ಸೋಮವಾರ, ಮಾರ್ಚ್ 8, 2021
29 °C
ಜೈಪುರ ಸಾಹಿತ್ಯೋತ್ಸವ: ಸಂವಾದದಲ್ಲಿ ಸುಧೀಂದ್ರ ಕುಲಕರ್ಣಿ

ಅಖಂಡ ಭಾರತ ಪರಿಕಲ್ಪನೆ ವಾಸ್ತವವಲ್ಲ

ಹಮೀದ್‌. ಕೆ Updated:

ಅಕ್ಷರ ಗಾತ್ರ : | |

ಅಖಂಡ ಭಾರತ ಪರಿಕಲ್ಪನೆ ವಾಸ್ತವವಲ್ಲ

ಜೈಪುರ: ಜೈಪುರ ಸಾಹಿತ್ಯೋತ್ಸವದಲ್ಲಿ ಶನಿವಾರ ನಡೆದ ‘ಆಲಿಸುವಿಕೆಯ ಅಗತ್ಯ: ಏಕಮುಖಿ ಹೇಳಿಕೆಗಳ ಬದಲಿಗೆ ಸಂವಾದ’ ಎಂಬ ಗೋಷ್ಠಿ, ದೇಶದ ಮುಂದೆ ಈಗ ಇರುವ ಹಲವು ವಿವಾದಾತ್ಮಕ ವಿಚಾರಗಳ ಚರ್ಚೆಗೆ ವೇದಿಕೆಯಾಯಿತು.ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತ ವಿದ್ಯಾರ್ಥಿ ವೇಮುಲ ರೋಹಿತ್ ಆತ್ಮಹತ್ಯೆ,  ಅಸಹಿಷ್ಣುತೆ ಮತ್ತು ಪಾಕಿಸ್ತಾನದ ಜತೆಗೆ ಭಾರತದ ಸಂಬಂಧದಲ್ಲಿ ಮತ್ತೆ ಬಿಕ್ಕಟ್ಟು ಸೇರಿ ಹಲವು ಸಮಕಾಲೀನ ವಿಷಯಗಳು ಪ್ರಸ್ತಾಪವಾದವು.‘ಭಯೋತ್ಪಾದನೆಯನ್ನು ಪ್ರತಿಪಾದಿಸುವವರು ಮತ್ತು ವಿಧ್ವಂಸಕ ಕೃತ್ಯಗಳನ್ನು ಎಸಗುವವರು ಕೂಡ ತಾವು ಮಾಡುತ್ತಿರುವುದು ಸರಿ ಎಂದೇ ಭಾವಿಸಿರುತ್ತಾರೆ. ಪರಸ್ಪರ ಸಂವಾದ ನಡೆದರೆ ಮಾತ್ರ ನಮ್ಮ ಗ್ರಹಿಕೆಗಳಲ್ಲಿನ ಲೋಪಗಳು ಅರ್ಥವಾಗಲು ಸಾಧ್ಯ. ಅಸಹಿಷ್ಣುತೆ, ಇತರರ ಮಾತನ್ನು ಆಲಿಸುವಲ್ಲಿ ಅಸಡ್ಡೆ ಮುಂದುವರಿದರೆ ನಾವು ಅರ್ಥಮಾಡಿಕೊಂಡಿರುವ ಭಾರತವಾಗಿ ನಮ್ಮ ದೇಶ ಉಳಿಯದು’ ಎಂದು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಮುಖ್ಯಸ್ಥ ಸುಧೀಂದ್ರ ಕುಲಕರ್ಣಿ ಹೇಳಿದರು.‘ಯಾರಿಗೂ ಸತ್ಯದ ಏಕಸ್ವಾಮ್ಯ ಇಲ್ಲ. ಯಾವುದೂ ಪೂರ್ಣ ಸತ್ಯವೂ ಆಗಿರುವುದಿಲ್ಲ. ಹಾಗಾಗಿಯೇ ಸತ್ಯವನ್ನು ಕಂಡುಕೊಳ್ಳಲು ಸತತ ಸಂವಾದ ಅಗತ್ಯವಾಗಿದೆ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರ ನಡುವೆ ಮಾತ್ರವಲ್ಲದೆ ದೇಶ ದೇಶಗಳ ನಡುವೆಯೂ ಪ್ರಾಮಾಣಿಕವಾದ ಸಂವಾದ ನಡೆಯಬೇಕು’ ಎಂದು  ಅವರು ಪ್ರತಿಪಾದಿಸಿದರು.‘ಸ್ವಾತಂತ್ರ್ಯ ಚಳವಳಿಯ ದಿನಗಳಿಂದ ನಾವು ಸ್ಫೂರ್ತಿ ಪಡೆದುಕೊಳ್ಳಬೇಕಾದ ಅಗತ್ಯ ಇದೆ’ ಎಂದ ಅವರು, ‘ಆ ದಿನಗಳಲ್ಲಿಯೂ ಹಲವು ನಿಲುವುಗಳು ಮತ್ತು ಒಲವುಗಳನ್ನು ಹೊಂದಿದ ಜನರಿದ್ದರು. ಆದರೆ ಸಂವಾದದ ಶಕ್ತಿಯಿಂದಾಗಿ ಜಗತ್ತಿನ ಅತ್ಯಂತ ದೊಡ್ಡ ಚಳವಳಿ ಯಶಸ್ಸು ಕಂಡಿತು. ಅಂದಿನ ಮನಸ್ಥಿತಿಯನ್ನು ನವೀಕರಿಸಿಕೊಳ್ಳಬೇಕಾದ ತುರ್ತು ಎದುರಾಗಿದೆ’ ಎಂದು ಅಭಿಪ್ರಾಯಪಟ್ಟರು.‘ಪಾಕಿಸ್ತಾನದ ಜತೆಗೆ ಸಂವಾದ ನಡೆಸುವ ಮೂಲಕ ಮಾತ್ರ ಆ ದೇಶದ ಜತೆಗೆ ಈಗ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರ ಜತೆ ಪಾಕಿಸ್ತಾನಕ್ಕೆ ನಡೆಸಿದ ಬಸ್ ಯಾತ್ರೆಯನ್ನು ನೆನಪಿಸಿಕೊಂಡರು. ‘ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇದ್ದರೂ ಅವರು ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಅವರ ಹುಟ್ಟುಹಬ್ಬದಲ್ಲಿ ಭಾಗವಹಿಸಿದ್ದನ್ನು ಬೆಂಬಲಿಸುತ್ತೇನೆ’ ಎಂದರು. ಇಂತಹ ನಡೆಗಳು ಸಂಬಂಧವನ್ನು ಮಾನವೀಯಗೊಳಿಸಲು ನೆರವಾಗುತ್ತವೆ ಎಂದರು.‘ಪಾಕಿಸ್ತಾನದ ಜತೆಗೆ ಸಂವಾದ ನಡೆಸುವುದಕ್ಕೆ ಮೊದಲು ನಾವು ನಮ್ಮ ನಮ್ಮೊಳಗೆ ಸಂವಾದ ನಡೆಸಬೇಕಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರವಲ್ಲದೆ ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳ ನಡುವೆ ಮಾತುಕತೆ ನಡೆದು ಒಂದು ನಿಲುವಿಗೆ ಬರಬೇಕಿದೆ. ಯಾಕೆಂದರೆ ಪ್ರಧಾನಿ ಮಾತುಕತೆ ನಡೆಸಬೇಕು ಎಂದು ಹೇಳಿಕೆ ನೀಡುವಾಗ ಅವರ ಪಕ್ಷದವರು ಅಥವಾ ಸಂಘ ಪರಿವಾರದವರು ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ. ಪಾಕಿಸ್ತಾನದ ಜತೆಗಿನ ಸಮಸ್ಯೆ ಪರಿಹಾರಕ್ಕೆ ಮೊದಲು ಬಿಜೆಪಿಯ ನಿಲುವು ಸ್ಪಷ್ಟವಾಗುವುದು ಅಗತ್ಯ’ ಎಂದು ಅಭಿಪ್ರಾಯಪಟ್ಟರು.‘ಅಖಂಡ ಭಾರತ ಎಂಬ ಪರಿಕಲ್ಪನೆ ವಾಸ್ತವವೇ ಅಲ್ಲ’ ಎಂದ ಅವರು, ಇರುವ ವಾಸ್ತವವನ್ನು ಒಪ್ಪಿಕೊಳ್ಳುವುದು ಈಗಿನ ಅಗತ್ಯ ಎಂದರು.‘ಪಾಕಿಸ್ತಾನ ಎಂಬ ದೇಶ ನಮ್ಮ ಮುಂದಿರುವ ವಾಸ್ತವ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇತ್ತೀಚೆಗೆ ಬಾಂಗ್ಲಾ ದೇಶದ ಜತೆಗೆ ಕೆಲವು ಭೂಪ್ರದೇಶಗಳ ವಿನಿಮಯದಿಂದ ಕನಿಷ್ಠ ಪಕ್ಷ ಆ ಭಾಗದ ಗಡಿ ಸಮಸ್ಯೆ ಪರಿಹಾರ ಆಗಿದೆ. ಇಂತಹುದೇ ಒಂದು ಸೂತ್ರವನ್ನು ಪಾಕಿಸ್ತಾನದ ಜತೆಗೂ ಕಂಡುಕೊಳ್ಳಬೇಕಿದೆ’ ಎಂದು ಹೇಳಿದರು.ಪಾಕಿಸ್ತಾನ ಕೂಡ ಭಾರತದ ಜತೆ ಸಹಬಾಳ್ವೆಗೆ ಅಗತ್ಯವಾದ ಮನೋಭಾವವನ್ನು ರೂಢಿಸಿಕೊಳ್ಳಬೇಕಿದೆ. ಅಲ್ಲಿನ ಮಕ್ಕಳಿಗೆ ಇತಿಹಾಸ ಕಲಿಸುವ ವಿಧಾನವನ್ನು ಬದಲಿಸಿಕೊಳ್ಳಬೇಕಿದೆ. ಹಿಂದೂ ಧರ್ಮ ಎಂದರೆ ರಕ್ಕಸರ ಧರ್ಮ ಎಂದು ಅಲ್ಲಿನ ಮಕ್ಕಳಿಗೆ ಕಲಿಸಿದರೆ ಅವರು ಭಾರತದ ಬಗ್ಗೆ ಆರೋಗ್ಯಕರ ನಿಲುವು ತಳೆಯುವುದು ಹೇಗೆ ಎಂದು ಪ್ರಶ್ನಿಸಿದರು.ವೈವಿಧ್ಯ ಇರುವಲ್ಲಿ ಸಂಘರ್ಷ ಸಹಜ

ಭಾರತ ಸದಾ ವೈವಿಧ್ಯಗಳ ದೇಶ. ಹಾಗಾಗಿ ಇಲ್ಲಿ ಸಂಘರ್ಷ ಸಹಜ ಎಂಬ ಅಭಿಪ್ರಾಯ ಮಂಡಿಸಿದವರು ವಕೀಲೆ ಮತ್ತು ಬಿಜೆಪಿಯ ಮಾಜಿ ವಕ್ತಾರೆ ಪಿಂಕಿ ಆನಂದ್.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿನ ರೋಹಿತ್ ಅತ್ಮಹತ್ಯೆಯನ್ನು ಪ್ರಸ್ತಾಪಿಸಿದ ಅವರು,  ‘ಇದನ್ನು ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಎಂದು ಹೇಳಬಾರದು ಎಂದರು. ಇಂತಹ ವರ್ಗೀಕರಣವೇ ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.ಆದರೆ ಇದಕ್ಕೆ ತಟ್ಟನೆ ಪ್ರತಿಕ್ರಿಯೆ ನೀಡಿದವರು ದಲಿತ ಲೇಖಕಿ ಪಿ. ಶಿವಕಾಮಿ. ‘ನಾವು ಯಾರೂ ಗಾಳಿಯಲ್ಲಿ ಮಾತನಾಡುತ್ತಿಲ್ಲ. ಅಸಹಿಷ್ಣುತೆ ಮತ್ತು ಜಾತಿ ವರ್ಗೀಕರಣ ನಮ್ಮ ನಡುವಣ ವಾಸ್ತವ’ ಎಂದು ಹೇಳಿದರು.ಐಎಎಸ್ ಅಧಿಕಾರಿಯಾಗಿದ್ದ 28 ವರ್ಷಗಳನ್ನು ನೆನಪಿಸಿಕೊಂಡ ಶಿವಕಾಮಿ, ‘ಐಎಎಸ್ ಅಧಿಕಾರಿಗಳು ನೀತಿ ನಿರೂಪಕರಲ್ಲ, ಬದಲಿಗೆ ರಾಜಕಾರಣಿಗಳು ಹೇಳಿದ್ದನ್ನು ಅನುಷ್ಠಾನಗೊಳಿಸುವವರು ಮಾತ್ರ’ ಎಂದರು.‘ಜನರ ಮಾತು ಆಲಿಸಲು ಸರ್ಕಾರಗಳು ಸಿದ್ಧವಿಲ್ಲ. ಜನರಿಗೆ ಸೂರು ಮತ್ತು ಬದುಕು ಕಟ್ಟಿಕೊಳ್ಳುವ ಅವಕಾಶ ಬೇಕಾಗಿದೆ. ಆದರೆ ಸರ್ಕಾರಗಳು ಅವರಿಗೆ ಉಚಿತ ವಸ್ತುಗಳನ್ನು ವಿತರಿಸುವ ಕೆಲಸ ಮಾಡುತ್ತಿವೆ. ಉಚಿತ ಟಿ.ವಿ. ಉಚಿತ ಚಪ್ಪಲಿ, ಉಚಿತ ಬಟ್ಟೆ ಹೀಗೆ ಎಲ್ಲವನ್ನೂ ನೀಡಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆ ಕೂಡ ಪರಿಣಾಮಕಾರಿ ಅಲ್ಲ. ಗ್ರಾಮೀಣ ಪ್ರದೇಶಗಳಿಗೆ ಹೋದರೆ ಕೆರೆ ದಂಡೆಯಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ಕುಳಿತು ಹಣ ತೆಗೆದುಕೊಂಡು ಹೋಗುವ ಮಹಿಳೆಯರನ್ನು ಕಾಣಬಹುದು. ಜನರ ಮಾತು ಆಲಿಸದೆ ಯೋಜನೆಗಳನ್ನು ರೂಪಿಸಿದ್ದೇ ಮಹತ್ವಾಕಾಂಕ್ಷಿ ಯೋಜನೆಗಳು ವಿಫಲವಾಗಲು ಕಾರಣ’  ಎಂದರು.ಸಹಿಷ್ಣುತೆ ಸರಿಯಲ್ಲ: ನಮ್ಮ ನಡುವೆ ಪರಸ್ಪರ ಸಹಿಷ್ಣುತೆ ಇರಬೇಕು ಎಂದು ಎಲ್ಲರೂ ಪ್ರತಿಪಾದಿಸುತ್ತಿದ್ದಾರೆ. ಆದರೆ ಸಹಿಷ್ಣುತೆ ಎಂಬ ಪದ ಬಳಕೆಯೇ  ಸರಿಯಲ್ಲ. ಪರಸ್ಪರರನ್ನು ಸಹಿಸಿಕೊಳ್ಳುತ್ತೇವೆ ಎಂಬುದು ನಕಾರಾತ್ಮಕ ಪರಿಕಲ್ಪನೆ. ಹಾಗಾಗಿ ಸಹಿಷ್ಣುತೆ  ಬದಲಿಗೆ ಸಹಜೀವನ ಎಂಬ ಪದ ಬಳಸಬೇಕು ಎಂದು ಶಿವಕಾಮಿ ಹೇಳಿದರು.* ಹಿಂದಿನ ಯುಪಿಎ ಸರ್ಕಾರ ಪಾಕಿಸ್ತಾನ ಜತೆ ಮಾತುಕತೆಗೆ ಮುಂದಾದಾಗ ಬಿಜೆಪಿ ಅದನ್ನು ತಡೆಯಲು ಯತ್ನಿಸುತ್ತಿತ್ತು. ಈಗ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ.

-ಸುಧೀಂದ್ರ ಕುಲಕರ್ಣಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.