ಶನಿವಾರ, ಜನವರಿ 18, 2020
26 °C

ಅಕ್ಕಿ ಗಿರಣಿ ಬಂದ್‌: ಗ್ರಾಹಕರ ಪರದಾಟ

ಪ್ರಜಾವಾಣಿ ವಾರ್ತೆ/ ಸಂಧ್ಯಾ ಹೆಗಡೆ ಆಲ್ಮನೆ Updated:

ಅಕ್ಷರ ಗಾತ್ರ : | |

ಶಿರಸಿ: ಸರ್ಕಾರದ ಲೆವಿ ಆಕರಣೆ ವಿರೋಧಿಸಿ ಅಕ್ಕಿ ಗಿರಣಿ ಮಾಲೀಕರು ನಡೆಸುತ್ತಿರುವ ಬಂದ್‌ ಮಂಗಳವಾರ ವೂ ಮುಂದುವರಿದಿದ್ದರಿಂದ ರೈತರು, ಗ್ರಾಹಕರು ಪರದಾಡುವಂತಾಗಿದೆ.ಅಕ್ಕಿ ಮಾಡಿಸಲು ಗಿರಣಿಗೆ ಬಂದಿದ್ದ ರೈತರು ಕಾರ್ಯ ಸ್ಥಗಿತಗೊಂಡಿರುವ ಯಂತ್ರಗಳನ್ನು ಕಂಡು ವಾಪಸ್ಸಾದರು. ನಿತ್ಯದ ಕೂಲಿ ಹಣದಲ್ಲಿ ಅಕ್ಕಿ ಖರೀದಿಸುವ ಬಡ ಗ್ರಾಹಕರು ಅಕ್ಕಿ ಸಿಗದೆ ಬರಿಗೈಯಲ್ಲಿ ಮನೆಗೆ ಮರಳಿದರು.ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಮಟಾ ತಾಲ್ಲೂಕಿನಲ್ಲಿ ಅತಿ ಹೆಚ್ಚು 25, ಶಿರಸಿಯಲ್ಲಿ 24, ಅಂಕೋಲಾದಲ್ಲಿ 16, ಮುಂಡಗೋಡಿನಲ್ಲಿ 12, ಸಿದ್ದಾಪುರದಲ್ಲಿ 11, ಯಲ್ಲಾಪುರ ಹಾಗೂ ಭಟ್ಕಳಗಳಲ್ಲಿ ತಲಾ 10 ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಒಟ್ಟು 123 ಅಕ್ಕಿ ಗಿರಣಿಗಳಿವೆ. ಎಲ್ಲ 123 ಗಿರಣಿಗಳು ರಾಜ್ಯ ಸಂಘ ಕರೆ ನೀಡಿರುವ ಬಂದ್‌ಗೆ ಬೆಂಬಲಿಸಿ ಸೋಮವಾರದಿಂದ ಕಾರ್ಯ ಸ್ಥಗಿತಗೊಳಿಸಿವೆ.‘ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 110 ಟನ್‌ ಭತ್ತವನ್ನು ಗಿರಣಿಗಳಲ್ಲಿ ಮಿಲ್ಲಿಂಗ್‌ ಮಾಡಲಾಗುತ್ತಿತ್ತು. ಎರಡು ದಿನಗಳಿಂದ ಎಲ್ಲ ಗಿರಣಿಗಳಲ್ಲಿ ಯಂತ್ರಗಳು ಸದ್ದು ನಿಲ್ಲಿಸಿವೆ. ಇದರಿಂದ ದಿನಕ್ಕೆ ₨ 2 ಲಕ್ಷದಷ್ಟು ನಷ್ಟವಾಗುತ್ತಿದೆ. ಗ್ರಾಹಕರಿಗೆ ತೊಂದರೆಯಾಗುವ ಸಂಗತಿಯೂ ನಮಗೆ ಅರಿವಿದೆ. ಆದರೆ ಸರ್ಕಾರದ ಲೆವಿ ಆಕರಣೆ ನಮಗೆ ತುಂಬಾ ಭಾರವಾಗಿದೆ. ಹೀಗಾಗಿ ಗಿರಣಿ ಬಂದ್‌ ಅನಿವಾರ್ಯವಾಗಿದೆ’ ಎನ್ನುತ್ತಾರೆ ಅಕ್ಕಿ ಗಿರಣಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ, ಮುಂಡಗೋಡ ತಾಲ್ಲೂಕಿನ ಅಗಡಿ ಶಾಂತಾದುರ್ಗಾ ಅಕ್ಕಿ ಗಿರಣಿ ಮಾಲೀಕ ಆರ್‌.ವಿ.ಪಾಲೇಕರ್‌.‘ನಮ್ಮ ಭಾಗದಲ್ಲಿ ಬಡಜನರು ಭಾಳ ಇದ್ದಾರ್ರಿ. ಹಗಲಲ್ಲಿ ದುಡಿಮೆ ಮಾಡಿ ಸಂಜೆ ಗಿರಣಿಗೆ ಬಂದು ಕಡಿಮೆ ದರದ ನುಚ್ಚು ಅಕ್ಕಿ ಒಯ್ತಾರೆ. ದಿನಕ್ಕೆ ಸುಮಾರು 10 ಕ್ವಿಂಟಲ್‌ ನುಚ್ಚು ಅಕ್ಕಿ, 10–15 ಕ್ವಿಂಟಾಲ್‌ ಸಾದಾ ಅಕ್ಕಿಯನ್ನು ಜನ ಒಯ್ತಿದ್ರು. ಎರಡು ದಿನದಿಂದ ಅಕ್ಕಿ ಮಾಡ್ತಾ ಇಲ್ಲ, ಜನಾ ಬೈಯ್ದಕೋಳ್ತ್ ಹೋಗ್ತಿದ್ದಾರೆ’ ಎನ್ನುತ್ತಾರೆ ಅಗಡಿ ಶಾಂತಾದುರ್ಗಾ ಅಕ್ಕಿ ಗಿರಣಿ ವ್ಯವಸ್ಥಾಪಕ ಅಶೋಕ ಅಣ್ವೇಕರ್‌.‘ಮುಂಡಗೋಡ ಭಾಗದ ಬಡ ಜನರು ಕೂಲಿ ಕೆಲಸ ಮುಗಿಸಿ ಟೆಂಪೋದಲ್ಲಿ ಬಂದು ಅಕ್ಕಿ ಖರೀದಿಸಿ ಮತ್ತೆ ವಾಹನದಲ್ಲಿ ತಿರುಗಿ ಹೋಗುತ್ತಾರೆ. ಅಕ್ಕಿ ಖರೀದಿಗೆ ಬರುವವರಲ್ಲಿ ಮಹಿಳೆಯರೇ ಹೆಚ್ಚು. ಸಂಜೆ ಹೊತ್ತಿಗೆ ಬಂದಿದ್ದ ಸೀತಮ್ಮಾ ಲಮಾಣಿ ‘ನನ್‌ ಟೆಂಪೋಗೆ ಕೊಟ್ಟ ದುಡ್ಡು ಹಾಳು ಮಾಡಿದ್ರಿ. ಅಕ್ಕಿನೂ ಸಿಕ್ಕಿಲ್ಲ’ ಎಂದು ಗೊಣಗಿಕೊಳ್ಳುತ್ತ ಕಾಲ್ನಡಿಗೆಯಲ್ಲಿ 3ಕಿ.ಮೀ ದೂರದ ತಮ್ಮ ಹಳ್ಳಿಗೆ ವಾಪಸ್ಸಾದರು.6 ಕಿ.ಮೀ ದೂರದ ಬಸಾಪುರದಿಂದ ಬಂದಿದ್ದ ವಿಜಯ್‌ ‘ಅಕ್ಕಿ ಸಿಗದಿದ್ರ ನಮ್ಗೆ ಭಾಳ್‌ ತೊಂದ್ರೆ ಆಗ್ತತಿ, ಮನೇಗ್‌ ನೆಂಟ್ರು ಬಂದಾರ್ ನಾವೇನು ಮಾಡೋದು’ ಎಂದು ಪ್ರಶ್ನಿಸಿದರು. ಗ್ರಾಹಕರ ಗೋಳು ನೋಡಿ ನಾವು ಅಸಹಾಯಕರಾಗಿದ್ದೇವೆ. ಸರ್ಕಾರ ಆದಷ್ಟು ಶೀಘ್ರ ಗಿರಣಿ ಮಾಲೀಕರ ಸಂಘದ ಸಮಸ್ಯೆ ಬಗೆಹರಿಸಬೇಕು’ ಎಂದು ಅವರು ದೂರವಾಣಿಯಲ್ಲಿ ‘ಪ್ರಜಾವಾಣಿ’ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.ಶಿರಸಿಯ ಟಿಎಸ್‌ಎಸ್‌ ರೈಸ್‌ಮಿಲ್‌ ಮಂಗಳವಾರ ಬಾಗಿಲು ತೆರೆದಿದ್ದರೂ ಮಿಲ್ಲಿಂಗ್‌ ಕೆಲಸ ಸ್ಥಗಿತಗೊಳಿಸಿತ್ತು. ‘ವಾಹನದಲ್ಲಿ ಭತ್ತ ತಂದು ಸಂಗ್ರಹಿಸುವ, ಈ ಮೊದಲೇ ಮಾಡಿಟ್ಟಿದ್ದ ಅಕ್ಕಿಯನ್ನು ಮನೆಗೆ ಒಯ್ಯುವ ರೈತರಿಗೆ ತೊಂದರೆ ಆಗಬಾರದೆಂದು ಗಿರಣಿಯ ಬಾಗಿಲು ತೆರೆದಿದ್ದೇವೆ’ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.‘ಸದ್ಯ ಮಾರುಕಟ್ಟೆಯಲ್ಲಿ ಅಕ್ಕಿ ಪೂರೈಕೆಯ ಕೊರತೆಯಾಗಿಲ್ಲ. ಆದರೆ ಇದೇ ಸ್ಥಿತಿ ಇನ್ನೆರಡು ದಿನ ಮುಂದುವರಿದರೆ ಗ್ರಾಹಕರಿಗೆ ಖಂಡಿತ ತೊಂದರೆಯಾಗುತ್ತದೆ’ ಎಂದು ಅಕ್ಕಿ ವ್ಯಾಪಾರಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)