ಭಾನುವಾರ, ಜುಲೈ 3, 2022
25 °C

ವರುಣ ದೇವನಲ್ಲಿ ಮೊರೆ

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಇಂದ್ರಲೋಕದಲ್ಲಿ ಭಾರತದ ರಾಯಭಾರಿಯಾಗಿರುವ ಮನು ಅವರಿಗೆ ಗೃಹ ಮಂತ್ರಿ ಶೆಹನ್ ಶಾ ಕರೆ ಮಾಡಿ, ದೇಶದಲ್ಲೆಲ್ಲಾ ಹಬ್ಬಿರುವ ನೆರೆ ಹಾವಳಿಯ ತೀವ್ರತೆಯನ್ನು ವಿವರಿಸಿದರು. ಈ ಕೂಡಲೇ ವರುಣ ದೇವನನ್ನು ಭೇಟಿಯಾಗಿ ತುರ್ತು ಮಾತುಕತೆ ನಡೆಸಿ, ಪರಿಹಾರ ಕಂಡುಕೊಳ್ಳುವಂತೆ ಕೇಳಿಕೊಂಡರು. ಮನು ತಡಮಾಡಲಿಲ್ಲ. ತಕ್ಷಣ ಅಪಾಯಿಂಟ್‌ಮೆಂಟ್ ಕೂಡಾ ಸಿಕ್ಕಿತು.

ಮನು ಅವರು ವರುಣ ದೇವನ ಎದುರು ಕುಳಿತುಕೊಂಡಿದ್ದರು. ‘ಹೇಳುವಂತವನಾಗು ಮನು. ಈಚೆಗೆ ಬಹಳ ಅಪರೂಪವಾಗಿದ್ದೀಯಲ್ಲ?’

‘ನಿಜ ಪ್ರಭು, ಈಚೆಗಿನ ದಿನಗಳಲ್ಲಿ ಮಳೆಗಾಗಿ ಮನವಿ ಸಲ್ಲಿಸೋಕೆ ತಮ್ಮಲ್ಲಿ ನಾನು ಬರುತ್ತಿಲ್ಲ. ನಮ್ಮ ದೇಶದಲ್ಲಿ ಈಗ ಜನರೇ ಮಹಾಪೂಜೆ, ಯಾಗ ಮಾಡಿ ತಮ್ಮ ಮನವೊಲಿಸುತ್ತಿದ್ದಾರಂತೆ’.

‘ಆದರೆ ನಿಮ್ಮ ಜನ ಮಳೆಗಾಗಿ ಕಪ್ಪೆ, ಕತ್ತೆಗಳಿಗೆಲ್ಲಾ ಮದುವೆ ಮಾಡುತ್ತಾರೆ ಎಂದು ಕೇಳಿದೆ. ಇದು ನನಗೆ ಮಾಡುವ ಅವಮಾನವಲ್ಲವೇ? ನಾನು ನಿಮ್ಮ ಜನರ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡಿದ್ದೇನೆ’.

‘ಓಹ್, ಕ್ಷಮಿಸು ದೇವ, ನಾನು ಅದಕ್ಕೇ ಬಂದಿದ್ದು. ದಯವಿಟ್ಟು ತಕ್ಷಣ ಮಳೆಯ ಆರ್ಭಟ ನಿಲ್ಲಿಸಬೇಕೆಂದು ನಮ್ಮ ಗೃಹ ಮಂತ್ರಿಯವರು ಕೋರಿಕೊಂಡಿದ್ದಾರೆ’.

‘ಯಾರು... ಆ ಶೆಹನ್ ಶಾ ನಾ? ನನ್ನ ವಿಶೇಷಾಧಿಕಾರದ ಮೇಲೂ ಆ ಮನುಷ್ಯ ಕಣ್ಣಿಟ್ಟಿದ್ದಾನಾ? ಅವನಿಗೆ ಹೇಳು, ವಿಧಿ ಬರೆದಂತೆ ನಾನು ನಡೆದುಕೊಳ್ಳುತ್ತೇನೆ ಅಂತ’.

‘ಹಾಗಲ್ಲ ಮಹಾಪ್ರಭೋ! ಮಳೆ ಸುರಿಸುವುದು ತಮ್ಮ ಹಕ್ಕು ಎಂಬುದನ್ನು ಒಪ್ಕೋತೀನಿ... ಆದರೆ ದಿನಕ್ಕೆ ಐದೋ ಏಳೋ ಸೆಂಟಿ ಮೀಟರ್‌ನಷ್ಟು ಮಾತ್ರ ಮಳೆ ದಯಪಾಲಿಸು ಎಂದು ಕೋರಿಕೆ’.

‘ಏನಂದಿ? ನಾನೇನು ಅಳತೆ ಮಾಡಿ ಮಳೆ ಸುರಿಸುತ್ತಿದ್ದೀನಿ ಅಂದ್ಕೊಂಡಿದ್ದೀಯಾ?’

‘ಪ್ರಭು, ಅದು ಏನಾಗಿದೆಯೆಂದರೆ... ಅಳತೆ ಮೀರಿ ಮಳೆ ಸುರಿದ ಪರಿಣಾಮವಾಗಿ ದೇಶದ ಹಲವಾರು ಕಡೆಗಳಲ್ಲಿ ಪ್ರವಾಹವೇ ಬಂದ್ಬಿಟ್ಟಿದೆ!’

‘ನೋಡಪ್ಪಾ ಮನು, ಮಳೆ ಸುರಿಸುವುದು ಮಾತ್ರ ನನ್ನ ಕೆಲಸ. ಪ್ರವಾಹ ನನ್ನ ಡಿಪಾರ್ಟ್‌ಮೆಂಟಲ್ಲ’.

‘ಅದು ಸರಿ ದೇವಾ, ನಮ್ಮ ನಿವೇದನೆ ಏನೆಂದರೆ, ತಮ್ಮ ಬತ್ತಳಿಕೆಯಿಂದ ಜಡಿಮಳೆಯನ್ನು ಬಿಡಬಾರದೂಂತ ಅಷ್ಟೇ...’

‘ಜಡಿಮಳೆಗೆ ಕಾರಣವಿದೆ ಮನು. ಜನ ಕಷ್ಟದಲ್ಲಿದ್ದಾಗ ನಿಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವರಿಗೆ ಯಾವ ರೀತಿಯಲ್ಲಿ ಸಹಾಯ ಮಾಡುತ್ತವೆ ಎಂದು ತಿಳಿದುಕೊಳ್ಳುವ ಕುತೂಹಲ ನನಗೆ’.

‘ಓಹ್! ಅಗ್ನಿಪರೀಕ್ಷೆ ಅಲ್ಲ... ಜಲಪರೀಕ್ಷೆ ಅನ್ನಿ!’

‘ಹೌದು, ಹಾಗನ್ನಬಹುದು. ಇಷ್ಟೆಲ್ಲಾ ಅನಾಹುತ ಆಗುತ್ತಿರುವಾಗ ಕರುನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ
ಯೊಬ್ಬರೇ ಇದ್ದರಲ್ಲವೇ! ಅಲ್ಲಪ್ಪಾ, ಮಂತ್ರಿಗಳೇ ಇಲ್ಲದಿರುವಾಗ ‘ಮುಖ್ಯ’ಮಂತ್ರಿ ಎಂದು ಕರೆಸಿಕೊಳ್ಳಲು ಅವರಿಗೆ ನಾಚಿಕೆಯಾಗಲ್ವೆ?’

‘ಒಪ್ಕೋತೀನಿ ಪ್ರಭು... ಆದರೆ...’

‘ಏನು ಆದರೆ? ಕೋಟ್ಯಧಿಪತಿ ಶಾಸಕರು ನೆರೆ ಪರಿಹಾರ ನಿಧಿಗೆ ಚಿಕ್ಕಾಸೂ ಹಾಕುತ್ತಿಲ್ಲ
ವೆಂದು ಕೇಳಿದ್ದೇನೆ. ಹೋಗಲಿ, ಸಂತ್ರಸ್ತರಿಗೆ ಸಹಾಯ ಮಾಡಲು ಎಷ್ಟು ಶಾಸಕರು ಮುಂದೆ ಬಂದಿದ್ದಾರೆ?’

‘ಅದು... ಅದು... ಪ್ರಭು... ಶಾಸಕರಲ್ಲಿ ಕೆಲವರಿಗೆ ನೆಗಡಿ ಆಗಿದೆಯಂತೆ. ಇನ್ನು ಕೆಲವರಿಗೆ ಜ್ವರ ಬಂದಿದೆ. ಈಚೆಗೆ ರೆಸಾರ್ಟ್‌ನಲ್ಲಿ ಹೊಟ್ಟೆ ಬಿರಿಯುವಷ್ಟು ತಿಂದಿದ್ದರಿಂದ ಕೆಲವರಿಗೆ ಇನ್ನೂ ಭೇದಿ ನಿಂತಿಲ್ಲವಂತೆ!’

‘ಈ ಎಕ್ಸ್‌ಕ್ಯೂಸ್‌ಗಳನ್ನ ಕೇಳೋಕೆ ನನಗಿಷ್ಟವಿಲ್ಲ. ಕನಿಷ್ಠ ಮೊಸಳೆ ಕಣ್ಣೀರನ್ನಾದರೂ ಹರಿಸುವ ರಾಜಕೀಯ ಮುಖಂಡರನ್ನು ನಿರೀಕ್ಷಿಸಿದ್ದೆ. ಆದರೆ ಕಂಡಿದ್ದೇನು? ಮನೆಯೊಂದರ ಮೇಲೆ ಸ್ವತಃ ಮೊಸಳೆಯೇ ಕಣ್ಣೀರು ಹರಿಸುತ್ತಾ ಕುಳಿತುಬಿಟ್ಟಿದೆ!’

‘ಇಲ್ಲ ಪ್ರಭೋ, ನಮ್ಮ ರಾಜಕಾರಣಿಗಳಿಗೆ ಏನಾದರೂ ಬುದ್ಧಿ ಬರಲ್ಲ. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’.

‘ಆದರೆ ಕೆಲವರು ಈ ನೆರೆಯಿಂದಾಗಿ ಏಕ್‌ದಂ ಬದಲಾಗಿದ್ದಾರೆ. ಹಿರಿಯ ರಾಜಕಾರಣಿಯೊಬ್ಬರು ನೆರೆ ನೀರಿಗೆ ರಾಜಕೀಯ ಬೆರೆಸಬಾರದೆಂಬ ಸನ್ನಡತೆಯ ಮಾತನ್ನಾಡಿಲ್ಲವೇ! ಇದ್ದಕ್ಕಿದ್ದಂತೆ ಕನ್ನಡ ಟಿ.ವಿ ಚಾನೆಲ್‌ನೋರು ಚರ್ಚಾರಚಾಟ ಕಾರ್ಯಕ್ರಮಗಳನ್ನು ನಿಲ್ಲಿಸಿಬಿಟ್ಟಿಲ್ಲವೇ!’

‘ಬದಲಾಗಿದ್ದು ಅಷ್ಟೇ ಅಲ್ಲ ಪ್ರಭು... ಸಂತೃಪ್ತರೆಲ್ಲಾ ಈಗ ಸಂತ್ರಸ್ತರಾಗಿಬಿಟ್ಟಿದ್ದಾರೆ... ಅವರೆಲ್ಲಾ ತಮ್ಮ ಪ್ರೀತಿಯ ಮನೆ, ನೆಲ, ಹಸು, ಕರು, ಕುರಿ, ನಾಯಿಗಳನ್ನು ಕಳಕೊಂಡು ತುಂಬಾ ವೇದನೆ ಪಟ್ಟುಕೊಳ್ಳುತ್ತಿದ್ದಾರೆ ಪ್ರಭು’.

‘ಸರಿ, ನಿನ್ನ ಮಾತಿಗೆ ಬೆಲೆ ಕೊಟ್ಟು ಇನ್ನು ಮುಂದೆ ನೆರೆ ಬರುವಂತೆ ಮಳೆ ಸುರಿಸುವುದಿಲ್ಲ. ಆದರೆ ಒಂದು ಕಂಡೀಷನ್! ನಿಮ್ಮ ಜನರು ನದಿ ಜೋಡಣೆ, ಅರಣ್ಯ ನಾಶದಂತಹ ಪಾಪದ ಕಾರ್ಯಗಳನ್ನು ನಿಲ್ಲಿಸಬೇಕು!’ ರಾಯಭಾರಿ ಮನು ‘ನೆರೆ ಪರಿಹಾರ’ದೊಂದಿಗೆ ವರುಣ ದೇವನ ಆಸ್ಥಾನದಿಂದ ಹೊರಡುತ್ತಾನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು