ಸೋಮವಾರ, ಜೂನ್ 21, 2021
23 °C
ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ಉಪಚುನಾವಣೆ ಫಲಿತಾಂಶ ಪ್ರಕಟ

ಅಂದಗೋವೆ– ಫಾತಿಮಾ, ರಸಲ್ಪುರ– ನರೇಂದ್ರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 6 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆಂದು ತಹಶೀಲ್ದಾರ್ ಜಯರಾಮ್ ತಿಳಿಸಿದರು.ಮತ ಎಣಿಕೆಯು ಬುಧವಾರ ಬೆಳಿಗ್ಗೆ 8 ಗಂಟೆಗೆ ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ನಡೆಯಿತು. ಕೊಡಗರಳ್ಳಿ ಪಂಚಾಯಿತಿ ವ್ಯಾಪ್ತಿಯ ಅಂದಗೋವೆ ಕ್ಷೇತ್ರವು ಹಿಂದುಳಿದ ವರ್ಗ ‘ಎ’ ವಿಭಾಗಕ್ಕೆ ಮೀಸಲಾಗಿದ್ದು, ಚುನಾವಣೆಯಲ್ಲಿ ಎಂ. ಫಾತಿಮಾ ಆಯ್ಕೆಯಾಗಿದ್ದಾರೆ.ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯ ರಸಲ್ಪುರ ಕ್ಷೇತ್ರವು ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದು, ಎಸ್.ಪಿ. ನರೇಂದ್ರ ಆಯ್ಕೆಯಾಗಿದ್ದಾರೆ. ಕೊಡ್ಲಿಪೇಟೆ ಪಂಚಾಯಿತಿ ವ್ಯಾಪ್ತಿಯ ಒಂದು ಸ್ಥಾನವು ಸಾಮಾನ್ಯ ವಿಭಾಗಕ್ಕೆ ಮೀಸಲಾಗಿದ್ದು, ಸಿ.ಎಸ್. ಹರೀಶ್ ಜಯಗಳಿಸಿದ್ದಾರೆ.ನೆಲ್ಯಹುದಿಕೇರಿ ಪಂಚಾಯಿತಿ ವ್ಯಾಪ್ತಿಯ 2 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಅನುಸೂಚಿತ ಪಂಗಡ ಮಹಿಳೆಯ ವಿಭಾಗದಿಂದ ಮಂಗಳ ಆಯ್ಕೆಯಾಗಿದ್ದು, ಸಾಮಾನ್ಯ ವಿಭಾಗದಿಂದ ಅನೀಫ್ ಆಯ್ಕೆಯಾಗಿದ್ದಾರೆ. ಏಳನೆ ಹೊಸಕೋಟೆ ಪಂಚಾಯಿತಿ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ವಿಭಾಗದಿಂದ ಕೆ.ಕೆ. ರಶೀದಾ ಆಯ್ಕೆಯಾಗಿದ್ದಾರೆ.ಹೆಗ್ಗಳ ಗ್ರಾ.ಪಂ: ಬೋಪಣ್ಣ ಆಯ್ಕೆ

ವಿರಾಜಪೇಟೆ: ವಿರಾಜಪೇಟೆ ತಾಲ್ಲೂಕಿನ ಮೂರು ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಸ್ವತಂತ್ರ ಅಭ್ಯರ್ಥಿಗಳು  ತಲಾ ಒಂದು ಸ್ಥಾನವನ್ನು ಪಡೆದುಕೊಂಡಿವೆ.ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿಯ ಭಾಗ 3ರ ಹೆಗ್ಗಳ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಚ್ಚಪಂಡ ಬೋಪಣ್ಣ ವಿಜೇತರಾಗಿದ್ದಾರೆ. ಬೋಪಣ್ಣ ಅವರಿಗೆ 314 ಮತಗಳು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವರ್ಗೀಸ್ ಲೆನಿನ್‌ ಅವರಿಗೆ 239 ಮತಗಳು ಲಭ್ಯವಾದವು. 75 ಮತಗಳ ಅಂತರದಿಂದ ಬೋಪಣ್ಣ ಅವರು ವಿಜೇತರಾದರು.ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯ ಅಚ್ಚಪಂಡ ಮೊಣ್ಣಪ್ಪ ಅವರ ಅಕಾಲಿಕ ಮರಣದಿಂದಾಗಿ ಈ ಸ್ಥಾನ ತೆರವಾಗಿತ್ತು. ಈಗ ಆಯ್ಕೆಯಾಗಿರುವ ಬೋಪಣ್ಣ ಅವರು ದಿವಂಗತ ಮೊಣ್ಣಪ್ಪ ಅವರ ಪುತ್ರ.ಅಮ್ಮತ್ತಿ ಗ್ರಾಮ ಪಂಚಾಯತಿಯ ಕಾರ್ಮಾಡು ಒಂದನೇ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ  ಎಸ್‌. ದೀಪಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಎಚ್.ಎಸ್. ಶೋಭಾ ಅವರನ್ನು 33 ಮತಗಳ ಅಂತರದಿಂದ ಪರಾಭವಗೊಳಿಸಿದರು. ದೀಪಾ ಅವರಿಗೆ 184 ಮತಗಳು ಹಾಗೂ ಶೋಭಾ ಅವರಿಗೆ 151ಮತಗಳು ಲಭ್ಯವಾದವು.

ಇದೇ ಪಂಚಾಯಿತಿಯ ಕಾರ್ಮಾಡು- ಎರಡನೇ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಕೆ.ಆರ್. ಕವಿತಾ ಸಮೀಪದ ಪ್ರತಿಸ್ಪರ್ಧಿ ಎಂ.ಎಸ್. ರಮಾ ಅವರನ್ನು 75 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜೇತರಾದರು. ಕವಿತಾ ಅವರಿಗೆ 287 ಮತಗಳು ಹಾಗೂ ರಮಾ ಅವರಿಗೆ 212 ಮತಗಳು ಲಭ್ಯವಾದವು. ಒಟ್ಟು 1,040 ಮತದಾರರಿರುವ ಈ ಕ್ಷೇತ್ರದಲ್ಲಿ 514 ಮತದಾರರು ಹಕ್ಕು ಚಲಾಯಿಸಿದರು. ತಾಲ್ಲೂಕಿನ ಕುಟ್ಟ ಕ್ಷೇತ್ರದಲ್ಲಿ ಎಚ್.ವೈ. ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದರು.ಮತಗಳ ಎಣಿಕೆ ಕಾರ್ಯ ಬುಧವಾರ ಬೆಳಿಗ್ಗೆ ವಿರಾಜಪೇಟೆ ತಾಲ್ಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ತಹಶೀಲ್ದಾರ್ ಕೃಷ್ಣ ಅವರ ಸಮ್ಮುಖದಲ್ಲಿ ನಡೆಯಿತು.ಕೊಡ್ಲಿಪೇಟೆ ಗ್ರಾ.ಪಂ: ಹರೀಶ್‌ ಅಧ್ಯಕ್ಷ

ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಸಾಮಾನ್ಯ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಸಿ.ಎಸ್.ಹರೀಶ್ ನೂತನ ಸದಸ್ಯರಾಗಿ ಆಯ್ಕೆಯಾದರು.ಪಂಚಾಯಿತಿಯ 1ನೇ ವಿಭಾಗದ ಸದಸ್ಯ ಕೆ.ಎಸ್. ನಾಗರಾಜ್ ತಮ್ಮ ಸದಸ್ಯ ಸ್ಥಾನಕ್ಕೆ 2013ರ ಜನವರಿಯಲ್ಲಿ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಮರುಚುನಾವಣೆ ನಡೆದಿದ್ದು, 5 ಮಂದಿ ನಾಮಪತ್ರ ಸಲ್ಲಿಸಿದ್ದರು. ಸಿ.ಎಸ್. ಹರೀಶ್ ನೂತನ ಸದಸ್ಯರಾಗಿ ಚುನಾಯಿತರಾದರು. ಸದಸ್ಯ ಹರೀಶ್ ಅವರ ಬೆಂಬಲಿಗರು ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.