ಶುಕ್ರವಾರ, ಮೇ 14, 2021
29 °C

ಅಂತರರಾಷ್ಟ್ರೀಯ ಕೇಂದ್ರ: ಕೂಡಲ ಸಂಗಮ

ಪ್ರಜಾವಾಣಿ ವಾರ್ತೆ / ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ಬಸವನ ಬಾಗೇವಾಡಿ/ಕೂಡಲ ಸಂಗಮ: ಅಣ್ಣ ಬಸವಣ್ಣನ ಹುಟ್ಟೂರು ಬಸವನ ಬಾಗೇವಾಡಿ, ಐಕ್ಯಸ್ಥಳ ಕೂಡಲ ಸಂಗಮದ ಜೊತೆಗೆ ತಾಯಿಯ ತವರೂರು ಇಂಗಳೇಶ್ವರ, ಪತ್ನಿ ಗಂಗಾಂಬಿಕೆಯ ಸಮಾಧಿ ಇರುವ ಎಂ.ಕೆ. ಹುಬ್ಬಳ್ಳಿ, ಮತ್ತೊಬ್ಬ ಪತ್ನಿ ನೀಲಾಂಬಿಕೆಯ ಸಮಾಧಿ ಇರುವ ತಂಗಡಗಿ ಗ್ರಾಮಲ್ಲಿ ಸರ್ಕಾರ ಸ್ಮಾರಕಗಳನ್ನು ನಿರ್ಮಿಸಿದೆ.

`ಕೂಡಲ ಸಂಗಮ ಅಂತರರಾಷ್ಟ್ರೀಯ ಕೇಂದ್ರವಾಗಿ ಹೊರಹೊಮ್ಮುತ್ತಿದ್ದು, ಅದರ ಜೊತೆಗೆ ಉಳಿದ ಈ ಸ್ಮಾರಕಗಳನ್ನೂ ಪ್ರಮುಖ ಪ್ರವಾಸಿ ತಾಣಗಳನ್ನಾಗಿ ಪರಿಚಯಿಸಬೇಕು~ ಎನ್ನುತ್ತಿದ್ದಾರೆ ಬಸವಣ್ಣ ಅವರ ಅನುಯಾಯಿಗಳು.

ಕೂಡಲ ಸಂಗಮ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ. ರಾಷ್ಟ್ರೀಯ ಹೆದ್ದಾರಿ ನಂ.13ರಿಂದ ರಸ್ತೆ ಸಂಪರ್ಕವಿದೆ. ಆದರೆ, ನೇರವಾಗಿ ರೈಲು ಸಂಪರ್ಕ ಇಲ್ಲ. ರೈಲಿನ ಮೂಲಕ ಬರಬೇಕಿದ್ದರೆ ಬಾಗಲಕೋಟೆ, ಬಾದಾಮಿ, ಆಲಮಟ್ಟಿಗೆ ಬಂದು ಅಲ್ಲಿಂದ ರಸ್ತೆ ಮಾರ್ಗವಾಗಿ ಬರಬೇಕು.

`ನಿತ್ಯವೂ ಇಲ್ಲಿಗೆ ಸರಾಸರಿ 2,000ದಷ್ಟು ಪ್ರವಾಸಿಗರು ಬರುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಶರಣ ಮೇಳ, ಸಂಕ್ರಮಣಸಂದರ್ಭದಲ್ಲಿ ಭಕ್ತರ ಸಂಖ್ಯೆ ಲಕ್ಷ ತಲುಪುತ್ತದೆ. ಯಾತ್ರಿ ನಿವಾಸದಲ್ಲಿ 50 ಕೊಠಡಿ, 15 ಡಾರ್ಮೆಟರಿ ಇವೆ. ಸರ್ಕಾರಿ, ಪ್ರಾಧಿಕಾರದ ಅತಿಥಿಗೃಹ, ಉಪಹಾರ ಗೃಹಗಳಿವೆ.

ಪ್ರವಾಸೋದ್ಯಮ ಇಲಾಖೆಯಿಂದ ಮತ್ತೊಂದು ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ. ಮಧ್ಯಾಹ್ನ ಮತ್ತು ರಾತ್ರಿ ದಾಸೋಹದ ವ್ಯವಸ್ಥೆ ಇದ್ದು, ಪ್ರವಾಸಿಗರ ನೆರವಿಗಾಗಿ ಮಾಹಿತಿ ಕೇಂದ್ರ ಸಹ ತೆರೆಯಲಾಗಿದೆ~ ಎಂದು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಎಸ್. ಚಿನಿವಾರ ವಿವರಿಸುತ್ತಾರೆ.

`ಕ್ಷೇತ್ರದ ಅಭಿವೃದ್ಧಿ-ಸ್ವಚ್ಛತೆ ಅತ್ಯುತ್ತಮ. ಇಲ್ಲಿಯ ವನಸಿರಿ, ಸುಂದರ ಪರಿಸರದಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ. ಐಕ್ಯಮಂಟಪ, ದೇವರ ದರ್ಶನ ಪಡೆದಾಗ ಭಕ್ತಿಭಾವ ಉಕ್ಕುತ್ತದೆ. ಆದರೆ, ಯಾತ್ರಿ ನಿವಾಸ ಉಸ್ತುವಾರಿ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಿರುವುದರಿಂದ ವಸತಿ ವ್ಯವಸ್ಥೆ ದುಬಾರಿ~ ಎನ್ನುತ್ತಾರೆ ಪ್ರವಾಸಿ ಮಂಜುಳಾ.

`ಮಹಾರಾಷ್ಟ್ರದ ಶಿರಡಿ ಮಂದಿರಕ್ಕೆ ಇರುವಂತೆ ಕೂಡಲ ಸಂಗಮಕ್ಕೂ ನೇರವಾಗಿ ರೈಲು ಸಂಪರ್ಕ ಕಲ್ಪಿಸಿದರೆ ಪ್ರಯಾಣದ ಪ್ರಯಾಸ ಕಡಿಮೆಯಾಗುತ್ತದೆ. ಪ್ರವಾಸಿಗರ ಸಂಖ್ಯೆಗೆ ತಕ್ಕಷ್ಟು (ಕಡಿಮೆ ದರದಲ್ಲಿ ಅಥವಾ ಉಚಿತವಾಗಿ) ವಸತಿ ಸೌಲಭ್ಯ ಕಲ್ಪಿಸಿದರೆ ಒಂದೆರಡು ದಿನ ಇಲ್ಲಿ ಕಳೆಯಲು ಅನುಕೂಲವಾಗುತ್ತದೆ~ ಎಂಬ ಸಲಹೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಬಂದಿದ್ದ ತುಳಸಾಬಾಯಿ, ಫಂಡರೀನಾಥ ಮತ್ತಿತರರದ್ದು.

`ಇಲ್ಲಿರುವ ಗ್ರಂಥಾಲಯದಲ್ಲಿ ಹಿಂದೂ-ಮುಸ್ಲಿಂ-ಇಸ್ಲಾಂ ಧರ್ಮ ಗ್ರಂಥಗಳು, ವಚನ ಮತ್ತು ದಾಸ ಸಾಹಿತ್ಯದ ಭಂಡಾರವೇ ಇದೆ. ಜನಸಾಮಾನ್ಯರಿಂದ ಹಿಡಿದು ಸಂಶೋಧಕರವರೆಗೆ ಎಲ್ಲರಿಗೂ ಉಪಯುಕ್ತವಾಗಿದೆ~ ಎನ್ನುತ್ತಾರೆ ಮಂಡಳಿಯವರು. ಇಲ್ಲಿಯ ಬಸವ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಬಸವಣ್ಣನವರ ಹುಟ್ಟು, ಬಾಲ್ಯ, ಸಾಧನೆ ಬಿಂಬಿಸುವ ವಸ್ತು ಸಂಗ್ರಹಾಲಯ ಆರಂಭಿಸಲು ಪ್ರಾಧಿಕಾರ ಮುಂದಾಗಿದೆ.

ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ (ಕೂಡಲ ಸಂಗಮದಿಂದ 70 ಕಿ.ಮೀ. ಅಂತರ)ಯ ಬಸವ ಜನ್ಮ ಸ್ಥಳದಲ್ಲಿ ಎರಡು ವರ್ಷಗಳ ಹಿಂದಷ್ಟೇ ಸುಂದರ ಸ್ಮಾರಕ ನಿರ್ಮಿಸಲಾಗಿದೆ. ಲೌಕಿಕ, ಸಾಮಾಜಿಕ ಅಂಶಗಳನ್ನು ಬಿಂಬಿಸುವ ಉದ್ದೇಶದಿಂದ ವಿಶಿಷ್ಟ ವಿನ್ಯಾಸದಲ್ಲಿ ಇದು ರೂಪುಗೊಂಡಿದೆ.

`ಈ ಸ್ಮಾರಕದಲ್ಲಿ ಅದರ ಮಾಹಿತಿ ಇರುವ ಕಿರು ಮಾಹಿತಿ ಪತ್ರ ಇರಬೇಕಿತ್ತು. ಆವರಣದಲ್ಲಿ ಶೌಚಾಲಯ ಇದ್ದರೆ ಇನ್ನಷ್ಟು ಹೊತ್ತು ಇಲ್ಲಿ ಕಳೆಯಬಹುದಿತ್ತು~ ಎಂಬುದು ಪ್ರವಾಸಿಗರ ಬಯಕೆ.

ಪ್ರವಾಸಿಗರಿಗೆ ವಸತಿ ಸಮಸ್ಯೆ ನೀಗಿಸಲು ಈ ಸ್ಮಾರಕದ ಸನಿಹದಲ್ಲಿಯೇ ರೂ 1.83 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುತ್ತಿದೆ.

ಬಸವನ ಬಾಗೇವಾಡಿಯಿಂದ ಕೇವಲ 10 ಕಿ.ಮೀ. ಅಂತರದಲ್ಲಿರುವ ಇಂಗಳೇಶ್ವರ ಬಸವಣ್ಣನವರ ತಾಯಿ ಮಾದಲಾಂಬಿಕೆಯ ತವರೂರು. ಅಲ್ಲಿ ಆಕೆ ವಾಸವಿದ್ದ ಮನೆಯನ್ನು ರೂ 1.5 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಇಂಗಳೇಶ್ವರ ಗ್ರಾಮದ ವಿರಕ್ತಮಠದಲ್ಲಿ ವಿಶಿಷ್ಟವಾದ ವಚನ ಶಿಲಾ ಮಂಟಪ ನಿರ್ಮಿಸಲಾಗಿದೆ. ಆದರೆ, ಇವುಗಳ ಬಗ್ಗೆ ಪ್ರವಾಸಿಗರಿಗೆ ಯಾವುದೇ ಮಾಹಿತಿ ದೊರೆಯುವುದಿಲ್ಲ. ಸಾರಿಗೆ ಸೌಲಭ್ಯವೂ ಅಷ್ಟಕ್ಕಷ್ಟೆ.

ಮುದ್ದೇಬಿಹಾಳ ತಾಲ್ಲೂಕು ತಂಗಡಗಿಯಲ್ಲಿ ನೀಲಾಂಬಿಕೆಯ ಐಕ್ಯಸ್ಥಳ ಹಾಗೂ ಅಲ್ಲಿದ್ದ ಹಡಪದ ಅಪ್ಪಣ್ಣ, ಮಾಚಿದೇವ ಅವರ ಸಮಾಧಿಗಳನ್ನೂ ರಕ್ಷಿಸಲಾಗಿದೆ.

ಬಸವನ ಬಾಗೇವಾಡಿಯಲ್ಲಿರುವ ಬಸವಣ್ಣನವರ ತಾಯಿ ಮಾದಲಾಂಬಿಕಾದೇವಿಯ ಆರಾಧ್ಯ ದೇವ ಮೂಲನಂದೀಶ್ವರ ದೇವಾಲಯ ಪುನರ್ ನಿರ್ಮಿಸುವ ಕಾರ್ಯ ಅಂತಿಮ ಹಂತದಲ್ಲಿದ್ದು,  ಬಸವ ಜಯಂತಿಯಂದು (ಇದೇ 24) ದೇವಾಲಯದ ವಾಸ್ತು ಶಾಂತಿ, ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬರದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಸಾಂಕೇತಿಕವಾಗಿ ನಡೆಯಲಿದೆ.

`ಈ ಮಂದಿರದಲ್ಲಿ ಭಕ್ತರು ತಂಗಲು ನಾಲ್ಕು ಕೊಠಡಿಗಳಿದ್ದು, ದಾಸೋಹ ವ್ಯವಸ್ಥೆಯೂ ಇದೆ. ಸಾವಿರ ಜನ ಬಂದರೂ ದಾಸೋಹ ವ್ಯವಸ್ಥೆ ಮಾಡುತ್ತೇವೆ. ಆದರೆ, ಅವರು ಮುಂಚಿತವಾಗಿ ತಿಳಿಸಬೇಕಷ್ಟೇ~ ಎಂದು ದೇವಸ್ಥಾನದ ಸಂಯೋಜನ ಅಧಿಕಾರಿ ಎನ್.ವೈ. ಚಿಕ್ಕೊಂಡ ಹೇಳುತ್ತಾರೆ.

`ಈ ಎಲ್ಲ ಸ್ಮಾರಕಗಳ ಬಗ್ಗೆ ವ್ಯಾಪಕ ಪ್ರಚಾರ ಪಡಿಸಿ, ಸಾರಿಗೆ-ವಸತಿ ಸೌಲಭ್ಯ ಕಲ್ಪಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಸಾಧ್ಯ. ಈ ಎಲ್ಲ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ಬಸವ ದರ್ಶನ ಹೆಸರಿನಲ್ಲಿ ಪ್ಯಾಕೇಜ್ ಟೂರ್ ಮಾದರಿಯ ಬಸ್‌ಗಳ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಬೇಕು.

ಗೋಲಗುಮ್ಮಟ, ಐಹೊಳೆ-ಪಟ್ಟದಕಲ್ಲು, ಹಂಪಿಗಳಿಗೆ ಬರುವ ಪ್ರವಾಸಿಗರೆಲ್ಲರೂ ಈ ಸ್ಮಾರಕಗಳನ್ನು ನೋಡುವಂತಾಗಬೇಕು~ ಎನ್ನುತ್ತಾರೆ ಬಸವನ ಬಾಗೇವಾಡಿಯ ಅಶೋಕ ಕಲ್ಲೂರ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.