ಬುಧವಾರ, ಏಪ್ರಿಲ್ 21, 2021
33 °C

ಅಕ್ರಮ ಮನೆ ಸಕ್ರಮ ಮಸೂದೆ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 1998ರ ಏಪ್ರಿಲ್ 14ರಿಂದ 2012ರ ಜನವರಿವರೆಗೆ ಗ್ರಾಮೀಣ ಭಾಗದ ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸುವ ಉದ್ದೇಶದ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗೆ ವಿಧಾನಮಂಡಲದ ಉಭಯ ಸದನಗಳು ಗುರುವಾರ ಅಂಗೀಕಾರ ನೀಡಿದವು.ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ 18 ಕಿ.ಮೀ., ಮಹಾನಗರ ಪಾಲಿಕೆಗಳ 10 ಕಿ.ಮೀ., ನಗರಸಭೆಗಳ 5 ಕಿ.ಮೀ. ಹಾಗೂ ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯ 3 ಕಿ.ಮೀ. ವ್ಯಾಪ್ತಿಯಲ್ಲಿ ಇರುವಂತಹ ಅಕ್ರಮ ಮನೆಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ತಿದ್ದುಪಡಿ ಮಸೂದೆ ಮಂಡಿಸಿದ ಕಂದಾಯ ಸಚಿವ ಕೆ.ಎಸ್.ಈಶ್ವರಪ್ಪ ಸದನಕ್ಕೆ ತಿಳಿಸಿದರು.ಗ್ರಾಮೀಣ ಪ್ರದೇಶದಲ್ಲಿ 2400 ಚದರ ಅಡಿ ವಿಸ್ತೀರ್ಣದವರೆಗಿನ ಕಟ್ಟಡಗಳನ್ನು ಕೂಡ ಸಕ್ರಮಗೊಳಿಸಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ಹೇಳಿದರು.ಸರ್ಕಾರಿ ಜಾಗದಲ್ಲಿನ ವಾಸದ ಮನೆಗಳು ಸ್ವಾಭಾವಿಕ ಚರಂಡಿ ಅಥವಾ ಕಾಲುವೆಗೆ ಅಡ್ಡವಾದ ದಾರಿಯಲ್ಲಿದ್ದಲ್ಲಿ; ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಪ್ರಾಧಿಕಾರದ ಒಡೆತನ ಅಥವಾ ನಿಯಂತ್ರಣಕ್ಕೆ ಒಳಪಟ್ಟಿದ್ದಲ್ಲಿ; ರಸ್ತೆ, ಹೆದ್ದಾರಿ, ವಿಸ್ತರಣೆಗೆ ಗುರುತಿಸಲಾಗಿರುವ ವರ್ತುಲ ರಸ್ತೆ, ರೈಲು ಮಾರ್ಗ, ಸಮೂಹ ಕ್ಷಿಪ್ರ ಸಾರಿಗೆ ಸಂಪರ್ಕ ಮಾರ್ಗ, ಅರಣ್ಯ, ಉದ್ಯಾನ, ಆಟದ ಮೈದಾನ, ಪಾರಂಪರಿಕ ಸ್ಮಾರಕ, ವಿಮಾನ ನಿಲ್ದಾಣ, ರಕ್ಷಣಾ ವಲಯ, ಹೈಟೆನ್ಷನ್ ವಿದ್ಯುತ್ ಮಾರ್ಗ, ಅರಣ್ಯ ಮತ್ತು ಪರಿಸರ ಸಚಿವಾಲಯ ವ್ಯಾಪ್ತಿಗೆ ಬರುವ ಕರಾವಳಿ ವಲಯ ಪ್ರದೇಶಗಳಲ್ಲಿದ್ದಲ್ಲಿ ಅಂತಹ ಮನೆಗಳನ್ನು ಸಕ್ರಮಗೊಳಿಸಲು ಅವಕಾಶ ಇಲ್ಲ ಎಂದೂ ಈಶ್ವರಪ್ಪ ಸ್ಪಷ್ಟಪಡಿಸಿದರು.ನಗರಕ್ಕೂ ವಿಸ್ತರಿಸಿ: ನಗರ ಪ್ರದೇಶಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮನೆಗಳನ್ನೂ ಸಕ್ರಮಗೊಳಿಸಬೇಕು ಎಂದು ಆಡಳಿತಾರೂಢ ಬಿಜೆಪಿ ಸೇರಿದಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ವಿಧಾನಸಭೆಯಲ್ಲಿ ಆಗ್ರಹಪಡಿಸಿದರು. ಜೆಡಿಎಸ್‌ನ ಎಚ್.ಡಿ.ರೇವಣ್ಣ, ಬಿಜೆಪಿಯ ರಘುಪತಿ ಭಟ್, ಕೃಷ್ಣ ಪಾಲೆಮಾರ್, ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಮತ್ತಿತರರು ನಗರ ಪ್ರದೇಶಕ್ಕೂ ಇದನ್ನು ವಿಸ್ತರಿಸುವಂತೆ ಒತ್ತಾಯಿಸಿದರು.ನಗರ ಪ್ರದೇಶದವರಿಗೆ ಈ ಯೋಜನೆ ವಿಸ್ತರಿಸದೇ ಇದ್ದಲ್ಲಿ ಮಸೂದೆಯನ್ನು ವಿರೋಧಿಸುವುದಾಗಿ ರಘುಪತಿ ಭಟ್ ಮತ್ತು ಕೃಷ್ಣ ಪಾಲೆಮಾರ್ ಒಂದು ಹಂತದಲ್ಲಿ ಎಚ್ಚರಿಕೆ ನೀಡಿದರು. ನಂತರ ಅವರನ್ನು ಆಡಳಿತ ಪಕ್ಷದ ಸದಸ್ಯರೇ ಸಮಾಧಾನಪಡಿಸಿದರು.ಬಳಿಕ ಈಶ್ವರಪ್ಪ ಮಾತನಾಡಿ, `ನಗರ ಪ್ರದೇಶದ ಬಡವರಿಗೂ ಅನುಕೂಲ ಮಾಡಲು ಇದೇ ರೀತಿಯ ಮಸೂದೆಯನ್ನು ಮಂಡಿಸಲಾಗುವುದು~ ಎಂದು ಭರವಸೆ ನೀಡಿದರು. ಬಳಿಕ ಎಲ್ಲರೂ ಅದಕ್ಕೆ ಒಪ್ಪಿಗೆ ನೀಡಿದರು.ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ `ಈ ಮಸೂದೆಯ ವ್ಯಾಪ್ತಿಯನ್ನು ಪಟ್ಟಣ ಪಂಚಾಯಿತಿವರೆಗೂ ವಿಸ್ತರಿಸಿ ಎಂದು ಆಗ್ರಹಪಡಿಸಿದರು. ಪಟ್ಟಣ ಪಂಚಾಯಿತಿಗಳು ಕೂಡ ಗ್ರಾಮಗಳ ಹಾಗೆ ಇರುವುದರಿಂದ ಅಲ್ಲಿ ಅನೇಕ ಬಡವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರಿಗೂ ಅನುಕೂಲವಾಗುವ ಹಾಗೆ ಕಾಯ್ದೆ ತಿದ್ದುಪಡಿ ಮಾಡಿ~ ಎಂದು ಸಲಹೆ ನೀಡಿದರು.ಚುನಾವಣೆಯ ವಾಸನೆ: `ಮಸೂದೆ ಮಂಡನೆಯ ಹಿಂದೆ ಚುನಾವಣೆ ವಾಸನೆ ಕಂಡುಬರುತ್ತಿದೆ. ಸೂರಿಲ್ಲದಂತಹ ಅರ್ಹ ಬಡ ಜನರ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವುದಾದರೆ ಸ್ವಾಗತಿಸುತ್ತೇವೆ. ಆದರೆ, ಉಳ್ಳವರು ಹಾಗೂ ಬಲಾಢ್ಯರ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವುದಕ್ಕೆ ನಮ್ಮ ವಿರೋಧವಿದೆ.ಇದರಿಂದ ಪ್ರಭಾವಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ಜಾಗವನ್ನು ಕಬಳಿಸುವ ಅಪಾಯವಿದೆ~ ಎಂದು ಪರಿಷತ್ತಿನ ವಿರೋಧ ಪಕ್ಷದ ನಾಯಕ ಎಸ್. ಆರ್. ಪಾಟೀಲ್ ಎಚ್ಚರಿಸಿದರು.

`ಬಡವರು, ನಿರ್ಗತಿಕರ ಅಕ್ರಮ ಮನೆ ಗಳನ್ನು ಮಾತ್ರ ಸಕ್ರಮಗೊಳಿಸಲು ಸರ್ಕಾರ ಮುಂದಾಗಬೇಕು. ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡಬಾರದು~ ಎಂದು ಕಾಂಗ್ರೆಸ್‌ನ ಮೋಟಮ್ಮ,        ಜೆಡಿಎಸ್‌ನ ಬಸವರಾಜ ಹೊರಟ್ಟಿ ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.