ಶುಕ್ರವಾರ, ಜನವರಿ 17, 2020
24 °C

ಅಖ್ತರ್ ಉಲ್ ಇಮಾನ್ ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖ್ತರ್ ಉಲ್ ಇಮಾನ್ ಉರ್ದು ಸಾಹಿತ್ಯದ ಅಗ್ರಮಾನ್ಯ ಕವಿ. ಸಾಹಿತ್ಯದ ಜತೆಗೆ ಸಿನಿಮಾ ರಂಗದಲ್ಲೂ ಹೆಸರು ಮಾಡಿದವರು. ಆಧುನಿಕ ಉರ್ದು ಸಾಹಿತ್ಯದ ಸ್ತಂಭ ಎಂಬ ಅಗ್ಗಳಿಕೆ ಕೂಡ ಇವರಿಗಿದೆ.ಅಖ್ತರ್ ಉಲ್ ಇಮಾನ್ ಅವರ ಜೀವನ ಮತ್ತು ಉರ್ದು ಸಾಹಿತ್ಯಕ್ಕೆ ಇವರ ಕೊಡುಗೆ ಏನು ಎಂಬುದನ್ನು ತಿಳಿಸಿಕೊಡುವ ಸಲುವಾಗಿ ಆಲ್ ಇಂಡಿಯಾ ಉರ್ದು ಮಂಚ್ ಭಾನುವಾರ ವಿಚಾರ ಸಂಕಿರಣ ಏರ್ಪಡಿಸಿದೆ.  ಉತ್ತರಪ್ರದೇಶದ ಖಿಲಾದಲ್ಲಿ ಜನಿಸಿದ ಅಖ್ತರ್ ಉಲ್ ಇಮಾನ್, ಆನಂತರದಲ್ಲಿ ಮುಂಬೈಗೆ ಬಂದು ನೆಲೆಸಿ ಅಲ್ಲಿ ಪ್ರವರ್ಧಮಾನಕ್ಕೆ ಬಂದವರು.ಅಖ್ತರ್ ಉಲ್ ಇಮಾನ್ ಅವರ ಕವಿತೆಗಳು ವ್ಯಕ್ತಿಯ ವೈಯಕ್ತಿಕ ಭಾವಕ್ಕೆ ಸಂಬಂಧಿಸಿದವು. ಹಾಗಾಗಿ ಇವರ ಎಲ್ಲ ಕವಿತೆಗಳು ಆಪ್ತವೆನಿಸುತ್ತವೆ. ವ್ಯಕ್ತಿಯೊಬ್ಬನ ಮನಸಿನೊಳಗಿನ ಭಾವನೆಗಳು, ಹಪಹಪಿಗಳು ಇವರ ಕಾವ್ಯದಲ್ಲಿ ಝರಿಯಾಗಿ ಹರಿದಿವೆ. ಇವರ ಕಾವ್ಯದ ಶಕ್ತಿಯೇ ಅದು. ಇವರ ಕಾವ್ಯ ಶೈಲಿ ಅವರನ್ನು ಇತರ ಕವಿಗಳಿಗಿಂತ ಭಿನ್ನವಾಗಿ ನಿಲ್ಲಿಸಿತು. ಇವರು ಗಝಲ್‌ಗಳನ್ನು ಎಂದಿಗೂ ಬರೆಯಲಿಲ್ಲ.ಅಖ್ತರ್ ಉಲ್ ಇಮಾನ್ ಅವರು ಮೀರಜಿ ಮತ್ತು ಎನ್.ಎಂ.ರಶೀದ್ ಅವರಿಂದ ಹೆಚ್ಚು ಪ್ರಭಾವಿತರಾಗಿದ್ದರು. ತರೀಕ್ ಸಯ್ಯಾರ, ಗರ್ದ್‌ಯಾಬ್, ಅಬ್‌ಜೋ, ಯಾದೆ, ಬೀತೆ ಲಂಹಾತ್, ನಯಾ ಹಾಂಗ್,  ಸರ್ ಒ ಸಮ್ಮಾನ್ ಇವರ ಜನಪ್ರಿಯ ಕವನ ಸಂಕಲನಗಳು. ಸಬ್‌ರಂಗ್ ಇವರು ರಚಿಸಿದ ಪದ್ಯ ನಾಟಕ.ಕಾವ್ಯವನ್ನು ಹೊರತುಪಡಿಸಿ ಇವರು ಹಿಂದಿ ಚಿತ್ರಗಳಿಗೆ ಮಾಡಿದ ಕೆಲಸ ದೊಡ್ಡದು. ಹಲವು ಹಿಂದಿ ಚಿತ್ರಗಳಿಗೆ ಸಂಭಾಷಣೆ, ಚಿತ್ರಕಥೆ ಬರೆದಿದ್ದಾರೆ. ಇವರು ಮೊದಲ ಬಾರಿಗೆ `ಕಾನೂನ್~ ಎಂಬ ಸಿನಿಮಾಕ್ಕೆ ಚಿತ್ರಕಥೆ ಬರೆದರು. ಈ ಸಿನಿಮಾದಲ್ಲಿ ಯಾವುದೇ ಗೀತೆ, ಹಾಸ್ಯ ಸನ್ನಿವೇಶಗಳು ಇಲ್ಲದಿದ್ದರೂ ಬಿಗ್ ಹಿಟ್ ಎನಿಸಿಕೊಂಡಿತು. ಇವರು ಹಿಂದಿ ಸಿನಿಮಾಗಳಿಗೆ ಗೀತೆಗಳನ್ನು ಬರೆದಿದ್ದಾರೆ.ಇವರು `ಧರ್ಮಪುತ್ರ~ ಮತ್ತು `ವಕ್ತ್~ ಹಿಂದಿ ಸಿನಿಮಾಗಳಿಗೆ ಬರೆದ ಸಂಭಾಷಣೆಗೆ ಫಿಲ್ಮ್ ಫೇರ್ ಅವಾರ್ಡ್ ಕೂಡ ಲಭಿಸಿದೆ. 1962ರಲ್ಲಿ ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ.

 
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕಾರ್ಯಕ್ರಮದ ಉದ್ಘಾಟಿಸಲಿದ್ದು, ಡಾ. ಮುಮ್ತಾಜ್ ಅಹಮ್ಮದ್ ಖಾನ್, ಪ್ರೊ. ಗೋಪಿಚಂದ್ ನಾರಂಗ್, ಜನಬ್ ಖಲೀಲ್ ಮಮೂನ್  ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರೊ. ಅಬ್ದುಲ್ ಕಲಾಂ ಕ್ವಾಸ್ಮಿ, ಪ್ರೊ. ಶಫಿ ಕಿದ್ವಾಯ್, ಪ್ರೊ.ಖಲೀದ್ ಸೈಯದ್, ಪ್ರೊ. ಶಫಿ ಹಾಗೂ ಶಾಯಿಸ್ತಾ ಯೂಸುಫ್ ವಿಷಯ ಮಂಡಿಸಲಿದ್ದಾರೆ. ಸ್ಥಳ: ಯವನಿಕಾ, ನೃಪತುಂಗಾ ರಸ್ತೆ. ಬೆಳಿಗ್ಗೆ 10.30.

 

ಪ್ರತಿಕ್ರಿಯಿಸಿ (+)