ಶನಿವಾರ, ಜೂನ್ 25, 2022
24 °C

ಕಸ್ಟ 'ದ' ದಿನಗಳು

ಮಲ್ಲಿಕಾರ್ಜುನ ಹುಲಗಬಾಳಿ, ಬನಹಟ್ಟಿ Updated:

ಅಕ್ಷರ ಗಾತ್ರ : | |

Prajavani

ಯಾರೂ ಕಾಯದಿದ್ದರೂ ತನ್ನ ಪಾಡಿಗೆ ತಾನು ಬರುವಂಥದ್ದು ಅಂದ್ರೆ ಸಾಲದ ಮೇಲಿನ ಬಡ್ಡಿ, ಮತ್ತೆ ಗಡ್ಡ ಮೀಸೆ. ಹಾಂ .. . ಹಾಂ. .. ಅನ್ನುವಷ್ಟರಲ್ಲಿ ಮೂಲ ಅಸಲು ಮೀರಿ ಬಡ್ಡಿ ಬೆಳೆದುಬಿಟ್ಟಿರುತ್ತದೆ, ಅಪ್ಪನ ಮುಂದೆಯೆ ಎತ್ತರಕೆ ಬೆಳೆದುನಿಂತ ಮಗನಂತೆ. ಅದರಂತೆ ನಮ್ಮ ಮುಖಕ್ಷೌರ. ನಮಗರಿವು ಇಲ್ಲದೆ ಬೆಳೆದು ಗಡ್ಡವೆಂಬುದು ಗುಡ್ಡವಾಗಿ ಹೋಗಿರುತ್ತದೆ...

ಹಾಗೆ ನೋಡಿದರೆ, ನಮ್ಮ ಪೂರ್ತಿ ಆಯುಷ್ಯ ಕಾಯುವುದರಲ್ಲೆ ಕರಗಿ ಹೋಗುತ್ತದೆ. ‘ಕಾಯ ಅಳಿಯುವವರೆಗೆ ಕಾಯುವುದು ತಪ್ಪದು’ ಎಂದು ವೇದಾಂತಿಗಳು ಹೇಳಿಲ್ಲವೆ ! ಹೆರಿಗೆಯ ದಿನದಿಂದ ಹಿಡಿದು, ಕೊನೆಗೆ ಮಸಣದಲ್ಲಿನ ಅಪರಕ್ರಿಯೆಯವರೆಗೆ ಕಾಯುತ್ತಲೇ ಇರುತ್ತೇವೆ. ಪಿಂಡಕ್ಕೆ ಇಟ್ಟ ಅನ್ನ ಕಾಗೆ ಬಂದು ತಿಂದವೆಂದರೆ...., ಅಲ್ಲಿಗೆ ಈ ಜೀವದ ಕಾಯುವಿಕೆಯ ಕ್ರಿಯೆಗಳೆಲ್ಲ ಮುಗಿದಂತೆ.

ಪ್ರಾಯ ಬದಲಾಗುತ್ತ ಹೋದಂತೆ, ಅಭಿಪ್ರಾಯಗಳೂ ಬದಲಾಗುತ್ತವೆ. ಅದರೊಂದಿಗೆ, ಈ ಪ್ರಾಯದ ಜತೆಜತೆಗೆ, ಈ ಕಾಯುವಿಕೆಯ ಹಿಂದಿರುವ ನಮ್ಮ ಬೇಕುಬೇಡಗಳೂ ಬದಲಾಗುತ್ತಿರುತ್ತವೆ. ಚಿಕ್ಕೋರಾಗಿದ್ದಾಗ ಕುರುಕಲು ತಿಂಡಿತಿನಿಸುಗಳಿಗಾಗಿ ಕಾಯ್ದು ಕುಳಿತುಕೊಂಡಿರುತ್ತಿದ್ದೆ. ‘ಗಂಟ್ಲಾಗ ಸಿಕ್ಕೀತೊ ಕುಡ್ಸಲ್ಯಾ’ ಅಮ್ಮ ಬೈಯುತ್ತಿದ್ದರೂ, ಅವಸರವಸರವಾಗಿ ನುರಿಸುತ್ತಿದ್ದೆ. ಹೀಗೆ ಗಡಬಡಿಸಿ ತಿನ್ನುವಾಗ, ಹಲ್ಲುಗಳಡಿ ನಾಲಿಗೆ ಸಿಕ್ಕು ಪೇಚಾಡಿದ್ದುಂಟು.

‘ಬಿಡುವಿಲ್ಲ ಅರ್ಜಂಟು! ಟಾರುಬೀದಿಯ ತುಡಿತ / ಆಫೀಸು ಶಾಲೆ-ಕಾಲೇಜು ಅಂಗಡಿ ಬ್ಯಾಂಕು / ಎಳೆಯುತಿಹದಯಸ್ಕಾಂತದೊಲು ಜೀವಾಣುಗಳ’ ಎಂದು ಕವಿ ಕಣವಿ ಹೇಳುವಂತೆ, ಬದುಕು ಗೊಂದಲಾಪುರದ ಸಂತೆ. ಅಂದಿನ ಬೆಳಿಗ್ಗೆಯೆ ಬರಬೇಕಾದ ಹಾಲಿನವನಿಗಾಗಿ, ಪೇಪರ್ ಹಾಕುವ ಹುಡುಗನಿಗಾಗಿ, ಕಚೇರಿಗೆ ಕರೆದೊಯ್ಯುವ ವಾಹನಕ್ಕಾಗಿ... ಅಲ್ಲಿ ಕಚೇರಿಯಲ್ಲಿ ಕೆಲಸದ ಸಮಯ ಮುಗಿಯುವ ಸಮಯಕ್ಕಾಗಿ... ಎಷ್ಟೊಂದು ತೆರದಿ ಆಯಸ್ಕಾಂತದ ಹಾಗೆ ಈ ‘ಕಾಯುವಿಕೆ’ ಅಂಬೋದು ಸೆಳೆದು ಬಿಟ್ಟಿರುತ್ತದಲ್ಲ !

ಯಾರೂ ಕಾಯದಿದ್ದರೂ ತನ್ನ ಪಾಡಿಗೆ ತಾನು ಬರುವಂಥದ್ದು ಅಂದ್ರೆ ಸಾಲದ ಮೇಲಿನ ಬಡ್ಡಿ, ಮತ್ತೆ ಗಡ್ಡ ಮೀಸೆ. ಹಾಂ... ಹಾಂ... ಅನ್ನುವಷ್ಟರಲ್ಲಿ ಮೂಲ ಅಸಲು ಮೀರಿ ಬಡ್ಡಿ ಬೆಳೆದುಬಿಟ್ಟಿರುತ್ತದೆ, ಅಪ್ಪನ ಮುಂದೆಯೆ ಎತ್ತರಕೆ ಬೆಳೆದುನಿಂತ ಮಗನಂತೆ. ಅದರಂತೆ ನಮ್ಮ ಮುಖಕ್ಷೌರ. ನಮಗರಿವು ಇಲ್ಲದೆ ಬೆಳೆದು, ನೋಡನೋಡುತ್ತಿದ್ದಂತೆ ಗಡ್ಡವೆಂಬುದು ಗುಡ್ಡವಾಗಿ ಹೋಗಿರುತ್ತದೆ. ಈ ಮುಖಕ್ಷೌರಕ್ಕಿಂತ ಭಯಾನಕವಾದುದು ತಲೆಕ್ಷೌರವೆಂಬ ಘೋರ ‘ಕಷ್ಟ’ದ್ದು. ಇಂಗ್ಲಿಷಿನ ‘ಕಟ್’ ನಮ್ಮ ಹಳ್ಳಿಗರ ಬಾಯಲ್ಲಿ ಆಗ ‘ಕಸ್ಟ’ವಾಗಿತ್ತು.

ನಾವು ಹೈಸ್ಕೂಲ್ ದಾಟಿ, ಕಾಲೇಜು ಕಟ್ಟೆ ಏರುವವರೆಗೆ ಈ ‘ಕಸ್ಟ’ಕ್ಕೆ ತಲೆ ಕೊಡಲೆಬೇಕಿತ್ತು. ಪ್ರತಿ ನಾಲ್ಕನೆಯ ರವಿವಾರ ತಪ್ಪದೆ ಬರುವ ನಾವಿಂದ ಶರಣಪ್ಪನಿಗಾಗಿ ನಾವೆಲ್ಲ ಚಿಕ್ಕೋಳು ಮುಂಚಿತವಾಗಿ ಕಾಯುತ್ತ ಕುಳಿತುಕೊಳ್ಳಬೇಕು. ಮನೆಯಲ್ಲಿನ ತೀರ ಸಣ್ಣವನಿಗೆ ಮೊದಲಮಣೆ. ಅನಂತರ ದೊಡ್ಡವರು, ಅವರಿಗಿಂತ ದೊಡ್ಡವರು, ತೀರ ದೊಡ್ಡವರು- ಹೀಗೆ ಮನೆಯ ಒಂಬತ್ತು ಜನ ಗಂಡಸರು ತಮ್ತಮ್ಮ ಸರದಿಗಾಗಿ ಕಾಯುತ್ತ ಕುಳಿತುಕೊಳ್ಳುತ್ತಿದ್ದರು.

ಇನ್ನು ಆ ದಿನಗಳ ಕ್ಷೌರದ ‘ಕಸ್ಟ’ವೊ...! ಶಿವ ಶಿವಾ, ಅದೊಂದು ಯಮಯಾತನೆ ! ನಾವಿಂದ ಶರಣಪ್ಪನ ಮೊಂಡಗತ್ತಿ, ತಲೆಯ ಚರ್ಮವನ್ನು ಹಿಂಡಿ ಹಿಂಡಿ, ಅದು ಮಾಡುವ ನೋವು, ಕಣ್ಣುಗಳೆರಡರಿಂದ ಹರಿಯುವ ಗಂಗೆ ಜಮುನೆಯರ ಜತೆ ಸೇರಿ ತ್ರಿವೇಣಿ ಸಂಗಮವನ್ನು ನಿರ್ಮಿಸುತ್ತಿದ್ದ ನಾಸಿಕಧಾರೆ. ಮೂಗಿನಿಂದ ಒಸರುತ್ತಲೇ ಇರುತ್ತಿದ್ದ ಸಿಂಬಳವನ್ನು ಎಡಮೊಣಕೈಯಿಂದ ಮುಂಗೈಯವರೆಗೆ ‘ಸೊರ್’ ಎಂದು ಕ್ಲೀನ್‍ಮಾಡಿ, ನಮ್ಮ ಪಟ್ಟೆಪಟ್ಟೆಯ ದೊಗಳೆ ಅಂಡರ್‍ವೆಯರ್‍ಗೆ ಟ್ರಾನ್ಸಫರ್ ಮಾಡುತ್ತಿದ್ದೆ. ಈ ವರ್ಗಾವಣೆ ಕ್ರಿಯೆ ನಡೆಯುತ್ತಿದ್ದದ್ದು ‘ಕಸ್ಟ್’ ಕಾರ್ಯಕ್ರಮದ ನಡುವೆಯೆ. ನೋವಿನಿಂದ ಆಕಡೆ ಈಕಡೆ ಏನಾದರೂ ಕೊಸರಾಡಿದೆವೊ, ಮಗ್ಗುಲಲ್ಲೆ ನಿಂತಿರುತ್ತಿದ್ದ ದೊಡ್ಡಜ್ಜ, ಬೆನ್ನಮೇಲೆ ‘ಧುಡುಮ್’ ಎಂದು ಗುದ್ದಿ, ಕಡಬು ಕಾಣಿಕೆ ನೀಡುತ್ತಿದ್ದ.

ಪೂರ್ತಿ ಬೋಳಾದ ತಲೆಗೆ ಗಾಂಧೀಕಟ್ ಎಂದು ಕರೆಯುತ್ತಿದ್ದರು. ಸಜ್ಜಿರೊಟ್ಟಿಯ ಹಾಗೆ ಲಕಲಕಿಸುತ್ತಿದ್ದ ಬೋಳುತಲೆಗೆ, ಕ್ಲಾಸ್‍ಮೇಟ್ಸ್‌ಗಳು ‘ಸಜ್ಜಿರೊಟ್ಟಿ ಚವಳಿಕಾಯಿ’ ಎಂದು ರೇಗಿಸುತ್ತಿದ್ದರು. ಅದಕ್ಕೆ ನನ್ನಂಥ ‘ಗಾಂಧಿ ಕಟ್‍ವಾದಿಗಳು, ನಿಮ್ಮಜ್ಜಿ ಹೊಟ್ಟಿ ಕುಂಬಳಕಾಯಿ ಎಂದು ಮಾರುತ್ತರ ನೀಡಿ ಚಪ್ಪಾಳೆ ತಟ್ಟುತ್ತಿದ್ದರು. ಮತ್ತೆ ಒಂದೆರೆಡು ವಾರ ಕಳೆಯುವಷ್ಟರಲ್ಲಿ, ತಲೆಯ ಮೇಲೆ ‘ಕಳೆ’ ಬೆಳೆದು ನಿಂತಿರುತ್ತಿತ್ತು. ನಾವಿಂದ ಶರಣಪ್ಪ ಶಸ್ತ್ರಗಳನ್ನು ಮಸೆಯುತ್ತ, ಯುದ್ಧಕ್ಕೆ ಸನ್ನದ್ಧನಾಗಿರುತ್ತಿದ್ದ.
ಈಗ ನಾವಿಂದ ಶರಣಪ್ಪನು ಕಾಲವಶನಾಗಿದ್ದಾನೆ. ಜತೆಗೆ ಆ ಪರಿಯ ‘ಕಸ್ಟ್’ವೂ ಇಲ್ಲವಾಗಿದೆ. ಮೆತ್ತನೆಯ ಕುಷನ್ ಖುರ್ಚಿಯ ಮೇಲೆ ಸುಖಾಸೀನರಾಗಿ, ಸಲೂನ್‍ದಲ್ಲಿ ಕ್ರಾಫ್ ಮಾಡಿಸಿಕೊಂಡು ಬರುವ ದಿನಗಳಿವು. ಇಷ್ಟಿದ್ದಾಗ್ಯೂ, ಸರದಿಗಾಗಿ ಕಾಯುವುದು ಇಲ್ಲೂ ಉಂಟು.

ಆದರೆ ಈಗಿನವರು ‘ಅರ್ಜೆಂಟ್ ಜೀವಿ’ಗಳು. ಎಲ್ಲವೂ ಅರ್ಜೆಂಟ್‍ಗೆ ಆಗ್ಬೇಕು. ತರಾತುರಿಯವರು. ನೈವೈದ್ಯಕ್ಕೆ ಪಾಕವೇ ಸಿದ್ಧವಾಗದಿರುವಾಗ ಪ್ರಸಾದಕ್ಕೆ ಹಪಾಹಪಿಸೋರು. ಕಾಯ್ದಷ್ಟು ಮನಸ್ಸು ಪಕ್ವವಾಗುತ್ತದೆ, ಭಾವ ಟಿಸಿಲೊಡೆಯುತ್ತದೆ. ನಾನಂತೂ ಕಾಯುವುದನ್ನು ಇಷ್ಟಪಡುತ್ತೇನೆ. ಕಾಯುತ್ತ ಕೂಡ್ರುವ ತಾಳ್ಮೆಯನ್ನು ನನ್ನ ಬಾಲ್ಯದ ‘ಕಸ್ಟ’ದ ದಿನಗಳು ಕಲಿಸಿದೆಯಲ್ಲ. ಕಾಯುವಗುಣ ನಮಗಿದ್ದರೆ, ಅದೇ ನಮ್ಮನ್ನು ಕಾಯುವುದು ಎಂದು ಹಿರಿಯರು ಹೇಳಿಲ್ಲವೆ? ತಾಳಿದವನು ಬಾಳಿಯಾನು. ನನ್ನೀ ತಾಳ್ಮೆಯ ಗುಣ ನೋಡಿ, ನನ್ನ ಮಿತ್ರರು ‘ತಾಳಿದವನು ಹುಲಗ ‘ಬಾಳಿ’ ಎಂದು ನಗೆಯಾಡುತ್ತಿರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು