ಶನಿವಾರ, ಜೂನ್ 19, 2021
26 °C

ಅಕ್ರಮ ಕಲ್ಲು ಗಣಿಗಾರಿಕೆ: ಅಧಿಕಾರಿಗಳಿಗೆ ಹೆಚ್ಚಿದ ಪ್ರಾಣ ಭೀತಿ

ಪ್ರಜಾವಾಣಿ ವಾರ್ತೆ / ಎಸ್. ಸಂಪತ್ Updated:

ಅಕ್ಷರ ಗಾತ್ರ : | |

ಅಕ್ರಮ ಕಲ್ಲು ಗಣಿಗಾರಿಕೆ: ಅಧಿಕಾರಿಗಳಿಗೆ ಹೆಚ್ಚಿದ ಪ್ರಾಣ ಭೀತಿ

ರಾಮನಗರ:  ಅಕ್ರಮ ಮರಳು ಮತ್ತು ಕಲ್ಲು ಗಣಿಗಾರಿಕೆಯಿಂದ ತತ್ತರಿಸಿರುವ ರಾಮನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಕರ್ತವ್ಯ ನಿರತ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸೂಕ್ತ ರಕ್ಷಣೆ ದೊರೆಯದ ಕಾರಣ ನೌಕರರು ಮತ್ತು ಅಧಿಕಾರಿ ವರ್ಗದಲ್ಲಿ ಪ್ರಾಣ ಭಯದ ವಾತಾವರಣ ನಿರ್ಮಾಣವಾಗಿದೆ.

ರಾಮನಗರ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದ್ದರೂ ಅಕ್ರಮ ಮರಳುಗಾರಿಕೆ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಅಮೂಲ್ಯವಾದ ಗ್ರಾನೈಟ್ ಶಿಲೆಗಳಿದ್ದು ಅಕ್ರಮ ಕಲ್ಲುಗಣಿಗಾರಿಕೆ  (ಕ್ವಾರಿ) ಮತ್ತು `ಕ್ರಷರ್~ ದಂಧೆಯೂ ಎಗ್ಗಿಲ್ಲದೆ ನಡೆಯುತ್ತಿದೆ.

ಹಲ್ಲೆ ಪ್ರಕರಣಗಳು:  ಮಾರ್ಚ್ 2ರಂದು ಕನಕಪುರದಲ್ಲಿ ಅಕ್ರಮ ಗ್ರಾನೈಟ್ ಸಾಗಣೆ ತಡೆಯಲು ಮುಂದಾದ ಮೂವರು ಅರಣ್ಯ ಇಲಾಖೆ ಸಿಬ್ಬಂದಿಯ ಮೇಲೆ ದುಷ್ಕರ್ಮಿಗಳು ಪ್ರತಿ ದಾಳಿ ನಡೆಸಿ, ಹಲ್ಲೆ ನಡೆಸಿದ್ದರು. ಈ ಸಂಬಂಧ ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ತಾಖತ್ ಸಿಂಗ್ ರಾಣಾವತ್ ದೂರು ದಾಖಲಿಸಿದ್ದಾರೆ.

ಕನಕಪುರದ ಮರಳವಾಡಿ ಹೋಬಳಿಯ ದುರ್ಗೇಗೌಡನ ದೊಡ್ಡಿ ಗ್ರಾಮದ ಸುತ್ತಮುತ್ತ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮತ್ತು ಮರಳು ಫಿಲ್ಟರ್ ಘಟಕಗಳ ಮೇಲೆ ತಹಶೀಲ್ದಾರ್ ಡಾ. ದಾಕ್ಷಾಯಿಣಿ ನೇತೃತ್ವದ ತಂಡ ದಾಳಿ ನಡೆಸಿ, ಫಿಲ್ಟರ್ ಘಟಕಗಳನ್ನು ನಾಶಪಡಿಸಿತ್ತು. ಇದಕ್ಕೆ ಪ್ರತಿಯಾಗಿ ಮರಳು ಮಾಫಿಯಾದ 12 ಜನರು ಇಬ್ಬರು ಗ್ರಾಮ ಲೆಕ್ಕಿಗರ ಮೇಲೆ ಪ್ರತಿದಾಳಿ ನಡೆಸಿದ್ದರು.

ಇತ್ತೀಚೆಗೆ ರಾಮನಗರದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಗಡಿ ತಹಶೀಲ್ದಾರ್ ಎಂ.ಎಸ್.ಎನ್.ಬಾಬು ತಮಗಿರುವ ಪ್ರಾಣಬೆದರಿಕೆ ಬಗ್ಗೆ ಬಹಿರಂಗವಾಗಿಯೇ ವಿವರಿಸಿದ್ದರು. `ಅಕ್ರಮ ಮರಳುಗಾರಿಕೆ ತಡೆಯಲು ಮುಂದಾಗಿದ್ದಕ್ಕೆ ನನಗೆ ಹಲವು ಬಾರಿ ಪ್ರಾಣ ಬೆದರಿಕೆ ಕರೆ ಬಂದಿವೆ. ಒಂದೆರಡು ಬಾರಿ ಮರಳು ಮಾಫಿಯಾದವರಿಂದ ಪ್ರತಿ ದಾಳಿಯೂ ನಡೆದಿದೆ. ಪ್ರಾಣದ ಹಂಗನ್ನೂ ತೊರೆದು ಕೆಲಸ ಮಾಡುತ್ತಿದ್ದೇನೆ~ ಎಂದು ಹೇಳಿದ್ದರು.

ರಾಮನಗರದ ಕೈಲಾಂಚ, ಸುಗ್ಗನಹಳ್ಳಿ ಭಾಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ ತಹಶೀಲ್ದಾರ್ ಡಾ. ರವಿ ತಿರ್ಲಾಪುರ ಸೇರಿದಂತೆ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳ ಮೇಲೆಯೂ ಪ್ರತಿ ದಾಳಿ ನಡೆದಿತ್ತು. ಇಂತಹ ಘಟನೆಗಳು ಜಿಲ್ಲೆಯ ವಿವಿಧೆಡೆ ಮರುಕಳಿಸುತ್ತಿದ್ದು ನೌಕರ ವರ್ಗದಲ್ಲಿ ಜೀವ ಭಯ ಮೂಡಿಸಿದೆ.

ಸೂಕ್ತ ರಕ್ಷಣೆಯಿಲ್ಲ:  ಅಕ್ರಮ ಮರಳುಗಾರಿಕೆ ತಡೆಯಲು ಮುಂದಾಗುವ ಕಂದಾಯ ಇಲಾಖೆ ಅಧಿಕಾರಿಗಳಿಗೆ ಪೊಲೀಸರು ಸೂಕ್ತ ರಕ್ಷಣೆ ನೀಡುತ್ತಿಲ್ಲ. ಅವರ ಸಹಕಾರದ ಕೊರತೆಯಿಂದ ಅಧಿಕಾರಿಗಳ ಮೇಲೆ ಪ್ರತಿದಾಳಿ ನಡೆಯುತ್ತಿದೆ ಎಂದು ತಹಶೀಲ್ದಾರ್ ಡಾ. ದಾಕ್ಷಾಯಿಣಿ ತಮ್ಮ ಅಸಮಾಧಾನ ವ್ಯಕ್ತಪಡಿಸ್ದ್ದಿದಾರೆ. ಪೊಲೀಸರ ಈ ಕಾರ್ಯವೈಖರಿ ಬಗ್ಗೆ ಜಿಲ್ಲಾಧಿಕಾರಿಗೂ ವರದಿ ಸಲ್ಲಿಸಿದ್ದಾರೆ.

ಸಂಯೋಜನೆ ಕೊರತೆ: `ಮರಳು ಮಾಫಿಯಾ ತಡೆಗೆ ಜಿಲ್ಲೆಯಲ್ಲಿ ರಚಿಸಲಾಗಿರುವ ಟಾಸ್ಕ್‌ಫೋರ್ಸ್‌ನಲ್ಲಿ ಸಂಯೋಜನೆಯ ಕೊರತೆ ಇದೆ. ಪ್ರತಿ ಬಾರಿ ಮರಳು ಮಾಫಿಯಾ ಮೇಲೆ ದಾಳಿ ಮಾಡುವುದು ಕೇವಲ ಕಂದಾಯ ಇಲಾಖೆ ಮಾತ್ರ. ಟಾಸ್ಕ್‌ಫೋರ್ಸ್‌ನಲ್ಲಿ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಆರ್‌ಟಿಓ, ಬೆಸ್ಕಾಂ ಮೊದಲಾದ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ~ ಎಂಬುದು ಹೆಸರು ಹೇಳಲಿಚ್ಛಿಸದ ತಹಶೀಲ್ದಾರ್ ಒಬ್ಬರ ಆರೋಪ.  `ಅಕ್ರಮ ಮರಳು ತಡೆಗೆ ಕೇವಲ ಮರಳು ತುಂಬಿದ ಲಾರಿ ಮತ್ತು ಟ್ರ್ಯಾಕ್ಟರ್‌ಗಳನ್ನು ಹಿಡಿದರೆ ಸಾಲದು. ಇಡೀ ಮಾಫಿಯಾದ ಬೇರನ್ನೇ ಕತ್ತರಿಸಬೇಕು. ಮರಳು ತೆಗೆಯುವ ದೋಣಿಗಳು, ಫಿಲ್ಟರ್ ಘಟಕ ನಾಶ ಮಾಡಬೇಕು. ಇದಕ್ಕೆ ಪೂರಕವಾಗಿ ಭದ್ರತೆ ಮತ್ತು ಅಗತ್ಯ ಸಲಕರಣೆಗಳನ್ನು ಟಾಸ್ಕ್‌ಫೋರ್ಸ್‌ಗೆ ಒದಗಿಸಬೇಕು~ ಎಂದು ಪ್ರತಿಕ್ರಿಯಿಸುತ್ತಾರೆ.

ಮರಳು ಮಾಫಿಯಾಕ್ಕೆ ಬೆನ್ನೆಲುಬಾಗಿರುವ ಕೆಲ ಪಟ್ಟಭದ್ರರನ್ನು ನಿರ್ದಾಕ್ಷಿಣ್ಯವಾಗಿ ಬಂಧಿಸಬೇಕು. ಆ ಮೂಲಕ ಮಾಫಿಯಾದ ಬೆನ್ನುಮೂಳೆ ಮುರಿಯಬೇಕು. ಅದರ ಜತೆಗೆ ಮರಳುಗಾರಿಕೆಗೆ ಸಹಕಾರ ನೀಡುವ ಕೃಷಿ ಜಮೀನನ್ನು ಸರ್ಕಾರಿ ಜಮೀನು ಎಂದು ದಾಖಲೆಗಳಲ್ಲಿ ಸೇರಿಸಬೇಕು ಎಂದು ಅವರು ಪ್ರತಿಪಾದಿಸುತ್ತಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ:  `ಜಿಲ್ಲೆಯಲ್ಲಿ ಮರಳು ಮಾಫಿಯಾ ತಡೆಗಟ್ಟಲು ಜಿಲ್ಲಾಡಳಿತ ಬದ್ಧವಾಗಿದೆ. ಟಾಸ್ಕ್‌ಫೋರ್ಸ್ ಕಾರ್ಯಾಚರಣೆಗೆ ಪೊಲೀಸ್, ಆರ್‌ಟಿಓ, ಪಿಡಬ್ಲ್ಯೂಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸ್ಪಂದಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇದರಿಂದ ಕಂದಾಯ ಇಲಾಖೆಯ ಸಿಬ್ಬಂದಿ ಮೇಲೆ ಕೆಲವೆಡೆ ದಾಳಿಗಳಾಗಿವೆ. ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರಿಗೆ ಸೂಚಿಸಿರುವೆ. ಎಲ್ಲ ಇಲಾಖೆಗಳ ಸಹಕಾರ ಮತ್ತು ಸಂಯೋಜನೆ ಇದ್ದರೆ ಮರಳು ಮಾಫಿಯಾವನ್ನು ಜಿಲ್ಲೆಯಲ್ಲಿ ಸುಲಭವಾಗಿ ಮಟ್ಟ ಹಾಕಬಹುದು. ಅಗತ್ಯ ಎಚ್ಚರಿಕೆಯೊಂದಿಗೆ ಕಾರ್ಯಾಚರಣೆ ನಡೆಸುವಂತೆ ಎಲ್ಲ ತಹಶೀಲ್ದಾರ್‌ಗಳಿಗೂ ಸೂಚನೆ ನೀಡಿದ್ದೇನೆ~ ಎಂದು ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.