ಬುಧವಾರ, ಜನವರಿ 29, 2020
29 °C

ಅಂತರ ರಾಜ್ಯ ಬ್ಯಾಡ್ಮಿಂಟನ್; ಏರ್ ಇಂಡಿಯಾಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆಟ್ರೋಲಿಯಂ ಸ್ಪೋರ್ಟ್ಸ್ ಪ್ರಮೋಷನ್ ಬೋರ್ಡ್ (ಪಿಎಸ್‌ಪಿಬಿ) ತಂಡದವರು ಇಲ್ಲಿ ಕೊನೆಗೊಂಡ 67ನೇ ಅಂತರ ರಾಜ್ಯ ಸೀನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕೋರ್ಟ್‌ನಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಪಿಎಸ್‌ಪಿಬಿ ಪುರುಷರ ತಂಡ 3-1ರಲ್ಲಿ ಏರ್ ಇಂಡಿಯಾ ತಂಡವನ್ನು ಮಣಿಸಿತು.ವಿಜಯಿ ತಂಡದ ಅರವಿಂದ ಭಟ್ 21-16, 21-19ರಲ್ಲಿ ಆನಂದ್ ಪವಾರ್ ಅವರನ್ನು ಮಣಿಸಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಎರಡನೇ ಪಂದ್ಯದಲ್ಲೂ ಸೌರಭ್ ವರ್ಮ 21-17, 21-19ರಲ್ಲಿ ಪ್ರತುಲ್ ಜೋಶಿ ಅವರನ್ನು ಮಣಿಸಿ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿದರು. ಆದರೂ ಮೂರನೇ ಪಂದ್ಯದಲ್ಲಿ ಅಂತರರಾಷ್ಟ್ರೀಯ ಆಟಗಾರ ವಿ. ದಿಜು-ಅರುಣ್ ವಿಷ್ಣು ಜೋಡಿ 21-13, 18-21, 18-21ರಲ್ಲಿ ಅಕ್ಷಯ್ ಧವಳ್ಕರ್-ಮನು ಅತ್ರಿ ಎದುರು ಸೋಲು ಕಂಡರು.ಈ ಪಂದ್ಯದ ಮೂರು ಗೇಮ್‌ಗಳಲ್ಲಿ ಪಿಎಸ್‌ಪಿಬಿ ತಂಡದ ಆಟಗಾರರು ಪ್ರಬಲ ಪ್ರತಿರೋಧ ತೋರಿದರೂ, ಪಂದ್ಯ ಗೆದ್ದುಕೊಳ್ಳಲು ಆಗಲಿಲ್ಲ. ಆದರೆ, ನಾಲ್ಕನೇ ಪಂದ್ಯದಲ್ಲಿ ಪಿಎಸ್‌ಪಿಬಿ ಈ ತಪ್ಪನ್ನು ಮಾಡಲಿಲ್ಲ.ಈ ತಂಡದ ಬಿ. ಸಾಯಿ ಪ್ರಣೀತ್ 21-12, 21-14ರಲ್ಲಿ ಜಿ. ಗೋಪಿ ರಾಜು ಅವರನ್ನು ಸೋಲಿಸಿ ಚಾಂಪಿಯನ್ ಆಗುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಅಷ್ಟೇ ಅಲ್ಲ ಎದುರಾಗಬಹುದಿದ್ದ ಅಪಾಯವನ್ನು ತಡೆದರು.ಮಹಿಳಾ ತಂಡಕ್ಕೂ ಪ್ರಶಸ್ತಿಯ ಗರಿ: ಪಿಎಸ್‌ಪಿಬಿ ಮಹಿಳಾ ತಂಡದವರು ಸಹ 2-0ರಲ್ಲಿ ಏರ್ ಇಂಡಿಯಾವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.ಫೈನಲ್‌ನ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವಿಜಯಿ ತಂಡದ ಪಿ.ವಿ. ಸಿಂಧು 21-11, 17-21, 21-10ರಲ್ಲಿ ತನ್ವಿ ಲಾಡ್ ಮೇಲೂ, ಡಬಲ್ಸ್ ವಿಭಾಗದ ಪಂದ್ಯದಲ್ಲಿ ಅಪರ್ಣಾ ಬಾಲನ್-ಪ್ರಜಕ್ತಾ ಸಾವಂತ್ ಜೋಡಿ 21-14, 21-10ರಲ್ಲಿ ಪ್ರಧಾನ್ಯ ಗಾದ್ರೆ-ಸಯಾಲಿ ಗೋಖಲೆ ಜೋಡಿಯನ್ನು ಮಣಿಸಿ 2-0ರಲ್ಲಿ ಗೆಲುವು ಪಡೆಯಿತು.ಅಜಯ್ ಟೂರ್ನಿಯಿಂದ ಹೊರಕ್ಕೆ: ಹಿಮ್ಮಡಿಯ ನೋವಿನಿಂದ ಬಳಲುತ್ತಿರುವ ಪಿಎಸ್‌ಪಿಬಿಯ ಅಜಯ್ ಜಯರಾಮನ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. `ಕೊರಿಯಾ ಸೂಪರ್ ಸರಣಿ ಆಡುವಾಗ ಆಗಿದ್ದ ಹಿಮ್ಮಡಿ ನೋವು ಈಗ ಹೆಚ್ಚಾಗಿದೆ. ಆಡಲು ಸಾಧ್ಯವಾಗುತ್ತಿಲ್ಲ~ ಎಂದು ಅಜಯ್ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)