ಶುಕ್ರವಾರ, ಮಾರ್ಚ್ 5, 2021
24 °C

ಅಂಬೇಡ್ಕರ್‌ನಗರದಲ್ಲಿ ಚುರುಕಾಯ್ತು ರಾಜಕೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್‌ನಗರದಲ್ಲಿ ಚುರುಕಾಯ್ತು ರಾಜಕೀಯ

ಚಿಕ್ಕಬಳ್ಳಾಪುರ: ನಗರಸಭೆಯ ಎಲ್ಲ 31 ವಾರ್ಡ್‌ಗಳ ಪೈಕಿ ತೀರ ಭಿನ್ನ ಮತ್ತು ಕುತೂಹಲದಿಂದ ಕೂಡಿರುವ ಅಂಬೇಡ್ಕರ್ ನಗರದಲ್ಲಿ (30ನೇ ವಾರ್ಡ್) ಈಗ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ.ಕಳೆದ ಫೆಬ್ರುವರಿ- ಮಾರ್ಚ್‌ನಲ್ಲಿ ನಡೆದ ನಗರಸಭೆ ಚುನಾವಣೆ ಬಹಿಷ್ಕರಿಸಿದ್ದ ವಾರ್ಡ್ ನಿವಾಸಿಗಳು ಈಗ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ದಿಢೀರ್ ಆಸಕ್ತಿ ತೋರಿದ್ದಾರೆ.`ರೈಲ್ವೆ ಗೇಜ್ ಕಾಮಗಾರಿ ನೆಪವೊಡ್ಡಿ 170ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ' ಎಂದು ಆರೋಪಿಸಿ ನಿವಾಸಿಗಳು ಕಳೆದ ಫೆಬ್ರುವರಿ 26ರಂದು  ಚುನಾವಣೆ ಬಹಿಷ್ಕರಿಸಿದ್ದರು. ಆದರೆ ಈಗ ಕಾಮಗಾರಿ ಮತ್ತು ಮನೆ ತೆರವಿನ ವಿಷಯಗಳನ್ನು ಪ್ರಸ್ತಾಪಿಸದೇ ಚುನಾವಣೆಗೆ ಸಜ್ಜಾಗಿದ್ದಾರೆ. ಚುನಾವಣೆ ಅಧಿಸೂಚನೆ ಜಾರಿಯಾಗಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೂ ಆರಂಭಗೊಂಡಿದೆ.ಕಳೆದ ಬಾರಿ ಚುನಾವಣೆ ಬಹಿಷ್ಕಾರ ಘೋಷಿಸುವ ಮುನ್ನ ಒಂದೇ ವಾರ್ಡ್‌ನಿಂದ 12 ಮಂದಿ ನಾಮಪತ್ರ ಸಲ್ಲಿಸಿದ್ದರು. ರೈಲ್ವೆ ಕಾಮಗಾರಿಯಿಂದ ಮನೆ-ಮಠವನ್ನೇ ಕಳೆದುಕೊಳ್ಳುತ್ತಿರುವಾಗ, ಚುನಾವಣೆ ನಡೆಸಿಯೇನು ಪ್ರಯೋಜನ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ನಾಮಪತ್ರ ಸಲ್ಲಿಸಿದ್ದ 12 ಮಂದಿ ಅಭ್ಯರ್ಥಿಗಳು ಒಮ್ಮತದ ನಿರ್ಣಯಕ್ಕೆ ಬದ್ಧರಾಗಿ ನಾಮಪತ್ರ ಹಿಂಪಡೆದಿದ್ದಲ್ಲದೇ ಚುನಾವಣೆಯನ್ನೇ ಬಹಿಷ್ಕರಿಸಿದ್ದರು.ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂದು ಕೆಲವರು ಚರ್ಚಿಸುತ್ತಿದ್ದಾರೆ. ಚುನಾವಣೆ ನಂತರ ಮನೆಗಳು ತೆರವಾಗಿ ವಾರ್ಡ್ ಅಸ್ತಿತ್ವ ಕಳೆದುಕೊಳ್ಳುವಾಗ, ವಾರ್ಡ್‌ನಿಂದ ನಗರಸಭೆಗೆ ಆಯ್ಕೆಯಾದ ಸದಸ್ಯರು ಏನು ಮಾಡಲು ಸಾಧ್ಯ? ಚುನಾವಣೆಯನ್ನಾದರೂ ಯಾಕೆ ನಡೆಸಬೇಕು ಎಂದು ಇನ್ನೂ ಕೆಲವರು ಚಿಂತಾಕ್ರಾಂತರಾಗಿದ್ದಾರೆ.`ಮನೆಗಳ ತೆರವು ಮತ್ತು ರೈಲ್ವೆ ಗೇಜ್ ಕಾಮಗಾರಿ ಕುರಿತು ಯಾವುದೇ ಮಹತ್ತರ ಬೆಳವಣಿಗೆಗಳು ನಡೆದಿಲ್ಲ. ವಸತಿ ಸೌಕರ್ಯದ ಕುರಿತು ನಿವಾಸಿಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಮತ್ತು ಸಮಸ್ಯೆಯೂ ಬಗೆಹರಿದಿಲ್ಲ. ಹೀಗಿದ್ದರೂ ನಿವಾಸಿಗಳು ಚುನಾವಣೆಗೆ ಮಾತ್ರ ಸಜ್ಜಾಗಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ನಡೆದುಬಿಟ್ಟರೆ, ವಾರ್ಡ್ ಉಳಿದುಕೊಳ್ಳುತ್ತೆ ಮತ್ತು ನಗರಸಭೆಗೆ ಆಯ್ಕೆಯಾಗುವ ಸದಸ್ಯರೇ ಅದನ್ನು ಉಳಿಸಿಕೊಳ್ಳುತ್ತಾರೆ ಎಂಬ ಭಾವನೆ ಜನರಲ್ಲಿ ಮೂಡಿಸಲಾಗಿದೆಯೋ ಅಥವಾ ಅವರ ಮೇಲೆ ಒತ್ತಡ ಹೇರಲಾಗುತ್ತಿದೆಯೋ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿಲ್ಲ' ಎಂದು ಪ್ರಗತಿಪರ ಸಂಘಟನೆಯೊಂದರ ಮುಖಂಡರೊಬ್ಬರು `ಪ್ರಜಾವಾಣಿ'ಗೆ ತಿಳಸಿದರು.`ವಾರ್ಡ್‌ನ ಭವಿಷ್ಯ ಮತ್ತು ವಸತಿ ಸೌಕರ್ಯಗಳ ಕುರಿತು ಸ್ಪಷ್ಟವಾದ ಭರವಸೆ ಸಿಗುವವರೆಗೆ ಚುನಾವಣೆ ನಡೆಸಲು ಬಿಡುವುದಿಲ್ಲವೆಂದು ನಿವಾಸಿಗಳು ಫೆಬ್ರುವರಿ 26ರಂದು ಬೃಹತ್ ಪ್ರತಿಭಟನೆ ನಡೆಸಿದ್ದರು. ಮೊದಲು ಸುಭದ್ರವಾದ ವಸತಿ ಸೌಲಭ್ಯ ಕಲ್ಪಿಸಿಕೊಡಿ. ನಂತರ ಚುನಾವಣೆಯ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದರು. ನಮಗೆ ಚುನಾವಣೆಗಿಂತ ಮನೆಗಳನ್ನು ಉಳಿಸಿಕೊಳ್ಳುವುದು ತುಂಬ ಮುಖ್ಯವಾಗಿದೆ. ಮನೆಗಳೇ ಇಲ್ಲದಿರುವಾಗ ನಾವು ಚುನಾವಣೆ ಗೆದ್ದು ಏನೂ ಪ್ರಯೋಜನ? ನಮಗೆ ನಮ್ಮ ನೆಲೆ ಮತ್ತು ಭವಿಷ್ಯ ಬೇಕು ಎಂದಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ' ಎಂದು ಅವರು ಹೇಳಿದರು.

ಈಡೇರದ ಭರವಸೆ

ಅಂಬೇಡ್ಕರ್ ನಗರದ ನಿವಾಸಿಗಳು ಎದುರಿಸುತ್ತಿರುವ ಅತಂತ್ರ ಸ್ಥಿತಿ ಇತ್ತೀಚಿನದ್ದೇನಲ್ಲ. ಹಲವು ವರ್ಷಗಳಿಂದ ಈ ಸಮಸ್ಯೆ ಉಳಿದುಕೊಂಡಿದೆ. ರೈಲ್ವೆ ಗೇಜ್ ಕಾಮಗಾರಿ ಹಿನ್ನೆಲೆಯಲ್ಲಿ ಮನೆಗಳನ್ನು ತೆರವುಗೊಳಿಸಲಾಗುವುದು ಎಂಬ ಭೀತಿ ವ್ಯಕ್ತವಾದ ಹಿನ್ನೆಲೆಯಲ್ಲಿ ನಿವಾಸಿಗಳು ಆಗಾಗ್ಗೆ ಪ್ರತಿಭಟನೆ ನಡೆಸುತ್ತಲೇ ಇ್ದ್ದದಾರೆ.ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಕೆ.ಎಚ್.ಮುನಿಯಪ್ಪ ಅವರು ಎರಡು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಿವಾಸಿಗಳೊಂದಿಗೆ ಸಮಸ್ಯೆ ಕುರಿತು ಚರ್ಚಿಸಿದ್ದರು. ಮನೆ ಮತ್ತು ನಿವೇಶನ ಸೌಲಭ್ಯ ಒದಗಿಸಿದ ನಂತರವಷ್ಟೇ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದ್ದರು.ಮನೆ ಮತ್ತು ನಿವೇಶನ ಸೌಲಭ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಜಮೀನು ಸ್ವಾಧೀನಪಡಿಸಿಕೊಳ್ಳುವಂತೆ ಅವರು ಈ ಹಿಂದಿನ ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಸೂಚಿಸಿದ್ದರು. ಈಗ ಸಚಿವರ ಖಾತೆ, ಜಿಲ್ಲಾಧಿಕಾರಿ ಮತ್ತು ಶಾಸಕರು ಬದಲಾದರೂ ಸಮಸ್ಯೆ ಮಾತ್ರ ಯಥಾಸ್ಥಿತಿಯಲ್ಲಿದೆ.`ಸಚಿವರು, ಶಾಸಕರು ಮತ್ತು ಅಧಿಕಾರಿಗಳು ನೀಡುವ ಭರವಸೆಗಳನ್ನು ಆಲಿಸುತ್ತ ಒಂದೊಂದೇ ದಿನಗಳನ್ನು ಕಳೆಯುತ್ತಿದ್ದೇವೆ. ನಮಗೆ ಸಮರ್ಪಕವಾದ ವಸತಿ ಸೌಕರ್ಯ ದೊರೆಯುವುದೋ ಅಥವಾ ಇಲ್ಲವೋ ಗೊತ್ತಿಲ್ಲ. ನಮಗೆ ವಸತಿ ಸೌಕರ್ಯ ಸಿಗದಿದ್ದರೆ, ಮನೆಗಳನ್ನು ತೆರವುಗೊಳಿಸಿದ ನಂತರ ನಾವಂತೂ ಬೀದಿಪಾಲಾಗುತ್ತೇವೆ' ಎಂದು ನಿವಾಸಿಗಳು ಹೇಳಿದರು.

ಚುನಾವಣೆಗೆ  ಲಾಬಿ-ಒತ್ತಡ

ಅಂಬೇಡ್ಕರ್ ನಗರ ನಿವಾಸಿಗಳು ನಗರಸಭೆ ಚುನಾವಣೆ ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಚುನಾವಣಾ ಆಯೋಗವು ಚುನಾವಣೆ ನಡೆಸುವ ಕುರಿತು ಹೆಚ್ಚಿನ ಆಸಕ್ತಿ ತೋರಿರಲಿಲ್ಲ. ವಸತಿ ಸೌಕರ್ಯ ಮತ್ತು ಇತರ ಸಮಸ್ಯೆಗಳನ್ನು ಪರಿಹರಿಸಿದ ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಲಾಗಿತ್ತು. ಆದರೆ ನಗರಸಭೆಯ ಮಾಜಿ ಸದಸ್ಯರೊಂದಿಗೆ ಕೆಲ ಪ್ರಭಾವಿ ವ್ಯಕ್ತಿಗಳು ಅಧಿಕಾರಿ- ರಾಜಕಾರಣಿಗಳ ಮೇಲೆ ತೀವ್ರ ಲಾಬಿ ಮತ್ತು ಒತ್ತಡ ಹೇರಿ ಚುನಾವಣೆ ನಡೆಸುವಂತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.`ಕಳೆದ ಬಾರಿ ನಾವೆಲ್ಲ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾಗ, ನಾಮಪತ್ರ ಸಲ್ಲಿಸಿದ್ದ ನಗರಸಭೆಯ ಮಾಜಿ ಸದಸ್ಯರೊಬ್ಬರು ನಾಮಪತ್ರ ಹಿಂಪಡೆಯಲು ಸುತಾರಾಂ ಸಿದ್ಧರಿರಲಿಲ್ಲ. ನಾಮಪತ್ರ ಹಿಂಪಡೆಯಲು ಒತ್ತಡ ಹೇರಿದಾಗ, ಅವರು ಕಣ್ಣೀರು ಹಾಕಿದ್ದರು.ಗೆಲ್ಲುವ ಅಭ್ಯರ್ಥಿಯನ್ನು ಚುನಾವಣಾ ಕಣದಿಂದ ದೂರ ಉಳಿಯುವಂತೆ ಮಾಡಿದ್ದೀರಿ ಎಂದು ಅಸಮಧಾನ ವ್ಯಕ್ತಪಡಿಸಿದ್ದರು. ಈಗ ಚುನಾವಣಾ ದಿನಾಂಕ ಘೋಷಣೆ ಮತ್ತು ಅಧಿಸೂಚನೆ ಜಾರಿಯಾದ ದಿನದಿಂದ ಅವರೇ ಈಗ ಹೆಚ್ಚಿನ ಆಸಕ್ತಿ ವಹಿಸಿಕೊಂಡು ರಾಜಕೀಯ ಚಟುವಟಿಕೆ ಗರಿಗೆದರುವಂತೆ ಮಾಡಿದ್ದಾರೆ' ಎಂದು ನಿವಾಸಿಗಳು ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.