ಶನಿವಾರ, ಏಪ್ರಿಲ್ 17, 2021
31 °C

ಅಕ್ರಮ ಮರಳುಗಾರಿಕೆ ತಡೆಗೆ ಬ್ರಹ್ಮಾಸ್ತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ತಾಲ್ಲೂಕಿನ ಅರ್ಕಾವತಿ ನದಿ ತೀರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರ್ಕಾವತಿ ನದಿ ತೀರದ ಎರಡೂ ಬದಿಯ ತಲಾ 100 (ಒಟ್ಟು 200) ಮೀಟರ್ ಪ್ರದೇಶದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 2 ತಿಂಗಳ ಕಾಲ ಸೆಕ್ಷನ್ 144ರ ಪ್ರಕಾರ ನಿಷೇಧಾಜ್ಞೆ  ಜಾರಿಗೊಳಿಸಲಾಗಿದೆ.ಈ ಕುರಿತು ವಿವರಿಸಿದ ತಹಸೀಲ್ದಾರ್ ಡಾ. ರವಿ ತಿರ್ಲಾಪುರ ಅವರು, ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳು ಮಾಫಿಯಾ ತಡೆಗೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಕಾರ್ಯಪಡೆ ಹಲವು ಬಾರಿ ಕಾರ್ಯಾಚರಣೆ ನಡೆಸಿದ್ದರೂ, ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಕೆಲ ವೇಳೆ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಕಾರ್ಯಾಚರಣೆಗಳೇ ವಿಫಲವಾಗುತ್ತಿದ್ದವು.ಇದಕ್ಕಾಗಿ ನಿಷೇಧಾಜ್ಞೆ ಜಾರಿಗೊಳಿಸಲು ಜಿಲ್ಲಾಧಿಕಾರಿ ಅನುಮತಿ ಕೇಳಿದ್ದೆ. ಅವರು ಅನುಮತಿ ನೀಡಿದ ಕೂಡಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. `ನಿಷೇಧಾಜ್ಞೆ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ರಾಮನಗರ ಗ್ರಾಮಾಂತರ ಪೊಲೀಸರಿಗೆ ನೀಡಲಾಗಿದೆ. ಈ ಸಂಬಂಧ ಈಗಾಗಲೇ ಎರಡು ಮೀಸಲು ತುಕಡಿ ನಿಷೇಧಾಜ್ಞೆ ಜಾರಿಯಿರುವ ಗ್ರಾಮಗಳಲ್ಲಿ ಬೀಡು ಬಿಟ್ಟಿವೆ~ ಎಂದು ಅವರು ವಿವರಿಸಿದರು.ತಾಲ್ಲೂಕು ವ್ಯಾಪ್ತಿಯಲ್ಲಿ ಅರ್ಕಾವತಿ ನದಿ ತೀರ ಹೊಂದಿರುವ 25 ಗ್ರಾಮಗಳ ಬಳಿ ಈ ನಿಷೇಧಾಜ್ಞೆ ಜಾರಿಯಿರುತ್ತದೆ. ಉಲ್ಲಂಘಿಸಿದವರಿಗೆ ವಿವಿಧ ಬಗೆಯ ಪ್ರಕರಣಗಳಲ್ಲಿ ಬಂಧಿಸಲಾಗುತ್ತದೆ~ ಎಂದು ಅವರು `ಪ್ರಜಾವಾಣಿ~ ಗೆ  ಮಾಹಿತಿ ನೀಡಿದರು.

ಘಟಕಗಳ ಮೇಲೆ ದಾಳಿ

ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ, ಹರೀಸಂದ್ರದಲ್ಲಿನ ಅಕ್ರಮ ಮರಳು ದಂಧೆ ಘಟಕಗಳ ಮೇಲೆ ಬುಧವಾರ ಕಾರ್ಯಾಚರಣೆ ನಡೆಸಲಾಗಿದೆ.ತಹಸೀಲ್ದಾರ್ ಡಾ. ರವಿ ತಿರ್ಲಾಪುರ ನೇತೃತ್ವದ ಕಾರ್ಯಪಡೆಯು  ಸುಮಾರು 132 ಲೋಡ್ ಮರಳು, ಮೂರು ದೋಣಿಗಳು, 400 ಮೀಟರ್ ಉದ್ದದ ಪೈಪ್‌ಲೈನ್ ಮತ್ತಿತರ ಪದಾರ್ಥಗಳು ಸೇರಿದಂತೆ ಅಂದಾಜು 41 ಲಕ್ಷ ರೂಪಾಯಿಯಷ್ಟು ಮೊತ್ತದ ವಸ್ತುಗಳನ್ನು ನಾಶಪಡಿಸಿದೆ. ಜತೆಗೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಅವರು ಕಾರ್ಯಾಚರಣೆ ವೀಕ್ಷಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.