ಗುರುವಾರ , ಜನವರಿ 23, 2020
21 °C

ಅಕ್ರಮ –ಸಕ್ರಮ ಮಸೂದೆ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣಸೌಧ (ಬೆಳಗಾವಿ): ನಗರ ಪ್ರದೇಶಗಳಲ್ಲಿನ ವಸತಿರಹಿತರು ಸರ್ಕಾರಿ ಜಮೀನಿನಲ್ಲಿ ಅನಧಿಕೃತ­ವಾಗಿ ನಿರ್ಮಿಸಿಕೊಂಡಿರುವ 20/30 ಅಳತೆವರೆಗಿನ ಮನೆಗಳನ್ನು ಸಕ್ರಮ­ಗೊಳಿ­ಸುವ ‘ಕರ್ನಾಟಕ ಭೂ ಕಂದಾ­ಯ (ಎರಡನೇ ತಿದ್ದುಪಡಿ) ಮಸೂದೆ–2012’ (94ಸಿಸಿ) ಅನ್ನು ವಿಧಾನಮಂಡಲದ ಮುಂದಿನ ಅಧಿವೇಶನದವರೆಗೆ ತಡೆ ಹಿಡಿಯಲು ನಿರ್ಧರಿಸಲಾಗಿದೆ.ವಿಧಾನಸಭೆಯಲ್ಲಿ ಬುಧವಾರ ಅಂಗೀಕಾರ­ವಾಗಿದ್ದ ಮಸೂದೆಯನ್ನು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಅವರು ಅಂದೇ ವಿಧಾನ ಪರಿಷತ್‌ನಲ್ಲಿ ಮಂಡಿಸಿದ್ದರು. ಆದರೆ, ಮಸೂದೆ­ಯನ್ನು ಪ್ರಬಲವಾಗಿ ವಿರೋಧಿ­ಸಿದ್ದ ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರು, ಸದನದ ಆಯ್ಕೆ ಸಮಿತಿಗೆ ಒಪ್ಪಿಸುವಂತೆ ಪಟ್ಟು ಹಿಡಿದಿದ್ದರು.

ಆದರೆ, ಪ್ರತಿ­ಪಕ್ಷಗಳ ಬೇಡಿಕೆಯನ್ನು ಒಪ್ಪದ ಸರ್ಕಾರ ಮಸೂದೆಗೆ ಒಪ್ಪಿಗೆ ನೀಡುವಂತೆ ಮನ­ವೊಲಿಸುವ ಪ್ರಯತ್ನ ನಡೆಸಿತ್ತು. ಅದು ಸಫಲವಾಗಿರಲಿಲ್ಲ. ವಿಷಯ ಕಗ್ಗಂಟಾ­ಗಿತ್ತು. ಆಯ್ಕೆ ಸಮಿತಿಗೆ ಒಪ್ಪಿಸಬೇಕೆಂಬ ಬೇಡಿಕೆ ಕುರಿತು ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನಿಲುವು ತಿಳಿಸುವುದಾಗಿ ಸಚಿವ ಎಸ್‌.ಆರ್‌.­ಪಾಟೀಲ ತಿಳಿಸಿ­ದ್ದರು. ಬಳಿಕ ಮಸೂದೆಯ ಮೇಲಿನ ಚರ್ಚೆಯನ್ನು ಸ್ಥಗಿತಗೊಳಿಸಲಾಗಿತ್ತು.ಸಭೆಯಲ್ಲಿ ನಿರ್ಧಾರ: ಬುಧವಾರವೇ ಬೆಂಗಳೂರಿಗೆ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಮಧ್ಯಾಹ್ನ ಮತ್ತೆ ಸುವರ್ಣಸೌಧಕ್ಕೆ ಹಿಂದಿರುಗಿದರು. ಬಳಿಕ ಸಭಾಪತಿ ಡಿ.ಎಚ್.ಶಂಕರ­ಮೂರ್ತಿ ಅವರ ನೇತೃತ್ವ­ದಲ್ಲಿ ಆಡಳಿತ ಮತ್ತು ಪ್ರತಿ­ಪಕ್ಷಗಳ ನಾಯಕರ ಸಭೆ ನಡೆಯಿತು.ಮಸೂದೆಯನ್ನು ಆಯ್ಕೆ ಸಮಿತಿಗೆ ಒಪ್ಪಿಸಲೇಬೇಕು ಎಂಬ ಪಟ್ಟನ್ನು ಪ್ರತಿಪಕ್ಷಗಳು ಸಡಿಲಿಸಲಿಲ್ಲ. ಈ ಕಾರಣದಿಂದ ಮುಂದಿನ ಅಧಿವೇಶನದ­ವರೆಗೂ ಮಸೂದೆಯನ್ನು ತಡೆ ಹಿಡಿ­ಯುವ ನಿರ್ಧಾರ ಕೈಗೊಳ್ಳಲಾಯಿತು.

 ವಿರೋಧದ ನಡುವೆ ಒಪ್ಪಿಗೆ: ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳನ್ನು ಸಕ್ರಮಗೊಳಿಸುವ ‘ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಮತ್ತು ಇತರೆ ಕೆಲವು ಕಾನೂನುಗಳ ತಿದ್ದುಪಡಿ ಮಸೂದೆ’ಯನ್ನು ಬಿಜೆಪಿ ಮತ್ತು ಜೆಡಿಎಸ್‌ ಸದಸ್ಯರ ವಿರೋಧದ ನಡುವೆಯೇ ಗುರುವಾರ ವಿಧಾನ ಪರಿಷತ್‌ನಲ್ಲಿ ಅಂಗೀಕರಿಸಲಾಯಿತು.

 ಸಚಿವರಾದ ಎಸ್‌.ಆರ್‌.ಪಾಟೀಲ, ಕೆ.ಜೆ.­ಜಾರ್ಜ್‌, ಟಿ.ಬಿ.ಜಯಚಂದ್ರ ಮತ್ತಿತರರು ಪ್ರತಿಪಕ್ಷದ ಸದಸ್ಯರನ್ನು ಮನವೊಲಿಸಲು ಪ್ರಯತ್ನಿಸಿದರು. ಕೊನೆಗೆ ಸಭಾಪತಿಯವರು ಮಸೂದೆ ಮಂಡನೆಗೆ ಅವಕಾಶ ನೀಡಿದರು. ಬಳಿಕ ಸದನದ ಒಪ್ಪಿಗೆ ದೊರೆಯಿತು.

ಪ್ರತಿಕ್ರಿಯಿಸಿ (+)