ಗುರುವಾರ , ಮೇ 28, 2020
27 °C

ಅಂಧ ಮಕ್ಕಳಿಂದ ಗಾಯನ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕಂಡೆ ನಾ ಕಂಡೆ.... ದೇವರ ದೇವ ಗುರುದೇವರ ನಾ ಕಂಡೆ..... ಸಂಗೀತ, ಸಾಹಿತ್ಯ ಸಾಮ್ರಾಜ್ಯದ ದೇವರ ನಾ ಕಂಡೆ....... ಗಾನಯೋಗಿ ಪಂಡಿತ್ ಡಾ.ಪುಟ್ಟರಾಜ ಗವಾಯಿ ಅವರನ್ನು ಅಂಧ ವಿದ್ಯಾರ್ಥಿಗಳು ಸ್ಮರಿಸಿದ್ದು ಹೀಗೆ. ಅಂಧರ ಬೆಳಕಾಗಿದ್ದ ಗವಾಯಿಗಳನ್ನು ಅಂಧರು ಭಾವ ತುಂಬಿ, ಮನ ತುಂಬಿ ಸ್ಮರಿಸಿದರು.ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಸದ್ಗುರು ಸೇವಾ ಟ್ರಸ್ಟ್ ಫಾರ್ ಡಿಸೇಬಲ್ಡ್, ಭೂಮಿ ಬಳಗ, ಜಿಲ್ಲಾಡಳಿತ ಮತ್ತು ರೋಟರಿ ಸಂಸ್ಥೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಡಾ.ಪುಟ್ಟರಾಜ ಗವಾಯಿಗಳ ಪುಣ್ಯಸ್ಮರಣೆ ಮತ್ತು ರಾಜ್ಯ ಮಟ್ಟದ ಅಂಧ ಮಕ್ಕಳ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ಪುಟ್ಟರಾಜ ಗವಾಯಿಗಳನ್ನು ಕುರಿತು ಮಕ್ಕಳು ಗಾಯನದ ಮೂಲಕ ಸ್ಮರಿಸಿದರು.ಗಾಯನಕ್ಕೆ ತಬಲಾ, ಹಾರ್ಮೋನಿಯಂ, ಕೀಬೋರ್ಡ್, ಕೊಳಲು ಎಲ್ಲ ಹಿನ್ನೆಲೆ ಸಂಗೀತ ಸಹ ಅಂಧರೇ ನಿರ್ವಹಿಸಿದ್ದು ಕಾರ್ಯಕ್ರಮದ ವಿಶೇಷ. ರಾಜ್ಯದ ವಿವಿಧ ಅಂಧ ಶಾಲೆಗಳ 150ಕ್ಕೂ ಹೆಚ್ಚು ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ಪರ್ಧೆ ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿದೆ.ಸದ್ಗುರು ಸೇವಾ ಟ್ರಸ್ಟ್ ಅಧ್ಯಕ್ಷರಾದ ಅಂಧ    ಕಲಾವಿದ ಶಿವಲಿಂಗಶೆಟ್ಟಿ ಮಾತನಾಡಿ, ಅಂಧರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ತಮ್ಮ ಉದ್ದೇಶ. ವಿವಿಧ ಉದ್ಯೋಗ ತರಬೇತಿ ಮತ್ತು ಸಂಗೀತ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಅಂಧ ಮಕ್ಕಳಿಗೆ ಸಂಗೀತಾಭ್ಯಾಸ ಹೇಳಿ ಕೊಡಲಾಗುವುದು. ಅಂಧರ ವಸತಿ ಸಹಿತ ಸಮಗ್ರ ಸಂಗೀತ ಶಾಲೆ ತೆರೆಯುವ ತಮ್ಮ ಕನಸು ನನಸಾಗಿಲ್ಲ. ಆರ್ಥಿಕ ಸಮಸ್ಯೆ ಇದಕ್ಕೆ ಕಾರಣ. ಅಂಧರ ಶ್ರೇಯೋಭಿವೃದ್ಧಿಗಾಗಿ ನಗರದ ದಾನಿಗಳು ಚಿಂತಿಸಬೇಕೆಂದು ಕೋರಿದರು.ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿ ಗುಣಾನಾಥ ಸ್ವಾಮೀಜಿ, ಧಾರಾವಾಡ ಬಸವಮಹಾಮನೆ ಬಸವಾನಂದ ಸ್ವಾಮೀಜಿ, ಸಿಐಟಿ ಕಾರ್ಯದರ್ಶಿ ಜಿ.ಬಿ.ಜ್ಯೋತಿಗಣೇಶ್, ಕೈಗಾರಿಕೋದ್ಯಮಿಗಳಾದ ಎನ್.ಆರ್.ಜಗದೀಶಾರಾಧ್ಯ, ಜಗದೀಶಬಾಬು, ಆಶಾಪ್ರಸನ್ನಕುಮಾರ್, ಭೂಮಿ ಬಳಗದ ಜಿ.ಎಸ್.ಸೋಮಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್.ಚಂದ್ರಪ್ಪ, ಸಿಪಿಎಂ ಮುಖಂಡ ನಾಗರಾಜು ಇತರರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.