ಶುಕ್ರವಾರ, ಜೂನ್ 5, 2020
27 °C

ಅಕ್ರಮ ಮರಳು ಸಾಗಣೆ: 25 ವಾಹನ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಿವಿಧ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ತಾಲ್ಲೂಕಿನ ಹಲವೆಡೆ ಸೋಮವಾರ ದಿಢೀರ್ ದಾಳಿ ನಡೆಸಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 25 ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪ್ರಾದೇಶಿಕ ಸಾರಿಗೆ, ನಗರ ಪಾಲಿಕೆ ಅಧಿಕಾರಿಗಳು ಹಾಗೂ ನಗರ ಪೊಲೀಸರನ್ನು ಒಳಗೊಂಡ ತಂಡ ಹರಿಹರ ಹಾಗೂ ಕೊಂಡಜ್ಜಿ ರಸ್ತೆಯಲ್ಲಿ ಮರಳು ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ ನಡೆಸಿ, ಪರವಾನಗಿ ಇಲ್ಲದ, ನಿಯಮಕ್ಕಿಂತ ಅಧಿಕ ಮರಳು ತುಂಬಿದ್ದ, ರಾಜಧನ ಸಲ್ಲಿಸದೇ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.ಬೆಳಿಗ್ಗೆ 7 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಗೊಂಡಿದ್ದು, ಈ ಸಂದರ್ಭದಲ್ಲಿ 9 ಟ್ರ್ಯಾಕ್ಟರ್, ಮಿನಿಲಾರಿ ಸೇರಿದಂತೆ 25 ವಾಹನಗಳು ಅಕ್ರಮವಾಗಿ ಮರಳು ಸಾಗಿಸುತ್ತಿದ್ದುದು ಪತ್ತೆಯಾಯಿತು. ನಿಯಮ ಉಲ್ಲಂಘಿ ಸಿದ ಎಲ್ಲ ವಾಹನಗಳನ್ನು ಹೈಸ್ಕೂಲ್ ಮೈದಾನದಲ್ಲಿ ಸಾಲಾಗಿ ನಿಲ್ಲಿಸಿದ್ದ ದೃಶ್ಯ ಕಂಡುಬಂತು.ಪರವಾನಗಿ ಇಲ್ಲದ ವಾಹನಗಳಿಗೆ ಪ್ರದೇಶಿಕ ಸಾರಿಗೆ ಅಧಿಕಾರಿಗಳು 5ರಿಂದ 10ಸಾವಿರ ರೂಪಾಯಿವರೆಗೆ ದಂಡ ವಿಧಿಸಿದರೆ, ರಾಜಧನ ನೀಡದೇ ಸಾಗಣೆ ಮಾಡುತ್ತಿದ್ದ ವಾಹನಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು 25 ಸಾವಿರದವರೆಗೆ ದಂಡ ವಿಧಿಸಿದರು.ತಹಶೀಲ್ದಾರ್ ಡಾ.ಬಿ.ಆರ್. ಹರೀಶ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಎಚ್.ಬಿ. ಮಲ್ಲೇಶ್, ಪಿಎಸ್‌ಐ ಕೆ. ರಾಮರೆಡ್ಡಿ, ಒಡೆಯರ್, ವೆಂಕಟೇಶ್, ಆರ್‌ಟಿಒ ಅಧಿಕಾರಿ ಅಶೋಕ್ ರೆಡ್ಡಿ ಮತ್ತಿತರರು ದಾಳಿಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.