇನ್‌’ ಎಂದ ಉತ್ಸಾಹದಿಂದ. ‘ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುವ ಪ್ರತಿಭಟನೆಗಳೆಲ್ಲ ನಿನಗ್ ಶಾಹೀನ್ ಬಾಗ್ ಥರಾನಾ ಕಾಣ್ತಿರಬೇಕ್. ಗೋಟಿ ಆಡಾಕ್ ಹೋಗ್ಯಾರs’ ಎಂದೆ ಜೋರು ದನಿಯಲ್ಲಿ. ‘ಭೇಷ್, ಭೇಷ್. ಈ ವಯಸ್ಸನ್ಯಾಗ್‌ ಗೋಲಿ ಹೊಡೆಯೋದನ್ನ ಕಲಿಯೋದು ಭಾಳ್‌ ಛಲೋ’ ಎಂದ.

‘ಏಯ್, ಬೇಕೂಫ್. ಗೋಲಿ ಪರವಾಗಿ ನಿನ್ನ ಬಹುಪರಾಕ್‌ಗಿಷ್ಟು ಬೆಂಕಿ ಹಾಕಾ. ದೇಶದ್ರೋಹಿ ಗದ್ದಾರೋಂಕೊ ಗೋಲಿ ಮಾರೊ ಸಾಲೊಂಕೊ ಮತ್ತು ‘ನಮೋ’ಗೆ ಯುವ ದಂಡಾ ಮಾರೇಂಗೆ ಅಂತ ಹೇಳಿದವ್ರಿಗೆಲ್ಲ ದಿಲ್ಯಾಗ್‌ ಛಲೋ ಪೂಜೆ ಆಗೇದ್‌. ಗೋಲಿ ಗುಂಡು ಆಡೋದಕ್ಕೂ, ಗೋಲಿ ಮಾರೊ ಅಂತ ಹೇಳೊದಕ್ಕೂ ಭಾಳ್‌ ಅಂತ್ರಾ ಅದಲೇ. ಗರ್ಭಗುಡಿ ಸಂಸ್ಕೃತಿಯ ಪಕ್ಷದಾಗs ಮಣ, ಮಣ ಸಂಸ್ಕೃತ ಪಠಣದ ಬದಲಿಗೆ ಢಂ, ಢಮಾರ್‌ ಗೋಲಿ ಪಠಣ ನಡದದಲ್ಲೊ. ಯಃಕಶ್ಚಿತ್‌ ಕಸಬರಿಗಿ ಮುಂದ ಬಂದೂಕಿನ ಬಾಯಿನs ಬಂದ್‌ ಆಗೇದಲ್ಲೊ’ ಎಂದೆ. ಮುಖದ್ ಮ್ಯಾಲೆ ಉಗುದ್ರು ಏನೂ ಆಗಿಲ್ಲದಂತೆ ಭಂಡತನ ತೋರ್ಸೊರ್ ಥರಾ, ‘ರಾಜಕೀಯದಾಗ್ ಇದೆಲ್ಲ ಮಾಮೂಲು ಬಿಡು. ಸ್ವಲ್ಪ ಕೆಲ್ಸಾ ಐತಿ. ಪಕ್ಷದ ಕಚೇರಿಗೆ ಹೋಗ್ಬೇಕಾಗೈತಿ’ ಅಂತ ಹೇಳ್ತಾ ಎದ್ದು ನಿಂತ.

‘ಇಷ್ಟ್‌ ಜಲ್ದಿ ಹೋಗಿ ಅಲ್ಲೇನ್‌ ಕಸಾ ಹೊಡೀತಿ ಏನ್‌. ಪಕ್ಷದ ಕಚೇರಿ ಒಳ್ಗ ಕಸಾ ಹೊಡ್ಯಾಕ್ ಕೋಟ್ಯಧಿಪತಿ ಎಂಟಿಬಿ ಬಂದಿರಬೇಕ್‌, ಕೇಳಿ ನೋಡ್‌’ ಅಂತ ಕಾಲೆಳೆದೆ. ಮಣ್ಣಿನ ಮಗ ಚಿತ್ರದ, ‘ಇದೇನು ಸಭ್ಯತೆ, ಇದೇನು ಸಂಸ್ಕೃತಿ...’ ಹಾಡುಗುನುಗುನಿಸುತ್ತಲೇ ಪ್ರಭ್ಯಾನನ್ನ ಸಾಗಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT