ಶನಿವಾರ, ಮೇ 8, 2021
26 °C

ಅಂಚೆಚೀಟಿ ಸದಾಶಿವರಾಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಚೆಚೀಟಿ ಸದಾಶಿವರಾಯರು

ಅಂಚೆಚೀಟಿ ಸಂಗ್ರಹ ಅಪರೂಪದ ಹವ್ಯಾಸ. ಸದಾಶಿವ ಪಾವಗಡ ಅವರದ್ದು ಇದರಲ್ಲಿ ಎತ್ತಿದಕೈ.ಟಾಟಾ ವಿಜ್ಞಾನ ಮಂದಿರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸದಾಶಿವ ಜರ್ಮನಿಯಲ್ಲಿ `ಜರ್ಮನ್  ಅಕಾಡೆಮಿಕ್ ಎಕ್ಸ್‌ಚೇಂಜ್ ಸ್ಕಾಲರ್‌ಷಿಪ್~ (ಡಿಎಎಡಿ) ಪಡೆದರು. ನಂತರ ಜರ್ಮನಿಯಲ್ಲಿ `ಟರ್ಬೋ ಮಿಷನರಿ~ ವಿಷಯದಲ್ಲಿ ಪರಿಣತಿ.

 

ಆದರೆ, ಅವರ ಒಲವಿದ್ದದ್ದು ಅಂಚೆ ಸಂಗ್ರಹದಲ್ಲಿ. ವೃತ್ತಿ ಬದುಕಿನಲ್ಲಿ ಹಲವು ಮೆಟ್ಟಿಲುಗಳನ್ನೇರಿದಂತೆಯೇ ಅಂಚೆ ಚೀಟಿ ಸಂಗ್ರಹದಲ್ಲೂ ಅವರದ್ದು ಮೇರು ಕೀರ್ತಿ.ಜರ್ಮನಿಯಲ್ಲಿದ್ದಾಗ ವಿವಿಧ ದೇಶಗಳ ವಿದ್ಯಾರ್ಥಿಗಳು ಪರಿಚಿತರಾಗಿದ್ದರು. ಆ ದೇಶಗಳ ಅಂಚೆಚೀಟಿ ಸಂಗ್ರಹಣೆಯ ಉತ್ಸಾಹದ ಬೀಜ ಮೊದಲು ಮೊಳೆಯಿತು.ಆಸ್ಟ್ರೇಲಿಯಾ, ಅಮೆರಿಕಾ, ಫಿನ್ಲೆಂಡ್, ಜರ್ಮನಿ, ಫ್ರಾನ್ಸ್, ಗ್ರೀಕ್ ಮೊದಲಾದ ದೇಶಗಳಿಗೆ ಹಲವಾರು ಬಾರಿ ಪ್ರವಾಸ ಮಾಡುವ ಅವಕಾಶ ವೃತ್ತಿಯ ಕಾರಣಕ್ಕೆ ಅವರಿಗೆ ಸಿಕ್ಕಿತು.ಯಾವ ದೇಶಕ್ಕೆ ಹೋದರೂ ಅಲ್ಲಿನ ಅಂಚೆಚೀಟಿ ಸಂಗ್ರಹಕಾರರನ್ನು ಗುರುತಿಸುವುದನ್ನು ಅವರು ರೂಢಿಸಿಕೊಂಡರು. ಅವರ ಈ ವಿಶೇಷ ಒಡನಾಟದಿಂದಲೇ ಅಂಚೆಚೀಟಿ ಸಂಗ್ರಹಣೆ ಹೆಚ್ಚಾಗುವುದರ ಜೊತೆಗೆ ಪ್ರತಿ ಚೀಟಿಯ ವಿಶೇಷ ಮತ್ತು ಐತಿಹಾಸಿಕ ಪ್ರಾಮುಖ್ಯ ಅರಿವಿಗೆ ಬಂತು.ಇಂಗ್ಲೆಂಡಿನ ಸರ‌್ರೋಲಂಡ್ಹಿಲ್ ಎಂಬುವರು 1837ರಲ್ಲಿ ಈ ಅಂಚೆಚೀಟಿಯ ಪರಿಕಲ್ಪನೆಯನ್ನು ಅನುಮೋದಿಸಿದರು. ನಂತರ, 1840ರಲ್ಲಿ ಒಂದು ಪೆನ್ನಿಯ ಕಪ್ಪುಅಂಚೆಚೀಟಿಯಾದ ಪ್ರಥಮ `ಪೆನ್ನಿಬ್ಲಾಕ್~ ಅಂಚೆಚೀಟಿ ಚಲಾವಣೆಯಾಯಿತು.ಭಾರತದಲ್ಲಿ ಮೊದಲ ಅಂಚೆಚೀಟಿಯ  ಬಳಕೆಯಾದದ್ದು 1852ರ ಜುಲೈ ಒಂದರಂದು. ನಂತರ ಅಕ್ಟೋಬರ್ 1854ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯು ನಾಲ್ಕು (ಅರ್ಧ,ಒಂದು,ಎರಡು ಹಾಗೂ ನಾಲ್ಕು ಆಣೆಗಳ) ಅಂಚೆ ಚೀಟಿಗಳನ್ನು ಹೊರತಂದಿತು. ಇದೇ ರೀತಿ ಬ್ರಿಟಿಷರಿಂದ 1947 ಆಗಸ್ಟ್‌ವರೆಗೆ 150 ಅಂಚೆಚೀಟಿಗಳು ಚಲಾವಣೆಗೆ ಬಂದವು. ಸ್ವಾತಂತ್ರ್ಯಾನಂತರ  ಭಾರತ ಸರ್ಕಾರವು ಸುಮಾರು 2200 ಅಂಚೆಚೀಟಿಗಳನ್ನು ವಿಶೇಷ ಸಂದರ್ಭಗಳಲ್ಲಿ ಬಿಡುಗಡೆ ಮಾಡಿದೆ. 

 

ಸದಾಶಿವ ಅವರ ಬಳಿ ಭಾರತದ ಹಾಗೂ ವಿದೇಶದ ಎಲ್ಲ ಬಗೆಯ ಅಂಚೆಚೀಟಿಗಳ ಸಂಗ್ರಹಣೆಯಿದೆ. ಈ ಸಂಗ್ರಹಣೆಯು 40 ವರ್ಷಗಳಿಗೂ ಮೀರಿದ ಹವ್ಯಾಸದ ಫಲ.ಸದಾಶಿವ ಅವರು ಸಂಗ್ರಹಿಸಿದ ಅಂಚೆಚೀಟಿಗಳನ್ನು ಕ್ರಮಬದ್ಧವಾದ ವಿವರಗಳ ರೆಕಾರ್ಡ್ ಸಮೇತ ಜೋಡಣೆ ಮಾಡಿಟ್ಟಿದ್ದಾರೆ. ಸಂಗ್ರಹ ಮಾಡಿರುವ ಭಾರತದ ಎಲ್ಲಾ ಸ್ಟಾಂಪ್‌ಗಳನ್ನೂ ಕಾಲಾನುಕ್ರಮದಲ್ಲಿ ಜೋಡಿಸಿದ್ದಾರೆ.ವಿದೇಶೀ ಸ್ಟಾಂಪ್‌ಗಳನ್ನು ಆಯಾ ದೇಶದ ಪ್ರಕಾರ ವಿಂಗಡಿಸಿಟ್ಟಿದ್ದಾರೆ. ತಮ್ಮಲ್ಲಿನ ಪ್ರತಿ ಅಂಚೆಚೀಟಿಯ ವಿವರಗಳನ್ನು ಅವರು ಸಂಖ್ಯೆಯಸಹಿತ ದಾಖಲಿಸಿದ್ದಾರೆ.ಭಾರತದಲ್ಲಿ ಬಿಡುಗಡೆಗೊಂಡ 2200 ಅಂಚೆಚೀಟಿಗಳಲ್ಲಿ ಬಹುತೇಕ ಅವರ ಸಂಗ್ರಹದಲ್ಲಿವೆ. ಪ್ರಾಯಶಃ 15 ಚೀಟಿಗಳು ತಮಗಿನ್ನೂ ದೊರೆತಿಲ್ಲ ಎಂದು ಅವರು ಹೇಳುತ್ತಾರೆ. ಸುಮಾರು 120 ದೇಶಗಳ 4500ಕ್ಕೂ ಹೆಚ್ಚು ಅಂಚೆಚೀಟಿಗಳು ಸಂಗ್ರಹದ್ಲ್ಲಲಿವೆ.ಅವರ ಸಂಗ್ರಹಣೆಯಲ್ಲಿ ಅತ್ಯಂತ ವಿಶಿಷ್ಟವಾಗಿರುವುದು ಮತ್ತು ವಿಶೇಷವಾಗಿ ಗಮನ ಸೆಳೆಯುವುದು: `ಜೈಹಿಂದ್~ ಎನ್ನುವ ಆಗಸ್ಟ್ 15, 1947ರಂದು ರದ್ದಾದ ಸ್ಟಾಂಪ್.1984ರಲ್ಲಿ ಬಿಡುಗಡೆಗೊಂಡ  ಸೂಯುಜ್- ಸಲ್ಯೂಟ್ ಗಗನಯಾತ್ರೆಯ ಸಂದರ್ಭದಲ್ಲಿ ಗಗನಯಾತ್ರಿಗಳಾದ ರಾಕೇಶ್ ಶರ್ಮ ಮತ್ತು ಮಲ್ಹೋತ್ರ ಅವರ ಸಹಿಯುಳ್ಳ ಲಕೋಟೆ, ಸರ್ದಾರ್ ಪಟೇಲರ ಹುಟ್ಟೂರಿನಲ್ಲಿ ಠಸ್ಸೆಯಾದ `ಫಸ್ಟ್‌ಡೇಕವರ್~, ಶ್ರವಣಬೆಳಗೊಳದ ಗೊಮ್ಮಟೇಶ್ವರನ ರದ್ದಾದ ಲಕೋಟೆ, 1895ರಷ್ಟು ಹಳೆಯ ಲಕೋಟೆಗಳು, 1937ರ ರದ್ದಾದ `ಫಸ್ಟ್‌ಡೇಕಲವರ್~ ಇತ್ಯಾದಿ ಗಮನ ಸೆಳೆಯುತ್ತವೆ.  1965ರಿಂದ ಇಷ್ಟೆಲ್ಲಾ ಸಂಗ್ರಹಣೆ ಮಾಡಿರುವ ಸದಾಶಿವ ಅವರಿಗೆ ಇನ್ನೂ ಅಂಚೆಚೀಟಿ ಸಂಗ್ರಹಿಸುವ ತುಡಿತ ಬತ್ತಿಲ್ಲವೆಂಬುದು ಹೆಮ್ಮೆಯ ವಿಷಯ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.