ಮಂಗಳವಾರ, ಮೇ 11, 2021
28 °C

ಅಂತಃಕರಣ: ನಮ್ಮ ಹೀರೋ!

ಡಾ. ಆಶಾ ಬೆನಕಪ್ಪ Updated:

ಅಕ್ಷರ ಗಾತ್ರ : | |

ನಾನು ಚಿಕ್ಕವಳಿದ್ದಾಗ ಅಮ್ಮ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲೊಂದಾದ `ಬೆನ್‌ಹರ್~ ಕಥೆಯನ್ನು ಹೇಳಿದ್ದರು. ಆ ಸಿನಿಮಾದಲ್ಲಿ, ಕುಷ್ಠರೋಗದಿಂದ ಬಳಲುವ ರೋಗಿಗಳನ್ನು ನಗರದಿಂದ ಹೊರಹಾಕುವ ಮೂಲಕ ತುಚ್ಛವಾಗಿ ಕಂಡಿದ್ದರು ಎನ್ನುವ ಅಮ್ಮನ ಮಾತುಗಳು ನನಗೆ ಸ್ಪಷ್ಟವಾಗಿ ನೆನಪಿದೆ.ಈ ಕಥೆ ನನ್ನ ಮನಸ್ಸಿನಲ್ಲಿ ಅಳಿಸಲಾಗದ ಪ್ರಭಾವ ಬೀರಿತು. ಈಗಲೂ ಎ್ಲ್ಲಲಿಯಾದರೂ ಕುಷ್ಠರೋಗಿಯನ್ನು ಕಂಡರೆ ಅವರ ಯೋಗಕ್ಷೇಮ ವಿಚಾರಿಸುತ್ತೇನೆ. ಚಿಕಿತ್ಸೆಗೆ ಅಗತ್ಯವಾದ ಮಾರ್ಗದರ್ಶನ ಮಾಡುತ್ತೇನೆ. ನಿಶ್ಚೇಷ್ಟಿತ ದೇಹವನ್ನು ಹೇಗೆ ಆರೈಕೆ ಮಾಡಿಕೊಳ್ಳಬೇಕು ಎನ್ನುವ ಬಗ್ಗೆ ತಿಳಿಹೇಳುತ್ತೇನೆ.ಸರ್ಕಾರದ ನಿರ್ದೇಶನದಂತೆ ಅನೇಕ ಸರ್ಕಾರಿ ಸಂಸ್ಥೆಗಳು ಕುಷ್ಠರೋಗದಿಂದ ಗುಣಮುಖರಾದ ವ್ಯಕ್ತಿಗಳಿಗೆ ಕೆಲಸ ನೀಡಿವೆ. ವಾಣಿವಿಲಾಸ ಆಸ್ಪತ್ರೆಯಲ್ಲಿ ಅಪ್ಪಾಜಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ನಿಂಗಪ್ಪ (ನನ್ನ ಪಾಲಿಗೆ ನಿಂಗಣ್ಣ) ಎನ್ನುವವರು ಆಸ್ಪತ್ರೆಯ ಔಷಧ ಮಳಿಗೆಯಲ್ಲಿ ಗ್ರೂಪ್ ಡಿ (ಗುಮಾಸ್ತ) ನೌಕರನಾಗಿ ನೇಮಕಗೊಂಡರು.ಕೆಲವು ಔಷಧಗಳು ಮತ್ತು ಉಪಕರಣಗಳು ಬೇಕಾದಾಗ ನಾನು ಆಗಾಗ್ಗೆ ಔಷಧ ಮಳಿಗೆಗೆ ಹೋಗುತ್ತಿದ್ದೆ. ಆಗ ಎದುರಾಗುತ್ತಿದ್ದ ಆರು ಅಡಿ ಎತ್ತರವಿರುವ ನಿಂಗಪ್ಪ ಕತ್ತು ಬಗ್ಗಿಸಿ ತನ್ನ ಬೆರಳುಗಳಿಲ್ಲದ ಕೈಗಳನ್ನು ಜೋಡಿಸಿ ನಮಸ್ಕರಿಸುತ್ತಿದ್ದನು. ಅವನ ಈ ದೈನ್ಯ ನಡವಳಿಕೆಗೆ ನಾನೂ ಶಿರಬಾಗಿಸುತ್ತಿದ್ದೆ. ಜೊತೆಗೆ ಆತ ನನಗೆ ಯಾಕಿಷ್ಟು ಗೌರವ ಕೊಡುತ್ತಾನೆ ಎಂದು ಆಶ್ಚರ್ಯಪಡುತ್ತಿದ್ದೆ.`ಅಮ್ಮಾ, ನಿಮಗೆ ಏನು ಬೇಕು ಹೇಳಿ. ನಾನದನ್ನು ಹುಡುಕಿ ತರುತ್ತೇನೆ. ಔಷಧ ತುಂಬಿಡುವ ರಟ್ಟಿನ ಪೆಟ್ಟಿಗೆಗಳು ಮತ್ತು ಭಾರವಾದ ಉಪಕರಣಗಳು ನಿಮ್ಮ ಮೇಲೆ ಬೀಳಬಹುದು, ಒಡೆದ ಗಾಜುಗಳಿಂದ ನಿಮಗೆ ಅಪಾಯವಾಗಬಹುದು~ ಎಂದು ನನಗೆ ಎಚ್ಚರಿಸುತ್ತಿದ್ದನು. ಈ ರೀತಿ ಎಚ್ಚರಿಕೆ ನೀಡಿದರೂ ನಾನು ಮಳಿಗೆಯೊಳಗೆ ಹೋಗಿ ನನಗೆ ಬೇಕಾದ ಔಷಧ ಮತ್ತು ಉಪಕರಣವನ್ನು ತರುತ್ತಿ. ಇದಕ್ಕೆ ಮಳಿಗೆ ಗುಮಾಸ್ತ ನಿಂಗಪ್ಪನಿಂದ ನಾನು ಮೊದಲೇ ಅನುಮತಿ ಪಡೆದಿರುತ್ತಿದ್ದೆ.ನಿಂಗಪ್ಪ ಸದಾ `ಅಯ್ಯ~ನ (ಅಪ್ಪಾಜಿ) ಬಗ್ಗೆ ವಿಚಾರಿಸುತ್ತಲೇ ಇರುತ್ತಿದ್ದ. ಆತನ ಕೈಬೆರಳು ಮತ್ತು ಕಾಲುಗಳು ಸಂವೇದನೆ ಕಳೆದುಕೊಂಡಿದ್ದರಿಂದ ಕೆಲಸ ಮಾಡುವಾಗ ಹೆಚ್ಚು ಜಾಗರೂಕನಾಗಿರಬೇಕೆಂದು ಒಮ್ಮೆ ಹೇಳುತ್ತಾ ತಮಾಷೆ ಮಾಡಿದ್ದೆ.ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡಿದರೆ ಕುಷ್ಠರೋಗ ಗುಣಪಡಿಸಬಹುದಾದ ಕಾಯಿಲೆ. ಸ್ಪರ್ಶ, ನೋವು, ಉಷ್ಣತೆಯ ಸಂವೇದನೆ ನೀಡುವ ನರಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಸುಟ್ಟಗಾಯಗಳು, ಹಾನಿಯ ನೋವುಗಳು ಅನುಭವಕ್ಕೆ ಬರುವುದಿಲ್ಲ. ಅವುಗಳನ್ನು ಗುಣಪಡಿಸಲೂ ಸುಲಭವಾಗಿ ಆಗುವುದಿಲ್ಲ.ನಿಂಗಣ್ಣ ನಿಜಕ್ಕೂ `ಎತ್ತರದ ವ್ಯಕ್ತಿ~. ಆತನ ವಿನಯಶೀಲತೆಯೂ ಎತ್ತರದ್ದು. ಆತನ ಪಾಲಿಗೆ ನಾನು `ಅಮ್ಮ~ ಆಗಿದ್ದಕ್ಕೆ ಸಂತೋಷ ಪಡುತ್ತೇನೆ.ರಾಣೇಬೆನ್ನೂರಿನ ಇಟಗಿ ಗ್ರಾಮದಲ್ಲಿ ನೆಲೆಸಿದ್ದ ಕೂಲಿ ಮಾಡುವ ಪೋಷಕರಿಗೆ ನಿಂಗಪ್ಪ ಏಕೈಕ ಸಂತಾನ. ಆತನ ಬದುಕು ಹಲವು ತಿರುವುಗಳಿಂದ ಕೂಡಿತ್ತು.ಆರು ವರ್ಷ ತುಂಬುವವರೆಗೆ ಆತ ಬೆಳೆದದ್ದು ಅಜ್ಜಿಯ (ತಾಯಿಯ ಅಮ್ಮ) ಮನೆಯಲ್ಲಿ. ಬಳಿಕ ಬೆಂಗಳೂರಿನ ಮತ್ತಿಕೆರೆಯಲ್ಲಿರುವ ತಂದೆಯ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು, ಅಲ್ಲಿನ ಶ್ರೀ ವೆಂಕಟೇಶ್ವರ ಸ್ವಾಮಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಓದಿದ. ನಾಲ್ಕನೇ ತರಗತಿ ಬಳಿಕ ವಾಪಸು ಊರಿಗೆ ಬಂದು, ಅಲ್ಲಿ ಕೂಲಿ ಕೆಲಸ ಶುರುಮಾಡಿದ. ಈ ಸಮಯದಲ್ಲಿ ಅವನ ತೊಡೆ ಸಮೀಪ ಮಚ್ಚೆ ರೂಪದ ಕಲೆಗಳು ಮೂಡಲಾರಂಭಿಸಿದವು.

 

ನಿಧಾನವಾಗಿ ಸ್ಪರ್ಶಜ್ಞಾನ ಕಳೆದುಕೊಳ್ಳತೊಡಗಿದ. ಇದರಿಂದ ಭಯಗೊಂಡ ಆತನ ತಾಯಿ ಕರಿಯಮ್ಮ ಆಯುರ್ವೇದ ವೈದ್ಯರ ಬಳಿ ಕರೆದೊಯ್ದಳು. ಆಯುರ್ವೇದ ಚಿಕಿತ್ಸೆ ನಿರಂತರವಾಗಿ ನೀಡಿದರೂ ಯಾವುದೇ ಸುಧಾರಣೆಯಾಗಲಿಲ್ಲ.ಕುಷ್ಠರೋಗಿ ಎಂಬ ಕಾರಣಕ್ಕೆ 21ನೇ ಶತಮಾನದಲ್ಲಿಯೂ ನಿಂಗಣ್ಣನನ್ನು ನಿಕೃಷ್ಟವಾಗಿ ಕಾಣಲಾಯಿತು ಎಂಬುದನ್ನು ನೆನೆಸಿಕೊಂಡರೆ ಹೃದಯ ಕಿವುಚಿದಂತಾಗುತ್ತದೆ. ಇಡೀ ಹಳ್ಳಿ ಆತನನ್ನು ದೂರವಿಟ್ಟಿತು. ಅಂಗಡಿಗಳಲ್ಲಿ ಆತನಿಗೆ ರಾಗಿ, ಬೇಳೆ, ಗೋಧಿಯಂತಹ ಪದಾರ್ಥಗಳನ್ನು ಕೊಡುತ್ತಿರಲಿಲ್ಲ. ಬೊಗಳುವ ನಾಯಿಗಳನ್ನು ಹೊಡೆದು ಓಡಿಸುವಂತೆ ಆತನನ್ನು ಅಟ್ಟುತ್ತಿದ್ದರು.ಹಸಿವಿನಿಂದ ಬಳಲುತ್ತಿದ್ದ ಆತನಿಗೆ (ಅಡುಗೆ ಮಾಡಲು ದವಸ ಧಾನ್ಯಗಳನ್ನು ಸಂಪಾದಿಸುವುದು ಅಸಾಧ್ಯವಾಗಿತ್ತು) ಬಾಯಾರಿಕೆ ತಣಿಸಿಕೊಳ್ಳಲೂ ಆಗುತ್ತಿರಲಿಲ್ಲ. ಕಡೇಪಕ್ಷ ನೀರು ಕುಡಿಯಲೆಂದು ಗ್ರಾಮದ ಬಾವಿ ಬಳಿಗೆ ಹೋದಾಗಲೂ ನೀರು ಸೇದಲು ಬಿಡುತ್ತಿರಲಿಲ್ಲ. ಅಸಹಾಯಕ ಸ್ಥಿತಿಗೆ ತಲುಪಿದ ನಿಂಗಣ್ಣ, ತನ್ನಿಂದಾಗಿ ಬಡ ತಂದೆತಾಯಿಗೆ ಆಗುತ್ತಿರುವ ಹಿಂಸೆಯನ್ನು ಸಹಿಸಿಕೊಳ್ಳಲಾರದೆ ತನ್ನ ಹಳ್ಳಿ ಬಿಟ್ಟು ಹೊರನಡೆದ.ತಾನು ಚಿಕ್ಕಮ್ಮನ ಬಳಿ ಹೋಗಿ ಅವರ ಜೊತೆಯೇ ಇರುತ್ತೇನೆ ಎಂದು ಅಮ್ಮನಿಗೆ ಹೇಳಿದ್ದ. ಅಲ್ಲಿಯಾದರೂ ಮಗ ನೆಮ್ಮದಿಯಾಗಿರಲಿ ಎಂದು ಹೆತ್ತವರು ಒಪ್ಪಿಕೊಂಡರು. ಆದರೆ, ನಿಂಗಣ್ಣನ ಮನಸ್ಸಿನೊಳಗೆ ಇದ್ದುದು ಅವರಿಗೆ ಹೇಗೆ ತಾನೆ ತಿಳಿಯಬೇಕು?

ನಿಂಗಣ್ಣ ರೈಲಿನಲ್ಲಿ ಕುಳಿತುಕೊಂಡ.ಸೇತುವೆಯ ಮೇಲೆ ರೈಲು ಹಾದುಹೋಗುವಾಗ ಕೆಳಗಿನ ನದಿಗೆ ಹಾರಲು ಸಿದ್ಧನಾದ. ಆದರೆ ಅಪರಿಚಿತ ಕೈಯೊಂದು ಆತನನ್ನು ಬಲವಾಗಿ ಹಿಡಿದುಕೊಂಡಿತ್ತು (ಆ ರೈಲಿನಲ್ಲಿದ್ದ ಸಹ ಪ್ರಯಾಣಿಕ). ತನ್ನನ್ನು ಸಾಯಲು ಬಿಡದ ಅಪರಿಚಿತನಿಗೆ ನಿಂಗಣ್ಣ ತನ್ನ ಕರುಣಾಜನಕ ಕಥೆಯನ್ನು ಹೇಳಿಕೊಂಡ. ವ್ಯಥೆಯನ್ನು ಕೇಳಿದ ಆ ವ್ಯಕ್ತಿ, ಮಾಗಡಿ ರಸ್ತೆಯಲ್ಲಿರುವ ಸರ್ಕಾರಿ ಕುಷ್ಠರೋಗ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದರು.

 

ಅಲ್ಲಿ ಚಿಕಿತ್ಸೆಯೂ ಉಚಿತ ಎಂದು ತಿಳಿಸಿದರು. ನಿಂಗಣ್ಣ ಆ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಸಂಪರ್ಕಿಸಿದ. ಚಿಕಿತ್ಸೆ ಪ್ರಾರಂಭವಾಯಿತು. ಒಂದು ವರ್ಷದವರೆಗೆ ಪ್ರತಿನಿತ್ಯ ಒಂದು ಮಾತ್ರೆ. ನಿಂಗಣ್ಣನ ಈ ಕುಷ್ಠರೋಗ ಆಸ್ಪತ್ರೆ ಭೇಟಿ ಆತನ ಬದುಕಿನಲ್ಲಿ ಒಂದು ಪ್ರಮುಖ ಘಟ್ಟ ಮಾತ್ರವಲ್ಲ, ಅದು ಸಮಾಜಕ್ಕೆ ಹಲವು ಕಾಣಿಕೆಗಳಿಗೂ ಮುನ್ನುಡಿ ಬರೆಯಿತು!ಪೊಟ್ಟಣಗಟ್ಟಲೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದ ಆತನಿಗೆ ಮುಂದೆ ಎಲ್ಲಿಗೆ ಹೋಗುವುದು ಎಂಬುದು ತಿಳಿಯಲಿಲ್ಲ. ಕುಸಗನೂರಿನ ಚಿಕ್ಕಪ್ಪನ ಮನೆಗೆ ಹೋದಾಗ ಅಲ್ಲಿಯೂ ಆತನ ಚಿಕ್ಕಪ್ಪ ಮತ್ತು ಅವರ ಕುಟುಂಬ ಕೆಟ್ಟದಾಗಿ ನಡೆದುಕೊಂಡರು.

 

ಮನೆಯಿಂದ ದೂರದಲ್ಲಿ ಬಾಳೆಎಲೆಯಲ್ಲಿ ಊಟ ಕೊಟ್ಟರು. ಜನರೊಂದಿಗೆ ಬೆರೆಯಲು, ಸ್ಪರ್ಶಿಸಲು ಬಿಡುತ್ತಿರಲಿಲ್ಲ. ಈ ಎಲ್ಲಾ ನಿಯಮಗಳನ್ನು ಪಾಲಿಸಿದರೂ ಆತನ ಚಿಕ್ಕಪ್ಪ ಅಲ್ಲಿಂದ ಹೊರಟು ಹೋಗುವಂತೆ ಆಜ್ಞಾಪಿಸಿದರು.ನಿಂಗಣ್ಣ ಮತ್ತೊಮ್ಮೆ ಹತಾಶನಾದ. ಕುಷ್ಠರೋಗದಿಂದ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ಮತ್ತೊಮ್ಮೆ ಆಹಾರ, ಬಟ್ಟೆ, ಸೂರು ಇಲ್ಲದೆ ಅಲೆದಾಡುವ ಸ್ಥಿತಿಗೆ ತಲುಪಿದ. ನಂತರ ಆತ ಹೋಗಿದ್ದು ನ್ಯಾಮತಿ (ಹೊನ್ನಾಳಿ ತಾಲ್ಲೂಕು)ಯಲ್ಲಿದ್ದ ತನ್ನ ಚಿಕ್ಕಮ್ಮನ ಮನೆಗೆ. ಆಕೆ ಪ್ರೀತಿ ಮತ್ತು ವಾತ್ಸಲ್ಯದಿಂದ ಆತನಿಗೆ ಸ್ನಾನ ಮಾಡಿಸಿದಳು. ಕಡುಬಡತನದಲ್ಲಿದ್ದರೂ ಆ ಮಾತೃಹೃದಯಿ ಆತನನ್ನು ಎಲ್ಲರ ಹಾಗೆ `ಮನುಷ್ಯ ಜೀವಿ~ಯಂತೆ ನೋಡಿದಳು.ನಿಂಗಣ್ಣ ಕೂಲಿ ಮಾಡಿ ಹಣ ಸಂಪಾದಿಸತೊಡಗಿದ. ತನ್ನ ಕಾಲ ಮೇಲೆ ನಿಂತದ್ದಲ್ಲದೆ ಚಿಕ್ಕಮ್ಮನಿಗೂ ಆಸರೆಯಾದ. ಹೀಗೆ ಕೆಲಸ ಮಾಡುವಾಗೊಮ್ಮೆ ಆತನ ಕೈಗೆ ಗಾಯವಾಯಿತು (ಈ ರೀತಿಯ ಕಾಯಿಲೆಯುಳ್ಳವರಿಗೆ ಯಾವುದೇ ಸಂವೇದನಾಶಕ್ತಿ ಇರುವುದಿಲ್ಲ). ಚಿಕ್ಕಮ್ಮ ಕಷ್ಟಪಟ್ಟು, ಇನ್ನೂರು ರೂಪಾಯಿ ಹೊಂದಿಸಿ ಗಾಯಕ್ಕೆ ಚಿಕಿತ್ಸೆ ಪಡೆಯಲು ಹೇಳಿದಳು. ಆತ ಕುಷ್ಠರೋಗಿ ಚಿಕಿತ್ಸಾ ಘಟಕಕ್ಕೆ ಹಿಂದಿರುಗಿದ.ಚೇತರಿಸಿಕೊಂಡ ನಂತರ ನಿಂಗಣ್ಣ ಹೊರಗಿನ ಸಮಾಜದ ಮೇಲಿನ ನಂಬಿಕೆ ಕಳೆದುಕೊಂಡ. ತನ್ನ ಹಿಂದಿನ ಹಾದಿಯಲ್ಲಿ, ಹತ್ತಿರದವರು, ಆತ್ಮೀಯರು ಎಂದು ಹೇಳಿಕೊಳ್ಳುವವರ ಬಳಿಗೆ ಮರಳುವುದು ಆತನಿಗೆ ಇಷ್ಟವಿರಲಿಲ್ಲ. ಕೀಳು ನೋಟ ಮತ್ತು ತಾರತಮ್ಯ ಆತನಿಗೆ ಸಾಕಾಗಿತ್ತು. ಕುಷ್ಠರೋಗ ಆಸ್ಪತ್ರೆಯ ಸಮೀಪದ ಕೊಳೆಗೇರಿಯಲ್ಲಿ ಆತ ಚಿಕ್ಕದೊಂದು ತರಕಾರಿ ವ್ಯಾಪಾರ ಶುರುಮಾಡಿದನು.ಎಲ್ಲಿಗೆ ಹೋಗುವುದೆಂದು ತಿಳಿಯದೆ (ಆತನಂತೆ) ಆಸ್ಪತ್ರೆ ಸುತ್ತ ಮತ್ತು ಹೊರಗೆ ಬೇಡುತ್ತಾ ತಿರುಗುವ ಸಂಕಷ್ಟದಲ್ಲಿರುವ ಕುಷ್ಠರೋಗಿಗಳು, ಗುಣಮುಖರಾದವರು ಮತ್ತು ಅವರ ಕುಟುಂಬಗಳಿಗೆ (104ಕ್ಕೂ ಹೆಚ್ಚು) ಸಹಾಯ ಮಾಡುವ ಮಹತ್ಕಾರ್ಯಕ್ಕೆ ಮುಂದಾದ.ಒಂದು ದಿನ ಈ ಕುಷ್ಠರೋಗಿಗಳು ಹೋಟೆಲ್ ಒಂದರಲ್ಲಿ ಕಾಫಿ ಕುಡಿಯಲು ತೆರಳಿದಾಗ ಅವರನ್ನು ಅಲ್ಲಿಂದ ಓಡಿಸಲಾಗಿತ್ತು. ಕುದಿಯುವ ನೀರನ್ನು ಮೈಮೇಲೆ ಎರಚುವ ಬೆದರಿಕೆಯನ್ನೂ ಹಾಕಲಾಗಿತ್ತು. (ಈ ಘಟನೆ ಅವರನ್ನು ಮತ್ತಷ್ಟು ಘಾಸಿಗೊಳಿಸಿತು- ಯಾತನಾರಹಿತ ನೋವದು! ಕೊನೆಗೆ ಈ ಗಾಯಗಳಿಗೆ ಅವರು ಒಗ್ಗಿಕೊಳ್ಳತೊಡಗಿದರು). ಈ ಪ್ರಸಂಗದಿಂದ ನೊಂದ ಭಾವುಕ ಹೃದಯದ ನಿಂಗಣ್ಣ, ತನ್ನ  ಸಹೋದರರಿಗಾಗಿ ಹೋಟೆಲ್ ಒಂದನ್ನು ಪ್ರಾರಂಭಿಸಿದ.ತಲೆಯ ಮೇಲೆ ಸೂರಿಲ್ಲದ ಈ `ಮನುಷ್ಯ ಜೀವಗಳು~ ಬೀದಿಯ ಗಡಸು ಕಲ್ಲಿನ ಮೇಲೆ ತಮ್ಮ ಗಾಯಗೊಂಡ ದೇಹ ಮತ್ತು ಮನಸ್ಸುಗಳನ್ನು ಮುಚ್ಚುವ ಬಟ್ಟೆಗಳಿಲ್ಲದೆ ಮಲಗುತ್ತಿದ್ದರು. ನಿಂಗಣ್ಣನ ನಿರಂತರ ಪ್ರಯತ್ನದಿಂದ, (ಆಗ ಚಿಕ್ಕಪೇಟೆ ವಿಧಾನಸಭೆಯ ಶಾಸಕರಾಗಿದ್ದ ಮಲ್ಲಪ್ಪ ಮತ್ತು ಸಂಸದ ಆರ್.ಗುಂಡೂರಾವ್ ಅವರ ಸಹಕಾರದಿಂದ) ವೀರೇಂದ್ರ ಪಾಟೀಲರ ಅಧಿಕಾರಾವಧಿಯಕ್ಲಾಲೋನಿ~ಯಾದ`ವಿನ್ನೀಕಾಲೋನಿ~ ಮಾಗಡಿ ರಸ್ತೆಯಲ್ಲಿ ಜನ್ಮತಾಳಿತು.ರೋಮ್ ನಗರ ಒಂದು ದಿನದಲ್ಲಿ ನಿರ್ಮಾಣವಾಗಲಿಲ್ಲ. ಅಂತೆಯೇ, ಕುಷ್ಠರೋಗಿ ಕಾಲೋನಿಯಲ್ಲಿನ `ಕುಷ್ಠರು~ ತಮ್ಮ ನಾಯಕ ನಿಂಗಪ್ಪನ ನೇತೃತ್ವದಲ್ಲಿ ಕಾಲೋನಿಯನ್ನು ತಮ್ಮ ವಿರೂಪ, ಊನ ಮತ್ತು ಗಾಯಗೊಂಡ ಕೈ ಕಾಲುಗಳಿಂದಲೇ ಹಲವು ಬಾರಿ ಕಟ್ಟಿದರು. ತಮ್ಮ ನೋವನ್ನು ಸಹಿಸಿಕೊಂಡು ಅವರು ಪ್ರತಿಬಾರಿ ತಿಂಗಳುಗಟ್ಟಲೆ ಶ್ರಮವಹಿಸಿ ಅದನ್ನು ನಿರ್ಮಿಸುತ್ತಿದ್ದರು. ಆದರೆ, ಭೂ ತಿಮಿಂಗಿಲಗಳ ಅಟ್ಟಹಾಸಕ್ಕೆ ಅವು ಕೆಲವೇ ಗಂಟೆಗಳಲ್ಲಿ ಭಸ್ಮವಾಗುತ್ತಿದ್ದವು.31 ವರ್ಷ ವಯಸ್ಸಿನವನಾಗಿದ್ದಾಗ ನಿಂಗಪ್ಪ ನಾಲ್ವರು ಕುಷ್ಠರೋಗಿಗಳಾದ ನಾರಾಯಣ, ಪ್ರಹ್ಲಾದ್, ಬಸವರಾಜು ಮತ್ತು ವಾಸಪ್ಪರ ಆರೈಕೆ ಹೊಣೆ ಹೊತ್ತುಕೊಂಡ. ಈಗ ಚಾಲಕನಾಗಿರುವ ನಾರಾಯಣನನ್ನು ಹೊರತುಪಡಿಸಿ ಉಳಿದ ಮೂವರೂ ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗಿಗಳಾಗಿದ್ದಾರೆ.ಸಮುದಾಯದ ಸೇವೆಗಾಗಿ ತನ್ನನ್ನು ಮುಡಿಪಾಗಿಟ್ಟುಕೊಂಡಿದ್ದ ನಿಂಗಪ್ಪನಿಗೆ ಮದುವೆ ಯೋಚನೆ ಇರಲಿಲ್ಲ. ಆದರೆ, ಆತ ಪ್ರೀತಿಯಿಂದ ಕಟ್ಟಿಕೊಂಡಿದ್ದ `ಕುಷ್ಠರೋಗಿಗಳ ಕುಟುಂಬ~ ಸುಮ್ಮನಿರಬೇಕಲ್ಲ, ಹೆಣ್ಣು ಹುಡುಕಿತು, ಮದುವೆಯೂ ಆಯಿತು. ಪತ್ನಿಯ ಹೆಸರು ಶಾಂತಮ್ಮ. ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು.ಕುಷ್ಠರೋಗಿಗಳ ಸೇವೆಯಲ್ಲಿ ತೋರಿದ ಅದಮ್ಯ ಸಾಧನೆಗಾಗಿ ನಿಂಗಪ್ಪನಿಗೆ 1990ರಲ್ಲಿ ರಾಷ್ಟ್ರಪತಿ ವೆಂಕಟರಾಮನ್ ಅವರಿಂದ `ಅಂಗವಿಕಲ ಕಲ್ಯಾಣಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ~ ಸ್ವೀಕರಿಸುವ ಸೌಭಾಗ್ಯ ಒದಗಿಬಂತು. 2010ರ ಆಗಸ್ಟ್ 20ರಂದು ಜಾಂಡೀಸ್‌ನಿಂದ (ಹೆಪಟೈಟಸ್ ಬಿ) ತೀರಿಕೊಂಡಾಗ ಆತನಿಗೆ 50 ವರ್ಷವಷ್ಟೇ.ನನಗೆ ಆತನ ಸಾವಿನ ಬಗ್ಗೆ ತಿಳಿದದ್ದು ಇದಾಗಿ ಆರು ತಿಂಗಳ ಬಳಿಕ. ಆಸ್ಪತ್ರೆ ಆವರಣದಲ್ಲಿ ಪುನರ್‌ನಿರ್ಮಾಣ, ಕೆಡಹುವ ಕಾರ್ಯಗಳು ನಡೆಯುತ್ತಿದ್ದರಿಂದ ಔಷಧ ಮಳಿಗೆಗಳತ್ತ ನನ್ನ ಭೇಟಿ ಬಹುತೇಕ ನಿಂತೇ ಹೋಗಿತ್ತು.ಒಮ್ಮೆ ಆತನನ್ನು `ಮಿಸ್~ ಮಾಡಿಕೊಳ್ಳುತ್ತಿದ್ದೇನೆ ಎಂದೆನಿಸಿ ಮಳಿಗೆಯತ್ತ ಧಾವಿಸಿದಾಗ `ನಿಂಗಪ್ಪ ಜಾಂಡೀಸ್ ಬಂದು ಸತ್ತ~ ಎಂಬ ಆಘಾತದ ಸುದ್ದಿ ಕೇಳಿದೆ. ನಾವು ಸಾವಿಗೂ ಅಸಂವೇದಿಗಳೇ?ನಿವಾರಣೆ ಮಾಡಬಹುದಾಗಿದ್ದ ಹೆಪಟೈಟಸ್ ಬಿ ಕಾಯಿಲೆಯಿಂದ ನಮ್ಮ ಹೀರೋನನ್ನು ಕಳೆದುಕೊಂಡೆವು. ಕೇವಲ ಮುನ್ನೂರು ರೂಪಾಯಿ ವೆಚ್ಚದ `ಹೆಪಟೈಟಸ್ ಬಿ~ ಲಸಿಕೆಯನ್ನು ಮೂರು ಬಾರಿ ನೀಡಿದ್ದರೂ ಸಾಕಾಗಿತ್ತು ಅವನನ್ನು ಉಳಿಸಿಕೊಳ್ಳಲು.ಆತನನ್ನು ಬೇರೆಲ್ಲೂ ಮಣ್ಣುಮಾಡಲು ಜಾಗವಿಲ್ಲದೆ ಸುಡಬೇಕಾಯಿತು! ಆತ ಎಂದೂ ತನ್ನ ಸ್ಮಾರಕ ನಿರ್ಮಿಸಲು ಕೇಳಲಿಲ್ಲ. ಸ್ವತಃ ಕುಷ್ಠರೋಗಿಯಾಗಿ, ಕುಷ್ಠರ ಕಲ್ಯಾಣಕ್ಕಾಗಿ ತನ್ನ ಕೊನೆಯುಸಿರು ಇರುವವರೆಗೂ ಹೋರಾಡಿದ ನಿಂಗಣ್ಣ, ತಾನು ಬಿಟ್ಟುಹೋದ ವಿನ್ನೀ ಕಾಲೋನಿಯಲ್ಲಿ ಚಿರಸ್ಥಾಯಿ. ನಮಗೆ ಆತನನ್ನು ಉಳಿಸಿಕೊಳ್ಳಲು ಆಗಲಿಲ್ಲ, ಆತ ಪೋಷಿಸಿದ ಅನೇಕ ಜೀವಗಳನ್ನೂ.ನಿಂಗಣ್ಣನ ಮಗ ಮಾಲತೇಶ್ ಕುಮಾರ್‌ಗೆ ಪರಿಹಾರ ರೂಪವಾಗಿ ಗುತ್ತಿಗೆ ಆಧಾರದಲ್ಲಿ ಉದ್ಯೋಗ  ನೀಡಲಾಗಿದೆ. ತಾಯಿ ಮತ್ತು ಅಜ್ಜಿ `ಕುಷ್ಠರಿಗಾಗಿ~ ಹೋಟೆಲ್ ನಡೆಸುತ್ತಿದ್ದಾರೆ.

ನಮ್ಮ ಹೀರೋ ಸಾವನ್ನಪ್ಪಿದ್ದಾನೆ. ಯಾವ ಗುಣಗಾನಗಳಿಲ್ಲದೆ!

ನಾನು ಅಣ್ಣನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ashabenakappa@yahoo.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.