ಗುರುವಾರ , ಮೇ 13, 2021
24 °C

`ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ನಿವಾರಿಸಿ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ, ನಿಲ್ದಾಣದಲ್ಲೇ ಸಿಟಿಬಸ್ ನಿಲ್ಲಿಸುವಂತೆ ಸೂಚಿಸಿ, ಆಟೋ ರಿಕ್ಷಾದವರ ದಬ್ಬಾಳಿಕೆಗೆ ಕಡಿವಾಣ ಹಾಕಿ, ಅಕ್ರಮ ಮದ್ಯ ಮಾರಾಟ ಮಾಡುವವರನ್ನು ಶಿಕ್ಷಿಸಿ, ರಾತ್ರಿ ವೇಳೆ ಪೊಲೀಸರ ಗಸ್ತು ನಿಯೋಜನೆ ಹೆಚ್ಚು ಮಾಡುವ ಮೂಲಕ ಜಿಲ್ಲೆಯ, ನಗರದ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಿ ಎಂದು ನಾಗರಿಕರು ಆಗ್ರಹಿಸಿದರು.  ನಗರದ ಡಿಎಆರ್ ಸಭಾಂಗಣದಲ್ಲಿ ಭಾನುವಾರ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ನಾಗರೀಕರ ಅವಹಾಲು ಸಭೆಯಲ್ಲಿ ನಾಗರೀಕರು ಇಲಾಖೆಯನ್ನು ಆಗ್ರಹಿಸಿದರು.ನಗರದ ಹಲವೆಡೆ ಟ್ರಾಫಿಕ್ ವ್ಯವಸ್ಥೆ ಹದಗೆಟ್ಟಿದೆ. ಅಪಘಾತಗಳೂ ಹೆಚ್ಚಿವೆ; ಅನೇಕ ಅಮಾಯಕ ಜೀವಗಳು ಬಲಿಯಾಗಿವೆ. ಅನೇಕ ರಸ್ತೆಗಳಲ್ಲಿ ಏಕ ಮುಖ ಸಂಚಾರ ನಿಗಧಿ ಮಾಡಿದ್ದರೂ ಅದು ಪಾಲನೆ ಆಗುತ್ತಿಲ್ಲ.  ಈ ಬಗ್ಗೆ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ತಮ್ಮ ಅವಹಾಲುಗಳನ್ನು ಸಲ್ಲಿಸಿದರು.  ರವೀಂದ್ರನಗರದ ನಾಗರಿಕರು ಮಾತನಾಡಿ, ಬಡಾವಣೆಯಲ್ಲಿ ಮೂರ‌್ನಾಲ್ಕು ಮಹಿಳಾ ಹಾಸ್ಟೆಲ್‌ಗಳಿದ್ದು, ಇಲ್ಲಿ ಕೆಲ ಕಿಡಿಗೇಡಿ ಯುವಕರು ಮಿತಿಮೀರಿದ ವೇಗದಲ್ಲಿ ಬೈಕ್ ಚಲಾಯಿಸುತ್ತಾರೆ. ಬೈಕ್‌ನ ಸೈಲೈನ್ಸರ್ ತೆಗೆದು ವೀಲಿಂಗ್ ಮಾಡುತ್ತಾರೆ. ಇದರಿಂದ ಅಪಘಾತಗಳೂ ಸಂಭವಿಸಿವೆ. ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಭಾಗದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ, ಕಾನೂನು ಕ್ರಮಕೈಗೊಳ್ಳಿ ಎಂದು ಮನವಿ ಮಾಡಿದರು.ನಾಗರಿಕರೊಬ್ಬರು ಮಾತನಾಡಿ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಆಟೊರಿಕ್ಷಾಗಳಿಗೆ ಮೀಟರ್ ಅಳವಡಿಸಲು ತಂದಿದ್ದ ಯೋಜನೆ ನನೆಗುದಿಗೆ ಬಿದ್ದಿದೆ. ಇದರಿಂದ ಅಟೊರಿಕ್ಷಾ ಚಾಲಕರು ಅಕ್ರಮವಾಗಿ ನಾಗರೀಕರಿಂದ ಹಣ ಪಡೆದು ಶೋಷಿಸುತ್ತಿದ್ದಾರೆ ಎಂದು ಆರೋಪಿಸಿದರು.ರೈಲು ನಿಲ್ದಾಣಕ್ಕೆ ನಗರಸಾರಿಗೆ ಬಸ್ ಸಂಚಾರಕ್ಕೆ ತೊಂದರೆ ಉಂಟು ಮಾಡಿರುವ ಆಟೋ ಚಾಲಕರು ಬಸ್ ಸಂಚಾರವನ್ನೆ ನಿಲ್ಲಿಸಿದ್ದಾರೆ. ಇದರಿಂದ ನಾಗರಿಕರಿಗೆ ಮತ್ತಷ್ಟು ತೊಂದರೆ ಆಗುತ್ತಿದೆ. ನಗರಸಾರಿಗೆ ಬಸ್ ಸಂಚಾರವನ್ನು ಪುನಃ ಆರಂಭಿಸಬೇಕು ಎಂದು ಮನವಿ ಮಾಡಿದರು. ಸ್ಥಳೀಯರಾದ ರಮೇಶ್‌ಗೌಡ ಮಾತನಾಡಿ, ಮಿಳಘಟ್ಟ ಹಾಗೂ ರಾಗಿಗುಡ್ಡ ಬಡಾವಣೆಯಲ್ಲಿ ಅನಧಿಕೃತವಾಗಿ ದಿನಸಿ ಅಂಗಡಿಗಳಲ್ಲಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.ಸಂಚಾರ ಪೊಲೀಸರು ಕೆಲಸ ಮಾಡುತ್ತಿಲ್ಲ

ಕೆಲ ವೃತ್ತಗಳಲ್ಲಿ ಕರ್ತವ್ಯದಲ್ಲಿ ಇರುವ ಪೊಲೀಸರು ಸರಿಯಾಗಿ ಕೆಲಸ ಮಾಡುವುದಿಲ್ಲ. ಸಂಚಾರ ನಿಯಮ ಉಲ್ಲಂಘಿಸಿ ವಾಹನಗಳು ಹೋಗುತ್ತಿದ್ದರೂ ತಾವು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುತ್ತಾರೆ ಎಂದು ಹಿರಿಯ ನಾಗರಿಕರೊಬ್ಬರು ಆಪಾದಿಸಿದರು.ರಾತ್ರಿ 11ರ ನಂತರ  ಕೆಲ ಬಾರ್ ತೆಗೆದಿರುತ್ತವೆ ಈ ಬಗ್ಗೆ ಕ್ರಮ ಕೈಗೊಳ್ಳಿ; ಮುಂದಿನ ಸಭೆಗೆ ಆಟೋ ಚಾಲಕ-ಮಾಲೀಕರ ಸಂಘದ, ನಗರಸಾರಿಗೆ ಬಸ್ ಮಾಲೀಕರ ಸಂಘದ ಹಾಗೂ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳನ್ನೂ ಕರೆಸಿ ಎಂದು ಮನವಿ ಮಾಡಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ದಯಾಳು ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.