ಭಾನುವಾರ, ಮೇ 16, 2021
26 °C

ಅಕ್ರಮ ಆಸ್ತಿ ಮುಟ್ಟುಗೋಲು; ನಿತೀಶ್ ಹೆಜ್ಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದಲ್ಲಿ ಸಂಚಲನ ಮೂಡಿಸಿರುವ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸದ್ದಿಲ್ಲದೆ ಹೊಸ ಭಾಷ್ಯವೊಂದನ್ನು ಬರೆಯುವ ಮೂಲಕ ತಮ್ಮ ಕಾಣಿಕೆ ಸಲ್ಲಿಸಿದ್ದಾರೆ.ರಾಜ್ಯದ ಯಾವುದೇ ಭ್ರಷ್ಟ ಅಧಿಕಾರಿಗಳು ಇನ್ನು ಮುಂದೆ ಸಿಕ್ಕಿಬಿದ್ದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅದನ್ನು ತಕ್ಷಣವೇ ಸಾರ್ವಜನಿಕ ಉಪಯೋಗಕ್ಕೆ ಮರುಬಳಕೆ ಮಾಡಿಕೊಳ್ಳುವಂತಹ ಕಾನೂನನ್ನು ಜಾರಿಗೆ ತಂದಿರುವ ಅವರು, ಈ ದಿಸೆಯಲ್ಲಿ ಇಡೀ ದೇಶಕ್ಕೆ ಮಾದರಿ ಹಾದಿಯೊಂದನ್ನು ನಿರ್ಮಿಸಿಕೊಡುವ ಉಮೇದಿನಲ್ಲಿದ್ದಾರೆ.2010ರ ನವೆಂಬರ್‌ನಲ್ಲಿ ಬಿಹಾರದಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ನಿತೀಶ್ ಕುಮಾರ್ ಭರವಸೆಯೊಂದನ್ನು ನೀಡಿದ್ದರು. `ಒಂದೊಮ್ಮೆ ಜನರು ನಮ್ಮನ್ನು ಎರಡನೇ ಬಾರಿಗೆ ಮುಖ್ಯಮಂತ್ರಿಯನ್ನಾಗಿ ಆರಿಸಿದ್ದೇ ಆದರೆ, ಭ್ರಷ್ಟ ಅಧಿಕಾರಿಗಳಿಂದ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಅವರಿಗೆ ಸೇರದ ಆಸ್ತಿಗಳನ್ನು, ವಿಶೇಷವಾಗಿ ಅವರ ಕಟ್ಟಡಗಳನ್ನು ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸುತ್ತೇನೆ~ ಎಂದು ಹೇಳಿದ್ದರು.ಒಂದೇ ವರ್ಷದ ಅವಧಿಯೊಳಗೆ ನಿತೀಶ್ ತಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ. ಬಹುಶಃ ದೇಶದಲ್ಲಿ ಇಂತಹುದೊಂದು ಪ್ರಯತ್ನ ಇದೇ ಮೊದಲನೆಯದು ಎಂದು ಕಾಣುತ್ತದೆ.  ಇದಕ್ಕೆ ನಾಂದಿ ಹಾಡುವಂತೆ ನಿತೀಶ್ ಸರ್ಕಾರ, ಹಿರಿಯ ಐಎಎಸ್ ಅಧಿಕಾರಿ ಎಸ್.ಎಸ್.ವರ್ಮಾ ಅವರ ವೈಭವೋಪೇತ ಬಂಗಲೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಅದನ್ನು ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಾಲೆಯನ್ನಾಗಿ ಪರಿವರ್ತಿಸಿದೆ.ರುಕುನ್‌ಪುರದ ಬೈಲೆ ರಸ್ತೆಯಲ್ಲಿರುವ ಈ ಬಂಗಲೆ ಈಗ ಪ್ರಾಥಮಿಕ ವಿದ್ಯಾಮಂದಿರವಾಗಿ ಎಲ್ಲರ ಆಕರ್ಷಣೆಯಾಗಿದೆ. ಮೊನ್ನೆಮೊನ್ನೆಯಷ್ಟೇ ವಿಶ್ವವೆಲ್ಲಾ ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುತ್ತಿದ್ದಾಗ ಇಲ್ಲಿನ ಮಕ್ಕಳು ತಮ್ಮ ಪಾಲಿಗೆ ಸಂದ ಹೊಸ ಕೊಡುಗೆಯಿಂದ ಅಯಾಚಿತ ಸಂಭ್ರಮದಲ್ಲಿದ್ದವು.ಮುಟ್ಟುಗೋಲು ಹಾಕಿಕೊಂಡ ಆರಂಭದಲ್ಲಿ ಈ ಬಂಗಲೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗಕ್ಕೆ ಬಿಟ್ಟುಕೊಡಲಾಗಿತ್ತು. ಕಳೆದ ಮಂಗಳವಾರವಷ್ಟೇ ಸಚಿವ ಸಂಪುಟ ಇದನ್ನು ಹಿಂದುಳಿದ ಮಕ್ಕಳ ಪ್ರಾಥಮಿಕ ವಿದ್ಯಾಮಂದಿರವಾಗಿ ಪರಿವರ್ತಿಸಲು ಒಪ್ಪಿಗೆ ಸೂಚಿಸಿತು.`ಈ ಶಾಲೆಯಲ್ಲಿ ಈಗ ಸರಿ ಸುಮಾರು ಶೇಕಡಾ 70ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳೇ ಕಲಿಯುತ್ತಿದ್ದಾರೆ. ಇವರೆಲ್ಲಾ ತಮ್ಮ ಶಾಲೆ ಇಷ್ಟೊಂದು ಚೆಂದ ಇರಬಲ್ಲದು ಎಂದು ಯಾವತ್ತೂ ಎಣಿಸಿರಲಿಲ್ಲ. 94 ಮಕ್ಕಳು, ಮೂವರು ಶಿಕ್ಷಕರು ಎಲ್ಲರೂ ಸರ್ಕಾರದ ಈ ಕೊಡುಗೆಯಿಂದ ಸಂಭ್ರಮಿಸುತ್ತಿದ್ದಾರೆ~ ಎನ್ನುತ್ತಾರೆ ಇಲ್ಲಿನ ಜಿಲ್ಲಾ ಶಿಕ್ಷಣಾಧಿಕಾರಿ.ಇಂತಹ ಪ್ರಯತ್ನ ಸ್ವತಃ ನಿತೀಶ್ ಅವರಲ್ಲಿ ಸಹಜವಾಗಿಯೇ ಇನ್ನಿಲ್ಲದ ಸಂತೋಷ ಉಕ್ಕಿಸಿದೆ. `ದೇಶದ ಯಾವುದೇ ಮೂಲೆಯಲ್ಲೂ ಸರ್ಕಾರ ಈ ರೀತಿಯ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಮೊದಲಿಗೆ ಇಂತಹ ಯತ್ನದ ಬಗ್ಗೆ ನಾನು ಕೆಲವರೊಂದಿಗೆ ಚರ್ಚಿಸಿದಾಗ ಅವರೆಲ್ಲಾ ಇದು ಯಶಸ್ವಿಯಾಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.ಕೆಲವರಂತೂ ಇದನ್ನು ಚುನಾವಣೆಯ ಗಿಮಿಕ್ ಎಂದೇ ಜರೆದಿದ್ದರು. ಇದು ಆಗದ ಮಾತು ಎಂದು ಹೀಗಳೆದಿದ್ದರು. ಆದರೆ ಇಂದು ಇದು ಸಾಧ್ಯವಾಗಿದೆ~ ಎಂದು ನಿತೀಶ್ ಹೆಮ್ಮೆಯಿಂದ ಹೇಳುತ್ತಾರೆ.ಇದು ಕೇವಲ ಆರಂಭ ಮಾತ್ರ. ಇನ್ನೂ ಸಾಕಷ್ಟು ಭ್ರಷ್ಟ ಅಧಿಕಾರಿಗಳು ಜಾಗೃತ ದಳದ ಪಟ್ಟಿಯಲ್ಲಿದ್ದಾರೆ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ. ಎಲ್ಲ ಭ್ರಷ್ಟ ಅಧಿಕಾರಿಗಳಿಗೂ ಇದೇ ಗತಿ ಕಾಣಿಸಲು ಅವರು ಸಂಕಲ್ಪ ತೊಟ್ಟಿದ್ದಾರೆ.`ಸರ್ಕಾರ ಈಗಾಗಲೇ ಇಂತಹ ಪ್ರಯತ್ನಗಳನ್ನು ಮುಂದುವರೆಸಿದೆ. ಈ ಪ್ರಯತ್ನ ಸಾಮಾಜಿಕ ಬದಲಾವಣೆಗೆ ಹೊಸ ಹಾದಿ ನಿರ್ಮಿಸಬಲ್ಲದು~ ಎಂದೇ ನಿತೀಶ್ ಎಣಿಸಿದ್ದಾರೆ.

 

ಬಡ ಮತ್ತು ಅವಕಾಶವಂಚಿತ ವಿದ್ಯಾರ್ಥಿಗಳಿಗೆ ನಿಜಕ್ಕೂ ಇದೊಂದು ಉತ್ತಮ ಅವಕಾಶವಾಗಬಲ್ಲದು. ಸರ್ಕಾರ ಇಂತಹ ಬಂಗಲೆಗಳನ್ನು ವಶಕ್ಕೆ ಪಡೆದ ಬಳಿಕ ಅವು ಪಾಳು ಬೀಳಲು ಬಿಡದೆ ಅವುಗಳಲ್ಲಿ ಬಡ ಮಕ್ಕಳು ಕುಳಿತು ಕಲಿಯುವಂತಾಗಲಿ ಎಂಬ ಅವರ ದೂರಾಲೋಚನೆ ಈಗ ಭ್ರಷ್ಟಾಚಾರ ವಿರೋಧಿ ಆಂದೋಲನಗಳ ಕಣ್ತೆರೆಸುವಂತಿದೆ.ಎಸ್.ಎಸ್.ವರ್ಮಾ ಹಿರಿಯ ಐಎಎಸ್ ಅಧಿಕಾರಿ. ರಾಜ್ಯದ ಸಣ್ಣ ನೀರಾವರಿ ಇಲಾಖೆಯಲ್ಲಿ ಆಯುಕ್ತ ಹಾಗೂ ಕಾರ್ಯದರ್ಶಿಯಾಗಿದ್ದವರು. ಇವರ ಮೇಲೆ ಭ್ರಷ್ಟತೆಯ ಆರೋಪ ಬಂದಾಗ ಅದನ್ನು ತನಿಖೆ ನಡೆಸಿದ ಜಾಗೃತ ದಳ ಇವರ ಭ್ರಷ್ಟ ಸಂಪಾದನೆಯನ್ನೆಲ್ಲಾ ಮುಟ್ಟುಗೋಲು ಹಾಕಿಕೊಂಡಿತು.ಈ ವೇಳೆ ಇವರ ಎರಡು ಅಂತಸ್ತಿನ ಬಂಗಲೆಯನ್ನು ವಶಪಡಿಸಿಕೊಳ್ಳಲಾಯಿತು. 2007ರಲ್ಲಿ ಜಾಗೃತ ದಳ ವರ್ಮಾ ಅವರ ಮನೆಯನ್ನು ಜಫ್ತಿ ಮಾಡಿದಾಗ ಆ ಮನೆಯಲ್ಲಿ ಭಾರಿ ಪ್ರಮಾಣದ ಆಸ್ತಿ ದೊರೆಯಿತು (ಕರ್ನಾಟಕದಲ್ಲಿನ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಗಮನಿಸಿದಾಗ ಈ ಮೊತ್ತ ನಗಣ್ಯ ಎನಿಸಬಹುದು). 16.50 ಲಕ್ಷ ನಗದು, 500 ಅಮೆರಿಕನ್ ಡಾಲರ್ ನಾಲ್ಕು ಲಕ್ಷ ಮೌಲ್ಯದ ಆಭರಣ ದೊರೆತಿದ್ದವು. 20 ಲಕ್ಷ ರೂಪಾಯಿಗಳನ್ನು ಬೇರೆ ಬೇರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಯನ್ನಾಗಿ ಮಾಡಲಾಗಿದ್ದ ದಾಖಲೆಗಳೂ ಸಿಕ್ಕಿದ್ದವು. ಎರಡು ಬ್ಯಾಂಕಿನ ಲಾಕರ್‌ಗಳಲ್ಲಿ ಒಂಬತ್ತು ಕೆ.ಜಿ. ಬಂಗಾರ, ಒಂದು ಕೆ.ಜಿ. ಬೆಳ್ಳಿ, 2.58 ಲಕ್ಷ ನಗದು ಇತ್ತು. ಇವುಗಳಲ್ಲದೆ ಪಟ್ನಾದ ಅಲಹಾಬಾದ್ ಬ್ಯಾಂಕಿನಲ್ಲಿ ಒಂದು ಕೆ.ಜಿ. ತೂಕದ ಬಂಗಾರದ ಗಟ್ಟಿ, 800 ಚಿನ್ನದ ನಾಣ್ಯಗಳೂ ಗುಡ್ಡೆಯಾಗಿ ಬಿದ್ದಿದ್ದವು.

 

ಒಟ್ಟಾರೆ ಇವೆಲ್ಲವುಗಳ ಮೌಲ್ಯ 1.25ಕೋಟಿ ಇತ್ತು. ಹೀಗಾಗಿ 68 ಲಕ್ಷ ರೂಪಾಯಿಗಳು ವರ್ಮಾ ಅವರ ಖಾತೆಯಲ್ಲಿ ಅಕ್ರಮ ಸಂಪತ್ತು ಇದೆ ಎಂಬುದನ್ನು ಪತ್ತೆಹಚ್ಚಲಾಗಿತ್ತು. ಜಾಗೃತ ದಳ ಇವರ ವಿರುದ್ಧ ಕೇಸು ದಾಖಲಿಸಿತು. ಆದರೆ ವರ್ಮಾ ಕೋರ್ಟಿಗೆ ಹೋಗಿ ತಕ್ಷಣಕ್ಕೇ ತಮ್ಮ ಮೇಲಿನ ಆಪಾದನೆಗಳಿಗೆ ಒಂದಷ್ಟು ಉಸಿರಾಡಲು ಅವಕಾಶ ಪಡೆದಿದ್ದರು. ಈಗ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ.ಈ ಬಗ್ಗೆ ನಿತೀಶ್ ಕುಮಾರ್ ಸರ್ಕಾರ ಸ್ವಲ್ಪ ಗಂಭೀರವಾಗಿ ಆಲೋಚಿಸಿತು. ಪ್ರಸ್ತುತ ಜಾರಿಯಲ್ಲಿರುವ ಕಾನೂನು ಈ ಭ್ರಷ್ಟ ಅಧಿಕಾರಿಗಳನ್ನು ಬಗ್ಗಬಡಿಯಲು ಸಾಲದು ಎಂಬುದನ್ನು ಮನಗಂಡಿತು. ಅದಕ್ಕಾಗಿಯೇ ಒಂದೇ ವರ್ಷದಲ್ಲಿ ಹೊಸ ಕಾನೂನು ಜಾರಿಗೆ ತರಲು ನಿರ್ಧರಿಸಿತು. ಇರುವ ಕಾನೂನಿಗೇ ಹೆಚ್ಚಿನ ಅಧಿಕಾರ ನೀಡುವ ಮೂಲಕ ಹಳೆ ಕಾನೂನಿನಲ್ಲಿನ ದೌರ್ಬಲ್ಯವನ್ನು ಸರಿಪಡಿಸಲು ಮುಂದಾಯಿತು. ರಾಜ್ಯದಲ್ಲಿನ ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕುವ ವಿಶೇಷ ನ್ಯಾಯಾಲಯ ಕಾಯ್ದೆಯ ಮೂಲಕ ಇದಕ್ಕೆ ಹೊಸ ಶಕ್ತಿ ತುಂಬಲಾಯಿತು.ಇದರ ಅನುಸಾರ ವಿಚಾರಣೆಯ ನಡುವೆಯೇ ಭ್ರಷ್ಟರ ಮುಟ್ಟುಗೋಲು ಹಾಕಿಕೊಂಡ ಆಸ್ತಿಯ ಕುರಿತಂತೆ ಸರ್ಕಾರ ತನ್ನ ವಿವೇಚನಾಧಿಕಾರ ಬಳಸಿಕೊಳ್ಳಲು ಮುಕ್ತ ಅವಕಾಶ ಪಡೆಯಿತು.ಮೊದಲಿಗೆ ಜಾಗೃತ ದಳದ ಕೈಗೆ ಬಲಿ ಬೀಳುತ್ತಿದ್ದ ಇಂತಹ ಅಧಿಕಾರಿಗಳನ್ನು ತಕ್ಷಣಕ್ಕೆ ಅಮಾನತು ಮಾಡಬಹುದಾಗಿತ್ತು. ಆದರೆ ಈ ಹಣವಂತ ಕುಳಗಳು ಕಾನೂನಿನ ಕುಣಿಕೆಗಳಿಂದ ಹೇಗಾದರೂ ನುಣುಚಿಕೊಳ್ಳುತ್ತಿದ್ದರು. ಕೋರ್ಟ್‌ಗಳಲ್ಲಿ ತಾವು ನಿರ್ದೋಷಿಗಳು ಎಂಬುದನ್ನು ಸಾಬೀತುಪಡಿಸಲು ಎಷ್ಟು ಬೇಕಾದರೂ ಹಣ ಚೆಲ್ಲಿ ಯಶಸ್ವಿಯಾಗಿ ಬಿಡುತ್ತಿದ್ದರು.ಆದರೆ ಈಗ ಈ ಪರಿಸ್ಥಿತಿ ಬದಲಾಗಿದೆ. ಸರ್ಕಾರದ ಹೊಸ ಕಾನೂನಿನಿಂದಾಗಿ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಲು ಸರ್ಕಾರ ಸುಲಭ ಮಾರ್ಗ ಕಂಡುಕೊಂಡಿದೆ. ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ಮುಟ್ಟುಗೋಲು ಹಾಕಿಕೊಂಡ ಆಸ್ತಿಯನ್ನು ಬಳಸಿಕೊಳ್ಳಲು ಈ ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಿಕೊಳ್ಳಲಾಗಿದೆ.ಈ ಸಂಬಂಧದ ಹೊಸ ಮಸೂದೆಯನ್ನು 2009ರಲ್ಲಿ ಬಿಹಾರ ವಿಧಾನಸಭೆ ಅಂಗೀಕರಿಸಿತು. ಇದರಲ್ಲಿನ ಕಾನೂನು ಕೇಂದ್ರ ಸರ್ಕಾರಿ ನೌಕರರಿಗೂ ಅನ್ವಯವಾಗಬೇಕೆಂಬುದು ನಿತೀಶ್ ಸರ್ಕಾರದ ಬಯಕೆ. ಅದಕ್ಕೆಂದೇ ಈ ಮಸೂದೆಯ ಅಡಿ ಕೇಂದ್ರ ಸರ್ಕಾರಿ ನೌಕರರನ್ನೂ ಒಳಪಡಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಎಂಟು ತಿಂಗಳಿನಿಂದ ಈ ಮನವಿಯನ್ನು ಹಾಗೇ ಇರಿಸಿಕೊಂಡಿದೆ. ಬೇಗನೆ ಈ ಬಗ್ಗೆ ಗಮನಹರಿಸಿ ಎಂಬ ರಾಜ್ಯ ಸರ್ಕಾರದ ಕೂಗಿಗೆ ಅದು ಇನ್ನೂ ಕಿವಿಗೊಟ್ಟಿಲ್ಲ.ಭ್ರಷ್ಟತೆಯ ವಿರುದ್ಧದ ಪ್ರಕರಣಗಳನ್ನು ಬಗೆಹರಿಸುವ ನಿಟ್ಟಿನಲ್ಲಿ 2009ರಲ್ಲಿ ಅಸ್ತಿತ್ವಕ್ಕೆ ಬಂದ ಬಿಹಾರ ವಿಶೇಷ ನ್ಯಾಯಾಲಯ ಕಾಯ್ದೆಯ ಮೊದಲ ಆಹುತಿ ವರ್ಮಾ.

ವರ್ಮಾ ಜಾಗೃತದಳದ ಕೈಗೆ ಸಿಕ್ಕಿಬಿದ್ದಾಗ ಅದನ್ನು ಕೋರ್ಟಿನಲ್ಲಿ ಪ್ರಶ್ನಿಸಿದರು.ಮುಟ್ಟುಗೋಲು ಹಾಕಿಕೊಂಡ ತಮ್ಮ ಆಸ್ತಿಯನ್ನು ಬಳಸಿಕೊಳ್ಳದಂತೆ ಪರಿಪರಿಯಾಗಿ ಮನವಿ ಮಾಡಿದರು. ಆದರೆ ಕೋರ್ಟ್ ಇದನ್ನು ಮಾನ್ಯ ಮಾಡಲಿಲ್ಲ. ಹೀಗಾಗಿ ಈ ಹೊಸ ಮಸೂದೆ ಮತ್ತು ಕೋರ್ಟಿನ ಗಟ್ಟಿ ನಿಲುವು ಭ್ರಷ್ಟರ ಪಾಲಿಗೆ ಸ್ಪಷ್ಟ ಸಂದೇಶವೊಂದನ್ನು ರವಾನಿಸಿದೆ.

 

ಇನ್ನು ಮುಂದೆ ನಿಮ್ಮ ಆಸ್ತಿಯನ್ನು ಸರ್ಕಾರ ಮುಲಾಜಿಲ್ಲದೆ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ಬಳಸಿಕೊಂಡು ಅದನ್ನು ಸಾರ್ವಜನಿಕ ಉಪಯೋಗಕ್ಕೆ ಮೀಸಲಿಡುತ್ತದೆ ಎಂಬ ಸೂಚ್ಯ ಸಂಕೇತವನ್ನು ಸಾರಿದೆ.ಬಹುಶಃ ಭ್ರಷ್ಟಾಚಾರದ ವಿರುದ್ಧದ ನಿತೀಶ್ ಅವರ ಈ ಶಂಖನಾದ ಅಣ್ಣಾ ಅವರ ರಣಕಹಳೆಗಿಂತಲೂ ಹೆಚ್ಚು ತೀಕ್ಷ್ಣವಾಗಿದೆ ಎಂದೆನಿಸುತ್ತದೆ.(ಲೇಖಕರು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪಟ್ನಾ ವರದಿಗಾರರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.