ಶುಕ್ರವಾರ, ಜನವರಿ 24, 2020
28 °C

ಅಂಧ ಮಕ್ಕಳಿಗೆ ಅಕ್ಷರದ ಕಣ್ಣು

ಪ್ರಜಾವಾಣಿ ವಾರ್ತೆ/ರವೀಂದ್ರ ಭಟ್‌ ಬಳಗುಳಿ Updated:

ಅಕ್ಷರ ಗಾತ್ರ : | |

ಅಂಧ ಮಕ್ಕಳಿಗೆ ಅಕ್ಷರದ ಕಣ್ಣು

ಸಿದ್ದಾಪುರ: ಪಟ್ಟಣದ ಹಾಳದಕಟ್ಟಾದ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆ ಕಣ್ಣಿಲ್ಲದ ಮಕ್ಕಳಿಗೆ ಅಕ್ಷರದ ಕಣ್ಣು ನೀಡುವ ಕೆಲಸ ಪ್ರಾರಂಭಿಸಿ ಎರಡು ದಶಕಗಳೇ ಕಳೆದಿವೆ.  ಈ ಶಾಲೆಯಲ್ಲಿ  ಕಣ್ಣಿಲ್ಲದ ಮಕ್ಕಳೊಂದಿಗೆ, ಶಾರೀರಿಕ  ಅಂಗವಿಕಲತೆ ಹೊಂದಿದ ಬಾಲಕರೂ ವೃತ್ತಿಪರ ತರಬೇತಿ  ಪಡೆಯುತ್ತಿರುವುದು ವಿಶೇಷ.90ರ ದಶಕದಲ್ಲಿ  ಆರಂಭಗೊಂಡ ಈ ಅಂಧರ ಶಾಲೆಯಲ್ಲಿ  ಇಲ್ಲಿಯವರೆಗೆ ಸುಮಾರು 400 ಅಂಧ ಮಕ್ಕಳು ವಿದ್ಯೆ ಪಡೆದಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ವಿದ್ಯೆ ನೀಡುವುದರೊಂದಿಗೆ ವಸತಿ, ಬಟ್ಟೆ,ಆಹಾರ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಅದರೊಂದಿಗೆ ಕಳೆದ 5 ವರ್ಷಗಳಿಂದ ಅಂಧ ಮಕ್ಕಳೊಂದಿಗೆ ಅಂಗವಿಕಲ ಮಕ್ಕಳಿಗೂ ವಿವಿಧ ತರಬೇತಿ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಆದರೆ ಅಂಗವಿಕಲ  ಮಕ್ಕಳಿಗೆ ವಸತಿ ವ್ಯವಸ್ಥೆಯನ್ನು ಸಂಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ.  ಈ ವೃತ್ತಿಪರ ಕೋರ್ಸ್  ಮೂಲಕ  60–70 ಅಂಗವಿಕಲ ಮಕ್ಕಳು ಪೇಪರ್‌ ಬ್ಯಾಗ್‌, ಕವರ್, ರಾಖಿ ಮತ್ತಿತರ ವಸ್ತುಗಳ ತಯಾರಿಕೆ ಕಲಿತಿದ್ದಾರೆ.‘ನಮ್ಮ ಶಾಲೆಯ ಅಂಧಮಕ್ಕಳು ಮತ್ತು ಇತರ ಅಂಗವಿಕಲ ಮಕ್ಕಳ ಸಲುವಾಗಿ  ಭಾಷಾ ಪ್ರಯೋಗಾಲಯದ ಹೊಸ ಕಲ್ಪನೆಯನ್ನು ಬರುವ ದಿನಗಳಲ್ಲಿ ಸಾಕಾರಗೊಳಿಸುವ ಯೋಜನೆಯಿದೆ’ ಎಂದು ಆಶಾಕಿರಣ ಟ್ರಸ್ಟ್  ಅಧ್ಯಕ್ಷ ರವಿ ಹೆಗಡೆ ಹೂವಿನಮನೆ ಹೇಳುತ್ತಾರೆ.‘ಆಗಾಗ ಅಲ್ಪ–ಸ್ವಲ್ಪ ಅಂಧತ್ವದೊಂದಿಗೆ ಶಾರೀರಿಕ ಅಂಗವೈಕಲ್ಯ ಹೊಂದಿರುವ ಮಕ್ಕಳು ಕೂಡ ಈ ಶಾಲೆಗೆ ಸೇರಲು ಬರುವುದುಂಟು.ಅವರಿಗೆ ಸ್ವಂತ ಕೆಲಸ ಮಾಡಿಕೊಳ್ಳಲು ಸಾಧ್ಯವಿದ್ದರೆ ಅಂತಹ ಮಕ್ಕಳನ್ನು  ಶಾಲೆಗೆ ಸೇರಿಸಿಕೊಂಡಿದ್ದೇವೆ’ ಎನ್ನುತ್ತಾರೆ ಆಶಾಕಿರಣ ಟ್ರಸ್ಟ್ ಸದಸ್ಯ ಶ್ರೀಧರ ಭಟ್ಟ.ಪ್ರಸ್ತುತ  30 ಅಂಧಮಕ್ಕಳು ಹಾಳದಕಟ್ಟಾದ ಅಂಧರ ಶಾಲೆಯಲ್ಲಿ ಕಲಿಯುತ್ತಿದ್ದು, 9 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರು ಮತ್ತು ಸಹೃದಯರ ಸಹಕಾರದಿಂದ ಎಲ್ಲ ವೆಚ್ಚವನ್ನು ಆಶಾಕಿರಣ ಟ್ರಸ್ಟ್ ನಿಭಾಯಿಸುತ್ತಿದೆ.

 

ಪ್ರತಿಕ್ರಿಯಿಸಿ (+)