ಗುರುವಾರ , ಮೇ 19, 2022
21 °C

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಾಲ್ಕೈದು ತಿಂಗಳಿಂದ ಬಾಕಿ ಇರುವ ಗೌರವಧನ ಹಾಗೂ ಅರಿಯರ್ಸ್‌ ಅನ್ನು ಕೂಡಲೇ ಕೊಡಬೇಕು ಎನ್ನುವುದೂ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಬದ್ಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಬುಧವಾರ ಜಿ.ಪಂ.ಗೆ ಮುತ್ತಿಗೆ ಹಾಕಿದರು.ಇದೇ ಸಂದರ್ಭದಲ್ಲಿ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಯ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.ಅಂಗನವಾಡಿ ನೌಕರರಿಗೆ ಹೊಸ ಪಿಂಚಣಿ ಯೋಜನೆ ಅಡಿಯಲ್ಲಿರುವ ಸ್ವಾವಲಂಬನಾ ನಿವೃತ್ತಿ ವೇತನ ಎನ್ನುವ ಯೋಜನೆಯ ಪಾರ್ಮ್ ಅನ್ನು ಕೊಟ್ಟು ಬಲವಂತದಿಂದ ಅಂಗನವಾಡಿ ಕಾರ್ಯಕರ್ತೆರ ಹಾಗೂ ಸಹಾಯಕಿಯರಿಂದ ಸಹಿಯನ್ನು ಪಡೆಯಲಾಗುತ್ತಿದೆ. ಸಂಘದವರೊಂದಿಗೆ ಚರ್ಚೆ ಮಾಡದೆ ಹಾಗೂ ಸರಕಾರಿ ಅಧೀನದ ಪೆನ್ಶನ್ ಯೋಜನೆ ನೀಡದೆ ಖಾಸಗಿ ಎನ್‌ಪಿಎಸ್ ಲೈಟ್‌ಗೆ ಸಹಿ ಪಡೆಯುವ ವಿಧಾನ ವಿರೋಧಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಹೊಸ ಯೋಜನೆಯು ಯೂನಿಟ್ ಕೊಂಡಿಯ ಆಧಾರದಲ್ಲಿರುತ್ತದೆ. ಹೂಡಿಕೆಯ ಮೇಲೆ ಆದಾಯದ ಬಗ್ಗೆ ಯಾವ ಭರವಸೆಯನ್ನು ಇದರಲ್ಲಿ ನೀಡುತ್ತಿಲ್ಲ. ಆದಾಯ ಮಾರ್ಕೆಟ್ ಪರಿಸ್ಥಿತಿ ಮೇಲೆ ಹೊಂದಿಕೊಂಡಿರುತ್ತದೆ. ಆದಾಯ ಹೆಚ್ಚು ಕಡಿಮೆ ಇರಬಹುದು. ಅಸಲು ಹಾಗೂ ಬಡ್ಡಿಯ ಬಗ್ಗೆ ಯಾವ ಭರವಸೆಯೂ ಯೋಜನೆಯಲಿಲ್ಲ.1975ರಲ್ಲಿ ಐಸಿಡಿಎಸ್‌ಗೆ ಅಡಿಪಾಯ ಹಾಕಿದ 13,000 ಅಂಗನವಾಡಿ ಕಾಯಕರ್ತೆ ಮತ್ತು ಸಹಾಯಕಿಯರಿಗೆ ನಿವೃತ್ತಿ ವೇತನ ಕೊಡದೆ 30, 50, ಸಾವಿರ ಪರಿಹಾರ ಕೊಟ್ಟು ಮನೆಗೆ ಕಳುಹಿಸುವ ಯೋಜನೆ ರೂಪಿಸುತ್ತಿದ್ದಾರೆ. ಈ ಯೋಜನೆಯಲ್ಲಿ 55 ವರ್ಷ ಮೇಲ್ಪಟ್ಟವರು ಸೇರ್ಪಡೆ ಮಾಡುವುದಿಲ್ಲ. ಇದು 18ರಿಂದ 54 ವರ್ಷದ ವಯಸ್ಸಿನವರಿಗೆ ಮಾತ್ರ ಅನ್ವಯವಾಗುತ್ತದೆ. ನಿವೃತ್ತಿ ಕೊಟ್ಟು ಕೆಲವರಿಗೆ ನಿವೃತ್ತಿ ವೇತನ ಕೊಡದಿರುವುದು ಸಾಮಾಜಿಕ ನ್ಯಾಯವೇ ಎಂದು ಕಾರ್ಯಕರ್ತೆಯರು ಪ್ರಶ್ನಿಸಿದ್ದಾರೆ.ಅಂಗನವಾಡಿ ನೌಕರರ ಸಂಘ ಸೂಚಿಸಿರುವ ಪಿಂಚಣಿ ಯೋಜನೆಗೆ ಬೇಕಿರುವುದು ರೂ. 34 ಕೋಟಿ. ಆದರೆ ಈ ಹೊಸ ಪಿಂಚಣಿ ಯೋಜನೆಯಲ್ಲಿ ರೂ. 47ರಿಂದ 55 ವರ್ಷದೊಳಗಿನವರಿಗೆ ಸರ್ಕಾರ ರೂ. 41 ಕೋಟಿಯನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು. ಇದು ಸರಕಾರಕ್ಕೆ ಹೊಣೆ ಆಗಲಿದೆ ಎಂದು ಸಂಘ ತಿಳಿಸಿದೆ.ಪಿಂಚಣಿ ನಿರ್ವಹಣೆ ಪರಿಸ್ಥಿತಿಯ ಕುರಿತು ಅಮೆರಿಕಾ, ವ್ಯಾಟ್ಸನ್, ವ್ಯಾಟ್ ಎನ್ನುವ ಪ್ರತಿಷ್ಠಿತ ಸಂಸ್ಥೆಯ ಸಂಶೋಧನೆಯಲ್ಲಿ ಜಗತ್ತಿನ ಶೇ 29ರಷ್ಟು ಪಿಂಚಣಿ ನಷ್ಟವಾಗಿದೆ. ಅದರಲ್ಲಿ ಷೇರು ಮಾರುಕಟ್ಟೆ ಮೂಲಕ ‘ಪಿಂಚಣಿ ನಿಧಿ’ಗಳ ವ್ಯವಹಾರ ನಡೆಸಿರುವ ಅಮೇರಿಕಾ ಮತ್ತು ಐರ್ಲೆಂಡ್‌ಗಳಲ್ಲಿ ಕೋಟಿಗಟ್ಟಲೆ ರೂಪಾಯಿ ನಷ್ಟವಾಗಿದ್ದು ಪಿಂಚಣಿದಾರರು ಬೀದಿಗೆ ಬಂದಿದ್ದಾರೆ. ಇಂತಹ ಪಿಂಚಣಿಯನ್ನು ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಅಂಗನವಾಡಿ ನೌಕರರಿಗೆ ಕೊಡಲು ಮುಂದಾಗಿರುವುದನ್ನು ಸಂಘಟನೆ ಖಂಡಿಸಿದೆ.ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸವಿತಾ ತನ್ನಡಗಿ, ಪ್ರಧಾನ ಕಾರ್ಯದರ್ಶಿ ಯಮುನಾ ಗಾಂವ್ಕರ, ಕಾರ್ಯಾಧ್ಯಕ್ಷೆ ಶಾಲಿನಿ ಕಲ್ಮನೆ, ಖಜಾಂಚಿ ಮೋಹಿನಿ ನಮ್ಸೇಕರ್, ಹರೀಶ ನಾಯ್ಕ, ಎಚ್.ಬಿ.ನಾಯ್ಕ, ಡಿ.ಸ್ಯಾಮ್‌ಸನ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.