ಮಂಗಳವಾರ, ಮೇ 18, 2021
30 °C

ಅಂತರ್ಜಲ ದುರ್ಬಳಕೆ ತಡೆಗೆ ಕಾನೂನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ನೀರು ಬಳಕೆದಾರರ ನಡುವಿನ ಸ್ಪರ್ಧೆಯಿಂದಾಗಿ ಅಂತರ್ಜಲ ಬರಿದಾಗುತ್ತಿದ್ದು, ಅತ್ಯಮೂಲ್ಯ ಜಲಸಂಪನ್ಮೂಲ ರಕ್ಷಣೆಗಾಗಿ ಕಾನೂನಿನ ಚೌಕಟ್ಟಿಗೆ ಒಳಪಡಿಸುವ ಪ್ರಸ್ತಾವವನ್ನು ಗಂಭೀರವಾಗಿ ಪರಿಗಣಿಸುವ ಕಾಲ ಈಗ ಬಂದಿದೆ ಎಂದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಇಲ್ಲಿ ಅಭಿಪ್ರಾಯಪಟ್ಟರು.ಮಂಗಳವಾರದಿಂದ ಆರಂಭವಾದ ದೇಶದ ಮೊಟ್ಟ ಮೊದಲ `ರಾಷ್ಟ್ರೀಯ ಜಲ ಸಪ್ತಾಹ~ವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಅಂತರ್ಜಲವನ್ನು ಸಾರ್ವಜನಿಕ ಸಂಪನ್ಮೂಲವಾಗಿ ಪರಿಗಣಿಸಬೇಕು~ ಎಂದು ಸಲಹೆ ನೀಡಿದರು.`ಅಂತರ್ಜಲ ದುರ್ಬಳಕೆ ನಿಯಂತ್ರಣಕ್ಕೆ ಪ್ರಸ್ತುತ ಕಠಿಣ ಕಾನೂನು ಇಲ್ಲ. ನೀರಿನ ಬಳಕೆಯಲ್ಲಿ ಸಮನ್ವಯತೆಯೂ ಇಲ್ಲ. ಜೊತೆಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್ ಮತ್ತು ನೀರು ಪೂರೈಕೆ ಮಾಡುತ್ತಿರುವುದರಿಂದ ಅಂತರ್ಜಲ ದುರ್ಬಳಕೆಯಾಗುತ್ತಿದೆ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಸಹಭಾಗಿತ್ವ ಪ್ರಕ್ರಿಯೆಗೆ ಕರೆ: `ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ವಿದ್ಯುತ್ ಹಾಗೂ ನೀರನ್ನು ಪೂರೈಸುತ್ತಿರುವುದು ಅಂತರ್ಜಲ ದುರ್ಬಳಕೆಗೆ ಕಾರಣವಾಗಿದೆ ಎಂದು ಪ್ರಧಾನಿ ಹೇಳಿದರು.ಸ್ಥಳೀಯ ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು, ನೀರು ಪೂರೈಕೆಯನ್ನು ವಿಸ್ತರಿಸುವ ಕುರಿತು ಚಿಂತಿಸಬೇಕು. ನೀರಿನ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಕಡಿತಗೊಳಿಸಿ, ಪರಿಣಾಮಕಾರಿಯಾಗಿ ನೀರನ್ನು ಬಳಕೆ ಮಾಡಬೇಕು~ ಎಂದು ಅವರು ಹೇಳಿದರು.ವ್ಯವಸ್ಥೆಗೆ ಸುಧಾರಣೆ ಅಗತ್ಯ:`ಪ್ರಸ್ತುತ ದೇಶದಲ್ಲಿರುವ ನೀರು ನಿರ್ವಹಣೆ ವ್ಯವಸ್ಥೆಗೆ ಸುಧಾರಣೆ ತರಬೇಕಿದೆ. ವಾಸ್ತವ ಪರಿಸ್ಥಿತಿಗೆ ಅನುಗುಣವಾಗಿ ಜಲಸಂಪನ್ಮೂಲ ಯೋಜನೆಯ ಅಭಿವೃದ್ಧಿ ಮತ್ತು ನಿರ್ವಹಣೆಯನ್ನು ರೂಪಿಸಬೇಕಿದೆ ಎಂದು ಅವರು ಸೂಚಿಸಿದರು.ಮುಂದಿನ ಐದು ವರ್ಷಗಳಲ್ಲಿ ನೀರಿಗೆ ಸಂಬಂಧಪಟ್ಟ ನವ ನವೀನ ಯೋಜನೆಗಳನ್ನು ರೂಪಿಸಬೇಕಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಮಗ್ರ ಜಲಾನಯನ ನಿರ್ವಹಣೆಯಂತಹ ಯೋಜನೆಗಳೊಂದಿಗೆ ನೀರಿನ ಸಂರಕ್ಷಣೆ ಯೋಜನೆಗಳನ್ನು ಜೋಡಿಸಬೇಕಿದೆ ಎಂದು ಸಿಂಗ್ ಸಲಹೆ ನೀಡಿದರು.ಪರಿಣಾಮಕಾರಿ ನೀರು ನಿರ್ವಹಣೆ: `ಪರಿಣಾಮಕಾರಿ ಜಲಸಂಪನ್ಮೂಲ ನಿರ್ವಹಣೆಗಾಗಿ ಸರ್ಕಾರ ದೇಶದಲ್ಲಿರುವ ನೀರಿನ ಲಭ್ಯತೆ ಬಗ್ಗೆ ನಕ್ಷೆ ರೂಪಿಸುವ ಅಗತ್ಯವಿದ್ದು, ಇದಕ್ಕಾಗಿ ದೇಶದಾದ್ಯಂತ ಅಂತರ್ಜಲ ಲಭ್ಯತೆ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಬೇಕು. ಈ ಎಲ್ಲ ವಿಚಾರಗಳನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗುತ್ತಿದೆ~ ಎಂದು ತಿಳಿಸಿದರು.ಸಮುದಾಯ ತಂತ್ರಜ್ಞಾನ ಅಗತ್ಯ: ನಮ್ಮ ಹಿರಿಯರು ಉತ್ಕೃಷ್ಟವಾದ ಮಳೆ ನೀರು ಸಂಗ್ರಹ ವಿಧಾನಗಳನ್ನು, ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದರು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಆ ವಿಧಾನಗಳನ್ನು ರೂಪಿಸುತ್ತಿದ್ದರು. ನೀರು ನಿರ್ವಹಣೆ ಸ್ಥಳೀಯ ಸಮುದಾಯದವರ ನಿಯಂತ್ರಣದಲ್ಲಿರುತ್ತಿತ್ತು. ಸಹಕಾರ ತತ್ವದ ಮೇಲೆ ನಡೆಯುತ್ತಿದ್ದ ಇಂಥ ವಿಧಾನಗಳನ್ನು ಮತ್ತೆ ಮರುಸ್ಥಾಪಿಸಬೇಕಿದ್ದು, ಆ ಮೂಲಕ ನೀರಿನ ಸಂಸ್ಕರಣೆ , ಮರುಬಳಕೆ ಮತ್ತು ಮರುಪೂರಣ  ಕೆಲಸವಾಗಬೇಕಿದೆ ಎಂದು ಹೇಳಿದರು. 

ನದಿ ಜೋಡಣೆಗೆ ಸಮಿತಿ

ನವದೆಹಲಿ (ಪಿಟಿಐ):
  ನದಿ ಜೋಡಣೆ ವಿಷಯದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ನದಿ ಜೋಡಣೆ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಬೇಕೆಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.`ಭಾರತ ಜಲ ಸಪ್ತಾಹ~ ಕಾರ್ಯಕ್ರಮದಲ್ಲಿ ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತಾಪಿತ ಸಮಿತಿ ಜಲ ಸಂಪನ್ಮೂಲ ಸಚಿವಾಲಯದಡಿ ಕಾರ್ಯನಿರ್ವಹಿಸಬಹುದು. ನದಿ ಜೋಡಣೆಗೆ ಸಂಬಂಧಿಸಿದಂತೆ ತಾಂತ್ರಿಕ ಮತ್ತು ಆರ್ಥಿಕ ವಿಚಾರಗಳ ಕುರಿತು ಚರ್ಚೆಯಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.