ಭಾನುವಾರ, ಏಪ್ರಿಲ್ 18, 2021
30 °C

ಅಕ್ರಮ ಮರಳು ದಂಧೆ ಪರಿಸರಕ್ಕೆ ಮಾರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಕ್ರಮ ಮರಳು ದಂಧೆ ಪರಿಸರಕ್ಕೆ ಮಾರಕ

ಬೆಂಗಳೂರು:  `ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿ ದಂಧೆಗಿಂತಲೂ ಹತ್ತುಪಟ್ಟು ದೊಡ್ಡದಾದ ಹಗರಣವೆಂದರೆ ಮರಳುದಂಧೆ. ಇದನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದರೆ ಪರಿಸರ ಸಂರಕ್ಷಿಸಲಾಗದು.

ಹಾಗಾಗಿ ಮರಳು ದಂಧೆಯನ್ನು ನಿಯಂತ್ರಿಸುವ ಬಗ್ಗೆ ಕಟ್ಟುನಿಟ್ಟಿನ ನಿಯಮವೊಂದನ್ನು ರೂಪಿಸಬೇಕು~ ಎಂದು ಸ್ಪಟಿಕಪುರಿ ಮಹಾಸಂಸ್ಥಾನದ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದರು.



ಭಾರತ ಯುವ ಕೇಂದ್ರವು ನಗರದ ಪುರಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣಾ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.



`ನಗರದಲ್ಲಿ ನೂರಾರು ಕೆರೆಗಳನ್ನು ನಿರ್ಮಿಸಿದ ಕೆಂಪೇಗೌಡರು ನೀರಿನ ಮಹತ್ವವನ್ನು ಅರಿತಿದ್ದರು. ಆದರೆ ಪ್ರಸ್ತುತ ಕೆರೆ ರಕ್ಷಿಸಬೇಕಾದ ಮಂದಿಯೇ ಕೆರೆಯನ್ನು ಭಕ್ಷಿಸುತ್ತಿದ್ದಾರೆ. ಅಸ್ತಿತ್ವದಲ್ಲಿರುವ ನೂರು ಕೆರೆಗಳ ರಕ್ಷಣೆಯೊಂದಿಗೆ ಒಂದು ಕೆರೆಯನ್ನು ನಿರ್ಮಾಣ ಮಾಡುವತ್ತ ಸರ್ಕಾರ ಯೋಜನೆ ಹಾಕಿಕೊಳ್ಳಬೇಕು~ ಎಂದು ಸಲಹೆ ನೀಡಿದರು. `ನೀರಿನ ಮೂಲಗಳೇ ಕಡಿಮೆ ಸಂಖ್ಯೆಯಲ್ಲಿರುವ ರಾಜಸ್ಥಾನದ ಭೂಮಿಯಲ್ಲಿ ಒಡ್ಡುಗಳನ್ನು ನಿರ್ಮಿಸುವ ಮೂಲಕ ಅಲ್ಲಿನ ಸ್ವಯಸೇವಾ ಸಂಸ್ಥೆಗಳು ಜಲಕ್ರಾಂತಿಗೆ ಮುಂದಾಗಿವೆ. ರಾಜ್ಯದಾದ್ಯಂತ ಯಥೇಚ್ಛವಾಗಿರುವ ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಬಗ್ಗೆ ಸಮಗ್ರ ಚಿಂತನೆ ನಡೆಸಬೇಕು~ ಎಂದರು.



ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಆದರೆ ಇದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ತೋರ್ಪಡಿಸುವ ಅಗತ್ಯವಿದೆ~ ಎಂದು ಅಭಿಪ್ರಾಯಪಟ್ಟರು.



ಸಾಲುಮರದ ತಿಮ್ಮಕ್ಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಶಿ ಅವರಿಗೆ `ಪರಿಸರ ಮಹಾರತ್ನ~ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಚಿವರಾದ ಎಸ್.ಸುರೇಶ್‌ಕುಮಾರ್, ಗೋವಿಂದ ಕಾರಜೋಳ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.