ಶನಿವಾರ, ಮೇ 21, 2022
27 °C

ಅಕ್ರಮ ಏರೋಲೈಟ್; ಉದ್ಯಮಿಗಳಿಗೆ ಟೈಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಇಳಕಲ್ ಹಾಗೂ ಸುತ್ತಮುತ್ತಲಿರುವ ಗ್ರಾನೈಟ್ ಕಟಿಂಗ್ ಹಾಗೂ ಪಾಲಿಶಿಂಗ್ ಘಟಕಗಳಲ್ಲಿ ಅಕ್ರಮವಾಗಿ ಏರೋಲೈಟ್ ಬಳಕೆ ಮಾಡುತ್ತಿರುವ ಆರೋಪ ಎದುರಿಸುತ್ತಿರುವ 14 ಘಟಕಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ಮಾಲಿನ್ಯ ನಿಯಂತ್ರಣ ಮಂಡಳಿ ಮುಂದಾಗಿದೆ.ನೀರು ಆಧಾರಿತ ಕಟಿಂಗ್ ಮತ್ತು ಪಾಲಿಶಿಂಗ್ ಯಂತ್ರ ಬಳಕೆಗೆ ಅನುಮತಿ ಪಡೆದುಕೊಂಡಿದ್ದ ಅನೇಕ ಗ್ರಾನೈಟ್ ಉದ್ಯಮಿಗಳು ಹೆಚ್ಚಿನ ಲಾಭದಾಸೆಗೆ ಅಕ್ರಮವಾಗಿ ಏರೋಲೈಟ್ ಬಳಸುವ ಮೂಲಕ ಪರಿಸರ ಮಾಲಿನ್ಯ ಮಾಡುತ್ತಿದ್ದರು ಎನ್ನಲಾಗಿದೆ.ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಈ ಘಟಕಗಳು ಹೊರಸೂಸುವ ತ್ಯಾಜ್ಯ ಸುತ್ತಮುತ್ತಲಿನ  ಹಳ್ಳ-ಕೊಳ್ಳಗಳಿಗೆ ಸೇರಿಕೊಂಡು ಜಲ ಹಾಗೂ ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಥಳೀಯ ಜನರು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಿದ್ದರು.ಈ ದೂರಿನ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ ಮಂಡಳಿ ಅಧಿಕಾರಿಗಳು, ಪ್ರಭಾವಿ ಉದ್ಯಮಿಗಳಿಗೆ ಸೇರಿದ ಗ್ರಾನೈಟ್ ಕಟಿಂಗ್ ಹಾಗೂ ಪಾಲಿಶಿಂಗ್ ಘಟಕಗಳು ಅಕ್ರಮವಾಗಿ ಏರೋಲೈಟ್ ಮತ್ತು ಸೀಮೆಎಣ್ಣೆ ಬಳಸುತ್ತಿರುವುದನ್ನು ಪತ್ತೆಹಚ್ಚಿದ್ದರು.ಅಕ್ರಮವಾಗಿ ಏರೋಲೈಟ್ ಬಳಕೆ ಮಾಡುತ್ತಿದ್ದ 14 ಘಟಕಗಳಿಗೆ ಫೆಬ್ರುವರಿ 9, 2011ರಂದು ನೋಟಿಸ್ ನೀಡಿದ್ದ ಮಂಡಳಿಯು ಒಂದು ತಿಂಗಳೊಳಗೆ ಏರೋಲೈಟ್ ಯಂತ್ರ ಬದಲಾಯಿಸಿ ನೀರು ಬಳಕೆಯ ಕಟಿಂಗ್ ಮತ್ತು ಪಾಲಿಶಿಂಗ್ ಯಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿತ್ತು.ಗಡುವು ಮುಕ್ತಾಯ

“ಒಂದು ತಿಂಗಳಿನೊಳಗೆ ಏರೋಲೈಟ್ ಬಳಕೆ ಸಂಪೂರ್ಣ ಬಂದ್ ಮಾಡಬೇಕು ಹಾಗೂ ಪರವಾನಿಗೆ ಪಡೆಯುವಾಗ ತಿಳಿಸಿರುವಂತೆ ನೀರು ಆಧಾರಿತ ಕಟಿಂಗ್ ಮತ್ತು ಪಾಲಿಶಿಂಗ್ ಯಂತ್ರಗಳನ್ನು ಮಾತ್ರ ಬಳಕೆ ಮಾಡಬೇಕು” ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.ಮಾರ್ಚ್ 9ಕ್ಕೆ ನೋಟಿಸ್ ಅವಧಿ ಮುಕ್ತಾಯಗೊಂಡಿದೆ. ಆದರೂ ಏರೋಲೈಟ್ ಬಳಕೆ ಸ್ಥಗಿತಗೊಳಿಸದ 14 ಘಟಕಗಳ ಮಾಲೀಕರು, ‘ಏರೋಲೈಟ್ ಬಳಕೆಯಿಂದ ಮಾತ್ರ ಕಟಿಂಗ್ ಸಾಧ್ಯ. ಆದ್ದರಿಂದ ಅದಕ್ಕೆ ಅನುಮತಿ ನೀಡಬೇಕು’ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕೋರಿಕೆ ಪತ್ರ ಬರೆದಿದ್ದಾರೆ.ಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ರೀತಿ ಪತ್ರ ಬರೆಯುವ ಮೂಲಕ ಅಕ್ರಮವಾಗಿ ಏರೋಲೈಟ್ ಬಳಕೆ ಮಾಡುತ್ತಿರುವುದನ್ನು ಗ್ರಾನೈಟ್ ಉದ್ದಿಮೆದಾರರೇ

ಒಪ್ಪಿಕೊಂಡಂತಾಗಿದೆ. ಆದರೂ ಗ್ರಾನೈಟ್ ಫ್ಯಾಕ್ಟರಿ ಮಾಲೀಕರ ಸಂಘವು ಏರೋಲೈಟ್ ಅಥವಾ ಸೀಮೆ ಎಣ್ಣೆ ಬಳಕೆ ಅಲ್ಲಗಳೆಯುವ ಮೂಲಕ ಗೊಂದಲಮಯ ಹೇಳಿಕೆ ನೀಡಿದೆ.

ಮಂಡಳಿ ಎಚ್ಚರಿಕೆ

ಒಂದು ತಿಂಗಳೊಳಗೆ ಏರೋಲೈಟ್ ಬಳಕೆ ಯಂತ್ರಗಳನ್ನು ಬದಲಾಯಿಸಿ ನೀರು ಆಧಾರಿತ ಕಟಿಂಗ್ ಮತ್ತು ಪಾಲಿಶಿಂಗ್ ಯಂತ್ರಗಳನ್ನು ಅಳವಡಿಸಿಕೊಳ್ಳುವಂತೆ ನೋಟಿಸ್ ನೀಡಲಾಗಿತ್ತು. ಆದರೆ ಇದಕ್ಕೆ ಜಗ್ಗದ ಮಾಲೀಕರು ಏರೋಲೈಟ್ ಬಳಕೆಗೆ ಅನುಮತಿ ನೀಡುವಂತೆ ಕೋರಿ ಮಂಡಳಿಗೆ ಮರುಪತ್ರ ಬರೆದಿದ್ದಾರೆ.“ಗ್ರಾನೈಟ್ ಮಾಲೀಕರು ಏರೋಲೈಟ್ ಬಳಕೆಗೆ ಅನುಮತಿ ಕೋರಿ ಪತ್ರ ಬರದಿರುವುದು ನಾವು ನೀಡಿದ ನೋಟಿಸ್‌ಗೆ ಸೂಕ್ತ ಉತ್ತರವಲ್ಲ. ನೋಟಿಸ್‌ನಲ್ಲಿ ತಿಳಿಸಿರುವಂತೆ ನೀರು ಆಧಾರಿತ ಯಂತ್ರ ಬಳಕೆಗೆ ಕ್ರಮಕೈಗೊಳ್ಳಬೇಕು; ಇಲ್ಲದಿದ್ದರೆ ಏರೋಲೈಟ್ ಬಳಕೆಗೆ ಕೇಂದ್ರ ಕಚೇರಿಯಿಂದ ಅನುಮತಿ ಪಡೆದುಕೊಳ್ಳುವಂತೆ ಗ್ರಾನೈಟ್ ಮಾಲೀಕರಿಗೆ ಪತ್ರದ ಮೂಲಕ ತಿಳಿಸಲಾಗುವುದು” ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ವಿಜಯಕುಮಾರ್ ಕಡಕಬಾವಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.ಈಗಾಗಲೇ ನೋಟಿಸ್ ಪಡೆದುಕೊಂಡಿರುವ ಕಟಿಂಗ್ ಮತ್ತು ಪಾಲಿಶಿಂಗ್ ಘಟಕಗಳ ಮಾಲೀಕರು ಏರೋಲೈಟ್ ಬಳಕೆಗೆ ಅನುಮತಿ ಪಡೆದುಕೊಳ್ಳದೇ ಅಕ್ರಮವಾಗಿ ಘಟಕ ಮುಂದುವರಿಸಿದರೆ ಮೊದಲಿನ ನೋಟಿಸ್ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.ಮೊದಲು ಏರೋಲೈಟ್ ಬಳಕೆ ಬಂದ್ ಮಾಡಬೇಕು; ಅದಾದ ಬಳಿಕ ಪರಿಸರಕ್ಕೆ ಹಾನಿ ಉಂಟಾಗದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮಕೈಗೊಳ್ಳುವ ಭರವಸೆಯೊಂದಿಗೆ ಏರೋಲೈಟ್ ಬಳಕೆಗೆ ಅನುಮತಿ ಕೋರಿ ಹೊಸ ಪ್ರಸ್ತಾವ ಸಲ್ಲಿಸಿದರೆ ಅದನ್ನು ಕೇಂದ್ರ ಕಚೇರಿಗೆ ಕಳಿಸಲಾಗುವುದು ಎಂದು ವಿಜಯಕುಮಾರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.