ಮಂಗಳವಾರ, ಏಪ್ರಿಲ್ 13, 2021
32 °C

ಅಕ್ರಮ ಮದ್ಯ ಮಾರಾಟ: ಗ್ರಾಮಸ್ಥರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಗೋಳ: ತಾಲ್ಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟದ ದಂದೆ ನಡೆಯುತ್ತಿದ್ದು ಇದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಭಾನುವಾರ ರಾಸ್ತಾರೋಖೋ ನಡೆಸಿದರು. ಪೊಲೀಸ್ ಠಾಣೆ ಎದುರು ಜಮಾಯಿಸಿದ ಕಮಡೊಳ್ಳಿ ಗ್ರಾಮಸ್ಥರು, ಮೇಲಧಿಕಾರಿಗಳು ಸೂಕ್ತ ಕ್ರಮ ಜರುಗಿಸುವವರೆಗೂ ಕದಲುವುದಿಲ್ಲ ಎಂದು ಹೇಳಿ ಹುಬ್ಬಳ್ಳಿ-ಕುಂದಗೋಳ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟುಮಾಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಣ್ಣ ಜುಟ್ಟಲ, ಕಮಡೊಳ್ಳಿ ಗ್ರಾಮದಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮತ್ತು ಜೂಜಾಟ ನಡೆಯುತ್ತಿದ್ದು ನಿಯಂತ್ರಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಇಮಾಮಸಾಬ್ ಹುಬ್ಬಳ್ಳಿ, ಈರಪ್ಪ ಗಾಳಣ್ಣವರ, ಬಸಪ್ಪ ರೊಟ್ಟಿ, ವಿ.ಜಿ.ಪಾಟೀಲ, ಎ.ಎಚ್. ಅಲ್ಲಿಖಾನ್, ಎಸ್.ಎಮ್. ಹರಕುಣಿ, ಮೌಲಾಸಾಬ್ ಅಲ್ಲಿಖಾನ್ ಮತ್ತಿತರರಿದ್ದರು.ಗುಂಪು ಘರ್ಷಣೆ: ಗಾಯ

ಕುಂದಗೋಳ: ಭಾರತ ವಿಶ್ವಕಪ್ ಟ್ರೋಫಿ ಜಯಿಸಿದ ನಂತರ ವಿಜಯೋತ್ಸವ ಆಚರಿಸುವಾಗ ವಾಗ್ವಾದ ನಡೆದು, ಎರಡು ಗುಂಪುಗಳು ಹೊಡೆದಾಡಿದ ಘಟನೆ ತಾಲ್ಲೂಕಿನ ಯರಗುಪ್ಪಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಕೆಲವರು ಕುಂದಗೋಳ ಸರಕಾರಿ ಆಸ್ಪತ್ರೆಯಲ್ಲಿ ಮತ್ತು ಹೆಚ್ಚಿನ ಪ್ರಮಾಣದ ಗಾಯಕ್ಕೆ ಒಳಗಾದವರು ಹುಬ್ಬಳ್ಳಿ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಗುಂಪುಗಳ ಕಡೆಯಿಂದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಾಲ್ಕು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.ಯರಗುಪ್ಪಿ ಗ್ರಾಮದ ಶರೀಫ್‌ಸಾಬ್ ಗೋಕಾವಿ ಎಂಬುವವರು ರಸ್ತೆಮೇಲೆ ಪಟಾಕಿ ಹಾರಿಸುತ್ತಿದ್ದಂತೆ ಅಲ್ಲಿಯೇ ಇದ್ದ ಯಲ್ಲಪ್ಪ ಮಾಯಣ್ಣವರ ಎಂಬುವವರು ಆಕ್ಷೇಪ ಎತ್ತಿದರು. ಆಗ ಮಾತಿಗೆ ಮಾತು ಬೆಳೆದು ಹೊಡೆದಾಟವಾಯಿತು. ಅಂದೇ ರಾತ್ರಿ ಪೊಲೀಸರು ಎರಡು ಗುಂಪಿನವರನ್ನು ಕರೆಯಿಸಿ ಬುದ್ದಿವಾದ ಹೇಳಿ ಕಳಿಸಿದ್ದರು. ಭಾನುವಾರ ಬೆಳಿಗ್ಗೆ ಪುನಃ ಆರೋಪ-ಪ್ರತ್ಯಾರೋಪ ಮಾಡಿ, ಒಬ್ಬರಿಗೊಬ್ಬರು ಕೈಗೆ ಸಿಕ್ಕ ಸಲಕರಣೆಗಳಿಂದ ಮತ್ತೆ ಹೊಡೆದಾಡಿದರು.ಘಟನೆಯಿಂದ ಯಲ್ಲಪ್ಪ ಮಾಯಣ್ಣವರ ಗುಂಪಿನವರಾದ ಯಲ್ಲಪ್ಪ, ಸವಿತಾ, ಚನ್ನಬಸಪ್ಪ, ಭೀಮಣ್ಣ, ಮಹಾಂತೇಶ, ಮೃತ್ಯುಂಜಯ, ಮಂಜುನಾಥ, ಯಲ್ಲವ್ವ, ಬಸವಣ್ಣೆವ್ವ, ಬಸಪ್ಪ, ಲಲಿತಾ, ಯಲ್ಲಮ್ಮ ಗಾಯಗೊಂಡಿದ್ದಾರೆ. ಶರೀಫ್ ಸಾಬ್ ಗೋಕಾವಿ ಗುಂಪಿನವರಾದ ಹುಸೇನಸಾಬ್, ಇಮಾಮಸಾಬ್, ಸಾಯಬ್ಬಿ ತಹಸೀಲ್ದಾರ, ನಬಿಸಾಬ್ ತಹಸೀಲ್ದಾರ ಗಾಯಗೊಂಡಿದ್ದಾರೆ.ಭೀಮಣ್ಣ, ಮಹಾಂತೇಶ, ಯಲ್ಲಪ್ಪ ಮತ್ತು ಮರ್ತುಜಾ ಗೋಕಾವಿ, ಮಹಾಬೂಬಿ ಗೋಕಾವಿ, ಭೀಮಣ್ಣ ಅಣ್ಣಿಗೇರಿ ಅವರನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಎಸ್.ಪಿ. ಆರ್.ದಿಲೀಪ್ ಮತ್ತು ಡಿ.ವೈ.ಎಸ್.ಪಿ. ಎ.ಬಿ. ಬಸರಿ. ಸಿ.ಪಿ.ಐ. ಡಾ. ಅರುಣಕುಮಾರ ಹಪ್ಪಳಿ ಮತ್ತಿತರರು ಭೇಟಿ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.