ಗುರುವಾರ , ಮೇ 13, 2021
16 °C

ಅಕ್ಷಯಪಾತ್ರೆ: ದೇಶದಲ್ಲೇ ದೊಡ್ಡ ಅಡುಗೆಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಜಿಲ್ಲೆಯ ಒಟ್ಟು 3 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ನೆರವಾಗಲೆಂದೇ ಇಸ್ಕಾನ್‌ನ ಅಕ್ಷಯಪಾತ್ರೆ ಪ್ರತಿಷ್ಠಾನವು ನಗರದ ಹೊರ ವಲಯದಲ್ಲಿ,  ದೇಶದಲ್ಲೇ ಅತಿದೊಡ್ಡದಾದ ಬೃಹತ್ ಅಡುಗೆಮನೆ ನಿರ್ಮಿಸಲು ನಿರ್ಧರಿಸಿದೆ.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಇಸ್ಕಾನ್‌ನ ಅಕ್ಷಯಪಾತ್ರೆ ಪ್ರತಿಷ್ಠಾನದ ಉಪಾಧ್ಯಕ್ಷ ಚಂಚಲಪತಿ ದಾಸ್, ಒಟ್ಟು ರೂ 20 ಕೋಟಿ ವೆಚ್ಚದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಈ ಬೃಹತ್ ಅಡುಗೆಮನೆ ಸಿದ್ಧಗೊಳ್ಳಲಿದ್ದು, ಒಟ್ಟು 6 ಸಾವಿರ ಸ್ಥಳೀಯ ಕಾರ್ಮಿಕರು ಉದ್ಯೋಗ ಪಡೆದು, ಒಂದೇ ಜಾಗೆಯಲ್ಲಿ 3 ಲಕ್ಷ ವಿದ್ಯಾರ್ಥಿಗಳಿಗೆ ಬೇಕಾಗುವ ಅಡುಗೆ ಸಿದ್ಧಪಡಿಸಲಿದ್ದಾರೆ ಎಂದರು.ನಗರದ ಹೊರವಲಯದ ಬಂಡಿಹಟ್ಟಿ ಬಳಿಯ ರೇಷ್ಮೆ ಇಲಾಖೆ ಕಚೇರಿ ಹತ್ತಿರವಿರುವ ಒಟ್ಟು 10 ಎಕರೆ ಜಮೀನನ್ನು ಕಾಂಗ್ರೆಸ್ ಮುಖಂಡ, ಎನ್‌ಪಿಆರ್ ಎಸ್ಟೇಟ್‌ನ ಮಾಲೀಕ ಎನ್. ಪ್ರತಾಪರೆಡ್ಡಿ ಹಾಗೂ ಅವರ ಪತ್ನಿ ಶೈಲಜಾ ರೆಡ್ಡಿ ಅವರು ದಾನ ನೀಡಿದ್ದು, ಅದೇ ಜಮೀನಿನ ನಾಲ್ಕು ಎಕರೆ ಪ್ರದೇಶದಲ್ಲಿ ಈ ಅಡುಗೆಮನೆ ಸಿದ್ಧಗೊಳ್ಳಲಿದೆ.ಸದ್ಯ ಇಸ್ಕಾನ್‌ನ ಅಕ್ಷಯಪಾತ್ರೆ ಪ್ರತಿಷ್ಠಾನವು ಜಿಲ್ಲೆಯ ತೋರಣಗಲ್‌ನಲ್ಲಿ  ಅಕ್ಷರ ದಾಸೋಹ ವಿದ್ಯಾರ್ಥಿಗಳಿಗೆ ಬಿಸಿಯೂಟ ಸಿದ್ಧಪಡಿಸುವ ಅಡುಗೆಮನೆ ಹೊಂದಿದ್ದು, ಅಲ್ಲಿ 1.30 ಲಕ್ಷ ವಿದ್ಯಾರ್ಥಿಗಳಿಗೆ ನಿತ್ಯವೂ ಊಟ ಸಿದ್ಧಗೊಳ್ಳುತ್ತಿದೆ. ಅಲ್ಲಿನ ಅಡುಗೆಮನೆಯೂ ಮುಂದುವರಿಯಲಿದ್ದು, ಬಳ್ಳಾರಿ, ಸಿರುಗುಪ್ಪ ತಾಲ್ಲೂಕಿನ ಶಾಲೆಗಳಿಗೆ ಬಳ್ಳಾರಿಯಲ್ಲಿ ಅಡುಗೆ ಸಿದ್ಧಗೊಳ್ಳಲಿದೆ ಎಂದು ಅವರು ತಿಳಿಸಿದರು.ಪ್ರತಿಷ್ಠಾನಕ್ಕೆ ಅಡುಗೆ ಸಿದ್ಧಪಡಿಸುವ ಆದೇಶ ನೀಡಿದ ಬಳಿಕವೂ ಇದೀಗ ಅಕ್ಷರ ದಾಸೋಹ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅವರು ಮಕ್ಕಳಿಗೆ ಊಟ ಬಡಿಸಿ, ಪಾತ್ರೆ ಶುಚಿಗೊಳಿಸಿ ನೀಡುವ ಕೆಲಸ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.