ಶುಕ್ರವಾರ, ಜೂನ್ 24, 2022
28 °C

ಟ್ರಂಪಣ್ಣನಿಗೊಂದು ದೊ(ದ)ಡ್ಡ ನಮಸ್ತೆ!

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಬೆಳಿಗ್ಗೆ ಆರಾಮಾಗಿ ಚಹಾ ಕುಡ್ಕೋತ್ ಪೇಪರ್ ಮೇಲೆ ಕಣ್ಣಾಡಿಸುತ್ತಿದ್ದಾಗ, ನಮಸ್ಕಾರ ಕಾಕಾ, ನಮಸ್ಕಾರ್‌ ರೀ ಮಾಮಾರಿ, ನಮಸ್ಕಾರಬೇ ಯಕ್ಕಾ, ನಮಸ್ತೇ ಯಣ್ಣಾ ... ಅಂತ ಓಣ್ಯಾಗ ದನಿ ಕೇಳಿಬಂತು. ಪರಿಚಿತ ದನಿ ಇದ್ಹಂಗ್ ಇದೆಯಲ್ಲ ಅಂತ ಕಿಡಕ್ಯಾಗ್‌ ಹಣಿಕಿದೆ. ಚಡ್ಡಿ ದೋಸ್ತ್ ಪ್ರಭ್ಯಾ, ಕೇರ‍್ಯಾಗಿನ ಎಲ್ಲ ಹಿರಿಕಿರಿಯರಿಗೆ ನಮಸ್ಕಾರ ಮಾಡ್ತಾ ಮಾತನಾಡಿಸುತ್ತ ಬರೋದು ಕಾಣಿಸ್ತು. ಈಗ ಇಂವಾ ನನ್ನ ಮನಿ ಕಡೆಗೆ ಬರೂದು ಗೊತ್ತಾಗಿ, ಮಾತಿಗೆ ಕುಂತ್ರ ಚಹಾ ತಣ್ಣಗಾಗ್ತದಂತ ಭಾವಿಸಿ, ಕಪ್ಪು ಬಸಿ ಒಳಗಿನ ಚಹಾನ ಒಂದೇ ಗುಟುಕಿಗೆ ಸೊರ್‌ ಎಂದು ಕುಡಿದು, ಅದನ್ನು ಟೀಪಾಯಿ ಮೇಲೆ ಇಡುವುದಕ್ಕೂ ಪ್ರಭ್ಯಾ ಮನಿ ಒಳಗ್‌ ಕಾಲಿಡುವುದಕ್ಕೂ ಸರಿ ಹೋಯ್ತು.

‘ಏನಪಾ, ಅಹ್ಮದಾಬಾದ್‌ನಿಂದ ನೇರವಾಗಿ ಇಲ್ಲಿಗೇ ಬಂದ್ಹಂಗ್‌ ಕಾಣಸ್ತದ. ನಿನಗೂ ಆಹ್ವಾನ ಇತ್ತೇನ್‌ ಟ್ರಂಪಣ್ಣನ ನಮಸ್ತೇ ಫಂಕ್ಷನಕ್ಕ. ಮೈಯ್ಯಾಗ್‌ ನಮಸ್ತೆ ಭೂತ ಹೊಕ್ಕಂಗ್‌ ಕಾಣಸ್ತದ’ ಎಂದೆ.

‘ಸಮಾರಂಭಕ್ಕ ಒಂದು ಕೋಟಿ ಜನಾ ಸೇರ್ತಾರ್ ಅಂತ ಟ್ರಂಪ್‌ ಸಾಹೇಬ್ರು ಹೇಳಿದ್ರಲ್ಲ. ಕ್ರೀಡಾಂಗಣ ಭರ್ತಿಗೆ ಅಳಿಲು ಸೇವೆ ಸಲ್ಲಸಾಕ್‌ ಹೋಗಿದ್ದೆ’ ಎಂದ.

‘ಟ್ರಂಪ್‌ ಹೇಳಿದ್ದಕ್ಕ ಅಥ್ವಾ ಇಷ್ಟ ಜನಾ ಸೇರ್ತಾರ್‌ ಅಂತ  ‘ನಮೋ’ ಸಾಹೇಬ್ರು ಟ್ರಂಪ್‌ಗೆ ಭರವಸೆ ಕೊಟ್ಟಿದ್ದಕ್ಕ ಹೋಗಿದ್ದಿ ಏನ್‌. ಅಹ್ಮದಾಬಾದ್‌ನಾಗ ಇರೋದ 80 ಲಕ್ಷ ಜನಾ. ಅಂಥಾದ್ರಾಗ್‌ ಒಂದ್‌ ಕೋಟಿ ಜನಾ ಎಲ್ಲಿಂದ್‌ ಬರ್ತಾರ್‌. ಆಕಾಶದಿಂದ ಉದುರ್‌ತಿದ್ದರೇನ್‌’ ಎಂದು ಕಾಲೆಳೆದೆ.

ನನ್ನ ಮಾತಿನ್ಯಾಗಿನ ವ್ಯಂಗ್ಯಕ್ಕೆ ನಖಶಿಖಾಂತ ಉರಿದುಹೋದ ಪ್ರಭ್ಯಾ, ಥಟ್ಟನೆ ಎದ್ದು ಬಾಗಿಲ ಕಡೆಗೆ ಹೋಗಲು ಅವಸರಿಸಿದ.

‘ಸಾಕು ಕುಂದ್ರೊ. ಟ್ರಂಪಣ್ಣ ಭಾಷ್ಣಾ ಚಾಲೂ ಮಾಡುತ್ತಿದ್ಹಂಗ್‌ ಜನಾ ಎದ್ದು ಮನಿಕಡಿಗೆ ಹೊಂಟ್ಹಂಗ್‌ ಇದೇನ್‌ ಮೊಟೆರೊ ಕ್ರೀಡಾಂಗಣವಲ್ಲ. ಅದಿರ‍್ಲಿ ಬಿಡು. ರೊಕ್ಕ ಕೊಟ್ಟು ಕರೆಸಿದವರನ್ನ ಎಷ್ಟೊತ್ತನಕಾ ಹಿಡ್ಕೊಂಡ್‌ ಕುಂದ್ರಾಕ್‌ ಆಗ್ತದ. ಟ್ರಂಪಣ್ಣನ ಟಫ್‌ ಇಂಗ್ಲಿಷ್‌ ಎಷ್ಟ್‌ ಜನಕ್‌ ಅರ್ಥ ಆಗೇತಿ ಅನ್ನೋದು ಬ್ಯಾರೆ ಪ್ರಶ್ನೆ ಬಿಡು. ನಮಸ್ತೆ ಕಾರ್ಯಕ್ರಮದಾಗ್‌ ಜೋಷ್‌ ಹೆಂಗಿತ್ತಪ್ಪಾ’ ಎಂದು ಕೇಳ್ದೆ.

‘ಏಯ್‌ ದೋಸ್ತ್‌. ಫಂಕ್ಷನ್‌ ಭಾಳ್‌ ಜಬರ್‌ದಸ್ತ್‌ ಇತ್ತು. ಆ ಸಂಭ್ರಮ ನೋಡಾಕ್‌ ಎರಡ್‌ ಕಣ್ಣು ಸಾಲಲಿಲ್ಲ’ ಅಂದ.

‘ಅದೇ ಖುಷಿಯೊಳಗ್‌ ಟ್ರಂಪಣ್ಣನ ಕಣ್ಣುಗಳು ಮಂಜಾಗಿ, ಸಾಬರಮತಿ ಆಶ್ರಮದಾಗ್ ಮಹಾತ್ಮನ ಬಗ್ಗೆ ಒಂದೆರಡು ಸಾಲು ಬರೆಯೋದನ್ನ ಬಿಟ್ಟು ತನ್ನ ಮೆಚ್ಚಿನ ‘ರಾಷ್ಟ್ರಪಿತ’ ಒದಗಿಸಿದ ಭವ್ಯ ಆತಿಥ್ಯಕ್ಕೆ ಬಾಯ್ತುಂಬ ಥ್ಯಾಂಕ್ಸ್‌ ಹೇಳ್ಯಾನ. ವಿಶ್ವದ ದೊಡ್ಡಣ್ಣನ ದಡ್ಡತನ ಇಡೀ ಜಗತ್ತಿಗೆ ಜಗಜ್ಜಾಹೀರು ಆಯ್ತಲ್ಲ’ ಎಂದೆ.

ದಿಲ್‌ವಾಲೆ ದುಲ್ಹನಿಯಾ ಲೇ ಜಾಯೇಂಗೆ ಹಿಂದಿ ಚಿತ್ರದಲ್ಲಿನ ‘ಬಡೆ ಬಡೆ ದೇಶೋಮೆ ಐಸಿ ಛೋಟಿ ಛೋಟಿ ಬಾತೆ ಹೋತಿ ರೆಹತಿ ಹೈ’ ಡೈಲಾಗ್‌ ನೆನ‍ಪಿಸಿದ ಪ್ರಭ್ಯಾ, ‘ದೊಡ್ಡಣ್ಣನ ಇಂತಹ ಸಣ್ಣ ಪುಟ್ಟ ತಪ್ಪುಗಳನ್ನ ಹೊಟ್ಯಾಗ್‌ ಹಾಕ್ಕೊಬೇಕಪಾ’ ಎಂದು ಹೆಂಡಿ ಸಾರಿಸಿದ.

‘ಈ ಡೈಲಾಗ್ ಹೇಳಿ ಟ್ರಂಪಣ್ಣಗs ಸಡ್ಡು ಹೊಡ್ದಿ ನೋಡ್‌, ಭಲೆ, ಭಲೆ’ ಅಂತ ಹೇಳಿ ಬೆನ್ನು ಚಪ್ಪರಿಸಿದೆ. ‘ಫಂಕ್ಷನ್‌ದಾಗ್‌ ಗ್ವಾಡಿ ಗೀಡಿ ನಿನ್ನ ಕಣ್ಣಿಗೆ ಬಿತ್ತೇನಪಾ ಅಲ್ಲಿ’ ಎಂದೆ.

‘ಯಾವ ಗ್ವಾಡಿ, ಚೀನಾದ ಮಹಾ ಗ್ವಾಡಿನಾ’ ಎಂದ ಮಳ್ಳನಂಗ.

‘ಆ ಗ್ವಾಡಿ ಅಲ್ಲಲೇ. ಕೊಳೆಗೇರಿಗಳು ಟ್ರಂಪ್‌ ಕಣ್ಣಿಗೆ ಬಿದ್ರ ನಮ್ಮ ದರಿದ್ರ ಪರಿಸ್ಥಿತಿ ಗೊತ್ತಾಗೋದು ಬ್ಯಾಡಂತ ಹೊಸದಾಗಿ ಗ್ವಾಡಿ ಕಟ್ಟಿದ್ರಲ್ಲ ಅದನ್ನ ನೋಡ್ದಿ ಏನ್‌’ ಎಂದೆ.

‘ಇಡೀ ಜಗತ್ತs ಭಾರತದತ್ತ ತಿರುಗಿ ನೋಡುತ್ತಿದ್ದ, ಅಸ್ತಿತ್ವದಲ್ಲಿಯೇ ಇಲ್ಲದ ನಾಗರಿಕ ಸನ್ಮಾನ ಸಮಿತಿ ಏರ್ಪಡಿಸಿದ್ದ ಸಮಾರಂಭವನ್ನ ‘ನಮೋ’ ವಿರೋಧಿಗಳೂ ಅಚ್ಚರಿಯಿಂದ ನೋಡಿದ ಫಂಕ್ಷನ್‌ ಬಗ್ಗೆ ದರಿದ್ರನ ಥರಾ ಮಾತಾಡ್ತೀಯಲ್ಲೊ, ನೀನೂ ಮಹಾ ದರಿದ್ರ ಅದಿ ಬಿಡು’ ಎಂದು ಬೈದ.

‘ನಮ್ಮ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗೇದs. ರೊಕ್ಕಾ ಇಲ್ಲದ ದರಿದ್ರ ಸ್ಥಿತಿಗೆ ತಲುಪೇದ ಅಂತ ಸಿದ್ರಾಮಣ್ಣನ ಹೇಳ್ಯಾನ ಅಂದಮ್ಯಾಲೆ ನಾನೂ ನೀನೂ ದರಿದ್ರರೇ ಬಿಡು’ ಎಂದೆ.

ಬುದ್ಧಿ ದಾರಿದ್ರ್ಯದ ಪ್ರಭ್ಯಾಗ್‌ ನನ್ನ ಮಾತ್‌ ಅರ್ಥವಾಯ್ತೋ ಇಲ್ಲವೊ ಗೊತ್ತಾಗದೇ ಪೆಕರನಂತೆ ನಕ್ಕ.

‘ರಾಜಾ ಹುಲಿ ಸರ್ಕಾರಕ್ಕ ಕತ್ತಿ ಸವಾಲ್‌ ಹಾಕೇದಂತಲ್ಲ’ ಅಂತ ಮಾತಿನ ಜಾಡನ್ನ ಬದಲಿಸುವಾಗಲೇ, ‘ಪೋಸ್ಟ್’ ಎಂದು ಅಂಚೆಯಣ್ಣ ಕೂಗಿ ಪತ್ರ ಬಿಸಾಕಿ ಹೋದ. ನನಗೆ ಥಟ್ಟನೇ ಅನಾಮಧೇಯ ಪತ್ರ ನೆನಪಾಯ್ತು. ‘ಏನೋ ಅನಾಮಧೇಯ ಪತ್ರವೊಂದು ರಾಜಾ ಹುಲಿ ಸರ್ಕಾರ್‌ದಾಗ್ ಭಾರಿ ಸದ್ ಮಾಡಾಕತ್ತದಲ್ಲಾ’ ಎಂದೆ.

‘ಅಸಂತೋಷದ ಕೆರಿಗೆ ಹಾರಿ ಹೊಟ್ಟೆಕಿಚ್ಚಿನಿಂದ ಉರುಳಾಡೊ ಕತ್ತಿ, ನೀರಾಗಿನ ಆನೆ, ಹಳ್ಳಿ ಹಕ್ಕಿ ಸಂಭಾಳಿಸೋದು ಹೆಂಗ್‌ ಅನ್ನೋದು ರಾಜಾ ಹುಲಿಗೆ ನೀರ್‌ ಕುಡಿದಷ್ಟ ಸಲೀಸು. ರಾಜಾ ಹುಲಿಯ ಹುಟ್ಟುಹಬ್ಬಕ್ಕ ಹೌದೊ ಹುಲಿಯಾ ಖ್ಯಾತಿಯ ಸಿದ್ರಾಮಣ್ಣ ಹಾಜರಾಗಿದ್ದು, ಮತ್ತ ಟ್ರಂಪಣ್ಣ, ನಮೋ ದೋಸ್ತಿ ನೋಡಿ ನೀನು ಕಲಿಯೋದು ಭಾಳ್‌ ಅದ. ಈಗ ನಿನಗೂ ಒಂದು ದೊ(ದ)ಡ್ಡ ನಮಸ್ಕಾರಪಾ ಬರ್ತೀನಿ’ ಎಂದು ಹೇಳಿದ. ಶೋಲೆ ಚಿತ್ರದ  ‘ಏಯ್‌ ದೋಸತಿ... ಹಮ್‌ ನಹಿ ತೋಡೇಂಗೆ. ತೋಡೇಂಗೆ ದಮ್‌ ಮಗರ್‌, ತೇರಾ ಸಾಥ್‌ನಾ ಛೋಡೇಂಗೆ... ಎಂಬ ಹಾಡು ಗುನುಗುನಿಸುತ್ತ ಹೊಂಟ. ನಾನು ಅದಕ್ಕೆ ಜುಗಲ್‌ಬಂದಿಯಾಗಿ, ಟ್ರಂಪಣ್ಣ ನೆನಪಿಸಿಕೊಂಡಿದ್ದ ‘ಡಿಡಿಎಲ್‌ಜೆ’ ಚಿತ್ರದ ‘ರುಕು ಜಾ, ಓ ದಿಲ್‌ ದಿವಾನೆ...’ ಹಾಡು ಹೇಳ್ತಾ ಅವನನ್ನ ಬೀಳ್ಕೊಟ್ಟೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು