ಸೋಮವಾರ, ಜನವರಿ 20, 2020
29 °C

ಅಕ್ರಮ ಮರಳು ತಡೆಗೆ ಶೀಘ್ರ ಸಭೆ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಇಡೀ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧ ಜಾರಿಯಲ್ಲಿದೆ. ಆದರೂ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ಶೀಘ್ರದಲ್ಲಿಯೇ ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ತಿಳಿಸಿದರು.ತಾಲ್ಲೂಕು ಬಿಜೆಪಿ ಘಟಕ ನಗರದ ಕನ್ನಿಕಾ ಮಹಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 150ನೇ ಜಯಂತಿ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಅರ್ಕಾವತಿ ನದಿ ತೀರವಾದ ಕಾರಣ ಜಿಲ್ಲೆಯಲ್ಲಿ ಮರಳುಗಾರಿಕೆ ನಿಷೇಧಿಸಲಾಗಿದೆ. ಕುಡಿಯುವ ನೀರು ಮತ್ತು ಅಂತರ್ಜಲ ಸಂರಕ್ಷಣೆಯ ಉದ್ದೇಶದಿಂದ ಸರ್ಕಾರ ಕೆಲ ವರ್ಷಗಳ ಹಿಂದೆಯೇ ಈ ಭಾಗದಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಕೆಲವು ಸುತ್ತೋಲೆಗಳನ್ನು ಹೊರಡಿಸಿದೆ. ಆದರೂ ಜಿಲ್ಲೆಯ ಕೆಲ ಭಾಗಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿರುವ ಕುರಿತು ದೂರುಗಳು ಬಂದಿವೆ. ಅದಕ್ಕೆ ಕಡಿವಾಣ ಹಾಕಿ ನೈಸರ್ಗಿಕ ಸಂಪತ್ತು ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.ಚನ್ನಪಟ್ಟಣ ಭಾಗದಲ್ಲಿ ಅಕ್ರಮ ಮರಳುಗಾರಿಕೆ ತಡೆಗಟ್ಟಲು ಹಲವು ಹೋರಾಟಗಳನ್ನು ಮಾಡಿರುವ ನನಗೆ ಪರಿಸರದ ಮೇಲೆ ಅಪಾರ ಕಾಳಜಿ ಇದೆ. ಹೀಗಿರುವಾಗ ರಾಮನಗರದ ಶಾಸಕರು ವಿನಾಕಾರಣ ನನ್ನ ಮೇಲೆ ಮಾಡಿರುವ ಆರೋಪ ಸರಿಯಲ್ಲ. ಅವರು ಮುಂದೆ ನಿಂತು ರಾಮನಗರ ತಾಲ್ಲೂಕಿನಲ್ಲಿ ಮರಳುಗಾರಿಕೆ ತಡೆಯಲು ಮುಂದಾಗಬೇಕು. ಇಲ್ಲಿನ ಪರಿಸರ ರಕ್ಷಣೆಯ ಜವಾಬ್ದಾರಿ ಅವರ ಮೇಲೂ ಇದೆ ಎಂದು ಅವರು ಪ್ರತಿಕ್ರಿಯಿಸಿದರು.ಆನೆಗೆ ಪ್ರಚೋದನೆ ಸಲ್ಲ: ಸುಮಾರು 30ರಿಂದ 40 ವರ್ಷಗಳಿಗೆ ಒಮ್ಮೆ ಬಿದಿರು ಹೂವಾಗುತ್ತವೆ. ಆಗ ಆನೆಗಳಿಗೆ ಕಾಡಿನಲ್ಲಿ ಅಗತ್ಯವಿರುವಷ್ಟು ಆಹಾರ ದೊರೆಯುತ್ತದೆ. ಆದರೆ ಈಗ ಬಿದಿರು ಅಷ್ಟಾಗಿ ಇಲ್ಲದಿರುವ ಕಾರಣ ಆಹಾರಕ್ಕಾಗಿ ಆನೆಗಳು ಕಾಡಿನಿಂದ ಹೊರ ಬರುತ್ತಿವೆ ಎಂದು ಸಚಿವ ಯೋಗೀಶ್ವರ್ ಉತ್ತರಿಸಿದರು.ನಾಡಿಗೆ ನುಗ್ಗುತ್ತಿರುವ ಆನೆಗಳನ್ನು ಕಾಡಿನಲ್ಲಿಯೇ ಇರುವಂತೆ ಮಾಡಲು ಕೈಗೊಳ್ಳಬೇಕಿರುವ ಅಗತ್ಯ ಕ್ರಮಗಳ ಕುರಿತು ಇದೇ 21ರಂದು ಪರಿಣಿತರ ಜತೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಅಲ್ಲಿ ನಡೆಯುವ ಚರ್ಚೆ, ಸಂವಾದ, ಸಲಹೆಗಳ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಪ್ರತಿಕ್ರಿಯಿಸಿ (+)